X

ಮತದಾನದ ಪರಿಣಾಮಕ್ಕೂ ನೇರ ಹೊಣೆಗಾರ ಮತದಾರರೇ ಅಲ್ಲವೇ

ಪ್ರಜೆಗಳೇ ಪ್ರಭುಗಳು ಎಂಬ ಧ್ಯೇಯವನ್ನು ಹೊಂದಿದ ನಮ್ಮ ಭಾರತದ ಆಡಳಿತ ವ್ಯವಸ್ಥೆಯಲ್ಲಿ ನಿಜವಾಗಿಯೂ ಪ್ರಜೆಗಳು ಪ್ರಭುಗಳೇ? ಎಂದು ಕೇಳಿದರೆ ಪ್ರಶ್ನೆಯೇ ಇಂದು ಹಾಸ್ಯಾಸ್ಪದವಾದೀತು ಅಥವಾ ಅದಕ್ಕೆ ಕೊಡುವ ಉತ್ತರವೂ ಹಾಸ್ಯಾಸ್ಪದವಾದೀತು. ಭಾರತೀಯನೊಬ್ಬ ೧೮ನೇ ವಯಸ್ಸಿಗೆ ಕಾಲಿಡುತ್ತಿದ್ದಂತೆ ಮತದಾನದ ಅವಕಾಶ ಪಡೆಯುತ್ತಾನೆ. ಅಂದರೆ ಆತ ಸಮರ್ಥನಾಯಕನ್ನು ಆರಿಸುವಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾನೆ ಎಂಬರ್ಥ. ಆದರೆ ಆಡಳಿತಾಕಾಂಕ್ಷಿಯಾಗಿ ಚುನಾವಣೆಗೆ ನಿಂತ ಅಭ್ಯರ್ಥಿ ಎಷ್ಟರಮಟ್ಟಿಗೆ ಸಮರ್ಥ? ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬ ಮತದಾರ ಇಂದು ಚಿಂತಿಸಬೇಕಾದ ವಿಷಯ. ಯಾಕೆಂದರೆ ಆ ಅಭ್ಯರ್ಥಿಗೆ ಯಾವುದೇ ನಿರ್ದಿಷ್ಟವಾದ ಆಡಳಿತಾತ್ಮಕವಾದ, ಸಾಂವಿಧಾನಿಕವಾದ ಶೈಕ್ಷಣಿಕ ಅರ್ಹತೆಯ ಅಗತ್ಯ ಇಲ್ಲ.

“ಇಲ್ಲ, ಇದೆಲ್ಲ ಚಿಂತಿಸಬೇಕಾದ ವಿಷಯವೇ ಅಲ್ಲ. ರಾಜಕೀಯ ಪಕ್ಷಗಳು ಪ್ರಣಾಳಿಕೆಯ ಪ್ರತಿಯನ್ನು ನಮ್ಮ ಕೈಗಿಡುತ್ತಾರೆ, ಪ್ರಚಾರ ಭಾಷಣಗಳಲ್ಲಿ ಎಲ್ಲವನ್ನೂ ತಿಳಿಸುತ್ತಾರೆ. ಅಲ್ಲದೇ ಈಗಂತೂ ವಾಟ್ಸಾಪ್, ಫೇಸ್ಬುಕ್ ಮೊದಲಾದ ಸಾಮಾಜಿಕ ಮಾಧ್ಯಮಗಳ ಮೂಲಕ ಎಲ್ಲಾ ಸಂಗತಿಗಳು ಜನರನ್ನು ಸೇರುತ್ತವೆ. ಹಾಗಾಗಿ ಮತದಾರ ಸ್ಪಷ್ಟವಾಗಿ ಯಾರಿಗೆ ಮತ ನೀಡಬೇಕೆಂಬುದನ್ನು ನಿರ್ಧರಿಸಬಹುದು” ಎಂದು ಯೋಚಿಸುವವರು ಹಲವರಿದ್ದಾರೆ. ಅದೇ ಇನ್ನೊಂದೆಡೆ “ರಾಜಕಾರಣಿಯು ಆಡಳಿತಕ್ಕೆ ಸಂಬಂಧಪಟ್ಟ ಶಿಕ್ಷಣವನ್ನು ಹೊಂದಿರಬೇಕು” ಎಂಬ ಮಾತುಗಳೂ ಕೇಳಿ ಬರುತ್ತವೆ.

