X

ಕಾಲಕ್ಕಾಗಿ ಕಾಯುತ್ತಿರುವ ಮೌನಿ ನಾನು…

ಕಾಲ ಎಲ್ಲರನ್ನೂ/ ಎಲ್ಲವನ್ನೂ ಬದಲಿಸುತ್ತೆ ಅಂತಾರೆ, ನಿಜಾನಾ? ಅದೇನೇ ಇರಲಿ, ನಾವು-ನೀವೆಲ್ಲರೂ ಬದಲಾಗಿರುವುದಂತೂ ಸತ್ಯ ಅಲ್ವಾ? ನಾನಂತೂ ಪ್ರೈಮರಿಯಲ್ಲಿ ಇದ್ದ ಹಾಗೆ ಈಗ ಇಲ್ಲ… ನೀವು? ನೀವೂ ಬದಲಾಗಿದ್ದೀರಿ ಅಂತ ಗೊತ್ತು. ನಾನೇನು ಬದಲಾಗಿಲ್ಲ ಅಂತ ಮಾತ್ರ ಹೇಳ್ಬೇಡಿ… ಕಡೇ ಪಕ್ಷ ಉದ್ದ ಆದ್ರೂ ಆಗಿದ್ದೀರಿ ತಾನೆ? ಇದೇ ತಾನೇ ಬದಲಾವಣೆ?

ಇನ್ನೊಂದು ವಿಷಯ… ನೀವು ಶಾಲೆ ಮುಗಿಸಿ ಆಗಲೇ ಐದು ವರ್ಷಗಳು ಕಳೆದಿವೆ ಎಂದಿಟ್ಟುಕೊಳ್ಳಿ. ಸಾಮಾನ್ಯವಾಗಿ ನಿಮಗೆ ನಿಮ್ಮ ಸ್ನೇಹಿತರ ಮಖ ಪರಿಚಯ ಇರುತ್ತೆ ಅಲ್ವಾ? ಆದರೂ ಕೆಲವೊಮ್ಮೆ ಆಕಸ್ಮಿಕವಾಗಿ ನಿಮ್ಮ ಹಳೆಯ ಸ್ನೇಹಿತರು ಸಿಕ್ಕರೆ ಮಾತನಾಡುತ್ತೀರಾ? ನನಗೇಕೋ ಫುಲ್  ಡೌಟೇ.. ದೂರದಿಂದ ನೋಡುವಾಗ ಅನಿಸುತ್ತೆ, ತುಂಬಾ ಮಾತನಾಡಬೇಕು, ಮಾತನಾಡಲು ತುಂಬಾ ವಿಷಯಗಳಿವೆ, ಮಾತನಾಡಿ ತಂಬಾ ವರ್ಷ ಆಯಿತು ಅಂತ. ಆದರೆ ನಮ್ಮ ಹತ್ತಿರ ಬರುತ್ತಿದ್ದಂತೆ ಬರೀ ಮುಗುಳುನಗೆಯಲ್ಲಿಯೇ ಮಾತು ಮುಗಿಯುತ್ತದೆ ಅಲ್ವಾ? ಈಗ ಯಾರು ಮಾತನಾಡಲಿಲ್ಲ? ನೀವಾ? ನಿಮ್ಮ ಸ್ನೇಹಿತರ? ಐದು ವರ್ಷಗಳ ಹಿಂದೆ ನೀವು ಅತ್ಯುತ್ತಮ ಸ್ನೇಹಿತರಲ್ಲವೇ? ಕಾಲ ಬದಲಾದಂತೆ ಸ್ನೇಹಿತರು ಬದಲಾದರೆ? ಹೊಸ ನೀರು ಬಂದಾಗ ಹಳೆ ನೀರು ಕೊಚ್ಚಿ ಹೋಗಲೇಬೇಕಾ?? ಗೆಳೆತನದ ಇನ್ನೊಂದು ರೂಪ ಹೀಗೂ ಇರಬಹುದಲ್ವಾ? ಹಳೇ ಕಾಲದ ವೈರಿಗಳು ಈಗ ಸ್ನೇಹಿತರಾಗಬಹುದು. ಕಾಲ ಕಳೆದಂತೆ ತಮ್ಮ ವೈರತ್ವ ಮರೆತು ಗೆಳೆಯರಾಗಬಹುದು.

