ಮನಸ್ಸಿಗೆ ಒಂದು ವಿಷಯ ತಲೆಗೆ ಹೊಕ್ಕಿತು ಅಂದರೆ ಅದರ ಬಗ್ಗೆಯೇ ಸದಾ ಯೋಚಿಸುವಂತಾಗುತ್ತದೆ. ಕೂತಲ್ಲಿ ನಿಂತಲ್ಲಿ ಅದೇ ವಿಚಾರ ಇರುತ್ತದೆ. ಅದು ಎಷ್ಟು ಮನಸ್ಸನ್ನು ಆವರಿಸಲು ಶುರು ಮಾಡುತ್ತದೆ ಅಂದರೆ ಯಾವ ಕೆಲಸ ಮಾಡಲೂ ಮನಸ್ಸಿಲ್ಲ. ಯಾವ ರೀತಿ ಇದನ್ನು ಮನಸ್ಸಿಂದ ಹೊರಗೆ ಹಾಕಲಿ? ಏನು ಮಾಡಲಿ? ಮನಸ್ಸಿಗೆ ಸಮಾಧಾನ ಇಲ್ಲ. ನಿದ್ದೆ ಇಲ್ಲ. ಅಡುಗೆ ಮಾಡಲು ಮನಸ್ಸಿಲ್ಲ. ಹಸಿವಾದರೆ ಇರೋದರಲ್ಲೆ ಏನೊ ಒಂದು ತಿಂದು ಹಸಿವಿಂಗಿಸಿಕೊಳ್ಳುವಂತಾಗುತ್ತದೆ. ಮಾಡಲು ಒಂದಷ್ಟು ಕೆಲಸ ಇದೆ. ಒಂದೊಂದೇ ದಿನಾ ಒಂದಷ್ಟು ಮಾಡಿ ಎಲ್ಲಾ ಮುಗಿಸಬೇಕು. ಎಷ್ಟು ಕಾಲಹರಣ ಮಾಡುತ್ತಿದ್ದೇನೆ. ಛೆ! ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು. ಹೀಗೆ ಮಾಡಿದ ತೀರ್ಮಾನ ಎಲ್ಲಾ ಎಕ್ಕುಟ್ಟೋಯ್ತು.
ನಿಜ. ಈಗೊಂದು ಮೂರು ದಿನಗಳಿಂದ ತಲೆ ಎಲ್ಲಾ ಹಾಳಾಗೋಗಿತ್ತು. ಚಿಕ್ಕ ವಿಚಾರ ಯೋಚಿಸುತ್ತ ಸಂಶಯದ ರೂಪ ತಾಳಿತು. ಅದಕ್ಕೆ ಸಂಬಂಧಪಟ್ಟವರ ಹತ್ತಿರ ನೇರವಾಗಿ ಕೇಳಿ ಬಿಡಲೆ? ಕೇಳಿದರೆ ಅವರೇನಂದುಕೊಳ್ಳಬಹುದು. ಆರು ತಿಂಗಳಾಯಿತಲ್ಲ. ನೆನೆನೆನೆದು ಒಳಗೊಳಗೆ ಸಂಕಟ. ರಾತ್ರಿಯ ನಿದ್ದೆ ಸುಮಾರು ಮೂರು ಗಂಟೆಯವರೆಗೂ ಬರಲಿಲ್ಲ. ಬೆಳಿಗ್ಗೆ ಸಡನ್ನಾಗಿ ಬೇಗ ಇದೇ ವಿಚಾರದಿಂದ ಎಚ್ಚರಾಗಿ ಮತ್ತದೆ ಅವಸ್ಥೆ. ಮಾಮೂಲಿ ವಾಡಿಕೆಯಂತೆ ದಿನ ನಿತ್ಯದ ಕಾರ್ಯ ಮಾಡುತ್ತ ಬಂದೆ. ಎಲ್ಲ ಮುಗಿಸಿ ಸರಿ ಇವತ್ತು ಏನಾದರಾಗಲಿ ಎಲ್ಲಾ ತಡಕಾಡಿ ಈ ವಿಚಾರಕ್ಕೆ ಸಂಬಂಧಪಟ್ಟ ಯಾವುದಾದರೂ ದಾಖಲೆ ಸಿಗಬಹುದೆ? ಅದನ್ನೂ ನೋಡಿದ್ದಾಯಿತು. ಮತ್ತೆ ಏನೊ ಸಿಕ್ಕಿತು. ಸರಿ. ಆದರೆ ಅಲ್ಲೂ ಒಂದು ಸಂಶಯ ಕಾಡುವುದು ಬಿಡಲಿಲ್ಲ. ಮತ್ತೆ ಮತ್ತೆ ಆ ಸಂದರ್ಭ ನೆನಪಿಸಿಕೊಳ್ಳುತ್ತ ರಾತ್ರಿ ಮಲಗಿದಾಗ ಸ್ವಲ್ಪ ಸ್ವಲ್ಪ ಅರ್ಥ ಆಗುತ್ತ ಹೋಯಿತು. ನಿದ್ದೆ ಯಾವಾಗ ಬಂತೊ ಗೊತ್ತಾಗಲಿಲ್ಲ. ಬೆಳಿಗ್ಗೆ ಬೇಗ ಎದ್ದು ಮನಸ್ಸಲ್ಲೆ ತೀರ್ಮಾನಿಸಿದೆ.
