ಕೆಳಗಿನ ಕೆಲ ಪ್ರಶ್ನೆಗಳಿಗೆ ಸಾಧ್ಯವಾದರೆ ನಿಮ್ಮ ಎದೆಯ ಮೇಲೆ ಕೈಯಿರಿಸಿ ಉತ್ತರಿಸಿ. ಕಳೆದ ವಾರ ರಾಜ್ಯದಾದ್ಯಂತ ನಡೆದ ವೈದ್ಯರ ಮುಷ್ಕರವನ್ನು ನಿಜವಾಗಿಯೂ ನೀವು ಬೆಂಬಲಿಸುತ್ತೀರಾ? ಇಂದು ಕೆಲಸ ಮಾಡಿದರಷ್ಟೇ ನಾಳಿನ ಕೂಳನ್ನು ಕಾಣುವ ಕೋಟ್ಯಂತರ ಹೊಟ್ಟೆಗಳ ಮೇಲೆ ಲಕ್ಷ ಲಕ್ಷ ಹೊರೆಯನ್ನು ಹೊರಿಸುವ ಖಾಸಗಿ ಆಸ್ಪತ್ರೆಗಳ ದಬ್ಬಾಳಿಕೆಗೆ ಕಾನೂನಿನ ಚೌಕಟ್ಟಿನಲ್ಲಿ ಕಡಿವಾಣ ಹಾಕುವ ಒಂತಿನಿತು ಕಾನೂನು ನಿಮಗೆ ಬೇಡವೆನಿಸುವುದೇ? ವೈದ್ಯ ಹೇಳಿದ್ದೆ ರೋಗ- ನೀಡಿದ್ದೆ ಮದ್ದು ಎಂಬಂತಾಗಿರುವ ಸಂದರ್ಭದಲ್ಲಿ , ರೋಗಿಗಳ/ಜನತೆಯ ಹಿತದೃಷ್ಟಿಯಿಂದ ತರಲೆತ್ನಿಸುತ್ತಿರುವ ಕಾಯಿದೆಯ ನಿಜವಾದ ಉದ್ದೇಶ ನಿಮಗೆ ತಿಳಿದಿದೆಯೇ? ನಿಮ್ಮ ಹತ್ತಿರವರೇ ಒಬ್ಬರು ತಕ್ಷಣಕ್ಕೆ ಯಾವುದಾದರೊಂದು ಪ್ರೈವೇಟ್ ಆಸ್ಪ್ರತ್ರೆಗೆ ಸೇರಿ ನಂತರ ಹಣ ಸಾಲುತ್ತಿಲ್ಲವೆನ್ನುತ್ತ ಜೆಲ್ಲೆಯ ಅಥವಾ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಬಂದು ಪಡುವ ವಿಪರ್ಯಾಸವನ್ನು ಕಣ್ಣು ಮುಚ್ಚಿಕೊಂಡು ನೀವು ಸಹಿಸುತ್ತೀರಾ? ಅದೇ ಪ್ರೈವೇಟ್ ಆಸ್ಪತ್ರೆಯಲ್ಲಿ ಸತ್ತ ಒಂದು ಬಡ ಹೆಣವನ್ನು ಹಿಂದಿರುಗಿಸಲೂ ಹಣದ ಬಿಲ್ಲನ್ನೇ ಮುಂದಿಟ್ಟು ಸತಾಯಿಸುವ ಕಟು ಹೃದಯಿಗಳನ್ನು ನೀವು ಹೊತ್ತು ಮೆರವಣಿಗೆ ಮಾಡುತ್ತೀರಾ? ಯಾರೋ ಪುಡಾರಿ ರಾಜಕಾರಣಿ ತನ್ನ ಬೇಳೆಯನ್ನು ಬೇಯಿಸಿಕೊಳ್ಳಲು ಅಂತಹ ಸಂಸ್ಥೆಗಳನ್ನು ವಿರೋಧಿಸಲಾರ ಎಂಬುದಾದರೆ ನೀವುಗಳು ಸಹ ‘ಕುರಿಗಳು ಸಾರ್ ಕುರಿಗಳು’ ಎಂಬಂತೆ ಆತನನ್ನೇ ಹಿಂಬಾಲಿಸುತ್ತೀರಾ? ಹೇಳಿ. ಇಂದು ಒಂದು ಸಾಧಾರಣ ಜ್ವರಕ್ಕೆ ಪ್ಯಾರಾ-ಅಸಿಟಮೋಲ್ ಮಾತ್ರೆಯನ್ನು