X

ಜೂರಿಚ್‘ನಲ್ಲಿ ಎಲ್ಲಿ ಸಿಕ್ಕೀತು ಚಿತ್ರಾನ್ನ? ಬ್ರೆಡ್ಡು, ಚೀಸು, ಕಾಫಿಯೇ ಪರಮಾನ್ನ!

ಸ್ವಿಸ್ ಎಂದರೆ ಹಿಂಜಿ ಬಿಟ್ಟ ಹತ್ತಿಯಂತೆ. ಕಣ್ಣು ಕಾಣುವಷ್ಟು ದೂರಕ್ಕೂ ಹರಡಿರುವ ಹಿಮ ನಿಮ್ಮ ಮನಸ್ಸಿನಲ್ಲಿ ಮೂಡಿದರೆ ಅದು ಸಾಮಾನ್ಯ. ಜೊತೆಜೊತೆಗೆ ಸ್ವಿಸ್ ವಾಚುಗಳು, ಭಾರತೀಯರ ಹಣ ಸುರಕ್ಷಿತವಾಗಿ ಇಟ್ಟುಕೊಂಡು ಅವರ ಹೆಸರು ಹೇಳದೆ ಗೌಪ್ಯತೆ ಕಾಪಾಡುವ ಬ್ಯಾಂಕುಗಳು, ಬಾಲಿವುಡ್ ಶೂಟಿಂಗ್ .. ಮಸ್ತಕದಲ್ಲಿ ಹಾದು ಹೋಗುತ್ತದೆ ಅಲ್ಲವೇ? ನಿಜ, ಇವು ಸ್ವಿಟ್ಜರ್ಲ್ಯಾಂಡ್ ದೇಶಕ್ಕೆ ವಿಶ್ವಮಾನ್ಯತೆ ತಂದುಕೊಟ್ಟಿರುವ ಹೆಚ್ಚು ಪ್ರಸಿದ್ಧ ವಿಷಯಗಳು. ನನಗೂ ಸ್ವಿಸ್ಗೂ ಒಂಥರಾ  ಬೇಡವೆಂದರೂ ಬಿಡದ ಸಂಬಂಧ, ಕೆಲಸದ ಪ್ರಯುಕ್ತವಲ್ಲದೆ ಹತ್ತಾರು ಬಾರಿ ಇಲ್ಲಿಗೆ ಭೇಟಿ ಕೊಟ್ಟಿದ್ದೇನೆ. ಪ್ರತಿ ಬಾರಿ ಇಲ್ಲಿ ಹೊಸತು ಸಿಗುತ್ತಲೇ ಇದೆ. ಹೀಗಾಗಿ ಹೆಚ್ಚು ಸಾಮಾನ್ಯವಲ್ಲದ, ಪ್ರಸಿದ್ಧವಲ್ಲದ ಸ್ವಿಸ್ ಬಗ್ಗೆಯ ವಿಷಯಗಳ ನಿಮ್ಮ ಮುಂದಿಡುವುದು ನನ್ನ ಉದ್ದೇಶ .

