X

ಕಾಣದ ಕೈಗಳು ನೀಡಿದ ನೆರವು

ರವೀಂದ್ರ ಕೌಶಿಕ್ ರವರು 11 ಏಪ್ರಿಲ್ 1952 ರಲ್ಲಿ ಶ್ರೀಗಂಗಾನಗರ, ರಾಜಸ್ಥಾನದಲ್ಲಿ ಜನಿಸಿದರು. ತಂದೆ ವಾಯುಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ತಾಯಿ ಅಮಲಾದೇವಿ  ಗೃಹಿಣಿಯಾಗಿದ್ದರು. ಒಬ್ಬ ಸ್ಫುರದ್ರೂಪಿ ತರುಣನಾಗಿದ್ದ ರವೀಂದ್ರ ಕೌಶಿಕ್‍ವರು ಒಳ್ಳೆಯ ಧೃಢಕಾಯ ಶರೀರವನ್ನು ಹೊಂದಿದ್ದರು. ಚಿಕ್ಕಂದಿನಿಂದಲೂ ನಾಟಕ, ನೃತ್ಯ, ರಂಗಭೂಮಿಯಲ್ಲಿ ಆಸಕ್ತರಾಗಿದ್ದ  ರವೀಂದ್ರ ಕೌಶಿಕ್ ಒಬ್ಬ ಉತ್ತಮ ನಾಟಕಗಾರನೂ ರಂಗಕರ್ಮಿಯೂ ಆಗಿದ್ದರು. 1973 ರಲ್ಲಿ ಲಕ್ನೋದಲ್ಲಿ ನಡೆದ ರಾಷ್ಟೀಯ ಮಟ್ಟದ ನಾಟಕರಂಗದಲ್ಲಿ ಇವರ ಪಾತ್ರವನ್ನೂ ಮತ್ತು ಪಾತ್ರದಲ್ಲಿನ ತಲ್ಲೀನತೆಯನ್ನೂ ಕಂಡು ಸಂತೋಷಗೊಂಡ “ರಾ” ಬೇಹುಗಾರಿಕಾ ಸಂಸ್ಧೆಯ ಕೆಲವು ಹಿರಿಯ ಅಧಿಕಾರಿಗಳು ರವೀಂದ್ರ ಕೌಶಿಕ್ ರವರಿಗೆ ತಮ್ಮ ಮೆಚ್ಚುಗೆಯನ್ನೂ, ಅಭಿನಂದನೆಗಳನ್ನೂ ತಿಳಿಸಿ, ಭಾರತೀಯ ಬೇಹುಗಾರಿಕಾ ಸಂಸ್ಥೆ “ರಾ”ನಲ್ಲಿ ಕಾರ್ಯನಿರ್ವಹಿಸಲು ಕೆಲಸದ ಆಹ್ವಾನವನ್ನೂ ನೀಡಿದರು. ಆಗ ಅವರ ವಯಸ್ಸು ಕೇವಲ 23.