ಅತ್ಯುನ್ನತ ಶಿಕ್ಷಣ ಪಡೆದ ಮತದಾರರೂ ಮಾತೃಭಾಷೆಯಲ್ಲಿರುವ ಪತ್ರಗಳನ್ನೂ ಓದಲು ಬಾರದವನಿಗೆ ಓಟು ಹಾಕುವ ಪರಿಸ್ಥಿತಿ ನಮ್ಮಲ್ಲಿದೆ. ಇದು ಗ್ರಾಮ ಪಂಚಾಯತ್ ಮಟ್ಟದಿಂದಲೇ ಆರಂಭವಾಗುತ್ತದೆ. ಇದಕ್ಕೆ ಕಾರಣವನ್ನು ಹುಡುಕುತ್ತ ಹೋದರೆ ಅದರ ಮೂಲ ಅಡಗಿರುವುದು ಮತದಾರಲ್ಲೇ. ಕೆಲವುಕಡೆ ಯಾವುದೋ ಒಂದು ಪಕ್ಷಕ್ಕೇ ಮತಹಾಕಬೇಕೆಂಬುದು ತಮ್ಮ ಕುಟುಂಬದ ಸಂಪ್ರದಾಯವೋ ಎಂಬಂತೆ ಅಭ್ಯರ್ಥಿಯ ಅರ್ಹತೆಯನ್ನು ಪರಿಗಣಿಸದೆ ಆ ಪಕ್ಷಕ್ಕೆ ಮಾತ್ರ ಮತ ಹಾಕುವ ಮೂಢನಂಬಿಕೆ ಇಂದಿಗೂ ಇದೆ. ಆದರೆ ಮತದಾರ ದೇಶದಲ್ಲಿ ಉತ್ತಮ ಆಡಳಿತವನ್ನು ಕಾಣಬೇಕಾದರೆ ಇಂತಹ ಅಸಂಬದ್ಧ ನಂಬಿಕೆಗಳಿಂದ ಹೊರಬರಲೇ ಬೇಕು.

ಹಣದ ಮತ್ತು ಹೆಂಡದ ಆಮಿಷಕ್ಕೆ ಒಳಗಾಗಿ ತಮ್ಮ ಅಮೂಲ್ಯವಾದ ಮತವನ್ನು ಅಸಮರ್ಥನಿಗೆ ನೀಡುವ ಮತದಾರರ ಸಂಖ್ಯೆ ಇಂದು ಹೆಚ್ಚಿದೆ; ಹೆಚ್ಚುತ್ತಲೂ ಇದೆ. ಇದೊಂದು ನಮ್ಮ ದೇಶದ ಮತ್ತು ಪ್ರಜಾತಂತ್ರದ ದೌರ್ಬಲ್ಯವೇ ಸರಿ. ಇನ್ನೂ ಆಘಾತಕಾರಿ ಬೆಳವಣಿಗೆಯೆಂದರೆ ರಾಜಕೀಯದಲ್ಲಿ ಸೇರಿಕೊಂಡಿರುವ ಧರ್ಮರಾಜಕಾರಣ. ನಮ್ಮದು ಜ್ಯಾತ್ಯಾತೀತ ರಾಷ್ಟ್ರವೆಂದು ಹೇಳಿಕೊಳ್ಳುತ್ತಲೇ ಜಾತಿ-ಧರ್ಮಗಳನ್ನೇ ಮೂಲ ದಾಳವಾಗಿಸಿಕೊಂಡು ಮತ ಕೇಳುವ ವ್ಯವಸ್ಥೆ ವ್ಯವಸ್ಥಿತವಾಗಿ ಜಾರಿಯಲ್ಲಿದೆ. ಇನ್ನು ಪಕ್ಷದ ಕಾರ್ಯಕರ್ತರೂ ಕೂಡ ತಾವು ಕಾರ್ಯಕರ್ತರಾಗಿರುವ ಪಕ್ಷಕ್ಕೆ ನಿಷ್ಠೆಯನ್ನು ತೋರಿಸಿದಷ್ಟೇ ಮತದಾರನ ಪರವಾಗಿಯೂ ಯೋಚಿಸಬೇಕು. ಯಾಕೆಂದರೆ ಪಕ್ಷದ ಕಾರ್ಯಕರ್ತರೆಲ್ಲರೂ ಮತದಾರರೇ. ಇವತ್ತಿಗೂ ತಾವು ಮತನೀಡುವ ಅಭ್ಯರ್ಥಿಯ ಕೂಲಂಕುಷ ಪರಿಚಯ ಅದೆಷ್ಟೋ ಮತದಾರರಿಗೆ ಇರುವುದಿಲ್ಲ. ಮತದಾರರಿಗಷ್ಟೇ ಅಲ್ಲ ಆ ಪಕ್ಷದ ಕಾರ್ಯಕರ್ತನಿಗೂ ತಿಳಿಯದಿರುವಂತಹ ಪರಿಸ್ಥಿತಿಯೂ ಇದೆ. ಯಾಕೆಂದರೆ ಆ ಕಾರ್ಯಕರ್ತ ಚುನಾವಣಾ ಸಂದರ್ಭಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾನೆ. ನಂತರ ಪಕ್ಷಕ್ಕೂ ಆತನಿಗೂ ಯಾವುದೇ ಸಂಬಂಧವಿರುವುದಿಲ್ಲ. ಅಂತೆಯೇ ಒಮ್ಮೆ ಮತ ಚಲಾಯಿಸಿಯಾದ ಮೇಲೆ ರಾಜಕಾರಣಿಗಳೂ ಪಕ್ಷದ ಕಾರ್ಯಕರ್ತರೂ ದೂರ; ಮತದಾರರಂತೂ ಇನ್ನೂ ದೂರ.

ಬದಲಾಗಬೇಕಿದೆ – ಚುನಾವಣೆಯ ಹಾದಿ

ಹೌದು, ಎಲ್ಲವೂ ಬದಲಾಗಬೇಕಾದ ಅನಿವಾರ್ಯತೆ ಇದೆ. ರಾಜಕೀಯ ಪಕ್ಷಗಳ ಮತ್ತು ಅದರ ಎಲ್ಲ ಸದಸ್ಯರ ಅಲ್ಲದೆ ತಮ್ಮತಮ್ಮ ಕೇತ್ರದ ಅಭ್ಯರ್ಥಿಯ ಸಂಪೂರ್ಣವಾದ ಪರಿಚಯ ಮತದಾರ ಹೊಂದಿರಬೇಕು. ರಾಜಕಾರಣಿ ಹಾಗೂ ಪಕ್ಷದ ಕಾರ್ಯಕರ್ತರ ನಡುವೆ ಒಂದು ಪಾರದರ್ಶಕ ಸಂಬಂಧ ಏರ್ಪಡಬೇಕಾದ ಅಗತ್ಯವೂ ಇದೆ. ಅಲ್ಲ್ದೆ ಈ ಸಂಬಂಧ ಚುನಾವಣೆಯ ನಂತರವೂ ಮುಂದುವರಿಯಬೇಕು.  ಯಾವುದೇ ಪಕ್ಷವಿದ್ದರೂ ಅದೊಂದು ಕುಟುಂಬ ಇದ್ದಂತೆ ಕುಟುಂಬವೊಂದರಲ್ಲಿ ಒಬ್ಬ ಮಾಡುವ ತಪ್ಪಿನಿಂದಾಗಿ ಆ ಇಡೀ ಕುಟುಂಬಕ್ಕೇ ಹೇಗೆ ಕಳಂಕ ತಗುಲುತ್ತದೆಯೋ ಹಾಗೇ ಪಕ್ಷಗಳಿಗೂ ಇದು ಅನ್ವಯಿಸುತ್ತದೆ. ಈ ಯುಗದಲ್ಲಿ ಪರಿಶುದ್ಧ ರಾಜಕಾರಣಿಗಳನ್ನು ದುರ್ಬೀನು ಹಿಡಿದು ಹುಡುಕಬೇಕಾಗೀತು. ಆದರೆ ಪಕ್ಷಗಳು ಕೆಲವೊಂದು ಸಂಗತಿಗಳಲ್ಲಿ ಬದಲಾವಣೆ ಮಾಡಿಕೊಂಡಾಗ ಮತದಾರ ಉತ್ತಮ ಆಡಳಿತಗಾರರನ್ನು ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಬಹುದು.

  • ತಮ್ಮ ಕ್ಷೇತ್ರದಲ್ಲಿ ಚುನಾವಣಾ ಸ್ಪರ್ಧಿಯಾಗಿ ನಿಂತವರ ಮುಖ್ಯವಾಗಿ ಶೈಕ್ಷಣಿಕ ಅರ್ಹತೆಯನ್ನು ಮತ್ತು ರಾಜಕೀಯ ಅನುಭವ-ಸಾಮರ್ಥ್ಯವನ್ನು ಪ್ರದರ್ಶಿಸುವ ಕರಪತ್ರಗಳು ಮತದಾರನಿಗೆ ತಲುಪಬೇಕು. ಅಲ್ಲದೆ ಅವರು ನೈತಿಕವಾಗಿಯೂ ಎಷ್ಟು ನಿಷ್ಠರು ಎಂಬುದನ್ನೂ ತಿಳಿಸಬೇಕು. ಇವೆಲ್ಲವೂ ಆರ್.ಟಿ.ಐ.ನಲ್ಲಿ ದಾಖಲಾಗಿರಬೇಕು. ಇವೆಲ್ಲವೂ ಪಾರದರ್ಶಕವಾಗಿರಬೇಕು. ಎಷ್ಟರ ಮಟ್ಟಿಗೆ ಸತ್ಯವಿರುತ್ತದೆಂಬ ಪ್ರಶ್ನೆ ಮತ್ತೆ ಉತ್ತರವಿಲ್ಲದೆ ಕಾಡುತ್ತದೆ.
  • ಚುನಾವಣೆಯ ಮುಂಚೆಯೇ ನಮ್ಮ ರಾಜ್ಯದ ಮುಖ್ಯಮಂತ್ರಿಯಾರಾಗುತ್ತಾರೆಂಬುದು ಮತದಾರನಿಗೆ ತಿಳಿಸಬೇಕು. ಪ್ರತಿಯೊಂದು ಪಕ್ಷದಲ್ಲೂ ಉತ್ತಮ ಆಡಳಿತಗಾರ ಇದ್ದೇ ಇರುತ್ತಾನೆ. ಅಂತಹ ವ್ಯಕ್ತಿಯನ್ನೇ ಪಕ್ಷದವರೇ ಆರಿಸಿ ಮೇಲ್ಕಂಡಂತೆ ಅವರ  ಸಂಪೂರ್ಣವಾದ ಮಾಹಿತಿಯನ್ನು ಜನರೆದುರು ತೆರೆದಿಡಬೇಕು.
  • ಕಾರ್ಯಕರ್ತರು ಕೇವಲ ದುಡ್ಡಿಗೋಸ್ಕರ ಕೆಲಸಮಾಡದೆ ಪ್ರಾಮಾಣಿಕವಾಗಿ ಮತದಾರನಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಇವರದ್ದು ಪಕ್ಷದ ಪ್ರಣಾಳಿಕೆಯನ್ನು ಹಿಡಿದು ಮನೆಮನೆಗೆ ತೆರಳಿ ಮನವೊಲಿಸುವ ಕಾರ್ಯ ಮೂಲ ಕೆಲಸವಾಗಿದ್ದರೂ ಇವರನ್ನೇ ನಂಬಿ ಜನ ಮತಹಾಕುವುದೂ ಇದೆ. ಆದರೆ ಚುನಾವಣೆ ಮುಗಿಯುತ್ತಿದ್ದಂತೆ ಇವರೆಲ್ಲ ಮಾಯವಾಗಿ ಬಿಡುತ್ತಾರೆ; ಎಲ್ಲವನ್ನೂ ಮರೆತೂ ಬಿಡುತ್ತಾರೆ. ಆದರೆ ಹಾಗಾಗಬಾರದು. ಜನರ ಕುಂದು-ಕೊರತೆಯನ್ನು ಗೆದ್ದ ಪಕ್ಷದ ಕಾರ್ಯಕರ್ತರು ಪಕ್ಷಕ್ಕೂ ಪಕ್ಷದಿಂದ ಆಡಳಿತ ವ್ಯವಸ್ಥೆಗೂ ತಲುಪಿಸಿ ಅದರ ನಿವಾರಣೆಗೆ ಮುಂದಾಗಬೇಕು.
