ಪ್ರೀತಿ- ಪ್ರೇಮ-ಅನುರಾಗ-ಅನುಬಂಧ: ಆಗ ತಾನೇ ಯವ್ವನದ ಹೊಸ್ತಿಲಲ್ಲಿ ಕಾಲಿಟ್ಟ ಹುಡುಗ(ಗಿ)ಯರ ಹದಿ ಹರೆಯದ ಮನದ ಕಾಮನೆಗಳು ಮೊಗ್ಗಾಗಿ ಚಿಗುರೊಡೆಯುವ ಕಾಲ. ಮಾಧ್ಯಮಿಕ ಶಾಲೆಯ ಕೊನೆಯ ಘಟ್ಟದಲ್ಲಿದ್ದಾಗ ಮೊಗ್ಗಾಗಿದ್ದ ಪ್ರೀತಿ ಪ್ರೇಮ, ಕಾಲೇಜ್’ನಲ್ಲಿ ಸುಂದರ ಪುಷ್ಪವಾಗಿ ಅರಳುವ ಕಾಲ, ಅರಿಯದ ಆಳಕ್ಕಿಳಿಯದಿದ್ದರು ಇದರ ಸುಳಿಯ ಸೆಳೆತಕ್ಕೆ ಸಿಲುಕದವರಿಲ್ಲ!! ಮೊಬೈಲ್ ಮತ್ತು ಅಂತರ್ಜಾಲ್’ರಹಿತ ಅಂದಿನ ಸಾ೦ಪ್ರದಾಯಿಕ (ಕನ್ಸ್’ರ್ವೆಟಿವ್) ಲೋಕದಲ್ಲಿ, ಇಷ್ಟವಾದ ಹುಡು(ಗ)ಗಿಯ ಕನಸನ್ನು ಫ್ಯಾಂಟಸಿಯ ಮಾಯಾ ಲೋಕದಲ್ಲಿ ವಿಹರಿಸಿ ಮೌನವಾಗಿಯೇ ಅನುಭವಿಸದವರಾರು? ತನಗಿಷ್ಟವಾದ ಹುಡು(ಗ)ಗಿಯರ ಭಾವ/ಭಂಗಿಗಳ ಮೋಹಕ ಚಿತ್ರಗಳನ್ನು ಕ೦ಗಳೆಂಬ ದೈವದತ್ತ ಕ್ಯಾಮೆರಾದಿ೦ದ ಮೆದುಳಿನ ಹಾರ್ಡ್ ಡಿಸ್ಕ್’ನಲ್ಲಿ ಏನೇ ಫಾರ್ಮ್ಯಾಟ್ ಮಾಡಿದರೂ ಅಳಿಯದಂತೆ ಅಚ್ಚಾಗಿಸಿ, ಬೇಕೆಂದಾಗ ಸ್ಮೃತಿಪಟಲದಿಂದ 4ಜಿ ಗಿಂತಲೂ ಹೆಚ್ಚಿನ ವೇಗದಿಂದ,ಉದ್ವೇಗದಿಂದ ಸಾಕ್ಷೀಕರಿಸುವ, ಸಮಾಜದ ಚೌಕಟ್ಟಿನ ಮರ್ಯಾದೆಗೆ ಸಿಲುಕಿ/ಗದರಿ ಮನಸಿನಲ್ಲಿಯೇ ಮಂಡಿಗೆ ತಿನ್ನುವ ಹೃದಯವಂತರು ಅಂದಿನ ವಿದ್ಯಾರ್ಥಿಗಳು. “ಪ್ರೀತಿ ನಾವು ಹುಡುಕುವ ವಿಷಯವಲ್ಲ, ಪ್ರೀತಿ ನಮ್ಮನ್ನು ಹುಡುಕಿಕೊಂಡು ಬರುತ್ತದೆ” ಎಂದು ನಂಬಿದವರು ಅಂದಿನ ವಿದ್ಯಾರ್ಥಿಗಳು. ಸಮಾಜಕ್ಕೆ ಸವಾಲೆಸೆದು ಕಟ್ಟಳೆಗಳನ್ನು ಮುರಿದು ಸಂಕೋಲೆಗಳನ್ನು ಬಿಡಿಸಿಕೊಂಡು ಭ್ರಮೆಗಳ ಬೆನ್ನೇರಿದ ಯುವಕ ಯುವತಿಯರ ಸಂಖ್ಯೆ ಕಡಿಮೆ.
