ಬೆಳಂಬೆಳಗ್ಗೆ ನನ್ನ ದಿನಚರಿ ಬಳಿಕ ಅಡುಗೆ ಮನೆಗೆ ಇನ್ನೂ ಹೊಕ್ಕಿಲ್ಲ, ಆಗಲೆ ಮಗಳು ಎದ್ದು “ಅಮ್ಮಾ ನನಗೆ ಅದು ಬೇಕು, ಇದು ರೆಡಿಯಾಗಿದೆಯಾ” ಪ್ರಶ್ನೆಗಳು ಕಿವಿತಟ್ಟಿದವು. ತಿಳಿದಿರುವ ಮನಸಿಗೆ ಆಗಲೆ ಒಂದೆರಡು ದಿನದಿಂದ ಸಣ್ಣದಾಗಿ ಆತಂಕ ಶುರುವಾಗಿತ್ತು. ಸೂಕ್ಷ್ಮವಾಗಿ ಮಗಳೊಂದಿಗೆ ಹೇಳಿಕೊಂಡರೂ ಅದವಳ ಕಿವಿಗೆ ನಾಟಲೇ ಇಲ್ಲ. ಇನ್ನೇನು ಇದ್ದಾನಲ್ಲ ಆಪದ್ಭಾಂದವ!
ಇವತ್ತು ಮಂಗಳವಾರ. ಗಣೇಶ ದೇವಸ್ಥಾನಕ್ಕೆ ಹೋಗಿ ಕಾಪಾಡಪ್ಪಾ ಮಗಳನ್ನು ಅಂತ ಒಂದು ಹಣ್ಣುಕಾಯಿ ಅರ್ಚನೆ ಮಾಡಿಸಿಕೊಂಡು ಬರೋದೆ ಎಂದು ನಿರ್ಧರಿಸಿದೆ. ಎಲ್ಲಾ ತಯಾರಿಯೊಂದಿಗೆ ಮುಕ್ಕಾಲು ಕಿ.ಮೀ. ಇರುವ ದೇವಸ್ಥಾನಕ್ಕೆ ನಡೆದೆ ಹೋಗುವಾ, ಎಂದು ಹೋದೆ.
ದೇವರ ದರ್ಶನ ಮಾಡಿ ಹಣ್ಣು ಕಾಯಿ ಬುಟ್ಟಿ ದೇವರ ಮುಂದೆ ಇಟ್ಟು ಅರ್ಚನೆ ಚೀಟಿ ತರುವಷ್ಟರಲ್ಲಿ ಇನ್ನೂ ಭಟ್ಟರು ಅವರ ಕೆಲಸದಲ್ಲಿ ಮಗ್ನವಾಗಿದ್ದು ಕಂಡೆ. ಹತ್ತು ನಿಮಿಷದಲ್ಲಿ ಮತ್ತೊಂದಷ್ಟು ಜನರ ಆಗಮನ ಅರ್ಚನೆ ಚೀಟಿಯೊಂದಿಗೆ. ಈ ನಡುವೆ ಬೆಳಗಿನ ಅಭಿಷೇಕಕ್ಕೆ ಕೊಟ್ಟ ಚೀಟಿಯವರಿಗೆ ಮೊದಲ ಆದ್ಯತೆ. ಒಂದೆರಡು ಜನಕ್ಕಾಯಿತು. ಮತ್ತದೇ ಅಭಿಷೇಕ ಚೀಟಿಯವರದೊಂದು ಸಂಸಾರ ಆಗಮನ. ಆಯಿತು ಅವರಿಗೆ ಮೊದಲ ಆದ್ಯತೆ ಪರಿಣಾಮ ಮತ್ತೆ ಕಾಯುವ ಸರದಿ. ಕಾರಣ ಅಲ್ಲೆಲ್ಲೊ ಇದ್ದ ಪ್ರಸಾದ ಡಬ್ಬಿಗೆ ತುಂಬಿ ಒಂದ ಕಾಯಿ ಜುಟ್ಟೆಲ್ಲ ತೆಗೆದು ಒಡೆದು ದೇವರ ಮುಂದಿಟ್ಟು ಅವರಿಗೆ ಸಂಕಲ್ಪ ಮೊದಲು ಮಾಡಿ ನಂತರ ಉಳಿದ ನಮ್ಮೆಲ್ಲರ ಸಂಕಲ್ಪ ಆಯಿತು.