  • ಅಬ್ಬರದ ಪ್ರಚಾರಗಳು ಪಕ್ಷ-ಪ್ರತಿಪಕ್ಷಗಳ ಕೆಸರೆರಚಾಟಗಳು ಯಾವತ್ತೋ ಹಳಸಿದ ಸಂಗತಿಗಳು. ಅವನ್ನೇ ಪದೇಪದೇ ಚುನಾವಣೆ ಹತ್ತಿರಕ್ಕೆ ಬಂದಾಗ ಬೀದಿಬೀದಿಯಲ್ಲಿ ಎಸೆಯುವುದರಿಂದ ಪ್ರಯೋಜನವಿಲ್ಲ. ಗ್ರಾಮ ಪಂಚಾಯ್ತಿಯಿಂದಲೇ ಪ್ರತಿ ಊರಿನ ಅಭಿವೃದ್ಧಿಗೆ ಬೇಕಾದ ಅಂಶಗಳ ಪಟ್ಟಿಮಾಡುವುದರ ಜೊತೆಗೆ ಮುಂದೆ ಆಡಳಿತಾವಧಿಯಲ್ಲಿ ಅವುಗಳನ್ನು ಪೂರೈಸುವ ಯೋಜನೆಯ ಸಂಪೂರ್ಣ ಚಿತ್ರಣವನ್ನು ಪ್ರತಿಯೊಂದು ಪಕ್ಷವೂ ಮಾಡಿ ಮತದಾರರ ಮುಂದಿಡಬೇಕು. ಅದರ ಸತ್ಯಾಸತ್ಯತೆಗಳನ್ನು ಪರಿಶೀಲಿಸಬೇಕಾದದು ಮತದಾರನ ಹೊಣೆಗಾರಿಕೆಯಾಗಿರುತ್ತದೆ.
  • ಚುನಾವಣೆ ಮತ್ತು ಆಡಳಿತವೆಂಬುದು ದುಡ್ಡು ಹಾಕಿ ದುಪ್ಪಟ್ಟು ದುಡ್ಡು ಮಾಡುವ ವಾಣಿಜ್ಯ ವ್ಯವಹಾರವಾಗಬಾರದು. ಪಕ್ಷದ ಸಂಪತ್ತು ಮತ್ತು ಖರ್ಚುಗಳನ್ನೂ ಮತದಾರರ ಮುಂದಿಡಬೇಕಾದ ಅಗತ್ಯವಿದೆ.
  • ಹಣ ಮತ್ತು ಹೆಂಡದ ಅಥವಾ ಇನ್ನಿತರ ವಸ್ತುಗಳನ್ನು ಮತದಾರರಿಗೆ ನೀಡೂವ ಮೂಲಕ ಮತಗಿಟ್ಟಿಸುವ ರೀತಿಗೆ ರಾಜಕಾರಣಿಗಳನ್ನು ಹಳಿದು ಪ್ರಯೋಜನವಿಲ್ಲ. ಯಾಕೆಂದರೆ ಸ್ವತಃ ಮತದಾರನೇ ಅವನ್ನೆಲ್ಲ ಪಡೆದುಕೊಂಡು ಏನನ್ನೂ ಯೋಚಿಸದೆ ತನ್ನ ಮತವನ್ನು ಚಲಾಯಿಸುತ್ತಾನೆ. ಇದಕ್ಕೆಲ್ಲ ಹೊಣೆಗಾರ ಮತದಾರನೇ. ಮತದಾರರು ಯಾವುದ ಹಾಲು ಯಾವುದು ಹಾಲಾಹಲ ಎಂದು ತಿಳಿಯದಷ್ಟು ದಡ್ಡರಲ್ಲ. ಆದರೂ ಆಮಿಷಕ್ಕೆ ಕೈಚಾಚಿ  ಅಸಮರ್ಪಕ ಅಭ್ಯರ್ಥಿಯನ್ನೂ ಆಯ್ಕೆ ಮಾಡುವುದು ಎಂದಿಗೂ ಕ್ಷಮಾರ್ಹವಲ್ಲ.