ಇಂತಹ ವಾತಾವರಣದಲ್ಲಿ ಮದ್ಯಮ ವರ್ಗದ ಸಂಸ್ಕಾರವಂತ ಕುಟುಂಬದಲ್ಲಿ ಬೆಳೆದ ಶುದ್ಧ ನಿಷ್ಕಲ್ಮಶ ಮನಸ್ಸಿನ, ನಿರಹಂಕಾರಿ ಬುದ್ಧಿವಂತೆ ’ಪ್ರೀತಿ. ಶಾಲೆ-ಕಾಲೇಜಿನಲ್ಲಿ ಓದಿನಲ್ಲಿ ಯಾವಾಗಲು ಮುಂಚೂಣಿಯಲ್ಲಿದ್ದ ಅವಳ ಬುದ್ಧಿಮತ್ತೆಗೆ, ಸರಳತೆಗೆ, ಸೌಂದರ್ಯಕ್ಕೆ ಮನಸೋಲದವರಿರಲಿಲ್ಲ. ಕಾಲೇಜಿನಲ್ಲಿ ಕ್ಲಾಸಿನ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಪ್ರೀತಿಯನ್ನು ಇಷ್ಟಪಡದೇ ಇದ್ದವರಿಗೂ ಅವಳನ್ನು ನಿರ್ಲಕ್ಷಿಸುವದು ಸಾಧ್ಯವಿರಲಿಲ್ಲ. ಡಿ.ವಿ.ಜಿ.ಯವರ “ಘನ ತತ್ವವೊಂದಕ್ಕೆ ದಿನ ರಾತ್ರಿ ಮನಸೋತು, ನೆನೆಯದು ಇನ್ನೊಂದನು ಎಲ್ಲವನು ನೀಡುತ, ಅದರ ಅನುಸಂಧಿಯಲಿ ಜೀವಭಾರವನು ಮರೆಯುವದು- ಹನುಮಂತನ ಉಪದೇಶ ಮಂಕುತಿಮ್ಮ” ಕಗ್ಗವನ್ನು ಅಕ್ಷರಶಃ ಪಾಲಿಸುತ್ತಿದ್ದ ಪ್ರೀತಿಯ ಘನತತ್ವ ಕೇವಲ ವಿದ್ಯೆಯಾಗಿತ್ತು. ಕಾಲೇಜ್’ನ ಹಾಗೂ ಪಾಲಕರ ಕೀರ್ತಿಯ ಪತಾಕೆಯನ್ನು ದಿಗಂತಕ್ಕೆರಿಸುವ ಕೈಂಕರ್ಯಕ್ಕೆ ಪಣತೊಟ್ಟು, ತನ್ನ ಒಡಲಾಳದಲ್ಲಿ ಹುದುಗಿದ ಅಭಿಲಾಷೆಯ ತುಮುಲವನ್ನು ಯಾರೊಂದಿಗೂ ಹಂಚಿಕೊಳ್ಳದೆ ಜೀವಭಾರವನ್ನು ಮರೆತು ಸದಾ ಹಸನ್ಮುಖಿಯಾದ ‘ಪ್ರೀತಿ’, ಪ್ರೀತಿ ಪ್ರೇಮದ ವಿಷಯದಲ್ಲಿ ಅಂತರ್ಮುಖಿಯಾಗಿದ್ದಳು.
