(ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವ ಹಾಗೆ ಕಾಲ್ಪನಿಕ ಕತೆ)
(ಮುಂದುವರಿದ ಭಾಗ..)
ಅದನ್ನು ಜೋಯಿಸರ ಜೊತೆ ಚರ್ಚಿಸಿ ಹೇಳುತ್ತೇನೆ. ಈಗ ಅಪಹರಣಕ್ಕೆ ಬೇಕಾದ ಪಡೆಯೊಂದನ್ನು ಸಿದ್ಧಗೊಳಿಸು.
ಹಾಂ.. ಜಾಗ್ರತೆ.. ಈ ವಿಷಯ ಇತರರಿಗೆ ಯಾರಿಗೂ ತಿಳಿಯುವಂತಿಲ್ಲ. ಅದರ ಪೂರ್ಣ ಜವಾಬ್ದಾರಿ ನಿನ್ನದು. ಮತ್ತೆ ಹೇಳಿ ಕಳುಹಿಸುವೆ. ಹೊರಡು.. ಹೊರಗಿರುವ ಭಟರನ್ನು ಕಳುಹಿಸು.
*********************************
ಭಟರು: ಒಡೆಯಾ..
ಹಾಂ.. ಇನ್ನು ಸ್ವಲ್ಪ ಹೊತ್ತಿನಲ್ಲೇ ತಮ್ಮನ್ನು ಕಾಣಲು ಬರುತ್ತಿದ್ದೇವೆಂದು ಜೋಯಿಸರಿಗೆ ತಿಳಿಸಿ. ಭೇಟಿಗೆ ಅವಶ್ಯಕವಾದ ತಯಾರಿಗಳನ್ನು ಮಾಡಿ.
*******************************
ಗಹನವಾದ ವಿಷಯವಿಲ್ಲದೇ ಯುವರಾಜರು ನನ್ನ ಭೇಟಿಗೆ ಬರಲಾರರು ಎಂದು ತಿಳಿದಿದೆ ರಾಜಾ.. ಬನ್ನಿ..
ಜೋಯಿಸರೇ ತಮಗೆ ತಿಳಿಯದ ವಿಷಯವಾದರೂ ಯಾವುದಿದೆ ಹೇಳಿ. ಸುಮ್ಮನೆ ನಮ್ಮನ್ನು ಪರೀಕ್ಷಿಸಲು ಆಡುವ ಮಾತುಗಳಷ್ಟೇ ಅಲ್ಲವೇ ಇದು. ನಾ ಬಂದಿರುವ ವಿಷಯ ನಿಮಗೂ ತಿಳಿದಿದೆ.
ಆಗಲಿ ರಾಜ.. ಏನು ನಿರ್ಧಾರ ತೆಗೆದುಕೊಂಡಿರಿ ಈಗ..??
ಜೋಯಿಸರೇ ಯತಿಗಳಾಗಲೀ ಆಳುಪರರಾಗಲೀ ಮೂರ್ತಿಯನ್ನು ಕೇಳಿದರೆ ನಮಗೆ ನೀಡಲಾರರು ಎನ್ನುವ ವಿಷಯ ತಮಗೆ ತಿಳಿದದ್ದೇ. ಬಲಾತ್ಕಾರದಿಂದಲೂ ಅದನ್ನು ವಶಪಡಿಸಿಕೊಳ್ಳಲಾಗದ್ದು ಅದಕ್ಕೆ ನಮ್ಮ ತಂದೆಯವರ, ಮಹಾಮಂತ್ರಿಯವರ ಸಹಮತವಿರುವುದಿಲ್ಲ ಎಂಬುದೂ ನಿಮಗೆ ತಿಳಿದಿದೆ.
ರಾಜ್ಯದ ಹಿತಕ್ಕಾಗಿ ಅಂದರೆ ಪ್ರಜೆಗಳ ಹಿತಕ್ಕಾಗಿ ಎಂದರ್ಥವಲ್ಲವೇ? ಆ ಕಾರಣದಿಂದ ಏನೇ ಅಡೆತಡೆಗಳು ಬಂದರೂ ಈ ಕಾರ್ಯವನ್ನು ಮಾಡಲೇಬೇಕೆಂಬ ಸಂಕಲ್ಪ ಬಂದಿದೆ. ಅದಕ್ಕೆ ನಿಮ್ಮ ಅನುಮತಿ, ಮಾರ್ಗದರ್ಶನ, ಸಹಕಾರ ಎಲ್ಲವನ್ನೂ ಬಯಸಿ ಬಂದಿದ್ದೇವೆ. ಮುಂದಿನ ನಿರ್ಧಾರವೆಲ್ಲವೂ ನಿಮ್ಮದೆ. ನೀವು ಹೇಳುವ ಪಥದಲ್ಲಿ ಸಾಗುತ್ತೇವೆ ಜೋಯಿಸರೇ.
