X

ಈ ‘ಬಂದ್’ನ, ಜನುಮ ಜನುಮದ ಅನು’ಬಂದ್’ನ

ಬೇಕು ಬೇಡ ಎಂಬ ವಾಗ್ವಾದಗಳ ನಡುವೆಯೇ ಮತ್ತೊಂದು ಬಂದ್ ಬಂದು ಹೋಯಿತು. ಕಳೆದ ವಾರವಿಡೀ ಈ ಬಂದ್‌ ಬಗ್ಗೆಯೇ ಚರ್ಚೆ. ಎಷ್ಟೆಂದರೆ ಬಂದ್ ಮುಗಿದರೂ ಬಂದ್ ಬಗ್ಗೆ ನಡೆಯುತ್ತಿರುವ ಚರ್ಚೆ ಬಂದಾಗುವ ಲಕ್ಷಣ ಕಾಣುತ್ತಿಲ್ಲ. ಹೀಗೆ ಮತ್ತೆ ಮತ್ತೆ ಬಂದು ಬಂದು ವಕ್ಕರಿಸುವ ಬಂದ್‌ಗಳನ್ನು ಗಮನಿಸಿದರೆ, ಮರಳಿ ಬರುವುದು ಯುಗಾದಿ ಮಾತ್ರವಲ್ಲ ಬಂದ್ ಕೂಡಾ ಎಂದೆನಿಸದೇ ಇರದು. ನಾಡಿನ ಹಿತಕ್ಕಾಗಿ ಹೋರಾಡುತ್ತೇವೆ ಎನ್ನುತ್ತಾ ಆಗಾಗ ಬಂದ್‌ಗೆ ಕರೆಕೊಡುವ ಈ ಪೂರ್ಣಕಾಲಿಕ ಹೋರಾಟಗಾರರನ್ನು ‘ಬಂದ್ ಮಿತ್ರ’ರು ಎನ್ನಬಹುದು. ಈ ಸಂದರ್ಭದಲ್ಲಿ ಎಲ್ಲವೂ ಬಂದಾಗಬೇಕು ಎಂಬ ಸಂಬಂಧ ಕೆಲಸ ಮಾಡುವ ಇವರು ‘ಕ್ಲೋಸ್’ ರಿಲೇಟಿವ್ಸೇ ಇರಬೇಕು. ಇವರು ಮುಚ್ಚುವುದರಲ್ಲಿಯೇ ಹೆಚ್ಚೆಚ್ಚು ಆಸ್ಥೆವಹಿಸುವ ಮೂಲಕ ಒಂದು ಹಂತಕ್ಕೆ ಜನರ ಮೆಚ್ಚುಗೆ ಗಳಿಸಿದವರು. ಆದರೆ ಅದು ಅತಿಯಾಗಿ ಆ ಮೆಚ್ಚುಗೆಯೇ ಈಗ “ನಿಮ್ಮ ಮುಖ ಮುಚ್ಚಾ” ಎಂಬ ಬೈಗುಳವಾಗಿ ಪರಿವರ್ತನೆಯಾಗುವ ಸ್ಥಿತಿ ನಿರ್ಮಾಣವಾಗಿರುವುದನ್ನು ಕಾಣಬಹುದಾಗಿದೆ.

