X

ಅಲ್ಲಿ ಪ್ರಶ್ನೆಯಿಲ್ಲ… ಇಲ್ಲಿ ಉತ್ತರವೇ ಇಲ್ಲ!

ಎರಡು ರಾಜ್ಯಗಳು. ಎರಡೂ ಒಂದೇ ದೇಶದ ಅಂಗಗಳು. ಆದರೆ ಒಂದು ಉತ್ತರ ಇನ್ನೊಂದು ದಕ್ಷಿಣ; ಭೌಗೋಳಿಕವಾಗಿಯೂ, ಆಡಳಿತಾತ್ಮಕವಾಗಿಯೂ. ಒಂದು ಇದ್ದ ಕಪ್ಪು ಕಲೆಗಳನ್ನು ತೊಳೆದು ಶುಭ್ರಗೊಳಿಸುತ್ತ ಅಘನಾಶಿನಿಯಾಗುವತ್ತ ಸಾಗಿದ್ದರೆ, ಇನ್ನೊಂದು ಪಥ ಬದಲಿಸಿ ಕೆಂಗೇರಿ ಮೋರಿಯಾಗುವತ್ತ ಹೊರಳುತ್ತಿದೆ. ಒಂದೆಡೆ ಆರಕ್ಷಕ ಪಡೆ ಗೂಂಡಾಗಳನ್ನು, ಸಮಾಜವಿದ್ರೋಹಿಗಳನ್ನು ಬೆನ್ನತ್ತಿ ಬೆಂಡೆತ್ತುತ್ತಿದ್ದರೆ ಇನ್ನೊಂದೆಡೆ ಆರಕ್ಷಕರಿಗೇ ನೇಣು ಭಾಗ್ಯ! ಕೊಲೆ, ಅತ್ಯಾಚಾರಗಳಿಂದ ಬೇಸತ್ತಿದ್ದ ರಾಜ್ಯದಲ್ಲಿ ಜನ ಆಡಳಿತದಲ್ಲಿದ್ದವರನ್ನು ಸಾರಿಸಿ ತೆಗೆದು ಪ್ರತಿಷ್ಠಾಪಿಸಿದ ಹೊಸಬರು ಸಮಾಜಕ್ಕೆ ಅನುಕ್ಷಣ ಅಭಯದಾಯಕರಾಗಿ ನೆಮ್ಮದಿಯ ನಿದ್ದೆಗೆ ಕಾರಣರಾಗಿದ್ದರೆ ಇನ್ನೊಂದರಲ್ಲಿ ಸಾಲಾ ಸಾಲು ಕೊಲೆಗಳು, ಲವ್ ಜಿಹಾದ್ಗಳು ಜನರ ನಿದ್ದೆಯನ್ನೇ ಎಗರಿಸಿಬಿಟ್ಟಿವೆ!