ಆದರೆ ನಾನಿಟ್ಟ ಹಣ್ಣು ಕಾಯಿ ಬುಟ್ಟಿ ಮಾತ್ರ ಕದಲಲಿಲ್ಲ. ಹಿಂದೊಮ್ಮೆ ಇದೇ ಅನುಭವ. ಸರಿ ಇವರದ್ದೆಲ್ಲ ಮುಗಿಯಲಿ ಗರ್ಭಗುಡಿಯ ಪ್ರದಕ್ಷಿಣೆ ಹಾಕಿ ಮತ್ತೆ ನಿಂತೆ ದೇವನ ಮುಂದೆ. ಮತ್ತದೆ ಅರ್ಚನೆ ಮಂಗಳಾರತಿ ತಟ್ಟೆ ನನ್ನ ಮುಂದೆ ತಂದಾಗ ಅಂದೆ “ಹಣ್ಣು ಕಾಯಿ ನೈವೇಧ್ಯ ಮಾಡಿ. ಆಮೇಲೆ ಆರತಿ ತಗೋತೇನೆ.”
“ಅದೆಲ್ಲ ಮನೆಯಲ್ಲಿ ಕ್ರಮ. ಇಲ್ಲಿ ಒಬ್ಬೊಬ್ಬರದು ಮಾಡೋಕೆ ಆಗೋದಿಲ್ಲ. ಕಾಯಬೇಕು.”
ಆಗಲೆ ಮುಕ್ಕಾಲು ಗಂಟೆ ಆಗಿದೆ ಬಂದು. ಇನ್ನೇನು? “ಸರಿ ಕಾಯ್ತೇನೆ. ನೀವು ನಿಮ್ಮ ಕ್ರಮ ಮಾಡಿ. ನಾನು ಕೂತಿರುತ್ತೇನೆ. ನನಗೆ ನನ್ನ ಕ್ರಮ ಮುಖ್ಯ. ಸದಾ ಬರುವವಳಲ್ಲ. ಇಂದು ಮಂಗಳವಾರ. ಒಂದು ಉದ್ದೇಶ ಇದ್ದಿದ್ದರಿಂದ ಪೂಜೆ ಮಾಡಿಸಲು ಬಂದಿರುವುದು.” ಅಂದೆ.
ಅವರಿಗೆ ಸ್ವಲ್ಪ ಕಸಿವಿಸಿಯಾಯಿತು ಅನಿಸುತ್ತದೆ ನನ್ನ ಮಾತು ಕೇಳಿ. ಕಾರಣ ಸುಮಾರು ಹದಿನಾರು ವರ್ಷಗಳಿಂದ ಏನಿದ್ದರೂ ಇದೇ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರೋದು. ಸುಮಾರು ಹತ್ತು ವರ್ಷಗಳಿಂದ ಪರಿಚಯ ಇವರದ್ದು. ಕೇವಲ ಚಿಕ್ಕ ಗುಡಿಯಂತಿದ್ದ ದೇವಸ್ಥಾನ ಇವತ್ತು ಸಕಲ ಅಭಿವೃದ್ಧಿ ಹೊಂದಿ ಸುತ್ತಮುತ್ತಲಿನ ಜನರನ್ನು ಸೆಳೆಯುತ್ತಿದೆ. ಬೆಳೆದಿದೆ??
“ಹಾಗಂದರೆ ಹೇಗೆ? ಮಾಡಿಕೊಡುತ್ತೇನೆ. ಅದಕ್ಕಲ್ಲ. ದೇವಸ್ಥಾನ ತೆರೆದು ಅರ್ಚನೆ ಮಂಗಳಾರತಿ ಒಮ್ಮೆ ಮಾಡಿದರೆ ಆಯಿತು. ಆಮೇಲೆ ಒಬ್ಬೊಬ್ಬರಿಗೂ ಮಾಡುವುದಿಲ್ಲ.” ಅಂತಂದು ಕುಂಕುಮಾರ್ಚನೆ ಹಣ್ಣು ಕಾಯಿ ನೈವೇದ್ಯ ಮಾಡಿ ಮಂಗಳಾರತಿ ಕೊಟ್ಟರು. “ಸಂಕಲ್ಪ ಸಿದ್ಧಿರಸ್ತು. ಇಷ್ಟಾರ್ಥ ಪ್ರಾಪ್ತಿರಸ್ತು.” ಬಾಯಿ ಮಂತ್ರ ಹೇಳುತ್ತಿತ್ತು. ಆದರೆ ಅವರ ಮನಸ್ಸು ಏನು ಹೇಳುತ್ತಿತ್ತೊ ಗೊತ್ತಿಲ್ಲ!
