ಕೇಳೋದೆಲ್ಲಾ ತಮಾಷೆಗಾಗಿ

ಎಲೆಲೆ ಹೆಣ್ ಸೊಳ್ಳೇ, ನನ್ ರಕ್ತ ಎಲ್ಲ ನಿಂದೇ, ತಗೊಳ್ಳೇ!

ಕೇಳೋದೆಲ್ಲಾ ತಮಾಷೆಗಾಗಿ 1

ಹೆಣ್ಣು ಸೊಳ್ಳೆ ಮಾತ್ರ ಯಾಕೆ ನಮ್ಮನ್ನು ಕಚ್ಚಿ ರಕ್ತ ಹೀರುತ್ತದೆ? ಗಂಡು ಸೊಳ್ಳೆ ಯಾಕೆ ಕಚ್ಚುವುದಿಲ್ಲ?

ತುಂಬ ಸಂಕ್ಷಿಪ್ತ ಉತ್ತರ: ಗಂಡು ಸೊಳ್ಳೆ ತತ್ತಿ ಇಡುವುದಿಲ್ಲ, ಆದ್ದರಿಂದ ಕಚ್ಚುವುದಿಲ್ಲ!

ಹೌದು, ಸೊಳ್ಳೆಗಳ ಜಗತ್ತಿನಲ್ಲಿಯೂ ವಂಶೋದ್ಧಾರಕ ಮೊಟ್ಟೆಗಳನ್ನು ಹೊಟ್ಟೆಯಲ್ಲಿ ಹೊತ್ತು, ನಂತರ ಹೆತ್ತು, ಕುಟುಂಬ ಕಲ್ಯಾಣ ಕಾರ್ಯಕ್ರಮವನ್ನು ಮುಂದುವರೆಸುವ ಜವಾಬ್ದಾರಿ ಹೆಣ್ಣಿಗೇ ಮೀಸಲು. ಬಹುಶಃ ಸಮುದ್ರ ಕುದುರೆಯೊಂದನ್ನು ಬಿಟ್ಟರೆ ಗಂಡು ಗರ್ಭ ಧರಿಸುವ ಪ್ರಕರಣ ಬೇರಾವ ಜೀವರಾಶಿಯಲ್ಲೂ ದಾಖಲಾಗಿಲ್ಲ. ಹೀಗೆ, ತನ್ನ ಮೊಟ್ಟೆಗಳು ಫಲಿತಗೊಳ್ಳಬೇಕಾದರೆ ಸೊಳ್ಳೆಗಳ ಮೈಯಲ್ಲಿ ಸಾಕಷ್ಟು ಪ್ರೊಟೀನ್ ದಾಸ್ತಾನಿರಬೇಕು. ಹೂವುಗಳ ಮಕರಂದ ಹೀರುತ್ತ ಕೂತರೆ ಅವಕ್ಕೆ ಮೊಟ್ಟೆಗಳ ಬೆಳವಣಿಗೆಗೆ ಬೇಕಾದಷ್ಟು ಪ್ರೊಟೀನ್ ಸಿಗುವ ಖಾತರಿ ಇಲ್ಲ. ಹಾಗಾಗಿ ಅವು ಪ್ರಾಣಿ, ಪಕ್ಷಿಗಳ ದೇಹಕ್ಕೆ ಸೂಜಿಯಂಥ ಕೊಂಡಿ ಚುಚ್ಚಿ ರಕ್ತ ಹೀರುತ್ತವೆ. ರಕ್ತದ ಮೂಲಕ ಬರುವ ಪ್ರೊಟೀನ್‍ಗಾಗಿ ಇಷ್ಟೆಲ್ಲ ಕಸರತ್ತು.