ಮತಾಂಧರ ಅಟ್ಟಹಾಸ ಶಮನ

ಜನವರಿ 26ರಂದು ಉತ್ತರಪ್ರದೇಶದ ಕಾಸ್ಗಂಜಿನಲ್ಲಿ ತಿರಂಗಾ ಯಾತ್ರೆ ನಡೆದಿತ್ತು. ಮುಸ್ಲಿಮರೇ ಬಹುಸಂಖ್ಯಾತರಾಗಿರುವ ಪ್ರದೇಶವದು. ಮೆದುಳಿನ ಬದಲು ಕುರಾನ್ ಇಟ್ಟ ತಲೆಯೊಳಗೆ ದೇಶಪ್ರೇಮವೆಂಬ ಭಾವ ಮೊಳೆಯಲಾದರೂ ಹೇಗೆ ಸಾಧ್ಯ? ಅಲ್ಲಿ ಆದದ್ದೂ ಅದೇ. ತಿರಂಗಾ ಯಾತ್ರೆಗೆ, ಧ್ವಜ ಏರಿಸುವುದಕ್ಕೆ ಮತಾಂಧರು ಅಡ್ಡಿ ಪಡಿಸಿದರು. ಜನ ಲೆಕ್ಕಿಸದೇ ಧ್ವಜ ಹಾರಿಸಿಯೇ ಬಿಟ್ಟರು. ಆದರೆ ಯಾವಾಗ ವಂದೇ ಮಾತರಂ ಗಾನ ಮೊಳಗಿತೋ ಮತಾಂಧತೆ ಪರಾಕಾಷ್ಠೆಗೆ ತಲುಪಿತು. ವಂದೇ ಮಾತರಂ ಹಾಡುತ್ತಿದ್ದ ಚಂದನ್ ಅಭಿಶೇಕ್ ಎನ್ನುವ ಯುವಕನ ದೇಹಕ್ಕೆ ದೂರದಿಂದ ಹಾರಿ ಬಂದ ಗುಂಡೊಂದು ಹೊಕ್ಕಿತ್ತು. ಜೀವನದ ಹೊಂಗನಸ ಕಾಣುತ್ತಿದ್ದ ಕಣ್ಣುಗಳು ಶಾಶ್ವತವಾಗಿ ಮುಚ್ಚಿತ್ತು. ಅವನ ಅಪರಾಧ ಒಂದೇ. ದೇಶವನ್ನು ತಾಯಿ ಎಂದು ನಮಿಸಿದ್ದು! ಹೀಗೆ ನಡೆದ ಗಲಭೆಯಲ್ಲಿ ಇನ್ನಿಬ್ಬರು ಹಿಂದೂಗಳು ಗಂಭೀರವಾಗಿ ಗಾಯಗೊಂಡರು. ದೇಶವನ್ನು ತಾಯಿಯಂತೆ ಕಾಣದವರಿಗೆ ಅಂದೇ ತುಂಡರಿಸಿದ ಭಾಗವೊಂದನ್ನು ಕೊಟ್ಟಿತ್ತಲ್ಲ; ಮತ್ಯಾಕೆ ಇಲ್ಲೇ ಉಳಿದು ಹಲ್ಲೆ ಮಾಡುವ ದರ್ದು? ಉಳಿದುಕೊಂಡವರು ಉಳಿದ ಭಾಗವನ್ನೂ ಗಲಭೆಯೆಬ್ಬಿಸಿ ಪಡೆದುಕೊಳ್ಳಬೇಕೆಂದು ಇಲ್ಲಿ ಕೂತವರಲ್ಲವೇ? ಆದರೆ ಅವರು ಮುಖ್ಯ ವಿಚಾರವೊಂದನ್ನು ಮರೆತಿದ್ದರು. ತಮ್ಮನ್ನಾಳುತ್ತಿರುವುದು ಕಾಂಗ್ರೆಸ್, ಅಥವಾ ಹಿಂದಿನ ಸಮಾಜವಾದಿ ಪಕ್ಷಗಳಂತೆಯೇ ಇನ್ನೊಂದು ಎಂದು ತಿಳಿದಿದ್ದರೋ ಏನೋ. ಆದರೆ ಅಲ್ಲಿರುವುದು ನ್ಯಾಯಅನ್ಯಾಯ, ಧರ್ಮಅಧರ್ಮಗಳ ವಿವೇಚನೆಯಿರುವ ವೈಯುಕ್ತಿಕ ಜೀವನದಲ್ಲೂ ಶಿಸ್ತು, ಶುದ್ಧವಾಗಿರುವ ಯೋಗಿ. ಯೋಗಿ ಸರಕಾರ ಅಪರಾಧಿಗಳನ್ನು ಕಾಸ್ಗಂಜಿನಿಂದ ಹೊರಹೋಗಲು ಬಿಡದೆ ನಾಲ್ಕೇ ದಿನಗಳಲ್ಲಿ ಬಂಧಿಸಿತು! ಅವರ ಬಳಿಯಲ್ಲಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಂಡಿತು. ನೂರ ಹನ್ನೆರಡು ಜನರನ್ನು ಬಂಧಿಸಿ ಜೈಲಿಗಟ್ಟಿತು. ಕಾಸ್ಗಂಜಿನಲ್ಲಿ ಅರೆಸೇನಾ ಪಡೆಯನ್ನು ನಿಯೋಜಿಸಿ ಶಾಂತಿ ಮರುಕಳಿಸುವಂತೆ ಮಾಡಿ ದಂಗೆಯಲ್ಲಿ ಪಾಲ್ಗೊಂಡವರ, ರಾಷ್ಟ್ರಧ್ವಜವನ್ನು ವಿರೂಪಗೊಳಿಸಿದವರ ಮೇಲೆ ಕೇಸು ದಾಖಲಿಸಿತು.

