ಇತ್ತೀಚೆಗೆ ನಡೆದ ಚೀನಾ-ಆಫ್ರಿಕಾ ಸಹಕಾರ (FOCAC) ಸಭೆಯಲ್ಲಿ, ಮುಂದಿನ ಮೂರು ವರ್ಷಗಳಲ್ಲಿ ಚೀನಾವು ಆಫ್ರಿಕಾ ದೇಶಗಳಿಗೆ ೬೦ ಶತಕೋಟಿ ಯುಎಸ್ ಡಾಲರ್ ಸಹಾಯವನ್ನು ನೀಡುತ್ತೇವೆ ಎಂದು ಭರವಸೆ ನೀಡಿದೆ. ಈ ಪ್ರಮಾಣವು ೨೦೧೫ರಲ್ಲಿ ಭರವಸೆ ನೀಡಿದ ಪ್ರಮಾಣವೇ ಆಗಿದೆ; ಆದರೆ ಬಂಡವಾಳ ಹೂಡಿಕೆಯು ಹಿಂದಿನ ವರ್ಷಗಳಿಗಿಂತ ಭಿನ್ನವಾಗಿದೆ. ಎಫ್‌ಓಸಿಎಸಿ ಅಡಿಯಲ್ಲಿ ಚೀನಾವು ಆಫ್ರಿಕಾಕ್ಕೆ ನೀಡುವ ಬಂಡವಾಳವು ೨೦೦೬ರಲ್ಲಿ ೫ ಶತಕೋಟಿ ಇತ್ತು. ಇದನ್ನು ೨೦೧೫ರಲ್ಲಿ ೬೦ಶತಕೋಟಿ ಡಾಲರ್‌ಗೆ ಏರಿಸಿದೆ.
೨೦೧೮ರ ಸೆಪ್ಟೆಂಬರ್ ೩ರಿಂದ ೪ರವರೆಗೆ ಬೀಜಿಂಗ್‌ನಲ್ಲಿ ಚೀನಾ-ಆಫ್ರಿಕಾ ಸಹಕಾರದ ೭ನೇ ಶೃಂಗಸಭೆಯು ನಡೆಯಿತು. ಆಫ್ರಿಕಾ ಖಂಡ ಮತ್ತು ಯೂನಿಯನ್‌ನಿಂದ ಒಟ್ಟು ೫೩ ದೇಶಗಳು ಈ ಶೃಂಗಸಭೆಯಲ್ಲಿ ಭಾಗವಹಿಸಿದವು. ೨೦೦೦ರಲ್ಲಿ ಎಫ್‌ಓಸಿಎಸಿಯು ಆರಂಭವಾದ ಬಳಿಕ, ಆಫ್ರಿಕಾವು ಚೀನಾ ಹೂಡಿಕೆಯ ಮೂಲಾಧಾರವಾಗಿದೆ. ೭ನೇ ಶೃಂಗಸಭೆಯ ಬೀಜಿಂಗ್ ಘೋಷಣೆ ಹೀಗಿದೆ: ಪಾಲುದಾರಿಕೆಯ ಭವಿಷ್ಯದೊಂದಿಗೆ ಚೀನಾ-ಆಫ್ರಿಕಾ ಸಮುದಾಯ ಮತ್ತಷ್ಟು ಪ್ರಬಲದ ಕಡೆಗೆ. ಮತ್ತು ಎಫ್‌ಓಸಿಎಸಿ ಬೀಜಿಂಗ್ ಆಕ್ಷನ್ ಯೋಜನೆ (೨೦೧೯-೨೦೨೧) ಅನ್ನು ಅಂಗೀಕರಿಸಲಾಯಿತು. ಈ ಯೋಜನೆ ಪ್ರಕಾರ, ಚೀನಾವು ಆಫ್ರಿಕಾ ದೇಶಗಳಿಗೆ ಎಂಟು ಪ್ರಮುಖ ಉಪಕ್ರಮಗಳನ್ನು ಜಾರಿಗೆ ತರುತ್ತದೆ. ಕೈಗಾರಿಕಾ ಪ್ರಚಾರ, ಮೂಲಸೌಕರ್ಯ, ಸಂಪರ್ಕವ್ಯವಸ್ಥೆ, ವ್ಯಾಪಾರ ಸೌಕರ್ಯ ಮತ್ತು ಹಸಿರು ಅಭಿವೃದ್ಧಿ ಮುಂತಾದ ಯೋಜನೆಗಳನ್ನು ಒಳಗೊಂಡಿದೆ.
