X
    Categories: Featuredಅಂಕಣ

ಹಾರುವ ರೆಕ್ಕೆಗಳೂ- ಏರುವ ಮೆಟ್ಟಿಲುಗಳೂ

ಪುಟ್ಟ ರೆಕ್ಕೆಗಳು ಗಾಜಿಗೆ ಬಡಿದುಕೊಳ್ಳುತ್ತ ಹಾರುವ ಸದ್ದು ಮತ್ತೆ ಬೀಳುವ ಸದ್ದು. ಸದ್ದು ಬಂದೆಡೆಗೆ ಹೋಗಿ ನೋಡಿದರೆ ದೊಡ್ಡ ನೊಣವೊಂದು ಕಿಟಕಿಯ ಗಾಜಿನಿಂದ ತೂರಿಕೊಂಡು ಹೊರಹೋಗಲು ಹವಣಿಸುತ್ತಿತ್ತು. ನಾನು ಕಿಟಕಿಯನ್ನು ತೆರೆಯಲು ಪಟ್ಟ ಪ್ರಯತ್ನ ಫಲಕೊಡಲಿಲ್ಲ. ಗಂಡಸರು ಹೆಂಗಸರೆನ್ನದೇ ಮನೆಮಂದಿಯೆಲ್ಲ ದುಡಿಯಲು ಹೋಗುವ ಮನೆಗಳಲ್ಲಿ ಕಿಟಕಿಗಳ ಬಾಗಿಲುಗಳನ್ನು ತೆರೆಯುವ ಪದ್ಧತಿಯೇ ಇರುವುದಿಲ್ಲ. ಅದೂ ಇತ್ತೀಚಿನ ಆಧುನಿಕ ಮನೆಗಳಲ್ಲಂತೂ ಕಿಟಕಿ ತೆರೆಯುವುದು ಹವಾನಿಯಂತ್ರಿತ ವ್ಯವಸ್ಥೆಗೆ (AC) ಸೂಕ್ತವಾಗಿರುವುದಿಲ್ಲ. ಹೀಗೆ ಗಚ್ಚಾಗಿ ಕುಳಿತ ಕಿಟಕಿಯ ಬಾಗಿಲನ್ನು ತೆಗೆಯಲಾಗದೇ, ತೆರೆದ ಮುಖ್ಯದ್ವಾರದ ಬಾಗಿಲು ನೊಣದ ಗಮನಕ್ಕೆ ಬಾರದೇ, ಪೊರಕೆಯಲ್ಲಿ ಎತ್ತಿ ಹೊರಗೆ ತೆಗೆದುಕೊಂಡುಹೋಗಿ ಹಾರಿಸುವ  ಕ್ರಿಯೆಯಲ್ಲಿ ನೊಣಕ್ಕೆ ಚಿಕ್ಕಪುಟ್ಟ ಗಾಯಗಳಾಗಿರಲಿಕ್ಕೂ ಸಾಕು. ಒಟ್ಟಿನಲ್ಲಿ ನೊಣ ಹಾರಿ ಮಾಯವಾಯಿತು. ಮನೆಯೊಳಗೆ ಬಂದು ಕಿಟಕಿಯ ಗಾಜನ್ನು ನೋಡಿದೆ. ಗಾಜಿನ ಮೇಲಿನ ಧೂಳಿನ ಮೇಲೆ ಹೊಸ ಕಾಲದ ಚಿತ್ತಾರ ಮೂಡಿತ್ತು. ಅದೆಷ್ಟು ಹೊತ್ತಿನಿಂದ ಸ್ವಾತಂತ್ರ್ಯ ಹೋರಾಟವನ್ನು ನಡೆಸಿತ್ತೋ ನೊಣ?! ಘಟನೆಯೇ ನೆಪವಾಗಿ ನೆನಪೊಂದು ಮತ್ತೆ ತೆರೆದುಕೊಂಡಿತ್ತು.