ಸ್ವಿಟ್ಜರ್’ಲ್ಯಾಂಡ್’ನ ನ್ಯಾಷನಲ್ ಬ್ಯಾಂಕ್

ಪೋರ್ಚುಗಲ್ ಮತ್ತು ಸ್ಪೇನ್ ದೇಶಗಳು ಯೂರೋಪಿನಲ್ಲಿ ಕಡಿಮೆ ದುಬಾರಿ ದೇಶಗಳು. ಕೆಲವು ವಸ್ತುಗಳ ಬೆಲೆ ವಿಶ್ವದಾದ್ಯಂತ ಸೇಮ್ ಇರುತ್ತೆ. ಅಂತಹ ವಸ್ತುಗಳ ಬಿಟ್ಟರೆ ಪೋರ್ಚುಗಲ್ ಭಾರತಕ್ಕಿಂತ ಐದುಪಟ್ಟು ಹೆಚ್ಚು ದುಬಾರಿ. ಸ್ಪೇನ್ ಎಂಟು ಪಟ್ಟು. ಸ್ಪೇನ್‘ನಿಂದ ಸ್ವಿಸ್ಗೆ ಹೋದರೆ ಅಬ್ಬಾ ಇಷ್ಟು ದುಬಾರಿ ಎನಿಸದೆ ಇರದು; ಕಾರಣ ಸ್ಪೇನ್‘ನ ಜೀವನ ಶೈಲಿ ನಡೆಸಲು ಸ್ವಿಸ್ನಲ್ಲಿ  ಸ್ಪೇನ್‘ಗಿಂತ ಕನಿಷ್ಟ ಮೂರುಪಟ್ಟು ಹೆಚ್ಚು ಹಣತೆರಬೇಕು. ಅಂದರೆ ಭಾರತಕ್ಕೆ? ಸ್ವಿಸ್ ದುಬಾರಿ ದೇಶ. ಒಬ್ಬ ವ್ಯಕ್ತಿ ಬೆಂಗಳೂರಿನಿಂದ ಹೊರಟು ಒಂದು ವಾರ ಇದ್ದು ಮುಖ್ಯ ಪ್ರವಾಸಿ ತಾಣಗಳ ನೋಡಿ ಬರಲು ಎರಡೂವರೆ ಲಕ್ಷ ರೂಪಾಯಿ ಖಂಡಿತ ಬೇಕಾಗುತ್ತೆ. ಭಾರತೀಯರಿಗೆ ವೀಸಾ ಅವಶ್ಯ. ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ, ಉಳಿದಂತೆ ಇಲ್ಲಿ ಚಳಿ ಅತಿಹೆಚ್ಚು. ಇಲ್ಲಿ ಮೆಜಾರಿಟಿ ಕ್ರಿಶ್ಚಿಯನ್ ಪ್ರಾಟೊಸ್ಟಂಟ್ಗಳು;  ಯೂರೋಪಿನ ಉಳಿದ ದೇಶಗಳಿಗೆ ಹೋಲಿಸಿದರೆ ಚರ್ಚಿಗೆ ಹೋಗುವರ, ನಂಬಿಕೆ ಉಳ್ಳವರ ಸಂಖ್ಯೆ ಸ್ವಲ್ಪ ಹೆಚ್ಚು. ಜನ ಈಜಿ ಗೋಯಿಂಗ್, ಅತ್ಯಂತ ಸಭ್ಯ, ಸಂಭಾವಿತ ಜನ. ನಮ್ಮ ದೇಶಕ್ಕೆ ಬಂದವರು ನಮ್ಮ ಅತಿಥಿಗಳು ಅವರಿಗೆ ದೇಶದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಬಾರದು ಎನ್ನುವಂತೆ ವರ್ತಿಸುತ್ತಾರೆ. ಇಲ್ಲಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅತ್ಯಂತ ನಿಖರವಾಗಿದೆ. ನಾನು ನೋಡಿದ ಅರ್ಧಶತಕಕ್ಕೂ ಹೆಚ್ಚು ದೇಶಗಳಲ್ಲಿ ಇಂತ ಸಮಯಪಾಲನೆ ಎಲ್ಲಿಯೂ ನನಗೆ ಕಾಣಸಿಗಲಿಲ್ಲ. ಇದರ ಬಗ್ಗೆ ಅವರಲ್ಲಿ ಹೆಮ್ಮೆಯಿದೆ. ಮಾತಿಗೆ ಸಿಕ್ಕ ಹಲವು ಸ್ವಿಸ್ ಪ್ರಜೆಗಳಲ್ಲಿ ಗುರುತಿಸಿದ ಸಾಮಾನ್ಯ ಅಂಶ- ತಮ್ಮ ದೇಶದ ಬಗ್ಗೆ ಅವರಿಗೆ ಇರುವ ಹೆಮ್ಮೆ.