ಹೂಡಿಕೆ – ಹಂಚಿಕೆ
ಕ್ಸಿನ್‌ಹುಆ ನ್ಯೂಸ್ ಏಜೆನ್ಸಿ ಪ್ರಕಾರ, ೧೫ ಶತಕೋಟಿ ಯುಎಸ್ ಡಾಲರ್ ಅನುದಾನವು ಬಡ್ಡಿರಹಿತ ಸಾಲ ಮತ್ತು ರಿಯಾಯಿತಿ ಸಾಲ, ೨೦ ಶತಕೋಟಿ ಯುಎಸ್ ಡಾಲರ್ ಕ್ರೆಡಿಟ್ ಲೈನ್ಸ್, ಯುಎಸ್ ಡಾಲರ್ ೧೦ ಶತಕೋಟಿ ವಿಶೇಷ ನಿಧಿಯು ಆರ್ಥಿಕ ಅಭಿವೃದ್ಧಿಗೆ ಮತ್ತು ೫ ಶತಕೋಟಿ ಯುಎಸ್ ಡಾಲರ್ ಹೂಡಿಕೆಯು ಆಫ್ರಿಕಾದ ಆಮದುಗಳಿಗೆ ಸಂಬಂಧಿಸಿ ಆರ್ಥಿಕ ಸಹಾಯವನ್ನು ಮಾಡಲಿದೆ. ಮುಂದಿನ ಮೂರು ವರ್ಷಗಳಲ್ಲಿ, ೧೦ ಶತಕೋಟಿ ಯುಎಸ್ ಡಾಲರ್ ಮೌಲ್ಯದಷ್ಟು ಹೂಡಿಕೆಯನ್ನು ಆಫ್ರಿಕಾದಲ್ಲಿ ಮಾಡಲು ಚೀನಾ ಕಂಪೆನಿಗಳಿಗೆ ಪ್ರೋತ್ಸಾಹಿಸಲಾಗುತ್ತಿದೆ. ಇದರ ಜೊತೆಗೆ, ಕ್ಸಿ ಜಿನ್‌ಪಿಂಗ್ ಆಫ್ರಿಕಾದ ಕೆಲವು ದೇಶಗಳ ಸಾಲವನ್ನು ಮನ್ನಾ ಮಾಡಿದರು. ೨೦೧೫ರಲ್ಲಿ, ೩೫ ಶತಕೋಟಿ ಯುಎಸ್ ಡಾಲರ್ ಅನ್ನು ಚೀನಾವು ಬಡ್ಡಿಸಹಿತ ಸಾಲವನ್ನು ನೀಡಿತ್ತು; ಆರ್ಥಿಕ ಅಭಿವೃದ್ಧಿಗೆ ವಿಶೇಷ ಅನುದಾನವಾಗಿ ೫ ಶತಕೋಟಿ ಯುಎಸ್ ಡಾಲರ್, ಚೀನಾ-ಆಫ್ರಿಕಾ ಅಭಿವೃದ್ಧಿ ಅನುದಾನವಾಗಿ ೫ ಶತಕೋಟಿ ಯುಎಸ್ ಡಾಲರ್, ಆಫ್ರಿಕಾದ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿಗೆ ವಿಶೇಷ ಸಾಲವಾಗಿ ೫ ಶತಕೋಟಿ ಯುಎಸ್ ಡಾಲರ್ ಮತ್ತು ಚೀನಾ-ಆಫ್ರಿಕಾ ಉತ್ಪಾದನಾ ಸಾಮರ್ಥ್ಯದ ಸಹಕಾರ ನಿಧಿಗಾಗಿ ೧೦ ಶತಕೋಟಿ ಯುಎಸ್ ಡಾಲರ್ ಅನ್ನು ಹೂಡಿಕೆ ಮಾಡಿತ್ತು.
