X

ಜನುಮ ದಿನ ಸವಿ ಸುದಿನ

ಬಂದಿತು ಬಂದಿತು ಜನುಮ ದಿನ

ತಂದಿತು ತಂದಿತು ಸವಿ ಸುದಿನ

ಮುಂಜಾನೆದ್ದು ದೇವಗೆ ನಮಿಸಿ

ಹೆತ್ತವರನ್ನು ದೈನ್ಯದಿ ವಂದಿಸಿ

ಕುಣಿಕುಣಿದಾಡುತ ಹಿಗ್ಗುತ ನಲಿವೆ        (1)

 

 ಬಂದಿತು ಬಂದಿತು ಜನುಮ ದಿನ

ತಂದಿತು ತಂದಿತು ಸವಿ ಸುದಿನ

ತಂದರು ಅಪ್ಪ ಹೊಸದೊಂದು ದಿರಸು

ಕೇಳುವೆ ಅಮ್ಮನ ಖುಷಿಯಲಿ ತೊಡಿಸು

ಆಟವನಾಡುತ ದಿನವನು ಕಳೆವೆ            (2)

 

 ಬಂದಿತು ಬಂದಿತು ಜನುಮ ದಿನ

ತಂದಿತು ತಂದಿತು ಸವಿ ಸುದಿನ

ಸಿದ್ಧವಾಯಿತು ಸಿಹಿಸಿಹಿ ಲಡ್ಡಿಗೆ

ನಾನೂ ಉಂಡು ಒಯ್ಯುವೆ ಶಾಲೆಗೆ

ಗೆಳೆಯರ ಜೊತೆಗೆ ತಿಂದು ತೇಗುವೆ          (3)

 

 ಬಂದಿತು ಬಂದಿತು ಜನುಮ ದಿನ

ತಂದಿತು ತಂದಿತು ಸವಿ ಸುದಿನ

ಶಾಲೆಯ ಪ್ರಾರ್ಥನೆ ಸರ್ವರ ಹಿತಕೆ

ಜನ್ಮದಿನ ಕೂಸಿಗೆ ಗುರುವಿನ ಹರಕೆ

ಪ್ರಾರ್ಥನೆ ಹರಕೆ ಮನನಿಸಿ ಮೆರೆವೆ         (4)

 

 ಬಂದಿತು ಬಂದಿತು ಜನುಮ ದಿನ

ತಂದಿತು ತಂದಿತು ಸವಿ ಸುದಿನ

ವಿದ್ಯಾನಿಧಿಗೆ ಕಾಣಿಕೆ ಕೊಡುವೆ

ದೀನ ದುರ್ಬಲರ ಒಳಿತಿಗೆ ದುಡಿವೆ

ಸಾಧನೆ ಸೈರಣೆ ಮನದಲಿ ತುಂಬುವೆ      (5)

 

 ಬಂದಿತು ಬಂದಿತು ಜನುಮ ದಿನ

ತಂದಿತು ತಂದಿತು ಸವಿ ಸುದಿನ

ಮಾತಾಪಿತರಿಗೆ ವಚನವ ನೀಡುವೆ

ದೇಶಸೇವೆಯ ಕಂಕಣ ಕಟ್ಟುವೆ

ಜನ್ಮಸಾರ್ಥಕದ ಜೀವನ ನಡೆಸುವೆ       (6)

 

-ಸುರೇಶ್ ಬಾಲಚಂದ್ರನ್

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post