ಈ ಬಾರಿಯ ಬಜೆಟ್ ಹಲವು ವಿಷಯಗಳಿಗಾಗಿ ನೆನಪಿನಲ್ಲಿ ಉಳಿಯಲಿದೆ . ಮೊದಲನೆಯದಾಗಿ ಹೆಚ್ಚಿನ ಜನರು ಭಾವಿಸಿದ್ದು ನರೇಂದ್ರ ಮೋದಿ ನೇತೃತ್ವದ ಸರಕಾರ ೨೦೧೯ ರಲ್ಲಿ ಚುನಾವಣೆ ಗೆಲ್ಲಲು ಏನು ಬೇಕು ಅದನ್ನ ಬಜೆಟ್ನಲ್ಲಿ ಅಳವಡಿಸಿಕೊಳ್ಳುತ್ತದೆ ಎನ್ನುವುದು . ತಾತ್ಕಾಲಿಕ ಶಮನ ನೀಡುವ ಅಥವಾ ಸುಖ ನೀಡುವ ಫಾರ್ಮುಲಾಗೆ ಮೋದಿ ಮಣೆ ಹಾಕಿಲ್ಲ . ಎರಡನೆಯದಾಗಿ ಮಧ್ಯಮ ವರ್ಗದ ಜನರಿಗೆ ಏನಾದರೂ ಒಂದಷ್ಟು ವಿನಾಯತಿ ಸಿಗಬಹದು ಎನ್ನುವ ಆಸೆಗೆ ತಣ್ಣೀರು ಎರಚಿಯಾಗಿದೆ . ಒಂದೇ ಸಮನೆ ಏರುತ್ತಿರುವ ತೈಲ ಬೆಲೆ ಸದ್ದಿಲ್ಲದೇ ದೇಶದಲ್ಲಿ ಹಣದುಬ್ಬರ ಹೆಚ್ಚಾಗುವಂತೆ ಮಾಡಿದೆ. ವಸ್ತುಸ್ಥಿತಿ ಹೀಗಿರುವಾಗ ಮಧ್ಯಮ ವರ್ಗದ ಮೇಲಿನ ತೆರಿಗೆ ಹೊರೆಯನ್ನ ಒಂದಷ್ಟು ಕಡಿಮೆ ಮಾಡಬಹುದಿತ್ತು . ಆದರೆ ಮೋದಿ ಸರಕಾರ ಮಧ್ಯಮ ವರ್ಗವನ್ನ ಪೂರ್ಣವಾಗಿ ಮರೆತು ಬಿಟ್ಟಿದೆ . ಗುಜರಾತ್ ಎಲೆಕ್ಷನ್’ನಲ್ಲಿ ತಮ್ಮ ಪಕ್ಷಕ್ಕೆ ಗ್ರಾಮಾಂತರ ಪ್ರದೇಶದಲ್ಲಿ ಸಿಕ್ಕ ಪೆಟ್ಟನ್ನ ಮೋದಿ ಮತ್ತು ಜೈಟ್ಲಿ ಸ್ವಲ್ಪ ಹೆಚ್ಚಾಗೇ ಮನಸ್ಸಿಗೆ ಹಚ್ಚಿಕೊಂಡಂತಿದೆ . ರೈತಾಪಿ ಜನರಿಗೆ ಮತ್ತು ಗ್ರಾಮಾಂತರ ಪ್ರದೇಶದ ಜನರಿಗೆ ಹೆಚ್ಚಿನ ಆದ್ಯತೆ ಈ ಬಜೆಟ್ನಲ್ಲಿ ಕಾಣುತ್ತಿದೆ .
ಬಡ ಮತ್ತು ಅತಿ ಬಡ ಕುಟುಂಬಗಳ ಆರೋಗ್ಯದ ಭಾರವನ್ನ ಸರಕಾರ ಹೊರಲಿದೆ . ಹತ್ತಿರತ್ತಿರ ಹತ್ತು ಕೋಟಿ ಕುಟುಂಬ ಇದರ ಪ್ರಯೋಜನ ಪಡೆಯಲಿದೆ ಅಂದರೆ ಸರಿ ಸುಮಾರು ಐವತ್ತು ಕೋಟಿ ಜನರ ಆರೋಗ್ಯದ ಹಣೆಬರಹ ಸರಕಾರ ವಹಿಸಿಕೊಳ್ಳಲಿದೆ . ಈ ಯೋಜನೆ ಸರಿಯಾಗಿ ಲಾಗೂ ಆದರೆ ಇದೊಂದು ಜಗತ್ತಿನಲ್ಲಿ ಅತಿ ದೊಡ್ಡ ಆರೋಗ್ಯ ಯೋಜನೆ ಎನಿಸಿಕೊಳ್ಳಲಿದೆ . ಜೊತೆಗೆ ಮುಂಬರುವ ದಿನಗಳಲ್ಲಿ ಉಳಿದ ಜನರನ್ನೂ ಈ ಯೋಜನೆಯಲ್ಲಿ ಸೇರಿಸಿಕೊಂಡರೆ ಇದೊಂದು ಯೂನಿವರ್ಸಲ್ ಹೆಲ್ತ್ ಸಿಸ್ಟಮ್ ಎನಿಸಿಕೊಳ್ಳಲಿದೆ . ಆ ಮಟ್ಟಿಗೆ ಇದೊಂದು ಸ್ವಾಗತರ್ಹ ಬೆಳವಣಿಗೆ ಎನ್ನಬಹದು . ಆದರೇನು ನಮ್ಮ ಕಣ್ಣ ಮುಂದೆ ಅತ್ಯುತ್ತಮ ಯೋಜನೆಗಳು ಹಳ್ಳ ಹಿಡಿದ ಉದಾಹರಣೆಗಳು ಇವೆ . ಇಂತಹ ಆರೋಗ್ಯ ಯೋಜನೆಗಳು ಹಣಕ್ಕಾಗಿ ದುರುಪಯೋಗ ಪಡಿಸಿಕೊಳ್ಳದ ಹಾಗೆ ಕಾರ್ಯ ನಿರ್ವಹಿಸುವ ಪರಿಯನ್ನ ಕೂಡ ಸರಕಾರ ನೀಡಬೇಕಿದೆ . ಇಲ್ಲದಿದ್ದರೆ ಯಶಸ್ವಿನಿ ಯೋಜನೆಯಂತೆ ಇದೂ ಹಳ್ಳ ಹಿಡಿಯಲಿದೆ .
ಬೆಂಗಳೂರಿಗೆ ಸಬ್ ಅರ್ಬನ್ ರೈಲು ಮಂಜೂರು ಮಾಡಲಾಗಿದೆ . ಇದು ಹೇಳಿದ ರೀತಿಯಲ್ಲಿ ಅನುಷ್ಠಾನ ಆಗಿ ಬಿಟ್ಟರೆ ಬೆಂಗಳೂರಿನ ಭವಿಷ್ಯ ಬದಲಾಗಲಿದೆ . ಬೆಂಗಳೂರಿಗೆ ಬಂದವರು ವಿಧಿಯಿಲ್ಲದೇ ಇಲ್ಲಿ ವಾಸಿಸುತ್ತಾರೆ . ಈ ನಗರ ಜನ ವಸತಿಗೆ ಲಾಯಕಿಲ್ಲದೆ ಹಲವು ವರ್ಷಗಳು ಕಳೆದಿವೆ . ಕರ್ನಾಟಕದಲ್ಲಿನ ಆಡಳಿತ ಪಕ್ಷದ ಹಲವು ರಾಜಕಾರಿಣಿಗಳು ರಿಯಲ್ ಎಸ್ಟೇಟ್ ನಲ್ಲಿ ತಮ್ಮ ಹಿಡಿತ ಸಾಧಿಸಿದ್ದಾರೆ. ಹೀಗಾಗಿ ಅವರಿಗೆ ಸಾರಿಗೆ ವ್ಯವಸ್ಥೆ ಬೆಳೆಸುವ ಇಚ್ಛೆಯಿಲ್ಲ . ಗಮನಿಸಿ ನೋಡಿ. ಈ ರೀತಿಯ ಸಬ್ ಅರ್ಬನ್ ರೈಲು ಮಂಡ್ಯದಿಂದ ಬೆಂಗಳೂರಿನ ತನಕ ಹಬ್ಬಿ ಬಿಟ್ಟರೆ ಬೆಂಗಳೂರಿನ ಈ ಜನಜಂಗುಳಿಯಲ್ಲಿ ವಾಸಿಸಲು ಯಾರು ಇಚ್ಛೆ ಪಡುತ್ತಾರೆ ? ಸಹಜವಾಗೇ ಬೆಂಗಳೂರು ನಗರದ ರಿಯಲ್ ಎಸ್ಟೇಟ್ ಮೌಲ್ಯ ಕುಸಿತ ಕಾಣುತ್ತದೆ . ಬಿಡದಿವರೆಗೆ ಆಗಲೇ ಮೆಟ್ರೋ ಸೌಕರ್ಯ ಸಿಕ್ಕಾಗಿದೆ ( ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ ) ಅಲ್ಲಿಂದ ಮುಂದಕ್ಕೆ ಇಂತಹ ಅರ್ಬನ್ ರೈಲು ಸಿಕ್ಕರೆ ಮೈಸೂರು ರಸ್ತೆ ರಾಜ ಮಾರ್ಗವಾಗಿ ಬದಲಾಗುತ್ತೆ . ಬೆಂಗಳೂರಿನ ದುಬಾರಿ ಲೇ ಔಟ್ಗಳ, ಸೈಟು ಬೆಲೆ ಆಕಾಶದಿಂದ ಭೂಮಿಗೆ ಇಳಿಯಲಿವೆ .