ಹೆಣ್ಣು ಸೊಳ್ಳೆಗಳು ವರ್ಷವಿಡೀ ಮೊಟ್ಟೆ ಇಡುತ್ತವಾದರೂ ಅವುಗಳ ವಂಶಾಭಿವೃದ್ಧಿಯ ದರ ಚಳಿಗಾಲ ಕಳೆದು ಇನ್ನೇನು ಚುಮುಚುಮು ಬಿಸಿಲು ಹುಟ್ಟಿದೆ ಎಂಬಂಥ ದಿನಗಳಲ್ಲೇ ಹೆಚ್ಚು. ಹೆಣ್ಣು ಸೊಳ್ಳೆ ಒಂದು ಸಲಕ್ಕೆ ಕನಿಷ್ಠ 100 ಮೊಟ್ಟೆಗಳನ್ನಿಡುತ್ತದೆ. ನಿಂತ ನೀರೇ ಹೆರಿಗೆಮನೆ. ಮೊಟ್ಟೆ ಒಡೆದು ಲಾರ್ವಾ ಎಂಬ ಹುಳುಗಳು ಹೊರಬಂದು, ಪ್ಯೂಪಾ ಸ್ಥಿತಿಗೆ ಹೋಗಿ, ಅಲ್ಲಿಂದ ಪರಿಪೂರ್ಣಾವತಾರಿಯಾಗಿ, ಅರ್ಥಾತ್ ರೆಕ್ಕೆ ಬಡಿವ ಸೊಳ್ಳೆಯಾಗಿ ಪರಿವರ್ತನೆಯಾಗಲು ಅದಕ್ಕೆ ಕೇವಲ ನಾಲ್ಕು ದಿನ ಸಾಕು. ಒಮ್ಮೆ ಪ್ರಬುದ್ಧಾವಸ್ಥೆಗೆ ಬಂದ ಬಳಿಕ, ಸೊಳ್ಳೆ ಗಂಡಾದರೆ ಎರಡು ವಾರ; ಹೆಣ್ಣಾದರೆ ಬರೋಬ್ಬರಿ ನಾಲ್ಕು ವಾರ ಬದುಕುತ್ತದೆ. ಗಂಡು, ಹೆಣ್ಣು ಎರಡೂ ಹೂವುಗಳ ಮಕರಂದ ಹೀರಿಯೇ ಹೊಟ್ಟೆ ಹೊರೆಯುವುದು. ಅಂದರೆ, ಗರ್ಭ ಧರಿಸದ ಸಮಯದಲ್ಲಿ ಹೆಣ್ಣು ಕೂಡ ಮನುಷ್ಯರ ತಂಟೆಗೆ ಬರದೆ ಹೂವು-ಗೀವು ಎನ್ನುತ್ತ ಉದ್ಯಾನದಲ್ಲೇ ಸುತ್ತಿಕೊಂಡು ಬಫೆ ಊಟ ಸವಿಯುತ್ತಿರುತ್ತದೆ. ತನ್ನ ಹೊಟ್ಟೆಯಲ್ಲಿ ಮೊಟ್ಟೆಗಳ ಉತ್ಪತ್ತಿಯಾದ ಮೇಲಷ್ಟೇ ಹೆಣ್ಣಿಗೆ ರಕ್ತ ಚಪ್ಪರಿಸಬೇಕೆಂಬ ಬಸುರಿ ಬಯಕೆ ಹುಟ್ಟುವುದು. ಹೆಣ್ಣು ಸೊಳ್ಳೆಗಳು, ನಿಃಶ್ವಾಸದಲ್ಲಿ ಹೊರಬಿದ್ದ ಕಾರ್ಬನ್ ಡೈ ಆಕ್ಸೈಡ್ ಮತ್ತು ಮನುಷ್ಯರ ದೇಹ ಬೀರುವ ಸ್ವೇದದ ವಾಸನೆಯನ್ನು