ಈಗಿನ ಇಂಟರ್ನೆಟ್ ಯುಗದಲ್ಲಿ ನಮ್ಮ ಗೆಳೆಯ ಗೆಳತಿಯರನ್ನು ಸಂಪರ್ಕಿಸಲು ಅನೇಕ ವಿಧಾನಗಳಿವೆ. ವಾಟ್ಸಪ್ ಇದೆ, ಫೇಸ್ಬುಕ್ ಇದೆ, ಇನ್ನೂ ಹಲವಾರು ಆ್ಯಪ್ಗಳಿವೆ. ನಮ್ಮ ಸ್ನೇಹಿತರನ್ನು ಭೇಟಿಯಾಗಲು ಅನೇಕ ದಾರಿಗಳಿವೆ. ಆದರೆ ನಮ್ಮಲ್ಲಿ ಸಮಯ ಇದೆಯೇ? ನಾವು ಹೇಗೋ ಸಮಯ ಮಾಡಿ ವಾಟ್ಸಪ್ನಲ್ಲಿ “ಹಾಯ್” ಎಂದು ಸ್ನೇಹಿತರಿಗೆ ಮೆಸೇಜ್ ಮಾಡಿದರೆ ಅವರಿಂದ ಮರುತ್ತರ ಬರುತ್ತದೆಯೆ? ಹೆಚ್ಚಾಗಿ ಇಲ್ಲ. ನಿಮ್ಮ ಸ್ನೇಹಿತರೊಂದಿಗೆ ಮಾತನಾಡಲು ಸಮಯ ಇಲ್ಲ, ಅಲ್ವಾ? ಇನ್ನೂ ಫೋನ್ ಮಾಡಿದರೆ ನಿಮ್ಮ ಕತೆ ಕೇಳಬೇಕೇ?? “ಹೇ, ನಾನು ಸ್ವಲ್ಪ ಬಿಝಿ ಇದ್ದೇನಾ, ನಾನು ನಿಂಗೆ ನಾಳೆ ಕಾಲ್ ಮಾಡ್ತೇನೆ ಆಯ್ತಾ?” ಎನ್ನುವ ಮರುತ್ತರ. ಆ “ನಾಳೆ” ಅದ್ಯಾವಾಗ ಬರುತ್ತೋ ನಾಕಾಣೆ. ನೀವು ಇಷ್ಟೊಂದು ಬಿಝಿಯಾಗಿ ಅದೇನ್ ಸಾಧಿಸ್ತೀರೊ? “ನಾನು ಬಿಝಿ” ಎನ್ನುವ ಶಬ್ದದಿಂದ ನಿಮ್ಮ ಆತ್ಮೀಯರಿಗೆ ನೋವಾಗಿರುವುದಂತು ಸತ್ಯ. ಇರುವ ಸಮಯದಲ್ಲಿ ಒಂಚೂರು ಸಮಯವನ್ನು ನಿಮ್ಮ ಆತ್ಮೀಯರಿಗೆ ಮೀಸಲಿಡಿ. ಗೆಳೆತನ ಬೆಳೆಸುವುದು ದೊಡ್ಡ ವಿಷಯವಲ್ಲ, ಅದನ್ನು ನಮ್ಮ ಕೊನೆ ಕ್ಷಣದವರೆಗೆ ಉಳಿಸಿಕೊಳ್ಳುವುದು ದೊಡ್ಡ ವಿಷಯ ಅಂತ ಅನಿಸ್ತಿದೆ.

ನಿಮ್ಮ ಬಾಲ್ಯದ ಗೆಳೆಯ-ಗೆಳತಿಯರು ಎಷ್ಟು ಜನ ಈಗಲೂ ಸಂಪರ್ಕದಲ್ಲಿದ್ದಾರೆ?  ನೀವೆಲ್ಲೋ ಇರುತ್ತೀರ.. ಅವರೆಲ್ಲೋ ಇರುತ್ತಾರೆ. ಆದರೆ ನಿಮ್ಮ ಸ್ವಂತ ಊರಿಗೆ ಬಂದಾಗ ಮಾತ್ರ ಅಲ್ವಾ ಅವರ ನೆನಪು. ಅದೂ ಸಹ… ಹೇಗಿದ್ದೀಯಾ? ಯಾವಾಗ ಊರಿಗೆ ಬಂದದ್ದು? ಎಂದು ಕೇಳುವಾಗ ಮಾತುಕತೆ ಮುಗಿಯುತ್ತದೆ ಅಲ್ವಾ? ಬಾಲ್ಯದಲ್ಲೂ ಹೀಗೆ ಇದ್ರಾ? ಎಷ್ಟೆಂದರೂ ಬಾಲ್ಯದಲ್ಲಿ ಇರುವ ಆತ್ಮೀಯತೆ ಈಗ ಇರುವುದಿಲ್ಲ.  ನಿಮ್ಮ ಬದಲಾವಣೆಗೆ ಕಾರಣ? ನಿಮ್ಮಲ್ಲಿ ಈಗಲೂ ಅಂತಹ ಆತ್ಮೀಯತೆ ಇದ್ದರೆ ಅದು ನಿಮ್ಮ ಅದೃಷ್ಟವೇ ಸರಿ.