“ರಾ” (ರೀಸರ್ಚ್ ಅನಾಲಿಸಿಸ್ ಅಂಡ್ ವಿಂಗ್) ಭಾರತದ ಬೇಹುಗಾರಿಕಾ ಸಂಸ್ಥೆಯಾಗಿದ್ದು ಇತರೆ ದೇಶಗಳಿಂದ ಭಾರತಕ್ಕೆ ಬಂದೆರಗಬಹುದಾದ ಅಪಾಯದ ಮುನ್ಸೂಚನೆಯನ್ನು ಭಾರತದ ರಕ್ಷಣಾ ಸಚಿವಾಲಯಕ್ಕೆ ಒದಗಿಸುತ್ತದೆ. ದೇಶಕ್ಕಾಗಿ ಏನನ್ನಾದರು ಮಾಡುವ ಹಂಬಲ ರವೀಂದ್ರರಿಗೆ ಹುಟ್ಟಿನಿಂದಲೂ ಇತ್ತು. ಹಾಗಾಗಿ ಮರುಮಾತಿಲ್ಲದೆ ಅವರು ಭಾರತೀಯ ಬೇಹುಗಾರಿಕಾ ಸಂಸ್ಥೆ “ರಾ” ಸೇರಿದರು ನಂತರ ಅವರಿಗೆ ದೆಹಲಿಯಲ್ಲಿ 2 ವರ್ಷಗಳ ಕಾಲ ಕಠಿಣ ತರಬೇತಿ ನೀಡಲಾಯಿತು. ಆ ತರಬೇತಿಯಲ್ಲಿ ಅವರಿಗೆ ಉರ್ದುವನ್ನು ಕಲಿಸಲಾಯಿತು, ಮುಸ್ಲಿಮರ ಧಾರ್ಮಿಕ ವಿಧಿವಿಧಾನಗಳನ್ನು ಹೇಳಿಕೊಡಲಾಯಿತು, ಮುಸ್ಲಿಮರಂತೆ ಸುನ್ನತಿ ಮಾಡಲಾಯಿತು. ತದನಂತರ ಪಾಕಿಸ್ತಾನದ ಭೌಗೋಳಿಕ, ಆಂತರಿಕ, ರೀತಿ ರಿವಾಜು, ನಡೆ-ನುಡಿಗಳನ್ನು ಕಲಿಸಿಕೊಡಲಾಯಿತು.  ರವೀಂದ್ರ ಕೌಶಿಕ್‍ರವರು ಮೊದಲಿನಿಂದಲೂ ಪಂಜಾಬಿಯನ್ನು ತುಂಬಾ ಚೆನ್ನಾಗಿ ಮಾತನಾಡುತ್ತಿದ್ದರು. ಪಂಜಾಬಿ ಭಾಷೆಯು ಪಾಕಿಸ್ತಾನದ ಕೆಲವು ಪ್ರಾಂತ್ಯಗಳಲ್ಲೂ ಚಲಾವಣೆಯಲ್ಲಿದ್ದರಿಂದ ಅವರಿಗೆ ಅನುಕೂಲವಾಯಿತು.

ಪಾಕಿಸ್ತಾನದ ನಾಗರಿಕನಂತೆ ತೋರುವ ಎಲ್ಲಾ ದಾಖಲೆ ಪತ್ರಗಳನ್ನೂ ಅವರಿಗೆ “ರಾ” ದಿಂದ ಒದಗಿಸಲಾಯಿತು. 1975 ರಲ್ಲಿ ಅವರು “ನಬಿ ಅಹಮದ್ ಶೌಕಿರ್” ಎಂಬ ಹೊಸ ಹೆಸರಿನೊಂದಿಗೆ ಪಾಕಿಸ್ತಾನ ಪ್ರವೇಶಿಸಿದರು. ಪಾಕಿಸ್ತಾನದ ಕರಾಚಿ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿಯನ್ನು ಪೂರೈಸಿದರು. ನಂತರ ಪಾಕಿಸ್ತಾನದ ಸೇನೆಯಲ್ಲಿ ಕ್ಲರ್ಕ್ ಹುದ್ದೆಯನ್ನು ಗಳಿಸಿದರು, ಸೇನೆಯ ಅಕೌಂಟ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದರು, ಪಾಕಿಸ್ತಾನದ ಮಿಲಿಟರಿ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದವರ ಮಗಳಾದ ಅಮಾನತ್ ಎಂಬ ಕನ್ಯೆಯೊಂದಿಗೆ ವಿವಾಹವೂ ಕೂಡ ನಡೆಯಿತು. ಮದುವೆಯ ನಂತರ ಒಮ್ಮೆ ರಹಸ್ಯವಾಗಿ ಭಾರತದಲ್ಲಿನ ತಮ್ಮ ಮನೆಗೂ ಬಂದಿದ್ದರು. ಮನೆಯವರೊಂದಿಗೆ ಅವರು ತಾನು ದುಬೈನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದರು. ತಾನೊಬ್ಬ ಗೂಢಾಚಾರನೆಂದು ಅವರು ತಮ್ಮ ಮನೆಯವರ ಬಳಿಯಾಗಲೀ ಅಥವಾ ಪತ್ನಿಯ ಜೊತೆಯಾಗಲೀ ಹೇಳಿಕೊಂಡಿರಲಿಲ್ಲ! ರವೀಂದ್ರ ಮತ್ತು ಅಮಾನತ್ ಇವರಿಬ್ಬರಿಗೂ ಒಂದು ಮುದ್ದಾದ ಗಂಡು ಮಗು ಕೂಡ ಜನಿಸಿತ್ತು.

