“ಪರ್ಯಟನೆ ಎನ್ನುವುದು ಎಲ್ಲದನ್ನು ಕಲಿಸಿಕೊಡುತ್ತದೆ. ಹಾಗೆಯೇ ಗಳಿಸಿಕೊಡುತ್ತದೆ ಕೂಡ, ಅದು ಜ್ಞಾನ ಆಗಿರಬಹುದು, ಹೊಸ ದೃಷ್ಟಿಕೋನ ಆಗಿರಬಹುದು, ಅನುಭವ ಆಗಿರಬಹುದು, ಇನ್ನು ಕೆಲವೊಮ್ಮೆ ಉತ್ಕಟ ಭಾವ ಆಗಿರಬಹುದು” ಎನ್ನುತ್ತಾನೆ ಶಾನ್. ಶಾನ್ ತಾನು ಏರಿದ ಏಳು ಪರ್ವತಗಳ ಕುರಿತು ಈ-ಬುಕ್ ಬರೆಯುವುದರ ಬಗ್ಗೆ ಹೇಳಿದಾಗ, ಪರ್ವತಗಳ ಬಗ್ಗೆ ಅಷ್ಟೊಂದು ಬರೆಯಬಹುದಾ ಎಂದೆಣಿಸಿದ್ದೆ. ಎವೆರೆಸ್ಟ್ ಎನ್ನುವುದು ಮಹಾಪರ್ವತ ಅಷ್ಟೇ ಅಲ್ಲ, ಅದೊಂದು ಅನುಭವಗಳ ಮಹಾಪೂರ! ಅದರ ಬಗ್ಗೆ ಎಷ್ಟು ಬೇಕಾದರೂ ಬರೆಯಬಹುದು. ಆದರೆ ಉಳಿದವುಗಳು? ಎವೆರೆಸ್ಟ್’ಗಿಂತ ಭಿನ್ನವಾಗಿ ಬೇರೆ ಪರ್ವತಗಳ ಬಗ್ಗೆ ಬರೆಯಬಹುದೇ ಎಂದು ಯೋಚಿಸಿದ್ದೆ. ಅದಕ್ಕೆ ಉತ್ತರವೂ ಈಗ ಸಿಕ್ಕಿದೆ. ಶಾನ್’ನ ಈ-ಬುಕ್ ಸೀರೀಸ್’ನ ಎರಡನೇ ಪುಸ್ತಕ “ಕಿಲಿಮಂಜಾರೋ : ಇಂಟು ದ ಸೆಲ್ಫ್” ಹೊರ ಬಂದಿದೆ.
ಶಾನ್ ಎರಡು ಬಾರಿ ಕ್ಯಾನ್ಸರ್’ಗೆ ತುತ್ತಾಗಿ ಅದರಿಂದ ಗುಣಮುಖವಾದ ನಂತರ ಜಗತ್ತಿನ ಅತಿ ಎತ್ತರದ ಜಾಗಕ್ಕೆ ಏರಿ, ಭರವಸೆಯಿಂದ ಎಲ್ಲ ಸಾಧ್ಯ ಎನ್ನುವುದನ್ನು ಹೇಳುವುದಾಗಿತ್ತು. ಅದಕ್ಕೆ ಆತ ಆರಿಸಿಕೊಂಡಿದ್ದು ಎವೆರೆಸ್ಟ್! ಎವೆರೆಸ್ಟ್’ನ ನಂತರ ಆತ ಹೊರಟಿದ್ದು ಆಫ್ರಿಕಾದ ಕಿಲಿಮಂಜಾರೋ ಕಡೆಗೆ. ಕಿಲಿಮಂಜಾರೋನಲ್ಲಿ ಎವೆರೆಸ್ಟ್’ನಷ್ಟು ಸವಾಲುಗಳಿರದಿದ್ದರೂ, ಸವಾಲುಗಳೇ ಇಲ್ಲ ಅಂತೇನಲ್ಲ. ಆದರೆ ಈ ಪುಸ್ತಕದಲ್ಲಿ ಶಾನ್ ಪರ್ವತಕ್ಕಿಂತ ಹೆಚ್ಚಾಗಿ ಅಲ್ಲಿನ ಆತನ ಅನುಭವಗಳ ಬಗ್ಗೆ, ತನ್ನ ಆತ್ಮಾವಲೋಕನದ ಬಗ್ಗೆ ಬರೆದಿದ್ದಾನೆ. “ಇಂಟು ದ ಸೆಲ್ಫ್” ಎನ್ನುವ ಶೀರ್ಷಿಕೆಗೆ ತಕ್ಕನಾಗಿ! ಯಾವಾಗಲೂ ಭರವಸೆ, ಧನಾತ್ಮಕ ಚಿಂತನೆ ಬಗ್ಗೆ ಹೆಚ್ಚು ಹೇಳುತ್ತಿದ್ದ ಶಾನ್, ಈ ಬಾರಿ ಸ್ವಲ್ಪ ಫಿಲಾಸಫಿಕಲ್ ಆಗಿ ಕಾಣಿಸುತ್ತಾನೆ. ‘ಬದುಕು ಚಂಚಲ’ ಎನ್ನುವಾಗ, “ಪ್ರತಿದಿನ ಸಾವಿನೊಂದಿಗೆ ನನ್ನದು ಟ್ಯಾಂಗೋ ನೃತ್ಯ ನಡೆಯುತ್ತಿರುತ್ತದೆ” ಎನ್ನುವಾಗ, ಕೆಲವರಿಗೆ ಇದೆಂತಹ ಋಣಾತ್ಮಕ ಯೋಚನೆ ಎಂದೆನಿಸಬಹುದು. ಆದರೆ ಈ ಸತ್ಯ ಎಂದಿಗೂ ಅರಿವಿನಲ್ಲಿರಲೇಬೇಕಾದದ್ದು ಎನ್ನುತ್ತಾನೆ ಶಾನ್! ಆಗಲೇ ಬದುಕನ್ನು ಆಳವಾಗಿ ನೋಡಲು ಸಾಧ್ಯ ಎಂದು.
ಶಾನ್’ಗೆ ರೆಸಾರ್ಟ್ ಸ್ಟೈಲ್’ನ ಟ್ರಾವೆಲ್ ಅಷ್ಟೊಂದು ಇಷ್ಟವಾಗುವುದಿಲ್ಲ. “ಯಾವುದೋ ಹೊಸ ಜಾಗಕ್ಕೆ ಹೋಗುತ್ತೀರಿ, ಅಲ್ಲಿ ಎಲ್ಲೋ ಸಮುದ್ರದ ಬಳಿ ಹೋಗುತ್ತೀರಿ, ಒಂದಿಷ್ಟು ಸೂರ್ಯಾಸ್ತದ ಫೋಟೋ ಅಥವಾ ಸೂರ್ಯೋದಯದ ಫೋಟೋ ಕ್ಲಿಕ್ಕಿಸಿಕೊಳ್ಳುತ್ತೀರಿ. ಜಗತ್ತಿನ ಯಾವ ಮೂಲೆಯಲ್ಲಿ ಸೂರ್ಯ ಕಾಣಿಸಿಕೊಳ್ಳುವುದಿಲ್ಲ. ಅದು ಸಾಮಾನ್ಯವಾದದ್ದೇ. ಆ ಜಾಗದಲ್ಲಿ ವಿಶಿಷ್ಟವಾದದ್ದೇನು, ಇಲ್ಲಿ ಮಾತ್ರ ಕಾಣಸಿಗುವುದು ಅನ್ನುವಂಥದ್ದೇನು ಎನ್ನುವುದರ ಜನ ಕಡೆ ಗಮನ ಹರಿಸುವುದೇ ಇಲ್ಲ” ಎನ್ನುತ್ತಾನೆ. ಶಾನ್ ಕಿಲಿಮಂಜಾರೋ ಪರ್ವತಕ್ಕೆ ಹೊರಡುವ ಮುನ್ನ, ಅಲ್ಲಿನ ಸ್ಥಳೀಯರೊಬ್ಬರೊಂದಿಗೆ ಪ್ಯಾಂಗನಿ ಎಂಬ ಜಾಗಕ್ಕೆ ಭೇಟಿ ನೀಡುತ್ತಾನೆ. ಪ್ಯಾಂಗನಿ ಎನ್ನುವುದು ಗುಲಾಮರ ಸಾಗಾಣಿಕೆ ನಡೆಯುತ್ತಿದ್ದ ದೊಡ್ಡ ಬಂದರಾಗಿತ್ತಂತೆ. ಅಲ್ಲೇ ಸ್ವಲ್ಪ ದೂರದಲ್ಲಿ ಆ ಗುಲಾಮರನ್ನು ಇಡುತ್ತಿದ್ದ ಜೈಲುಗಳು ಕೂಡ ಇವೆ. ಅಲ್ಲಿರುವ ಒಂದು ದೊಡ್ಡ ಮರಕ್ಕೆ ‘ಟ್ರೀ ಆಫ್ ಲೈಫ್’ ಎಂದು ಕರೆಯುತ್ತಾರೆ. ಗುಲಾಮರನ್ನು ನೇಣು ಹಾಕುತ್ತಿದ್ದ ಆ ಮರವನ್ನು ‘ಟ್ರೀ ಆಫ್ ಲೈಫ್’ ಎಂದು ಏಕೆ ಕರೆಯುತ್ತಿದ್ದರೋ ಗೊತ್ತಿಲ್ಲ! ಆ ಜೈಲಿನ ಬಳಿ ಓಡಾಡುತ್ತಾ, ಕಂಬಿ ಹಿಡಿದು ನಿಲ್ಲುವ ಶಾನ್’ಗೆ ಒಂದು ಕ್ಷಣ ತನ್ನ ಮನೆ, ಎವೆರೆಸ್ಟ್, ಪಾಸ್’ಪೋರ್ಟ್, ತನಗಿರುವ ಸೌಕರ್ಯಗಳು, ತನ್ನ ಆಸೆ, ಕನಸುಗಳೆಲ್ಲ ಕಣ್ಣ ಮುಂದೆ ಹಾದು ಹೋಗುತ್ತವೆ. ಎಷ್ಟೋ ಜನ ಆ ಕಂಬಿಯ ಹಿಂದೆ ನಿಂತು ಯಾವುದೋ ಭರವಸೆಯ ಮೇಲೆ ಜೀವ ಹಿಡಿದು, ಒಮ್ಮೆ ಇದೆಲ್ಲದರಿಂದ ಬಿಡುಗಡೆಯಾದೀತು ಎಂದು ಕಾತರಿಸುತ್ತಿದ್ದ ಜಾಗ ಅದು. ಅಲ್ಲಿ ನಿಂತಾಗ ನಾವೆಷ್ಟು ಅದೃಷ್ಟವಂತರು ಎಂದು ಅನ್ನಿಸದೇ ಇರಲಾರದು. “ಅದೊಂದು ಉತ್ಕಟವಾದ ಭಾವ. ಆ ಜಾಗದಲ್ಲಿ ನಿಂತಾಗ, ಆ ಜನರ ನೋವು, ಕೂಗು ಕೂಡ ಅನುಭವವಾಗುವುದು” ಎನ್ನುತ್ತಾನೆ ಶಾನ್!
ಕಿಲಿಮಂಜಾರೋ ಪರ್ವತ ಏರುವ ಮುನ್ನ, ಒಂದು ಅರ್ಜಿಯನ್ನು ತುಂಬಬೇಕು. ಶಾನ್’ಗೆ ಇಂತಹ ಸಂದರ್ಭಗಳಲ್ಲಿ ತುಂಬಾ ಕಾಡುವುದು ‘ವೃತ್ತಿ’ ಎನ್ನುವುದು. ಆ ಜಾಗದಲ್ಲಿ ಏನು ಬರೆಯಬೇಕು ಎನ್ನುವುದೇ ಅರ್ಥವಾಗುವುದಿಲ್ಲವಂತೆ. ಏನು ಬರೆಯಬಹುದು ಎಂದು ಯೋಚಿಸುತ್ತಿದ್ದವನಿಗೆ, ‘ಕ್ಯಾನ್ಸರ್ ಕ್ಲೈಂಬರ್’, ‘ಸರ್ವೈವರ್’, ‘ಅಡ್ವೆಂಚರರ್’, ‘ಅಥ್ಲೀಟ್’, ‘ಫೌಂಡರ್ ಆಫ್ ಎ ಫೌಂಡೇಷನ್’ ‘ಸೆಲೆಬ್ರಿಟಿ’,’ಗೀವರ್ ಆಫ್ ಹೋಪ್’ ಎಂದೆಲ್ಲಾ ನೆನಪಾಗಲು ಶುರುವಾಗಿತ್ತು ಎಂದು ಹೇಳಿ ನಗುತ್ತಾನೆ. ಕೊನೆಗೆ ಏನೋ ಒಂದು ಇರಲಿ ಎಂದು ‘ಕ್ಲೈಂಬರ್’ ಎಂದು ಬರೆದು ಬಂದಿದ್ದನಂತೆ. ಈ ವೃತ್ತಿಯ ಬಗ್ಗೆ ಹೇಳುವಾಗ ಶಾನ್ ಮತ್ತೆ ಸ್ವಲ್ಪ ವೇದಾಂತಿಯಾಗುತ್ತಾನೆ. “ ನೀವು ನಿಮ್ಮನ್ನು ಲಾಯರ್, ಡಾಕ್ಟರ್ ಅಥವಾ ಇನ್ನೇನೋ ಹೇಳಿಕೊಳ್ಳಬಹುದು. ಆದರೆ ನಮ್ಮನ್ನು ನಿಜವಾಗಿ ವ್ಯಾಖ್ಯಾನಿಸುವುದು ನಮ್ಮ ವೃತ್ತಿಯೇ?! ನಿಜವಾದ ‘ನಾನು’ ಎನ್ನುವುದು ಒಂದು ಟೈಟಲ್ ಅಲ್ಲ” ಎನ್ನುತ್ತಾನೆ.