ಪ್ರೀತಿಯ ಜೀವನದಲ್ಲಿ ಘಟಿಸಿದ ಸ್ವಾರಸ್ಯಕರ ಘಟನೆಯೊಂದು ಅವಳ ಭಾವಾ೦ತರಂಗವನ್ನು ಸೋಕಿತ್ತು. ಒಂದು ದಿನ ಕಾಲೇಜಿನಲ್ಲಿ ಎಲ್ಲರ ಕಣ್ಮಣಿಯಾಗಿದ್ದ ಪ್ರೀತಿ ಹಲ್ಲು ನೋವೆಂದು ಡೆಂಟಿಸ್ಟ್’ನ್ನು ಕಾಣಲು ಅಮ್ಮನ ಒಪ್ಪಿಗೆ ಪಡೆದು ಆಪ್ತಸ್ನೇಹಿತೆಯಾದ ವಿದ್ಯಾಳೊಂದಿಗೆ ಡೆಂಟಲ್ ಕಾಲೇಜ್’ನತ್ತ ಹೆಜ್ಜೆ ಹಾಕಿದ್ದಳು. ಅದೃಷ್ಟವೋ.. ದುರಾದೃಷ್ಟವೋ… ಹಲ್ಲಿನ ವೈದ್ಯರು ಎರಡು ಘಂಟೆ ವಿಳಂಬವಾಗಿ ಬರುವರೆಂದು ತಿಳಿಯಿತು, ಇನ್ನೇನು ಸಮಯ ಕಳೆಯಲು ಹತ್ತಿರದ ಪಾರ್ಕ ಸೇರಿದ ಗೆಳತಿಯರು ಮಾತಿಗಿಳಿಯುತ್ತಾರೆ. ಅಲ್ಲಿಯೇ ತುಸು ದೂರದಲ್ಲಿ ಇನ್ನೊಬ್ಬ ಗೆಳತಿ ವೀಣಾಳನ್ನು ಕಂಡು ಉದ್ಗಾರ ತೆಗೆದು ಅವಳು ಅಲ್ಲಿ ಬಂದ ಕಾರಣ ತಿಳಿಯಬಯಸುತ್ತಾರೆ. ೮೦ರ ದಶಕದಲ್ಲಿ ಬೋಲ್ಡ್ ಎನ್ನಬಹುದಾದ ಮಾದಕ-ಮೋಹಕ ಸೌಂದರ್ಯದ, ಗುಂಗುರು ಮುಂಗುರುಳಿನ ಆಕರ್ಷಕ ಬೆಡಗಿ ವೀಣಾ, ಅಲ್ಲಿ ತನ್ನ ಇನಿಯನ ಬರುವಿಕೆಗಾಗಿ ಕಾದಿದ್ದಳು! ಅಂದಿನವರೆಗೂ ಇಂತಹ ವಿಷಯಗಳನ್ನರಿಯದ ಗೆಳತಿಯರ ಉದ್ವೇಗ ಮತ್ತು ಕುತೂಹಲ ಹೆಚ್ಚಿತ್ತು. ದಿಟ್ಟೆಯಾದ ವೀಣಾ ಪ್ರೇಮಿಗಳ ಭೇಟಿ ಮತ್ತು ಅಲ್ಲಿ ನಡೆಯುವ ಮಾತುಕತೆ, ಸರಸಸಲ್ಲಾಪಗಳ ವಿವರಣೆಗಳನ್ನು ಗೆಳತಿಯರ ಮುಂದೆ ಎಳೆ ಎಳೆಯಾಗಿ ಬಿಡಿಸಿಡುತ್ತಿದ್ದಳು.ಪ್ರೇಮಿಗಳಿಬ್ಬರು ಒಟ್ಟಾಗಿ ಸೇರಿದಾಗ ನಲ್ಲ ಅವಳ ಕುರಿತು “ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆ ಎಲೆ ಮೇಲೆ .ಪಂಚಮದಲ್ಲಿ ಹಾಡಿತು ಕೋಗಿಲೆ ಪ್ರೇಮಿಗೆ ಓರ್ವಳೆ ನಲ್ಲೆ….” ಎಂಬ ಮಧುರ ಮಂಜುಳಗಾನವನ್ನು ಹಾಡುವ ನೆಪದಲ್ಲಿ ಕೆನ್ನೆಗೆ ಚುಂಬಿಸಿದನ್ನು ನೆನೆದು ರಂಗಾಗಿದ್ದಳು!! ಇದನ್ನೆಲ್ಲ ಕುತೂಹಲದಿಂದ ಕೇಳಿ ರೋಮಾಂಚನಗೊಂಡ ಪ್ರೀತಿ ಮತ್ತು ವಿದ್ಯಾರ ಹೃದಯದ ತಂತಿಗಳು ಮೀಟಿದಂತಾಗಿ ಎದೆಯ ಬಡಿತ ಹೆಚ್ಚಾಗಿ ಹೊಸ ಆಸೆಗಳ ಕನಸಿನ ಲೋಕದ ಉದಯವಾಗಿತ್ತು. ಸ್ವಪ್ನ ಲೋಕದ ಪರಿಗಳಾಗಿ ವಿಹರಿಸುತ್ತಿದ್ದ ಗೆಳತಿಯರು ಹಿಂದಿನಿಂದ ಬಂದ ಅಪರಿಚಿತ ಗ೦ಡಸಿನ ಗಡಸು ಧ್ವನಿಯೊಂದನ್ನು ಕೇಳಿ ಅವಾಕ್ಕಾಗಿದ್ದರು. ಅಪರಿಚಿತ ವ್ಯಕ್ತಿಯು “ ಇಲ್ಲಿಯವರೆಗೂ ನೀವು ಆಡಿದ ಮಾತುಗಳನ್ನೆಲ್ಲ ನಾನು ಕೇಳಿರುವೆ … ಎಲ್ಲಿದೆ ನಿಮ್ಮ ಮನೆ? ನಿಮ್ಮ ಪಾಲಕರಿಗೆ ಇದನ್ನೆಲ್ಲ ತಿಳಿಸುವೆ” ಎಂದಾಗ, ಮೂವರು ಗೆಳತಿಯರು ಕಕ್ಕಾಬಿಕ್ಕಿಯಾಗಿ ದಿಕ್ಕು ತೋಚದೆ ಕಾಲಿಗೆ ಬುದ್ಧಿ ಹೇಳಿದರು. ಸುಮಾರು ದೂರ ಸಾಗಿ ತಮ್ಮ ಮನೆ ಕಡೆಗೆ ಹೋಗುವ ಬಸ್ಸೇರಿ …ಹಿಂದಿರುಗಿ ನೋಡಿ ಅಪರಿಚಿತ ವ್ಯಕ್ತಿ ಇಲ್ಲದಿರುವದನ್ನು ಖಾತ್ರಿ ಪಡಿಸಿಕೊಂಡು ನಿಟ್ಟುಸಿರುಬಿಟ್ಟರು. ಮುಂದೆಂದಿಗೂ ಸಾರ್ವಜನಿಕ ಸ್ಥಳಗಳಲ್ಲಿ ಗೌಪ್ಯ ಸಮಾಲೋಚನೆ ಹಾಗೂ ಖಾಸಗಿ ವಿಷಗಳ ಕುರಿತು ಚರ್ಚಿಸದಿರಲು ನಿಶ್ಚಯಿಸಿದರು!
ಪ್ರೀತಿಯ ಮುಗ್ಧತೆಗೆ ಕನ್ನಡಿಯಾದ ಘಟನೆಯೊಂದು ಜರುಗಿತ್ತು: ಮುಗ್ಧ ಯುವತಿ ಪ್ರೀತಿ ಒಂದು ದಿನ ತನ್ನ ಗೆಳತಿಯರೊಡಗೂಡಿ ವಿಹಾರಕ್ಕೆ ಹೊರಟಾಗ ಊರಿನ ಜನ ನಿಬಿಡ ರಸ್ತೆಯೊಂದರಲ್ಲಿ ೧೦೦ ರೂಪಾಯಿಯ ನೋಟೊಂದು ಅನಾಥವಾಗಿ ಬಿದ್ದಿತ್ತು! ಆಚೆ ಈಚೆ ನೋಡಿ ೧೦೦ರೂಪಾಯಿ ನೋಟನ್ನು ಎತ್ತಿಕೊಂಡ ಪ್ರೀತಿ ಅದರ ವಾರಸುದಾರರಿಗೆ ಮರಳಿಸಲು ಅಷ್ಟ ದಿಕ್ಕುಗಳಲ್ಲಿ ಕಣ್ಣಾಡಿಸಿದರೂ ಯಾರು ಕಾಣಲಿಲ್ಲ. ಕೊನೆಗೆ ಗೆಳತಿಯರು ೧೦೦ ರೂಪಾಯಿ೦ದ ಪಾರ್ಟಿ ಮಾಡೋಣವೆಂದು ತಗಾದೆ ತೆಗೆದರೂ, ಅವರ ಮಾತಿಗೆ ಕಿವಿಗೊಡದೆ ತಾನು ಬೆಳೆದುಬಂದ ಪರಿಸರ ಹಾಗೂ ಅಮ್ಮ ನೀಡಿದ ಸಂಸ್ಕಾರಗಳ ಪರಿಣಾಮದಿಂದ ತನ್ನದಲ್ಲದ ಪರಧನವನ್ನು