ಕೊಡಲೇ ಸಾವಿರ ಸಾವಿರ ರೂಪಾಯಿಗಳನ್ನು ಪೀಕುವ ಆಸ್ಪತ್ರೆಗಳು ದಿನಕ್ಕೆ ಇನ್ನೂರು ರೂಪಾಯಿ ಹಣವನ್ನು ಸಂಪಾದಿಸುವ ವ್ಯಕ್ತಿಯನ್ನು ಅಂತಹ ಆಸ್ಪತ್ರೆಗಳ ಹತ್ತಿರವೂ ಸುಳಿಯದಂತೆ ಮಾಡುತ್ತಿರುವುದು ಎಷ್ಟು ಮಟ್ಟಿನ ನ್ಯಾಯ? ಇವರಿಗೆ ಜಾಗ, ಓದು, ಕಟ್ಟಡ ಎಲ್ಲವೂ ಬಡ ಜನರ ದುಡ್ಡಿನಲ್ಲಿ ನೆಡೆವ ರಾಜ್ಯಸರ್ಕಾರದ್ದೇ ಬೇಕು ವಿನಃ ಅಂತಹ ಬಡ ಜನರ ಶೂಶ್ರುಷೆಯಲ್ಲ.ದಿನಪೂರ್ತಿ ಇಂಗ್ಲಿಷಿನ ಪೋಷಾಕುಗಳನ್ನೇ ತೋರುತ್ತ 1 ನಿಮಿಷ ತೋರ್ಪಡಿಕೆಗೆ ಎಂಬಂತೆ ಕನ್ನಡ ಕನ್ನಡ ಎಂದು ಬೊಬ್ಬೆಯೊಡೆಯುವ ಹಲವರು ಇದೇ ಕನ್ನಡ ನಾಡಿನಲ್ಲಿ ಅವೇ ಇಂಗ್ಲಿಷ್ ಔಷಧಗಳು ತಮ್ಮ ರಣಬೆಲೆಯ ಬಲದಲ್ಲಿ ನಮ್ಮವರನ್ನು ಕಬ್ಬಿನ ಜಲ್ಲೆಯಂತೆ ಅರೆಯುತ್ತಿರುವುದು ನಿಮಗೆ ತಪ್ಪು ಎನಿಸುವುದಿಲ್ಲವೇ?
ಹಣ ಉಳಿಸುವ ಆಸೆಗೆ/ಅನಿವಾರ್ಯತೆಗೆ ಸಾಲು-ಸಾಲಾಗಿ ನಿಂತು ನರಳುವ ಭಾಗ್ಯವನ್ನು ಕರುಣಿಸುವ ಸರ್ಕಾರೀ ಆಸ್ಪತ್ರೆಗಳು, ಗುಣವಾಗಿ ಹೊರಬರುವ ರೋಗಿ ಕೊನೆಗೆ ಆತನ ಬಿಲ್ಲಿನ ಮೊತ್ತವನ್ನು ನೋಡಿಯೆ ಮತ್ತೊಮ್ಮೆ ಅಸ್ವಸ್ಥನಾಗುವಂತೆ ಮಾಡುವ ಖಾಸಗಿ ಆಸ್ಪತೆಗಳು, ಎರಡೂ ಬೇಡವೆನ್ನುತ್ತಾ ‘ಇದ್ದರೆ ಇದ್ದ ಸತ್ತರೆ ಸತ್ತ‘ ಎನ್ನುತ್ತಾ ವ್ಯವಸ್ಥೆಯ ಮೇಲೆ ನಂಬಿಕೆಯನ್ನೇ ಕಳೆದುಕೊಂಡು ಜೀವನ ಕಳೆಯುವ ಬಹುಮಂದಿ,, ಇವೆಲ್ಲಕ್ಕೂ ಶಾಸ್ತಿ ಎಂಬಂತೆ ರಾಜ್ಯ ಸರ್ಕಾರ ಮಂಡಿಸಲೊಗುತ್ತಿರುವ ಪ್ರಸ್ತುತ KPME (Karnataka Private Medical Establishment Act) ಮಸೂದೆಯ ಕೆಲವು ತಿದ್ದುಪಡಿ, ಅದರ ವಿರೋಧವಾಗಿ ಬೊಬ್ಬೆಯೊಡೆಯುವ ಖಾಸಗಿ ವೈದ್ಯರ ಸಂಘ, ತಿಳಿದೋ ತಿಳಿಯದೆಯೋ ಇದರ ಪರ ವಿರೋಧವನ್ನು ಮಂಡಿಸುವ ಸಾವಿರಾರು ಗುಂಪುಗಳು, ಇವೆಲ್ಲದರ ಜೊತೆಗೆ ಕುಟುಂಬದ ಹಾದಿಯಲ್ಲಿ ಇನ್ನೆಂದೂ ಬಾರದೆ ಕಣ್ಮರೆಯಾದ ಹತ್ತಾರು ಜೀವಗಳು, ನೋವುಗಳು. ಇವಿಷ್ಟು ರಾಜ್ಯದ ವೈದ್ಯಕೀಯ ವಲಯದ ಪ್ರತಿದಿನದ ಹಾಗುಹೋಗುಗಳು. ಕೊನೆಯ ಒಂದಿಷ್ಟು ಅಂಶಗಳು ಪ್ರಸ್ತುತ ಹೀನಾಯ ಸ್ಥಿತಿಗೆ ಮತ್ತಷ್ಟುಇಂಬು ಕೊಟ್ಟಂತಿದೆ.
ಮೊದಲಿಗೆ ರಾಜ್ಯದಲ್ಲಿ KPME ಮಸೂದೆ ಜಾರಿಯಾದದ್ದು 2007 ರಲ್ಲಿ. ಅಂದಿನ ರಾಜ್ಯ ಸರಕಾರ ಮಂಡಿಸಿದ ಈ ಮಸೂದೆಯ ಪ್ರಕಾರ ಪ್ರತಿಯೊಂದು ಖಾಸಗಿ ಆಸ್ಪತ್ರೆಗಳು ತಮ್ಮ ಹೆಸರನ್ನು ಸಂಬಂಧಪಟ್ಟ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಬೇಕಲ್ಲದೆ ಸರಕಾರ ರಚಿಸುವ ನಿಯಮಾವಳಿಗೆ ಬದ್ಧವಾಗಿರಬೇಕು ಎಂಬುದಾಗಿದ್ದಿತು. ಈ ಅಂಶಗಳಲ್ಲಿ ಮೊದಲನೆಯ ಅಂಶವನ್ನು ಹೆಚ್ಚಿನ ಆಸ್ಪತ್ರೆಗಳು ಪಾಲಿಸಿವೆಯಾದರು ಹೊಳೆಯಲ್ಲಿ ಹುಣಸೆಯನ್ನು ತೊಳೆದಂತೆ ನಂತರದನ್ನು ಮಾಡಿದವು. ಇದಕ್ಕೆ ಮೂಲ ಕಾರಣ ಮಸೂದೆಯೊಂದನ್ನು ಜಾರಿಗೊಳಿಸಿ ನಂತರ ಕೈಕಟ್ಟಿ ಮೂಕವಾಗಿ ಕೂರುವ ಸರ್ಕಾರಗಳಾಗಿರಬಹುದು ಅಥವಾ ಇಂತಹ ಮಸೂದೆ ಮಂಡಿಸುವವರೇ ಕುಟುಂಬದವರ ಹೆಸರಿನಲ್ಲಿ ರಾಶಿ ರಾಶಿ ಆಸ್ಪತ್ರೆಗಳನ್ನು ನಿರ್ಮಿಸಿಕೊಂಡಿರುವುದಾಗಿರಬಹುದು. ಇಂತಹ ಪ್ರಫುಲ್ಲ ವಾತಾವರಣದಲ್ಲಿ ನಿಯಮಾವಳಿಗಳು ಗಾಳಿಗೆ ಪ್ರಿಯವಾದದಂತೂ ಸುಳ್ಳಲ್ಲ. ಪರಿಣಾಮ ಖಾಸಗಿ ಆಸ್ಪತ್ರೆಗಳ ಬಡವರ ಮೇಲಿನ ಆರ್ಥಿಕ ಬಡಿತ ಇನ್ನೂ ವಿಪರೀತವಾಯಿತು. ಅದೆಷ್ಟರ ಮಟ್ಟಿಗೆ ಎಂದರೆ ‘ದುಡ್ಡು ಇದ್ದರೆ ಮಣಿಪಾಲು, ಇಲ್ಲ ಅಂದ್ರೆ ಮಣ್ಣುಪಾಲು‘ ಎಂಬುವಷ್ಟರ ಮಟ್ಟಿಗೆ! ಹೃದಯ ಕಸಿಯಿಂದ ಹಿಡಿದು ಮಂಡಿಚಿಪ್ಪಿನ ಬದಲಿ ಎಲ್ಲವೂ ಹಣವಂತನ ಭಾಗ್ಯ ಎಂಬುದು ಸರ್ವವ್ಯಾಪ್ತಿಯಾಗಿರುವ ವಿಷಯ. ಬೇರೆ ಯಾರು ಬೇಡ ನಾವುಗಳೇ ಚಿಕಿತ್ಸೆಯ ನೆಪದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ರಾಶಿ ರಾಶಿ ದುಡ್ಡನು ಸುರಿದು ಹಿಡಿ ಹಿಡಿ ಶಾಪ ಹಾಕುತ್ತ ಅದೆಷ್ಟು ಬಾರಿ ವಾಪಸ್ಸು ಬಂದಿಲ್ಲ? ಜಿಗಣೆಗಳಂತೆ ಹಣವನ್ನು ಹೀರಿ ದರ್ಪದಿಂದ ವರ್ತಿಸುವ ಇಂತಹ ಹಲವಾರು ಸಂಸ್ಥೆಗಳಿಗೆ (ಆಸ್ಪತ್ರೆಗಳಿಗೆ) ಕೂಡಲೇ ಕಡಿವಾಣ ಹಾಕುವುದು ಅತ್ಯಾವಶ್ಯಕವಾಗಿದ್ದಿತು. ಅಂತೆಯೇ ಆಯಿತು. ಪ್ರಸ್ತುತ ಜಾರಿಯಲ್ಲಿದ್ದ KPME ಮಸೂದೆಯ ಮೇಲಿನ ಹಿಡಿತವನ್ನು ಬಿಗಿಗೊಳಿಸಿ ಇಂತಹ ಒಂದು ಮಸೂದೆ ಕೇವಲ ನಾಮ್-ಕಾ-ವಾಸ್ತೆ ಆಗಿರಬಾರದು ಎಂಬ ಕಾರಣಕ್ಕೆ ಪ್ರಸ್ತುತ ಆರೋಗ್ಯ ಸಚಿವಾಲಯ ಕೆಲವು ಅಂಶಗಳನ್ನು ಇದಕ್ಕೆ ಅಳವಡಿಸಹೊರಟಿದೆ. ಆಸ್ಪತ್ರೆಗಳಲ್ಲಿ ನೆಡೆಯುವ ಪ್ರತಿಯೊಂದೂ ಚಿಕೆತ್ಸೆಗಳಿಗೂ ಹೋಟೆಲ್ ನ ಮೆನುವಿನಂತೆ ರಾಜ್ಯದಾದ್ಯಂತ ಕರಾರುವಕ್ಕಾದ ಬೆಲೆಯನ್ನು ನಿಗದಿಪಡಿಸಲು, ತತ್ಕಾಲದ (ಎಮರ್ಜೆನ್ಸಿ) ಚಿಕಿತ್ಸೆಗಳಿಗೂ ಮುಂಗಡ ಹಣದ ಬೇಡಿಕೆಯನ್ನಿಡುವ ಅಭ್ಯಾಸಕ್ಕೆ ಬೇಲಿ ಹಾಕಲು, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ ವ್ಯಕ್ತಿಯ ಮೃತದೇಹವನ್ನೂ ಸಹ ಮರಳಿಸುವ ಮುನ್ನ ಗಿರವಿ ಅಂಗಡಿಯ ಮಾಲಿಕನಂತೆ ಹಣದ ಕಂತೆಗಳನ್ನೇ ಕೇಳುವ ಕ್ರಮಕ್ಕೆ ಏಕ್ದಂ ಕಡಿವಾಣ ಹಾಕುವುದು ಈ ಮಸೂದೆಯ ಮೂಲ ಉದ್ದೇಶವಾಗಿದೆ. ಅದರ ಪ್ರಕಾರ ಒಂದು ವೇಳೆ ಈ ನಿಯಮವನ್ನು ಉಲ್ಲಘಂನೆ ಮಾಡುವುದಾದರೆ ಹಿಂದೆ ಸಾವಿರದಲ್ಲಿದ್ದ ದಂಡವನ್ನು ಈಗ ಲಕ್ಷಕ್ಕೆ ಏರಿಸಲಾಗಿದೆ ಹಾಗು ಜೈಲುವಾಸವನ್ನು ತಿಂಗಳುಗಳಿಂದ ವರ್ಷಗಳಿಗೆ!