ರಾಜಾ.. ಅವಶ್ಯಕವಾದ ಸಂಕಲ್ಪವನ್ನೇ ಮಾಡಿದ್ದೀರಿ. ಆದರೆ ಗುರುವಾಗಿ ಸಮಸ್ಯೆಗೆ ಪರಿಹಾರವನ್ನಷ್ಟೇ ಹೇಳಬಲ್ಲೆ. ಮುಂದೆನಿಂತು ಕಾರ್ಯ ಮಾಡಿಸಬೇಕಾದವರು ತಾವು. ಸಲಹೆ ನೀಡಬಹುದು ನಾನು ಆದರೆ ಅಧಿಕಾರ ಮತ್ತು ಆಜ್ಞೆ ಹೊಂದಿದವರು ನೀವು. ಹಾಗಾಗಿ ನಿಮಗೆ ಅವಶ್ಯಕವಾದ ಸಲಹೆಯನ್ನು ನೀಡುತ್ತೇನೆ. ಮುಂದಿನದು ನಿಮಗೆ ಬಿಟ್ಟದ್ದು.
ಇರಲಿ.. ಈಗ ಸಂಕಲ್ಪಿತ ಕಾರ್ಯಸಿದ್ಧಿಗಾಗಿ ಇರುವ ಎಲ್ಲ ದಾರಿಗಳು ಮುಚ್ಚಿವೆ ಎಂದಾದರೆ ಇನ್ಯಾವ ದಾರಿ ಇದೆ. ಮೂರ್ತಿಯ ಸ್ಥಳಾಂತರಿಸಲು ಏನು ತೀರ್ಮಾನ ತೆಗೆದುಕೊಂಡಿರುವಿರಿ??
ಜೋಯಿಸರೇ ಅವರು “ಸನ್ಯಾಸಿಗಳಾದ್ದರಿಂದ ಪ್ರಪಂಚದ ಚರಾಚರ ವಸ್ತುವೆಲ್ಲದರ ಮೇಲೆ ಅವರು ತಮ್ಮ ವಾಂಛೆ ಬಿಟ್ಟಿರಬೇಕು. ಇಲ್ಲದಿದ್ದರೆ ತಮ್ಮ ಸನ್ಯಾಸಧರ್ಮ ಆಚರಣೆ ಪೂರ್ಣವಾಗುವುದಿಲ್ಲ. ಹಾಗಾಗಿ ಆ ವಸ್ತುವನ್ನು ಅವರಿಂದ ಬೇರ್ಪಡಿಸಿದರೆ ಸನ್ಯಾಸ ಧರ್ಮಕ್ಕೆ ನಮ್ಮಿಂದೇನು ಧಕ್ಕೆ ಆಗುವುದಿಲ್ಲ.”
ಎರಡನೆಯದಾಗಿ ಆ ಮೂರ್ತಿಯನ್ನು ಅಲ್ಲಿಂದ ಇಲ್ಲಿಗೆ ತಂದು ಅದಕ್ಕೆ ಸಲ್ಲುತ್ತಿದ್ದ ಪೂಜಾದಿಗಳನ್ನು ಮಾಡದೇ ಇದ್ದರೆ ಆಗಲೂ ನಮ್ಮಿಂದ ಅಪಚಾರವಾಗುತ್ತಿತ್ತು. ಆದರೆ ಅದಕ್ಕೆ ಪ್ರತಿನಿತ್ಯ ಸಲ್ಲಬೇಕಾದ ಪೂಜೆಯ ವ್ಯವಸ್ಥೆ ಮಾಡುವ ಜವಾಬ್ದಾರಿ ನನ್ನದು.