ಯೋಗಿ ಆಡಳಿತ – ಯೋಗ್ಯ ಆಡಳಿತ

ಇದೇನೂ ಯೋಗಿಯವರ ಮೊತ್ತ ಮೊದಲ ಕ್ರಮವೇನಲ್ಲ. ಅಧಿಕಾರಕ್ಕೆ ಬಂದ ಮೊದಲ ದಿನವೇ ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಅಭಿವೃದ್ಧಿಗಳನ್ನೇ ಗಮನದಲ್ಲಿಟ್ಟುಕೊಂಡು ಹಲವು ಕ್ರಮಗಳನ್ನು ಕೈಗೊಂಡಿದ್ದರು ಯೋಗಿ. ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಉತ್ತರ ಪ್ರದೇಶದಲ್ಲಿ ಸಾವಿರಕ್ಕೂ ಹೆಚ್ಚು ಎನ್ ಕೌಂಟರುಗಳು ನಡೆದಿವೆ. ರೌಡಿಗಳು ಯೋಗಿಯವರ ಹೆಸರು ಕೇಳುತ್ತಿದ್ದಂತೆ ಕೊರೆವ ಚಳಿಯಲ್ಲೂ ಬೆವೆತು ಬಿಡುತ್ತಾರೆ. ಹಿಂದೆ ಗೋರಖ್ ಪುರದ ಅಂಗಡಿ ಮಾಲಿಕರು ಮಾತ್ರ ಗೂಂಡಾಗಳಿಗೆ ಸುಂಕ ಕೊಡದೆ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಈಗ ಸಂಪೂರ್ಣ ಉತ್ತರಪ್ರದೇಶಕ್ಕೆ ಭಾಗ್ಯ ಸಿಗಲಾರಂಭಿಸಿದೆ. ಸೋಂಬೇರಿತನದಿಂದ ಕೆಲಸ ಮಾಡದೆ ಪುಡಿ ರೌಡಿಗಳಾಗಿ ರೋಲ್ಕಾಲು ಮಾಡುತ್ತಿದ್ದವರೆಲ್ಲಾ ಹೇಳ ಹೆಸರಿಲ್ಲದಂತೆ ಮಾಯವಾಗುತ್ತಿದ್ದಾರೆ. ಯುವತಿಯರನ್ನು ಚುಡಾಯಿಸುತ್ತಿದ್ದ, ತರುಣಿಯರ ಸೆರಗೆಳೆಯುತ್ತಿದ್ದ ಬೀದಿ ಕಾಮಣ್ಣರಿಗೆ ರೋಮಿಯೋ ನಿಗ್ರಹ ದಳದ ಅಂಕುಶ ಬಿದ್ದಿದೆ. ಇದರಿಂದಾಗಿ ಲವ್ ಜಿಹಾದಿನ ಪ್ರಮಾಣವೂ ಕಡಿಮೆಯಾಗಿದೆ. ಗೋವಿನ ಕೊರಳ ಕೊಯ್ಯುತ್ತಿದ್ದ ಅಕ್ರಮ ದಂಧೆ ಸ್ತಬ್ಧವಾಗಿದೆ. ಅಲ್ಲಲ್ಲಿ ಲೊಚಕ್ ಎಂದು ಉಗುಳುತ್ತಿದ್ದ ಬಾಯಿಗಳಿಗೆಲ್ಲಾ ನಿರ್ಮಲ ಮನಸ್ಸಿನ ಖಡಕ್ ಯೋಗಿಯ ಬಿಸಿ ತಟ್ಟಿದೆ. ಸೋಂಬೇರಿ ಅಧಿಕಾರಿಗಳು ಧಿಗ್ಗನೆದ್ದು ಪಟ್ಟಾಗಿ ಕೆಲಸದಲ್ಲಿ ತೊಡಗಿದ್ದಾರೆ. ಪೊಲೀಸರಿಗೂ ಖಾಕಿಯ ಧರ್ಮ, ನಿಯತ್ತು ನೆನಪಾಗಿದೆ. ಯೋಗಿ ಸರಕಾರ ನೂರೈವತ್ತು ವರ್ಷಕ್ಕೂ ಹಳೆಯದಾದ ಬ್ರಿಟಿಷರ ಕಾಲದ ಸುಸ್ಥಿರ ಆಡಳಿತಕ್ಕೂ, ಅಭಿವೃದ್ಧಿಗೂ ಅಡ್ಡಗಾಲಾಗಿದ್ದ ಸಾವಿರಕ್ಕೂ ಹೆಚ್ಚು ಕಾನೂನುಗಳನ್ನು ಕಿತ್ತೆಸೆಯಲು ಉಪಕ್ರಮಿಸಿದೆ. ಯೋಗಿಯ ಆಡಳಿತದಿಂದ ರೈತರೂ ಹರ್ಷಿತರಾಗಿದ್ದಾರೆ. ಗಂಗೆಯ ಮೊಗದಲ್ಲೂ ನಗುವರಳಿದೆ. ಗೊಬ್ಬರದ ಗುಂಡಿಯಂತೆ ನಾರುತ್ತಿದ್ದ ಉತ್ತರ ಪ್ರದೇಶದಲ್ಲಿ ಕೆಲವೇ ದಿನಗಳಲ್ಲಿ ಬದಲಾವಣೆಯ ಕಸ್ತೂರಿ ಪರಿಮಳಿಸುತ್ತಿದೆ.  