ಚಾಕೋಲೇಟಿಯರ್ಸ್
ಸ್ವಿಸ್ ಎಂದರೆ ಇನ್ನೊಂದು ಮುಖ್ಯ ವಿಷಯ  ನಮಗೆ ನೆನಪಿಗೆ ಬರುವುದು ಚಾಕೋಲೇಟ್! ಹೌದು, ಸ್ವಿಸ್ ಜಗತ್ತಿನ ಚಾಕೋಲೇಟ್ ರಾಜಧಾನಿ. ವಿಶ್ವ ಪ್ರಸಿದ್ಧ ನೆಸ್ಲೆ, ಲಿಂಡ್  ಮಾತ್ರವಲ್ಲದೆ ಇನ್ನು ಹಂದಿನೆಂಟು ಪ್ರಸಿದ್ಧ ಚಾಕೋಲೇಟ್ ಕಂಪನಿಗಳ ನೆಲೆಬೀಡು ಸ್ವಿಸ್. ಇಲ್ಲಿ ಈ ಮಟ್ಟದ ಚಾಕೋಲೇಟ್ ಕಂಪನಿಗಳು ಇರುವುದು, ಚಾಕೋಲೇಟ್ ಉತ್ಪಾದನೆ ಆಗುತ್ತದೆ, ಎಂದ ಮೇಲೆ ಇಲ್ಲಿನ ಜನ ಚಾಕೋಲೇಟ್ ಕೂಡ ಹೆಚ್ಚು ಸೇವಿಸುತ್ತಿರಬೇಕು ಎಂದು ಊಹಿಸಿಕೊಂಡರೆ ನಿಮ್ಮ ಊಹೆ ಸರಿಯಾಗಿದೆ. ಪ್ರತಿ ಸ್ವಿಸ್ ಪ್ರಜೆ  ವರ್ಷದಲ್ಲಿ ಸರಾಸರಿ ಹನ್ನೊಂದು ಕೆಜಿ ಚಾಕೋಲೇಟ್ ಸೇವಿಸುತ್ತಾನೆ ಎನ್ನುತ್ತದೆ ರಾಷ್ಟ್ರೀಯ ಅಂಕಿಅಂಶ ಕಾಪಿಡುವ ಸಂಸ್ಥೆ. ಚಾಕೋಲೇಟ್ ತಯಾರಿಕೆಯಲ್ಲಿ ಇವರದು ಎತ್ತಿದ ಕೈ, ಈ ಉದ್ದಿಮೆಯಲ್ಲಿ ಇರುವವರನ್ನು ಇಲ್ಲಿ ‘ಚಾಕೋಲೇಟಿಯರ್ಸ್’ ಎನ್ನುವ ಹೆಸರಿನೊಂದಿಗೆ ಕರೆಯಲಾಗುತ್ತದೆ.

ಅಸಾಮಾನ್ಯ ಮನೆಗಳು
ಇಲ್ಲಿನ ಮನೆಗಳು ಸಾಮಾನ್ಯ ಮನೆಗಳಲ್ಲ! ನೋಡಲು ಎಲ್ಲಾ ದೇಶಗಳಲ್ಲಿ ಇರುವಂತೆ ಕಾಣುತ್ತಿದೆಯಲ್ಲ? ಎನ್ನುವ ಪ್ರಶ್ನೆ ಬರುವುದು ಸಹಜ.  ಅಕಸ್ಮಾತ್ ಅಣುಸಮರವೇನಾದರೂ ಆದರೆ ಸ್ವಿಸ್ ದೇಶ ಅದಕ್ಕೆ ರೆಡಿ ಆಗಿದೆ. ಸರಕಾರ ತನ್ನ ದೇಶದ ಪ್ರತಿ ಪ್ರಜೆಯನ್ನೂ ನ್ಯೂಕ್ಲಿಯರ್ ವಾರ್ ಆದರೂ ಅದರ ಪ್ರತಿಕೂಲ ಪರಿಣಾಮದಿಂದ ಪಾರುಮಾಡಲು ಪಣತೊಟ್ಟಿದೆ. ಪ್ರತಿ ಮನೆಯೂ ಒಂದು ಕೆಳಮನೆ (ಅಂಡರ್ ಗ್ರೌಂಡ್) ಹೊಂದಿರುವುದು ಕಡ್ಡಾಯ.  ಅಂತಹ ನೆಲಮಾಳಿಗೆಯನ್ನ ಅಣುವಿಕಿರಣಗಳು ಅಲ್ಲಿಗೆ ಸೋರಿಕೆ ಆಗದಂತೆ ನಿರ್ಮಿಸಲಾಗುತ್ತದೆ. ಅಣುದಾಳಿ ಆದ ಸಂದರ್ಭದಲ್ಲಿ ಉಪಯೋಗಿಸಲು ಇವನ್ನ ಕಟ್ಟಲಾಗುತ್ತದೆ. ಇಂತಹ ಒಂದು ಕೊಠಡಿ ಕಟ್ಟಲು ಹೆಚ್ಚು ಹಣ ಖರ್ಚಾಗುತ್ತದೆ. ಸಹಜವಾಗೇ ಸ್ವಿಸ್‘ನಲ್ಲಿ ಇತರ ಯೂರೋಪಿಯನ್ ದೇಶಗಳಿಗಿಂತ ಮನೆಯ ಬೆಲೆ ಹೆಚ್ಚು . ಇಷ್ಟೇ ಅಲ್ಲದೆ ತನ್ನ ಹಲವು ಟನಲ್ ಗಳ ಅಡಿಯಲ್ಲಿ ಕೂಡ ಒಂದು ಸಣ್ಣ ನಗರಗಳನ್ನ ನಿರ್ಮಾಣ ಮಾಡಿದೆ. ಸಾಮಾನ್ಯ ದಿನದಲ್ಲಿ ಬಸ್ಸು ಕಾರುಗಳು ಸಂಚರಿಸುವ ಟನಲ್‘ನ ಕೆಳಭಾಗದಲ್ಲಿ ಇಂತಹ ಒಂದು ವ್ಯವಸ್ಥೆ ಇದೆ ಎನ್ನುವ ಅರಿವು ಕೂಡ ಆಗದು. ಹಠಾತ್ ಅಣು ದಾಳಿಯಾದರೆ? ಎನ್ನುವ ಮುಂಜಾಗ್ರತೆ ಇಂತಹ ಒಂದು ವ್ಯವಸ್ಥೆಯನ್ನು ಸೃಷ್ಟಿಸಿದೆ.

ಜಗತ್ತು ಅಣುಸ್ಥಾವರಗಳು ಬೇಕೇ ಬೇಡವೇ ಎನ್ನುವ ಗುದ್ದಾಟದಲ್ಲಿ ಕಾಲ ನೂಕುತ್ತಿದ್ದರೆ ಸ್ವಿಸ್ ಮಾತ್ರ ತನ್ನ ಬಳಕೆಯ ಅರ್ಧಕ್ಕೂ ಹೆಚ್ಚು ವಿದ್ಯುತ್ತನ್ನು ಅಣು (ನ್ಯೂಕ್ಲಿಯರ್) ಮೂಲಕ ಪಡೆಯುತ್ತದೆ. ಇವರು ತೆಗೆದುಕೊಳ್ಳುವ ಮುಂಜಾಗ್ರತೆಯ ಕ್ರಮಗಳಿಂದ ಅಣು ಸೋರಿಕೆ ಆಗದಂತೆ ನೋಡಿಕೊಳ್ಳುತ್ತಾರೆ.

ರಾತ್ರಿಯಲ್ಲಿ ಝೂರಿಚ್ ನಗರದ ನೋಟ

ಪೌರಪ್ರಜ್ಞೆ
ಹಂದಿನೆಂಟು ವರ್ಷ ಮೇಲ್ಪಟ್ಟ ಪ್ರತಿ ಸ್ವಿಸ್ ಪುರುಷ  ಸೇನೆಯಲ್ಲಿ ಸೇವೆ ಸಲ್ಲಿಸುವುದು ಇಂದಿಗೂ ಕಡ್ಡಾಯ. ಹೆಣ್ಣುಮಕ್ಕಳಿಗೆ ಇದು ಐಚ್ಛಿಕ. ಸೇನೆ ಸೇರಲು ಬಯಸುವ ಹೆಣ್ಣುಮಕ್ಕಳು ಸೇರಬಹುದು ಕಡ್ಡಾಯವಿಲ್ಲ.  ಅಕಸ್ಮಾತ್ ಯುದ್ಧವೇನಾದರೂ ಆದರೆ ಸ್ವಿಸ್’ನ ಪ್ರತಿ ಪುರುಷ ಪ್ರಜೆಯೂ ಸೈನಿಕನಂತೆ ಕಾರ್ಯನಿರ್ವಹಿಸುವ ಕೌಶಲ್ಯ ಹೊಂದಿರುತ್ತಾನೆ. ಸೇನೆ ನೀಡಿರುವ ಸೆಮಿ ಆಟೋಮ್ಯಾಟಿಕ್ ಗನ್’ಗಳನ್ನು ಪ್ರಜೆಗಳು ತಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದು ಇಲ್ಲಿ ಸಾಮಾನ್ಯ ಮತ್ತು ಲೀಗಲ್. ಯುದ್ಧದ ಸಂದರ್ಭ ಬಂದರೆ ಆಯುಧಕ್ಕಾಗಿ ಅವರು ಕಾಯುವುದು ಬೇಡ ಎನ್ನುವ ಸರಕಾರದ ಆಲೋಚನೆಯು ಪ್ರತಿ ಪ್ರಜೆಯೂ ಮನೆಯಲ್ಲಿ ಸಾಕಷ್ಟು ಮದ್ದು ಗುಂಡು ಹೊಂದಲು ಅವಕಾಶ ನೀಡಿದೆ. ಇಲ್ಲಿ ಎಲ್ಲಕ್ಕೂ ಹೆಚ್ಚು ಆಶ್ಚರ್ಯ ಹುಟ್ಟಿಸುವ ವಿಷಯ ಸರಕಾರಕ್ಕೆ ತನ್ನ ಪ್ರತಿ ಪ್ರಜೆಯ ಮೇಲಿರುವ ನಂಬಿಕೆ! ಹಾಗೂ ತನ್ನ ಸರಕಾರ ತನ್ನ ಮೇಲಿಟ್ಟಿರುವ ನಂಬಿಕೆಯ ಹುಸಿಗೊಳಿಸದೆ ಪೌರಪ್ರಜ್ಞೆ ಮೆರೆಯುವ ಇಲ್ಲಿನ ನಾಗರಿಕರು.  ನೆನಪಿರಲಿ ಸ್ವಿಸ್ ಜಗತ್ತಿನಲ್ಲೇ ಅತ್ಯಂತ ಕಡಿಮೆ ಕ್ರೈಂ ರೇಟ್ ಇರುವ ದೇಶಗಳ ಪಟ್ಟಿಯ ಮುಂಚೂಣಿಯಲ್ಲಿದೆ .

