ಈ ಜಾಗಕ್ಕೆ ಬರುವವರೆಲ್ಲರೂ ಮತಧರ್ಮ ಮೀರಿ ತಾವು ಅನುಭವಿಸುತ್ತಿರುವ ರೋಗದ ಬಗ್ಗೆ ಹೇಳಿಕೊಂಡು ಆ ನೋವಿಗೆ ಶಮನ ಪಡೆದುಕೊಳ್ಳುತ್ತಾರೆ. ಇದು ದರ್ಗಾ, ತಾವ್ಯಾಕೆ ಇಲ್ಲಿಗೆ ಬಂದು ಬೇಡಬೇಕು ಎಂದೇನೂ ಯೋಚಿಸುವುದಿಲ್ಲ. ದರ್ಗಾದ ಒಳಗೆ ಕೂತಿರುವ ವೈದ್ಯ ಸಹ ಈತ ಹಿಂದು, ನಾನ್ಯಾಕೆ ಗುಣಪಡಿಸಲಿ ಎಂದು ಯೋಚಿಸುವುದಿಲ್ಲ. ಅಂತಹ ಸ್ಥಳವೊಂದು ಹೈದ್ರಾಬಾದಿನಲ್ಲಿದೆ.
ಯುನಾನಿ ವೈದ್ಯ ಹಕೀಮ್ ಬಾಬಾ ಸೈಯದ್ ನಿಜಾಮುದ್ದೀನ್ ಅಹಮದ್ ಅವರು ಮರಣಹೊಂದಿ ಸುಮಾರು ನಾಲ್ಕು ಶತಮಾನಗಳೇ ಕಳೆದಿವೆ. ಆದರೆ ಹೈದ್ರಾಬಾದಿನ ಜ್ಯುಬಿಲಿ ಹಿಲ್ಸ್‍ನಲ್ಲಿರುವ ಫಿಲ್ಮ್ ನಗರದಲ್ಲಿರುವ ಆತನ ಗೋರಿ ಮಾತ್ರ ಸದಾ ಜನಸಂದಣಿಯಿಂದ ತುಂಬಿಕೊಂಡಿರುತ್ತದೆ. ಬರುವವರೆಲ್ಲರೂ ತಮ್ಮ ರೋಗ ಗುಣವಾಗಲಿ ಎಂದು ಈ ಯುನಾನಿ ಬಾಬಾನ ಗೋರಿಗೆ ಬೇಡಿಕೊಳ್ಳುತ್ತಾರೆ. ಜ್ಯುಬಿಲಿ ಹಿಲ್ಸ್‍ನಂತಹ ದುಬಾರಿ ಮಾರುಕಟ್ಟೆಯ ಗುಡ್ಡದ ಬದಿಯಲ್ಲಿರುವ ಗೋಡೆಯಿಂದ ಕೂಡಿದ ಗೋರಿಯ ಸಂಕೀರ್ಣವು ಹೈದ್ರಾಬಾದಿನ ಇತಿಹಾಸದ ಒಂದು ಸುಂದರ ನೆನಪನ್ನು ಸದಾ ತರುತ್ತಿರುತ್ತದೆ. ಈ ಗೋಡೆಯ ಹಿಂಬದಿಗೆ ಒಂದು ದರ್ಗಾ, ಒಂದು ಸಮಾಧಿ ಇದ್ದು, ಹಕೀಮ್ ಬಾಬಾ ಚಿಕಿತ್ಸೆ ನೀಡುತ್ತಿದ್ದ ಒಂದು ಶಲ್ಟರ್ ಇದೆ. ಸುತ್ತ ಆರು ಎಕರೆ ಜಾಗ ಹರಡಿಕೊಂಡಿದೆ.