ಕತ್ತಲಿನತ್ತ ಸಾಗುತ್ತಿರುವ ಕರ್ನಾಟಕ

ಉತ್ತರ ಪ್ರದೇಶದಲ್ಲಿ ಬೆಳಕಿನ ಪಥ ನಿರ್ಮಾಣವಾಗುತ್ತಿದ್ದರೆ ಕರ್ನಾಟಕದಲ್ಲಿ ನಿರಾಶೆಯ ಕತ್ತಲು, ಭಯದ ಕರಿನೆರಳು ಆವರಿಸುತ್ತಿದೆ. ರಾಜ್ಯದ ವಿದ್ಯುತ್ ಸಚಿವರೇನೋ ಹತ್ತು ನಿಮಿಷಕ್ಕೊಮ್ಮೆ ವಿವಿಧ ಚಾನೆಲುಗಳಲ್ಲಿ ಕರ್ನಾಟಕವನ್ನು ಬೆಳಗುತ್ತಿದ್ದೇವೆ ಎಂಬಂತೆ ನಾಚಿಕೆಯಿಲ್ಲದೆ ಜಾಹೀರಾತು ಕೊಡುತ್ತಿದ್ದಾರೆ. ಆದರೆ ಜೀವಭಯದ ಕತ್ತಲನ್ನು ಹೊಡೆದೋಡಿಸುವವರಾರು? ಕಳೆದ ನಾಲ್ಕು ವರ್ಷಗಳಲ್ಲಿ ಅದೆಷ್ಟು ಕೊಲೆಗಳು! ಕಳೆದ ಮೂರು ವರ್ಷಗಳಲ್ಲಿ ಹಿಂದೂ ಸಂಘಟನೆಗಳ ಇಪ್ಪತ್ತಕ್ಕೂ ಹೆಚ್ಚು ಕಾರ್ಯಕರ್ತರ ಕೊಲೆಯಾಗಿದೆ. ಪರೇಶ್ ಮೇಸ್ತನ ಹೆಣದ ಭೀಭತ್ಸ್ಯ ದೃಶ್ಯ ಇನ್ನೂ ಮರೆಯುವ ಮೊದಲೇ ದೀಪಕ್ ರಾವ್ನನ್ನು ಕೊಲ್ಲಲಾಯಿತು. ಮೊನ್ನೆ ಮೊನ್ನೆ ಸಂತೋಷನನ್ನು. ರುದ್ರೇಶ್, ವಿಶ್ವನಾಥ್, ಮಾಗಲಿ ರವಿ ಹಾಗೂ ಶರತ್ ಮಡಿವಾಳ ಕೊಲೆಯಲ್ಲಿ ಸಿಕ್ಕಿಬಿದ್ದ ಆರೋಪಿಗಳು ಎಸ್.ಡಿ.ಪಿ., ಕೆ.ಎಫ್.ಡಿಗೆ ಸೇರಿದವರು ಎಂದು ತಿಳಿದಿದ್ದರೂ 175ಕ್ಕೂ ಹೆಚ್ಚು ಪ್ರಕರಣಗಳನ್ನು ಕೈ ಬಿಟ್ಟು ಹಂತಕರನ್ನು ಖುಲಾಸೆಗೊಳಿಸುವ ತೀರ್ಮಾನವನ್ನು ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಾಚಿಕೆಗೆಟ್ಟ ಸರ್ಕಾರ ಸಿದ್ದರಾಮಯ್ಯನವರದ್ದು. ಅಧಿಕಾರಕ್ಕೆ ಬಂದ ಮರುಘಳಿಗೆಯಲ್ಲೇ ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಕೊಲೆ, ಕೋಮುಗಲಭೆ ಆರೋಪದ ಮೇಲೆ ಬಂಧಿತರಾಗಿದ್ದ 1700ಕ್ಕೂ ಹೆಚ್ಚು ಸಿಮಿ, ಪಿ.ಎಪ್. ಉಗ್ರರಿಗೆ ಬಿಡುಗಡೆ ಭಾಗ್ಯ ಒದಗಿಸಿದ್ದ ಸಿದ್ದರಾಮಯ್ಯ ಸರಕಾರದಿಂದ ಕಾನೂನು ಸುವ್ಯವಸ್ಥೆ, ನ್ಯಾಯಗಳನ್ನು ನಿರೀಕ್ಷಿಸಲು ಸಾಧ್ಯವೇ?

