2017ರ ಸೆಪ್ಟೆಂಬರ್ ತಿಂಗಳು, ಹತ್ತಿರದ ಸಂಬಂಧಿಯೊಬ್ಬರು ಏರ್‘ಟೆಲ್ ಪೇಮೆಂಟ್ ಬ್ಯಾಂಕ್ ಎಂದರೇನು? ಅದರಿಂದ ಹಣವನ್ನು ವರ್ಗಾಯಿಸುವ ಪರಿ ಹೇಗೆ ಎಂದು ಕೇಳಿದರು. ಇದ್ದಕ್ಕಿದ್ದ ಹಾಗೆ ಯಾಕೆ ಏರ್‘ಟೆಲ್ ಪೇಮೆಂಟ್ ಬ್ಯಾಂಕ್ ಬಗ್ಗೆ ವಿಚಾರಿಸುತ್ತಿದ್ದೀರಿ ಎಂದು ನಾನು ಕೇಳಿದೆ. ಅಡುಗೆ ಅನಿಲ ಸಬ್ಸಿಡಿ ಹಣ ನೋಂದಣಿ ಮಾಡಿದ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತಿಲ್ಲ, ಬದಲಾಗಿ ಏರ್‘ಟೆಲ್ ಪೇಮೆಂಟ್ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ ಎಂದು ಅವರು ಹೇಳಿದಾಗ ನನಗೆ ಅಚ್ಚರಿಯಾಯಿತು. ಸಬ್ಸಿಡಿಯ ಹಣ ಏರ್‘ಟೆಲ್ ಪೇಮೆಂಟ್ ಬ್ಯಾಂಕಿನ ಖಾತೆಗೆ ವರ್ಗಾವಣೆಯಾಗುತ್ತಿದೆ ಎಂದು ತಿಳಿದಾಗ ಅವರು ಗಾಬರಿಗೊಂಡಿದ್ದು ಸಹಜವೇ ಬಿಡಿ. ಸಾಮಾನ್ಯವಾಗಿ ನಮ್ಮ ಹೆಸರಿನಲ್ಲಿ ಎಷ್ಟೆಲ್ಲ ಬ್ಯಾಂಕ್ ಖಾತೆಗಳಿವೆ ಮತ್ತೆ ಅದರಲ್ಲಿ ಅಂದಾಜು ಎಷ್ಟು ಬ್ಯಾಲೆನ್ಸ್ ಇರಬಹುದು ಅನ್ನುವುದನ್ನೂ ನೆನಪಿನಲ್ಲಿ ಇಡುವಂತವರು ನಾವುಗಳು. ಅಂತದರಲ್ಲಿ ನಮಗೆ ಗೊತ್ತಿಲ್ಲದಂತಯೇ ನಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆಯೊಂದನ್ನು ತೆರೆದು ಆ ಖಾತೆಗೆ ಕೇಂದ್ರ ಸರಕಾರ ಕೊಡಮಾಡುವ ಅಡುಗೆ ಅನಿಲ ಸಬ್ಸಿಡಿ ಹಣವನ್ನು ಸದ್ದಿಲ್ಲದೇ ವರ್ಗಾವಣೆ ಆಗುತ್ತದೆ ಎಂದರೆ ಅದೆಷ್ಟು ಐನಾತಿ ಇರಬಹುದು ಆ ವ್ಯಕ್ತಿ ಅಥವಾ ಸಂಸ್ಥೆ! ಹೀಗೆ ತನ್ನ ಗ್ರಾಹಕರನ್ನು ಯಾಮಾರಿಸಿ ಸಬ್ಸಿಡಿ ಹಣವನ್ನು ತನ್ನ ತಿಜೋರಿಗೆ ವರ್ಗಾಯಿಸಿದ ಸಂಸ್ಥೆ ಏರ್‘ಟೆಲ್!!