ತದನಂತರ ಪಾಕಿಸ್ತಾನದ ಸೇನೆಯಲ್ಲಿ ಬಡ್ತಿಪಡೆದು ಮೇಜರ್ ಹುದ್ದೆಗೇರಿದರು. 1979 ರಿಂದ 1983 ರವರೆಗೆ ರವೀಂದ್ರ ಕೌಶಿಕ್‍ರವರು ಪಾಕಿಸ್ತಾನಿ ಸೇನೆಯ ಅತ್ಯಂತ ರಹಸ್ಯಮಯ ಮತ್ತು ನಮ್ಮ ಸೇನೆಗೆ ಉಪಯುಕ್ತವಾದ ಮಾಹಿತಿಗಳನ್ನು ಒದಗಿಸಿದರು. ಒಂದು ಲೆಕ್ಕಾಚಾರದ ಪ್ರಕಾರ ತಮ್ಮ ರಹಸ್ಯ ಮಾಹಿತಿಗಳಿಂದ ಅವರು ಸರಿಸುಮಾರು 20000 ಭಾರತೀಯ ಯೋಧರ ಜೀವ ರಕ್ಷಿಸಿದ್ದರು. ಅವರ ಈ ಅಭೂತಪೂರ್ವ ಯಶಸ್ಸಿಗಾಗಿ ರಾ ಸಂಸ್ಥೆ “ಬ್ಲಾಕ್ ಟೈಗರ್” ಎಂಬ ಬಿರುದು ನೀಡಿ ಗೌರವಿಸಿತು. ಆದರೆ 1983 ರಲ್ಲಿ ಭಾರತೀಯ ಬೇಹುಗಾರಿಕಾ ಸಂಸ್ಥೆ “ರಾ” ರವೀಂದ್ರ ಕೌಶಿಕ್‍ರನ್ನು ಭೇಟಿ ಮಾಡಲು ಮತ್ತೊಬ್ಬ ಬೇಹುಗಾರ “ಇನ್‍ಯಾತ್ ಮಸಿಹ್” ನನ್ನು ಪಾಕಿಸ್ತಾನಕ್ಕೆ ಕಳುಹಿಸಿತು.

