ಅಶೋಕನ ಕಾಲಕ್ಕೇ ಬುದ್ಧ ತತ್ತ್ವ ಭ್ರಷ್ಟವಾಗಿತ್ತು. ಕ್ಷಾತ್ರತ್ತ್ವ ಸೊರಗಿತ್ತು. ಅಶೋಕ ಇತ್ತ ಸರಿಯಾಗಿ ಸನಾತನ ಧರ್ಮವನ್ನೂ ಅನುಸರಿಸಲಿಲ್ಲ. ಅತ್ತ ಅವನಿಗೆ ಬುದ್ಧನ ಬೆಳಕೂ ಸಿಗಲಿಲ್ಲ. ಅಶೋಕ ತಾನೊಬ್ಬನೆ ಬೌದ್ಧನಾಗಿ ಹೋಗಿದ್ದರೆ ಅದರಿಂದ ಸಮಸ್ಯೆಯೇನೂ ಇರಲಿಲ್ಲ. ಅವನು ಅದನ್ನು ಅನವಶ್ಯವಾಗಿ ಪ್ರಜೆಗಳ ಮೇಲೆ ಹೇರಿದ. ಚಾಣಕ್ಯ-ಚಂದ್ರಗುಪ್ತರ ಮಾರ್ಗದರ್ಶನದಲ್ಲಿ ಉದ್ದೀಪನಗೊಂಡಿದ್ದ ಕ್ಷಾತ್ರ ಕೆಲವೇ ವರುಷಗಳಲ್ಲಿ ನಿಸ್ತೇಜಗೊಂಡಿತು. ಪಂಜಾಬ್, ಗಾಂಧಾರಗಳವರೆಗೂ ಬೌದ್ಧ ಮಠಗಳೇ ತುಂಬಿಕೊಂಡವು. ಬೌದ್ಧ ತತ್ತ್ವಗಳನ್ನು ವಿಶಾಲ ಮನಸ್ಸಿನಿಂದ ಅಧ್ಯಯನ ಮಾಡದ ನವ ಬೌದ್ಧರಿಗೆ ಸನಾತನ ಧರ್ಮದ ಮೇಲೆ ದ್ವೇಷ ಸಾಧಿಸುವುದೇ ನಿತ್ಯ ಕಾಯಕವಾಯಿತು. ಅಶೋಕನ ಮೊಮ್ಮಗ ಸಂಪ್ರತಿ ಚಂದ್ರಗುಪ್ತ ಜೈನನಾಗಿ ಸಲ್ಲೇಖನ ಕೈಗೊಂಡ. ಅವನ ಮಗ ದುರ್ಬಲ ಬೃಹದ್ರಥನ ಕಾಲಕ್ಕೆ ಮಗಧ ಯವನರಿಗೆ ಸುಲಭ ತುತ್ತಾಯಿತು. ಕೆಲವೇ ವರ್ಷಗಳ ಹಿಂದೆ ಅಲೆಗ್ಸಾಂಡರನಂತಹ ವೀರನ ನೇತೃತ್ವವಿದ್ದಾಗ್ಯೂ ಅಪಮಾನಕರ ಸೋಲನ್ನುಂಡು ಪರಾರಿಯಾಗಿದ್ದ ಗ್ರೀಕರು ಸಿಂಧೂ ನದಿಯನ್ನು ದಾಟಿ ಬರುವಂತಹ ಧೈರ್ಯ ತೋರಿದ್ದರೆಂದರೆ ಆಗ ಅರಾಜಕತೆ ಹೇಗೆ ತಾಂಡವಾಡುತ್ತಿದ್ದಿರಬಹುದು. ಇವೆಲ್ಲವೂ ಅವಾಸ್ತವಿಕ ಅಹಿಂಸೆಯನ್ನು ಅಪ್ಪಿದುದರಿಂದಲೇ ತಂದುಕೊಂಡದ್ದು. ವಿದಿಶಾ ವಿದರ್ಭಗಳವರೆಗೂ ಅವರು ಏರಿ ಬಂದರು. ಅಂತಹ ಸಂದರ್ಭದಲ್ಲಿ ದೇಶದ ರಕ್ಷಣೆಗೆ ಮುಂದಾದವ ಪುಷ್ಯಮಿತ್ರ ಶುಂಗ. ವಿದೇಶೀಯರಿಂದ ಆಕ್ರಮಣಕ್ಕೊಳಗಾಗುವಷ್ಟು ದುರ್ಬಲವಾಗಿದ್ದ ಕ್ಷಾತ್ರವನ್ನು ಉದ್ದೀಪಿಸಿ ದೇಶೀಯರಿಗೆ ನೆಮ್ಮದಿ ತಂದಿತ್ತದ್ದು ಬ್ರಾಹ್ಮಣನಾಗಿದ್ದೂ ಕ್ಷಾತ್ರವನ್ನವಲಂಬಿಸಿದ ಪುಷ್ಯಮಿತ್ರನ ಆರ್ಷ ಪ್ರಜ್ಞೆ.