ಇದೆಲ್ಲದರ ಹೊರತಾಗಿ ರಾಜ್ಯದ ಹಿತಕ್ಕಾಗಿ, ಪ್ರಜೆಗಳ ಹಿತಕ್ಕಾಗಿ ಕಾರ್ಯವೊಂದನ್ನು ಮಾಡಲೇಬೇಕಾದರೆ ಅದನ್ನು ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿರುತ್ತದೆ. ಆಳುಪರರು ನಮ್ಮ ಸಾಮಂತರು. ಅರ್ಥಾತ್ ಅವರೂ ನಮ್ಮ ಆಳ್ವಿಕೆಗೆ ಒಳಪಡುವವರೇ. ಕೆಲವು ಅಧಿಕಾರ ಮತ್ತು ರಿಯಾಯ್ತಿಗಳಷ್ಟೇ ಇರುತ್ತವೆ ಅವರಿಗೆ. ಅಂದಮೇಲೆ “ರಾಜ್ಯದಲ್ಲಿರುವ ಪ್ರತಿಯೊಂದು ವಸ್ತುವಿನ ಮೇಲೂ ರಾಜನಿಗೆ ಅಧಿಕಾರವಿರುತ್ತದೆ.” ತನ್ನಿಚ್ಛೆಯಂತೆ ಬಳಸಿಕೊಳ್ಳುವ ಅಧಿಕಾರವಿದ್ದರೂ ನಾವು ಅದನ್ನು ಸದ್ಬಳಕೆ ಮಾಡಲಷ್ಟೇ ಸ್ಥಳಾಂತರಿಸುವುದು. ಆದರೆ ನಮ್ಮ ತಂದೆಯವರ, ಆಳುಪರರ ವಿರೋಧ ಕಟ್ಟಿಕೊಳ್ಳಬಾರದೆಂಬ ಕಾರಣಕ್ಕೆ ಅವರಿಗೆ ತಿಳಿಯದಂತೆ, ಯಾರಿಗೂ ತಿಳಿಯದಂತೆ ಸ್ಥಳಾಂತರಿಸಬೇಕೆಂದು ತೀರ್ಮಾನಿಸಿದ್ದೇವೆ.
ಅರ್ಥಾತ್ ಮೂರ್ತಿಯ ಅಪಹರಣಕ್ಕೆ ತಯಾರಿದ್ದೀರಿ ಎಂದರ್ಥ. ಸರಿ ಅದು ನಿಮಗೆ ಬಿಟ್ಟದ್ದು. ರಾಜರ ನಿರ್ಧಾರ. ಆದರೆ ಯಾರಿಗೂ ಅನುಮಾನ ಬರುವುದಿಲ್ಲವೇ??!
ಖಂಡಿತವಾಗಿಯೂ ಇಲ್ಲ.. ನಿಮ್ಮ ಸಲಹೆಯಮೇರೆಗೆ ರಾಜ್ಯದ ಹಿತಕ್ಕಾಗಿ ವೇಣುಗೋಪಾಲನ ಮಂದಿರವೊಂದನ್ನು ನಿರ್ಮಿಸಬೇಕಾಗಿ ಹೇಗಿದ್ದರೂ ತಂದೆಯವರ ಬಳಿ ಹೇಳಲಾಗುತ್ತದೆ. ಈ ವಿಷಯ ಜನರಿಗೂ ತಲುಪುವುದು.
ಮುಂದಿನದ್ದೆಲ್ಲಾ ನಿಮ್ಮ ಸೂಚನೆಯಂತೆ ನಡೆಯುವುದು. ಮಂದಿರ ನಿರ್ಮಾಣಕ್ಕೆ ಬೇಕಾದ ವಾಸ್ತುವಿರುವ ಜಾಗವನ್ನು ಗುರುತಿಸುವಿಕೆ, ಮಂದಿರದ ಕಟ್ಟಡದ ವಾಸ್ತು, ಎಲ್ಲವನ್ನೂ ತಿಳಿಸಿದರೆ ಅದಕ್ಕೆ ಬೇಕಾದ ಆಚಾರಿಗಳ ಗುಂಪು ತಯಾರಾಗಿರುತ್ತದೆ. ನೀವು ಹೇಳಿದ ಕೂಡಲೇ ಕೆಲಸ ಆರಂಭಿಸುತ್ತಾರೆ.
ಇನ್ನು ಇಲ್ಲೊಂದು ವೇಣುಗೋಪಾಲನ ವಿಗ್ರಹವನ್ನು ಕೆತ್ತಲು ಪ್ರತ್ಯೇಕ ಆಚಾರಿಯೊಬ್ಬನನ್ನು ನೇಮಿಸಬೇಕು. ಅವನಿಗೆ ಪ್ರತ್ಯೇಕ ಸ್ಥಳ ಮಾಡಿಕೊಟ್ಟು ಜನರೊಂದಿಗೆ ಬೆರೆಯದಂತೆ ದೂರವಿಡಬೇಕು. ಹಾಗು ಅವನ ವಿಷಯದಲ್ಲಿ ಒಂದು ಗೌಪ್ಯತೆ ಕಾಪಾಡಿಕೊಳ್ಳಬೇಕು.
ಏನದು ರಾಜಾ???
(ಮುಂದುವರೆಯುವುದು..)
Facebook ಕಾಮೆಂಟ್ಸ್