X

ಭಾರತವು ಬದಲಾಗಿದೆ, ಬುದ್ಧಿಜೀವಿಗಳ ಮುಖವಾಡ ಬಯಲಾಗಿದೆ

ಅಮೆರಿಕದ ಮೇಲೆ 9/11 ದಾಳಿ ನಡೆದಾಗ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಕಟ್ಟದಲ್ಲಿ ಕೆಲಸ ಮಾಡುತ್ತಿದ್ದ ಮೂರು ಸಾವಿರಕ್ಕೂ ಹೆಚ್ಚು ಸಾಮಾನ್ಯ ಜನರು ಸಿಮೆಂಟ್ ಹಾಗೂ ಕಂಬಿಯಲ್ಲಿ ಸಿಕ್ಕಿ ಹೂತು ಹೋದರು. ಕೆಲವರು ಕಟ್ಟಡಕ್ಕೆ ವಿಮಾನ ಅಪ್ಪಳಿಸಿದಾಗ ಬುಗಿಲೆದ್ದ ಬೆಂಕಿಯಲ್ಲಿ ಭಸ್ಮವಾದರು. ಭಯೋತ್ಪಾದಕರ ಈ ಹೀನಾಯ ಕೃತ್ಯದಿಂದ ಒಂದು ಕಡೆ ಜನರ ಆಕ್ರಂದನ ಮುಗಿಲು ಮುಟ್ಟಿದ್ದರೆ ಇನ್ನೊಂದು ಕಡೆ ತಮ್ಮನ್ನು ತಾವು ಈ ಭೂಮಿಯ ಮೇಲಿನ ಅತೀ ಬುದ್ಧಿವಂತರು ಎಂದುಕೊಂಡಿದ್ದ ಬುದ್ಧಿಜೀವಿಗಳಲ್ಲಿ ಹಲವರು ಭಯೋತ್ಪಾದಕರ ಪರವಾಗಿ ನಿಂತರು. ಭಯೋತ್ಪಾದನೆಯನ್ನು ವಿರೋಧಿಸಿ ದೇಶದ ಒಮ್ಮತವನ್ನು ಸಾರಲು, ಟಿವಿಯ ಮುಂದೆ ಬರುವಾಗ ಅಮೆರಿಕ ಧ್ವಜವನ್ನು ಅಂಗಿಯ ಮೇಲೆ ತೊಟ್ಟು ಬರುವುದಾಗಿ ಮಾಧ್ಯಮದವರೆಲ್ಲ ಸೇರಿ ನಿರ್ಧರಿಸಿದವು. ಆದರೆ ಎನ್‌ಬಿಸಿ ಎನ್ನುವ ಅಮೆರಿಕ ಮೂಲದ ಜಾಗತಿಕ ನ್ಯೂಸ್ ಕಂಪನಿಯು ತನ್ನ ಉದ್ಯೋಗಿಗಳಿಗೆ ಇದಕ್ಕೆ ಅವಕಾಶವನ್ನೇ ಕೊಡಲಿಲ್ಲ. ಆ ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದ ಹಲವಾರು ದೇಶಪ್ರೇಮಿ ಉದ್ಯೋಗಿಗಳು ಆ ಕ್ಷಣವೇ ರಾಜೀನಾಮೆ ಕೊಟ್ಟು ಹೊರಗೆ ನಡೆದರು. ಆಚೆ ಅಮೇರಿಕನ್ ಮುಸ್ಲಿಂ ಅಸೋಸಿಯೇಷನ್ ಭಯೋತ್ಪಾದನೆಯನ್ನು ತೀವ್ರವಾಗಿ ಖಂಡಿಸದರೆ, ಈಚೆ ಕೆಲವು ಕ್ಯಾಥೊಲಿಕ್ ಸಂಘಟನೆಗಳು ‘ಭಯೋತ್ಪಾದಕರನ್ನು ಸಾಕಿದ್ದು ಅಮೇರಿಕಾ, ಅದಕ್ಕೆ ತಕ್ಕ ಪ್ರತಿಫಲ’ ಎಂದವು. ಎರಡು ಮುಖದ ಹಾವಿನ ಹಾಗಿದ್ದ ಇಂತಹ ಸಂಘಟನೆಗಳ ಇನ್ನೊಂದು ಮುಖವನ್ನು ಅರಿತಿರದ ಬಹಳಷ್ಟು ಜನರಿಗೆ ತಾವು ಯಾರ ಸಂಗ ಮಾಡುತ್ತಿದ್ದೇವೆ ಎನ್ನುವುದು ಆ ಸಮಯದಲ್ಲಿ ಜ್ಞಾನೋದಯವಾಯಿತು. ಇವರಿಗೆ ದೇಶ, ಧರ್ಮ, ಜನ ಯಾವುದೂ ಮುಖ್ಯವಲ್ಲ. ಇವರಿಗೆ ಕೇವಲ ತಮ್ಮ ಪಬ್ಲಿಸಿಟಿ ಒಂದೇ ಬದುಕಿನ ಕೇಂದ್ರ ಬಿಂದು. ಗಡಿಯಲ್ಲಿ ಇಂದು ವೈರಿದೇಶ ಕಳುಹಿಸಿದ ಭಯೋತ್ಪಾದಕ ಹಾಗೂ ನಮ್ಮ ಯೋಧ ಇಬ್ಬರೂ ಗಾಯಗೊಂಡು ನೀರಿಗಾಗಿ ಒದ್ದಾಡುತ್ತಿದ್ದಾರೆ ಇವರು ಅಲ್ಲಿ ಹೋಗಿ ಭಯೋತ್ಪಾದಕನಿಗೆ ನೀರು ಕೊಟ್ಟು ನಮ್ಮ ಯೋಧರ ಮುಂದೆ ಮೈಕ್ ಹಿಡಿದು ನೂರು ಪ್ರಶ್ನೆ ಕೇಳುವ ಜನರು! ಇದನ್ನು ಇವತ್ತು ಇಲ್ಲಿ ಯಾಕೆ ಹೇಳಬೇಕಾಗಿ ಬಂತು ಅಂದರೆ ಭಾರತದಲ್ಲಿ ಭಯೋತ್ಪಾದಕರ ದಾಳಿ ನಡೆದಾಗಲೆಲ್ಲ ಈ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯಲ್ಲಿ ಕೆಲಸ ಮಾಡುವ ಅವರಿಗಿಂತ ಅವರ ಮೇಲೆ ಹಿತಾಸಕ್ತಿ ತೋರಿಸುವ ಕರುಣಾ ಬುದ್ಧಿಜೀವಿಗಳು ಭಾರತದಲ್ಲಿಯೇ ಹೆಚ್ಚು. ಯಾಕೆ ಈ ದೇಶದ್ರೋಹ? ಯಾಕೆ ಇಂತಹ ಸಮಾಜ ವಿರೋಧಿ ಬುದ್ಧಿ?

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಬೀಡು ಬಿಟ್ಟಿರುವ ‘ಟುಕಡೇ ಟುಕಡೇ ಗ್ಯಾಂಗ್’ ತಗೊಳ್ಳಿ. ಸಾವಿರಾರು ಸಾಮಾನ್ಯ ಜನರ ಸಾವಿಗೆ ಕಾರಣವಾದ ಬಾಂಬೆ ಬ್ಲಾಸ್ಟ್ ಅದರ ಮಾಸ್ಟರ್ ಮೈಂಡ್ ಯಾಕೂಬ್ ಮೆನನ್ ಪರವಾಗಿ ನಡುರಾತ್ರಿ ಕೋರ್ಟ್ ಮುಂದೆ ಹೋಗಿ ಅನ್ಯಾಯಕ್ಕೆ ಬಾಗಿಲು ಬಡಿದ ವಕೀಲರನ್ನು, ಮೀಡಿಯಾವನ್ನು ನೆನಪಿಸಿಕೊಳ್ಳಿ. ಬಾಲಿವುಡ್ ನ ಪ್ರಖ್ಯಾತ ನಟ ಸಲ್ಮಾನ್ ಖಾನ್, ಭೂಗತ ಜಗತ್ತಿನ ದೊರೆಗಳಿಗೆ ಹೆದರಿ ‘ಯಾಕೂಬ್ ಮೆನನ್ ಒಬ್ಬ ಅಮಾಯಕ, ಅವನಿಗೆ ಯಾಕೆ ಗಲ್ಲು ಶಿಕ್ಷೆ?’ ಎಂದು ಟ್ವೀಟ್ ಮಾಡಿರಲಿಲ್ಲವೇ? ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ರೈಲ್ವೇ ನಿಲ್ದಾಣದಲ್ಲಿದ್ದ ಅಮಾಯಕ ನಾಗರಿಕರ ಮೇಲೆ ಗುಂಡಿನ ಸುರಿಮಳೆ ಸುರಿಸಿ ರಕ್ತದ ಕಾಲುವೆ ಹರಿಸಿದ ಪಾಕಿಸ್ತಾನೀ ಭಯೋತ್ಪಾದಕ ಅಜ್ಮಲ್ ಕಸಬನ ಬೆಂಬಲಕ್ಕೆ ಓಡೋಡಿ ಬಂದು ನಿಂತ ಬುದ್ಧಿಜೀವಿಗಳನ್ನು ನೋಡಿಲ್ಲವೆ? ನಾವು ನಮಗೆ ಬೇಕಾದಂತೆ ಬದುಕುತ್ತೇವೆ, ಸರಿ ಎನಿಸಿದ್ದನ್ನು ಮಾಡುತ್ತೇವೆ, ಇದು ನಮಗೆ ದೇಶ, ಸಂವಿಧಾನ ಕೊಟ್ಟ ಸ್ವಾತಂತ್ರ್ಯ ಅಂದು ಕೊಂಡರೆ ಅದು ಮೂರ್ಖತನ! ಇದೇ ಕಾರಣ ಕೊಟ್ಟು ಇಷ್ಟು ದಿನ ಇಂತಹವರೆಲ್ಲ ತಮಗೆ ಸಿಕ್ಕ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡವರು. ವಿಶ್ವವಿದ್ಯಾಲಯ ಅಂದರೆ ಜ್ಞಾನದ ದೇಗುಲ, ಅಲ್ಲಿನ ಕೆಲವು ದೇಶದ್ರೋಹಿ ವಿಧ್ಯಾರ್ಥಿಗಳು ಕೂಗಿದ್ದೇನು? ‘ಭಾರತವನ್ನು ತುಂಡು ತುಂಡಾಗಿಸುತ್ತೇವೆ’ ‘ಪಾಕಿಸ್ತಾನ ಜಿಂದಾಬಾದ್’ ‘ ಕಾಶ್ಮೀರಕ್ಕೆ ಭಾರತದಿಂದ ಅಜಾದಿ ಬೇಕು’ ಎಂದು. ಭಾರತದ ನೆಲದಲ್ಲಿ ತಿಂದು, ಉಂಡು, ತೇಗಿ, ಬೆಳೆದು ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಇಂತಹ ನೀಚರಿಗೆ ಸಮರ್ಥನೆ ಕೊಡಲು ಹೋದ ನಾಯಕರು ಯಾರೆಲ್ಲ ಎಂದು ನೆನಪಿಸಿಕೊಳ್ಳಿ – ರಾಹುಲ್ ಗಾಂಧಿ, ಕಪಿಲ್ ಸಿಬ್ಬಲ್, ಅರವಿಂದ್ ಕೇಜ್ರಿವಾಲ್, ಮಲ್ಲಿಕಾರ್ಜುನ ಖರ್ಗೆ, ಕಮ್ಯುನಿಸ್ಟ್ ಪಕ್ಷ, ಆಮ್ ಆದ್ಮಿ ಪಕ್ಷ!

ಹೀಗೆ ದೇಶದ್ರೋಹಿಗಳಿಗೆ ಬೆಂಬಲ ವ್ಯಕ್ತವಾಗಿದ್ದು ಹೊಸತಲ್ಲ. ಬಾಲಿವುಡ್, ಪೊಲಿಟಿಕ್ಸ್ ನಿಂದ ಹಿಡಿದು ಪತ್ರಕರ್ತರ ತನಕ ಈ ನೆಲವು ಕೊಟ್ಟ ಸ್ವಾತಂತ್ರ್ಯವನ್ನು ತಮಗೆ ಬೇಕಾದಂತೆ ಸ್ವೇಚ್ಛೆಯಾಗಿ ಬಳಸಿಕೊಂಡಿದ್ದನ್ನು ನಾವು ನೋಡಿದ್ದೇವೆ. ದಿನವೊಂದಿತ್ತು, ಈ ನೀಚರು ಏನೇ ಬರೆದರು, ಹೇಳಿದರು ಅದನ್ನು ಓದಿಕೊಂಡು, ಕೇಳಿಕೊಂಡು ನೊಂದು ಬದುಕಬೇಕಿತ್ತು. ಅದನ್ನು ವಿರೋಧಿಸಿದವರೆಲ್ಲ ಹಿಟ್ಲರನ ವಂಶಸ್ಥರು ಎಂದು ಗುರುತಿಸಲ್ಪಡುತ್ತಿದ್ದರು. ಮಾಧ್ಯಮದವರೂ ಕೂಡ ಅವರಿಗೇ ಬೆಂಬಲ ಕೊಡುತ್ತಿದ್ದರೇ ವಿನಾ ಇಂತಹವರ ವಿರುದ್ಧ ಧ್ವನಿ ಎತ್ತಲು ಬೆಂಬಲವೇ ಇರಲಿಲ್ಲ, ಯಾರೂ ಕೂಡ ಧ್ವನಿಗೂಡಿಸುತ್ತಿರಲೂ ಇಲ್ಲ. ಇಂದು ಹಾಗಿಲ್ಲ, ಭಾರತವು ಬದಲಾಗಿದೆ. ತಂತ್ರಜ್ಞಾನವು ಸಾಮಾನ್ಯ ಪ್ರಜೆಯೂ ಕೂಡ ತನ್ನ ದೇಶದ ಪರವಾಗಿ ನಿಲ್ಲಲು ಹಾಗೂ ದೇಶದ್ರೋಹಿಗಳ ಮುಖವಾಡ ಕಿತ್ತೊಗೆಯಲು ಸಹಕಾರಿಯಾಗಿದೆ. ಮೊನ್ನೆ ಕಾಶ್ಮೀರದ ಫುಲ್ವಾಮಾದಲ್ಲಿ ನಡೆದ ಭಯೋತ್ಪಾದಕರ ದಾಳಿಯಿಂದ ಭಾರತದ ಕೇಂದ್ರ ಮೀಸಲು ಪೋಲಿಸ್ ಪಡೆಯ ನಲವತ್ತು ಯೋಧರು ವೀರ ಮರಣವನ್ನಪ್ಪಿದರು. ದೇಶದ ನೆಲಕ್ಕೆ ಅವರ ಬಲಿದಾನ ವ್ಯರ್ಥವಾಗಲಿಲ್ಲ, ಆಗುವುದೂ ಇಲ್ಲ. ಇಂದು ದೇಶವೇ ಒಂದಾಗಿದೆ. ಯಾರು ಭಾರತವನ್ನು, ಭಾರತದ ಅಖಂಡತೆಯನ್ನು, ಭಾರತದ ವೀರ ಯೋಧರನ್ನು ಬೆಂಬಲಿಸದೇ ಭಯೋತ್ಪಾದಕರ ಪರ ನಿಂತು ತಮ್ಮ ಬುದ್ಧಿಮತ್ತೆ ಪ್ರದರ್ಶಿಸಲು ಮುಂದಾಗಿದ್ದಾರೋ ಅವರಿಗೆ ಜನತೆ ಹುಡುಕಿ ಹುಡುಕಿ ಹೆಕ್ಕಿ ಶಿಕ್ಷಿಸುತ್ತಿದ್ದಾರೆ. ವಿಶೇಷವಾಗಿ ನಮ್ಮ ಕಾನೂನು ಕೂಡ ಇಂದು ಸಹಕಾರಿಯಾಗಿದೆ, ಸತ್ಯದ ಸಪೋರ್ಟಿಗೆ ಕೈಜೋಡಿಸಿದೆ.

