X

ಇನ್ನೂರು ವರ್ಷಗಳ ನಂತರ ಅಸ್ಸಾಂ ಎಸ್ಟೇಟ್ ಕಾರ್ಮಿಕರಿಗೆ ಸ್ವಾತಂತ್ರ್ಯ ಸಿಕ್ಕಿದ್ದು – ಡಿಮಾನಿಟೈಜೇಷನ್ ಕೊಡುಗೆ

ಡಿಮಾನಿಟೈಜೇಷನ್ ಆದ ದಿನ ಏನಾಯ್ತು? ಡಿಮಾನಿಟೈಜೇಷನ್ ಬಗ್ಗೆ ಬ್ಯಾಂಕುಗಳಿಗೆ ಮೊದಲೇ ಗೊತ್ತಿತ್ತಾ? ದೇಶದ ಜನರಿಗೆ ನೋಟು ಅಮಾನ್ಯೀಕರಣದಿಂದ ಆದ ಲಾಭ ಏನು ಎನ್ನುವುದನ್ನು ಜಗತ್ತಿನ ಅತೀ ದೊಡ್ಡ ಬ್ಯಾಂಕ್ ನಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಚೇರ್ಮನ್’ಗಿಂತ ಮಿಗಿಲಾಗಿ ಇನ್ನು ಯಾರು ಹೇಳಬಲ್ಲರು? ನನಗೆ ನೋಟಿಗಾಗಿ ಸಾಲಿನಲ್ಲಿ ನಿಂತ ನೆನಪಿದೆ. ನೋಟು ಅಮಾನ್ಯೀಕರಣದ ಸಮಯದಲ್ಲಿ ಒಂದು ಬ್ಯಾಂಕಿನ ಒಬ್ಬ ಕರ್ಮಚಾರಿಯೂ ಸಿಡಿದು ಮಾತನಾಡಿದ್ದಿಲ್ಲ. ಬ್ಯಾಂಕ್ ಮ್ಯಾನೇಜರ್’ರಿಂದ ಹಿಡಿದು ಎಟಿಎಮ್ ಸೆಕ್ಯುರಿಟಿ ಗಾರ್ಡ್ ತನಕ ಯಾರೂ ಸಂಯಮ ಕಳೆದುಕೊಂಡ ದಾಖಲೆ ಇಲ್ಲ. ಜನರ ರೋಷ ಏನಾದರೂ ಬುಗಿಲೆದ್ದಿದ್ದರೆ ಅದಕ್ಕೆ ಬಲಿ ಬ್ಯಾಂಕ್ ಆಫೀಸರುಗಳೇ ಆಗಿದ್ದರು. ಆದರೆ ಯಾರ ಜೀವಕ್ಕೂ ಹಾನಿ ಆಗಿಲ್ಲ. ಎಸ್.ಬಿ.ಐ. ಚೇರ್ಮನ್ ದಿನವೂ ಮಲಗುವ ಮುನ್ನ, “ತಮ್ಮ ಬ್ಯಾಂಕಿನ ಉದ್ಯೋಗಿಗಳಿಗೆ ಯಾವ ತೊಂದರೆಯೂ ಆಗದಿರಲಿ” ಎಂದು ಪ್ರಾರ್ಥನೆ ಮಾಡಿಕೊಂಡು ಮಲಗುತ್ತಿದ್ದರಂತೆ.

ಅರುಂಧತಿಯ ಭಟ್ಟಾಚಾರ್ಯ ಒಂದು ಸಂದರ್ಶನದಲ್ಲಿ ಡಿಮಾನಿಟೈಜೇಷನ್ ಬಗ್ಗೆ ನೀಡಿದ ಹೇಳಿಕೆಗಳ ಸಂಕ್ಷಿಪ್ತ ವರದಿ:-

