ಕಾಡುಹಣ್ಣುಗಳ ಹಿಂದೆ ರೋಚಕವಾದ ಬಾಲ್ಯವಿದೆ, ಕಾಲದ ಕಥನವಿದೆ. ಕಾಡುವ ನೆನಪಿದೆ. ಸವಿದ ಒಬ್ಬೊಬ್ಬರಲ್ಲಿ ಒಂದೊಂದು ಅನುಭವಗಳು. ಒಂದು ಕಾಲಘಟ್ಟದಲ್ಲಿ ಮಾವು, ಹಲಸು, ನೇರಳೆ ಹಣ್ಣುಗಳೇ ಬೇಸಿಗೆಯಲ್ಲಿ ಹೊಟ್ಟೆ ತುಂಬಿಸುತ್ತಿದ್ದವು. ವಿಷರಹಿತವಾದ, ನೈಸರ್ಗಿಕವಾದ ಹಣ್ಣುಗಳು ಆರೋಗ್ಯಕ್ಕೂ ತೊಂದರೆ ನೀಡುತ್ತಿರಲಿಲ್ಲ. ಫೆಬ್ರವರಿ ಮಾರ್ಚಿನಿಂದ ಶುರುವಾಗಿ ಜೂನ್ ಜುಲೈ ತಿಂಗಳವರೆಗೆ ಕಾಡುಹಣ್ಣುಗಳ ಮಹೋತ್ಸವವೇ ನಡೆಯುತ್ತಿತ್ತು.
ನವೆಂಬರ್ ಡಿಸೆಂಬರ್ ನಲ್ಲಿ ಕಾಡಿನಲ್ಲಿ ಸಿಗುವ ಹಳದೀ ಬಣ್ಣದ ಸಣ್ಣ ಹಣ್ಣು ರಂಜದ ಹಣ್ಣು ತಿಂದರೆ ಬಾಯಿ ಒಣಗಿಹೋಗುತ್ತಿದ್ದ ಸಿಹಿಯಾದ ಹಣ್ಣಿನಿಂದ ಶುರುವಾಗುತ್ತಿದ್ದ ಹಣ್ಣಿನ ಜಾತ್ರೆ ಸುಮಾರು ಆಗಸ್ಟ್ ಸೆಪ್ಟೆಂಬರ್ ವರೆಗೂ ಮುಂದುವರೆದುಕೊಂಡು ಬರುತ್ತಿತ್ತು. ಜನವರಿಯಿಂದ ಮಾರ್ಚಿನವರೆಗೆ ಕಲ್ಲುಸಂಪಿಗೆ ಹಣ್ಣಿನ ಸಮಯ. ಕೆಂಪಗಿನ ನಲ್ಲಿಕಾಯಿಯ ಹಾಗೆ ಗುಂಡಾದ ಆಕಾರವಿರಿವ ಹುಳಿ, ಸಿಹಿ ಹಣ್ಣು ಅದು. ಮುಳ್ಳಿನ ಮರದಲ್ಲಿ ಬಿಡುವ ಹಣ್ಣು.
ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಬಿಡುವ ಹುಲಿಗೆ ಹಣ್ಣಿನ ರುಚಿ ತಿಂದವರಿಗೆ ಮಾತ್ರ ಗೊತ್ತು. ಬೀಳಿನ(ಬಳ್ಳಿಯ)ಲ್ಲಿ ಬಿಡುವ ಇದು ಸುಮಾರು ಖರ್ಜೂರದ ಬೀಜದಷ್ಟಿರುತ್ತದೆ. ನಾಲಗೆಯ ವರ್ಣದ ಈ ಹಣ್ಣು, ತಿಂದರೆ ಹುಳಿಸಿಹಿ ರುಚಿ ಹೊಂದಿರುತ್ತದೆ.
ನಂತರ ಬೆಮ್ಮಾರ್ಲು ಹಣ್ಣಿನ ಸರದಿ. ಇದು ಬೋಳುಬೋಳಾದ ಗಿಡದಲ್ಲಿ ಬಿಡುವ ಪುಟ್ಟ ಹಣ್ಣು. ತಿಳಿಯಾದ ಸಿಹಿ ಹೊಂದಿರುವ ಇದು Ivory ಬಣ್ಣದ ಹಣ್ಣು.
ಬೇಸಿಗೆ ಬಂತೆಂದರೆ ನೇರಳೆ, ಮಾವಿನ ಅಬ್ಬರ. ಕಪ್ಪಗೆ ಗೊಂಚಲುಗೊಂಚಲಾಗಿರುವ ನೇರಳೆ ತಿಂದರೆ ತನ್ನ ನೈಜವರ್ಣವನ್ನು ಕೆಲ ಸಮಯದವರೆಗೆ ನಾಲಿಗೆಯ ಮೇಲೆ ಉಳಿಸಿಬಿಡುತ್ತದೆ.
ಹಲಸನ್ನು ಎಲ್ಲರೂ ತಿಂದಿರುತ್ತಾರೆ. ಆದರೆ ಮಲೆನಾಡು ಕರಾವಳಿಯವರಿಗೆ ಬಿಟ್ಟು ಇತರರಿಗೆ ಹೆಬ್ಬಲಸು ಅಪರಿಚಿತ. ಹಲಸಿನ ಹಾಗೆ ಮುಳ್ಳುಮುಳ್ಳಾಗಿರುವ ಇದು ಸುಮಾರು ಒಂದು ಮುಷ್ಠಿಗಾತ್ರದ್ದು. ಹಲಸಿನ ಕಾಯಿಯ ಜಾತಿಗೆ ಸೇರಿಸಬಹುದಾದ ಇದರಲ್ಲಿ ಹಲಸಿನ ಹಾಗೆ ಸೊಳೆಯೊಂದಿರುವುದಿಲ್ಲ. ರುಚಿ ಅದ್ಭುತ.
ಕಾಡುಮಾವಿನ ರುಚಿ ಬಹಳಷ್ಟು ಜನರಿಗೆ ತಿಳಿಯದ ವಿಷಯ. ರಸಪುರಿ, ಮಲ್ಗೋವಾ, ಬಾದಾಮಿ ಇನ್ನೇನೇನೋ ಜಾತಿಯ, ಔಷಧಿ ಲೇಪನಮಾಡಿ, ಕಾಯಿ ಕುಯ್ದು ಹಣ್ಣು ಮಾಡಿದ ಮಾವುಗಳು ಮಾರುಕಟ್ಟೆಯಲ್ಲಿ ಬಹಳಷ್ಟು ಲಭ್ಯ. ಮುಷ್ಟಿಯಲ್ಲಿ ಮುಚ್ಚಿಕೊಳ್ಳಬಹುದಾದಷ್ಟು ಗಾತ್ರದ ಇದು ಯುಗಾದಿಯ ನಂತರ ಬರುವ ಒಂದೆರಡು ಮಳೆಗೆ ಹಣ್ಣಾಗಿ ಹುಳಿಯಿಂದ ಸಿಹಿಗೆ ಪರಿವರ್ತನೆಗೊಂಡು ತಾನಾಗೇ ಉದುರುವ ಕಾಡುಮಾವಿನ ಪದಾರ್ಥಗಳನ್ನು ಒಮ್ಮೆ ತಿಂದರೆ ಜೀವನಪೂರ್ತಿ ಮರೆಯಲಾಗದು. ನೀರುದೋಸೆಗೆ ಕಾಡುಮಾವಿನ ರಸಾಯನ, ಸಾಸಿವೆ, ಗೊಜ್ಜು, ಗೊಜ್ಜುಹುಳಿ, ಸವಿದಷ್ಟೂ ಸಾಲದು. ಬಹುಶಃ ಇದೇ ಎಲ್ಲ ಮಾವುಗಳ ಮೂಲವಿರಬಹುದು.