ಬಿಡದ ಗ್ರಹಣ

ಅಸಲಿಗೆ ಸಿದ್ದರಾಮಯ್ಯ ಅಧಿಕಾರ ಗ್ರಹಣ ಮಾಡಿದ ದಿವಸವೇ ರಾಜ್ಯಕ್ಕೆ ಗ್ರಹಣ ಹಿಡಿದಿತ್ತು. ಮಾರನೇ ದಿವಸವೇ ಉಚ್ಚಿಲದ ಮನೆಯ ಗೋವು ಹಾಗೂ ಕರುವನ್ನು ಕತ್ತರಿಸಿ ತುಳಸಿ ಕಟ್ತೆಯ ಮುಂದೆ ಎಸೆದು ಹೋಗಿತ್ತು ಮತಾಂಧ ಪಡೆ. ಮುಂದಂತೂ ಮಂಗಳೂರಿನಲ್ಲಿ ಚೂರಿ ಇರಿತ, ಪೆಟ್ರೋಲ್ ಬಾಂಬು ದಾಳಿ ಪ್ರಕರಣಗಳು ಮರುಕಳಿಸುತ್ತಲೇ ಇದ್ದವು. ಇವ್ಯಾವುದನ್ನೂ ಭೇದಿಸಲಾಗಲೀ, ತಪ್ಪಿತಸ್ಥರೆಂದು ಗೊತ್ತಾದವರನ್ನು ಬಂಧಿಸಲಾಗಲೀ ಪೊಲೀಸರಿಗೆ ಸಾಧ್ಯವಾಗಿಲ್ಲ. ಸಾಧ್ಯವಾಗುವುದಾದರೂ ಹೇಗೆ? ನಿಷ್ಠಾವಂತರಾಗಿ ಕೆಲಸ ಮಾಡುವವರು ತಮಗೆ ನಿಷ್ಠೆ ತೋರಿಸಲಿಲ್ಲ ಎಂಬ ಒಂದೇ ಕಾರಣಕ್ಕೆ ನೇಣು ಭಾಗ್ಯ ಒದಗಿಸಿದ ಸರ್ಕಾರದ ಕೈ ಕೆಳಗೆ ಪೊಲೀಸರಾದರೂ ವೃತ್ತಿ ನಿಷ್ಠೆಯಿಂದ ದುಡಿಯಲು ಸಾಧ್ಯವೇ? ಡಿವೈಎಸ್ಪಿ ಗಣಪತಿ ಪ್ರಕರಣದಿಂದ ಹಿಡಿದು ಐಪಿಎಸ್ ಅಧಿಕಾರಿ ಡಿ.ರೂಪಾವರೆಗೆ ಸರ್ಕಾರದ ದೌರ್ಜನ್ಯಕ್ಕೆ ಬಲಿಯಾದ ಅದೆಷ್ಟೋ ಅಧಿಕಾರಿಗಳನ್ನು ಕಂಡೂ ತಮ್ಮ ಪ್ರಾಣ ಕಳೆದುಕೊಳ್ಳುವ ಕೆಲಸಕ್ಕೆ ಅವರಾದರೂ ಯಾಕೆ ಕೈ ಹಾಕಿಯಾರು? ಸದ್ಯದ ಪರಿಸ್ಥಿತಿಯಲ್ಲಿ ಪೊಲೀಸರು ಸಾರ್ವಜನಿಕರಿಗೆ ರಕ್ಷಣೆ ಕೊಡುವುದು ಹಾಗಿರಲಿ, ಜನರೇ ಅವರನ್ನು ರಕ್ಷಿಸಬೇಕಾದ ಪರಿಸ್ಥಿತಿ ರಾಜ್ಯದಲ್ಲಿದೆ. ಇನ್ನು ಜನಸಾಮಾನ್ಯರ ಪಾಡೇನು? ಮಂಡ್ಯದಲ್ಲಿ ಜನ ತನಗೆ ಕಪ್ಪು ಬಾವುಟ ತೋರಿಸಿದರೆಂದು ಪೊಲೀಸ್ ವರಿಷ್ಠಾಧಿಕಾರಿಯನ್ನು ವೇದಿಕೆಯ ಮೇಲೆ ಸಾರ್ವಜನಿಕರ ಎದುರೇ ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿಯ ಅಧಿಕಾರದಡಿಯಲ್ಲಿ ನ್ಯಾಯ ನಿರೀಕ್ಷಿಸಲು ಸಾಧ್ಯವೇ?