ಅಣು ದಾಳಿಯಂತಹ ಭೀಕರ ಪರಿಸ್ಥಿತಿಗೆ ತಯಾರಾಗಿರುವ ಇವರು ಉಳಿದ ಸಣ್ಣ ಪುಟ್ಟ ದಾಳಿಗೆ ಹೇಗೆ ತಯಾರಾಗಿದ್ದಾರೆ ಎನ್ನುವದು ಕೂಡ ಕುತೂಹಲ ಹುಟ್ಟಿಸುತ್ತದೆ .ಜಗತ್ತಿನ ಹಾಗು ಹೋಗುಗಳ ಪಟ್ಟಿ ತಯಾರಿಸಿ ಆಕಸ್ಮಾತ್ ಹೀಗಾದರೆ ಏನು ಮಾಡಬೇಕು? ಏನು ಮಾಡಬಾರದು ಎನ್ನುವುದಕ್ಕೆ ತಯಾರಿ ತರಬೇತಿ ಎಲ್ಲವೂ ಇಲ್ಲಿ ತನ್ನ ನಾಗರಿಕರಿಗೆ ನೀಡಲಾಗುತ್ತದೆ. ಅಣು ದಾಳಿಯಲ್ಲದೆ ಪಕ್ಕದ ಜರ್ಮನಿಯೋ ಇನ್ನ್ಯಾರೋ ನೆಲದ ಮೂಲಕ ದಾಳಿ ಮಾಡಿದರೆ? ಎನ್ನುವ ಪ್ರಶ್ನೆ ಹಾಕಿಕೊಂಡು ಅದಕ್ಕೂ ತಯಾರಾಗಿದ್ದಾರೆ. ತನ್ನ ಮೂರುಸಾವಿರಕ್ಕೂ ಹೆಚ್ಚು ಬ್ರಿಡ್ಜ್ ಮತ್ತು ಹೈ-ವೇಗಳನ್ನು ಸ್ವತಃ ತಾನೇ ಉಡಾಯಿಸಿಬಿಡುವುದು! ಆ ಮೂಲಕ ಶತ್ರುಗಳು ತನ್ನ ದೇಶಕ್ಕೆ ನುಗ್ಗಲು ಇರುವ ದಾರಿಯನ್ನ ಮುಚ್ಚುವುದು ಇವರ ರಣತಂತ್ರ.
ಹೀಗೆ ಒಂದಲ್ಲ ಹತ್ತು ವಿಭಿನ್ನ ಸನ್ನಿವೇಶಗಳಿಗೆ ಇಲ್ಲಿನ ಸೇನೆ, ನಾಗರಿಕರು ಸಿದ್ಧ. ದೇಶಕ್ಕಾಗಿ ಪ್ರಜೆಗಳ – ಪ್ರಜೆಗಳಿಗಾಗಿ ದೇಶದ ಬದ್ಧತೆ ಜಗತ್ತಿನ ಇತರ ಯಾವುದೇ ದೇಶದಲ್ಲಿ ಈ ಮಟ್ಟಿಗೆ ಕಾಣಸಿಗುವುದಿಲ್ಲ.  ಅಣುಯುದ್ಧವಾದರೆ ನನ್ನ ಪ್ರತಿ ಪ್ರಜೆಯನ್ನೂ ರಕ್ಷಿಸಿಕೊಳ್ಳುತ್ತೇನೆ ಎನ್ನುವ ಸರಕಾರದ ಬದ್ಧತೆ ಎಷ್ಟಿರಬಹುದು? ಈ ವಿಷಯದಲ್ಲಿ ಇವರಿಗೆ ಇವರೇ ಸಾಟಿ .