ಬಂದ್‌ಗೆ ಕರೆಕೊಡುವವರು ಎಲ್ಲವನ್ನೂ ಬಂದ್ ಮಾಡಿಸುತ್ತಾರೆ, ಆದರೆ ಅದೇಕೆ ಕೆಲವರ ಬಾಯಿಯನ್ನು ಮಾತ್ರ ಬಂದ್ ಮಾಡಿಸುವುದಿಲ್ಲವೋ ಎಂಬ ಪ್ರಶ್ನೆ ಜನರದ್ದು. ಇಂತಹದ್ದೊಂದು ಕೋರಿಕೆಯನ್ನು, ಮನದಿಂಗಿತವನ್ನು ಗುಪ್ತವಾಗಿ ಕಾಯ್ದುಕೊಂಡು ಪ್ರತೀ ಬಂದ್‌ನ ಸಂದರ್ಭದಲ್ಲೂ ಈ ಬಾರಿಯಾದರೂ ಈಡೇರಿತೇ ಎಂಬ ನಿರೀಕ್ಷೆಯಿಂದ ಕಾಯುತ್ತಿರುವ ವಿವಾಹಿತರ ದೊಡ್ಡ ಗುಂಪೂ ಇದೆ. ಅವರು ಕಾಯುತ್ತಿರುವುದು ತಮ್ಮ ಹೆಂಡತಿಯರ ಬಾಯಿ ಒಂದು ದಿನಕ್ಕಾದರೂ ಬಂದ್ ಆದೀತೆ ಎಂದು?!!  ಆದರೆ ಯಾವ ಬಂದ್ ಕೂಡಾ ಅದರಲ್ಲಿ ಯಶಸ್ವಿಯಾಗಿಲ್ಲ ಎನ್ನುವುದು ಕಟು ವಾಸ್ತವ. ಹೆಂಡತಿ ಹಾಗೂ ಟಿ.ವಿ ನಿರೂಪಕರ ಬಾಯಿಯನ್ನು ಬಂದ್ ಮಾಡಲು ಸಫಲವಾಗದ ಯಾವ ಬಂದ್‌ನ್ನು ಕೂಡಾ ಸಂಪೂರ್ಣ ಯಶಸ್ವೀ ಎನ್ನಲಾಗದು.

ಕೆಲವು ತಥಾಕಥಿತ ಹೋರಾಟಗಾರರು ಆಗಾಗ ಬಂದ್ ಗೆ ಕರೆ ನೀಡುತ್ತಲೇ ಇರುತ್ತಾರೆ, ಏಕೆಂದರೆ  ಅವರು ಹಾಗೆ ಮಾಡದೇ ಇದ್ದರೆ ಅವರಿಗೆ ಸಿಗುವ ಜನಪ್ರಿಯತೆಯೇ ಬಂದ್ ಆಗುವ ಅಪಾಯವಿದೆ. ಬಂದ್ ಮಾಡಿದರಷ್ಟೇ ತಮ್ಮ  ಕಾರ್ಯಚಟುವಟಿಕೆ ಓಪನ್ ಮಾಡುವ ಈ ಹೋರಾಟಗಾರರನ್ನು ‘ಬಂದ್’ಯಗಾರರು ಎನ್ನಲಡ್ಡಿಯಿಲ್ಲ. ಇನ್ನು ಕೆಲವರಂತೂ ತಾವು ಈ ಭೂಮಿಯ ಮೇಲೆ ಬಂದಿರುವುದೇ ಬಂದ್ ಮಾಡಲೇನೋ ಎಂಬಂತೆ ವರ್ತಿಸುತ್ತಾರೆ. ‘ನಿಮಗೆ ಸೂಕ್ತವಾದ ವೇದಿಕೆಯನ್ನು ನೀವೇ ಸೃಷ್ಟಿಸಿಕೊಳ್ಳಿ’ ಎಂಬ ತತ್ತ್ವಜ್ಞಾನಿಗಳ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ಕೆಲವರು ಬೇರೆ ಬೇರೆ ಹೆಸರುಗಳಲ್ಲಿ ನೂರಾ ಒಂದು ವೇದಿಕೆಗಳನ್ನು ರಚಿಸಿಕೊಂಡು, ಹೀಗೆ ಹೋರಾಟದ ಹಾದಿ ಹಿಡಿದಿದ್ದಾರೆ. ಅವುಗಳ ನೆರವಿನಿಂದ ಸಂಪುಗಳನ್ನು ಹೂಡಿ ತಮ್ಮ ಸಂಪಾದನೆಯನ್ನೂ ಗಿಟ್ಟಿಸಿಕೊಳ್ಳುವುದರೊಂದಿಗೆ ದಿನೇ ದಿನೇ ಸೊಂಪಾಗಿ ಬೆಳೆಯುತ್ತಿರುವ ಉದಾಹರಣೆಗಳೂ ಸಾಕಷ್ಟಿವೆ.