ಇನ್ನು ಹಲಸು. ಇದರ ಬಗ್ಗೆ ಹೆಚ್ಚೇನು ಹೇಳುವ ಅವಶ್ಯವಿಲ್ಲ. ಬೇಸಿಗೆಯಿಂದ ಮಳೆಗಾಲ ಕಳೆಯುವವರೆಗೆ ಸಿಗವ ಹಣ್ಣು. ಖಾದ್ಯವಾದರೂ ಮಾಡಿ, ಹಾಗೆಯೇ ತಿನ್ನುವುದಾದರೂ ಸರಿ, ಹೇಗೆ ತಿಂದರೂ ರುಚಿಯೇ.
ಅಂಕೋಲ ಹಣ್ಣು ಮಳೆ ಆರಂಭವಾದ ಬಳಿಕ ಶುರುವಾಗುವ ಹಣ್ಣು. ಬಳ್ಳಿಯಲ್ಲಿ ಬಿಡುವ, ಕೆಂಪಾದ jelly ಹಾಗಿರುವ ಉರುಟಾದ ಸಣ್ಣ ಹಣ್ಣು ಇದು. ತಿಂದರೆ ಕೆಲವರಿಗೆ ಒಂದು ದಿನದ ಜ್ವರ ಅಥವಾ ಚಳಿಗುಳ್ಳೆಯ ಹಾಗೆ ಮೈಯೆಲ್ಲಾ ಒಂದು ದಿನದ ಮಟ್ಟಿಗೆ ಗುಳ್ಳೆಗಾಳಾಗುವುದು. ಆದರೆ ಇವೆಲ್ಲಾ ಕ್ಷಣಿಕ. ಅದರ ರುಚಿಯನ್ನೊಮ್ಮೆ ಆಸ್ವಾದಿಸಬೇಕು.
ಕರ್ಜಿಹಣ್ಣು ಕಪ್ಪಗಿನ ಹಣ್ಣು. ಏಪ್ರಿಲ್-ಮೇ ತಿಂಗಳಲ್ಲಿ ಕಾಯಿಯಾಗಿದ್ದಾಗ ಹಸಿರು ಬಣ್ಣ, ಹುಳಿಯಾಗಿ ಸೊನೆ ಬರುತ್ತದೆ. ಜೂನ್ ತಿಂಗಳಿಂದ ಆಗಸ್ಟ್ ವರೆಗೂ ಹಣ್ಣಾಗುವ ಸಮಯ. ಹುಳಿಯ ಅಂಶ ಹೋಗಿ ಸಿಹಿಯಾಗಿರುತ್ತದೆ.
ಅಂಬರ್ಲು ಹಣ್ಣು ಕಪ್ಪಗೆ ಸಣ್ಣಸಣ್ಣ ಮಣಿಗಳಂತಿರುವ ಇವು ಒಂದಿಂಚು ಉದ್ದದ ದ್ರಾಕ್ಷಿ ಗೊಂಚಲು. ಬೇಸಿಗೆಯಲ್ಲಿ ದೊರೆಯುವ ಸಿಹಿಯಾದ ಹಣ್ಣು ಇದು.
ಪನ್ನೀರಲು ಹಣ್ಣು ಪೇರಲೆ ಬಣ್ಣದ ಗೋಲಿಯ ಗಾತ್ರದ ಹಣ್ಣು. ದೊಡ್ಡದಾದ ಬೀಜ ಹೊಂದಿರುವ ಇದು ಅದರ ಸುತ್ತಲೂ ತೆಳುವಾದ ತಿಳಿ ಸಿಹಿಯ ಪದರ ಹೊಂದಿರುತ್ತದೆ. ಒಳಗಿರುವ ಬೀಜ ಹಣ್ಣಿಗೆ ಅಂಟಿಕೊಂಡಿರುವುದಿಲ್ಲ.