ಮೊಜಿಗಾಗಿ ಬಳಸಲು ಪ್ರೀತಿಯ ಮನಸ್ಸು ಸರ್ವಥಾ ಒಪ್ಪಲಿಲ್ಲ. ಹಾಗಾದರೆ ಈ ದುಡ್ಡಿನ ಸದ್ವಿನಿಯೋಗ ಮಾಡುವುದಾದರು ಹೇಗೆ..? ತುಸುಕಾಲ ಯೋಚಿಸಿ ಕೊನೆಗೆ ಊರಿನ ಸಾ೦ಸ್ಕೃತಿಕ ಭವನದ ಮುಂದೆ ಕುಳಿತಿರುವ ಬಿಕ್ಷುಕನಿಗೆ ೧೦೦ರೂಪಾಯಿಯ ನೋಟನ್ನು ನೀಡುವುದಾಗಿ ನಿಶ್ಚಯಿಸಿ ಗೆಳತಿಯರೊಂದಿಗೆ ಕಲಾಭವನದತ್ತ ಹೆಜ್ಜೆ ಹಾಕಿದಳು ಪ್ರೀತಿ. ಊರಿನ ಹೃದಯಭಾಗವಾದ ಕಲಾಪ್ರೇಮಿಗಳ ಮಂದಿರದೆದರು ಹರಕು ತಟ್ಟಿನ ಮೇಲೆ ಮುರುಕು ಡಬ್ಬಿಯೊಂದನ್ನು ಹಿಡಿದು ನಾಲ್ಕಾಣೆ ಭಿಕ್ಷೆಗಾಗಿ ಅಂಗಲಾಚುತಿದ್ದ ವೃದ್ಧನ ಕಂಡು ಮರುಗಿದ ಪ್ರೀತಿ ೧೦೦ರೂಪಾಯಿಯ ನೋಟನ್ನು ವೃದ್ಧನ ಡಬ್ಬಿಗೆ ಹಾಕಿಬಿಟ್ಟಳು! ಜೀವನದಲ್ಲೇ ೧೦೦ ರೂಪಾಯಿಯ ನೋಟನ್ನು ಕಾಣದ ವೃದ್ಧ ಬಿಕ್ಷುಕ ಪ್ರೀತಿಯನ್ನೇ ದಿಟ್ಟಿಸುತ್ತಾ ಪಾದಗಳಿಗೆರಗಿದ, ಅನೇಕಬಾರಿ ಕೈ ಮುಗಿದು ನಮಸ್ಕರಿಸ ಹತ್ತಿದ. ಇದನ್ನು ದುರುಗುಟ್ಟಿ ನೋಡುತ್ತಿದ್ದ ಪಕ್ಕದಲ್ಲೇ ಕುಳಿತಿದ್ದ ಅನೇಕ ಬಿಕ್ಷುಕ ಬಿಕ್ಷುಕಿಯರು ಪ್ರೀತಿ ಹಾಗೂ ಗೆಳತಿಯರನ್ನು ಸುತ್ತುವರೆದು ಹಣಕ್ಕಾಗಿ ಪೀಡಿಸತೊಡಗಿದರು. ಮುಗ್ಧೆ ಪ್ರೀತಿ ಗಲಿಬಿಲಿಗೊಂಡು ಗಾಬರಿಯಾಗಿ ಸಹಾಯಕ್ಕಾಗಿ ಅ೦ಗಲಾಚಿದ್ದಳು, ಅದೇ ಸ್ಥಳದಲ್ಲಿದ್ದ ವಿಷಯತಿಳಿದ ಕೆಲ ಹಿರಿಯರು ಬಿಕ್ಷುಕರನ್ನು ಗದರಿಸಿ ಪ್ರೀತಿ ಹಾಗೂ ಗೆಳತಿಯರನ್ನು ಅನಿರೀಕ್ಷಿತ ಸಂಕಷ್ಟದಿಂದ ಪಾರು ಮಾಡಿದ್ದರು. ಮನೆ ಸೇರಿದ ಪ್ರೀತಿ ೧೦೦ ರೂಪಾಯಿಯ ವೃತ್ತಾಂತವನ್ನು ತಾಯಿಗೆ ವಿವರಿಸಿದಾಗ, ಮಗಳ ಮುಗ್ಧತೆಗೆ ನಕ್ಕು ತನ್ನದಲ್ಲದ ಧನವನ್ನು ಬಿಕ್ಷುಕನಿಗೆ ನೀಡಿದ್ದಕ್ಕೆ ಹೆಮ್ಮೆ ಪಟ್ಟರು. ಹಾಗೆ ಬಿಕ್ಷುಕರಿಗೆ ಎಷ್ಟು ಹಣವನ್ನು ನೀಡಬೇಕೆಂಬುದರ ಕುರಿತು ತಿಳುವಳಿಕೆ ನೀಡಿದರು.