ಹಿಂಬಾಲಿಸಿಬಂದು ರಕ್ತದ ಬೇಟೆಯಾಡುತ್ತವೆ. ಮೊದಲು ಚರ್ಮದ ಮೇಲೆ ಸರಿಯಾದ ಯೋಗಭಂಗಿಯಲ್ಲಿ ಕೂತು, ಪ್ರೊಬೋಸ್ಕಿಸ್ ಎಂಬ ಕೊಳವೆರೂಪೀ ಇಂಜೆಕ್ಷನ್ ಬಾಯಿಗಳನ್ನು ಜಾಗ್ರತೆಯಿಂದ ಚರ್ಮದ ಮೇಲಿಟ್ಟು ಮೆತ್ತನೆ ಊರುತ್ತವೆ. ಸೂಜಿಗಿಂತ ಸೂಕ್ಷ್ಮವಾದ ಈ ನಳಿಕೆಬಾಯಲ್ಲಿ ಹೊರಬಂದ ಸೊಳ್ಳೆಯ ಜೊಲ್ಲು ಚರ್ಮದ ಮೇಲೆ ಬಿದ್ದು, ಆ ಪ್ರದೇಶವನ್ನು ಮೆತ್ತಗಾಗಿಸಿ, ಚುಚ್ಚುವ ಕೆಲಸಕ್ಕೆ ವೇದಿಕೆ ತಯಾರಿಸಿಕೊಡುತ್ತದೆ. ಇಂಜೆಕ್ಷನ್ ಚುಚ್ಚುವ ಮುನ್ನ ವೈದ್ಯರು ಐಸೋಪ್ರೊಪೈಲ್ ದ್ರಾವಣವನ್ನು ಹತ್ತಿಯ ಸಣ್ಣ ಉಂಡೆಯಲ್ಲಿ ಚುಚ್ಚುವ ಜಾಗಕ್ಕೆ ಮೆದುವಾಗಿ ಉಜ್ಜುತ್ತಾರಲ್ಲ; ಸೊಳ್ಳೆಯನ್ನು ನೋಡಿಯೇ ಅವರು ಈ ತಂತ್ರ ಕಂಡುಕೊಂಡಿರಬೇಕು! ಪ್ರೊಬೋಸ್ಕಿಸ್ ಅನ್ನು ನಿಧಾನವಾಗಿ ಚರ್ಮದ ಆಳಕ್ಕೆ ಇಳಿಸಿದ ಸೊಳ್ಳೆ ರಕ್ತನಾಳ ಸಿಕ್ಕಿದೊಡನೆ, ಅಂತರ್ಜಲಕ್ಕೆ ಪಂಪು ಹಾಕಿದ ಜಲಕಳ್ಳರಂತೆ, ತನಗೆ ತೃಪ್ತಿಯಾಗುವಷ್ಟು ಕುಡಿದು ತೇಗುತ್ತದೆ. ಅದರ ಈ ಕನ್ನ ಕೊರೆವ ಕೆಲಸವನ್ನು ಮೆಚ್ಚಿ ನಾವದರ ಬೆನ್ನು ತಟ್ಟದೇ ಹೋದರೆ, ತನ್ನ ಹೊಟ್ಟೆಯೆಂಬ ಟ್ಯಾಂಕು ಪೂರ್ತಿ ತುಂಬುವವರೆಗೂ ಸೊಳ್ಳೆ ಆ ಜಾಗ ಬಿಟ್ಟು ಕದಲುವುದಿಲ್ಲ. ಹೊಟ್ಟೆಯನ್ನು ನೆತ್ತರ ನೈವೇದ್ಯದಿಂದ ಸಂಪೂರ್ಣವಾಗಿ ತುಂಬಿಸಿಕೊಂಡ ಎರಡು ದಿನಗಳ ತರುವಾಯ ಆ ಸೊಳ್ಳೆ ತನ್ನ ತತ್ತಿಗಳನ್ನಿಡುತ್ತದೆ.

 

ಕೆಲವೊಮ್ಮೆ ಈ ಸೊಳ್ಳೆಗಳಿಗೆ ಉಪಕಾರಪ್ರಜ್ಞೆಯೂ ಜಾಗೃತವಾಗುವುದಿದೆ. ಆಗ ಅವು ನಮ್ಮ ರಕ್ತ ಸೆಳೆದದ್ದಕ್ಕೆ ಪ್ರತಿಯಾಗಿ ತಮ್ಮ ಹೊಟ್ಟೆಯಲ್ಲಿರುವ ವೈರಸ್ಸುಗಳನ್ನೂ ಬ್ಯಾಕ್ಟೀರಿಯಾಗಳನ್ನೂ ಅದೇ ಚುಚ್ಚುಕೊಳವೆಯ ಮೂಲಕ ನಮ್ಮ ದೇಹಕ್ಕೆ ವರ್ಗಾಯಿಸಿ ಕೃತಜ್ಞತೆ ಅರ್ಪಿಸುತ್ತವೆ. ಮಲೇರಿಯಾ, ಹಳದಿ ಜ್ವರ, ವೆಸ್ಟ್ ನೈಲ್ ಫಿವರ್, ಢೆಂಗೀ, ಚಿಕೂನ್‍ಗುನ್ಯ ಇವೆಲ್ಲವೂ ಅಂತ ಕೃತಜ್ಞತೆಯ ಕಾಣಿಕೆಗಳೇ. ಮನುಷ್ಯನನ್ನು ಕಚ್ಚುವುದು ಯಾ ಚುಚ್ಚುವುದು ಹೆಣ್ಣು ಸೊಳ್ಳೆಗಳು ಮಾತ್ರ ಆದ್ದರಿಂದ ಸೊಳ್ಳೆಗಳ ಮೂಲಕ ಮನುಷ್ಯನಿಗೆ ಹರಡುವ ಕಾಯಿಲೆಗಳಿಗೂ ಈ ಹೆಣ್ಣುಗಳೇ ವಾಹಕಗಳು. ಮನುಷ್ಯ ಪ್ರಪಂಚದ ಸಹವಾಸವೇ ಬೇಡವೆಂದು ದೂರದ ಉದ್ಯಾನದಲ್ಲಿ ಹಾರಾಡಿಕೊಂಡಿರುವ ಗಂಡು ಸೊಳ್ಳೆಗಳಿಗೆ, ಹೆಣ್ಣಿನ ತತ್ತಿಗಳನ್ನು ಫಲಿತಗೊಳಿಸುವ ಒಂದು ಕಾರ್ಯ ಬಿಟ್ಟರೆ ಜೀವನದಲ್ಲಿ ಮತ್ಯಾವ ಪರಮೋದ್ದೇಶವೂ ಇದ್ದಂತೆ ಕಾಣುವುದಿಲ್ಲ. ಅದಕ್ಕೇ ಅದರ ದೇಹಗಾತ್ರವೂ ಚಿಕ್ಕದು, ಆಯುಷ್ಯವೂ ಕಡಿಮೆ. ಮನುಷ್ಯ ಪ್ರಪಂಚದಲ್ಲಿ ಕೂಡ ಗಂಡಿಗಿಂತ ಹೆಣ್ಣು ದೀರ್ಘಾಯುಷಿ ಎಂಬುದು ಜಸ್ಟ್ ಕಾಕತಾಳಿಯ!

ಪ್ರಶ್ನೆ: ಹೆಣ್ಣು ಸೊಳ್ಳೆ ಮಾತ್ರ ಯಾಕೆ ನಮ್ಮನ್ನು ಕಚ್ಚಿ ರಕ್ತ ಹೀರುತ್ತದೆ? ಗಂಡು ಸೊಳ್ಳೆ ಯಾಕೆ ಕಚ್ಚುವುದಿಲ್ಲ?

ಉತ್ತರದ ಕೊಂಡಿಗಳಿಂದ ಚುಚ್ಚಿದವರು:

ನೀವ್ಯಾಕೆ ಅದರ ಕಾಲೆತ್ತಿ ನೋಡೋಕೆ ಹೋಗಿದ್ದಿರಿ ಗಂಡೋ ಹೆಣ್ಣೋ ಅಂತ?

– ಅರುಣ್

“ಹೆಣ್ಣು” ಅಂದ್ರೆ ಸಾಕಿತ್ತು. ಸೊಳ್ಳೆ ಅಂತ ಮತ್ತೆ ಹೇಳೋದು ಬೇಕಿತ್ತಾ?

– ಗಿರೀಶ್ ಹೆಗ್ಡೆ

ಗಂಡು ಸೊಳ್ಳೆಗೆ ಬೇರೆ ಕೆಲಸ ಇರುತ್ತೆ.

– ಶ್ರೀಹರ್ಷ ಪೆರ್ಲ

ಗಂಡು ಸೊಳ್ಳೆಗೆ ಬಾಯಿ ತೆರೆಯಲು ಕೂಡ ಹೆಣ್ಣು ಸೊಳ್ಳೆ ಬಿಟ್ಟಿರುವುದಿಲ್ಲ. ಇನ್ನು ಕಚ್ಚುವುದು ಬಹಳ ದೂರದ ಮಾತು.

– ಮಣಿಕಂಠ ಮರಾಠೆ

ಕಚ್ತಾ ಇರೋದು ಹೆಣ್ಣಲ್ವಾ ಅಂತ ಬಿಟ್ಬಿಡ್ತಾರೆ ಅನ್ನೋ ದೂರಾಲೋಚನೆ! ವೈಜ್ಞಾನಿಕವಾಗಿ, ಅವುಗಳ ತತ್ತಿ  ಉತ್ಪಾದನೆಗೆ ರಕ್ತ ಬೇಕಂತೆ. ಹಾಗಾಗಿ ಟೆಕ್ನಿಕಲೀ ನೋಡಿದರೆ ಸೊಳ್ಳೆಗಳ ಜನನಕ್ಕೆ ಕಚ್ಚಿಸಿಕೊಂಡವರ ಪಾತ್ರವೂ ಇದೆ ಅಂತಾಯ್ತು. ಇನ್ನು ಸೊಳ್ಳೆ ಹೊಡೆಯುವ ಮುನ್ನ ಸ್ವಲ್ಪ ಯೋಚಿಸಿ; ಅವು ನಿಮ್ಮದೇ ರಕ್ತದ ಫಲವಾಗಿದ್ದರೆ?

– ಶ್ರೀಪತಿ ವಿ. ರಾವ್

ಗಂಡು ಜನ್ಮ, ಚೆಲ್ಲಿಕೊಂಡೇ ಅಭ್ಯಾಸ, ಹೀರಿ ಅಲ್ಲ.

– ಆಕಾಶ್ ಸ್ವಾಮಿ

ಹುಟ್ಟುಗುಣ ಸತ್ತರೂ ಹೋಗಲ್ಲ ಅಂತ ಗಾದೆ ಇದೆಯಲ್ಲ!

– ನಿರಂಜನ್ ಭಟ್

ಸೊಳ್ಳೆ ಕಚ್ಚಲು ಉಪಯೋಗಿಸುವ ಪಿನ್ನು ಹೆಣ್ಣಿನ ಬಳಿ ಮಾತ್ರ ಇರುತ್ತದೆ. ಏಕೆಂದರೆ ತನ್ನ ಸೀರೆಯ ಸೆರಗಿಗೆ ಹಾಕಿಕೊಂಡಿರುತ್ತದೆ.

– ಶ್ರೀಕಾಂತ ಎನ್.

ಗಂಡು ಸೊಳ್ಳೆ ಎಷ್ಟಾದರೂ ಗಂಡಲ್ಲವೆ? ಚುಚ್ಚಿಸಿ/ಕಚ್ಚಿಸಿಕೊಂಡು ಗೊತ್ತಷ್ಟೇ ಅದಕ್ಕೆ.

-ಶಂಕರನಾರಾಯಣ ಉಪಾಧ್ಯಾಯ

ಗಂಡಸರು ಹುಟ್ಟಾ ಸೋಮಾರಿಗಳು.

– ಅನಿತಾ ನರೇಶ್ ಮಂಚಿ

ಎಲ್ಲಾ ಪ್ರಭೇದಗಳಲ್ಲೂ ಹೆಣ್ಣೇ ಕಚ್ಚೋದು. ನಾವು ಮನುಷ್ಯರು ಹೇಳಿಕೊಳ್ಳಲ್ಲ ಅಷ್ಟೆ.

– ಸೊನ್ನಪ್ಪ ರೆಡ್ಡಿ

ರಕ್ತೇಶ್ವರಿ ಇದ್ದಾಳೆ. ರಕ್ತೇಶ್ವರ ಅಂತ ಎಲ್ಲಾದರೂ ಕೇಳಿದ್ದೀರಾ ಗುರುಗಳೆ?