ಮಜ್ಜಿಗೆ ಹಣ್ಣು ಬಿಳಿಯಾದ ಮಣಿಗಳಂತಿರುವ ಹಣ್ಣು. ಬೇಸಿಗೆಯಲ್ಲಿ ಕಾಣಬಹುದು. ಅಷ್ಟೊಂದು ರುಚಿ ಅಲ್ಲದಿದ್ದರೂ ನಾಲಿಗೆಗೆ ರುಚಿಯ ಅನುಭವ ನೀಡಬಲ್ಲದು.
ದಿರ್ಕ ಈ ಹಣ್ಣು ಹೆಚ್ಚು ಹುಳಿ ಮತ್ತು ಸ್ವಲ್ಪ ಸಿಹಿಯಾದ ಹಣ್ಣು. ಮಳೆಗಾಲದ ಹಣ್ಣು. ಮುಷ್ಟಿ ಗಾತ್ರದ ಹಣ್ಣು. ಹಳದಿ ಬಣ್ಣದ ರಸ ಹೊಂದಿರುತ್ತದೆ.
ಜಟಾಪಟ್ ಹಣ್ಣು ಕೆಂಪಾದ ನಲ್ಲೀಬೀಜದ ಗಾತ್ರದ ಹಣ್ಣು. ಇದರ ಗಿಡ ನೆಲದ ಮಟ್ಟದಲ್ಲಿರುತ್ತದೆ. ಇದರ ಹೂವು ಕೇಪಲದ ಹೂವಿನ ಹಾಗಿರುತ್ತದೆ. ಈ ಹಣ್ಣು ಗೊಂಚಲಿನ ಹಾಗೆ ಒಟ್ಟಿಗೆ ಇರುತ್ತದೆ. ಇದರ ಹೂವಿನ ತಂಬುಳಿಯನ್ನೂ ಮಾಡುತ್ತಾರೆ. ಇದರ ಗಿಡ ಹಲವಾರು ಔಷಧಿಗಳಿಗೆ ಬಳಕೆಯಾಗುತ್ತದೆ.
ಇನ್ನು ಗಂಧದ ಹಣ್ಣು. ಗಂಧದ ಮರಗಳೇ ಮರೀಚಿಕೆಯಾದಾಗ ಇದರ ಹಣ್ಣೆಲ್ಲಿಂದ ಸಿಗಬೇಕು. ಒಮ್ಮೆ ತಿಂದ ನೆನಪು. ಹೆಚ್ಚು ವಿವರಣೆ ನೀಡಲು ಆಗದು ಮರೆತಿರುವೆ. ಒಟ್ಟಿನಲ್ಲಿ ಸಿಹಿಯಾಗಿರುತ್ತದೆ ಎಂದಷ್ಟೇ ಹೇಳಬಲ್ಲೆ.
ಕೌಳೀಕಾಯಿ ಬೇಸಿಗೆ ಕಾಯಿ. ಹುಳಿಯಾಗಿರುವ ಇದು ಕರ್ಜಿಹಣ್ಣಿನ ಜಾತಿಗೆ ಸೇರಿದ ಹಣ್ಣು. ಹುಳಿ ಇಷ್ಟ ಪಡುವವರಿಗೆ ಇದು ಇಷ್ಟವಾಗುತ್ತದೆ.
ಕುನ್ನೀರಲು ಹಣ್ಣು ನೇರಳೆ ವರ್ಗಕ್ಕೆ ಸೇರಿದ ಹಣ್ಣು. ನೇರಳೆಯ ಬಣ್ಣ, ಗಾತ್ರ ಮಾತ್ರ ಚಿಕ್ಕದು. ಉರುಟಾಗಿರುತ್ತದೆ. ಮಳೆಗಾಲದಲ್ಲಿ ಬಿಡುವ ಇದು ಅಷ್ಟೊಂದು ಸಿಹಿಯಾಗಿರದೆ ತಿಳಿಸಿಹಿಯಾಗಿರುತ್ತದೆ.
