ಸ್ಕೇಲಿಂಗ್ ಎಂದರೇನು? ಮಾಡಿಸಲೇಬೇಕೇ? ದಂತವೈದ್ಯರು ಸ್ಕೇಲಿಂಗ್ ಮಾಡಿಸಬೇಕು ಎಂದಾಗ ಮೂಡುವ ಸಹಜ ಪ್ರಶ್ನೆಗಳು ಇವು. ಹಲ್ಲು, ಬಾಯಿಯ ವಾತಾವರಣದಲ್ಲಿ ಇರುವುದಕ್ಕೆ ಕಾರಣ ಅದರ ಅಡಿಪಾಯವಾದ ವಸಡುಗಳು. ಗಮ್ ಅಥವಾ ಜಿಂಜೈವ ಎಂದು ಅದನ್ನು ಕರೆಯಲಾಗುತ್ತದೆ. ಇದು ಹಲ್ಲಿನ ಸುತ್ತ ಮುತ್ತಿಕೊಂಡು ಹಲ್ಲಿನ ಬೇರುಗಳನ್ನು ರಕ್ಷಣೆ ಮಾತ್ರವಲ್ಲದೆ ದವಡೆಗಳ ಹೊದಿಕೆಯಂತೆ ಇರುತ್ತದೆ. ಹಲ್ಲನ್ನು ದವಡೆಗೆ ಜೋಡಿಸುವಲ್ಲಿ ಮತ್ತೊಂದು ಅಂಗ ಪ್ರಮುಖ ಪಾತ್ರ ವಹಿಸುತ್ತದೆ. ಅದನ್ನು ಪೆರಿಯೋಡೋಂಟಲ್ ಲಿಗಾಮೆಂಟ್ ಎಂದು ಕರೆಯಲಾಗುತ್ತದೆ. ವಸಡಿನ ತೊಂದರೆಗಳಲ್ಲಿ ಅದರ ಒಳ ಪದರಗಳು ರೋಗಕ್ಕೆ ತುತ್ತಾಗಿರುತ್ತದೆ. ಇದನ್ನು ತಡೆಯಲು ಅಥವಾ ಸರಿಪಡಿಸಲು ಸ್ಕೇಲಿಂಗ್ ಮಾಡಲಾಗುತ್ತದೆ. ಸಾಮಾನ್ಯ ಭಾಷೆಯಲ್ಲಾದರೆ ಹಲ್ಲಿನ ಕ್ಲೀನಿಂಗ್ ಚಿಕಿತ್ಸೆ ಎನ್ನುತ್ತಾರೆ.
ಆ ದಿನ ಒಬ್ಬ ವ್ಯಕ್ತಿ ಬಂದು, ಸರ್ ಎರಡು ದಿನದಲ್ಲಿ ಹುಡುಗಿ ನೋಡಲು ಹೋಗ್ತಾ ಇದ್ದೇನೆ, ಹಲ್ಲೆಲ್ಲ ಕಂದು ಬಣ್ಣವಾಗಿದೆ, ಏನಾದ್ರು ಮಾಡಿ ಬಿಳಿ ಮಾಡಿ ಸರ್, ಸಾಧಾರಣ ಎಲ್ಲಾ ಟೂತ್‍ಪೇಸ್ಟ್ ಬಳಸಿದೆ ಆದ್ರೂ ಬಣ್ಣ ಹಾಗೆ ಇದೆ ಎಂದು ಅಳಲು ತೋಡಿಕೊಂಡ. ಬಾಯಿಯನ್ನು ಪರೀಕ್ಷಿಸಿದೆ. ಪಾನ್, ಗುಟ್ಕಾಜಗಿದು ಹಲ್ಲುಗಳ ಬಣ್ಣವೆ ಬದಲಾಗಿತ್ತು. ಅವುಗಳು ಹಾನಿಕಾರಕ ಎಂದು ಬುದ್ಧಿ ಮಾತಗಳನ್ನಾಡಿ, ಹಲ್ಲನು ಕ್ಲೀನ್ ಮಾಡಿದಾಗ ಅವನ ಖುಷಿಗೆ ಪಾರವೇ ಇಲ್ಲ. ಹೌದು, ಹಲ್ಲಿನ ಮೇಲೆ ನಾವು ತಿನ್ನುವ ಅಥವಾ ಕುಡಿಯುವ ಪದಾರ್ಥಗಳ ಪ್ರಭಾವದಿಂದ ಕಲೆಗಳು ಉಂಟಾಗುತ್ತದೆ. ಪಾನ್, ಗುಟ್ಕಾ, ಎಲೆ ಅಡಿಕೆ ಮುಂತಾದವುಗಳಿಂದ ಆದ ಕಲೆಗಳನ್ನು ಸ್ಕೇಲಿಂಗ್‍ನಿಂದ ಸರಿ ಮಾಡಬಹುದು. ಹಾಗೆಂದು ಅದರ ಬಳಕೆ ಮಾಡದಿರಿ! ಅವುಗಳು ಪ್ರಾಣ ಕಂಟಕ ವಸ್ತುಗಳು ಎಂದು ಮರೆಯದಿರಿ.
