X
    Categories: ಕವಿತೆ

ಕೇಳಿಸುವುದಿಲ್ಲ

ಕಡೆಯ ಮಾತು ಕೇಳಿಸುವುದೇ ಇಲ್ಲ.

ಕೂಗಳತೆಯ ದೂರದಲ್ಲಿ

ಅಸ್ಪಷ್ಟವಾಗಿ ಕಾಣುವ ಆಕಾರ

ಕಡೆಗೆ  ಮರೆಯಾಗುತ್ತದೆ.

 

ಊರ ಜಾತ್ರೆಯ ಗೌಜಿನಷ್ಟು ಪ್ರಶಾಂತವಾಗಿರುವ

ನಗರದ ಗುಡಿಗಳ

ಆಡಂಬರದ ಉಡುಗೆತೊಡುಗೆಗಳ

ನೂಕು ನುಗ್ಗಲಿನಲ್ಲಿ,

ಗರ್ಭಗುಡಿಯ ಸಾಲಿನಲ್ಲಿ,

ಪ್ರದಕ್ಷಿಣೆಗಳ ಹೆಜ್ಜೆ ಸದ್ದುಗಳಲ್ಲಿ

ನಿನ್ನ ಮಾತುಗಳು ಸ್ಪಷ್ಟವಾಗಿ ಕೇಳಿಸುವುದಿಲ್ಲ.

 

ಹಳ್ಳಿಮನೆಯ ವಿಶಾಲ ಹಜಾರದಷ್ಟು ಪುಟ್ಟಗಿರುವ

ಕಚೇರಿಯ ಆವರಣದಲ್ಲಿ

ಫೋನುಗಳ ರಿಂಗಣದಲ್ಲಿ

ಸಂದೇಶಗಳ ಆಕ್ರಮಣದಲ್ಲಿ

ಮುಗಿಯದ ಕೆಲಸಗಳ ಗುಡಾಣದಲ್ಲಿ

ನಿನ್ನ ಮಾತುಗಳು ಕೇಳಿಸಿಯೂ ಸ್ಪಷ್ಟವಾಗುವುದಿಲ್ಲ.

 

ಮಾತಾಡಲೆಂದೇ ಹೋಟೆಲ್ಲಿಗೆ ಹೋದರೆ

ಹಸಿವಿನ ವಿನಾ ಮತ್ತೇನೂ ತೋಚುವುದಿಲ್ಲ.

ಹೊಟ್ಟೆ ತುಂಬಿಸಿಕೊಂಡು

ಕಿವಿ ತೆರೆದು ಕುಳಿತರೆ

ಸುತ್ತಲಿನ ಮಾತುಗಳೇ ಜೋರಾಗಿ,

ನಿನ್ನ ಜೋರಾದ ಧ್ವನಿ ಹಾರಿಹೋಗುತ್ತದೆ.

 

ಏನನ್ನೋ ಹೇಳಲೆಂದೇ ನೀ ನನ್ನನ್ನು

ಸುಂದರವಾದ ನದಿ ತೀರಕ್ಕೆ ಕರೆದೊಯ್ದರೆ

ನನ್ನ ಕಣ್ಣುಗಳು ಖುಷಿಯಲ್ಲಿ

ಮೀಯಲು ಶುರುವಿಟ್ಟುಕೊಳ್ಳುತ್ತವೆ.

 

ಏನನ್ನೋ ಹೇಳಹೊರಟ ನಿನಗೆ

ಅವಕಾಶವಾಗುವುದಿಲ್ಲ

ಆದರೂ ಹೇಳಿ ಹೊರಡುತ್ತೀಯಾ

ವಿದಾಯ ಹೇಳಿ.

 

ನಿನ್ನ ಕಡೆಯ ಮಾತೂ ಕೇಳಿಸುವುದಿಲ್ಲ.

ನನ್ನ ಕಣ್ಣು ಮಂಜಾಗಿ ಏನೇನೂ ಕಾಣಿಸುವುದಿಲ್ಲ.

 

Facebook ಕಾಮೆಂಟ್ಸ್

ಶ್ರೀಕಲಾ ಹೆಗಡೆ ಕಂಬ್ಳಿಸರ: ಹುಟ್ಟಿದ್ದು, ಬೆಳೆದದ್ದು ಸಿರಸಿಯ ಪುಟ್ಟ ಹಳ್ಳಿಯೊಂದರಲ್ಲಿ. ಓದಿದ್ದು ವಾಣಿಜ್ಯಶಾಸ್ತ್ರ. ಐದು ವರ್ಷಗಳು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿದ ಅನುಭವ. ಈಗ ಗೃಹಿಣಿಯಾಗಿದ್ದು, ಬರವಣಿಗೆ ಹವ್ಯಾಸ.
Related Post