ಕೇಪಲ ಮನೆಯ ಕಾಂಪೌಂಡಿನ ಒಳಗೆ ಬೆಳೆಸುವ ಗಿಡ. ಇದರ ಕೆಂಪಾದ ಹೂವು ಆಕರ್ಷಕವಾದದ್ದು. ಇದರ ಹಣ್ಣು ಕಪ್ಪಾಗಿರುತ್ತದೆ.
ಇನ್ನು ವರ್ಷವಿಡೀ ಬಿಡುವ ಪೇರಳೆ, ಸಪೋಟ, ಚಕ್ಕೋತಾ, ಪಪ್ಪಾಯ, ಬಾಳೆ, ಅನಾನಸ್, ಸೀತಾಫಲ ಹಣ್ಣುಗಳು ಮಾರುಕಟ್ಟೆಯಲ್ಲೂ ಲಭ್ಯ. ತೋಟದ ಒಳಗೆ ಬೆಳೆಸುವ ಕೋಕೊ ಹಣ್ಣಿನ ರುಚಿ ಆಸ್ವಾದಿಸಲೇ ಬೇಕು. ಸುಮಾರು ಅಂಗೈಯಷ್ಟುದ್ದದ ಈ ಹಣ್ಣಿನ ಮೇಲ್ಪದರ ಒಡೆದರೆ ಒಳಗೆ ಬಿಳಿಯಾದ ಹತ್ತಿಯ ಉಂಡೆಗಳಂತಹ ಉಂಡೆಗಳು ತಿನ್ನಲು ಸಿಹಿಯಾಗಿರುತ್ತವೆ.
ಕಾಕಿ ಹಣ್ಣು ತೋಟಗಳಲ್ಲಿ ಕಂಡುಬರುವ ಮಣಿಯ ಗಾತ್ರದ ಕಪ್ಪಗಿನ ಚಿಕ್ಕಚಿಕ್ಕ ಹಣ್ಣುಗಳು. ಕಾಕಿಹಣ್ಣಿನ ಜಾತಿಯ ಕೆಂಪಗಿನ ಹಣ್ಣುಗಳು ಹಿಮಾಲಯದಲ್ಲಿ ನೋಡಿದ್ದೆ. ಉತ್ತರಾಖಂಡದ ಪುಷ್ಪಕಣಿವೆಯಲ್ಲಿ ಇದೇ ಜಾತಿಯ ಕೆಂಪುಹಣ್ಣುಗಳು ತಿನ್ನಲು ಇದೇ ರುಚಿಯ ಹಣ್ಣುಗಳು ಅಲ್ಲಿ ಸಾಕಷ್ಟಿದ್ದವು. ಇಲ್ಲಿ ಕಪ್ಪುಬಣ್ಣದ ಕಾಕಿಹಣ್ಣನ್ನು ಕಾಣಬಹುದು.
ಸ್ಥಳದಿಂದ ಸ್ಥಳಕ್ಕೆ ಹಣ್ಣುಗಳ ಹೆಸರು ಬೇರೆಯಾಗಬಹುದು. ಆದರೆ ಸಿಹಿ-ಹುಳಿ ರುಚಿಗಳನ್ನು ಸವಿದ ನಾಲಿಗೆಗಳೇ ಭಾಗ್ಯವಂತವು. ಮಲೆನಾಡಿನಲ್ಲಿ ಮೊಗೆದು ತಿನ್ನುವಷ್ಟು ಇನ್ನೂ ಅನೇಕ ಹಣ್ಣುಗಳ ಸಂಪತ್ತಿದೆ.