ಪ್ರಸ್ತುತ ಜಾರಿಯಲ್ಲಿದ್ದ ಮಸೂದೆಯ ತಿದ್ದುಪಡಿಯ ಬಗೆಗಿನ ಚರ್ಚೆ ಬಹಳ ತಿಂಗಳುಗಳಿಂದ ನಡೆಯುತ್ತಲೇ ಇದೆ. ಈ ಕುರಿತು ಕಳೆದ ವರ್ಷವೇ ಸರ್ಕಾರ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ವಿಕ್ರಂಜಿತ್ ಸೇನ್ ರವರ ಅಧ್ಯಕ್ಷತೆಯಲ್ಲಿ ಕಮಿಟಿಯೊಂದನ್ನು ರಚಿಸಿ ಖಾಸಗಿ ಆಸ್ಪತ್ರೆಗಳ ಸುಲಿಗೆಯ ಬಗ್ಗೆ ಹಾಗು ಇದಕ್ಕೆ ಸಂಬಂಧಿಸಿದ ಇತರ ವಿಷಯಗಳ ಕುರಿತು ವರದಿಯೊಂದನ್ನು ಸಿದ್ಧಪಡಿಸಲು ಕೇಳಿಕೊಂಡಿತ್ತು. ಅದರಂತೆಯೇ ಈ ವರ್ಷದ ಏಪ್ರಿಲ್ಲಿನಲ್ಲಿ ರೆಡಿಯಾದ ಸಮಿತಿಯ ವರದಿಯನ್ನು, ಹಾಗು ಅದರಲ್ಲಿದ್ದ ಕೆಲವು ಅಳವಡಿಕೆಗಳನ್ನು ಕಂಡು ಕೆಂಡಾಮಂಡಲವಾದ ಖಾಸಗಿ ಆಸ್ಪತ್ರೆಗಳ ಸಂಘ ದಿನಕ್ಕೊಂದರಂತೆ ಹೊಸ ಹೊಸ ಖ್ಯಾತೆಗಳನ್ನು ಎತ್ತುತ್ತಾ ಕುಣಿದಾಡತೊಡಗಿತು. ಪ್ರೈವೇಟ್ ಆಸ್ಪತ್ರೆಗಳಿಗೆ ಕಡಿವಾಣ ಹಾಕುವ ಮೊದಲು ಸರ್ಕಾರೀ ಆಸ್ಪತ್ರೆಗಳ ಸ್ಟ್ಯಾಂಡರ್ಡ್ಸ್ ಅನ್ನು ಹೆಚ್ಚಿಸಿ ಅನ್ನುವುದು ಇವುಗಳಲ್ಲಿ ಒಂದು. ಪ್ರಸ್ತುತ ಸರ್ಕಾರೀ ಆಸ್ಪತ್ರೆಗಳ ಅವತಾರವನ್ನು ನೋಡಿದರೆ ಇವರ ಈ ಸಬೂಬು ತಪ್ಪೆಂದು ಅನಿಸದೇ ಇರದು. ಆದರೆ ಕಳ್ಳ ಯಾರು ಎಂದರೆ ‘ನಾನಲ್ಲ, ಇವನು‘ ಎಂದು ಸರ್ಕಾರೀ ಆಸ್ಪತ್ರೆಗಳೆಡೆ ಬೊಟ್ಟುಮಾಡಿ ತೋರಿಸುವ ಇಂತಹ ಖಾಸಗಿ ಆಸ್ಪತ್ರೆಗಳ ಮೇಲೆ ನಮಗೆ ಸಂಶಯ ಬಾರದೆ ಇರುತ್ತದೆಯೇ? ಸರಿ ಎನ್ನುತ್ತಾ ಪ್ರಸ್ತುತ ವಿಧಾನಸಭೆಯ ಅಧಿವೇಶನದ ವರೆಗೂ ತಳ್ಳಿಸಿಕೊಂಡು ಬಂದ ಮಸೂದೆ ಇನ್ನೇನು ಮಂಡಿಸಬೇಕು ಅನ್ನುವಷ್ಟರಲ್ಲಿ ರಾಜ್ಯದಾದ್ಯಂತ ಸುಮಾರು 500 ಕ್ಕೂ ಹೆಚ್ಚಿನ ವೈದ್ಯರು ತಮ್ಮ ವೈದ್ಯ ವೃತ್ತಿಯ ಮೂಲ ಉದ್ದೇಶವನ್ನು ಮರೆತಂತೆ ರಸ್ತೆಗಿಳಿದು ಧರಣಿ ನೆಡೆಸಿದರು. ವೈದ್ಯಕೀಯ ‘ಸೇವೆ‘ ಎಂಬುದು ಅಕ್ಷರ ಸಹ ಬಿಸಿನೆಸ್ ನಂತಾಗಿದೆ ಎಂಬುದನ್ನು ಸಾಬೀತುಮಾಡಿ ತೋರಿದರು. ಅತ್ತ ಚಿಕಿತ್ಸೆ ಸಿಗದೇ ವಿಲ ವಿಲ ಒದ್ದಾಡುತ್ತಿದ್ದ ಜೀವಗಳನ್ನೇ ಇಂದು ಕಣ್ಣೆತ್ತಿ ನೋಡದವರು ನಾಳೆ ಮಸೂದೆ ಮಂಡನೆಯಾಗಿ ರಾಜ್ಯಾದಾಂದ್ಯಂತ ಜಾರಿಯಾದರೆ ರೋಗಿಗಳ ಶುಶ್ರುಷೆಯನ್ನು ಅದೆಷ್ಟರ ಮಟ್ಟಿಗೆ ಮಾಡಬಹುದೆಂದು ನೀವೇ ಊಹಿಸಬಹುದು.
ಕಳೆದ ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರ ಮಂಡಿಚಿಪ್ಪಿನ ಜೋಡಣೆ ಹಾಗು ಶಸ್ತ್ರ ಚಿಕಿತ್ಸೆಯ ದರವನ್ನು ಶೇಕಡ 70% ನಷ್ಟು ಇಳಿಸಿ ದೇಶದಾದ್ಯಂತ ಆಸ್ಪತ್ರೆಗಳು ಈ ದರವನ್ನೇ ಪಾಲಿಸುವಂತೆ ನಿಯಮವನ್ನು ಜಾರಿಗೊಳಿಸಿತು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಜಾರಿಯಲ್ಲಿದ್ದ ಚಿಕಿತ್ಸೆಯ ವೆಚ್ಚವನ್ನು ಪ್ರತಿಶತ 70 ರಷ್ಟು ಇಳಿಸಿದರೂ ಆಸ್ಪತ್ರೆಗಳೇನು ಬೀದಿಗೆ ಬೀಳಲಿಲ್ಲ. ಡಾಕ್ಟರುಗಳೇನು ಮನೆ ಮಠವನ್ನು ಕಳೆದುಕೊಳ್ಳಲಿಲ್ಲ. ಹಾಗಾದರೆ ಇಲ್ಲಿಯವರೆಗೂ ಖಾಸಗಿ ಆಸ್ಪತ್ರೆಗಳು ಬಕಾಸುರರಂತೆ ಜನರ ಹಣ ಹಾಗು ನೆಮ್ಮದಿಯನ್ನು ಸಾಗರೋಪಾದಿಯಲ್ಲಿ ನುಂಗಿ ನೀರು ಕುಡಿದ್ದಿದಂತೂ ಸುಳ್ಳಲ್ಲ. ಅಲ್ಲವೇ? ಇದು ಕೇವಲ ಮಂಡಿಚಿಪ್ಪಿನ ಮಹಿಮೆ. ಅಂತಹ ಇನ್ನೆಷ್ಟು ರಾಶಿ ರಾಶಿ ದೇಹದ ಬಿಡಿ ಬಾಗಗಳ ಬಿಸಿನೆಸ್ ಗಳು ರೋಗಿಯ ರೋಗಗಳೊಟ್ಟಿಗೆ ಹಸುಕೊಕ್ಕಿವೆಯೋ ಯಾರು ಬಲ್ಲರು?!