ದೇಶದ ಸೀಮೆಗಳಲ್ಲಿದ್ದ ಬೌದ್ಧ ಮಠಗಳ ಪ್ರಮುಖರನ್ನು ತನ್ನ ಪಕ್ಷಕ್ಕೆ ಸೆಳೆದುಕೊಂಡು ತನ್ನ ಸೇನೆಯನ್ನು ಬೌದ್ಧ ಮಠಗಳಲ್ಲಿ ಭಿಕ್ಕುಗಳ ರೂಪದಲ್ಲಿ ಶಸ್ತ್ರಸಜ್ಜಿತವಾಗಿ ನಿಯೋಜಿಸಿದ ಮಿನಾಂದರ. ತನ್ನ ಬುದ್ಧಿ-ಬಾಹು ಬಲದಿಂದ ಸೇನಾಪತಿ ಪಟ್ಟಕ್ಕೇರಿದ್ದ ಪುಷ್ಯಮಿತ್ರನ ಹದ್ದಿನ ಚಕ್ಷುಗಳಿಗೆ ಇದು ಕಂಡಿತು. ಬೌದ್ಧಮಠಗಳ ತಪಾಸಣೆಗೆ ಅವನು ರಾಜ ಬೃಹದ್ರಥನ ಅನುಮತಿ ಕೇಳಿದಾಗ ರಾಜ ನಿರಾಕರಿಸಿದ. ಆದರೆ ರಾಷ್ಟ್ರೀಯ ಭಾವನೆಗಳಿಂದ ಪ್ರೇರಿತನಾಗಿದ್ದ ಪುಷ್ಯಮಿತ್ರ ರಾಜನ ಅನುಮತಿ ಇಲ್ಲದಿದ್ದರೂ ಮಠಗಳ ತಪಾಸಣೆಮಾಡಿ ಅಡ್ಡ ಬಂದ ದ್ರೋಹಿಗಳನ್ನು ತರಿದು, ಸೆರೆ ಹಿಡಿದು ದೇಶವನ್ನು ರಕ್ಷಿಸಿದ. ಸುದ್ದಿ ತಿಳಿದ ಬೃಹದ್ರಥ ಕಿಡಿಕಿಡಿಯಾದ. ಪುಷ್ಯಮಿತ್ರ ಮಗಧಕ್ಕೆ ಮರಳುವ ಸಮಯಕ್ಕೆ ಸೈನ್ಯದ ಪೆರೇಡ್ ನಡೆಸುತ್ತಿದ್ದ ಬೃಹದ್ರಥ ಪುಷ್ಯಮಿತ್ರನ ಮೇಲೆ ಯುದ್ಧಕ್ಕೆ ಮುಂದಾದ. ಕ್ಷಣ ಮಾತ್ರದಲ್ಲಿ ರಾಜನ ರುಂಡ ಚೆಂಡಾಡಿದ ಪುಷ್ಯಮಿತ್ರನಿಗೆ ಸೈನ್ಯ ಬೆಂಗಾವಲಾಗಿ ನಿಂತಿತು. ತನ್ನ ಸೈನ್ಯವನ್ನು ಬಲಪಡಿಸಿದ ಪುಷ್ಯಮಿತ್ರ ಮಗಧದಿಂದ ಹೊರ ಬಿದ್ದು ಸ್ವಾತಂತ್ರ್ಯ ಘೋಷಿಸಿಕೊಂಡಿದ್ದ ರಾಜ್ಯಗಳನ್ನೆಲ್ಲಾ ಮರುವಶಪಡಿಸಿಕೊಂಡ. ಗ್ರೀಕರನ್ನು ಮೂಲೋಚ್ಛಾಟನೆ ಮಾಡುತ್ತಾ ಬಂದ. ಪುಷ್ಯಮಿತ್ರ ತನ್ನ ಮೊಮ್ಮಗ ವಸುಮಿತ್ರ ಶುಂಗನ ಮೂಲಕ ಸಿಂಧೂ ತೀರದಲ್ಲಿದ್ದ ಗ್ರೀಕರನ್ನು ಗೆದ್ದ ಎಂದು ಕಾಳಿದಾಸ ಮಾಲವಿಕಾಗ್ನಿಮಿತ್ರದಲ್ಲಿ ಹೇಳುತ್ತಾನೆ. ಹೀಗೆ ಅಲೆಗ್ಸಾಂಡರನಿಂದ ಮೊದಲ್ಗೊಂಡು ಮಿನಾಂದರನವರೆಗೆ ಸುಮಾರು ಮುನ್ನೂರು ವರ್ಷಗಳ ಯವನರ ದಾಳಿ ಪುಷ್ಯಮಿತ್ರನಿಂದಾಗಿ ಕೊನೆಯಾಯಿತು. ಅಳಿದುಳಿದವರನ್ನು ಸನಾತನ ಧರ್ಮ ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ಶುಂಗ ವಂಶದ ಪ್ರವರ್ತಕನಾದ ಪುಷ್ಯಮಿತ್ರ ಕಾಶ್ಯಪ ಗೋತ್ರೀಯನೆಂದು ಕೆಲವರು ಅಂದರೆ ಇನ್ನು ಕೆಲವರು ಭರದ್ವಾಜ ಗೋತ್ರೋತ್ಪನ್ನ ಎಂದಿದ್ದಾರೆ. ಅದೇನೇ ಇರಲಿ ಅಗತ್ಯ ಬಿದ್ದ ಸಂದರ್ಭದಲ್ಲಿ ಪರಶುರಾಮನಂತೆ ಶಸ್ತ್ರ ಹಿಡಿದು ದೇಶವನ್ನು ರಕ್ಷಿಸಿದ ಪುಷ್ಯಮಿತ್ರನ ಸನಾತನ ಪ್ರಜ್ಞೆ ಸರ್ವಕಾಲಕ್ಕೂ ಅನುಕರಣೀಯ.