ಇತಿಹಾಸಕಾರರು ಹೇಳುವ ಪ್ರಕಾರ, ಹಕೀಮ್ ಬಾಬಾ ಮಹಾರಾಷ್ಟ್ರದಿಂದ ದಕ್ಷಿಣಕ್ಕೆ ಕ್ರಿ.ಶ. 1635ರಲ್ಲಿ ಕುತುಬ್ ಶಾಹಿ ರಾಜರ ಆಮಂತ್ರಣದ ಮೇರೆಗೆ ಬಂದನಂತೆ. ಆತನ ಕರುಣಾಮಯ ಸ್ವಭಾವ ಹಾಗೂ ಚಿಕಿತ್ಸೆಯ ವಿಷಯದಲ್ಲಿ ಆತನ ಬುದ್ಧಿವಂತಿಕೆ ಎರಡೂ ಆತನನ್ನು ಎಲ್ಲರೂ ಗೌರವಿಸುವಂತೆ ಮಾಡಿತ್ತು. ಆತ ಎಂತಹ ರೋಗವನ್ನೂ ಗುಣಪಡಿಸುವಂತವನಾಗಿದ್ದು ಆತನ ರೋಗಿಗಳಲ್ಲಿ ರಾಜಮನೆತನದವರೂ, ಜನಸಾಮಾನ್ಯರೂ ಇದ್ದದ್ದು ವಿಶೇಷ.
ಹೈದ್ರಾಬಾದಿನಲ್ಲಿ ಬಾಬಾ ಹಾಗೂ ಆತನ ಅನುಯಾಯಿಗಳು ಸೇರಿ 300 ಎಕರೆ ಜಾಗದ ಅರಣ್ಯದಲ್ಲಿ ಒಂದು ಶೆಲ್ಟರ್ ಕಟ್ಟಿಕೊಂಡು ಅಲ್ಲಿ ಚಿಕಿತ್ಸೆ ನಡೆಸುತ್ತಿದ್ದರಂತೆ. ತುಂಬ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಗೋಲ್ಕಂಡದ ರಾಜ ಕುತುಬ್ ಷಾನ ರೋಗವನ್ನು ಗುಣಪಡಿಸಿದ ಬಳಿಕ ಬಾಬಾನ ಜನಪ್ರಿಯತೆ ಹೆಚ್ಚಿತು.
ಹಕೀಮ್ ಬಾಬಾನ ಮರಣಾನಂತರ ಕುತುಬ್ ಶಾಹಿ ರಾಜರು ಅವರಿಗಾಗಿ ಗೋರಿ ಕಟ್ಟಿ ಅದನ್ನು ದರ್ಗಾವನ್ನಾಗಿ ಅಭಿವೃದ್ಧಿಪಡಿಸಿದರು. ಸಮಾಧಿಯನ್ನೂ ಹತ್ತಿರದಲ್ಲೇ ಕಟ್ಟಿಸಿದ ಬಳಿಕ ಜನರು ಅಲ್ಲಿ ಪ್ರಾರ್ಥನೆ ಮಾಡತೊಡಗಿದರು.
ಮನೆಕೆಲಸ ಮಾಡಿಕೊಂಡಿರುವ ಲಕ್ಷಮ್ಮನ ಪತಿಗೆ ಹುಷಾರಿಲ್ಲ. ಆಕೆ ಹೇಳುತ್ತಾಳೆ, “ನನ್ನ ಗಂಡನಿಗೆ ಹುಷಾರಿಲ್ಲ. ಹಾಗಾಗಿ ಅವರಿಗೆ ಗುಣವಾಗಲಿ ಎಂದು ಇಲ್ಲಿಗೆ ಬಂದು ನಾನು ಪ್ರಾರ್ಥಿಸುತ್ತೇನೆ.” ಇಲ್ಲಿಗೆ ಎಲ್ಲ ಮತಧರ್ಮದವರೂ ಬಂದು ತಮ್ಮ ಕಾಯಿಲೆ ಗುಣವಾಗಲಿ ಎಂದು ಪ್ರಾರ್ಥಿಸಿಕೊಳ್ಳುತ್ತಾರೆ.