ಖಾಸಗಿ ಆಸ್ಪತ್ರೆಗಳು ಈ ರೀತಿಯಾಗಿ ಯದ್ವಾ ತದ್ವಾ ಹಣವನ್ನು ಪೀಕಲು ಇರುವ ಮತ್ತೊಂದು ಮುಖ್ಯ ಕಾರಣ ಇನ್ಶೂರೆನ್ಸ್. ಹೌದು, ರೋಗಿಯ ಬಳಿ ಇನ್ಶೂರೆನ್ಸ್ ಕಾರ್ಡ್ ಇದೆ ಎಂದರೆ ಆಸ್ಪತ್ರೆಗಳ ಬಿಲ್ಲಿನಲ್ಲಿ ನೂರು ಸಾವಿರವಾಗಬಹುದು, ಸಾವಿರ ಲಕ್ಷವಾಗಬಹುದು! ಇನ್ಶೂರೆನ್ಸ್ ಕಂಪನಿಗಳು ಕೊಡುತ್ತವಲ್ಲಾ ಎನ್ನುತ ರೋಗಿಗಳೂ ಬಾಯಿ ಮುಚ್ಚಿ ಸುಮ್ಮನೆ ಕೂರುತ್ತಾರೆ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆಯಂತೆ ಆಸ್ಪತ್ರೆಗಳು ಹೀಗೆ ರೋಗಿಗಳ ಹೆಸರಲ್ಲಿ ಹಣವನ್ನು ಲೂಟಿ ಮಾಡುವುದು ಏನು ಯಾರಿಗೂ ತಿಳಿದಿರುವ ವಿಷಯವೇನಲ್ಲ. ಆದರೂ ಯಾರೊಬ್ಬರೂ ಇದರ ಬಗ್ಗೆ ಧ್ವನಿ ಎತ್ತುವುದಿಲ್ಲ. ಈಗ ಸರ್ಕಾರವೊಂದು ಈ ನಿಟ್ಟಿನಲ್ಲಿ ಜಾರಿಗೊಳಿಸಲೆತ್ನಿಸಿರುವ ಕಾನೂನು ಇವೆಲ್ಲ ಅಕ್ರಮಗಳಿಗೂ ಕಡಿವಾಣ ಹಾಕುವ ನಿಟ್ಟಿನಲ್ಲಿಯೇ ಇದೆ. ಆದರೂ ಈ ಮಸೂದೆಗೆ ವಿರೋಧವನ್ನು ವ್ಯಕ್ತಪಡಿಸುತ್ತಿರುವುದು ನಮ್ಮ ದೌರ್ಭ್ಯಾಗ್ಯವೇ ಸರಿ.
ಇವೆಲ್ಲ ವಾದ ಪ್ರತಿವಾದಗಳ ಹಿನ್ನೆಲೆಯಲ್ಲಿ ಬಹಳಷ್ಟು ವಿಷಯಗಳು ಆಳುವ ಸರಕಾರಗಳನ್ನು ತಮ್ಮ ಆತ್ಮಾವಲೋಕನವನ್ನು ಮಾಡಿಕೊಳ್ಳುವಂತೆ ಮಾಡಿವೆ. ಸರ್ಕಾರೀ ಆಸ್ಪತ್ರೆಗಳೆಂದರೆ ಗತಿ ಇಲ್ಲದವರಿಗೆ ಎಂಬುವಂತಹ ಮನೋಭಾವವೊಂದು ಜನರಲ್ಲಿ ಇಂದು ಆಳವಾಗಿ ಬೇರೂರಿದೆ. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳೆಂಬುದು ಪ್ರತಿಯೊಂದು ಕುಟುಂಬಗಳ ಪ್ರತಿಷ್ಠೆಯ ವಿಷಯವಾಗಿರುವುದಂತೂ ಸುಳ್ಳಲ್ಲ. ಜನರ ಪರವಾಗಿ ಹೊರಡುವ ಸದುದ್ದೇಶವಿದ್ದರೆ ಸರ್ಕಾರಗಳ ಮೊದಲ ಹೋರಾಟ ಇಂತಹ ಮನೋಸ್ಥಿತಿಯ ವಿರುದ್ದವಾಗಿರಬೇಕು. ಸರ್ಕಾರೀ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳಿಗೆ ಯಾವುದೇ ವಿಧದಲ್ಲೂ ಕಡಿಮೆಯಿಲ್ಲ ಎಂಬುದನ್ನು ಸಾಧಿಸಿ ತೋರುವ ಕಡೆಯಿರಬೇಕು. ಓದು, ಚಿಕಿತ್ಸೆ ಖಾಸಗಿಯದ್ದು, ಕೆಲಸ ಮಾತ್ರ ಸರ್ಕಾರದ್ದು ಎಂಬುವ ಉದ್ಯೋಗಕಾಂಕ್ಷಿಗಳಿಗೆ ಮಾತ್ರ ಸರ್ಕಾರೀ ಆಸ್ಪತ್ರೆಗಳು, ಶಾಲೆಗಳು ಪ್ರಿಯವಾದರೆ ಸಾಲದು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳನ್ನೇ ಆಧಾರವಾಗಿಟ್ಟುಕೊಂಡು ಅಲ್ಲಿರುವ ಸರ್ಕಾರೀ ಆಸ್ಪತ್ರೆಗಳನ್ನು ಅಭಿವೃದ್ದಿಪಡಿಸುವ ಗುರಿಯನ್ನು ಹಿಟ್ಟುಕೊಳ್ಳಲಿ. ವೈದ್ಯರ ಸಂಬಳ, ಅತ್ಯಾಧುನಿಕ ಫೆಸಿಲಿಟಿಗಳು, ಚಿಕಿತ್ಸಾ ಯಂತ್ರಗಳು, ಎಲ್ಲ ಬಗೆಯ ಡಿಪಾರ್ಟ್ಮೆಂಟುಗಳನ್ನು ಖಾಸಗಿ ಆಸ್ಪತ್ರೆಗಳ ಹಂತಕ್ಕೆ ತಂದು ನಿಲ್ಲಿಸಲಿ. ಆಗ ನೋಡುವ ಏಕೆ ಜನಸಾಮಾನ್ಯರಿಗೆ ಸರ್ಕಾರೀ ಆಸ್ಪತ್ರೆಗಳು ಪ್ರಿಯವಾಗದೆ ಇರುತ್ತದೆ ಎಂದು.
ನವೆಂಬರ್ 24ರಂದು ಪ್ರಸ್ತುತ ವಿಧೇಯಕ ರಾಜ್ಯಪಾಲರ ಅನುಮೋದನೆಗೆ ಹೋಗಿದೆ. ಇಲ್ಲಿಯವರೆಗೂ ಆಳುವ ಸರ್ಕಾರಗಳು ಮಾಡುವ ಪ್ರತಿಯೊಂದು ಕಾರ್ಯಗಳನ್ನು ವಿರೋಧಿಸುವುದಷ್ಟೇ ತಮ್ಮ ದ್ಯೆಯವೆಂದುಕೊಂಡಿದ್ದ ವಿರೋಧಪಕ್ಷಗಳು ಯಾವಾಗ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಲು ಶುರುವಾದರೋ ಸರ್ವಾನುಮತದಿಂದ ಈ ವಿಧೇಯಕಕ್ಕೆ ಒಪ್ಪಿಗೆ ನೀಡಿವೆ. ಇದೊಂದು ಉತ್ತಮ ಬೆಳವಣಿಗೆ. ಆದರೆ ರಾಜ್ಯಪಾಲರ ಅನುಮೋದನೆಯ ನಂತರ ಜಾರಿಯಾಗುವ ಈ ಕಾನೂನಿನ ಮೇಲಿನ ಸಿಟ್ಟನ್ನು ಅಮಾಯಕ ರೋಗಿಗಳ ಮೇಲೆ ತೋರದಂತಾಗಲಿ, ಇದರಿಂದ ಸಕಲರಿಗೂ (ಖಾಸಗಿ / ಸರ್ಕಾರೀ) ಒಳಿತಾಗಲಿ ಎಂಬುದೇ ಸದ್ಯಕ್ಕೆ ಬಹುಜನರ ಆಶಯ.
Facebook ಕಾಮೆಂಟ್ಸ್