ಪರಾಕ್ರಮ ಕಂಠೀರವ, ಸುವರ್ಣ ಲಂಕಾಧೀಶನೀತ,
ಕೇಶವನಾಗಿ, ಕುಚೇಲನಿಗೆ ಐಶ್ವರ್ಯವನಿತ್ತ,
ಮರುದಿನ ಶಿಶುಪಾಲ, ಕಂಸ, ಸುಯೋಧನ,
ರಂಗದಲಿ ಇವನು ರಾಜ ಪ್ರತಿದಿನ
ಕಿರೀಟ ಬಿಚ್ಚಿದೊಡನೆ ಮನೆಯ ಚಿಂತೆ,
ಪತ್ನಿ ಕರೆ ಮಾಡಿದ್ದಾಳೆ, ಮನೆ ಕಡೆ ಬರಬೇಕಂತೆ,
ಮಗನ ಶಿಕ್ಷಣ ಸಾಲ, ಮಗಳಿಗೆ ಮದುವೆಯ ಕಾಲ,
ಅಮ್ಮನಿಗೆ ಹುಷಾರಿಲ್ಲ, ಅಪ್ಪನಲಿ ಬಲವಿಲ್ಲ,
ಮನೆಯ ಸೂರು ಈ ಮಳೆಗಾಲ ತಡೆಯೊಲ್ಲ
ಕಾಯುತ್ತಿದ್ದಾನೆ, ಬಣ್ಣದ ಪೆಟ್ಟಿಗೆಯ ಮುಂದೆ ಕೂತು,
ಬೇಯುತ್ತಿದ್ದಾನೆ ಒಳಗೊಳಗೇ, ಬಣ್ಣ, ಬಟ್ಟೆಗಳೊಳಗೆ,
ಮತ್ತೆ ಕೇಶವನಾಗಿ, ಆದರೂ ಕುಚೇಲನಾಗಿ,
ಬೇಡುತ್ತಿದ್ದಾನೆ ಇನ್ನೊಬ್ಬ ಕೇಶವನಾಗಮನಕೆ
- ವೀರೇಂದ್ರ ನಾಯಕ್, ಚಿತ್ರಬೈಲು
Facebook ಕಾಮೆಂಟ್ಸ್