ಇನ್ನು ಈ ಬಂದ್‌ಗೆ ಕರೆನೀಡುವ ಹಾಗೂ ಅದಕ್ಕೆ ಬೆಂಬಲ ನೀಡುವ ಹಿಂದೆಯೂ ಹಲವಾರು ನಿಗೂಢ ಲೆಕ್ಕಾಚಾರಗಳು ಅಡಗಿರುತ್ತವೆ ಎನ್ನುವುದನ್ನು ಕೂಡಾ ಒಪ್ಪಲೇಬೇಕು. ರಾಜಕೀಯ ಪಕ್ಷಗಳು ಹೋರಾಟಗಾರರನ್ನು ‘ಗಂಭೀರವಾಗಿ’ ಸ್ವೀಕರಿಸಲು ಅವರೆಷ್ಟು ಬಂದ್ ಮಾಡಿಸಿದ್ದಾರೆ ಎಂಬ ಅಂಶವೂ ಕಾರಣವಾಗುತ್ತದೆ. ರಾಜಕಾರಣಕ್ಕಾಗಿಯೇ ಬಂದ್‌ನ್ನು ಬೆಂಬಲಿಸಿಸುವವರಿರುವಂತೆ, ‘ರಜಾ’ಕಾರಣಕ್ಕಾಗಿ ಬೆಂಬಲಿಸುವವರೂ ಇದ್ದಾರೆ! ಆದರೆ ‘ಪ್ರಜಾ’ಕಾರಣಕ್ಕೆ ನಡೆಯುವ ಬಂದ್‌ಗಳು ಬೆರಳೆಣಿಕೆಯಷ್ಟು ಮಾತ್ರ. ಹಾಗೆ ನಡೆದರೂ ಅದರಿಂದಲೂ ಲಾಭವಾದ ಉದಾಹರಣೆ ಇರಲಿಕ್ಕಿಲ್ಲ. ಏಕೆಂದರೆ ಪ್ರತೀ ಬಂದ್‌ನ ತರುವಾಯದ ದಿನ ಪತ್ರಿಕೆಗಳಲ್ಲಿ ಸಾವಿರಾರು ಕೋಟಿ ರುಪಾಯಿಗಳ ನಷ್ಟ ಎಂದು ಬರೆದಿರುತ್ತಾರೆಯೆ ಹೊರತು ಚಿಕ್ಕಾಸಾದರೂ ಲಾಭವಾಯಿತೆಂದು ಬರೆದ ಒಂದೇ ಒಂದು ಉದಾಹರಣೆಯನ್ನು ನೀವು ನೋಡಿದ್ದೀರಾ? ಹಾಗಾದರೆ ಇವುಗಳಿಂದ ಏನೂ ಪ್ರಯೋಜನವಿಲ್ಲವೇ?  ಇಲ್ಲ ಎಂದರೆ, ಅಯ್ಯೋ! ಅದಕ್ಕೂ ಮತ್ತೊಂದು ಬಂದ್ ಕರೆಕೊಟ್ಟು ಬಿಟ್ಟಾರು, ಹುಷಾರು!!

ಓವರ್ಡೋಸ್: ಹೋರಾಟಗಾರರಲ್ಲಿ, “ನೀವು ಬಂದ್ ಮಾಡಿಸುವುದಿದ್ದರೆ ಮೊದಲು ಹೆಂಡತಿಯರ ಬಾಯಿ ಬಂದ್ ಮಾಡಿಸಿ ನೋಡೋಣ” ಎಂದು ಸವಾಲು ಹಾಕಿದರೆ ಅವರು ಮತ್ತೆಂದೂ ಬಂದ್ ಮಾಡಲು ಮುಂದೆ ಬರಲಾರರು!!

ಸಂದೇಶ್. ಎಚ್. ನಾಯ್ಕ್, ಹಕ್ಲಾಡಿ

Facebook ಕಾಮೆಂಟ್ಸ್

Sandesh H Naik: ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.
Related Post