ಮರೀಚಿಕೆಯಾದ ನ್ಯಾಯ

ಉಳಿದವರಿಗೆ ನ್ಯಾಯದಾನದ ಕಥೆ ಹಾಗಿರಲಿ. ತಮ್ಮವರು ಎಂದು ಕಾಕಗಳೇ ಹೇಳಿಕೊಳ್ಳುವ ಕಲ್ಬುರ್ಗಿ, ಗೌರಿಯವರ ಹಂತಕರ ಪತ್ತೆಯೇ ಸರಕಾರಕ್ಕೆ ಸಾಧ್ಯವಾಗಿಲ್ಲ. ಪ್ರಕರಣಗಳ ತನಿಖೆ ಮಾಡುವುದು ಬಿಟ್ಟು ತಾನು ಗೌರಿ, ತನ್ನವರು ಗೌರಿ ಎನ್ನುವ ಬಕೆಟ್ ಗ್ಯಾಂಗುಗಳನ್ನು ಪೋಷಿಸುತ್ತಿದೆ. ಅಧಿಕಾರಿಗಳ, ಭಾಜಪಾ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ಕೊಲೆಯಲ್ಲಿ ಪ್ರತ್ಯಕ್ಷ ಶಾಮೀಲಾದ ತನ್ನ ಸಚಿವ, ಶಾಸಕರಿಗೆ ರಾಜಾತಿಥ್ಯ ಕೊಟ್ಟು ಪೋಷಿಸುತ್ತಿರುವ ಸರಕಾರ ತನ್ನ ಬದುಕಿಗಾಗಿ ತನ್ನವರನ್ನೇ ಬಲಿ ಕೊಡಬಲ್ಲುದು ಎನ್ನುವ ಸಣ್ಣ ಸಂಶಯವೂ ಬಕೆಟ್ ಗ್ಯಾಂಗುಗಳಿಗೆ ತಿಳಿಯದೇ ಇರುವುದು ವಿಚಿತ್ರವೇ ಸರಿ! ಸಾವಿರಕ್ಕೂ ಹೆಚ್ಚು ರೈತರ ಆತ್ಮಹತ್ಯೆ, ದಕ್ಷ ಅಧಿಕಾರಿಗಳ ವರ್ಗಾವಣೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ನಗರಾಭಿವೃದ್ಧಿ, ಸ್ಟೀಲ್ ಬ್ರಿಡ್ಜ್ ಕೊನೆಗೆ ಹಾಸ್ಟೆಲ್ಲಿಗೆ ಕೊಡುವ ಹಾಸಿಗೆ ದಿಂಬುಗಳಲ್ಲೂ ಹಗರಣ, ಹಗರಣಗಳಲ್ಲಿ ಭಾಗಿಯಾದ ಸಚಿವರಿಗೆ ಕ್ಲೀನ್ ಚಿಟ್‍, ಹೆಚ್ಚುತ್ತಿರುವ ಲವ್ ಜಿಹಾದ್, ಪೂಜಾಸ್ಥಳಗಳ ಧ್ವಂಸ, ಜನರ ಧಾರ್ಮಿಕ ನಂಬಿಕೆಯ ಮೇಲೆ ಪ್ರಹಾರ, ಮತಾಂಧ ಟಿಪ್ಪುವನ್ನು ಹಾಡಿ ಹೊಗಳಿ ತಿರುಚಿದ ಇತಿಹಾಸದ ವೈಭವೀಕರಣ, ಶಾಲಾ ಮಕ್ಕಳ ಅನ್ನಕ್ಕೂ ಕನ್ನ, ಪ್ರತಿ ವ್ಯಕ್ತಿಯ ಮೇಲೆ 38000 ರೂಪಾಯಿ ಸಾಲ ಏನು ಭಾಗ್ಯ…ಏನು ಭಾಗ್ಯ! ಉದಯವಾಗಿದೆ ಮರಣ ಭಾಗ್ಯದ ನಾಡು! ಅರಾಜಕತೆ, ದುರಾಡಳಿತದ ಬೀಡು!