೧. ನವೆಂಬರ್ ಎಂಟರ ಸಂಜೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಭಾರತದ ಎಲ್ಲಾ ಬ್ಯಾಂಕುಗಳ ಮುಖ್ಯಸ್ಥರನ್ನು ಕರೆದಿದ್ದರಂತೆ. ಆದರೆ ಯಾರಿಗೂ ಡಿಮಾನಿಟೈಜೇಷನ್ ಬಗ್ಗೆ ಸುಳಿವೂ ಇರಲಿಲ್ಲ. ಸಂಜೆ ಎಂಟು ಘಂಟೆಗೆ ಟಿವಿ ಆನ್ ಮಾಡಿದಾಗಲೇ ಎಲ್ಲರಿಗೂ ಸುಳಿವು ಸಿಕ್ಕಿದ್ದು. ಅಂದರೆ ಭಾರತದ ಸಾಮಾನ್ಯ ಪ್ರಜೆಗೆ ಗೊತ್ತಾದಾಗಲೇ ದೇಶದ ಎಲ್ಲ ಬ್ಯಾಂಕುಗಳ ಮುಖ್ಯಸ್ಥರಿಗೆ ಡಿಮಾನಿಟೈಜೇಷನ್ ಬಗ್ಗೆ ಗೊತ್ತಾಗಿದ್ದು.

೨. ಭಾರತದ ಸಾಮಾನ್ಯ ಜನರು, ವ್ಯಾಪಾರಿಗಳು, ಬ್ಯಾಂಕ್ ಉದ್ಯೋಗಿಗಳು, ಹೀಗೆ ಇಡೀ ದೇಶ ಆಂದೋಲನವನ್ನು ಸಹಕರಿಸಿದ್ದು ಜಗತ್ತಿಗೆ ಒಂದು ಮಾದರಿ.

೩. ಡಿಮಾನಿಟೈಜೇಷನ್’ನಿಂದ ದಂಗೆ ಶುರುವಾಗಬಹುದು ಎಂದು ಎಲ್ಲರೂ ಹೆದರಿದ್ದರು. ಆದರೆ ಭಾರತೀಯ ಸರ್ಕಾರಕ್ಕೆ ಹಾಗೂ ಬ್ಯಾಂಕುಗಳಿಗೆ ಸಂಪೂರ್ಣ ಸಹಕಾರ ನೀಡಿದರು.

೪. ಡಿಮಾನಿಟೈಜೇಷನ್’ನಿಂದ ಭ್ರಷ್ಟಾಚಾರ ಕಡಿಮೆ ಆಗಿದೆಯೋ ಇಲ್ಲವೋ ಅಂತ ಹೇಳಲು ಇದು ಬಹಳ ಕಡಿಮೆ ಸಮಯ. ಆದರೆ ಮುಂದಿನ ದಿನಗಳಲ್ಲಿ ಇದರ ಪ್ರಭಾವ ಗೊತ್ತಾಗಲಿದೆ.

೫. ಡಿಮಾನಿಟೈಜೇಷನ್ ಸರಿಯಾದ ದಿಕ್ಕಿನಲ್ಲಿ ಸಾಗಿದೆ ಎನ್ನುವುದಕ್ಕೆ ಆದಾಯ ತೆರಿಗೆಯಲ್ಲಿ ಆದ ಹೆಚ್ಚಳ, ಹೆಚ್ಚಾದ ಠೇವಣಿ, ಹೊಸದಾಗಿ ತೆರೆದ ಕೋಟಿ ಕೋಟಿ ಬ್ಯಾಂಕ್ ಖಾತೆಗಳೇ ಸಾಕ್ಷಿ.

೬. ಡಿಮಾನಿಟೈಜೇಷನ್ ಸಮಯದಲ್ಲಿ ಜನರು ಮನೆಯಲ್ಲಿ ಬಿದ್ದಿದ್ದ ಹಣವನ್ನು ತಂದು ಬ್ಯಾಂಕಿನಲ್ಲಿ ಠೇವಣಿ ಇಟ್ಟರು. ಇನ್ನೂ ಠೇವಣಿಯ ನಲವತ್ತು ಪ್ರತಿಶತ ಹಾಗೆಯೇ ಬ್ಯಾಂಕಿನಲ್ಲಿದೆ. ಇದರಿಂದ ದೇಶದ ಲಿಕ್ವಿಡಿಟಿ ಹೆಚ್ಚಾಗಿದೆ.