ತನ್ನ ಪ್ರಜೆಗಳಿಗೆ ಎಂತಹ ಮನ್ನಣೆ ನೀಡುತ್ತದೆ ಎಂದು ಹೇಳಲು ಇನ್ನೊಂದು ಉದಾಹರಣೆ ಇದೆ. ಈ ದೇಶದ ಯಾವುದೇ ಕಾನೂನು ಇಷ್ಟವಾಗದೆ ಇದ್ದರೆ ಅದನ್ನ ಆತ ಪ್ರಶ್ನಿಸಿ ಕೋರ್ಟಿಗೆ ಹೋಗಬಹುದು. ಕೋರ್ಟು  ಕಾನೂನು ಪ್ರಶ್ನಿಸಿ ಅರ್ಜಿ ಹಾಕಿದ ಪ್ರಜೆಗೆ ನೂರು ದಿನದ ಕಾಲಾವಕಾಶ ನೀಡುತ್ತದೆ ಅಷ್ಟರಲ್ಲಿ ಆತ ಐವತ್ತು ಸಾವಿರ ಜನರ ಸಹಿ ಸಂಗ್ರಹ ಮಾಡಿದರೆ, ಪ್ರಶ್ನೆಗೆ ಒಳಪಟ್ಟ ಕಾನೂನನ್ನ ಒಪ್ಪುವುದು ಅಥವಾ ರಿಜೆಕ್ಟ್ ಮಾಡುವ ಅವಕಾಶವಿದೆ. ಹೀಗೆ ಸರಕಾರವನ್ನು ಪ್ರಶ್ನಿಸುವ ಅಧಿಕಾರ ಹೊಂದಿರುವ ಪುರುಷ ಪ್ರಜೆಗಳು ಸರಾಸರಿ ೮೧ ವರ್ಷ ಬದುಕಿದರೆ, ಮಹಿಳೆಯರು ೮೫ ವರ್ಷ ಬದುಕುತ್ತಾರೆ .
ಹೈಡಿ ಲ್ಯಾಂಡ್ , ಮೌಂಟ್ ತಿತ್ಲಿಸ್, ಝುರಿಚ್ ನಗರ ವಿಶ್ವ ಪ್ರಸಿದ್ಧ ಬಹನಾಸ್ಸ್ಟ್ರಾಸ್  ರಸ್ತೆ ,ಚಾಪ್ಪೆಲ್ ಬ್ರಿಡ್ಜ್ , ಸ್ವಿಸ್ ಸೈನಿಕರ ಸ್ವಾಮಿ ನಿಷ್ಟೆಯ ಕತೆ ಹೇಳುವ ಲಯನ್ ಮಾನ್ಯೂಮೆಂಟ್ ಹೀಗೆ ನೋಡಲು ಸಾಕಷ್ಟು ಜಾಗಗಳಿವೆ. ಇಡೀ ದೇಶವೇ ಗಾಲ್ಫ್ ಪ್ರದೇಶವೇನೂ ಎನ್ನುವ ಭ್ರಮೆ ಹುಟ್ಟಿಸುವಂತೆ  ಹಸಿರು ಹುಲ್ಲು ಕಣ್ಣಿಗೆ ಮುದ ನೀಡುತ್ತದೆ . ಇಲ್ಲಿನ ಅಧ್ಯಾಪಕರಿಗೆ ಹೆಚ್ಚು ಮನ್ನಣೆ , ಸಂಬಳ ಉಂಟು . ಇತರ ವೃತ್ತಿಗಿಂತ ಗುರು ವೃತ್ತಿಗೆ ಹೆಚ್ಚು ಗೌರವ ನೀಡಲಾಗುತ್ತದೆ .
ಇತ್ತೀಚೆಗೆ ತನ್ನ ಎಲ್ಲಾ ಪ್ರಜೆಗಳಿಗೆ ಕೆಲಸವಿರಲಿ ಬಿಡಲಿ ಸಂಬಳ ಕೊಡುವ ಮಾತು ಇಲ್ಲಿನ ಸರಕಾರ ಎತ್ತಿತು . ಇಲ್ಲಿನ ಪ್ರಜೆಗಳ ನೈತಿಕತೆ, ಆತ್ಮಬಲ ನೋಡಿ.. ನಮಗೆ ಪುಕ್ಕಟೆ ಸಂಬಳ ಬೇಡ  ಎಂದು ಸರಕಾರದ ನಿಲುವಿನ ವಿರುದ್ಧ ಮತ ಚಲಾಯಿಸಿ ಜಗತ್ತು ನಿಬ್ಬೆರಗಾಗಿ ನೋಡುವಂತೆ ಮಾಡಿದೆ .