ಪಾರ್ಕ್’ಗಳೂ ತೋಟಗಳಾಗಿತ್ತು

ಈಗ 8-9 ವರ್ಷಗಳ ಹಿಂದೆಟೆಕ್ ಪಾರ್ಕ್ ಒಂದರಲ್ಲಿ ಕೆಲಸಮಾಡುತ್ತಿದ್ದ ಸಮಯ. ಗಾಜಿನಿಂದಲೇ ನಿರ್ಮಾಣಗೊಂಡ ಗೋಡೆಗಳು ಕಟ್ಟಡದಾಚೆ ಕಾಣುವ ಜಗತ್ತಿಗೆ ನಮ್ಮನ್ನು ಕಿವುಡಾಗಿಸಿದ್ದವು. ಮಳೆ ಬಂದರೂ ನೋಡಿ ಸವಿಯಬೇಕೇ ವಿನಹ ಮಳೆಯ ಸದ್ದು ಕೇಳಿಸದ ಕಟ್ಟಡ ಆಶ್ಚರ್ಯವನ್ನು ಉಂಟುಮಾಡುತ್ತಿತ್ತು. ಪದೇಪದೇ ಬಂದು ಇಣುಕುವ ಪಕ್ಷಿಗಳ ರೆಕ್ಕೆ ಬಡಿಯುವ ಸದ್ದಾಗಲೀ, ಕೂಗುವಿಕೆಯಾಗಲೀ ಕೇಳಿದ್ದೇ ಇಲ್ಲ. ಕಟ್ಟಡದ ಪಕ್ಕದ ತೆಂಗಿನ ತೋಟದಲ್ಲಿ ನೆಲೆಯಾಗಿದ್ದ ಪಕ್ಷಿಗಳ ಹಾರಾಟ ನಮ್ಮ ನಾಗರಿಕತೆಯ ಸಂಕೋಲೆಯನ್ನು ಅಪಹಾಸ್ಯ ಮಾಡಿದಂತಿರುತ್ತಿತ್ತು. ಅದೊಂದು 3-4 ಎಕರೆಗಳಷ್ಟು ದೊಡ್ದದಾದ ತೆಂಗಿನ ತೋಟವಾಗಿತ್ತು. ತೋಟದ ಮೂಲೆಯೊಂದರಲ್ಲಿ ಪುಟ್ಟ ಗುಡಿಯಿತ್ತು. ಇನ್ನೊಂದು ಬದಿಯಲ್ಲಿ ಸಾಲಾಗಿ ನಾಲ್ಕೈದು ಪುಟ್ಟ ಪುಟ್ಟ ಟಾರಸಿಯ ಮನೆಗಳು. ಮನೆಯ ಹೊರಗೆ ಆಡುವ ಮಕ್ಕಳು, ಹಪ್ಪಳ ಸಂಡಿಗೆ ಬೇಳೆಕಾಳುಗಳನ್ನು ಒಣಗಿಸುವ ಹೆಂಗಸರು, ಅಂಗಳದಲ್ಲಿ ಕುಳಿತು ಬಿಸಿಲು ಕಾಯಿಸುವ ಮುದುಕರು, ಮನೆಯ ಹಿಂದೆ ಒಣಹಾಕಿದ ಬಣ್ಣಬಣ್ಣದ ಬಟ್ಟೆಗಳು, ತೊಳೆಯದೇ ಬಿಟ್ಟ ಪಾತ್ರೆಗಳು, ಕುಯ್ಯಲಾಗದೆಯೋ ಅಥವಾ ಪ್ರಾಣಿಪಕ್ಷಿಗಳಿಗೆಂದೇ ಬಿಟ್ಟು ಮರದಲ್ಲೇ ಕುಸಿಯುತ್ತಿರುವ ಪಪ್ಪಾಯ ಹಣ್ಣುಗಳು, ತೋಟದಲ್ಲಿ ಅಲ್ಲಲ್ಲಿ ಬಿದ್ದುಕೊಂಡಿರುವ ತೆಂಗಿನ ಮಡಿಲುಗಳು, ತೆಂಗಿನ ನಡುವೆ ಅಲ್ಲಲ್ಲಿ ಚಿಕ್ಕೂ ಮತ್ತು ಮಾವಿನ ಮರಗಳು, ಮರಹತ್ತುವ ಅಳಿಲುಗಳು, ಬಗೆಬಗೆಯ ಪಕ್ಷಿಗಳ ಹಾರಾಟ ಮಹಾನಗರಕ್ಕೆ ಸಂಬಂಧಿಸಿದ್ದೇ ಅಲ್ಲವೇನೋ ಎನ್ನುವಂತಹ ಚಿತ್ರಗಳು! ನಗರದಲ್ಲೇ ಹುಟ್ಟಿ ಬೆಳೆದ ಸಹೋದ್ಯೋಗಿಗಳು ಹೇಳುತ್ತಿದ್ದರುಮುಂಚೆ ಟೆಕ್ ಪಾರ್ಕ್ ಇದ್ದ ಜಾಗವೂ ತೆಂಗಿನ ತೋಟವೇ ಆಗಿತ್ತು. ಇದರ ಆಸುಪಾಸಿನಲ್ಲೆಲ್ಲ ಹಳ್ಳಿಗಳಿದ್ದವು.

ಕಂಪ್ಯೂಟರ್ ಪರದೆ ನೋಡಿ ಕಣ್ಣುರಿಯಾದಾಗ, ಕೆಲಸ ಮಾಡಿ ಬೇಸರವಾದಗ ಇರಲೀ, ಯಾರೊಡನೆಯಾದರೂ ಹರಟುವ ಸಮಯವಿರಲಿ ತೆಂಗಿನ ತೋಟವನ್ನು ನೋಡುತ್ತ ನಿಲ್ಲುವುದು ರೂಢಿಯಾಗಿತ್ತು. ಹಾರಾಡುವ ಹಕ್ಕಿಗಳು, ಕಾದಾಡುವ ಅಳಿಲುಗಳು, ಓಡಾಡುವ ನಾಯಿಬೆಕ್ಕುಗಳು, ತೋಟದಲ್ಲಿ ವಾಸವಾಗಿರುವ ಮನುಷ್ಯರ ದಿನಚರಿಗಳು, ಮರದಿಂದ ಕಳಚಿ ಬೀಳುವ ತೆಂಗಿನ ಮಡಿಲುಗಳುಪದೇ ಪದೇ ನೋಡಿದರೂ ಪ್ರತಿಸಲ ನೋಡುವಾಗಲೂ ಹೊಸದೆನ್ನಿಸುತ್ತಿತ್ತು. ಅಲ್ಲಿ ನಡೆಯುವ ಚಟುವಟಿಕೆಗಳ ಸದ್ದು ಕೇಳಿಸದಿದ್ದರೂ, ಕಣ್ಣೇ ಕಿವಿಯಾಗಿ ಚಿತ್ರವನ್ನು ಅರ್ಥೈಸುತ್ತಿತ್ತು. ತೆಂಗಿನ ತೋಟದ ಪಕ್ಷಿಗಳು ಆಗಾಗ ನಮ್ಮ ಕಟ್ಟಡದ ಬದಿಯ ಗಾರ್ಡನ್ ಮೂಲೆಯಲ್ಲಿರುವ ನೀರಿನ ಕೊಳದಲ್ಲಿ ಆಟವಾಡುತ್ತಿದ್ದವು. ಗಾರ್ಡನ್ ಲಾನ್ ಮೇಲೆ ಓಡಾಡುತ್ತ ಹುಳುಗಳನ್ನು ಉಣ್ಣುತ್ತಿದ್ದವು. ನಮ್ಮ ಕಟ್ಟಡದ ಗಾಜಿನ ಗೋಡೆಯನ್ನು ಕನ್ನಡಿಯನ್ನಾಗಿಸಿಕೊಂಡು ತಮ್ಮ ಮುಖ ನೋಡಿಕೊಂಡು ಹಾರಿ ಮತ್ತೆ ತೆಂಗಿನ ತೋಟಕ್ಕೆ ಹೋಗುತ್ತಿದ್ದವು. ಕಚೇರಿಯ ಏಕತಾನತೆಯ ಕೆಲಸದ ನಡುವೆ ನಮ್ಮನ್ನು ರಂಜಿಸುತ್ತಿದ್ದವು.