ಕಮ್ಯೂನಿಸ್ಟ್ ಇತಿಹಾಸಕಾರರು ಪುಷ್ಯಮಿತ್ರನು ಬ್ರಾಹ್ಮಣ. ಹೀಗಾಗಿ ಅದು ಬ್ರಾಹ್ಮಣರದ್ದೇ ಬಂಡಾಯ. ಬ್ರಾಹ್ಮಣರಿಗೆ ಅಶೋಕ ಹಾಗೂ ಅವನ ಪರಂಪರೆಯ ಮೇಲಿದ್ದ ವೈರದ ಪ್ರತೀಕ ಎಂದೆಲ್ಲಾ ಬರೆದಿದ್ದಾರೆ. ಆದರೆ ಇದು ಬ್ರಾಹ್ಮಣರ ಬಂಡಾಯ ಮಾತ್ರವಾಗಿದ್ದರೆ ಶುಂಗ ವಂಶ ಮುನ್ನೂರು ವರ್ಷಗಳ ಕಾಲ ರಾಜ್ಯವಾಳಿದ್ದು ಹೇಗೆ? ಅಲ್ಲದೆ ಅವರ ತರುವಾಯ ಬಂದ ಬ್ರಾಹ್ಮಣರಾದ ಕಾಣ್ವರು ಶುಂಗರನ್ನು ಎದುರಿಸಬಾರದಿತ್ತಲ್ಲ! ಹಾಗಾಗಿ ಇದು ಮೂಲತಃ ಕಮ್ಯೂನಿಸ್ಟ್’ರ ಬ್ರಾಹ್ಮಣ ದ್ವೇಷವೇ ಹೊರತು ಬೇರೇನಲ್ಲ. ಈಗಿನ ನವಬೌದ್ಧರ ಕಥಾ ಕೌಶಲ್ಯ ಎಷ್ಟೆಂದರೆ ಹಿಂದೂಗಳನ್ನು ಹಣಿಯುವ ಅವರ ಕಥೆಗಳು ಪಾಕಿಸ್ತಾನದಲ್ಲಿ ಇತಿಹಾಸದ ಪುಸ್ತಕಗಳಲ್ಲಿ ಸೇರಿಕೊಂಡಿವೆ! ಪುಷ್ಯಮಿತ್ರ ಬೌದ್ಧ ಮೂಲಗ್ರಂಥಗಳನ್ನು ನಾಶಮಾಡಿದ ಎಂದು ಕಥೆಗಳನ್ನು ಸೃಷ್ಟಿಸಿದವರು ಆತ ಪ್ರಾಚೀನ ಭಾರತದ ಅತ್ಯಂತ ಸುಂದರ ಸ್ತೂಪಗಳಲ್ಲೊಂದಾದ ಭಾರ್ಹುತ್’ನ ಸ್ತೂಪವನ್ನು ಕಟ್ಟಿಸಿದುದನ್ನು ಮರೆಯುತ್ತಾರೆ. ಸಾಂಚಿಯ ಸ್ತೂಪದ ಸುತ್ತಲಿನ ಅತ್ಯದ್ಭುತ, ಅಸ್ಖಲಿತ ಕಟಾಂಜನದ ನಿರ್ಮಾತೃ ಅವನೇ ಎನ್ನುವುದು ಈ ದ್ವೇಷ ಕಾರುವ ಇತಿಹಾಸಕಾರರಿಗೆ ನೆನಪಾಗುವುದಿಲ್ಲ. ಪುಷ್ಯಮಿತ್ರ ಎಲ್ಲಾ ಮತಗಳನ್ನೂ ಆದರದಿಂದ ನೋಡಿದ್ದ ಎನ್ನುವುದು ಐತಿಹಾಸಿಕ ಸತ್ಯ. ಸಾಂಚಿ ಮತ್ತು ಭಾರ್ಹುತ್’ಗಳ ಶಿಲ್ಪಕಲೆಯೇ ಬೋಧಗಯಾಕ್ಕೂ ಪ್ರೇರಣೆಯಾಯಿತು. ಶುಂಗರ ಮಂತ್ರಿಯಾಗಿದ್ದ ಬ್ರಹ್ಮಮಿತ್ರನ ಪತ್ನಿ ಇಂದ್ರಾಗ್ನಿಮ್ಹ ಇದರ ನಿರ್ಮಾತೃ. ಬುದ್ಧಗಯೆಯಲ್ಲಿನ ವಿಹಾರ ಆರ್ಯ ಕೌರಾಂಗಿಯಿಂದ ನಿರ್ಮಿತವಾಯಿತು. ಅಲ್ಲದೆ ಜಾತಕ ಕಥೆಗಳನ್ನು, ಸೂರ್ಯಭಗವಾನನ ಸುಂದರ ಶಿಲ್ಪಗಳನ್ನೊಳಗೊಂಡ ಅಲ್ಲಿನ ಕಟಾಂಜನದ ನಿರ್ಮಾತೃಗಳು ಕೂಡಾ ಶುಂಗರೇ. ಮಥುರಾ, ಕೌಶಾಂಭಿ, ಶ್ರಾವಸ್ಥಿ, ಪಾಟಲೀಪುತ್ರ, ಸಾರನಾಥಗಳಲ್ಲೂ ಅನೇಕ ಸ್ತೂಪಗಳನ್ನು ಶುಂಗರು ನಿರ್ಮಿಸಿದರು. ಶುಂಗರೇನಾದರೂ ಮತಾಂಧರಾಗಿರುತ್ತಿದ್ದರೆ ನಾಗಸೇನನಂತಹ ಬೌದ್ಧ ವಿದ್ವಾಂಸ ಬದುಕಲು ಸಾಧ್ಯವಿತ್ತೇ? ಶುಂಗರ ಸಾಮ್ರಾಜ್ಯದಲ್ಲಿ ಬೌದ್ಧ ಮತ ಔನ್ನತ್ಯದಲ್ಲಿತ್ತೆಂಬುದಕ್ಕೆ ಅನೇಕ ಪುರಾತತ್ತ್ವಸಂಶೋಧನೆಗಳೇ ಸಾಕ್ಷಿ ಹೇಳುತ್ತವೆ.
ಅಶೋಕ ಬೌದ್ಧ ತತ್ತ್ವಗಳನ್ನು ತನ್ನ ಪ್ರಜೆಗಳ ಮೇಲೂ ಹೇರಿದರೆ ಅವನ ಬಳಿಕ ಬಂದ ಅರಸರ ಕಾಲದಲ್ಲಿ ಬೌದ್ಧರ ಮತಾಂತರ ಪ್ರಕ್ರಿಯೆ ಬಿರುಸಾಯಿತು. ಬಲವಂತದ ಮತಾಂತರಗಳು ಹೆಚ್ಚಾದವು. ಇದಕ್ಕೆ ಆಳರಸರ ಕೃಪಾಕಟಾಕ್ಷವೂ ಇತ್ತು. ತಮ್ಮ ಮತವೇ ಶ್ರೇಷ್ಠವೆನ್ನುವ ನವ ಬೌದ್ಧರು ತಾವು ಹುಟ್ಟಿದ್ದೇ ಸನಾತನ ಧರ್ಮದ ಸಹಿಷ್ಣುತೆಯಿಂದ ಎನ್ನುವುದನ್ನೂ ಮರೆತು ಮತಾಂತರಕ್ಕೆ ತೊಡಗಿದರು. ಪುಷ್ಯಮಿತ್ರ ಸಿಂಹಾಸನವೇರಿದ ಬಳಿಕ ಎಗ್ಗಿಲ್ಲದ ಮತಾಂತರಕ್ಕೆ ಕುತ್ತುಂಟಾಯಿತು. ಮತಾಂಧ ಬೌದ್ಧರಿಂದ ರಚಿಸಲ್ಪಟ್ಟ ಅಶೋಕವಧಾನದಲ್ಲಂತೂ ಕಟ್ಟು ಕಥೆಗಳನ್ನೇ ಹೆಣೆಯಲಾಗಿದೆ. ಶುಂಗರು ಬೌದ್ಧರನ್ನು ನಾಶ ಮಾಡಿದರೂ ಅನ್ನುವ ಅಶೋಕವಧಾನ ಅಶೋಕ ಜೈನರ ಕಗ್ಗೊಲೆ ಮಾಡಿದ ಎಂದು ಉಲ್ಲೇಖಿಸಿದ್ದನ್ನು ಶುಂಗ ವಿರೋಧಿಗಳು ಮರೆಯುತ್ತಾರೆ. ಒಂದು ವೇಳೆ ಬೌದ್ಧರ ಗ್ರಂಥಗಳೆನ್ನುವಂತೆ ಪುಷ್ಯಮಿತ್ರ ಬೌದ್ಧ ವಿರೋಧಿಯಾಗಿದ್ದರೆ ಬೌದ್ಧ ಮಠಗಳಿಗೆ, ವಿದ್ಯಾಲಯಗಳಿಗೆ ಧನಸಹಾಯ ಮಾಡುತ್ತಾ ಪೋಷಕ ಪಾತ್ರ ನಿರ್ವಹಿಸುತ್ತಿರಲಿಲ್ಲ. ಆಗಿಂದಾಗ್ಗೆ ಬುದ್ಧ ಭಿಕ್ಕುಗಳಿರುವ ವಿಹಾರಗಳಿಗೆ ಸಂಚಾರವನ್ನೂ ಕೈಗೊಳ್ಳುತ್ತಿರಲಿಲ್ಲ. ಅವರೊಂದಿಗೆ ಧ್ಯಾನ ಸಾಧನೆಯನ್ನೂ ಮಾಡುತ್ತಿರಲಿಲ್ಲ. ಹೀಗೆ ಶುಧ್ದ ಸನಾತನನಾಗಿದ್ದ ಪುಷ್ಯಮಿತ್ರ ಬೌದ್ಧರನ್ನು ಕೆಟ್ಟದಾಗಿ ನೋಡಿಕೊಳ್ಳಲಿಲ್ಲ. ಹಾಗೆಯೇ ಅಶೋಕನಂತೆ ಬುದ್ಧ ತತ್ತ್ವಗಳನ್ನು ಜನತೆಯ ಮೆಲೆ ಹೇರಲಿಲ್ಲ. ಪುಷ್ಯಮಿತ್ರ ವಿದೇಶೀಯ ದಾಳಿಕೋರರೊಡನೆ ಶಾಮೀಲಾದ ದೇಶದ್ರೋಹಿ ಬೌದ್ಧರನ್ನು ಕ್ಷಾತ್ರಧರ್ಮದಂತೆ ಶಿಕ್ಷಿಸಿದ್ದು ನಿಜ. ಪುಷ್ಯಮಿತ್ರನ ಕಟ್ಟುನಿಟ್ಟಾದ ಆಳ್ವಿಕೆಯಿಂದಾಗಿ ತಮಗೆ ಸಿಗುತ್ತಿದ್ದ ರಿಯಾಯಿತಿ, ಸೌಲಭ್ಯಗಳು ದುರ್ಲಭವಾದ ಕಾರಣ ಬೌದ್ಧರ ಸಿಟ್ಟು ಪುಷ್ಯಮಿತ್ರನ ಕಡೆ ತಿರುಗಿತು.
ಪುಷ್ಯಮಿತ್ರ ಶುಂಗನ ಬಗ್ಗೆ ಇಲ್ಲಸಲ್ಲದ, ಕಟ್ಟು ಕಥೆ, ಅನೈತಿಹಾಸಿಕ ವಿಚಾರಗಳನ್ನು ಕಾರಿದ ಗ್ರಂಥ ಬೌದ್ಧರ ” ದಿವ್ಯವದಾನ “. ಇದೇ ಆಕರವನ್ನು ಆಧಾರವಾಗಿರಿಸಿ ಇಂದಿನ ನವಬೌದ್ಧರೂ, ಕಮ್ಯೂನಿಸ್ಟ್’ರೂ ಪುಷ್ಯಮಿತ್ರನಿಗೆ ಬೌದ್ಧ ವಿರೋಧಿ ಪಟ್ಟಕಟ್ಟಿಬಿಟ್ಟರು. ಎಷ್ಟೆಂದರೆ ಗಾರ್ಗಿ ಚಕ್ರವರ್ತಿಯಂತೂ ” ದಿವ್ಯವದಾನ ” ಎಂದರೆ ಒಂದು ವ್ಯಕ್ತಿಯೆಂದೇ ಭ್ರಮಿಸಿ ಆತ ಬರೆದ ಗ್ರಂಥದಲ್ಲಿ “ಪುಷ್ಯಮಿತ್ರ ಇಂದಿನ ಸಿಯಾಲ್ ಕೋಟ್’ನವರೆಗೆ ಬೌದ್ಧರ ಕೊಲೆ ಮಾಡಿದ ಬಗ್ಗೆ, ಸೈನ್ಯದ ಮುಖಾಂತರ ಸ್ತೂಪಗಳನ್ನು ಹಾಳುಗೆಡವಿದ ಬಗ್ಗೆ, ಬೌದ್ಧ ಸಂನ್ಯಾಸಿಗಳ ತಲೆಗೆ ನೂರು ಚಿನ್ನದ ನಾಣ್ಯ ನಿಗದಿಮಾಡಿದ್ದ ಬಗ್ಗೆ ಉಲ್ಲೇಖಿಸಿದ್ದಾನೆ” ಎಂದೂ ಬರೆದರು(Gargi Chakravartty: “BJP-RSS and Distortion of History”). ಪಾಪ, ಹಿಂದೂಗಳನ್ನು ತೆಗಳುವ ಭರದಲ್ಲಿ ಗ್ರಂಥವೇ ಅವರಿಗೆ ಕರ್ತೃವಾಗಿ ಕಂಡಿತು! ಗ್ರಂಥವನ್ನೂ ಓದದೆಯೇ ಅದರಲ್ಲಿನ ವಿಷಯ ಗ್ರಹಿಸುವ ಪ್ರಖರಮತಿ ಬಹುಶಃ ಮಾವೋ ಪ್ರಸಾದಿಸಿದ ವರವಾಗಿರಬಹುದು! ವಿಪರ್ಯಾಸ ಏನು ಗೊತ್ತಾ? ಶಿವಾಜಿಗೆ ಅನ್ಯಾಯ ಮಾಡಿದ ಬ್ರಾಹ್ಮಣರ ದುರಾಸೆ, ಕುತಂತ್ರಬುದ್ಧಿಯನ್ನು ಹಿಂದೂಗಳ ಜೊತೆ ಕಮ್ಯೂನಿಸ್ಟ್’ರೂ ಖಂಡಿಸುತ್ತಾರೆ. ಆದರೆ ಇದೇ ವಿಚಾರ ಬೌದ್ಧ ಸಂನ್ಯಾಸಿಗಳ ಬಗೆಗೆ ಬಂದಾಗ ಅವರಿಗೆ ಬೌದ್ಧರು ನಿರಪರಾಧಿಗಳ ಹಾಗೆ ಕಾಣಿಸುತ್ತಾರೆ.
ಶಬ್ಧಶಃ ಸಾಮ್ಯವುಳ್ಳ ಈ ಅಶೋಕವದಾನ ಹಾಗೂ ದಿವ್ಯವದಾನ ಎರಡೂ ಶುಂಗರ ಕಾಲದ(ಕ್ರಿ.ಪೂ 1200- ಕ್ರಿ.ಪೂ.900) ಸಹಸ್ರ ವರ್ಷಗಳ(ಕ್ರಿ.ಶ. ಎರಡನೇ ಶತಮಾನ) ಬಳಿಕ ರಚಿತವಾದ ಬೌದ್ಧಪುರಾಣಗಳು. ಹಾಗಾಗಿ ಇವುಗಳ ಸತ್ಯಾಸತ್ಯತೆ ಎಷ್ಟು ಎನ್ನುವ ಪ್ರಶ್ನೆಗಳು ಸಾಮಾನ್ಯನಿಗೂ ಇದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ. ಅಶೋಕವದಾನದಲ್ಲಿ ಅಶೋಕ ಜೈನರನ್ನು ಹತ್ಯೆಗೈದ ಉಲ್ಲೇಖ ಸಿಗುತ್ತದೆ. ಜೈನ ಮತೀಯನೊಬ್ಬ ಬುದ್ಧನು ಮಹಾವೀರನ ಪಾದಕ್ಕೆರಗುವ ಚಿತ್ರವೊಂದನ್ನು ರಚಿಸುತ್ತಾನೆ. ಇದರಿಂದ ಕ್ರೋಧಗೊಂಡ ಅಶೋಕ ಪೌಂಢ್ರ(ಇಂದಿನ ಬಂಗಾಳ-ಬಿಹಾರ)ದೇಶದಲ್ಲಿದ್ದ ಜೈನರನ್ನೆಲ್ಲ ಕೊಲ್ಲಲು ಆಜ್ಞಾಪಿಸುತ್ತಾನೆ. ಅಲ್ಲದೆ ಚಿತ್ರಕಾರನನ್ನು ಅವನ ಪರಿವಾರ ಸಹಿತ ಜೀವಂತ ಸುಡಲಾಯಿತು. ಒಂದೇ ದಿವಸದಲ್ಲಿ ಹದಿನೆಂಟು ಸಾವಿರ ಅಜೀವಿಕರ ಕಗ್ಗೊಲೆಯಾಯಿತು. ಪಾಟಲಿಪುತ್ರದಲ್ಲಿದ್ದ ಜೈನರಿಗೂ ಇದೇ ಗತಿಯಾಗುತ್ತದೆ. ಜೈನನೊಬ್ಬನ ತಲೆಗೆ ನೂರು ಬಂಗಾರದ ನಾಣ್ಯಗಳ ಬಹುಮಾನವನ್ನೂ ಅಶೋಕ ಘೋಷಿಸುತ್ತಾನೆ. ಹೀಗೆ ಸಾವಿರಾರು ಜೈನರು ಪ್ರಾಣ ಕಳೆದುಕೊಳ್ಳುತ್ತಾರೆ. ಕಮ್ಯೂನಿಸ್ಟ್ ಇತಿಹಾಸಕಾರರು ಇಂತಹದ್ದು ನಡೆದಿರಲು ಸಾಧ್ಯವೇ ಇಲ್ಲ ಎನ್ನುತ್ತಾರೆ. “ಜಾತ್ಯತೀತ ಮನೋಭಾವವಿದ್ದ ಅಶೋಕ ಹಾಗೆ ಮಾಡಿರಲು ಸಾಧ್ಯವೇ ಇಲ್ಲ. ಕಥನಕಾರ ನಿರ್ಗ್ರಂಥಿ(ಜೈನ) ಹಾಗೂ ಅಜೀವಿಕರ ಮಧ್ಯೆ ಗೊಂದಲವನ್ನುಂಟುಮಾಡಿಕೊಂಡಿದ್ದಾನೆ. ಅಶೋಕನನ್ನೇ ನಾಯಕನಾಗಿ ಹೊಂದಿರುವ ಕೃತಿಯೊಂದು ಅವನನ್ನು ಅತೀ ಕ್ರೂರವಾಗಿ ಚಿತ್ರಿಸಿರುವುದು ಅವಾಸ್ತವಿಕವಲ್ಲದೆ ಮತ್ತೇನು? ಅಶೋಕ ಮಾತ್ರವಲ್ಲ ಯಾವ ಬೌದ್ಧ ದೊರೆಯೂ ಜೈನರ, ಹಿಂದೂಗಳ ನರಮೇಧವನ್ನು ಮಾಡಿರಲೇ ಇಲ್ಲ” ಎನ್ನುತ್ತಾರೆ. ಇದೇ ಅಶೋಕವದಾನ ಪುಷ್ಯಮಿತ್ರ ಬೌದ್ಧರ ಕಗ್ಗೊಲೆ ಮಾಡಿದ ಎನ್ನುವುದನ್ನು ಕಣ್ಣುಮುಚ್ಚಿ ಒಪ್ಪಿಕೊಳ್ಳುತ್ತಾರೆ. ತಮ್ಮದೆ ನಾಯಕನ ಗುಣಗಾನ ಮಾಡಿದ್ದನ್ನು ಒಪ್ಪಿಕೊಳ್ಳದೆ ಶತ್ರುವನ್ನು ತೆಗಳಿ ಬರೆದಿರುವುದನ್ನು ಶಬ್ಧಶಃ ಒಪ್ಪಿಕೊಳ್ಳುವ ಈ ನೆಹರೂ ಬಾಲಬಡುಕರ ಅಶೋಕನನ್ನು ಎಣೆಯಿಲ್ಲದೆ ಎತ್ತಿ ಹಿಡಿಯುವುದಕ್ಕೆ ಏನೆನ್ನಬೇಕು? ಹೀಗೆ ಅಶೋಕನ ಐತಿಹಾಸಿಕತೆಗೆ ಅವಾಸ್ತವಿಕವಾಗುವ ಅಶೋಕವದಾನ ಪುಷ್ಯಮಿತ್ರನ ವಿಚಾರದಲ್ಲಿ ಮುಖ್ಯವೂ ಪವಿತ್ರವೂ ಆಗಿಬಿಡುತ್ತದೆಯೆಂದರೆ ಇಂತಹ ಇತಿಹಾಸಕಾರರನ್ನು ನಂಬುವುದು ಹೇಗೆ? ಬೌದ್ಧ ಮತದ ಮಹಾನತೆಯನ್ನು ಸಾರಲು ಹೋಗಿ ಉಚ್ಛ ಬೌದ್ಧನೋರ್ವನನ್ನು ಮತಾಂಧನನ್ನಾಗಿ ಚಿತ್ರಿಸಲಾಯಿತು ಎನ್ನುವ ಇವರೇ ಸನಾತನ ಧರ್ಮದ ಮೇಲಿನ ದ್ವೇಷಮಾತ್ರದಿಂದಲೇ ಅಶೋಕವದಾನ ಹಾಗೂ ಅದನ್ನು ಆಧರಿಸಿ ತಾವು ಕೂಡಾ ಪುಷ್ಯಮಿತ್ರನನ್ನು ಕ್ರೂರಿಯೆಂಬಂತೆ ಚಿತ್ರಿಸಿರುವುದನ್ನು ಮರೆಮಾಡುತ್ತಾರೆ.