ಭಯೋತ್ಪಾದಕ, ಸುಸೈಡ್ ಬಾಂಬರ್ ಸುಮಾರು ನೂರು ಕೇಜಿ ತೂಕದ ಬಾಂಬನ್ನು ತನ್ನ ಕಾರಿನಲ್ಲಿ ತಂದು CRPF ಯೋಧರಿದ್ದ ಬಸ್ಸಿಗೆ ಗುದ್ದಿದಾಗ ದೇಶ ಕಳೆದು ಕೊಂಡಿದ್ದು ನಲವತ್ತು ಯೋಧರನ್ನು. ತನ್ನ ಮಕ್ಕಳನ್ನು. ಅಂತಹ ದುಃಖದ ಸಂದರ್ಭದಲ್ಲಿ ಸೋನಿ ಟಿವಿಯಲ್ಲಿ ಬರುವ ‘ಕಪಿಲ್ ಶರ್ಮಾ ಶೋ’ದ ಭಾಗವಾಗಿದ್ದ ಸಿದ್ಧು ಹೇಳಿದ್ದೇನು ಗೊತ್ತಾ? “ದ್ವೇಷದಿಂದ, ಬೈಗಳದಿಂದ ಏನೂ ಆಗುವುದಿಲ್ಲ, ಕಾಶ್ಮೀರದ ಸಮಸ್ಯೆ ಬಗೆಹರಿಸಲು ಶಾಂತಿ ಮಾರ್ಗವನ್ನು ತುಳಿಯಬೇಕು, ಅಂತರಾಷ್ಟ್ರೀಯ ಒತ್ತಡ ಹೆಚ್ಚಾಗಬೇಕು, ಇದರಲ್ಲಿ ಪಾಕಿಸ್ತಾನದ ತಪ್ಪೇನೂ ಇಲ್ಲ” ಎಂದು. ಇಂತಹ ಸಂದರ್ಭದಲ್ಲಿ ಬುದ್ಧಿವಾದ ಬೇಕಾ? ಇಷ್ಟು ದಿನ ಶಾಂತಿ‌ಯ ಹೆಸರಲ್ಲಿಯೇ ಅಲ್ಲವೇ ಇವರ ಪಕ್ಷ ಕಾಶ್ಮೀರದಲ್ಲಿ ಅಶಾಂತಿಯನ್ನು ಕಾಯಂ ಇಟ್ಟಿದ್ದು. ಶಾಂತಿ ಮಂತ್ರ ಜಪಿಸುವ ಇವರು ಇಷ್ಟು ದಿನ ಮಾಡಿದ ಪ್ರಯತ್ನವಾದರೂ ಏನು? ಭಯೋತ್ಪಾದಕರನ್ನು ಖಂಡಿಸುವ ಬದಲು ನಮ್ಮ ಜನರನ್ನೇ ವಿರೋಧಿಸುವ ಸಿದ್ಧುವಿನಂತವರಿಗೆ ಬುದ್ಧಿ ಕಲಿಸಬೇಕು ಅಲ್ಲವೇ? ಸೋನಿ ಕಂಪನಿಯು ಸಿದ್ಧುವನ್ನು ಶೋದಿಂದ ಹೊರಕ್ಕೆ ಹಾಕಿದೆ. ಶಿಕ್ಷಕಿಯೊಬ್ಬಳು ಪಾಕಿಸ್ತಾನ ಜಿಂದಾಬಾದ್ ಎಂದು ಭಾರತದ ನೆಲದಲ್ಲಿ ಕೂಗಿದ್ದಕ್ಕೆ ಆ ದೇಶದ್ರೋಹಿಗೆ ಪೋಲಿಸರು ಆಕೆಯನ್ನು ಸ್ಟೇಷನ್ನಿಗೆ ಕರೆದುಕೊಂಡು ಹೋಗಿ ಚಪ್ಪಲ್ಲಿಯಲ್ಲಿ ಮಂಗಳಾರತಿ ಮಾಡಿದ್ದಾರೆ. ಹೀಗೆ ದೇಶದ ಹಲವಾರು ಭಾಗದಲ್ಲಿ ವಾಕ್ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಂಡ ಎಲ್ಲರನ್ನೂ ಲಿಂಗಭೇದವಿಲ್ಲದೆ ಹಿಡಿದು ತಕ್ಕ ಶಾಸ್ತಿ ಮಾಡಲಾಗಿದೆ. ಸೋಷಿಯಲ್ ಮೀಡಿಯಾ ಎನ್ನುವುದು