X

ನೋವಿಲ್ಲದ ಗೆಲುವಿಲ್ಲ !

ಬದುಕಿನಲ್ಲಿ ಯಶಸ್ಸು ಪಡೆಯಬೇಕು ಎನ್ನುವುದು ಪ್ರತಿಯೊಬ್ಬ ಮನುಷ್ಯನ ಸಹಜ ಆಕಾಂಕ್ಷೆ . ಒಬೊಬ್ಬರಿಗೆ ಒಂದೊಂದು ಕ್ಷೇತ್ರದಲ್ಲಿ  ಯಶಸ್ಸು ಸಿಗುತ್ತದೆ . ಕೆಲವರು ಕಲಾವಿದರಾಗಿ ಯಶಸ್ಸು ಪಡೆದರೆ ಇನ್ನು ಕೆಲವರು ವೈದ್ಯರಾಗಿ , ಇಂಜಿನಿಯರ್ ಆಗಿ .. ಹೀಗೆ ಪಟ್ಟಿ ಬೆಳೆಯುತ್ತದೆ . ಕ್ಷೇತ್ರ ಯಾವುದೇ ಇರಲಿ ಯಶಸ್ಸು ಪಡೆಯಲು ಇರುವುದು ಒಂದೇ ದಾರಿ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕಷ್ಟಪಟ್ಟು ಹಿಡಿದ ದಾರಿಯಲ್ಲಿ ನಡೆಯುವುದು ಅದಾಗಿದೆ . ಇವತ್ತು ಎಲ್ಲಾ ಬೇಗ ಆಗಬೇಕು ಎನ್ನುವ ಜಗತ್ತಿನಲ್ಲಿ ಯಶಸ್ಸಿಗೆ ಕೂಡ ನೂರಾರು ಅಡ್ಡ ದಾರಿಗಳನ್ನ ಸೃಷ್ಟಿಸಲಾಗಿದೆ . ಆದರೇನು ನಿಜವಾದ ಆತ್ಮತೃಪ್ತಿ , ಸಾಧಿಸಿದ ಖುಷಿ ಪ್ರಾಮಾಣಿಕತೆಯಿಂದ ಮಾತ್ರ ಸಾಧ್ಯ . ಪ್ರಾಮಾಣಿಕತೆಯಿಂದ ಮಾತ್ರ ಪರಮಾರ್ಥ ಪಡೆಯಲು ಸಾಧ್ಯ . ಸತ್ಯದ ಹಾದಿ ಬಹಳ ಕಠಿಣ . ನಾವು ಅಂದುಕೊಂಡದ್ದನ್ನು ಸಾಧಿಸಲು ಈ ದಾರಿಯಲ್ಲಿ ಪಯಣ ಬಹಳ ಸಮಯ ತೆಗೆದುಕೊಳ್ಳುತ್ತದೆ . ಆದರೆ ಕೊನೆಯಲ್ಲಿ ಆ ಜಯ ಮನಸ್ಸಿನಲ್ಲಿ ಸಿಹಿಯನ್ನ ತುಂಬುತ್ತದೆ .  ಇದನ್ನ ನಮ್ಮ ಹಿರಿಯರು ಪ್ರಯತ್ನವೇ ಪರಮಾತ್ಮ , ಪ್ರಾಮಾಣಿಕತೆಯಿಂದ ಪರಮಾರ್ಥ ಎಂದರು. ಪರಮಾರ್ಥದ ದಾರಿಯಲ್ಲಿ ನೂರೆಂಟು ನೋವು ಅಡೆತಡೆಗಳು ಇವೆ . ಅವೆಲ್ಲವ ಮೀರಿದರೆ ಮಾತ್ರ ಜಯ ನಮ್ಮದು ಎಂದರು .
ಸ್ಪಾನಿಷ್ ಭಾಷೆಯನ್ನ ಸಂವಹನಕ್ಕೆ ಜಗತ್ತಿನ ಬಹುಪಾಲು ದೇಶಗಳು ಬಳಸುತ್ತವೆ . ಸ್ಪಾನಿಷ್ ೨೭ ದೇಶಗಳ ಅಧಿಕೃತ ಆಡುಭಾಷೆ . ಇಂಗ್ಲಿಷ್ ವಿಶ್ವಭಾಷೆಯಾಗಿ ಮನ್ನಣೆ ಪಡೆಯುವ ತನಕ ಜಗತ್ತಿನಲ್ಲಿ ಸ್ಪಾನಿಷ್ ಭಾಷೆ ಬಹಳ ಆಡಳಿತ ನಡೆಸಿದೆ . ಇಂದಿಗೂ ಇಂಗ್ಲಿಷ್ ಭಾಷೆಯ ಭುಜಕ್ಕೆ ಭುಜಕೊಟ್ಟು ನಿಲ್ಲುವುದು ಸ್ಪಾನಿಷ್ ಭಾಷೆ . ಸ್ಪಾನಿಷ್ ಬಳಸುವ ಜಗತ್ತಿನಲ್ಲಿ  ನೋವಿಲ್ಲದೆ ಗೆಲುವಿಲ್ಲ  ಎನ್ನುವುದಕ್ಕೆ No hay miel sin hiel ( ನೋ ಹಾಯ್ ಮಿಯಲ್ ಸಿನ್ ಹಿಯೆಲ್ ) ಎನ್ನುತ್ತಾರೆ .
ಜೇನುತುಪ್ಪ ಬೇಕಾದರೆ ಜೇನು ನೊಣಗಳಿಂದ ಕಚ್ಚಿಸಿಕೊಳ್ಳಬೇಕು , ಆ ನೋವ ಸಹಿಸಬೇಕು ಎನ್ನವುದು ಅರ್ಥ . ಕಹಿ ಇಲ್ಲದೆ ಸಿಹಿ ಇಲ್ಲ ಎನ್ನುವ ಭಾವನೆಯನ್ನ ಸಮರ್ಥವಾಗಿ ಕೇವಲ ಒಂದೆರೆಡು ಪದಗಳಲ್ಲಿ ಅಂದಿನ ಹಿರಿಯರು ಕಟ್ಟಿಕೊಟ್ಟಿದ್ದಾರೆ . ನಾವು ನೋಡುತ್ತಾ ಬಂದಿರುವ ಎಲ್ಲಾ ಗಾದೆ ಅಥವಾ ಆಡುಮಾತುಗಳಂತೆ ಇಲ್ಲಿನ ಅರ್ಥವು ಕೂಡ ಅನುರುಣಿಸುವುದು ಅದೇ ಅರ್ಥ . ಅಡ್ಡದಾರಿಯಿಂದ ಗೆಲುವು ಸಾಧಿಸಲು ಸಾಧ್ಯವಿಲ್ಲ . ನಮ್ಮ ಗೆಲುವಿಗೆ ಶ್ರಮಿಸಬೇಕು . ನೋವಿಲ್ಲದ ಗೆಲುವಿಲ್ಲ .. ಹೀಗೆ ಇಂತಹ ಹಲವು ಮಾತುಗಳನ್ನ ಈ ಪದಗಳು ಅಡಗಿಸಿಕೊಂಡಿವೆ .
ಇನ್ನು ಇಂಗ್ಲಿಷ್ ಭಾಷಿಕರು ಕೂಡ ಅಷ್ಟೇ no bees no honey ಎನ್ನುತ್ತಾರೆ . ಜೇನುನೊಣವಿಲ್ಲದೆ ಜೇನುತುಪ್ಪವಿಲ್ಲ ಎನ್ನುವುದು ಅರ್ಥ .  no mill no meal ಕಾರ್ಖಾನೆ ಇಲ್ಲ ಊಟವಿಲ್ಲ ಎನ್ನವುದು ಅರ್ಥ . no pain no gain, there is no rose without a thorn, there’s always a catch. ಹೀಗೆ ಹಲವು ರೀತಿಯಲ್ಲಿ ಹೇಳಿದರೂ ಅವೆಲ್ಲದರ ಮೂಲ ಉದ್ದೇಶ,  ಮೂಲ ಅರ್ಥ ಮಾತ್ರ ಒಂದೇ .
ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ : 
No  : ಇಲ್ಲ ಎನ್ನುವುದು ಅರ್ಥ . ನೋ ಎನ್ನುವುದು ಉಚ್ಚಾರಣೆ . 
 
