“ಕರ್ನಾಟಕ ರಾಜಕೀಯದಲ್ಲಿ ಹೀಗೆಂದೂ ಆಗಿರಲಿಲ್ಲ.” – ಇತ್ತೀಚೆಗಿನ ಕರ್ನಾಟಕದ ರಾಜಕೀಯ ಬೆಳವಣಿಗೆಗಳನ್ನು ನೋಡುತ್ತಿರುವಾಗ ನನ್ನ ತಂದೆಯವರು ಉದ್ಗರಿಸಿದರು. ಹೌದು, ನಾವೆಂದು ಕಾಣದ ರಾಜಕೀಯ ದೊಂಬರಾಟ ನಡೆದೇ ಹೋಯಿತು, ಅಲ್ಲ ಅಲ್ಲ ಇನ್ನೂ ಅದು ನಡೆಯುತ್ತಿದೆ…
೨೦೧೮ ಕರ್ನಾಟಕ ವಿಧಾನಸಭೆ ಚುನಾವಣೆ ಕಾವು ಪಡೆಯುತ್ತಿತ್ತು. ರಾಜಕೀಯ ಧುರೀಣರು ಅತಿ ವಿಶ್ವಾಸದಿಂದ ಹೇಳುತ್ತಿದ್ದರು…ಅವರ ಅಪ್ಪನಾಣೆ ಅವರು ಮುಖ್ಯಮಂತ್ರಿ ಆಗಲ್ಲ, ನಾನೇ ಮುಂದಿನ ಮುಖ್ಯಮಂತ್ರಿ. ಅದೇ ಸಮಯಕ್ಕೆ ಇನ್ನೊಬ್ಬರು ನಾನು ಸಿ.ಎಂ. ಆದ್ರೆ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದರು. ಅಷ್ಟರವರೆಗೆ ಅಹಿಂದ ಆದವರೆಲ್ಲಾ ತಾನೂ ಹಿಂದೂ ಎಂದು ನೆನಪಾಗಿ ದೇವಸ್ಥಾನಕ್ಕೆ ದಂಡೇ ಹೊರಟರು. ಹೊಸ ಧರ್ಮ ಮಾಡಿ ಅವರಿಗೆ ಸಾಮಾಜಿಕ ಸ್ಥಾನಮಾನ ನೀಡುವ ಕಾಳಜಿ ಬಂತು. ಸಮಾಜವನ್ನು ನೆನಪಿನಲ್ಲಿಟ್ಟು ಮಾತನಾಡಬೇಕಾದ ರಾಜಕಾರಣಿಗಳ ಮಾತು ನಾಲಿಗೆಯಿಂದ ಲಂಗುಲಗಾಮಿಲ್ಲದೆ ಜಾರುತ್ತಿತ್ತು. ಕನ್ನಡ ಪ್ರೇಮ ಎಲ್ಲೆ ಮೀರಿ ಬೆಳೆದಿತ್ತು. ಕೇಂದ್ರದ ದಂಡೇ ರಾಜ್ಯದಲ್ಲಿ ವಾಸ್ತವ್ಯ ಹೂಡಿತ್ತು. ಇದನ್ನೆಲ್ಲೆ ನೋಡುತ್ತಾ ತನ್ನ ಸಮಯಕ್ಕಾಗಿ ಕಾಯುತ್ತ ಕುಳಿತಿದ್ದ ಮತದಾರ….