ಅದ್ಯಾವಾಗ ಮುಖೇಶ್ ಅಂಬಾನಿ ಜಿಯೋ ಅನ್ನೋ ಪ್ರಳಯಾಂತಕ ಮೊಬೈಲ್ ನೆಟ್ವರ್ಕನ್ನು ೬ ತಿಂಗಳುಗಳ ಕಾಲ ಉಚಿತವಾಗಿ ನೀಡಿದರೋ ಏರ್‘ಟೆಲ್ ಸೇರಿದಂತೆ ಇತರ ಸರ್ವೀಸ್ ಪ್ರೊವೈಡರ್ಸ್ ತಮ್ಮ ಬಹುಮಹಡಿಯ ಹವಾನಿಯಂತ್ರಿತ ಕಛೇರಿಯಲ್ಲಿ ಕುಳಿತಲ್ಲಿಯೇ ಬೆವರಿದ್ದರು. ಕಾರಣ ಬಹಳ ಸರಳ. ಜಿಯೋ ಬರೋ ಮುಂಚೆ ತನ್ನ ಗ್ರಾಹಕರನ್ನು ಎರ್ರಾಬಿರ್ರಿ ದೋಚುತ್ತಿದ್ದ ಈ ಕಂಪನಿಗಳು ಬಹಳ ಸುಲಭವಾಗಿ ಹಗಲು ದರೋಡೆಯ ಮೂಲಕ ತಮ್ಮ ಖಜಾನೆಯನ್ನು ತುಂಬಿಸುತ್ತಿದ್ದರು. ಆದರೆ ಜಿಯೋ ಕೊಟ್ಟ ಮರ್ಮಾಘಾತಕ್ಕೆ ಅದಕ್ಕೆ ಪ್ರತಿಸ್ಪರ್ಧೆ ನೀಡುವುದು ಬಿಡಿ, ಅದರ ಹತ್ತಿರವೂ ಸುಳಿಯುವುದು ಅನುಮಾನ ಎಂದೆನಿಸಿದಾಗ ಮಾರುಕಟ್ಟೆಯಲ್ಲಿ ತನ್ನ ಇರುವಿಕೆಯನ್ನು ಸಾಬೀತುಪಡಿಸುವುದು ಅನಿವಾರ್ಯ ಆಯಿತು ಏರ್‘ಟೆಲ್ ಕಂಪನಿಗೆ. ಆಗ ಏರ್‘ಟೆಲ್ ಬಳಿ ಇದ್ದ ಆಯ್ಕೆ ಏರ್‘ಟೆಲ್ ಪೇಮೆಂಟ್ ಅನ್ನುವ ವರ್ಚುವಲ್ ಪೇಮೆಂಟ್ ವ್ಯವಸ್ಥೆಯನ್ನು ಪ್ರೊಮೋಟ್ ಮಾಡುವುದು. ಎಲ್ಲ ಡಿಜಿಟಲ್ ಪೇಮೆಂಟ್ ಸಂಸ್ಥೆಗಳ ತರಹ ಕ್ಯಾಶ್’ಬ್ಯಾಕ್ ಆಫರ್, ಮತ್ತು ಸಾಮಾನ್ಯ ಉಳಿತಾಯ ಖಾತೆಗಳಿಗಿಂತ ಜಾಸ್ತಿ ಬಡ್ಡಿದರವನ್ನು ಕೊಡಲಾರಂಭಿಸಿದಾಗ ವಿದ್ಯಾರ್ಥಿಗಳು ಮತ್ತು ಯುವಜನತೆ ಸಹಜವಾಗಿಯೇ ತನ್ನತ್ತ ಆಕರ್ಷಿತವಾಗಬಹುದು ಅನ್ನುವ ಲೆಕ್ಕಾಚಾರ ಉಲ್ಟಾ ಹೊಡೆದಾಗ ಆಕಾಶವೇ ತಲೆಯ ಮೇಲೆ ಬಿದ್ದ ಅನುಭವ ಏರ್‘ಟೆಲ್ ಸಂಸ್ಥೆಗೆ. ತನ್ನ ಹೊಸ ಬಿಸ್’ನೆಸ್ ಸ್ಟ್ರಾಟೆಜಿ ಕೆಲಸ ಮಾಡುತ್ತಿಲ್ಲ ಎನ್ನುವಾಗ ಏರ್‘ಟೆಲ್ ಕಂಪನಿಯ ಅದ್ಯಾರಿಗೆ ಈ ಖತರ್ನಾಕ್ ಐಡಿಯಾ ಹೊಳೆಯಿತೋ ಗೊತ್ತಿಲ್ಲ. ದೇಶದ ಆಂತರಿಕ ವ್ಯವಸ್ಥೆಗೆ ಕನ್ನಹಾಕಲು ಮುಂದಾಯಿತು ನೋಡಿ.