ಹೂಡಿಕೆಯ ಹಂಚಿಕೆಯ ಮೂಲಕ ತಿಳಿಯುವುದೇನೆಂದರೆ, ಬಡ್ಡಿರಹಿತ ಸಾಲ ಮತ್ತು ರಿಯಾಯಿತಿ ಸಾಲಗಳಿಗೆ ಅನುದಾನವನ್ನು ಒಟ್ಟಾರೆ ಯೋಜನೆಯಲ್ಲಿ ಹೆಚ್ಚಿಸಲಾಗಿದೆ. ತನ್ಮೂಲಕ ಚೀನಾವು ಆಫ್ರಿಕಾದ ರಾಜ್ಯಗಳಿಗೆ ಪ್ರತಿವರ್ಷ ೫ ಶತಕೋಟಿ ಯುಎಸ್ ಡಾಲರ್ ಅನ್ನು ಕೊಟ್ಟಂತಾಗುತ್ತದೆ. ಚೀನಾದಿಂದ ಘೋಷಿಸಲ್ಪಟ್ಟ ಅತ್ಯಂತ ದೊಡ್ಡಮಟ್ಟದ ಮೊತ್ತ ಇದು ಎಂದು ಪರಿಗಣಿಸಲಾಗಿದೆ. ಆಫ್ರಿಕಾಕ್ಕೆ ಬರುತ್ತಿರುವ ಎಲ್ಲಾ ವಿದೇಶೀ ನೆರವುಗಳಿಗೆ ಹೋಲಿಸಿದರೆ ಇದು ಅಲ್ಪಮೊತ್ತವೇ ಆಗಿದೆ. ಸೇರಿದಂತೆ ೨೦೧೫ರಲ್ಲಿ ೪೦ ಶತಕೋಟಿ ಇದ್ದಂತಹ ಅನುದಾನ, ಸಾಲ ಮತ್ತು ಕ್ರೆಡಿಟ್ ಲೈನ್ಸ್ ಎಲ್ಲವೂ ೨೦೧೮ಕ್ಕೆ ೩೫ ಶತಕೋಟಿ ಯುಎಸ್ ಡಾಲರ್‌ಗೆ ಇಳಿದಿದೆ. ೨೦೧೫ರಲ್ಲಿ ಇದ್ದಂತೆ ೨೦ ಶತಕೋಟಿ ಯುಎಸ್ ಡಾಲರ್ ಕ್ರೆಡಿಟ್ ಲೈನ್ ಇನ್ನು ಮುಂದೆ ರಫ್ತು ಸಾಲಕ್ಕೆ ಸೀಮಿತವಾಗಿರುವುದಿಲ್ಲ. ಇದಲ್ಲದೆ, ಹಣಕಾಸಿನ ಕಾರ್ಯಸಾಧ್ಯತೆಯ ಬಗ್ಗೆ ಚೀನಾದ ಕಾಳಜಿಯು ಹೆಚ್ಚಿದ್ದು, ಇದೇ ಕಾರಣದಿಂದ ಚೀನಾವು ರಿಯಾಯಿತು ಸಾಲಕ್ಕೆ ಅನುದಾನವನ್ನು ಕಡಿಮೆ ಮಾಡಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಸಾಲದ ಮರುಪಾವತಿ ಮತ್ತು ಹಣಕಾಸಿನ ವಾಣಿಜ್ಯ ಕಾರ್ಯಸಾಧ್ಯತೆ ಬಗ್ಗೆ ಚೀನಾಕ್ಕೆ ಇರುವ ಕಾಳಜಿ. ಆರ್ಥಿಕ ಅಭಿವೃದ್ಧಿಗೆ ನೀಡಿರುವ ೧೦ ಶತಕೋಟಿ ಯುಎಸ್ ಡಾಲರು ಅನುದಾನವು ಆಫ್ರಿಕಾದಲ್ಲಿ ಚೀನಾದ ಒಳಗೊಳ್ಳುವಿಕೆಯ ಹೊಸಮಾರ್ಗವನ್ನು ಸೂಚಿಸುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ಚೀನಾದ ಕಂಪೆನಿಗಳು ಹೂಡಿಕೆ ಮಾಡಲು ಪ್ರೋತ್ಸಾಹಿಸಲಾಗುತ್ತಿದೆ. ಹೀಗೆ, ಆಫ್ರಿಕಾದಲ್ಲಿ ಚೀನಾದ ಕಂಪೆನಿಗಳು ಹೂಡಿಕೆ ಮಾಡುತ್ತವೆಯೇ ಹೊರತು ಚೀನಾ ಸರ್ಕಾರವಲ್ಲ. ಆಫ್ರಿಕಾದ ದೇಶಗಳು ಉತ್ಪಾದನೆ ಮತ್ತು ಸೇವಾಕ್ಷೇತ್ರಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸಿರುವ ಕಾರಣ ಚೀನಾ ಸರ್ಕಾರವು ಚೀನಾ ಕಂಪೆನಿಗಳಿಗೆ ಹೂಡಿಕೆ ಮಾಡಲು ಪ್ರೋತ್ಸಾಹಿಸುತ್ತಿದೆ.