ಮೇ ೧೭ – ಚುನಾವಣಾ ಫಲಿತಾಂಶ ಬಂತು. ಜನತೆ ಯಾವೊಂದು ಪಕ್ಷಕ್ಕೂ ಬಹುಮತ ನೀಡದ್ದನ್ನು ಕಂಡು ಕರ್ನಾಟಕ ಮಾತೆ ಹಲುಬಿದಳು. ಆದರೆ ಅಷ್ಟರವರೆಗೆ ಬದ್ಧ ವೈರಿಗಳಾದ ಎರಡು ಪಕ್ಷಗಳು ಮೈತ್ರಿಯ ಒಲವು ತೋರಿದವು. ಆದರೆ ಅತ್ಯಂತ ಹೆಚ್ಚು ಸೀಟು ಪಡೆದ ಬಿಜೆಪಿಯನ್ನು ನ್ಯಾಯಯುತವಾಗಿ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡಿದರು. ಕಾಂಗ್ರೆಸ್ ಭಾರತದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಕಸರತ್ತು ನಡೆಸಲೇಬೇಕಾಗಿತ್ತು. ಅದು ಬಿಜೆಪಿಯ ಪ್ರತಿಯೊಂದು ಹೆಜ್ಜೆಗೂ ಮುಳ್ಳಾಯಿತು. ಆದರೂ ಯಡಿಯೂರಪ್ಪ ಮುಖ್ಯಮಂತ್ರಿ ಆಗೇ ಬಿಟ್ಟರು. ಆಗ ಅನೈತಿಕ ಮೈತ್ರಿ ಕಾಂಗ್ರೆಸ್ಸಿನ “ಬ್ಯಾಂಕ್ ಖಾತೆ” ಡಿಕೆಶಿ ಅವರ ಉಸ್ತುವಾರಿಯಲ್ಲಿ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿತು. ಸುಳ್ಳು ಧ್ವನಿಸುರಳಿಗಳನ್ನು ಬಿಡುಗಡೆ ಮಾಡಿತು. ಯಡಿಯೂರಪ್ಪ ಸಾಲ ಮನ್ನಾ ಮಾಡಿ, ೫೫ ಗಂಟೆಗಳ ಸಿ.ಎಂ. ಸ್ಥಾನಕ್ಕೆ ರಾಜೀನಾಮೆ ಕೊಟ್ಟರೂ ಜನರ ಮನ ಗೆದ್ದರು. ಈ ಘಟನೆಗಳನ್ನು ವಾಜಪೇಯಿ ಸರ್ಕಾರಕ್ಕೆ ಹೋಲಿಸಲಾಯಿತು. ಕೊನೆಗೂ “ಎರಡನೇ” ಸಲ ಕುಮಾರಣ್ಣ ಸಿ.ಎಂ. ಎಂದು ಘೋಷಿಸಲಾಯಿತು. ಅಪ್ಪನಾಣೆ ಹಾಕಿದವರೆಲ್ಲಾ ಕುಮಾರಣ್ಣನ ಮುಂದೆ ಕೈ ಕಟ್ಟಿ ನಿಂತರು. ಜೆಡಿಎಸ್ ಗೆ ಕಾಂಗ್ರೆಸ್ ತಲೆ ಬಾಗಿ ನಮಸ್ಕರಿಸಿತ್ತು. ಕುಮಾರಸ್ವಾಮಿ ಸಾಲಮನ್ನಾ ಮಾಡಿಯಾರು ಎಂದು ತಿಳಿದವರಿಗೆ ಅವರು ಸಾಲ ಮನ್ನಾ ಸಾಧ್ಯವಿಲ್ಲ ಏಕೆಂದರೆ ತಾನು ಜನರ ಮುಲಾಜಿನಲ್ಲಿ ಇಲ್ಲ, ಬದಲಿಗೆ ಕಾಂಗ್ರೆಸ್ ನವರ ಮುಲಾಜಿನಲ್ಲಿದ್ದೇನೆ ಎಂದಾಗ ನೇಣಿನ ಕುಣಿಕೆಯೇ ಗತಿಯಾಯಿತು. ಹೊಸ ಮುಖ್ಯಮಂತ್ರಿಗಳನ್ನು ೧೦ ರೈತರ ಸಾವು ಸ್ವಾಗತಿಸಿತು. ಅದನ್ನು ತಡೆಯಲು ಸಾಲ ಮನ್ನಾ ಮಾಡುತ್ತೇನೆಂಬ ಪೊಳ್ಳು ಭರವಸೆ ನೀಡಲೇಬೇಕಾಯಿತು. ಮುಂದಿನ ಘಟ್ಟ ಸಚಿವ ಸಂಪುಟ ವಿಸ್ತರಣೆ..ಸಂಮಿಶ್ರ ಸರ್ಕಾರದ ಸಂಪುಟ ರಚನೆ ಬಲು ಕಷ್ಟವಾಯಿತು, ಆದರೆ ೨೦೧೯ರ ಚುನಾವಣೆ “ ಕೈ ” ಯನ್ನು ಜೆಡಿಎಸ್ ಪಾದಸ್ಪರ್ಷ ಮಾಡುವಂತೆ ಮಾಡಿತ್ತು.