ಮನೆಯಿಂದ ಬಸ್ಟ್ಯಾಂಡಿನವರೆಗೆ ನಡೆದುಹೋಗುವ ಕಾಲವೊಂದಿತ್ತು. ನಡೆದು ಹೊರಟರೆ ಸಾಕು, ದಾರಿಯುದ್ದಕ್ಕೂ ಕಾಡು ಹಣ್ಣುಗಳ ಪಾರಣೆ. ಈಗ ಹಳ್ಳಿಗೆ ರಸ್ತೆಗಳು ಬಂದಿವೆ. ಕಾಡು ದಾರಿ ಮಾಯವಾಗಿದೆ. ಮನೆಯ ಕಾಂಪೌಂಡಿನ ಒಳಗೆ ವಾಹನ ಹತ್ತಿದರೆ ಉದ್ದೇಶಿತ ಸ್ಥಳ ತಲುಪಿದಮೇಲೆಯೇ ಇಳಿಯುವುದು. ಹಾಗಾಗಿ ಹಣ್ಣುಗಳ ಸಹವಾಸವೂ ಹಳ್ಳಿಯಲ್ಲಿರುವವರಿಗೆ ಬೇಡವಾಗಿದೆ. ಸೇಬು, ದ್ರಾಕ್ಷಿ, ದಾಳಿಂಬೆಗಳು.. ಹಳ್ಳಿಯ ಚಹದಂಗಡಿಯಲ್ಲೂ ಮಾರಾಟಕ್ಕೆ ಸಿಗುತ್ತದೆ. ರಸ್ತೆ ನಿರ್ಮಾಣಕ್ಕೆ ಕಾಡುಗಳು ನಾಶವಾಗಿವೆ. ಹಣ್ಣುಗಳ ಸಹವಾಸದಲ್ಲಿ ಬದುಕಿದ ಹಲವು ಮಕ್ಕಳು ಪ್ರೌಢರಾಗಿದ್ದು ನಗರ ಸೇರಿದ್ದಾರೆ. ಹಣ ಕೊಟ್ಟರೆ ಸಾಕು, ಕಿಲೋಗಟ್ಟಲೆ ಕೊಳ್ಳಬಹುದಾದ ಲೇಬಲ್ ಅಂಟಿಸಿದ ರಂಗುರಂಗಿನ ಹಣ್ಣುಗಳ ಮಧ್ಯೆ ಈ ಹಣ್ಣುಗಳ ಸಹವಾಸ ಬೇಡವಾಗಿದೆ.
ಹಿಮಾಲಯದಲ್ಲಿ ಬೆಳೆದ ಹಣ್ಣನ್ನು ಕಿತ್ತು ಬಾಕ್ಸ್ ಗಳಿಗೆ ಸೇರಿಸಿ, ದಿನಗಟ್ಟಲೆ ವಾಹನದಲ್ಲಿ ರವಾನಿಸಿ ಮತ್ತೆ ವಿವಿಧ ರಾಸಾಯನಿಕಗಳಲ್ಲಿ ಮುಳುಗಿಸಿ, ಲೇಬಲ್ ಆಗಿ ಕಣ್ಣುಕುಕ್ಕುವ ಸೇಬು ಅತ್ಯಂತ ಆರೋಗ್ಯಕರ ಹಣ್ಣು ಎಂದೇ ಬಹಳಷ್ಟು ಜನರ ಭಾವನೆ. ಕಣ್ಣುಗಳಿಗೆ ಆಕರ್ಷಕವಾಗಿ ಕಾಣುವ ಹಣ್ಣುಗಳ ‘ಗುಣಮಟ್ಟ’ವನ್ನೇ ಶ್ರೇಷ್ಠ ಎನ್ನುವ ಕಾಲಮಾನದಲ್ಲಿ ನಾವು ಬದುಕುತ್ತಿದ್ದೇವೆ. ಕಾಡುಗಳೇ ನಾಶವಾಗುತ್ತಿರುವಾಗ ‘ಕಾಡುಹಣ್ಣು’ಗಳ ಸಂಭ್ರಮವೆಲ್ಲಿ? ಕಾಡುಹಣ್ಣುಗಳು ಮನುಷ್ಯನ ಗುರುತಿಸುವಿಕೆಯಿಂದ ದೂರ ಸಾಗುತ್ತಿವೆ.
- ವಿಕ್ರಮ್ ಜೋಯ್ಸ್ ಶಿವಮೊಗ್ಗ.
Facebook ಕಾಮೆಂಟ್ಸ್