ಹಾಗಾದರೆ ಇಲ್ಲಿ ನೆಗೆಟಿವ್ ಇಲ್ಲವೇ ?  
ಹಾಗೇನಿಲ್ಲ, ಮನುಷ್ಯ ಸಹಜವಾಗಿ ಇಲ್ಲಿಯೂ ಆನೇಕ ನೂನ್ಯತೆಗಳಿವೆ. ಎಲ್ಲಕ್ಕೂ ಮುಖ್ಯವಾಗಿ ಸಸ್ಯಾಹಾರಿಗಳಿಗೆ ಇಲ್ಲಿ ಪರದಾಟ ತಪ್ಪಿದ್ದಲ್ಲ. ಹಾಲು-ಮೊಸರು, ಚೀಸ್ ಹೇರಳವಾಗಿ ಸಿಗುತ್ತದೆ. ಹಣ್ಣುಗಳ ವೈವಿಧ್ಯತೆ ಗುಣಮಟ್ಟ ಕೂಡ ತುಂಬಾ ಚೆನ್ನಾಗಿದೆ. ಹಾಲು-ಹಣ್ಣ ಬೇಡ. ನಿತ್ಯವೂ ನಮಗೆ ಉಪ್ಪಿಟ್ಟು , ಚಿತ್ರಾನ್ನ , ಪುಳಿಯೋಗರೆ , ದೋಸೆ ಬೇಕೆನ್ನುವರಿಗೆ ಕಷ್ಟ. ಇಲ್ಲಿ ಶ್ರೀಲಂಕಾದಿಂದ ವಲಸೆ ಬಂದ ತಮಿಳರ ಸಂಖ್ಯೆ ಕಣ್ಣಿಗೆ ಕಾಣಿಸುವಷ್ಟಿದೆ; ಮಲಯಾಳಿಗಳ ಸಂಖ್ಯೆಯೂ ಸಾಕಷ್ಟಿದೆ. ಭಾರತೀಯ ಹೋಟೆಲ್ಗಳು ಕೂಡ ಸಾಕಷ್ಟಿವೆ  ಅಲ್ಲಿ ಉಪ್ಪಿಟ್ಟು , ಪುಳಿಯೋಗರೆ ಸಿಗದಿದ್ದರೂ , ಕಲ್ಲನ್ನ ನಾಚಿಸುವ ಇಡ್ಲಿ , ರಬ್ಬರ್ ನೆನಪಿಸುವ ದೋಸೆ ಸಿಗುತ್ತದೆ . ಅಂತಹ ಗುಣಮಟ್ಟದ ತಿನಿಸುಗಳಿಗೆ ಅವರು ಜಡಿಯುವ ದರವಿದೆಯಲ್ಲ ಅದು ಆ ಪದಾರ್ಥಗಳನ್ನ ನುಂಗುವಾಗ ಇನ್ನಷ್ಟು ನೋವು ಕೊಡುತ್ತದೆ . ಉಳಿದಂತೆ ದೇಶದ ತುಂಬೆಲ್ಲಾ ಸ್ಟಾರ್ ಬಕ್ಸ್ ಕಾಫಿ ಹೌಸ್ ಇದೆ. ನೊರೆಭರಿತ ಅರ್ಧ ಲೀಟರ್ ಕಾಫಿ ಆ ಚಳಿಯಲ್ಲಿ ಕುಡಿಯುವುದು ಸ್ವರ್ಗ ಇನ್ನೇನು ಕೈಗೆಟುಕಿತು ಎನ್ನುವ ಅನುಭವ ನೀಡುತ್ತದೆ. ಕಂಡಕ್ಟೆಡ್ ಟೂರ್ ನಲ್ಲಿ ಬಂದವರಿಗೆ ಆಹಾರದ ಪರದಾಟ ಹೆಚ್ಚು ಆಗುವುದಿಲ್ಲ. ದೇಶವನ್ನ ನನ್ನದೇ ಆದ ರೀತಿಯಲ್ಲಿ ಸುತ್ತಲು ಬಯಸುವ ಜನರಿಗೆ ಒಂದು ಸಣ್ಣ ಸಲಹೆ. ಒಂದು ವಾರದ ಮೇಲೆ ಇರಲು ಬಯಸುವರು ಇಲ್ಲಿ ಶಾರ್ಟ್ ರೆಂಟಲ್ ಹೆಸರಲ್ಲಿ ಅಪಾರ್ಟ್ಮೆಂಟ್ ಅದೂ ಸುಸಜ್ಜಿತ ಅಪಾರ್ಟ್ಮೆಂಟ್ ಬಾಡಿಗೆಗೆ ಸಿಗುತ್ತದೆ. ಅದನ್ನ ಪಡೆದು, ಸೂಪರ್ ಮಾರ್ಕೆಟ್ ನಲ್ಲಿ ಅಕ್ಕಿ, ಬೇಳೆ, ತರಕಾರಿ, ಹಾಲು ಹಣ್ಣು ಖರೀದಿಸಿ ಮನೆಯಲ್ಲಿ ಬೇಕಾದಂತೆ ಅಡುಗೆ ಮಾಡಿ ತಿನ್ನಬಹುದು. ಆದರೆ ನೀವು ಬಂದಿರುವುದು ತಿನ್ನುವುದಕ್ಕೋ ಅಥವಾ ನೋಡುವುದಕ್ಕೋ, ಎನ್ನುವುದ ನೆನಪಿಸಿಕೊಳ್ಳಿ. ಸಸ್ಯಾಹಾರಿಯಾದವರು  ಪ್ರವಾಸಿ ವೇಳೆಯಲ್ಲಿ ಊಟದ ಚಿಂತೆ, ಆಸೆ ಒಂದಷ್ಟು ಬಿಡುವುದು ಉತ್ತಮ ಎಂದೇ ನನ್ನ ಅನಿಸಿಕೆ.