ಈಗ ಜನತೆ ಕೇಳುವ ಪ್ರಶ್ನೆ- ಜನರು ಬೇಡವೆಂದು ತಿರಸ್ಕರಿಸಿದ, ಕೇವಲ ೩೮ ಸ್ಥಾನ ಗೆದ್ದ, ೧೦೦ ಕ್ಕೂ ಮಿಕ್ಕ ಕಡೆ ಠೇವಣಿ ಕಳಕೊಂಡ ಪಕ್ಷದ ಮುಖ್ಯಮಂತ್ರಿ ಸಾಂವಿಧಾನಿಕವೇ? ಆಡಳಿತ ಪಕ್ಷ ಆಡಳಿತ ವಿರೋಧಿ ಅಲೆಯಲ್ಲಿ ಕೊಚ್ಚಿ ಹೋಗಿ ತನ್ನ ಸಚಿವರಿಗೇ ಗೆಲ್ಲಲು ಅಸಾಧ್ಯವಾದಾಗ ಸ್ವಾರ್ಥ ಸಾಧನೆಗಾಗಿ ಅನೈತಿಕ ಹೊಂದಾಣಿಕೆ ಎಷ್ಟು ಸಮಂಜಸ? ಕುಮಾರಸ್ವಾಮಿ, ಅವರ ತಂದೆಯಾಗಲಿ , ಅವರ ಕುಟುಂಬವೇ ಒಂದು ರಾಜೀನಾಮೆ ಕೊಡುವ ಪಕ್ಷದವರು, ಇಂಥಹ ಅಸ್ಥಿರ ಮುಖ್ಯಮಂತ್ರಿಯ ಅವಶ್ಯಕತೆ ಇದೆಯೇ? ತನ್ನ ಕಾಲ ಮೇಲೆ ನಿಂತು ಸರ್ಕಾರ ರಚಿಸಲು ಅಸಮರ್ಥನಿಂದ ಮತ್ತು ಧನದಾಹಿ ಭ್ರಷ್ಟರೇ ತುಂಬಿದ ಕಾಂಗ್ರೆಸ್ ಯಾವ ಕೆಲಸ ತಾನೇ ಮಾಡೀತು? ಇದು ಕೇವಲ ೨೦೧೯ರ ಚುನಾವಣೆಗೆ ಧನ ಕ್ರೋಢೀಕರಿಸೀತಷ್ಟೇ? ಜಂತಕಲ್ ಮೈನಿಂಗ್, ರೇವಣ್ಣ ಮಾಡಿದ ಹಗರಣಗಳನ್ನೂ, ಕುಟುಂಬ ರಾಜಕಾರಣವನ್ನೂ ಮರೆಯಲು ಸಾಧ್ಯವೇ?