ಆದರೆ ಆತ ಪಾಕಿಸ್ತಾನಿ ಬೇಹುಗಾರಿಕಾ ಸಂಸ್ಥೆ “ಐ. ಎಸ್. ಐ.”ಗೆ ಸೆರೆಸಿಕ್ಕನು. ದೀರ್ಘ ವಿಚಾರಣೆಯ ನಂತರ ಆತ ರವೀಂದ್ರ ಕೌಶಿಕ್‍ರ ಅಸಲಿ ವಿಷಯವನ್ನು ಬಾಯಿಬಿಟ್ಟನು. ಆಗ ಇಡೀ ಪಾಕಿಸ್ತಾನದ ಸೇನೆಗೇ ದಂಗುಬಡಿದಂತಾಯಿತು. ರವೀಂದ್ರ ಭಾರತಕ್ಕೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು ಮತ್ತು ಭಾರತ ಸರ್ಕಾರದ ನೆರವನ್ನು ಕೋರಿದರಾದರೂ ಭಾರತ ಸರ್ಕಾರ ಯಾವುದೇ ರೀತಿಯ ಸಹಾಯಹಸ್ತ ಚಾಚಲಿಲ್ಲ. ಆ ಸಮಯದಲ್ಲಿ ಭಾರತದ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರು ಭಾರತ ಯಾವ ಗೂಢಾಚಾರನನ್ನೂ ನೇಮಿಸಿಲ್ಲ ಮತ್ತು ರವೀಂದ್ರ ಕೌಶಿಕ್‍ಗೂ ಭಾರತ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಘೋಷಿಸಿಬಿಟ್ಟರು. ಮತ್ತು ರಾ ಸಂಸ್ಥೆಯಲ್ಲಿದ್ದ ಅವರ ಎಲ್ಲಾ ದಾಖಲಾತಿಗಳನ್ನು  ನಾಶಪಡಿಸುವಂತೆ ಗುಪ್ತವಾಗಿ ಆದೇಶಿಸಿದರು.

ಅಂತಿಮವಾಗಿ ರವೀಂದ್ರರು ಪಾಕಿಸ್ತಾನಿ ಸೇನೆಯಿಂದ ಸೆರೆಹಿಡಿಯಲ್ಪಟ್ಟರು. ಎರಡು ವರ್ಷಗಳ ಹಿಂಸಾದಾಯಕ ವಿಚಾರಣೆಯ ನಂತರ ಅವರನ್ನು ಸಿಯಾಲ್‍ಕೋಟ್ ಜೈಲಿಗೆ ಸ್ಥಳಾಂತರಿಸಲಾಯಿತು, ಕೋಟ್ ಲಕ್‍ಪತ್, ಮುಲ್ತಾನ್ ಸೆಂಟ್ರಲ್ ಜೈಲ್ ಹೀಗೆ ಹಲವಾರು ಜೈಲುಗಳಲ್ಲಿ ಕಾಲಕಳೆಯಲ್ಪಟ್ಟರು. ಈ ಸಂದರ್ಭದಲ್ಲಿ ಅವರಿಗೆ ಹಲವಾರು ಆಮಿಷಗಳನ್ನು ಒಡ್ಡಲಾಯಿತು, ಹಿಂಸೆಯನ್ನು ನೀಡಲಾಯಿತು ಆದರೂ ಅವರು ಭಾರತದ ರಹಸ್ಯ ಮಾಹಿತಿಗಳನ್ನು ಯಾರಿಗೂ ತಿಳಿಸಲಿಲ್ಲ.

ರವೀಂದ್ರ ಕೌಶಿಕ್‍ಗೆ 1985 ರಲ್ಲಿ ಮರಣದಂಡನೆಯನ್ನು ವಿಧಿಸಲಾಯಿತು, ತದನಂತರ ಅದನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲಾಯಿತು. ಅವರು ಜೈಲಿನಲ್ಲಿದ್ದಾಗ ಅವರ ಪತ್ನಿ ಅಮಾನತ್ ತನ್ನ ಮಗುವಿನೊಂದಿಗೆ ಬಂದರೂ ಸಹ ಭೇಟಿಗೆ ನಿರಾಕರಿಸಲಾಯಿತು. ನಂತರದ ಬೆಳವಣಿಗೆಯಲ್ಲಿ ಅವರ ಪತ್ನಿ ಮತ್ತು ಮಗುವು ಸಾರ್ವಜನಿಕವಾಗಿ ಎಲ್ಲೂ ಕಾಣಲೇ ಇಲ್ಲ! ರವೀಂದ್ರರು ಪಾಕಿಸ್ತಾನದ ಜೈಲಿನಲ್ಲಿದ್ದುಕೊಂಡೇ ಭಾರತದಲ್ಲಿನ ತನ್ನ ಕುಟುಂಬಕ್ಕೆ ಅತ್ಯಂತ ರಹಸ್ಯವಾಗಿ ಹಲವಾರು ಪತ್ರಗಳನ್ನು ಬರೆದರು, ಅದರಲ್ಲಿ ಅವರ ಮೇಲೆ ನಡೆಯುವ ದೈಹಿಕ ಹಲ್ಲೆ, ಹಿಂಸೆಗಳನ್ನೂ ಕೂಡ ಉಲ್ಲೇಖಿಸಿದ್ದಾರೆ. ಸತತ ಹಿಂಸೆ,ಹಲ್ಲೆ ಮತ್ತು 16-17 ವರ್ಷಗಳ ಜೈಲು ಸೆರೆವಾಸದಿಂದ ಅಸ್ತಮಾ , ಟಿ,ಬಿ ಮುಂತಾದ ರೋಗಗಳಿಗೆ ತುತ್ತಾದರು.