ಇನ್ನೂ ಬಾಲ್ಯದ ಕನಸಿನ ನೆನಪುಗಳನ್ನು ಮೆಲುಕು ಹಾಕುವುದಾದರೆ… ಕೆಲವರಿಗೆ ಕನಸಿನಲ್ಲಿ ನಡೆಯುವ ಅಭ್ಯಾಸ ಇತ್ತಂತೆ. ನಿಮಗೂ ಇತ್ತಾ? ನನ್ನ ಗೆಳತಿ ಹೇಳ್ತಾ ಇದ್ಲು… ಒಮ್ಮೆ ಕನಸಿನಲ್ಲಿ ಅವಳು ನಡೆಯುತ್ತಾ ಹೋಗಿ ಒಂದು ನದಿಯ ಪಕ್ಕದಲ್ಲಿ ಮಲಗಿದ್ದಳಂತೆ. ಹೀಗೆ ಕನಸಿನಲ್ಲಿ ಏನೇನೋ ಮಾಡಿರ್ತೀರಿ ಅಲ್ವಾ? ಆದರೆ ದಿನ ಕಳೆದಂತೆ ಈ ತರಹದ ಅಭ್ಯಾಸಗಳು ಮಾಯವಾಗುವುವು. ಹೇಗೆ? ಕಾಲ ಎಲ್ಲವನ್ನೂ ಬದಲಾಯಿಸುತ್ತೆ ಅಲ್ವಾ? ಕಾಲಕ್ಕೆ ತಕ್ಕಂತೆ ಬದಲಾವಣೆ ಅಂದರೆ ಹೀಗೆನಾ?

ಸಮಯ ಕಳೆದಂತೆ ನಮ್ಮ ಜೀವನದಲ್ಲಿ ಅದೆಷ್ಟು ಜನ ಬಂದು ಹೋಗ್ತಾರೆ ಅಲ್ವಾ? ಕೆಲವರು ನಮ್ಮ ಬದುಕನ್ನು ಬದಲಾಯಿಸುತ್ತಾರೆ ಅದು ಒಳ್ಳೆಯದಕ್ಕೊ ಕೆಟ್ಟದಕ್ಕೊ, ಒಟ್ಟಾರೆ ಬದಲಾವಣೆಗೆ ಅವರು ಕಾರಣರಾಗಿರುತ್ತಾರೆ. ಇನ್ನೂ ಕೆಲವರು ಜೀವನದಲ್ಲಿ ಮರೆಯಲಾಗದ ನೆನಪುಗಳನ್ನು ಕೊಟ್ಟು ಮರೆಯಾಗುತ್ತಾರೆ. ನಮ್ಮ ಜೀವನ ಪೂರ್ತಿ ಇರಬೇಕೆಂದುಕೊಂಡವರು ಅದೇನೋ ಸಮಸ್ಯೆಗಳಿಂದ ಹೇಳದೆ ಕೇಳದೆ ಹೋಗುತ್ತಾರೆ. ಅದು ಯಾರೆ ಆಗಿರಲಿ ನಮ್ಮ ಜೀವನದಲ್ಲಿ ಬಂದ ಎಲ್ಲರಿಂದ ಒಂದೊಂದು ಪಾಠವನ್ನು ಕಲಿತಿರುತ್ತೇವೆ ಅಲ್ವಾ?? ನಮ್ಮ ಜೀವನದಲ್ಲಿ ಬರುವವರು ಒಂದಿಲ್ಲೊಂದು ಕಾರಣಕ್ಕಾಗಿಯೆ ಬಂದಿರುತ್ತಾರೆ. ಆ ಕಾರಣ ಮಾತ್ರ ಸಮಯ ಬಂದಾಗ ತಿಳಿಯುತ್ತದೆ. ಕಾಲ ಯಾರಿಗೂ ಕಾಯಲ್ಲ ಅಲ್ವಾ? ನಾವು ಕಾಲಕ್ಕಾಗಿ ಕಾಯಬೇಕು. ಅದಕ್ಕೆ ನಾನೂ ಸಹ ನನ್ನ ಕಾಲಕ್ಕಾಗಿ ಕಾಯುತ್ತಿರುವ ಮೌನಿ…

  • ರಕ್ಷಿತ ಪ್ರಭು ಪಾಂಬೂರು

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post