X
    Categories: ಕಥೆ

ವಶವಾಗದ ವಂಶಿ – 6

(ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವ ಹಾಗೆ ಕಾಲ್ಪನಿಕ ಕತೆ)

ವಶವಾಗದ ವಂಶಿ – 5

 

ತಾವು ಅಲ್ಲಿಯ ವೇಣುಗೋಪಾಲ ವಿಗ್ರಹದ ಸರಿಯಾದ ಅಳತೆ, ಲಕ್ಷಣ ಹೇಳಿದರೆ ಅದರಂತೆಯೇ ಹೋಲುವ ವಿಗ್ರಹವನ್ನು ಜೊತೆಗೆ ಅದರ ಸುತ್ತಳತೆಗೆ ಬೇಕಾಗುವ ಪಾಣೀಪೀಠವನ್ನೂ ಮಾಡಲು ಆಚಾರಿಯೊಬ್ಬನನ್ನು ನೇಮಕ ಮಾಡುತ್ತೇವೆ.

ಅವನು ಬೇಕಾದರೆ ಖುದ್ದಾಗಿ ಶಿವಳ್ಳಿಯ ವೇಣುಗೋಪಾಲನ ವಿಗ್ರಹ ನೋಡಿ ಬರಲಿ. ಅವನಿಗೆ ಈ ಮೂರ್ತಿ ಮಾಡಿಕೊಡಲು ಸಮಯಾವಕಾಶ ನೀಡುತ್ತೇವೆ.

ಅವನನ್ನು ಶಿವಳ್ಳಿಯ ವೇಣುಗೋಪಾಲನ ವಿಗ್ರಹ ನೋಡಲು ಕಳುಹಿಸಿದ ವಿಷಯ ಹೆಚ್ಚು ಪ್ರಚಾರವಾಗದೆಂದೇ ಅವನನ್ನು ಪ್ರತ್ಯೇಕವಾಗಿರಿಸಬೇಕು. ಜೊತೆಗೆ ಮೂರ್ತಿಯ ಬಗೆಗೆ ಜನರೊಡನೆ ಹೆಚ್ಚು ಚರ್ಚೆಮಾಡದಿರಲು ಅವನನ್ನು ಪ್ರತ್ಯೇಕವಾಗಿರಿಸುವುದು ಅವಶ್ಯಕ.

ಇದು ಪವಿತ್ರವಾದ ಕಾರ್ಯವೆಂದು ಮನದಟ್ಟು ಮಾಡಿಸುವುದರಿಂದ ಹಾಗು ಅವನಿಗೆ ಬೇಕಾದ ಸಕಲ ಸವಲತ್ತುಗಳೂ ಮಾಡಿಕೊಡುವುದರಿಂದ ಹಾಗೂ ರಾಜನ ಕೃಪಾಕಟಾಕ್ಷ ದೊರೆಯುವುದರಿಂದ ಹಿಂದೆಮುಂದೆ ಯೋಚಿಸದೇ ಒಪ್ಪುವನು.

ರಾಜಾ.. ಒಂದು ಅ‌ನುಕೂಲದ ಸಂಗತಿ ಎಂದರೆ “ಅವರ ಆರಾಧ್ಯ ಮೂರ್ತಿಯು ಅವರ ಖಾಸಗೀ ಪೂಜೆಗೆ ಇರುವಂತದ್ದು ಹೊರತು ಸಾರ್ವಜನಿಕವಾಗಿ ತೆರೆದಿಟ್ಟಿಲ್ಲ.” ಹಾಗೆಂದು ಸಾರ್ವಜನಿಕ ದರ್ಶನಕ್ಕೆ ನಿರ್ಬಂಧವಿದೆ ಎಂದಲ್ಲ‌. ಅದನ್ನು ದರ್ಶಿಸುವವರು ಕಡಿಮೆ. ಪುರಾಣ ಪ್ರಸಿದ್ಧವಾದ ಈಶ್ವರನ ದೇವಾಲಯಕ್ಕೆ ಜನರು ಹೆಚ್ಚಾಗಿ ಹೋಗುವುದು. ಹಾಗಾಗಿ ಯಥಾವತ್ ತದ್ರೂಪಿ ವೇಣುಗೋಪಾಲನನ್ನೇ ಮಾಡಬೇಕೆಂದಿಲ್ಲ. ವೇಣುಗೋಪಾಲನ ವಿಗ್ರಹ ಆದರೆ ಆಯಿತು. ಇನ್ನು ಅಳತೆಯ ಬಗೆಗೆ ನಾನೇ ವಿಷಯ ಸಂಗ್ರಹಿಸಿ ಹೇಳುತ್ತೇನೆ. ಅವನು ಹೋಗುವುದೂ ಬೇಡ, ಹೋಗಿ ಪ್ರಚಾರವಾಗುವುದೂ ಬೇಡ. ನಾನು ಹೇಳಿದ ಅಳತೆ ಮಾಡಿದರಾಯಿತು.

ಅವರ ಖಾಸಗೀ ಪೂಜೆಗೆ ಸ್ಥಾಪಿತವಾದ್ದರಿಂದ ವಿಗ್ರಹವನ್ನು ಅಷ್ಟಾಗಿ ಯಾರೂ ಗಮನಿಸಿರುವುದಿಲ್ಲ. ಹಾಗಾಗಿ ಅಪಹರಿಸಿ ತಂದರೂ ಅಲ್ಲಿಯ ವಿಗ್ರಹವೆಂದು ಜನರಿಗೆ ಯಾವ ಸಂಶಯವೂ ಬರುವುದಿಲ್ಲ. ಇದೊಂದೇ ಅನುಕೂಲಕರ ಸಂಗತಿ.