ಇವತ್ತು ಕಾರ್ತೀಕ ಸೋಮವಾರ. ಬೇಗ ಎಲ್ಲಾ ಮುಗಿಸಿ ಒಂದಷ್ಟು ಪರಮಾತ್ಮನ ಧ್ಯಾನ ಮಾಡೋಣ. ಮನಸ್ಸಿಗೊಂದಿಷ್ಟು ಸಮಾಧಾನ ಸಿಗಬಹುದು. ಒಂದಷ್ಟು ತಲೆಗೆ ಎಣ್ಣೆ ಸವರಿದಾಗ ತಲೆ ತಂಪೆನಿಸಿದರೂ ಮನಸ್ಸು ಕಾದೆ ಇತ್ತು. ದೇಹ ಶುದ್ಧಿಯೊಂದಿಗೆ ದೇವರ ಮನೆಯಲ್ಲಿ ಒಂದಷ್ಟು ಹೊತ್ತು ಪೂಜೆನೂ ಆಯಿತು. ಸಾಯಂಕಾಲ ದೇವಸ್ಥಾನದಲ್ಲಿ ದೀಪ ಹಚ್ಚಿ ಬರುವ ತೀರ್ಮಾನ. ಬೇಡಾ ಏನೂ ಬೇಡಾ. ಮತ್ತದೆ ನಿರಾಸಕ್ತಿ. ನಿತ್ಯದಂತೆ ಮಾಮೂಲಿ ದೀಪ ಬೆಳಗಿ ಕೂತೆ.
ಮನಸ್ಸಿಗೆ ಹಿತ ನೀಡುವ ಪುಸ್ತಕ ಓದೋಣ. ಅಧ್ಯಾತ್ಮಕ್ಕೆ ಸಂಬಂಧಿಸಿದ್ದು. ಕಪಾಟಿಂದ ತೆಗೆದು ಎರಡು ಪುಟ ಓದುವಷ್ಟರಲ್ಲಿ ಬೇಡವೆನಿಸಿತು. ಬರೆದೆ ಒಂದು ನಾಲ್ಕು ಸಾಲು ಯಾವುದೋ ಸ್ಪರ್ಧೆಯಲ್ಲಿ ಭಾಗವಹಿಸಲು ಕನಿಷ್ಟ ಐದು ಬರಹ ಕಳುಹಿಸಿ ಅಂದಿದ್ದಾರೆ. ಈ ತಿಂಗಳು ಕೊನೆ ಅಂದುಕೊಂಡಿದ್ದೆ. ಈಮೇಲ್ ನೋಡಿದಾಗ ಗೊತ್ತಾಯಿತು ನವೆಂಬರ್ ಐದರವರೆಗೂ ಸಮಯವಿದೆ. ಸರಿ ಅದಲ್ಲಿಗೆ ಬಿಟ್ಟೆ. ಮಾಡುವುದೇನು?
ಯಾರ ಬಳಿಯಾದರೂ ಮಾತನಾಡಿದರೆ ಎನ್ನುವ ಆಲೋಚನೆ ಬಂತು. ಫೋನ್ ರಿಂಗಾಯಿತು ಅದ್ಯಾವ ಕೆಲಸದಲ್ಲಿರುವರೋ, ಉತ್ತರವಿಲ್ಲ. ಚಾಟ್ ಮಾಡಿದರೂ ಪ್ರತಿಕ್ರಿಯೆ ಇಲ್ಲ. ಪಕ್ಕದ ಮನೆಯವರ ಹತ್ತಿರ ಒಂದಷ್ಟು ಬೇಡಾಗಿದ್ದು ಹರಟಿದ್ದೂ ಆಯಿತು. ಊಹೂಂ ತಲೆ ಸರಿಯಾಗ್ತಿಲ್ಲ. ಮನಸ್ಸು ಹೇಳಿದ ಮಾತು ಕೇಳುತ್ತಿಲ್ಲ. ಬಹಳ ಹಠ ಮಾಡುತ್ತಿದೆ. ಎರಡು ದಿನಗಳಿಂದ ಬಿದ್ದಲ್ಲೆ ಇದ್ದ ಪೇಪರ್ ಕಾಟಾಚಾರಕ್ಕೆ ಓದಿ ಮುಗಿಸಿದೆ. ಓದಿ ಆಗೋದೇನಿದೆ? ಮನಸ್ಸು ಹೇಳಿತು. ಸುಮ್ಮನೆ ಕುಳಿತೆ.
ಮತ್ತೆ? ನಿದ್ದೆಗೆಟ್ಟು ಎರಡು ದಿನದಿಂದ ನಿದ್ದೆ ಕರೆಯುತ್ತಿತ್ತು. ಒಂದಷ್ಟು ತಿಂದು ಬೇಗ ಮಲಗಿದೆ.