ಇಂದು ತಮಾಷೆಯಾಗಿ ಉಳಿದಿಲ್ಲ. ಮನಸ್ಸಿಗೆ ಬಂದಹಾಗೆ ಅಲ್ಲಿ ಗೀಚುವಂತೆ ಹಾಗಿಲ್ಲ. ಅಲ್ಲಿಯ ಪ್ರಭಾವ ನೇರವಾಗಿ ಮನೆಯ ಬಾಗಿಲ ಮುಂದೆ ಬಂದು ನಿಲ್ಲುತ್ತದೆ. ಈ ಇಲೆಕ್ಟ್ರಾನಿಕ್ ಯುಗದಲ್ಲಿ ಹುಟ್ಟಿಕೊಂಡಿದ್ದೇ ಸೋಷಿಯಲ್ ಮೀಡಿಯಾ ಚಳುವಳಿ. ಹಲವಾರು ಸೋಷಿಯಲ್ ಮೀಡಿಯಾ ಹೋರಾಟಗಾರರಲ್ಲಿ ಈ ಬಾರಿ ಜನರ ಮನ್ನಣೆ ಪಡೆದವ ಅಂಶುಲ್ ಸಕ್ಸೆನಾ. ಆತ ತನ್ನ ಜಾಲತಾಣದಲ್ಲಿ ದೇಶದ್ರೋಹಿಗಳನ್ನು ಹುಡುಕಿ ಹುಡುಕಿ ರಿಪೋರ್ಟ್ ಮಾಡಿದ್ದಾನೆ. ಪಾಕಿಸ್ತಾನದ ಪರ ನಿಂತವರಿಗೆ, ಯೋಧರನ್ನು ದ್ವೇಷಿಸಿ ಭಯೋತ್ಪಾದಕರನ್ನು ಪ್ರಶಂಸಿದವರಿಗೆ ತಕ್ಕ ಶಾಸ್ತಿ ಆಗಿದೆ. ಸಕ್ಸೆನಾ ತರಹದ ಹಲವಾರು ಸೋಷಿಯಲ್ ಮೀಡಿಯಾ ಹೋರಾಟಗಾರರು ದೇಶ ಸೇವೆಯಲ್ಲಿ ಭಾಗವಹಿಸಿದ್ದನ್ನು ನೋಡಿದ್ದೇವೆ. ಇದನ್ನೇ ಸೋಷಿಯಲ್ ಮೀಡಿಯಾ ಪವರ್ ಎನ್ನುವುದು.

ಸೋಷಿಯಲ್ ಮೀಡಿಯಾ ಹೋರಾಟ ಒಂದು ಕಡೆ ನಡೆಯುತ್ತಿದ್ದರೆ ಯೋಧರ ಬಲಿದಾನಕ್ಕೆ ಜೀವ ತುಂಬಿದವರು ದೇಶದ ಜವಾಬ್ದಾರಿಯುತ ನಾಗರಿಕರು. ಇಂದು ಸ್ವಾತಂತ್ರ್ಯ ಪೂರ್ವದ ಒಗ್ಗಟ್ಟು ಮತ್ತೆ ದೇಶದಲ್ಲಿ ಕಾಣುತ್ತಿದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎನ್ನದೆ ಎಲ್ಲ ಧರ್ಮದವರೂ ಒಂದುಗೂಡಿ ಭಯೋತ್ಪಾದನೆಯನ್ನು ವಿರೋಧಿಸುತ್ತಿದ್ದಾರೆ, ಭಯೋತ್ಪಾದಕರನ್ನು ಸಾಕುತ್ತಿರುವ ಪಾಕಿಸ್ತಾನಕ್ಕೆ ಧಿಕ್ಕಾರ ಹಾಕುತ್ತಿದ್ದಾರೆ. ಸಿಲಿಬ್ರಿಟಿಗಳು ತಾವು ತಾವಾಗಿಯೇ ಮುಂದೆ ಬಂದು ಯೋಧರಿಗೆ ಗೌರವ ಅರ್ಪಿಸುತ್ತಿದ್ದಾರೆ, ಜೊತೆಗೆ ಅವರ ಮನೆ, ಮಕ್ಕಳಿಗೆ ಸಹಾಯವನ್ನು ಕೂಡ ಮಾಡಲು ಮುಂದಾಗಿದ್ದಾರೆ. ವಿರಾಟ್ ಕೊಯ್ಲಿ ತನಗೆ ಸಿಗಬೇಕಾಗಿದ್ದ ಗೌರವವನ್ನು ಆ ಸಮಾರಂಭವನ್ನು ಮುಂದಕ್ಕೆ ತಳ್ಳಿದ್ದಾನೆ. ಕರಾಚಿಯ ಲಿಟರೇಚರ್ ಫೆಸ್ಟಿವಲ್ ಗೆ ಹೋಗಬೇಕಿದ್ದ ಜಾವೇದ್ ಅಕ್ತರ್ ಹಾಗೂ ಶಬನಾ ಆಜ್ಮಿ ತಮ್ಮ ಪ್ರವಾಸ ರದ್ದು ಮಾಡಿದ್ದಾರೆ. ಅಂಬಾನಿ, ಅಮಿತಾಭ್ ಬಚ್ಚನ್, ವೀರೇಂದ್ರ ಶೆಹವಾಗ್ ಇವರೆಲ್ಲ ಮಡಿದ ಯೋಧರ ಮನಗೆ, ಮಕ್ಕಳಿಗೆ ಅವರ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಹಿಂದೆಂದೂ ಕಾಣದ ಸರ್ವಶಕ್ತಿ, ಇಂದು ನೂರಾ ಮೂವತ್ತು ಕೋಟಿ ಜನರು ಒಂದಾಗಿದ್ದಾರೆ!

ಮೊದಲಿದ್ದ ಕೇಂದ್ರ ಸರಕಾರ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಎನ್ನುವ ವಿಚಾರ ಮಾಡುವುದರಲ್ಲೇ ಕಾಲಹರಣ ಮಾಡುತ್ತಿತ್ತು. ಗಡಿಯಲ್ಲಿ ಆ ಕ್ಷಣ ಏನು ಮಾಡಬೇಕು ಎನ್ನುವುದಕ್ಕೆ ಬೇಕಾಗಿರುವುದು ರಾಜಕಾರಣಿಯ ಬುದ್ಧಿಯಲ್ಲ, ಯೋಧನ ಚಾತುರ್ಯ, ಶೌರ್ಯದ ಕಿಡಿ. ಇಂದಿನ ಪ್ರಧಾನಿ ಮೋದಿ, ಆರ್ಮಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ತಕ್ಕ ಜಾಗ, ಪ್ರಶಸ್ತ ಕಾಲ ನೋಡಿ ಆಕ್ರಮಣ ಮಾಡಿ ಎಂದಿದ್ದಾರೆ. ಭಾರತ ಸರ್ಕಾರವು ಪಾಕಿಸ್ತಾನದ ಮೇಲೆ ದಿಗ್ಭಂದನ ಹೇರಿದೆ. ಪಾಕಿಸ್ತಾನದ ಜೊತೆ ವಹಿವಾಟು ಆಗುತ್ತಿರುವ ವಸ್ತುಗಳ ಮೇಲೆ ತೆರಿಗೆಯನ್ನು 200% ಹೆಚ್ಚಿಸಲಾಗಿದೆ. ಅಮೇರಿಕಾದ NSA ಮುಖ್ಯಸ್ಥ ಭಾರತದ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಪಾಕಿಸ್ತಾನಕ್ಕೆ ಬಿಡುತ್ತಿದ್ದ ಹೆಚ್ಚುವರಿ ನೀರು ಬಿಡುವುದನ್ನು ನಿಲ್ಲಿಸಲಾಗಿದೆ. ಗಡಿಯಲ್ಲಿ ಭಯೋತ್ಪಾದಕರ ಹೆಣ ಉರುಳುತ್ತಿದೆ. 