ಆಂತರಿಕ ಪ್ರತಿಕ್ರಿಯೆ
‘ಅಂತಾರಾಷ್ಟ್ರೀಯ ಹಣಕಾಸು ನಿಧಿ’ ಪ್ರಕಾರ, ಚೀನಾದ ಸಾಲವು ಅದರ ಒಟ್ಟು ದೇಶೀಯ ಉತ್ಪನ್ನದ ಪ್ರಮಾಣದಲ್ಲಿ ಹೆಚ್ಚಲಿದೆ; ೨೦೨೨ರ ವೇಳೆಗೆ ಶೇಕಡಾ ೨೩೫ರಿಂದ ಸುಮಾರು ಶೇಕಡಾ ೩೦೦ಕ್ಕೆ ಹೆಚ್ಚಲಿದೆ. ಆಫ್ರಿಕಾಕ್ಕೆ ೬೦ ಶತಕೋಟಿ ಯುಎಸ್ ಡಾಲರ್ ಹೂಡಿಕೆಯ ಅನುಮೋದನೆ ಮಾಡಿರುವುದು ಚೀನಾದಲ್ಲಿ ತೀವ್ರ ಆಂತರಿಕ ಟೀಕೆಗೆ ಒಳಗಾಗಿದೆ. ದೇಶದ ಹಣವು ದೇಶದ ಅಭಿವೃದ್ಧಿ ಕಾರ್ಯಗಳಿಗೆ ಮತ್ತು ನಾಗರಿಕರ ಕಲ್ಯಾಣ ಯೋಜನೆಗಳಿಗೆ ವಿನಿಯೋಗವಾಗಬೇಕೇ ಹೊರತು ಹೊರದೇಶಗಳಿಗೆ ಅಲ್ಲ ಎನ್ನುವ ಮೂಲಕ ಚೀನಾ ನಾಗರಿಕರು ತಮ್ಮ ಅತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ. ಚೀನಾ ಕೂಡ ಬಡದೇಶ. ಚೀನಾಕ್ಕೆ ೬೦ ಶತಕೋಟಿ ಯುಎಸ್ ಡಾಲರ್ ನೆರವನ್ನು ಒದಗಿಸಬಹುದಾದ ಯಾವುದಾದರೂ ದೇಶವಿದೆಯೇ? ಎನ್ನುವಂತಹ ಸೂಕ್ಷ್ಮವಾದ ಪೋಸ್ಟ್‌ಗಳು ಚೀನೀ ಸಾಮಾಜಿಕ ಜಾಲತಾಣಗಳಿಂದ ಅಳಿಸಲ್ಪಟ್ಟಿವೆ.