ಇಲ್ಲಿ ನನಗೊಂದು ಅರ್ಥ ಆಗುವುದಿಲ್ಲ. ಅಭಿಷೇಕ ಮಾಡಿಸಿದವರಿಗೆ ಎಲ್ಲೊ ಇದ್ದ ತೆಂಗಿನಕಾಯಿ ತಂದು ಒಡೆಯಲು ಸಾಧ್ಯವಾಗುತ್ತಿರುವಾಗ ಮುಂದಿಟ್ಟ ಭಕ್ತರ ಹಣ್ಣು ಕಾಯಿ ನೈವೇದ್ಯ ಯಾಕೆ ಮಾಡಲು ಸಮಯವಿಲ್ಲ, ಮನಸ್ಸಿಲ್ಲ. ಯಾವತ್ತೊ ಒಮ್ಮೆ ದೇವಸ್ಥಾನಕ್ಕೆ ಹೋಗುವ ನನಗೆ ಮನಸ್ಸು ಹೋಗು ಇವತ್ತು ಅಂತು. ಹೋದೆ ಏನೇನೊ ಒಂದಷ್ಟು ಸಂಕಲ್ಪ ಹೊತ್ತು ಅವನ ಸನ್ನಿಧಿಯಲ್ಲಿ ಸ್ವಲ್ಪ ಹೊತ್ತು ಇದ್ದು ಬರಲು. ಆದರೀಗಾಗಿ ಮನಸ್ಸೆಲ್ಲಾ ಮ್ಲಾನವಾಯತು. ಖಿನ್ನನಾದೆ.
ಇದಕ್ಕೆ ಹೇಳೋದಾ “ದೇವರು ಕೊಟ್ಟರೂ ಪೂಜಾರಿ ಕೊಡಾ”.
ನನ್ನ ಕಾಲುಗಳು ಸ್ವಲ್ಪ ನೋವಿನಲ್ಲಿ ಮನೆಯತ್ತ ಹೆಜ್ಜೆ ಹಾಕಿದರೂ ಮನಸ್ಸು ಇನ್ನೂ ದೇವಸ್ಥಾನದ ಸುತ್ತಮುತ್ತಲೆ ಅಲೆದಾಡುತ್ತಿತ್ತು. ಕುಳಿತ ಮುದ್ದಾದ ಪುಟ್ಟ ಗಣೇಶನ ಅಂದಿನ ಚಿತ್ರ ಕಣ್ಣ ಮುಂದೆ, ಶಾಸ್ತ್ರೋಕ್ತವಾಗಿ ಮಾಡುವ ಅಂದಿನ ಪೂಜೆ. ಇದೇ ಮಗಳು ಚಿಕ್ಕವಳಂದು. ಅದೆಷ್ಟು ಭಕ್ತಿಯಿಂದ ಬರುತ್ತಿದ್ದಳು ಹೋಗೋಣ ಅಂದಾಗೆಲ್ಲ. ಬೆಳಿತಾ ಬೆಳಿತಾ ಸಾಕಷ್ಟು ಕಹಿ ಅನುಭವ ದೇವಸ್ಥಾನಗಳ ವಾತಾವರಣ. ಬಾರೆ ಅಂದರೀಗ ನೀ ಹೋಗು.
ಮನೆ ದೇವರ ಮುಂದೆ ಪ್ರಸಾದದೊಂದಿಗಿನ ಬುಟ್ಟಿ ಇಟ್ಟು ಒಂದು ಉದ್ದಂಡ ನಮಸ್ಕಾರ ಹಾಕಿದೆ. “ಪರಮಾತ್ಮ ನನ್ನ ಮಗಳ ಕಾಪಾಡು. ದೂರದ ದೇಶಕ್ಕೆ ಹೋಗುತ್ತಿದ್ದಾಳೆ. ಸುರಕ್ಷಿತವಾಗಿ ಮನೆಗೆ ವಾಪಸ್ಸು ಬರುವಂತೆ ಮಾಡು. ನಿನ್ನನ್ನೇ ನಂಬಿದ್ದೇನೆ.”