ನಾವು ತಿನ್ನುವ ವಸ್ತುಗಳ ಕೆಲವು ಅಂಶಗಳು ಹಲ್ಲಿನ ಮೇಲೆ ಅಥವಾ ಎಡೆಗಳಲ್ಲಿ ಬಾಕಿಯಾಗಬಹುದು. ಇದರಿಂದ ಪ್ಲಾಕ್ ಅಥವಾ ದಂತ ಪಾಚಿ ಎಂಬ ಕೊಳಕು ಹಲ್ಲಿನ ಮೆಲೆ ಅಂಟಿಕೊಳ್ಳುತ್ತದೆ. ಬ್ರಶ್‍ನಿಂದ ಇವು ಸರಿಯಾಗಿ ಹೋಗಲಾರವು. ಕ್ರಮೇಣ ಇವುಗಳು ಕ್ಯಾಲ್‍ಕುಲಸ್ ಆಗಿ ಮಾರ್ಪಡುತ್ತವೆ. ಖನಿಜಾಂಶಗಳು ಸೇರಿದಂತ ಪಾಚಿ ಅಥವಾ ಪ್ಲಾಕ್ ಕ್ಯಾಲ್‍ಕುಲಸ್ ಆಗುತ್ತದೆ, ಇವುಗಳು ಹಲವು ಸೂಕ್ಷ್ಮ ಜೀವಿಗಳಿಗೆ ವಾಸ ಸ್ಥಾನವಾಗಿ ವಸಡಿನ ರೋಗಕ್ಕೆ ಕಾರಣವಾಗುತ್ತದೆ.
ವಸಡಿನ ರೋಗ ಮತ್ತು ದೇಹದ ಆರೋಗ್ಯಕ್ಕೆ ನಿಕಟ ಸಂಬಂಧವಿದೆ. ವಸಡಿನ ರೋಗದಿಂದ ಕೆಲವು ಬಾಕ್ಟೀರೀಯಾಗಳು ರಕ್ತಕ್ಕೆ ಸೇರಿಕೊಂಡು ಹ್ರದಯ ರೋಗಕ್ಕೆ ಕಾರಣವಾಗಬಹುದು. ಮಧುಮೇಹ ಮತ್ತು ವಸಡಿನ ರೋಗಕ್ಕೂ ಬಾಂಧವ್ಯವಿದೆ. ಅವೆರೆಡು ಬಿಟ್ಟಿರಿಲಾರವು. ಗರ್ಭಿಣಿಯರಲ್ಲಿ ವಸಡಿನ ರೋಗವಿದ್ದರೆ, ಹುಟ್ಟುವ ಮಗುವಿನ ಆರೋಗ್ಯ ಮತ್ತು ಬೆಳವಣಿಗೆಯ ಮೇಲೂ ಪರಿಣಾಮ ಬೀರಬಹುದು ಎಂಬ ಮಾಹಿತಿ ಸಂಶೋಧನೆಗಳಲ್ಲಿ ಕಂಡುಬಂದಿದೆ. ಹೀಗೆ ವಸಡಿನ ಆರೋಗ್ಯ, ಹಲ್ಲಿನ ಸದೃಢತೆ ಮಾತ್ರವಲ್ಲದೆ ದೇಹದ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. ಆದ್ದರಿಂದ ಅದನ್ನು ಕಾಪಾಡುವುದು ಉತ್ತಮ.
ಸ್ಕೇಲಿಂಗ್ ಎಂಬ ಚಿಕಿತ್ಸೆಯಿಂದ ದಂತ ಪಾಚಿ ಅಥವಾ ಪ್ಲಾಕ್‍ನನ್ನು ಮತ್ತು ಕ್ಯಾಲ್‍ಕುಲಸ್‍ಗಳನ್ನು ತೆಗೆದು ಶುಚಿಮಾಡಲಾಗುತ್ತದೆ. ಇದು ವಸಡಿನ ತೊಂದರೆಗಳನ್ನು ದೂರವಿಡುತ್ತದೆ ಅಲ್ಲದೆ ಪ್ರಥಮ ಹಂತದ ವಸಡಿನ ತೊಂದರೆಗಳಿಗೆ ಚಿಕಿತ್ಸೆಯಾಗಿದೆ. ಪ್ರತೀ ಆರು ತಿಂಗೊಳಿಗೊಮ್ಮೆಯಾದರೂ ದಂತ ವೈದ್ಯರಲ್ಲಿ ಇದನ್ನು ಮಾಡಿಸಬೇಕು ಎಂದು ದಂತಶಾಸ್ತ್ರ ಹೇಳುತ್ತದೆ. ರೂಟ್ ಪ್ಲೇನಿಂಗ್ ಎಂಬ ಚಿಕಿತ್ಸೆಯಿದೆ, ಹಲ್ಲೆನ ಬೇರುಗಳ ಮೇಲೆ ಪಾಚಿ ಕಟ್ಟಿಕೊಂಡರೆ ಅದನ್ನು ಸರಿಪಡಿಸಲು ಇದನ್ನು ಬಳಸಲಾಗುತ್ತದೆ.
ಹಲವರಲ್ಲಿ ಸ್ಕೇಲಿಂಗ್ ಬಗ್ಗೆ ಮೂಢನಂಬಿಕೆಯಿದೆ. ಅದನ್ನು ಮಾಡಿಸಿಕೊಂಡಲ್ಲಿ ಹಲ್ಲು ಸಡಿಲವಾಗುತ್ತದೆ ಎಂಬ ಮಾತಿದೆ. ಆದರೆ ಈ ಚಿಕಿತ್ಸೆಯಿಂದ ಅಂತಹ ಯಾವುದೇ ತೊಂದರೆಗಳು ಆಗುವುದಿಲ್ಲ. ಅದನ್ನು ಮಾಡಿಸಿಕೊಂಡಲ್ಲಿ ಹಲ್ಲು ಆರೋಗ್ಯವಾಗಿ ದೃಢವಾಗಿರುತ್ತದೆ.
- ಡಾ. ಅಶ್ವಿನ್ ಪರಕ್ಕಜೆ
ದಂತ ವೈದ್ಯರು.
Facebook ಕಾಮೆಂಟ್ಸ್