150ಕ್ಕೂ ಹೆಚ್ಚು ಪ್ರತ್ಯೇಕವಾದಿಗಳನ್ನು ಬಂಧಿಸಲಾಗಿದೆ. ಸಾವಿರಾರು ಸೈನಿಕರನ್ನು ಕಾಶ್ಮೀರಕ್ಕೆ ರವಾನಿಸಲಾಗಿದೆ. ಪಾಕಿಸ್ತಾನದ ಮೇಲೆ ಅಂತರಾಷ್ಟ್ರೀಯ ಒತ್ತಡ ಹೆಚ್ಚಿದೆ. ಪಾಕಿಸ್ತಾನದ ಪ್ರಧಾನಿ ಟಿವಿಯ ಮುಂದೆ ಬಂದು ‘ಯುದ್ಧಕ್ಕೆ ಮುಂದಾಗಬೇಡಿ’ ಎನ್ನುವ ಕೋರಿಕೆಯ ಮಾತನ್ನಾಡಿದ್ದಾರೆ. ಭಾರತವು ಇಂದು ಐದು ವರ್ಷದ ಹಿಂದಿನ ಭಾರತವಲ್ಲ. ಭಾರತ ಎಷ್ಟು ಬದಲಾಗಿದೆ ಎನ್ನುವುದು ಪಾಕಿಸ್ತಾನಕ್ಕೆ ಇನ್ನೂ ಅರಿವಾಗಿಲ್ಲ. ಹಾಗೆಯೇ ಭಯೋತ್ಪಾದಕರನ್ನು ಬೆಂಬಲಿಸುವ ಜನರಿಗೂ ಭಾರತದ ಹೊಸತನದ ಕುರಿತು ಅರಿವಿಲ್ಲ. ಇಲ್ಲಿ ದೇಶದ್ರೋಹಿಗಳಿಗೆ ಸ್ಥಾನವಿಲ್ಲ, ಸಂಪೂರ್ಣ ಸ್ವಾತಂತ್ರ್ಯವಿದೆ ಆದರೆ ಅದರ ದುರುಪಯೋಗ ದೇಶ ವಿರೋಧಿ ಚಟುವಟಿಕೆಗೆ ಅಲ್ಲ ಎನ್ನುವುದು ಮನವರಿಕೆಯಾಗುವ ದಿನಗಳು ಹತ್ತಿರದಲ್ಲಿದೆ. ಇಡೀ ಭಾರತದ ಮನವು ಯೋಧರ ಬಲಿದಾನದಿಂದ ನೊಂದಿದೆ. ದೇಶಪ್ರೇಮವು ಎಲ್ಲರ ನಾಡಿ ನಾಡಿಯಲ್ಲಿ ಹರಿಯುತ್ತಿದೆ. ಭಾರತದ ಸೇನೆಯ ನೀತಿಯನ್ನು, ಮುಂದಿನ ಹೆಜ್ಜೆಯನ್ನು ಊಹಿಸುವುದು ಕಷ್ಟ ಆದರೆ ಒಂದು ಮಾತಂತು ನಿಜ ನಮ್ಮ ಯೋಧರು ಪಾಕಿಸ್ತಾನಕ್ಕೆ ಸರಿಯಾದ ಉತ್ತರ ಕೊಡದೇ ನಿದ್ರೆ ಮಾಡುವುದಿಲ್ಲ. ಪಾಕಿಸ್ತಾನ ಇಂದು ಒಂದು ದುರ್ಬಲ ದೇಶ. ಅಲ್ಲಿ ಜನರಿಗೆ ಊಟಕ್ಕೆ ಗತಿಯಿಲ್ಲ, ಇಡೀ ದೇಶವೇ ದಿವಾಳಿಯಾಗಿದೆ. ಇಂತಹ ಪರಿಸ್ಥಿಯಲ್ಲೂ ಜಗತ್ತಿನಲ್ಲಿಯೇ ಅತೀ ವೇಗವಾಗಿ ಬೆಳೆಯುತ್ತಿರುವ ಭಾರತದ ಮೇಲೆ ಭಯೋತ್ಪಾದಕರನ್ನು ಕಳುಹಿಸಿ, ದಾಳಿ ನಡೆಸಿ ಅದು ಆತ್ಮಹತ್ಯೆಗೆ ಮುಂದಾಗಿದೆ. ವಿನಾಶ ಕಾಲೇ ವಿಪರೀತ ಬುದ್ಧಿ…!

Facebook ಕಾಮೆಂಟ್ಸ್

Vikram Joshi: ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.
Related Post