ರಸ್ತೆ , ರೈಲು ಜೊತೆಗೆ ವಿಮಾನ ನಿಲ್ದಾಣಗಳನ್ನು ಹೆಚ್ಚು ಮಾಡುವ ಪ್ರಸ್ತಾಪ ಕೂಡ ಇಲ್ಲಿದೆ . ಒಟ್ಟಿನಲ್ಲಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಮನ್ನಣೆ ಕೂಡ ಸಿಕ್ಕಿದೆ . ಫಾರಿನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಬೇಕೆಂದರೆ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಣಬೇಕು ಎನ್ನುವ ಅರಿವು ಸರಕಾರಕ್ಕಿದೆ. ಹೀಗಾಗಿ ಈ ಕ್ಷೇತ್ರಕ್ಕೂ ಸಿಕ್ಕ ಬೇಕಾದ ಪ್ರಾಶಸ್ತ್ಯ ಸಿಕ್ಕಿದೆ .
ಹೀಗೆ ಒಂದಲ್ಲ ಹಲವು ಸೆಕ್ಟರ್’ಗಳನ್ನ ತೆಗೆದುಕೊಂಡು ವಿಶ್ಲೇಷಣೆ ಮಾಡಬಹದು . ಅವುಗಳಿಂದ ನನಗೇನು ಲಾಭ ? ಎನ್ನುವುದು ಜನ ಸಾಮಾನ್ಯನ ಪ್ರಶ್ನೆ . ಹೌದು ಬೆಂಗಳೂರಿಗೆ ಅರ್ಬನ್ ರೈಲು ಬರುವುದಕ್ಕೆ ಸಮಯ ಹಿಡಿಯುತ್ತದೆ . ನಮ್ಮ ಸಾಮಾಜಿಕ ಮತ್ತು ರಾಜಕೀಯ ವಾತಾವರಣ ಹೇಗಿದೆಯೆಂದರೆ ನಾಳೆ ಇಂದು ಬಜೆಟ್ ಮಂಡಿಸಿದ ಸರಕಾರ ಇರುತ್ತದೆ ಎಂದು ಹೇಳಲು ಬರುವುದಿಲ್ಲ .ವಸ್ತುಸ್ಥಿತಿ ಹೀಗಿರುವಾಗ ಜನ ಸಾಮಾನ್ಯ ಕೇಳುವ ಪ್ರಶ್ನೆ ಸಾಧುವಾಗಿದೆ . ಆತನ ಪ್ರಶ್ನೆ ಇಂದು ನನಗೇನು ಲಾಭವಾಯಿತು? ಆ ನಿಟ್ಟಿನಲ್ಲಿ ಮೋದಿ ಸರಕಾರ ಯಾವುದೆ ಸಿನಿಕತೆ ತೋರದೆ ಪ್ರಾಕ್ಟಿಕಲ್ ಆಗಿ ದೇಶದ ಉದ್ದಾರಕ್ಕೆ ಏನು ಬೇಕು ಅದನ್ನ ಮಾಡಿದೆ . ಮಧ್ಯಮ ವರ್ಗಕ್ಕೆ ಸದ್ಯದ ಮಟ್ಟಿಗೆ ಲಾಭ ಎನ್ನುವಂತದ್ದು ಏನೂ ಇಲ್ಲ . ಗಮನಿಸಿ, ಜನರ ನಡುವೆ ಹೆಚ್ಚಿನ ವ್ಯತ್ಯಾಸವೇನು ಇಲ್ಲ . ಬಡ ವರ್ಗ ಓಟಿಗಾಗಿ ಐನೂರು ಸಾವಿರಕ್ಕೆ ಕೈಚಾಚುತ್ತೆ . ಮಧ್ಯಮ ವರ್ಗ ತೆರಿಗೆ ವಿನಾಯತಿಗಾಗಿ ಸರಕಾರದ ಮುಂದೆ ಗೋಗರೆಯುತ್ತೆ . ಉಳಿದ ಅತಿ ಸಣ್ಣ ಶ್ರೀಮಂತ ವರ್ಗಕ್ಕೆ ಬಜೆಟ್ ಯಾವ ಪರಿಣಾಮವೂ ಬೀರುವುದಿಲ್ಲ .