೭. ಡಿಮಾನಿಟೈಜೇಷನ್ ಸಮಯದಲ್ಲಿ ಜನರು ದೇಶದ ಡಿಜಿಟಲ್ ಬ್ಯಾಂಕನ್ನು ಸಂಪೂರ್ಣವಾಗಿ ಬಳಸಿದರು. ಇದರಿಂದ ಬ್ಯಾಂಕುಗಳು ತಮ್ಮ ಡಿಜಿಟಲ್ ಪವರ್ ಹೆಚ್ಚಿಸಿಕೊಂಡವು. ಮೂರು ವರ್ಷಗಳಲ್ಲಿ ಸಾಧಿಸಲು ಆಗದಿರುವುದನ್ನ ಡಿಮಾನಿಟೈಜೇಷನ್ ಕೇವಲ ಅರವತ್ತು ದಿನಗಳಲ್ಲಿ ಮಾಡಿ ತೋರಿಸಿತು.

೮. ಕೇವಲ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸುಮಾರು ತೊಂಬತ್ತು ಲಕ್ಷ ಹೊಸ ಖಾತೆ ತೆರೆಯಲಾಯಿತು. ಇವರೆಲ್ಲ ಮೊದಲ ಬಾರಿಗೆ ಬ್ಯಾಂಕಿಗೆ ಬಂದವರು.

೯. ಠೇವಣಿ ಹೆಚ್ಚಿದ್ದರಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಡಿಪಾಸಿಟ್ ರೇಟನ್ನು ನೂರು ಪಾಯಿಂಟ್ ಕಡಿಮೆ ಮಾಡಿದೆ. ಇದು ಡಿಮಾನಿಟೈಜೇಷನ್ ತಂದ ಅತೀ ದೊಡ್ಡ ಯಶಸ್ಸು.

೧೦. ಅಸ್ಸಾಂ ಟೀ ಎಸ್ಟೇಟ್ ಉದಾಹರಣೆ ಕೊಡುತ್ತಾ ಅವರ ಜೀವನ ಡಿಮಾನಿಟೈಜೇಷನ್’ನಿಂದ ಹೇಗೆ ಬದಲಾಗಿದೆ ಎನ್ನುತ್ತಾರೆ. ಅಸ್ಸಾಂನ ಚಹಾ ಎಸ್ಟೇಟ್’ನಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಇನ್ನೂರು ವರ್ಷಗಳ ನಂತರ ಸ್ವಾತಂತ್ರ್ಯ ಸಿಕ್ಕಿದೆಯಂತೆ. ಮೊದಲು ಅವರಿಗೆ ಎಷ್ಟು ಸಂಬಳ ಬರುತ್ತದೆ ಎನ್ನುವುದೇ ಗೊತ್ತಿರಲಿಲ್ಲ, ಬಂದ ಸಂಬಳವು ಮೊದಲು ಅವರು ಸಾಲ ಮಾಡುತ್ತಿದ್ದ ಆ ಮಧ್ಯವರ್ತಿಗೆ ಹೋಗುತ್ತಿತ್ತು. ಸಂಬಳ ಬರುವ ದಿನ ಮಧ್ಯವರ್ತಿಗಳು ಎಸ್ಟೇಟ್ ಮಾಲೀಕನ ಮನೆಯ ಎದುರಿಗೆ ಬಂದು ಕೆಲಸಗಾರರ ಸಂಬಳವನ್ನು ಮಾಲೀಕರಿಂದ ನೇರವಾಗಿ ತೆಗೆದುಕೊಂಡು ಉಳಿದ ಹಣವನ್ನು ಕೆಲಸಗಾರರಿಗೆ ಕೊಡುತ್ತಿದ್ದರು. ಇವತ್ತು ಕೆಲಸಗಾರರಿಗೆ ನೇರವಾಗಿ ಹಣ ಹೋಗುತ್ತಿದೆಯಂತೆ. ತಮಗೆ ಬರುವ ಸಂಪೂರ್ಣ ಹಣವನ್ನು ಏನು ಮಾಡಬೇಕು ಎನ್ನುವುದನ್ನು ಅವರೇ ನಿರ್ಧರಿಸುತ್ತಾರೆ!

 

Facebook ಕಾಮೆಂಟ್ಸ್

Vikram Joshi: ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.
Related Post