ಶಾನ್ ಕಿಲಿಮಂಜಾರೋ ಪರ್ವತ ಎವೆರೆಸ್ಟ್’ಗಿಂತ ಭಿನ್ನವಾದ ಅನುಭವವನ್ನು ಕೊಡುತ್ತದೆ ಎನ್ನುತ್ತಾನೆ. ಪರ್ವತದ ಬುಡದಲ್ಲಿ ಕಾಡು ಸಿಕ್ಕರೆ , ನಂತರ ಒಣಪ್ರದೇಶ, ಅದರ ನಂತರ ಬೂದಿ ತುಂಬಿದ ಜಾಗವಾದರೆ, ಆನಂತರ ಮಂಜು! ಶಾನ್ ಕಿಲಿಮಂಜಾರೋ ಪರ್ವತದ ತುತ್ತತುದಿಯಲ್ಲಿ ನಿಂತಾಗ ಎಷ್ಟು ಆನಂದವಾಗಿತ್ತೋ ಅದರ ಮರುಕ್ಷಣ ಅಷ್ಟೇ ಭಯವೂ ಆಗಿತ್ತಂತೆ. ಇಲ್ಲ, ಪರ್ವತ ಅಷ್ಟು ಭೀಕರವಾಗಿರಲಿಲ್ಲ. ಪರ್ವತವನ್ನು ಏರಿದ ಆ ಕ್ಷಣ ಹೆಮ್ಮೆ, ತಾನು ಏನನ್ನಾದರೂ ಸಾಧಿಸಬಹುದು ಎನಿಸಿದ್ದೇನೋ ನಿಜ. ಆದರೆ ಮರುಕ್ಷಣವೇ, ಮುಂದೇನು? ಎಂಬ ಭಾವ ಬಂದಾಗ ಭಯವಾಗಿತ್ತಂತೆ. ಅಷ್ಟು ದಿನ ಇಟ್ಟುಕೊಂಡಿದ್ದ ಗುರಿಯನ್ನುತಲುಪಿಯಾಗಿತ್ತು, ತಕ್ಷಣ ಮುಂದಿನ ಗುರಿ ಏನು ಎಂದು ಕಾಣದೇ ಇದ್ದಾಗ ಕಾಡುವ ಶೂನ್ಯ ಭಾವ ಅದು!
ಶಾನ್ ತನ್ನ ಕಾಲೇಜು ಮುಗಿಸಿದ ನಂತರ ಮುಂದೇನು ಎನ್ನುವ ಯೋಚನೆಯಲ್ಲಿದ್ದ. ಸೈಕಾಲಜಿಯನ್ನು ಓದಿದ್ದ ಶಾನ್, ಅದರಲ್ಲಿಯೇ ಯಾವುದೋ ಒಂದು ಕೆಲಸ ಹಿಡಿದು ಮಾಡುವುದೆಂದು ಹೊರಟವನ ಮನಸ್ಸು ಗೊಂದಲಗಳ ಗೂಡಾಗಿತ್ತು. ‘ನಿಜಕ್ಕೂ ತಾನು ಮಾಡಬೇಕಾಗಿರುವುದು ಇದೇನಾ?’ ಎಂದು ಯೋಚಿಸುತ್ತಲೇ ಹೊರಟಿದ್ದ. ಆತ ವರ್ಜಿನಿಯಾ ಬಂದು ಹೋಟೆಲ್ ಒಂದರಲ್ಲಿ ತಂಗಿದಾಗ ಪ್ರತಿಕ್ಷಣ ‘ಶಾನ್, ಏನು ಮಾಡಿಕೊಳ್ಳುತ್ತಿದ್ದೀಯ ನಿನ್ನ ಬದುಕಿನೊಂದಿಗೆ’ ಎಂದು ಕೇಳಿಕೊಳ್ಳುತ್ತಿದ್ದನಂತೆ. ಅದು ತನ್ನ ಜೀವನದ ದೊಡ್ಡ ತಿರುವು. ಅಂದು ಆ ಪ್ರಶ್ನೆಗಳೇ ಶಾನ್ ಬದುಕಿಗೆ ಅರ್ಥ ನೀಡಿದ್ದು. “ಗುರಿ ಇಲ್ಲದೇ ಇರುವುದು ತುಂಬಾ ಭಯಾನಕವಾದುದು. ಏನೇ ಆದರೂ ನಾವೆಲ್ಲಿಗೆ ಹೋಗುತ್ತಿದ್ದೇವೆ, ಯಾಕೆ ಹೋಗುತ್ತಿದ್ದೇವೆ ಎನ್ನುವುದರ ಅರಿವಿರಬೇಕು” ಎನ್ನುತ್ತಾನೆ ಶಾನ್. ವರ್ಜಿನಿಯಾ ಅಂದು ಶಾನ್’ ಬದುಕಿನ ಅತಿಮುಖ್ಯ ಪ್ರಶ್ನೆಗಳಿಗೆ ಉತ್ತರ ನೀಡಿತ್ತು. ಮುಂದೇನು ಎನ್ನುವ ಕ್ಷಣ ಸಾಮಾನ್ಯವಾಗಿ ನಮ್ಮೆಲ್ಲರ ಬದುಕಿನಲ್ಲೂ ಬರುತ್ತದೆ. ಆದರೆ ಸಾಕಷ್ಟು ಜನ ಈ ಪ್ರಶ್ನೆಗೆ ಉತ್ತರವಾಗಿ ಬೇರೆಯವರನ್ನು ನೋಡುತ್ತಾರೆ. ಅವರೇನು ಮಾಡುತ್ತಿದ್ದಾರೆ ಎಂದು! ತಮ್ಮನ್ನ ತಾವು ಪ್ರಶ್ನಿಸಿಕೊಳ್ಳುವುದೇ ಇಲ್ಲ.
ಕಿಲಿಮಂಜಾರೋ ತುತ್ತತುದಿಯಲ್ಲಿ ಮುಂದೇನು ಎಂದು ಯೋಚಿಸಿದ್ದ ಶಾನ್ ತನ್ನ ಗುರಿಯಾಗಿಸಿಕೊಂಡಿದ್ದು ಮೌಂಟ್ ಎಲ್ಬ್ರಸ್! ಒಂದಾದ ನಂತರ ಒಂದರಂತೆ, ‘7ಸಮಿಟ್ಸ್’ನ್ನು ಪೂರೈಸಿದ ಶಾನ್, ಸೌತ್ ಪೋಲ್, ನಾರ್ತ್ ಪೋಲ್ ಕೂಡ ತಲುಪಿ ಗ್ರ್ಯಾಂಡ್ ಸ್ಲ್ಯಾಮ್ ಪೂರೈಸಿದ ಮೊದಲ ಕ್ಯಾನ್ಸರ್ ಸರ್ವೈವರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾನೆ. ನಿಜ ಹೇಳಬೇಕೆಂದರೆ ಇದೆಲ್ಲ ಮುಗಿದ ನಂತರ ಆತನ ಮುಂದಿನ ಗುರಿ ಏನಾಗಿರಬಹುದು, ಇನ್ನೇನು ಉಳಿದಿದೆ ಎಂದು ಆತನಿಗಿಂತ ಒಂದು ಪಟ್ಟು ಹೆಚ್ಚು ನಾನು ಯೋಚಿಸಿದ್ದೆ!! ಆದರೆ ಆತ ಹೇಳಿದಂತೆ ಗುರಿ ಇಲ್ಲದೆ ಇರುವುದು ಹೇಗೆ?! ಈಗಾಗಲೇ ಆತ ತನ್ನ ಮುಂದಿನ ಸಾಹಸಕ್ಕೆ ಸಿದ್ಧತೆ ನಡೆಸಿಕೊಂಡಾಗಿದೆ. ಆತ ಅದನ್ನು ಕೂಡ ಸಾಧಿಸಬಹುದು. ಆದರೆ ನನಗೆ ಆಸಕ್ತಿ ಇರುವುದು ಆತನ ಸಾಧನೆಯ ಹಾದಿಯ ಬಗ್ಗೆ! ಆ ಹಾದಿಯಲ್ಲಾಗುವ ಅನುಭವಗಳೇ ಬದುಕಿಗೆ ಪಾಠಗಳಾಗುವುದು!
Facebook ಕಾಮೆಂಟ್ಸ್