ಇದೊಂತರ ಕಚ್ಚು, ಎಂದರೆ ಕಪ್ಪೆಗೆ ಸಿಟ್ಟು ಬೇಡ ಎಂದರೆ ಹಾವಿಗೆ ಸಿಟ್ಟು ಎನ್ನುವ ಪರಿಸ್ಥಿತಿ . ಕಪ್ಪೆ ತನ್ನ ಜೀವ ಹೋಗುತ್ತದೆ ಎನ್ನುವ ಭಯ ಹಾವಿಗೆ ತನ್ನ ಆಹಾರ ತಪ್ಪುತ್ತದೆ ಎನ್ನುವ ಕೋಪ . ಇವೆರಡನ್ನೂ ಏಕಕಾಲದಲ್ಲಿ ಖುಷಿಯಾಗಿಡಲು ಹೇಗೆ ಸಾಧ್ಯ? ಸದ್ಯದ ಜೈಟ್ಲಿ ಬಜೆಟ್ ಪರಿಸ್ಥಿತಿ ಈ ಹಾವು ಕಪ್ಪೆ ದೃಷ್ಟಾಂತಕ್ಕಿಂತ ಭಿನ್ನವೆನ್ನೆಲ್ಲ .
ರೈತಾಪಿ ಜನಕ್ಕೆ ಬಡ ಮತ್ತು ಅತಿ ಬಡವರ ಕೈಗೆ ಪುರಿಉಂಡೆ ಕೊಟ್ಟಿದೆ, ತೆರಿಗೆಯಿಂದ ಬಚಾವಾಗಲು ಸಾಧ್ಯವಿಲ್ಲದ, ತೆರಿಗೆ ವಂಚಿಸಲು ಸಾಧ್ಯವಿರುವ ಜಾಗದಲ್ಲೂ ನಾಳೆ ಇನ್ಕಮ್ ಟ್ಯಾಕ್ಸ್ ನೋಟೀಸ್ ಬಂದರೇನು ಗತಿ? ಎಂದು ಹೆದರಿ ಬಾಳುವ ಎಲ್ಲಾ ರೀತಿಯಲ್ಲೂ , ಎಲ್ಲಾ ಕಾಲದಲ್ಲೂ ತ್ಯಾಗ ಮತ್ತು ತುಳಿತ ಎರಡಕ್ಕೂ ಒಳಗಾಗುತ್ತ ಬಂದಿರುವ ಮಧ್ಯಮ ವರ್ಗದ ಬವಣೆಯ ಬದುಕು ಮುಂದುವರಿದಿದೆ .
ನಮ್ಮ ಕಣ್ಣಿಗೆ ೧೮೫೭ ರ ಘಟನೆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ . ಬ್ರಿಟಿಷರ ಕಣ್ಣಿಗದು ಸಿಪಾಯಿ ದಂಗೆ ! ಒಂದು ಘಟನೆಗೆ ಎರಡು ರೂಪ . ಬಿರುಸಾದ ಮಳೆ ಹಲವರಿಗೆ ಖುಷಿ ತರುತ್ತದೆ . ಹಲವರಿಗೆ ದುಃಖ . ಮಧ್ಯಮ ವರ್ಗದ ದೃಷ್ಟಿಯಿಂದ ಪ್ರಯೋಜನವಿಲ್ಲದ ಬಜೆಟ್ ! ಬಡ ಮತ್ತು ಅತಿ ಬಡವನಿಗೆ ಕೊನೆಗೂ ದೇವರು ಕಣ್ಣು ತೆರೆದ ಎನ್ನಿಸಿದರೆ ಅಚ್ಚರಿಯಲ್ಲ . ಶ್ರೀಮಂತನಿಗೆ ಇದಾವುದೂ ತಟ್ಟುವುದಿಲ್ಲ . ಮೋದಿ ಸರಕಾರ ಕೇವಲ ಚುನಾವಣೆ ಗೆಲ್ಲುವುದನ್ನ ಉದ್ದೇಶವಾಗಿರಿಸಕೊಂಡಿದ್ದರೆ ಈ ಬಜೆಟ್ ಬೇರೆಯ ರೂಪದಲ್ಲಿ ಇರುತ್ತಿತ್ತು . ಚುನಾವಣೆ ಮತ್ತು ರಾಜಕೀಯ ಮೀರಿದ ದೇಶದ ಬೆಳವಣಿಗೆಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ . ನನಗೇನು ಲಾಭ ? ಎನ್ನುವುದನ್ನ ಮೀರಿ ನೋಡಿದಾಗ ಅದರ ಅರಿವು ನಮ್ಮದಾದೀತು . ಅಸ್ಥಿರ ಬದುಕಿನಲ್ಲಿ ನಾಳೆ ಕಂಡವರಾರು ? ಎನ್ನುವ ಜನ ಹೆಚ್ಚಿರುವಾಗ ಇದನ್ನ ತಿಳಿ ಹೇಳುವುದು ಕೂಡ ಕಷ್ಟವಾದೀತು .
Facebook ಕಾಮೆಂಟ್ಸ್