X

ಹಳ್ಳವಿದ್ದೆಡೆಗೆ ನೀರು!

ಸ್ಪೇನ್ ದೇಶದ ಮೇಲೆ ಮುಸಲ್ಮಾನರ ಪ್ರಭಾವ ಸಾಕಷ್ಟಿದೆ. ಜಗತ್ತಿನಲ್ಲಿ  ಹೆಚ್ಚು ವಸಾಹತು ನಿರ್ಮಿಸಿಕೊಂಡ ಕೆಲವೇ ಕೆಲವು ಯೂರೋಪಿಯನ್ನರಲ್ಲಿ ಸ್ಪಾನಿಷ್ ಕೂಡ ಅತಿ ಪ್ರಮುಖರು. ಅಂತ ಸ್ಪೇನ್ ಮುಸಲ್ಮಾನ ಆಡಳಿತಕ್ಕೆ ಸಿಕ್ಕಿತ್ತು . ನಂತರದ ದಿನಗಳಲ್ಲಿ ‘ಗೆರ್ರಾ ಸಾಂತ ‘ ಅಥವಾ ಹೋಲಿ ವಾರ್ ನಡೆದು ಸ್ಪಾನಿಷರು ಮುಸ್ಲಿಮರನ್ನು ಹೊರಹಾಕುವುದರಲ್ಲಿ ಯಶಸ್ವಿಯಾದರು. ಆದರೂ ಮುಸ್ಲಿಮರು ಬಳಸುತ್ತಿದ್ದ ಅನೇಕ ಪದಗಳು ಇಂದು ಸ್ಪಾನಿಷ್ ಪದಗಳಂತೆ ಇವರ ಜೀವನದಲ್ಲಿ ಹಾಸುಹೊಕ್ಕಿವೆ. ‘ದಿನೇರೋ’ ಎಂದರೆ ಹಣ ಎನ್ನುವ ಅರ್ಥ ಸ್ಪಾನಿಷ್ ಭಾಷೆಯಲ್ಲಿ ಕೊಡುತ್ತದೆ. ಅರಬ್ಬರು ‘ದಿನಾರ್’ ಎನ್ನುವುದು ಇಲ್ಲಿ ದಿನೇರೋ ಆಗಿದೆ. ಅದು ಗಾದೆಯಲ್ಲೂ ಮಿಳಿತವಾಗಿದೆ.

ಗಾದೆಯ ಅರ್ಥ ಇಷ್ಟೊತ್ತಿಗೆ ನಿಮಗೆ ಗೊತ್ತಾಗಿರುತ್ತೆ . El dinero llama  dinero ಎಂದರೆ ಹಣ , ಹಣವನ್ನು ಕರೆಯುತ್ತದೆ ಎನ್ನುವುದು ಪದಕೋಶದ ಅರ್ಥ. ಒಳಾರ್ಥ ಕೂಡ ತೀರಾ ವಿಭಿನ್ನವೇನಲ್ಲ. ಜಗತ್ತಿನಲ್ಲಿ ಹಣವಂತರು ಇನ್ನಷ್ಟು ಹಣವಂತರಾಗುತ್ತಾರೆ ಎನ್ನುವ ಅರ್ಥ. ಹಣವಿದ್ದರೆ ಇನ್ನಷ್ಟು ಹಣ ಮಾಡುವುದು ಸುಲಭ ಎನ್ನುವ ಅರ್ಥ. ಜಗತ್ತಿನ ಯಾವ ದೇಶವೇ ಇರಲಿ ಇದಂತೂ ಅತ್ಯಂತ ಸತ್ಯ. ಪ್ರಭಾವಿಗಳು, ಬಲಿಷ್ಠರು, ಹಣವಂತರು ತಮ್ಮ ಪ್ರಭಾವ ಮತ್ತು ಹಣ ಬಳಸಿ ತಮಗೆ ಬೇಕಾದ ಎಲ್ಲಾ ಕಾರ್ಯಗಳನ್ನೂ ಸಿದ್ಧಿಸಿಕೊಳ್ಳುತ್ತಾರೆ, ಮತ್ತು ಇನ್ನಷ್ಟು ಬಲಿಷ್ಠರೂ, ಹಣವಂತರೂ ಆಗಿ ರೂಪುಗೊಳ್ಳುತ್ತಾರೆ ಎನ್ನುವುದೇ ಗಾದೆಯ ಸಾರಾಂಶ .

ಇದಕ್ಕೆ ಸನಿಹದ ಕನ್ನಡ ಗಾದೆ ‘ಹಳ್ಳವಿದ್ದೆಡೆಗೆ ನೀರು’ ಹೇಳುವ ಸಾರಾಂಶ ಕೂಡ ಅದೇ. ತಗ್ಗು ಇದ್ದೆಡೆ ಹೇಗೆ ನೀರು ಸರಾಗವಾಗಿ ಹರಿಯುತ್ತದೆಯೋ ಹಾಗೆ ಹಣವಿದ್ದವರ ಬಳಿಗೆ ಹಣ ಕೂಡ ಸರಾಗವಾಗಿ ಸೇರುತ್ತದೆ ಎನ್ನುವ ಅರ್ಥ ನೀಡುತ್ತದೆ .

ಇಂಗ್ಲಿಷ್ ಭಾಷಿಕರು Money goes where money is ಎನ್ನುವುದರಲ್ಲಿ ಕೂಡ ಅನುರಣಿಸುವುದು ಅದೇ ಅರ್ಥ.

ಶತಮಾನಗಳಿಂದ ಕಂಡಿರುವ ಸತ್ಯ ಇಂದಿಗೂ ಸತ್ಯವಾಗಿ ಉಳಿದಿದೆ ಅಂದ ಮಾತ್ರಕ್ಕೆ ಇದನ್ನು ನಾವು ಋಣಾತ್ಮಕವಾಗಿ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ. ಹಳ್ಳವಿದ್ದೆಡೆ ನೀರು ಹರಿಯುತ್ತದೆ ಅದು ಪ್ರಕೃತಿ ನಿಯಮ ಕೂಡ. ಶ್ರಮ ಪಟ್ಟರೆ, ಹಿಡಿದ ಕಾರ್ಯ ಸಾಧಿಸುವ ಛಲವಿದ್ದರೆ ನಾವು ಹಳ್ಳ ತೋಡಬಹದು ಆಗ ಅಲ್ಲಿಗೂ ನೀರು ಹರಿಯುತ್ತದೆ .

ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ :

El:   ಇಂಗ್ಲಿಷ್ ನ the (ದಿ ) ಎನ್ನುವ ಅರ್ಥ. ಎಲ್ ಎನ್ನುವುದು ಉಚ್ಚಾರಣೆ.

Dinero:  ಹಣ ಎನ್ನುವ ಅರ್ಥ ಕೊಡುತ್ತದೆ . ದಿನೇರೋ ಉಚ್ಚಾರಣೆ.

llama: ಕರೆ, ಕರೆಯುವುದು, ಕೂಗು, ಕೂಗುವಿಕೆ ಎನ್ನುವ ಅರ್ಥ ಕೊಡುತ್ತದೆ. ಯಾಮ ಎನ್ನುವುದು ಉಚ್ಚಾರಣೆ.

Facebook ಕಾಮೆಂಟ್ಸ್

Rangaswamy mookanahalli: ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .
Related Post