ಅಲ್ಲಾ ಮನಸೆ ಬಿಟ್ಟಾಕು ಬಂದ ವಿಚಾರ. ದುಡ್ಡು ತಾನೆ. ಕೊಟ್ಟಿದಾರೊ ಬಿಟ್ಟಿದ್ದಾರೊ. ಹೋದರೆ ಹೋಗಲಿ. ಕೊಟ್ಟಿದ್ದಾರೆ ಅಂತ ಪಾಸಿಟಿವ್ ಆಗಿಯೇ ಯೋಚಿಸು. ಬರಬೇಕು ಅಂತಿದ್ದರೆ ಹೇಗಾದರೂ ಬರುತ್ತದೆ. ಅಷ್ಟಕ್ಕೂ ಈ ದುಡ್ಡು ಸಾಯೋತನಕ ಸಾಕಾ? ನಿನ್ನದೇ ತಪ್ಪು. ಆ ಸಂದರ್ಭದಲ್ಲಿ ಕಾಳಜಿವಹಿಸಿ ಸರಿಯಾಗಿ ಬರೆದಿಟ್ಟುಕೊಳ್ಳಬೇಕಿತ್ತು. ನೋಟ್ ಮಾಡಿಕೊಂಡಿದ್ದೀಯಾ. ಸರಿ. ಅದೂ ನೆಟ್ಟಗೆ ಬರದಿಲ್ಲ. ನೀ ಬರೆದುಕೊಂಡಿದ್ದೆ ನಿನಗೆ ಸಂಶಯ ಬರೋ ಹಾಗೆ ಆಗಿದೆ. ಇದು ನಿನ್ನದೆ ತಪ್ಪಲ್ವಾ? ಸರಿ ಕೇಳಿದೆ ಅಂತಿಟ್ಟುಕೊ. ಅವರು ನಾನು ಕೊಟ್ಟಿದ್ದೇನೆ ಅಂದರೆ ಏನು ಮಾಡ್ತೀಯಾ? ಇದರಿಂದ ಅವಮಾನ ಆಗೋದು ನಿನಗೇ ಅಲ್ವಾ? ಸರಿಯಾದ ಪ್ರೂಫ್ ಇಲ್ಲದೆ ಬೇರೆಯವರ ಮೇಲೆ ಸಂಶಯ ಪಡೋದು ತಪ್ಪು. ಅರ್ಥ ಮಾಡಿಕೊ.
ಹೀಗೆ ನನ್ನ ಮನಸ್ಸಿಗೆ ಸಮಾಧಾನ ಮಾಡುತ್ತಾ ಬಂದೆ. ಒಂದು ಹಂತದಲ್ಲಿ ಮನಸ್ಸಿಗೆ ಸ್ವಲ್ಪ ಸ್ವಲ್ಪ ಸಮಾಧಾನ ಆಗುತ್ತ ಬಂತು. ಅವರ ಬಗ್ಗೆ ಪಾಸಿಟಿವ್ ಆಗಿ ಯೋಚನೆ ಮಾಡಲು ಶುರುಮಾಡಿತು. ನಿದ್ದೆ ಕಣ್ಣು ಮುಚ್ಚಿದ್ದು ಗೊತ್ತಾಗಲಿಲ್ಲ. ಬೆಳಿಗ್ಗೆ ಅವರನ್ನು ಭೇಟಿಯಾಗಿ ಸ್ವಲ್ಪ ಹೊತ್ತು ಅದೂ ಇದೂ ಕುಶಲೋಪರಿ ಮಾತಾನಾಡಿ ಬಂದೆ. ಮನಸ್ಸು ತಿಳಿಯಾಯ್ತು. ಆದರೆ ದುಡ್ಡಿನ ವಿಚಾರ ಕೇಳಲಿಲ್ಲ.
ಈ ಧನಾತ್ಮಕ ಯೋಚನೆ, ಭೇಟಿ, ಮಾತು ಮನಸ್ಸು ಎಷ್ಟು ತಿಳಿಯಾಯಿತು ಅಂದರೆ ಕೂಡಲೇ ಎಲ್ಲಾ ಬರಿಬೇಕೆಂಬ ಮನಸ್ಸಿನ ಮಾತಿಗೆ ಮಣಿದು ಬರೆಯಲು ಕೂತೆ. ಬೇಜಾರಿಗೆ ಕಾರಣಗಳನ್ನು ನಾವೇ ಸೃಷ್ಟಿ ಮಾಡಿಕೊಂಡು ಮತ್ತೆ ಮತ್ತೆ ಒದ್ದಾಡೋದು. ತಿಳಿಯಾದ ಮೇಲೆ ನಮ್ಮ ನಡತೆಗೆ ನಾವೇ ವ್ಯಥೆ ಪಡೋದು. ಇದೆಲ್ಲ ಬೇಕಾ??
ಮುಂದುವರಿಯುವುದು
ಗೀತಾ ಹೆಗಡೆ
Facebook ಕಾಮೆಂಟ್ಸ್