ಇರಲಿ ನಿಜವಾದ ನೂನ್ಯತೆಗಳ ಪಟ್ಟಿ ಹೀಗಿದೆ:
ಮದುವೆಯಾದ ಅರ್ಧಕ್ಕೂ ಹೆಚ್ಚು ಮಂದಿ ಡೈವೋರ್ಸ್ ಆಗುತ್ತಾರೆ. ಯೂರೋಪಿನ ಇತರ ದೇಶಗಳಿಗಿಂತ ಇಲ್ಲಿ ಡೈವೋರ್ಸ್ ರೇಟ್ ಹೆಚ್ಚು. ಯುವಜನತೆಯಲ್ಲಿ ಹೆಚ್ಚಾಗಿರುವ ಮಾದಕ ದ್ರವ್ಯಗಳ ಸೇವನೆ, ಹೆಚ್ಚಿದ ತಂಬಾಕು, ಆಲ್ಕೋಹಾಲ್ ಸೇವನೆ  ನೂನ್ಯತೆಗಳ ಪಟ್ಟಿಯ ಅಗ್ರಸ್ಥಾನದಲ್ಲಿ ನಿಲ್ಲುತ್ತವೆ. ಮಹಿಳಾ ಸಮಾನತೆ ಇನ್ನೊಂದು ಅತ್ಯಂತ ದೊಡ್ಡ ನೂನ್ಯತೆ. ಇಷ್ಟೆಲ್ಲಾ ಮುಂದುವರಿದ ಸ್ವಿಸ್ ದೇಶದಲ್ಲಿ ರಾಜಕೀಯದಿಂದ ಒಳಗೊಂಡು ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಗೆ ಸಿಗಬೇಕಾದ ಸ್ಥಾನಮಾನ ಸಿಕ್ಕಿಲ್ಲ. ಸಂಬಳದ ವಿಷಯದಲ್ಲೂ ಲಿಂಗ ತಾರತಮ್ಯ, ಯೂರೋಪಿಯನ್ ದೇಶಗಳಿಗಿಂತ ಹೆಚ್ಚಾಗಿದೆ. ೧೯೭೧ ರವರೆಗೆ ಫೆಡರಲ್ ಹಂತದಲ್ಲಿ ಮಹಿಳೆಗೆ ವೋಟಿಂಗ್ ರೈಟ್ ಇರಲಿಲ್ಲ ಎನ್ನುವುದು ಆಶ್ಚರ್ಯ ತರಿಸುವ ಸಂಗತಿಯಾದರೂ ಸತ್ಯ .
ಒಂದು ದೇಶ, ಭಾಷೆಯನ್ನು ಇನ್ನೊಂದು ದೇಶ ಭಾಷೆಯ ಜೊತೆ ತುಲನೆ ಮಾಡುವುದು ಮೂರ್ಖತನವಾದೀತು. ಆದರೂ ನಮ್ಮಲ್ಲಿನ ಅನೇಕ ನೂನ್ಯತೆಗಳ ಮೆಟ್ಟಿ ನಿಲ್ಲಲು ಸ್ವಿಸ್’ನತ್ತ ನೋಡುವುದು ಮತ್ತು ಕಲಿಯುವುದರಲ್ಲಿ ತಪ್ಪಿಲ್ಲ. ಸ್ವಿಸ್ ಪೂರ್ಣಪ್ರಮಾಣದ ಅತ್ಯಂತ ಸನಿಹದಲ್ಲಿ ಇರುವ ಒಂದು ನಾಗರಿಕ ದೇಶ ಎನ್ನಲು ಅಡ್ಡಿ ಇಲ್ಲ.

Facebook ಕಾಮೆಂಟ್ಸ್

Rangaswamy mookanahalli: ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .
Related Post