ಏನೇ ಇದ್ದರೂ ಅದರ ಪರಿಣಾಮವನ್ನು ಅನುಭವಿಸುವವರು ಮತದಾರರೇ. ಒಂದು ಓಟನ್ನು ಯೋಚಿಸದೆ ಒತ್ತಿದರೆ ಮುಂದೆ ಅದರಿಂದಾಗುವ  ತೊಂದರೆಗೆ ಸಿಲುಕುವವರು ಮತದಾರರೇ. ಮತ ಹಾಕುವುದನ್ನು “ಮತದಾನ” ಎನ್ನಲಾಗಿದೆ. ಮತ ನೀಡುವುದೂ ಒಂದು ದಾನವೇ. ದಾನ ಮಾಡುವವನಿಗೆ ಪುಣ್ಯ ಲಭಿಸುತ್ತದಂತೆ. ಅದು ಯಾವಾಗ ಆ ದಾನ ಸತ್ಕಾರ್ಯಗಳಿಗೆ ಬಳಕೆಯಾದಾಗ ಮಾತ್ರ.  ಅಂದರೆ ದಾನದಿಂದಾಗುವ ಪರಿಣಾಮವೂ ದಾನಮಾಡುವವನಿಗೇ ಸೇರಿದ್ದು. ಉತ್ತಮ ಆಡಳಿತ ಸಿಗಬೇಕೆಂದರೆ ನಮ್ಮ ಮತದಾನ ಸಮರ್ಪಕವಾಗಿರ ಬೇಕು. ಇಲ್ಲವೆಂದಾದಲ್ಲಿ ಮುಂದೆ ನೋವನುಭವಿಸಬೇಕಾದೀತು. ಅಲ್ಲಿಗೆ ಮತದಾನದ ನೇರ ಪರಿಣಾಮ ಮತದಾರ ಮೇಲೇಯೇ. ಹಾಗಾಗಿ ಯಾರಿಗೆ ಬೇಕಾದರೂ ಮತ ಚಲಾಯಿಸುವ ಸ್ವತಂತ್ರ ನಮಗಿದೆ. ಆದರೆ ಮತ ಚಲಾಯಿಸುವ ಮುನ್ನ ಯೊಚಿಸಿ, ನಿರ್ಧರಿಸಿ ಮತ ಹಾಕೋಣ. ನಮ್ಮ ಮತದಾನದ ಸ್ವಾತಂತ್ರ್ಯ ನಮ್ಮನ್ನು ಅತಂತ್ರವಾಗಿಸಿದಿರಲಿ.

ಕೊನೆಯ ಮಾತು: ಒಂದು ನೋಟಿಗೆ ಆಸೆಪಟ್ಟು ಓಟು ಒತ್ತಿದರೆ, ನಂತರ ಸಾವಿರ ನೋಟುಗಳನ್ನು ಕೊಟ್ಟರೂ ನಮ್ಮ ಸರಕಾರಿಕೆಲಸಗಳು ಆಗುವುದಿಲ್ಲ.

ವಿಷ್ಣು ಭಟ್ಟ ಹೊಸ್ಮನೆ.

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post