ಪ್ರೀತಿಯ ಮನಸಿನಲ್ಲಿದ್ದ ಕನಸುಗಳು ಜೀವತುಂಬಿ ರೆಕ್ಕೆ ಬಿಚ್ಚಿ ಭಾವನೆಗಳಾಗಿ ಅಭಿವ್ಯಕ್ತವಾಗುವ ಮುನ್ನವೇ ಅವಳ ಮದುವೆ ನಿಶ್ಚಯವಾಯಿತು…. ಪ್ರೀತಿಯ ಕಲ್ಪನಾಲೋಕದಲ್ಲಿ ಸ್ವಚ್ಛಂದವಾಗಿ ವಿಹರಿಸುವ ಅವಕಾಶದಿಂದ ವಂಚಿತಳಾಗಿ ಅವಳ ಬಾಳಿನ ಕನಸುಗಳು ಮನಸ್ಸೆಂಬ ಹಕ್ಕಿಯ ಗೂಡಿನಲ್ಲಿಯೇ ಉಳಿದವು. ಪ್ರೀತಿ ಸಂಸಾರದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಾ ತನ್ನ ಜೀವನದ ಹಳೆಯ ಮಧುರ ಕ್ಷಣಗಳನ್ನು ನೆನೆಯುತ್ತಾ ಹೊಸದನ್ನು ಸವಿಯುತ್ತಾ ಹಾಯಾಗಿದ್ದಳು.
ಭಗವಂತ ಎಲ್ಲರಿಗೂ ಪ್ರೀತಿಸಿದವರ/ಬಯಸಿದವರ ಜೊತೆ ಬದುಕುವ ಅದೃಷ್ಟವನ್ನು ದಯಪಾಲಿಸುವುದಿಲ್ಲ…. ಕೆಲವೊಮ್ಮೆ ಹಾಗೆ ಬದುಕಿದ ಜೋಡಿಗಳೆಲ್ಲ ಸ್ವರ್ಗದ ಬಾಗಿಲನ್ನೂ ತಟ್ಟುವುದಿಲ್ಲ! ಯಾರಾದರೂ ನಮ್ಮನ್ನು ಆಳವಾಗಿ ಪ್ರೀತಿಸಿದರೆ ಅದು ನಮಗೆ ಶಕ್ತಿಯಾಗುತ್ತದೆ ಆದರೆ ನಾವು ಯಾರನ್ನಾದರೂ ಆಳವಾಗಿ ಪ್ರೀತಿಸಿದರೆ ಅದು ನಮಗೆ ಧೈರ್ಯ ನೀಡುತ್ತದೆ. ಅದಿರಲಿ ಜಗಕ್ಕಲ್ಲಾ, ಲೋಕಕ್ಕಲ್ಲ, ಮನೆ-ಮಂದಿಗೂ ಹೆದರದೇ ಆತ್ಮಸಾಕ್ಷಿಗೆ ಓಗೊಟ್ಟು, ಇಲ್ಲದ್ದನ್ನು/ಬಲ್ಲದ್ದನ್ನು ಪಡೆದುಕೊಳ್ಳುವ ಧಾವಂತದಲ್ಲಿ, ಇದದ್ದನ್ನು ಕಳೆದುಕೊಳ್ಳುವ ಭೀತಿಯನ್ನು ಮೀರಿ ಪ್ರೀತಿಯನ್ನು ವ್ಯಕ್ತಪಡಿಸಲಿಕ್ಕೆ ಎಲ್ಲರಿಂದ ಸಾಧ್ಯವಿಲ್ಲ. ಸ್ನೇಹಿತೆಯೊರ್ವಳ ವಿರಹ ಗೀತೆಯ ಕಥೆ ಕೇಳಿ, ನೀರಿನ ಮೇಲೆ ಕಲ್ಲೆಸದಾಗ ಏಳುವ ಅಲೆಗಳ ಗುಳ್ಳೆಯಂತೆ ಕೆಲ ಕ್ಷಣ ವಿಚಲಿತವಾದ ಪ್ರೀತಿಯ ಮನಸ್ಸು ಮತ್ತೆ ಸಹಜ ಸ್ಥಿತಿಗೆ ಮರಳಿ ಸಂಸಾರದ ವಾಸ್ತವಿಕತೆಯ ಹೊರತಾಗಿಯೂ ಪ್ರೀತಿ-ಪ್ರೇಮ-ಪ್ರಣಯದ ಭಾವನಾಲೋಕದ ಕಡೆ ಪಯಣಿಸಿತ್ತು!!!
Facebook ಕಾಮೆಂಟ್ಸ್