hay  : ಇದೆ , ಇದೆಯಾ  ಎನ್ನುವ ಅರ್ಥ . ಹಾಯ್ ಎನ್ನುವುದು ಉಚ್ಚಾರಣೆ . 
 
 miel   : ಜೇನುತುಪ್ಪ ಎನ್ನುವುದು ಅರ್ಥ . ಮಿಯಲ್ ಎನ್ನುವುದು ಉಚ್ಚಾರಣೆ . 
 sin   : ವಿಥೌಟ್ , ಅದಿಲ್ಲದ ಎನ್ನುವ ಅರ್ಥ . ಸಿನ್ ಎನ್ನುವುದು ಉಚ್ಚಾರಣೆ . 
 hiel   : ಕಹಿ ., ಮನಸ್ಸಿಗೆ ನೋವುಂಟು ಮಾಡುವುದು . ಕಸಿವಿಸಿ ಮಾಡುವುದು .. ಇತ್ಯಾದಿ ಅರ್ಥ ಸಮಯಕ್ಕೆ ತಕ್ಕಂತೆ ಬದಲಾಗುತ್ತದೆ . ಹಿಯೆಲ್ ಎನ್ನುವುದು ಉಚ್ಚಾರಣೆ . 

Facebook ಕಾಮೆಂಟ್ಸ್

Rangaswamy mookanahalli: ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .
Related Post