“ಹಕೀಂ ಬಾಬಾರವರಲ್ಲಿ ನಂಬಿ ಬೇಡಿಕೊಂಡ ನಂತರ ಪವಾಡವೇ ಜರಗಿದೆ” ಎನ್ನುತ್ತಾರೆ ದರ್ಗಾವನ್ನು ನೋಡಿಕೊಳ್ಳುತ್ತಿರುವ ಅಲಿ. “ಬಹಳಷ್ಟು ಜನ ತನ್ನ ಬಳಿ, ತಮಗೆ ಇಲ್ಲಿಗೆ ಬಂದು ಬೇಡಿಕೊಂಡನಂತರ ತಮ್ಮ ಸಮಸ್ಯೆ ದೂರವಾಗಿದೆ ಎಂದು ಹೇಳಿದ್ದಾರೆ” ಎನ್ನುತ್ತಾನೆ ಅಲಿ.
ಈ ಸಮಾಧಿ ಹಾಗೂ ದರ್ಗಾವು ಕುತುಬ್ ಶಾಹಿಯ ದರ್ಗಾದ ವಾಸ್ತುಶಿಲ್ಪವನ್ನೇ ಹೋಲುತ್ತದೆ. ಗುಮ್ಮಟ ಹಾಗೂ ಕೆಳಭಾಗದ ಆಕಾರವು ಏಳು ಭವ್ಯ ಗುಮ್ಮಟಗಳನ್ನೇ ಹೋಲುತ್ತದೆ. ಕುತುಬ್ ಶಾಹಿ ಕಟ್ಟಿಸಿದ ಇನ್ನೊಂದು ಗುಮ್ಮಟವು ಈ ದರ್ಗಾದಿಂದ ಸುಂದರವಾಗಿ ಕಾಣುತ್ತದೆ.
ಈ ದರ್ಗಾಕ್ಕೆ ತಮ್ಮ ರೋಗ ಗುಣವಾಗಲೆಂದು ಭೇಟಿ ನೀಡುವವರ ಜೊತೆಗೆ, ಈ ಸ್ಥಳಕ್ಕೆ ಶಾಂತಿಯನ್ನು ಅರಸಿಯೂ ಬರುವವರಿದ್ದಾರೆ. “ಹೊರಗಿನ ಜಗತ್ತು ಎಷ್ಟು ಗೊಂದಲದಿಂದ ಕೂಡಿದ್ದರೂ ಈ ಸ್ಥಳ ಮಾತ್ರ ಒಂದು ಬಗೆಯ ಶಾಂತಿಯಿಂದ ಕೂಡಿದೆ” ಎನ್ನುತ್ತಾನೆ ಅಲ್ಲೆ ಹುಟ್ಟಿಬೆಳೆದ ಖಾಸಗಿ ನೌಕರನಾದ ಯೂಸೂಫ್ ಎಂಬಾತ. “ಇಲ್ಲಿಗೆ ಸುಮ್ಮನೆ ಭೇಟಿ ನೀಡುವಷ್ಟೇ, ಇಲ್ಲಿನ ಪಕ್ಷಿಗಳಿಗೆ ತಿನ್ನಿಸುವುದೆಂದರೂ ನನಗೆ ಖುಷಿ ನೀಡುವ ವಿಚಾರ. ಅವು ಇಲ್ಲೇ ತಮ್ಮ ಮನೆ ಕಟ್ಟಿಕೊಂಡು ಈ ತಾಣವನ್ನು ಇನ್ನಷ್ಟು ಮುದಗೊಳಿಸಿವೆ” ಎನ್ನುವುದು ಯುಸೂಫ್‍ನ ಮನದಾಳದ ಮಾತು.
– ಮೂಲ ಲೇಖನ: ರಾಹುಲ್ ದೇವುಲಪಲ್ಲಿ (‘ದ ವೀಕ್’ ಪತ್ರಿಕೆಯಲ್ಲಿ ಬಂದ ಲೇಖನ)
– ಕನ್ನಡಕ್ಕೆ ಅನುವಾದ: ಸರೋಜಾ ಪ್ರಭಾಕರ್
Facebook ಕಾಮೆಂಟ್ಸ್