ಹೇಳಿ ಕೇಳಿ ಕೇಂದ್ರ ಸರ್ಕಾರ ಮೊಬೈಲ್ ಸಿಮ್ ಕಾರ್ಡ್ಗಳಿಗೆ ಆಧಾರ್ ಜೋಡಣೆ ಅನಿವಾರ್ಯ ಅನ್ನುವ ಹೊಸ ಕಾಯಿದೆಯನ್ನು ಕೂಡಾ ತಂದ ಸಮಯವದು. ‘ರೋಗಿ ಬಯಸಿದ್ದು ಹಾಲು ವೈದ್ಯ ಹೇಳಿದ್ದೂ ಹಾಲು’ ಅನ್ನುವಂತಾಯಿತು ಏರ್‘ಟೆಲ್ ಸಂಸ್ಥೆಗೆ! ಏರ್‘ಟೆಲ್ ಸಿಮ್ ಕಾರ್ಡಿಗೆ ಆಧಾರ್ ಜೋಡಣೆ ಸಂದರ್ಭದಲ್ಲಿ ಗ್ರಾಹಕನಿಗೆ ಗೊತ್ತಿಲ್ಲದೇ, ಗ್ರಾಹಕರ ಪೂರ್ವಾನುಮತಿಯಿಲ್ಲದೇ ಯಾರೆಲ್ಲ ಆಧಾರ್ ಜೋಡಣೆ ಮಾಡಿದರೋ ಅವರೆಲ್ಲರ ಹೆಸರಿನಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯುತ್ತದೆ ಏರ್‘ಟೆಲ್. ನಯಾಪೈಸೆ ಖರ್ಚಿಲ್ಲದೆ ಲಕ್ಷಲಕ್ಷ ಜನರ ಬ್ಯಾಂಕ್ ಖಾತೆ ತೆರೆಯಿತು ಏರ್‘ಟೆಲ್ ಸಂಸ್ಥೆ. ಲಕ್ಷ ಖಾತೆಗಳನ್ನೇನೋ ತೆರೆದಾಯಿತು. ಆದರೆ ಖಾತೆಗಳಲ್ಲಿ ಬ್ಯಾಲೆನ್ಸ್ ಕೂಡಾ ಇದ್ದರೇ ತಾನೇ ಯಾವುದೇ ಬ್ಯಾಂಕ್ ಲಾಭ ಗಳಿಸುವುದು. ತನ್ನ ಗ್ರಾಹಕರು ಸಿಮ್ ಕಾರ್ಡಿನ ಇ-ಕೆವೈಸಿ ಮಾಡುವ ಸಂದರ್ಭದಲ್ಲಿ ಒಂದೇ ಏಟಿಗೆ ಎರಡನ್ನೂ ಮಾಡಿತ್ತು ಏರ್‘ಟೆಲ್. ಇಲ್ಲಿ ನಡೆದಿರುವುದು ಜನರ ವಿಶ್ವಾಸದ ಮೇಲೆ ಬಹುದೊಡ್ಡ ಮೋಸ. ತನ್ನ ಕದೀಮತನದಿಂದ ಅಡುಗೆ ಅನಿಲ ಸಬ್ಸಿಡಿ ಹಣವನ್ನು ತನ್ನ ಬ್ಯಾಂಕ್’ಗೆ ವರ್ಗಾಯಿಸಲು ಹೋಗಿ ಏರ್‘ಟೆಲ್ ಸಂಸ್ಥೆ ಇದೀಗ ಇಡೀ ದೇಶವಾಸಿಗಳ ಮುಂದೆ ಬೆತ್ತಲಾಗಿಬಿಟ್ಟಿದೆ.