ಬೇಕಿದೆ ಭಾಗ್ಯಗಳಿಂದ ಮುಕ್ತಿ

ಹೌದು ಸಂಸಾರ(ಜಗತ್ತು)ವನ್ನು ಒಬ್ಬ ಸಂನ್ಯಾಸಿಯೇ ಸರಿಯಾಗಿ ಅರ್ಥ ಮಾಡಿಕೊಳ್ಳಬಲ್ಲ. ಅವನದ್ದೇ ಎನ್ನುವ ಸಂಸಾರ ಅವನಿಗಿಲ್ಲ; ಜಗತ್ತೇ ಅವನ ಸಂಸಾರ. ಹಾಗಾಗಿಯೇ ದುಃಖಗಳಿಗೊಂದು ಪರಿಹಾರ ಅವನಲ್ಲಿದೆ; ಸಮಾಜದ ನೆಮ್ಮದಿಯ ನಾಳೆಗಳಿಗಾಗಿ ತನ್ನ ವೈಯುಕ್ತಿಕ ಅಭಿಲಾಶೆಯನ್ನು ಬದಿಗಿರಿಸಿ ಹೋರಾಡುವ ಛಲ ಅವನಲ್ಲಿದೆ. ಹಾಗಾಗಿಯೇ ಅವನು ಸಮರ್ಥ ಆಡಳಿತವನ್ನು ನೀಡಬಲ್ಲ. ಅದಕ್ಕೇ ಅಲ್ಲಿ ಪ್ರಶ್ನೆಗಳಿಲ್ಲ. ಆದರೆ ಇಲ್ಲಿ ಉತ್ತರವೇ ಇಲ್ಲ! ಇಲ್ಲಿಗೂ ಒಬ್ಬ ಯೋಗಿ ಬೇಕಾಗಿದೆ. ಕರ್ನಾಟಕವನ್ನು ಮತ್ತೆ ಸರಿಯಾದ ಹಾದಿಗೆ ತರಲು ಯೋಗಿಯಿಂದಲೇ ಸಾಧ್ಯ. ಬೊಗಳೆ ಭಾಗ್ಯಗಳ ಭೋಗಿಗಳಿಂದಲ್ಲ.

(ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

Facebook ಕಾಮೆಂಟ್ಸ್

Rajesh Rao: ವೃತ್ತಿ: ವಿ ಎಲ್ ಎಸ್ ಐ ಇಂಜಿನಿಯರ್ ಪ್ರವೃತ್ತಿ: ಇತಿಹಾಸ/ಪ್ರಚಲಿತ ವಿದ್ಯಮಾನ, ಕಥೆ-ಕವನ ಬರವಣಿಗೆ
Related Post