ಅವರು ಬರೆದ ಹಲವು ಪತ್ರಗಳಲ್ಲಿ ಒಂದರಲ್ಲಿ ಹೀಗೆಂದು ಉಲ್ಲೇಖಿಸಿದ್ದಾರೆ ” ಭಾರತದಂತಹ ಒಂದು ದೊಡ್ಡ ದೇಶಕ್ಕಾಗಿ ತನ್ನನ್ನು ತಾನು ಸಮರ್ಪಿಸಿಕೊಂಡವನಿಗೆ ಸಿಗುವುದು ಇಂಥಾ ಸ್ಥಿತಿಯೇ?” ಎಂದು. ಮತ್ತೊಮ್ಮೆ “ನಾನು ಒಂದು ವೇಳೆ ಅಮೇರಿಕಾ ದೇಶದ ಬೇಹುಗಾರನಾಗಿದ್ದರೆ ನನ್ನನ್ನು ಕೇವಲ ಮೂರೇ ದಿನಗಳಲ್ಲಿ ಬಿಡಿಸುತ್ತಿದ್ದರು ಎಂದೂ ದುಖಃದಿಂದ ಉಲ್ಲೇಖಿಸಿದ್ದಾರೆ.

ಕೊನೆಗೆ 26 ಜುಲೈ 1999 ರಂದು ಕ್ಷಯ ಮತ್ತು ಹೃದ್ರೋಗ ಸಮಸೈಯಿಂದ ಮರಣ ಹೊಂದಿದರು. ಭಾರತ ಸರ್ಕಾರ ಅವರ ಶವವನ್ನು ಸ್ವೀಕರಿಸಲು ಕೂಡ ನಿರಾಕರಿಸಿತು. ಅವರ ಶವವನ್ನು ಜೈಲಿನ ಹಿಂಭಾಗ ಹೂಳಲಾಯಿತು.

ಇಂಥಾ ಅದೆಷ್ಟೋ ಮಂದಿ ಯೋಧರ ಕಾಣದ ಕೈಗಳ ನೆರವಿನಿಂದಾಗಿ ನಾವೆಲ್ಲರೂ ಸುರಕ್ಷಿತವಾಗಿಯೂ, ಸಂತೋಷದಿಂದಲೂ, ನೆಮ್ಮದಿಯಿಂದಲೂ ಜೀವನ ನಡೆಸುತ್ತಿದ್ದೇವೆ. ಅಂತಿಮವಾಗಿ ಇಂತಹ ಅದೆಷ್ಟೋ ಮಂದಿ ಯೋಧರ ತ್ಯಾಗ , ಬಲಿದಾನಗಳಿಗೆ ನಮನಗಳನ್ನು ಅರ್ಪಿಸಲಾರದಷ್ಟು ಹೀನರಾದೆವೇ ನಾವು ?

 

-Niranjan Nagamangala

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post