ಬೋಳಾದ ತೋಟ

2012 ಚಿಳಿಗಾಲದಲ್ಲಿ ನಾನೊಂದು ತಿಂಗಳುಗಳ ಕಾಲ ಬೇರೆ ಟೆಕ್ ಪಾರ್ಕಿನಲ್ಲಿರುವ ನಮ್ಮದೇ ಕಂಪನಿಯ ವಿಭಾಗವೊಂದರಲ್ಲಿ ಕೆಲಸಮಾಡಬೇಕಾಗಿ ಬಂತು. ನಾನು ಮರಳಿ ಬಂದಾಗ ಯಾವತ್ತೂ ಬೇಸರ ತರಿಸದ ತೆಂಗಿನ ತೋಟದ ಮನೋರಂಜನೆ ಬದಲಾಗಿ ಹೋಗಿತ್ತು. ತೆಂಗಿನ ಮರಗಳನ್ನೆಲ್ಲ ಬುಡ ಸಮೇತ ಕಿತ್ತು ತೋಟದ ಅಂಚಿನಲ್ಲಿ ಸಾಲಾಗಿ ನೆಟ್ಟಿದ್ದರು. ಬಹುತೇಕ ತೆಂಗಿನ ಗರಿಗಳು ಒಣಗಿ ಜೋತುಬಿದ್ದಿದ್ದವು. ಮರಗಳನ್ನು ಕಿತ್ತು ಮತ್ತೆ ನೆಡುವ ನಾಟಕ ಎಷ್ಟು ನಾಟಕೀಯ ಎನ್ನುವುದು ಮರಗಳ ಸ್ಥಿತಿ ನೋಡಿದರೇ ಗೊತ್ತಾಗುತ್ತಿತ್ತು. ತೋಟವಿದ್ದ ಜಾಗವೆಲ್ಲ ಯಾವುದೋ ಯುದ್ಧಭೂಮಿಯಂತೆ ಕಾಣಿಸುತ್ತಿತ್ತುನೆಲ ಅಗೆಯುವ ಯಂತ್ರ, ಮಣ್ಣೆತ್ತುವ ಯಂತ್ರ, ದೊಡ್ಡ ದೊಡ್ಡ ಕ್ರೇನ್ ಗಳು, ಹೊಸ ಹೊಸ ಬಗೆಯ ಯಂತ್ರಗಳು, ಲಾರಿಗಳು, ಅಲ್ಲಲ್ಲಿ ಹಳದಿ ಟೋಪಿ ಹಾಕಿಕೊಂಡು ಓಡಾಡುವ ಜನರು, ಇನ್ನೂ ಏನೇನೋ. ನನ್ನ ಸಹೋದ್ಯೋಗಿಗಳು ವಾರದಿಂದ ಅಲ್ಲಿ ನಡೆಯುತ್ತಿರುವ ದೃಶ್ಯಗಳನ್ನೆಲ್ಲ ನನ್ನ ಕಣ್ಣಿಗೆ ಕಟ್ಟುವಂತೆ ಹೇಳಿ ಮುಗಿಸಿದರು. ತೋಟದಲ್ಲಿ ವಾಸವಾಗಿದ್ದ ಸಂಸಾರ ಮನೆ ಖಾಲಿಮಾಡಿಕೊಂಡು ಹೋಗಿದ್ದನ್ನು ಹಲವರು ನೋಡಿದ್ದರು. ದೇವರ ಗುಡಿಗೆ ಇನ್ನೆಲ್ಲೋ ಜಾಗ ನೋಡಿದ್ದಾರೆ ಎಂದು ಚಹಾ ಅಂಗಡಿಯವನು ಹೇಳುತ್ತಿದ್ದ. ಆದರೆ ಅಲ್ಲಿದ್ದ ಪ್ರಾಣಿ ಪಕ್ಷಿಗಳು ಏನಾದವೆನ್ನುವುದು ಯಾರಿಗೂ ಗೊತ್ತಾಗಲಿಲ್ಲ. ಮತ್ತೊಂದು ವಾರದಲ್ಲಿ ನೆಟ್ಟ ತೆಂಗಿನ ಮರದ ಗರಿಗಳೆಲ್ಲ ಬಿದ್ದುಹೋಗಿ ಮರ ಬೋಳಾಯಿತು. ಮರಗಳನ್ನೆಲ್ಲ ಕಿತ್ತು ಗಾಡಿಗೆ ತುಂಬಿಸಿ ಎಲ್ಲಿಗೆ ಸಾಗಿಸಿಕೊಂಡು ಹೋದರೋ?! 3-4 ಎಕರೆಗಳಷ್ಟು ವಿಸ್ತಾರವಾದ ತೆಂಗಿನ ತೋಟ ಬಹಳಷ್ಟು ಬಗೆಯ ಪ್ರಾಣಿ ಪಕ್ಷಿಗಳನ್ನು ಸಾಕುವ ಶಕ್ತಿ ಹೊಂದಿತ್ತು. ಭೂಮಿಯನ್ನು ಮಾರಿದವನಿಗಾಗಲೀ ಅಥವಾ ಕೊಂಡವನಿಗಾಗಲೀ ಮನುಷ್ಯ ಜೀವಿಯನ್ನು ಬಿಟ್ಟು ಮತ್ತಾವ ಜೀವಿಗಳ ಪರಿಚಯವೂ ಇದ್ದಂತಿರಲಿಲ್ಲ. ಭೂಮಿ ಯಾರ ಸೊತ್ತೂ ಅಲ್ಲದಿರುವಾಗ, ಬಲಾಢ್ಯನಾದವನೊಬ್ಬನು ಭೂಮಿ ತನ್ನದೆಂದು ದಾಖಲಿಸಿಕೊಂಡು ಪ್ರಾಣಿ ಪಕ್ಷಿ ಕೀಟ ಮತ್ತಿತರ ಜೀವಿಗಳನ್ನು ನಿರ್ಲಕ್ಷಿಸಿ, ಮನಸ್ಸಿಗೆ ಬಂದಂತೆ ವರ್ತಿಸುವುದು ಕಾಲದ ವಿಪರ್ಯಾಸವೇ ಸರಿ.