ಕಾರಣ ದೇವಸ್ಥಾನದಲ್ಲಿ ಎಲ್ಲಾ ಮರೆತೆ ಈ ಅವಾಂತರದಲ್ಲಿ. ಈ ಮನಸ್ಸಿಗೆ ಬೇಸರ ಬೇಜಾರು ಎರಡೂ ಒಟ್ಟೊಟ್ಟಿಗೆ ಆಗಿ ಬೇಜಾರಿಗೆ ಕಾರಣ ಇನ್ನೊಂದು ವಿಷಯ ಸಿಕ್ಕು ಮತ್ತೆ ಬರೆಯುವಂತಾಯಿತು.
ದೇವರ ಗುಡಿಯನೊಮ್ಮೆನಾ ಸುತ್ತಾಡಿ ಬರುವೆ
ಅರಿಯದ ಕಂದನ ತೆರದಿ ಪಿಳಿ ಪಿಳಿ ಕಣ್ಣ ಬಿಟ್ಟು
ಮನದೊಳಗಿನ ಮಂತ್ರ ನೆನಪಿಸಿಕೊಳ್ಳಲಾಗದೆ
ಜನರ ನೋಡ ನೋಡುತ್ತಿದ್ದಂತೆ ಮಂಗ ಮಾಯವಾಗಿ.
ಅಂಗೈ ಅಗಲದ ಹೃದಯದ ತುಂಬ ಕೊಂಚಹೊತ್ತಿರಬೇಕೆಂಬಾಸೆ
ಸ್ಪುಟಿಸಿದ ಭಕ್ತಿ ಭಾವ ಬೇಡಿಕೆಯೆಲ್ಲ ಮರೆತು ಬರುವೆ
ಜಗಮಗಿಸುವ ಬೆಳಕ ಮಾಲೆ, ಆಡಂಬರದಲಂಕಾರ,ಓಡಾಟ
ಗಡಚಿಕ್ಕುವ ಮೈಕಿನಾರ್ಭಟ ಪೂಜಾರಿಯ ಗಡಿಬಿಡಿಗೆ ಸೋತು.
ಗುಡಿ ಸುತ್ತುವ ಕಾಲ್ಗಳು ಹರಕೆ ಕುರಿಯಂತಾಗಿ
ಲೆಕ್ಕದ ಪ್ರದಕ್ಷಿಣೆ ಒಟ್ಟಾರೆ ಶಾಸ್ತ್ರಕ್ಕೆ ಮಣಿದು ಸರಿದೂಗಿಸಿ
ಅಡ್ಡ ಬಿದ್ದ ದೇಹ ಮನಸ್ಸು ಮನೆ ಸೇರಿ ಕೇಳುತ್ತದೆ
ಮನದ ಮೂಲೆಯ ಭಕ್ತಿಗೆ ಪೂಜೆಗೆ ಗುಡಿನೇ ಬೇಕಾ?
ಮನದೊಳಗಿನ ಅಳುಕು ಗುಡಿಯತ್ತ ನಡೆದು
ಸಮಾಜಕ್ಕೊ ಸೋಗಿಗೊ ಅಪ್ಪ ನೆಟ್ಟಾಲದಮರಕೆ ಜೋತೊ
ಒಟ್ಟಿನಲ್ಲಿ ಆವರಣದ ಬಾಗಿಲಲ್ಲೇ ಎಲ್ಲ ಮರೆತು
ಅರ್ಥವಿಲ್ಲದ ಪೂಜೆಯೆಸರ ಅನಾವರಣ ಪ್ರತಿ ಭೇಟಿ.
ದೇವಾಲಯದೊಳಗೊಕ್ಕು ಮನದಾಲಯದ ಪ್ರಶಾಂತತೆಯಲಿ
ಪರಾಕಾಷ್ಠೆಯ ಭಕ್ತಿಯ ಪೂಜೆ ಮಾಡಬೇಕೆನ್ನುವ ಮನಕೆ
ನಿರಾಸೆಯ ಕಂಡುಂಡ ಜಡತ್ವವೇ ಪತಾಕೆ ಹಾರಿಸುತಿರಲು
ಅನಿಸುವುದು ಅದ್ಯಾವ ದೇವಾಲಯ ಬೇಕು ಮನೆಯೆಂಬ ಆಲಯವಿರಲು!
ಗೀತಾ ಹೆಗಡೆ
Facebook ಕಾಮೆಂಟ್ಸ್