ಇದೇ ವೇಳೆ ಹಲವು ಬೌದ್ಧ ಗ್ರಂಥಗಳು ಪುಷ್ಯಮಿತ್ರ ಬೌದ್ಧರೊಡನೆ ಸಹಿಷ್ಣುವಾಗಿದ್ದುದನ್ನೂ ಉಲ್ಲೇಖಿಸಿವೆ. ಶ್ರೀಲಂಕಾದ ಬೌದ್ಧ ಗ್ರಂಥ ಮಹಾವಂಶ ಆ ಕಾಲಕ್ಕೆ ಅನೇಕ ಬೌದ್ಧ ಮಠಗಳು ಮಾಳವ, ಅವಧ್, ಬಿಹಾರಗಳಲ್ಲಿದ್ದುದನ್ನು ಉಲ್ಲೇಖಿಸಿದೆ. ಬೌದ್ಧ ಇತಿಹಾಸಕಾರ ಎತಿನ್ ಲಾಮೋಟ್ಟಿ “ಪುಷ್ಯಮಿತ್ರ ಬೌದ್ಧ ಸಂನ್ಯಾಸಿಗಳನ್ನು ಹತ್ಯೆಗೈದ ಎನ್ನುವುದಕ್ಕೆ ಸಾಕ್ಷ್ಯಾಧಾರಗಳೇನಿಲ್ಲ” ಎಂದು ತನ್ನ “ಹಿಸ್ಟರಿ ಆಫ್ ಇಂಡಿಯನ್ ಬುದ್ಧಿಸಮ್” ಗ್ರಂಥದಲ್ಲಿ ಹೇಳುತ್ತಾನೆ.
ಅವನ ಕಾಲದಲ್ಲಿ ಕಲೆ, ವಾಸ್ತುಶಿಲ್ಪ, ಸಾಹಿತ್ಯಾಭಿವೃದ್ಧಿಗೂ ಪ್ರೋತ್ಸಾಹ ದೊರಕಿತು. ಅನೇಕ ಗ್ರಂಥಗಳು ಪ್ರಾಕೃತದಿಂದ ಸಂಸ್ಕೃತಕ್ಕೆ ಅನುವಾದಗೊಂಡವು. ಮಥುರಾದ ಕಲಾ ಶಾಲೆ, ಪತಂಜಲಿ ಮುನಿಗಳ ಅನೇಕ ರಚನೆಗಳು ಮುಖ್ಯವಾದವು. ಮುಖ್ಯವಾಗಿ ಮರೆತು ಹೋಗಿದ್ದ ವೇದಕಾಲೀನ ಕಲೆ-ಸಾಹಿತ್ಯಗಳು ಒಂದೊಂದಾಗಿ ಪುನರುಜ್ಜೀವನಗೊಂಡು ಮುಂದಿನ ಗುಪ್ತಯುಗದಲ್ಲಿ ಭಾರತ ಸುವರ್ಣಯುಗವನ್ನು ಕಾಣುವಂತೆ ಮಾಡಿದವು. ಪುಷ್ಯಮಿತ್ರ ಅಶ್ವಮೇಧವನ್ನೂ ಕೈಗೊಂಡ. ಪಾಣಿನೀ ಸೂತ್ರಗಳಿಗೆ ಮಹಾಭಾಷ್ಯ ಬರೆದ ಪತಂಜಲಿ ಮುನಿಗಳ ನೇತೃತ್ವದಲ್ಲಿ ಭೋಪಾಲದಿಂದ 55 ಕಿ.ಮೀ. ದೂರದಲ್ಲಿರುವ ವಿದಿಶಾ ನಗರದಲ್ಲಿ ವಿಜೃಂಭಣೆಯಿಂದ ನಡೆಯಿತು ಅಶ್ವಮೇಧ ಯಾಗ. ಇಲ್ಲಿ ಭಾಗವತ ದೀಕ್ಷೆ ಸ್ವೀಕರಿಸಿದ ಹಿಲಿಯೋದೋರಸ್ ಎಂಬ ಗ್ರೀಕ ವಿಷ್ಣುಸ್ತಂಭವನ್ನು ಸ್ಥಾಪನೆ ಮಾಡಿದ. ಹೀಗೆ ಎರಡುಸಾವಿರದಿನ್ನೂರು ವರುಷಗಳ ಹಿಂದೆಯೇ ವಿದೇಶಿಯರನ್ನು ಸನಾತನ ಧರ್ಮದ ತೆಕ್ಕೆಗೆ ಬರುವಂತೆ ಮಾಡಿದ್ದು ಶುಂಗರ ಸಾಧನೆ. ಇದು ಬಲತ್ಕಾರದ ಪ್ರಲೋಭನೆಯ ಮತಾಂತರವಲ್ಲ. ಸನಾತನ ಧರ್ಮದ ಮೌಲ್ಯಗಳನ್ನು ಮೆಚ್ಚಿಕೊಂಡು ಸ್ವೀಕರಿಸಿದ ಶುದ್ಧ ವೈಚಾರಿಕ ಪಲ್ಲಟನ.
Facebook ಕಾಮೆಂಟ್ಸ್