ನಂತರದ ದಿನಗಳಲ್ಲಿ ಜಾಗದಲ್ಲಿ 14-15 ಅಂತಸ್ತಿನ ಕಟ್ಟಡವೊಂದು ತಲೆಎತ್ತಿತು. ಯಾವ್ಯಾವುದೋ ಊರುಗಳಿಂದ, ಯಾವ್ಯಾವುದೋ ದೇಶಗಳಿಂದ ಬಂದ ಜನರು ಕಟ್ಟಡದಲ್ಲಿ ಕೆಲಸ ಹಿಡಿದರು. ಕಟ್ಟಡದ ಸುತ್ತಲೂ ಲಾನ್ ಮತ್ತು ಗಾರ್ಡನ್ ಆದಮೇಲೆ ಕೆಲವೇ ಕೆಲವು ಪಕ್ಷಿಗಳ ಹಾರಟ ಕಾಣಿಸತೊಡಗಿತು. ಆದರೆ ಮೊದಲಿದ್ದ ತೆಂಗಿನ ತೋಟದ ಪಕ್ಷಿಗಳು ಅವಾಗಿರಲಿಲ್ಲ. ಜೀವಿಗಳು ಎಲ್ಲಿಗೆ ಹೋದವೆನ್ನುವುದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲಿಲ್ಲ. ಒಟ್ಟಿನಲ್ಲಿ ಮಾನವನು ಮಾತ್ರ ನಾಗರೀಕನೆಂದೂ, ಬೇರೆ ಜೀವಿಗಳು ನಗರವಾಸಿಗಳಾಗಲು ಅನರ್ಹರೆಂದೂ ಸಾಬೀತಾಯಿತು. ಇಂತಹ ಕಥೆ/ವ್ಯಥೆಗಳು ಪ್ರತೀ ಅಭಿವೃದ್ಧಿಯ ಹಿಂದೆ ಇವೆ. ಪರಿಸರದ ದೃಷ್ಟಿಯಿಂದ ನೋಡಿದರೆ ಮಾನವನ ಬೌದ್ಧಿಕ ವಿಕಾಸವೇ ವಿನಾಶವಾಗಿ ತೋರುತ್ತದೆ.

Facebook ಕಾಮೆಂಟ್ಸ್

ಶ್ರೀಕಲಾ ಹೆಗಡೆ ಕಂಬ್ಳಿಸರ: ಹುಟ್ಟಿದ್ದು, ಬೆಳೆದದ್ದು ಸಿರಸಿಯ ಪುಟ್ಟ ಹಳ್ಳಿಯೊಂದರಲ್ಲಿ. ಓದಿದ್ದು ವಾಣಿಜ್ಯಶಾಸ್ತ್ರ. ಐದು ವರ್ಷಗಳು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿದ ಅನುಭವ. ಈಗ ಗೃಹಿಣಿಯಾಗಿದ್ದು, ಬರವಣಿಗೆ ಹವ್ಯಾಸ.
Related Post