ಅದು ಒಳ್ಳೆಯದೇ ಜೋಯಿಸರೇ.. ಹಾಗೇ ಆಗಲಿ. ಈ ಕೂಡಲೇ ದೇವಸ್ಥಾನದ ಪ್ರಸ್ತಾಪವನ್ನು ತಂದೆಯರಾದಿಯಾಗಿ ಎಲ್ಲರ ಮುಂದಿಡುತ್ತೇವೆ. ಜೊತೆಗೆ ಸೂಕ್ತ ಆಚಾರಿಯನ್ನೂ ಹುಡುಕಿಸುತ್ತೇವೆ.

ರಾಜಾ.. ಆದರೆ.. ಎಂತಹ ಆಚಾರಿಗಾದರೂ ತಾನು ಕೆತ್ತಿರುವ ವಿಗ್ರಹದ ಬಗ್ಗೆ ಚೆನ್ನಾಗಿ ಅರಿವಿರುತ್ತದೆ. ತಾನೇ ಸೃಷ್ಟಿಸಿರುವ ವಿಗ್ರಹವಾದ್ದರಿಂದ ಎಷ್ಟೇ ದೂರದಲ್ಲಿದ್ದರೂ ಅವನು ಅದನ್ನು ಕಂಡುಹಿಡಿಯುತ್ತಾನೆ. ಹೀಗಿರುವಾಗ ಅವನು ಕೆತ್ತಿರುವ ಮೂರ್ತಿಯನ್ನು ಪ್ರತಿಷ್ಠಾಪಿಸದೇ ಅಲ್ಲಿಯ ವಿಗ್ರಹವನ್ನು ಪ್ರತಿಷ್ಠಾಪಿಸಿದರೆ ಅವನು ಸುಮ್ಮನಿರುವನೇ. ಈ ವಿಷಯ ಬಹಿರಂಗವಾದರೆ ಗಂಡಾಂತರವಾಗದಿರುವುದೇ. ಅಲ್ಲೋಲಕಲ್ಲೋಲವಾಗಿಬಿಡುವುದಲ್ಲವೇ.?

ಹೌದು ಜೋಯಿಸರೇ.. ಅವನು ನೋಡಿ ‘ತಾನು ಮಾಡಿದ ವಿಗ್ರಹವಲ್ಲ ಇದು’ ಎಂದು ಅವನಿಗೆ ತಿಳಿದರೆ ಇತರರಿಗೆ ಹೇಳದೇ ಸುಮ್ಮನಿರನು. ಒಬ್ಬರ ಬಾಯಿಂದ ಒಬ್ಬರಿಗೆ ಪ್ರಚಾರವಾಗುತ್ತಾ ಹೋಗುತ್ತದೆ. ಹಾಗಾಗಿ ಅವನಿಗೆ ನೋಡಲು ಅವಕಾಶವನ್ನೇ ಕಲ್ಪಿಸುವುದಿಲ್ಲ.

ಅಂದರೆ.. ಹೇಗೆ ರಾಜಾ.. ಅರ್ಥವಾಗಲಿಲ್ಲ..

ಜೋಯಿಸರೇ ಇದು ರಾಜತಾಂತ್ರಿಕ ವಿಷಯ. ಇದನ್ನು ತಲೆಗೆ ತೆಗೆದುಕೊಂಡು ತಲೆಭಾರ ಮಾಡಿಕೊಳ್ಳದಿರಿ. ಒಂದೇ ಮಾತಲ್ಲಿ ಹೇಳಬೇಕೆಂದರೆ “ಪ್ರತಿಷ್ಠಾಪನೆಯ ನಂತರದಲ್ಲಿ ಅವನು ಇಲ್ಲಿರುವುದಿಲ್ಲ. ಇನ್ನು ಈ ವಿಷಯದಲ್ಲಿ ಹೆಚ್ಚು ವಿಶ್ಲೇಷಿಸಬೇಡಿ” ಆ ಜವಾಬ್ದಾರಿ ನಮ್ಮದು. ಮುಂದಿನ ಸಂವತ್ಸರದಲ್ಲಿ ಒಳ್ಳೆಯ ಮುಹೂರ್ತವೊಂದನ್ನು ಗೊತ್ತುಮಾಡಿ.

ವಿಗ್ರಹವನ್ನು ತಯಾರಿಸುವ ಆಚಾರಿಯನ್ನು ತಮ್ಮ ಬಳಿ ಕಳುಹಿಸುತ್ತೇವೆ. ಅವನಿಗೆ ಆ ವಿಗ್ರಹದ ಅಳತೆ ಹೇಳಿ. ನಾವಿನ್ನು ಬರುತ್ತೇವೆ. ಯೋಜನೆ ಕಾರ್ಯಗತಗೊಳಿಸಲು ಇಂದಿನಿಂದಲೇ ತಯಾರಿ ನಡೆಸುತ್ತೇವೆ.

ಶಿರಸಾ ಬಾಗಿ ನಮಸ್ಕರಿಸುತ್ತಾ ನಿಮ್ಮ ಆಶೀರ್ವಾದ ಬೇಡುವೆ.

(ಮುಂದುವರೆಯುವುದು..)

Facebook ಕಾಮೆಂಟ್ಸ್

Vikram Jois:
Related Post