– ಯೋಗೇಶ್ ರೆಡ್ಡಿ

ಹೆಣ್ಣು ಸೊಳ್ಳೆಗಳು ಸಾಯೋಕೂ ಹೆದರಲ್ವಂತೆ!

– ಶಾಲಿನಿ ಜಿ. ಭಟ್

ಪಾಪ ಕಣ್ರಿ, ತನ್ನ ಅನ್ನ ತಾನೇ ದುಡ್ಕೊಂಡ್ ತಿನ್ನೋದು ಈ ಸೊಳ್ಳೆಮ್ಮ.

– ಸುಮಾ ಆರಾಧ್ಯ

ರಕ್ತ ಹೀರುವ ಬುದ್ಧಿ ಅದಕ್ಕೆ ರಕ್ತಗತವಾಗಿಯೇ ಬಂದಿದೆ.

– ವಿವೇಕಾನಂದ ಕಾಮತ್

ಈ ಹೆಣ್ಣು ಸೊಳ್ಳೆ ಗಂಡು ಸೊಳ್ಳೆಯನ್ನು ಗೃಹಬಂಧನದಲ್ಲಿರಿಸಿ ಬಂದಿರುತ್ತೆ.

– ಬಸವರಾಜ ರಾಯಗೊಂಡ

ಡಾಕ್ಟರ್ ಇರೋದು ಬರೇ ಹೇಳೋಕೆ. ಸಿಸ್ಟರ್ಸ್ ಇರೋದು ಬರೇ ಇಂಜೆಕ್ಷನ್ ಕೊಡೋಕೆ.

– ಶ್ರೀಹರ್ಷ ಹಲಸಿನಹಳ್ಳಿ

ಕರ್ನಾಟಕದ ಸೊಳ್ಳೆ ಅಲ್ಲವಾ! ರಾಜ್ಯದ ಯಜಮಾನರ ಥರ ನಿದ್ರೆ ಜಾಸ್ತಿ!

– ನರೇಂದ್ರ ಪೈ

ಗಂಡು ಸೊಳ್ಳೆಗಳು ಪೆದ್ದು. ಕಿವಿ ಹತ್ರಿರ ಹವಾ ತೋರಿಸೋದಕ್ಕೆ ಬಂದು ಸಾಯ್ತವೆ.

– ವಿನಯ್ ವಸಿಷ್ಟ

ಗಂಡು ಸೊಳ್ಳೆಗೆ ಬಿಯರ್ ಹೀರಿ ಅಭ್ಯಾಸ.

– ಮಲ್ಲಿ ಯಾದವ್

“ಹೆಣ್ಣು” ಸೊಳ್ಳೆ ಅನ್ನೋದ್ರಲ್ಲೇ ಉತ್ತರ ಇದೆ!

– ಫಣಿ ಅಲಂಕಾರ್

ಅದರಲ್ಲೂ ಕಿವಿ(ಯನ್ನೇ) ಕಚ್ಚುವ ಸಾಂಕ್ರಾಮಿಕ ಚಾಳಿ ಹೆಣ್ಣಿಗೇ ಮೀಸಲೆ?

– ಸುಬೋಧ ಸವಣೂರ

ಗಂಡು ಸೊಳ್ಳೆಯ ಬಾಯಲ್ಲಿರೋ ಹಲ್ಲುಗಳನ್ನೆಲ್ಲ ಹೆಣ್ಣು ಸೊಳ್ಳೆ ಉದುರಿಸಿರುತ್ತಲ್ಲ!

– ವಿನಾಯಕ್ ಕಾಮತ್

ಗಂಡು ವಂಶವೇ ನಿರುಪದ್ರವಿ ಎನ್ನುವುದು ಸೊಳ್ಳೆಯಂಥಾ ಸೊಳ್ಳೆಗಳಿಂದಲೂ ಗೊತ್ತಾಗುವ ಸತ್ಯ!

– ಎಚ್.ಎಸ್. ನಾಗರಾಜ ಭಟ್

 

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!