ಹಿಂದೆ ಎಲ್ಲ ಅಡುಗೆ ಅನಿಲ ಸಬ್ಸಿಡಿ ಬ್ಯಾಂಕ್ ಖಾತೆಗೆ ಹೋಗುವ ಪರಿಪಾಠ ಇರಲಿಲ್ಲ. ಕಾರ್ಡು ಹೊಂದಿರುವವರಿಗೆ ರಿಯಾಯಿತಿ ದರದಲ್ಲಿ ವರ್ಷಕ್ಕೆ ಹನ್ನೆರಡು ಗ್ಯಾಸ್ ಸಿಲಿಂಡರ್ ಸಿಗುತ್ತಿತ್ತು. ಆದರೆ ಯಾವಾಗ ಅಡುಗೆ ಅನಿಲ ವಿತರಕರು ಮತ್ತು ಕೆಲ ಗ್ರಾಹಕರು ಕಡಮೆ ಬೆಲೆಯಲ್ಲಿ ಸಿಗುತ್ತಿದ್ದ ಸಿಲಿಂಡರನ್ನು ಜಾಸ್ತಿಬೆಲೆಗೆ ಮಾರಲಾರಂಭಿಸಿ ಅಡುಗೆ ಅನಿಲ ಬೇಡಿಕೆಯನ್ನು ಇನ್ನಿಲ್ಲದಂತೆ ಹೆಚ್ಚಿಸಲಾರಂಭಿಸಿದರೋ ಕೇಂದ್ರ ಸರಕಾರ ಈ ದಂಧೆಯನ್ನು ಮಟ್ಟ ಹಾಕಲು ತಂದ ವ್ಯವಸ್ಥೆಯೇ ಅಡುಗೆ ಅನಿಲ ಸಬ್ಸಿಡಿಯನ್ನು ಬ್ಯಾಂಕಿಗೆ ವರ್ಗಾಯಿಸುವ ಕಾರ್ಯಕ್ರಮ. ಈ ಯೋಜನೆಯನ್ನು ಇನ್ನೂ ಪರಿಣಾಮಕಾರಿಯಾಗಿ ಮಾಡಲು ಮತ್ತು ದುರ್ಬಳಕೆಯನ್ನು ತಪ್ಪಿಸಲು ಆಧಾರ್ ಸಂಖ್ಯೆಯನ್ನೂ ಜೋಡಣೆ ಮಾಡಲಾಯಿತು. ಒಬ್ಬ ವ್ಯಕ್ತಿ ಒಂದಕ್ಕಿಂತ ಜಾಸ್ತಿ ಬ್ಯಾಂಕ್ ಖಾತೆ ಹೊಂದಿದ್ದಲ್ಲಿ ಯಾವ ಖಾತೆಯಲ್ಲಿ ತೀರ ಇತ್ತೀಚೆಗೆ ಆಧಾರ್ ಸಂಖ್ಯೆ ಜೋಡಣೆ ಅಥವಾ ಅಪ್ಡೇಟ್ ಮಾಡಲಾಗಿದೆಯೋ ಆ ಖಾತೆಗೆ ಅಡುಗೆ ಅನಿಲ ಸಬ್ಸಿಡಿ ಹಣವನ್ನು ವರ್ಗಾಯಿಸುವುದು ಸರಕಾರದ ಉದ್ದೇಶವಾಗಿತ್ತು. ಈ ಒಂದೇ ಒಂದು ಅಂಶ ಸಾಕಾಗಿತ್ತು ನೋಡಿ ಏರ್‘ಟೆಲ್ ಸಂಸ್ಥೆಗೆ. 23 ಲಕ್ಷಕ್ಕೂ ಅಧಿಕ ಗ್ರಾಹಕರ ಸುಮಾರು 47 ಕೋಟಿಗೂ ಅಧಿಕ ಮೊತ್ತದ ಸಬ್ಸಿಡಿ ಹಣ ಏರ್‘ಟೆಲ್ ಪೇಮೆಂಟ್ ಬ್ಯಾಂಕ್’ಗೆ ಹರಿದು ಬರುತ್ತದೆ. ಅದೂ ಕೂಡಾ ಯಾವುದೇ ಪರಿಶ್ರಮವಿಲ್ಲದೆ ಮತ್ತು ಬಹುಮುಖ್ಯವಾಗಿ ಗ್ರಾಹಕರ ಪೂರ್ವಾನುಮತಿಯಿಲ್ಲದೆ!
ಈ ಘಟನೆಯ ಬಗ್ಗೆ ಸೆಪ್ಟೆಂಬರ್ ತಿಂಗಳಲ್ಲಿಯೇ ಆಧಾರ್ ಪ್ರಾಧಿಕಾರ ಎರೆಡೆರಡು ಬಾರಿ ನೋಟಿಸ್ ನೀಡಿದಾಗ ಏರ್‘ಟೆಲ್ ಸಂಸ್ಥೆ ನಾವು ಯಾವುದೇ ಖಾತೆಗಳನ್ನು ಗ್ರಾಹಕರ ಅನುಮತಿಯಲ್ಲಿದೆ ತೆರೆದಿಲ್ಲ ಎಂದು ಉತ್ತರ ಕೊಟ್ಟು ನುಣುಚಿಕೊಂಡಿತ್ತು. ಆದರೆ ಏರ್‘ಟೆಲ್ ಸಂಸ್ಥೆಯ ಉತ್ತರ ಸಮಾಧಾನಕರವಾಗಿಲ್ಲವಾದ್ದರಿಂದ ಆಧಾರ್ ಪ್ರಾಧಿಕಾರದ ಉನ್ನತ ಮಟ್ಟದ ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿ ಏರ್‘ಟೆಲ್ ಸಂಸ್ಥೆಯ ಇ-ಕೆವೈಸಿ ಆಪ್ ಕೂಲಂಕಷವಾಗಿ ಪರಿಶೀಲಿಸಿದಾಗ ಏರ್‘ಟೆಲ್ ಸಂಸ್ಥೆ ಸಿಕ್ಕಿಬಿದ್ದಿತ್ತು. ತಕ್ಷಣಕ್ಕೆ ಏರ್‘ಟೆಲ್ ಸಂಸ್ಥೆ ಆಧಾರ್ ಇ-ಕೆವೈಸಿ ಉಪಯೋಗಿಸದಂತೆ ನಿರ್ಬಂಧ ಹೇರಿತು ಆಧಾರ್ ಪ್ರಾಧಿಕಾರ. ಸರ್ವೋಚ್ಚ ನ್ಯಾಯಾಲಯವೂ ಏರ್‘ಟೆಲ್ ಸಂಸ್ಥೆಗೆ ಛೀಮಾರಿ ಹಾಕಿದೆ. ಏರ್‘ಟೆಲ್ ಸಂಸ್ಥೆಗೆ ದೊಡ್ಡ ಪ್ರಮಾಣದಲ್ಲಿ ದಂಡ ಹಾಕಬಹುದು ಅಥವಾ ನಮ್ಮ ದೇಶದ ಇತರ ಹಗರಣಗಳಂತೆ ಇದೂ ಹತ್ತರಲ್ಲಿ ಹನ್ನೊಂದು ಆಗಲೂಬಹುದು ಮತ್ತು ಯಾವುದೇ ದಂಡ ವಿಧಿಸದೇ ಏರ್‘ಟೆಲ್ ಸಂಸ್ಥೆ ನಿರ್ದೋಷಿ ಅನ್ನುವ ತೀರ್ಪು ಬಂದರೂ ಆಶ್ಚರ್ಯವಿಲ್ಲ ಬಿಡಿ!
ಮೂಲಗಳ ಪ್ರಕಾರ ಏರ್‘ಟೆಲ್ ಸಂಸ್ಥೆಗೆ ಈ ಹಣವನ್ನು ಗ್ರಾಹಕರು ಯಾವ ಬ್ಯಾಂಕ್ ಖಾತೆಗೆ ಅಡುಗೆ ಅನಿಲ ಸಬ್ಸಿಡಿ ಬರುವಂತೆ ನೋಂದಾಯಿಸಿದ್ದರೋ ಅದೇ ಖಾತೆಗಳಿಗೆ ಬಡ್ಡಿ ಸಮೇತ ಹಣವನ್ನು ಹಿಂದಿರುಗಿಸುವಂತೆ NPCI (National Payments Corporation of India) ತಾಕೀತು ಮಾಡಿದೆ ಮತ್ತು ಏರ್‘ಟೆಲ್ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂಬ ಸುದ್ದಿ ತಿಳಿದು ಬಂದಿದೆ. ವಿಷಯ ಏನೇ ಇರಲಿ. ಎಲ್ಲ ಕಡೆಯೂ ಆಧಾರ್ ಜೋಡಣೆ ಕಡ್ಡಾಯವಾಗುತ್ತಿರುವ ಸಮಯದಲ್ಲಿ, ಆಧಾರ್ ದತ್ತಾಂಶ ಎಷ್ಟು ಸುರಕ್ಷಿತ ಅನ್ನುವ ಕೂಗು ಜನಸಾಮಾನ್ಯರಲ್ಲಿ ಏಳುವಂತೆ ಮಾಡಿದೆ ಏರ್‘ಟೆಲ್ ಸಂಸ್ಥೆ. ಆಧಾರ್ ಪ್ರಾಧಿಕಾರ ಆಧಾರ್ ದತ್ತಾಂಶದ ಸುರಕ್ಷತೆ ಕಡೆಗೆ ಗಮನ ಹರಿಸಬೇಕಾದದ್ದು ಮಾತ್ರ ಸದ್ಯದ ಅತೀ ಮುಖ್ಯ ಆವಶ್ಯಕತೆಗಳಲ್ಲೊಂದು. ಆದರೂ ದೇಶದ ನಂಬರ್ ಒನ್ ನೆಟ್’ವರ್ಕ್ ಅಂತ ತನಗೆ ತಾನೇ ಕರೆಸಿಕೊಂಡು ಬಂದಿದ್ದ ಸಂಸ್ಥೆಯೊಂದು ಇಡೀ ದೇಶದ ಮುಂದೆ ಬೆತ್ತಲಾದದ್ದು ಮಾತ್ರ ಕಟುಸತ್ಯ.
Facebook ಕಾಮೆಂಟ್ಸ್