ಕಾಂಗ್ರೆಸ್ ಹೇಳುವುದು ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರುವುದನ್ನು ತಡೆಗಟ್ಟಿದ್ದೇವೆ ಎಂದು, ಯಾವುದು ಕೋಮುವಾದಿ ಪಕ್ಷ, ಯಾರು ಜಾತಿ ಗಳ ನಡುವೆ ಕಿತ್ತಾಟ ತಂದೋರು , ಮುಸ್ಲಿಂ ಓಲೈಕೆ ಯಾರು ಮಾಡುದು, ಅನ್ನುದು ಎಲ್ಲರಿಗೂ ತಿಳಿದಿದೆ. ಕುಮಾರಸ್ವಾಮಿ ಕಮ್ಮಿ ಏನಿಲ್ಲ, ಅವರೂ ಅಧಿಕಾರಕ್ಕಾಗಿ ಏನೂ ಮಾಡಿಯಾರು ಅನ್ನುವುದು ಮತ್ತೆ ಸಾಬೀತಾಗಿದೆ. ಜೆ.ಡಿ.ಎಸ್. ಪಕ್ಷ ತನ್ನ ಮಿತ್ರ ಪಕ್ಷದ ಧರಂ ಸಿಂಗ್, ಯಡಿಯೂರಪ್ಪಗೆ ಮೋಸ ಮಾಡಿದ್ದು ತಿಳಿದೇ ಇದೆ, ಈಗ ಜನತೆಗೆ, ಸಂವಿಧಾನಕ್ಕೆ ಮೋಸ ಮಾಡಹೊರಟಿರುವ ಇವರಿಗೆ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ?. ಅವಕಾಶವಾದಿ ಅಪ್ಪ ಮಕ್ಕಳ ಆಟ ಮೊದಲಿಗೆ ಪ್ರಾರಂಭಿಸಿದ್ದು ದೇವೇಗೌಡರು, ೧೯೯೬ ರಲ್ಲಿ, ಅಲ್ಲೋ ಅಧಿಕಾರ ಅರ್ಧಕ್ಕೆ ಬಿಟ್ಟು ಕರ್ನಾಟಕಕ್ಕೆ ಓಡಿ ಬಂದರು. ಅಲ್ಲಿಂದ ಅವರಿಗೆ ಅಧಿಕಾರದಾಸೆ ಶುರು ಆಯಿತು, ಈಗಲೂ ದೇವೇಗೌಡರು ಪ್ರಧಾನಿ ಆಗೋ ಕನಸು ಕಾಣುತ್ತಿದ್ದಾರೆ. ಅಧಿಕಾರಕ್ಕಾಗಿ ಹವಣಿಸುತ್ತಿದ್ದ ಅಪ್ಪ ಮಕ್ಕಳಿಗೆ ಅದೃಷ್ಟ ಅಚಾನಕ್ಕಾಗಿ ಕಾಲಬುಡಕ್ಕೆ ಬಂದು ಬಿದ್ದಿದೆ. ಆಗಾಗ ಮಾತು ಬದಲಿಸುವ ಧಿಮಾಕಿನ ಮಾತನಾಡುವ ಕುಮಾರಸ್ವಾಮಿ ೫ ವರುಷ ಮುಖ್ಯಮಂತ್ರಿ ಆಗುವ ಅತಿಆಸೆ ಹೊಂದಿದ್ದಾರೆ, ಕಾಂಗ್ರೆಸ್ ಒಪ್ಪೀತೇ? ಹಿಂದಿನ ಇವರ ಮೈತ್ರಿಪಕ್ಷ ಬಿಜೆಪಿಗೆ ಕೈ ಕೊಟ್ಟ ಕುಮಾರಸ್ವಾಮಿ, ದೇವೇಗೌಡರಿಗೆ ನೈತಿಕತೆ ಇಲ್ಲ. ಅವಕಾಶವಾದಿ ಅಪ್ಪ ಮಕ್ಕಳ ಆಟ ಇನ್ನೆಷ್ಟು ದಿನ ನಡೆದೀತು, ಕಾದು ನೋಡಬೇಕಾಗಿದೆ.
- ಗಣೇಶ ಕೃಷ್ಣ ವಿ.ಎಸ್.
Facebook ಕಾಮೆಂಟ್ಸ್