ಶಕ್ತಿ ಮತ್ತು ನೈಸಗ್ರಿಕ ಸಂಪನ್ಮೂಲಗಳ ಮೇಲೆ ಚೀನಾಕ್ಕಿರುವ ತೃಷೆಯು ಆಫ್ರಿಕಾ ಖಂಡದ ಮೇಲಿನ ಆಸಕ್ತಿಯನ್ನು ಹೆಚ್ಚಿಸಿದೆ. ಆಫ್ರಿಕಾದಿಂದ ಚೀನಾವು ಕಚ್ಚಾ ತೈಲ, ಅನಿಲ, ಕಬ್ಬಿಣದ ಅದಿರು, ತಾಮ್ರ, ಹತ್ತಿ, ವಜ್ರಗಳನ್ನು ಪ್ರಾಥಮಿಕ ಆಮದನ್ನಾಗಿ ಹೊಂದಿದೆ. ಯಂತ್ರೋಪಕರಣಗಳು, ಎಲೆಕ್ಟ್ರಾನಿಕ್ಸ್, ಜವಳಿ, ಹೈ-ಟೆಕ್ ಉತ್ಪನ್ನಗಳು ಮತ್ತು ಪೂರ್ಣಗೊಂಡ ಸರಕುಗಳು ರಫ್ತಾಗಲ್ಪಡುತ್ತವೆ. ಚೀನಾದ ವಾಣಿಜ್ಯ ಸಚಿವಾಲಯದ ಪ್ರಕಾರ, ಚೀನಾ-ಆಫ್ರಿಕಾ ಟ್ರೇಡ್ ಮೌಲ್ಯ ೧೭೦ ಶತಕೋಟಿ ಯುಎಸ್ ಡಾಲರ್ ಆಗಿತ್ತು. ೨೦೧೭ರಲ್ಲಿ, ಆಫ್ರಿಕಾಕ್ಕೆ ಚೀನಾದ ರಫ್ತು ಮೌಲ್ಯ ೯೪.೭೪ ಶತಕೋಟಿ ಯುಎಸ್ ಡಾಲರ್ ಮತ್ತು ಆಫ್ರಿಕಾದಿಂದ ಆಮದು ಮೌಲ್ಯ ೭೫.೨೬ ಶತಕೋಟಿ ಯುಎಸ್ ಡಾಲರ್ ಆಗಿತ್ತು.
ಆಫ್ರಿಕಾದ ಕಾಳಜಿ
‘ಅಂತಾರಾಷ್ಟ್ರೀಯ ಹಣಕಾಸು ನಿಧಿ’ಯ ಪ್ರಕಾರ, ೨೦೧೭-೧೮ರಲ್ಲಿ ೬ ಸಬ್-ಸಹರನ್‌ಗೆ ಸೇರಿದ ೩೫ ಆಫ್ರಿಕಾ ಪ್ರದೇಶವು ಕಡಮೆ-ಆದಾಯದ ದೇಶಗಳು ’ಸಾಲದ ಯಾತನೆ’ಯಲ್ಲಿದೆ. ಮತ್ತು ೯ ಇಂತಹ ಪ್ರದೇಶಗಳು ’ಸಾಲದ ಯಾತನೆ’ಯ ಹೆಚ್ಚಿನ ಅಪಾಯದಲ್ಲಿವೆ ಎಂದು ಪರಿಗಣಿಸಲಾಗಿದೆ. ಚೀನಾವು ಸಾಲವನ್ನು ಬಂದರುಗಳನ್ನು ವಶವಡಿಸಿಕೊಳ್ಳಲು ಮತ್ತು ಅಂಗೋಲಾ, ಕೀನ್ಯಾ ಮತ್ತು ಜಿಬೌಟಿಯಲ್ಲಿನ ತೈಲವನ್ನು ಪಡೆದುಕೊಳ್ಳಲು ಚೌಕಾಸಿ ಚಿಪ್ ರೀತಿ ಬಳಸಿಕೊಳ್ಳುತ್ತಿದೆ. ಹೆಚ್ಚುತ್ತಿರುವ ಪ್ರಭಾವಕ್ಕೆ ಪ್ರತಿಯಾಗಿ, ಚೀನಾ ಆಫ್ರಿಕಾ ದೇಶಗಳಿಗೆ ಲಾಭದಾಯಕ ಮೂಲಸೌಕರ್ಯ ಯೋಜನೆಗಳ ಆಹ್ವಾನವನ್ನು ನೀಡಿದೆ. ೧೯೮೩ರಿಂದ, ಅಂಗೋಲಾಕ್ಕೆ ೬೦ ಶತಕೋಟಿ ಯುಎಸ್ ಡಾಲರ್ ಮೌಲ್ಯದ ಸಾಲವನ್ನು ಚೀನಾ ನೀಡಿದೆ. ಹಣದ ರೂಪದಲ್ಲಿ ಹಿಂದಿರುಗಿಸುವ ಬದಲಾಗಿ ಅಂಗೋಲಾವು ಚೀನಾಕ್ಕೆ ತೈಲದ ರೂಪದಲ್ಲಿ ಸಾಲವನ್ನು ಹಿಂದಿರುಗಿಸುತ್ತಿದೆ; ತನ್ಮೂಲಕ ಸಾಲದ ಮರುಪಾವತಿ ಸಾಮರ್ಥ್ಯವು ತೈಲದ ಬೆಲೆಯ ಮೇಲೆ ಅವಲಂಬಿತವಾಗಿದೆ. ಅಂಗೋಲಾದಿಂದ ಚೀನಾ ಹೆಚ್ಚಿನ ಪ್ರಮಾಣದಲ್ಲಿ ತೈಲವನ್ನು ಖರೀದಿಸುತ್ತಿದ್ದು, ೧.೦೫ ಹತ್ತುಲಕ್ಷ ಬಿಪಿಡಿ ತೈಲವನ್ನು ೨೦೧೭ರ ಮೊದಲ ೮ ತಿಂಗಳಿನಲ್ಲೇ ಆಮದು ಮಾಡಿಕೊಂಡಿದೆ. ಒಟ್ಟಾರೆಯಾಗಿ, ಆಫ್ರಿಕಾದ ಶೇ. ೨೦ರಷ್ಟು ಕಚ್ಚಾ ತೈಲವನ್ನು ಚೀನಾ ಆಮದು ಮಾಡಿಕೊಂಡಿದೆ. ಗಮನಾರ್ಹವಾಗಿ, ಚೀನಾವು ಅಮೆರಿಕದಿಂದ ನೈಸರ್ಗಿಕ ಅನಿಲದ ಆಮದಿನಲ್ಲಿ ಇಳಿಕೆಯನ್ನು ಸರಿದೂಗಿಸಲು ಮತ್ತು ಅಮೆರಿಕವು ಇರಾನಿನ ಕಚ್ಚಾತೈಲದ ಅನುಮೋದನೆಗೆ ಬೆದರಿಕೆಯೂ ಹಾಕಿರುವುದರಿಂದ, ಅಂಗೋಲಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಜಿಬೌಟಿಯಲ್ಲಿ, ಚೀನಾ ತನ್ನ ಮೊದಲ ಸಾಗರೋತ್ತರ ನೆಲೆಯನ್ನು ನಿರ್ಮಿಸಿ. ಇದರೊಂದಿಗೆ ಜಿಬೌಟಿಯು ಚೀನಾದ ಮೇಲೆ ಅತಿಯಾಗಿ ಅವಲಂಬಿತವಾಗಿದೆ. ೨೦೧೬ರವರೆಗೆ, ಚೀನಾ ಜಿಬೌಟಿಯ ಶೇ. ೮೨ರಷ್ಟು ಪ್ರಮಾಣದ ವಿದೇಶೀ ಸಾಲವನ್ನು ಹೊಂದಿತ್ತು.
೨೦೦೭-೨೦೧೭ರ ಸಮಯದಲ್ಲಿ, ಚೀನಾ ೧೪೩ ಶತಕೋಟಿ ಯುಎಸ್ ಡಾಲರ್ ಸಾಲವನ್ನು ಆಫ್ರಿಕಾಕ್ಕೆ ನೀಡಿದೆ. ತೈಲ ನಿಕ್ಷೇಪವಿರುವ ಅಂಗೋಲಾವು ಚೀನಾದ ಸಾಲವನ್ನು ಪಡೆಯುತ್ತಿರುವ ದೇಶಗಳಲ್ಲಿ ಮೊದಲನೆಯ ಸ್ಥಾನದಲ್ಲಿದೆ. ಈ ೧೭ ವರ್ಷಗಳಲ್ಲಿ ಸಾಲದ ಮೌಲ್ಯ ೪೨.೮ ಶತಕೋಟಿ ಯುಎಸ್ ಡಾಲರ್ ಆಗಿದೆ.
ಏನಾಗಬಹುದು?
ಇತರೇ ದೇಶಗಳಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಾಲರೂಪವಾಗಿ ಹಣವನ್ನು ನೀಡುವ ಮೂಲಕ ಚೀನಾವು ಸಾಲ ನೀಡುವ ಅತ್ಯಂತ ಪ್ರಮುಖ ರಾಷ್ಟ್ರವಾಗಿ ಹೊರಹೊಮ್ಮಿದೆ. ರಸ್ತೆ ಸಂಪರ್ಕ ಉಪಕ್ರಮಗಳು ಚೀನಾಕ್ಕೆ ಆಫ್ರಿಕಾದ ಸಂಪರ್ಕವನ್ನು ಮತ್ತಷ್ಟು ವಿಸ್ತರಿಸಲಿದೆ. ಇನ್ನೊಂದೆಡೆ, ಅಮೆರಿಕಕ್ಕೆ ಹೋಲಿಸಿದರೆ ಚೀನಾದವರು ತಾವು ಸ್ವತಃ ನಂಬಲರ್ಹವಾದ ಮಿತ್ರರಾಷ್ಟ್ರ ಎಂದು ತಮ್ಮನ್ನು ತಾವೇ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಮೆರಿಕ-ಆಫ್ರಿಕಾ ವಾಣಿಜ್ಯ ಸಂಬಂಧಗಳು ಆಫ್ರಿಕಾದ ಬೆಳವಣಿಗೆ ಮತ್ತು ಅವಕಾಶ ಕಾಯ್ದೆಯನ್ನು ಆಧರಿಸಿದೆ. ೨೦೧೭ರಲ್ಲಿ, ಆಫ್ರಿಕಾ-ಅಮೆರಿಕ ವ್ಯಾಪಾರವು ೩೯ ಶತಕೋಟಿ ಯುಎಸ್ ಡಾಲರ್ ಆಗಿತ್ತು. ಇದು ಚೀನಾ-ಆಫ್ರಿಕಾ ವ್ಯಾಪಾರಕ್ಕಿಂತ ಗಣನೀಯವಾಗಿ ಕಡಿಮೆಯಾಗಿದೆ.
ಬೆಳೆಯುತ್ತಿರುವ ಆತಂಕಕಾರೀ ಮತ್ತು ನಿಧಾನಗತಿಯ ಆರ್ಥಿಕತೆಯ ಹೊರತಾಗಿಯೂ, ದೊಡ್ಡ ಪ್ರಮಾಣದಲ್ಲಿ ಎಫ್‌ಸಿಎಸಿ ಅಲ್ಲಿ ದೊಡ್ಡ ಪ್ರಮಾಣದ ಹಿಡಿತವನ್ನು ಇಟ್ಟುಕೊಳ್ಳುವ ಮೂಲಕ ತಾನು ತನ್ನ ಗುರಿಗೆ ಬದ್ಧವಾಗಿದ್ದೇನೆ ಎಂದು ಚೀನಾ ತೋರಿಸಿಕೊಳ್ಳಲು ಹವಣಿಸುತ್ತಿದೆ. ಚೀನಾ-ಅಮೆರಿಕ ವ್ಯಾಪಾರ ವಿವಾದದ ಅಪಾಯವನ್ನು ಕಡಿಮೆಗೊಳಿಸಲು, ಚೀನಾವು ಆಫ್ರಿಕಾದ ಜೊತೆ ತನ್ನ ವ್ಯಾಪಾರವನ್ನು ವಿಸ್ತರಿಸುತ್ತಿದೆ. ತನ್ನದೇ ಆದ ಆರ್ಥಿಕ ಪರಿಸ್ಥಿತಿಯಿಂದಾಗಿ, ಆಫ್ರಿಕಾ ದೇಶಗಳನ್ನು ಮತ್ತಷ್ಟು ಸಾಲದ ಮೂಲಕ ‘ಸಾಲದ ಬಲೆ’ಗೆ ತಳ್ಳದೆ ಚೀನಾ ವಾಸ್ತವವಾಗಿ ಭರವಸೆ ನೀಡಿರುವ ಅನುದಾನದ ಹಣವನ್ನು ತಲುಪಿಸಬಹುದೇ? ನೋಡಬೇಕಿದೆ!
ಮೂಲಲೇಖನ: ಡಾ. ತೇಶು ಸಿಂಗ್
‘ವಿಕ್ರಮ’ ವಾರಪತ್ರಿಕೆಯಲ್ಲಿ ಪ್ರಕಟಿತ ಬರಹ.
Facebook ಕಾಮೆಂಟ್ಸ್