X

ಕತ್ತರಿಸುವವರು ಕಣ್ಣೀರು ಹಾಕಲಿ ಎಂದು ವರ ಕೇಳಿದೆಯೆ ಈರುಳ್ಳಿ?

ಕೇಳೋದೆಲ್ಲಾ ತಮಾಷೆಗಾಗಿ – 2

 

ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುವುದು ಏಕೆ?

ಬುದ್ಧಿವಂತನಿಗೆ ಮೂರು ಕಡೆ ಎಂಬ ಜನಪದ ಕತೆ ನೀವು ಕೇಳಿರಬಹುದು. ಕಳ್ಳನೊಬ್ಬ ಹೋಗಿ ಹೋಗಿ ಒಂದು ಈರುಳ್ಳಿ ಮಂಡಿಯಿಂದ ಗೋಣಿಚೀಲದಷ್ಟು ಈರುಳ್ಳಿ ಕದ್ದನಂತೆ. ಕದ್ದವನು ಸಿಕ್ಕಿಬೀಳದೇ ಇರುತ್ತಾನೆಯೇ? ಸಿಕ್ಕಿಬಿದ್ದ. ಅವನನ್ನು ಕದ್ದ ಮಾಲಿನ ಸಮೇತ ರಾಜರ ಸಮ್ಮುಖಕ್ಕೆ ತರಲಾಯಿತು. ರಾಜರು ತೀರ್ಪು ಕೊಟ್ಟರು. ಮಾಡಿರುವ ತಪ್ಪಿಗೆ, ಕಳ್ಳ ಒಂದೋ ತಾನು ಕದ್ದಿರುವ ಎಲ್ಲ ಈರುಳ್ಳಿಯನ್ನೂ ತಿನ್ನಬೇಕು; ಇಲ್ಲವೇ ಛಡಿಯೇಟಿನ ಶಿಕ್ಷೆ ಅನುಭವಿಸಬೇಕು, ಅಥವಾ ಹೇಳಿದಷ್ಟು ದಂಡ ಕಟ್ಟಿ ತೆರಳಬೇಕು. ಬುದ್ಧಿವಂತ ಕಳ್ಳ ಈರುಳ್ಳಿ ತಿನ್ನುವೆ ಎಂದ. ಮೂರ್ನಾಲ್ಕು ಈರುಳ್ಳಿ ತಿನ್ನುವಷ್ಟರಲ್ಲಿ ಬಾಯಿ, ಕಣ್ಣು ಎರಡೂ ಕನ್ನಂಬಾಡಿ ಕಟ್ಟೆಯಾದವು. ಇದಾಗದು, ಛಡಿಯೇಟಿನ ಶಿಕ್ಷೆ ಅನುಭವಿಸುತ್ತೇನೆ ಎಂದ. ಅದೂ ನಾಲ್ಕೈದು ಬೀಳುವಷ್ಟರಲ್ಲಿ ನೀರಿಳಿಯುತ್ತಿದ್ದ ಕಣ್ಣಗುಡ್ಡೆಗಳು ಜಾರಿ ಹೊರಬೀಳುವಂತಾಯಿತು. ಇದೂ ಆಗದು, ಹೇಳಿದಷ್ಟು ದಂಡ ಕಟ್ಟುತ್ತೇನೆ ಎಂದ. ದಂಡ ಕಟ್ಟಿ, ಆಸ್ಥಾನದಿಂದ ಹೊರಬಿದ್ದ.

ಈ ಕತೆಯ ನೀತಿ ಏನೇ ಇರಲಿ, ಹಿಂದಿನ ಕಾಲದಲ್ಲೂ ಈರುಳ್ಳಿ ಕಳ್ಳರು ಇದ್ದರು ಎಂಬುದನ್ನು ಇದು ಸಾರುವಂತಿದೆ. ಈರುಳ್ಳಿ, ಕೆಲವೊಮ್ಮೆ ಮಂಡಿಗೆ ಕನ್ನ ಕೊರೆದು ಕದಿಯುವುದು ಕೂಡ ಲಾಭಕರ ಎನ್ನುವಷ್ಟು ದುಬಾರಿಯಾಗುವುದುಂಟು. ಆಗ, ಅಂಥ ದುಬಾರಿ ಈರುಳ್ಳಿಯನ್ನು ಕೊಂಡು ಮನೆಗೆ ತಂದು ಆಮ್ಲೆಟ್ ಅಥವಾ ಸಾಂಬಾರಿಗಾಗಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುವುದು ಸಹಜ. ಆದರೆ ಮೇಲಿನ ಪ್ರಶ್ನೆ ಅಂಥ ಸಾಂದರ್ಭಿಕ ಕಣ್ಣೀರಿನ ಬಗ್ಗೆ ಅಲ್ಲ, ಸಾರ್ವಕಾಲಿಕ ಕಣ್ಣೀರಿಗೆ ಸಂಬಂಧಿಸಿದೆ. ಈರುಳ್ಳಿಯನ್ನು ವರ್ಷದ ಯಾವ ಸಮಯದಲ್ಲಿ ಕತ್ತರಿಸಿದರೂ ನಮಗೆ ಕಣ್ಣೀರು ಬರುತ್ತಲ್ಲ, ಯಾಕೆ? ಎಂಬುದು ಪ್ರಶ್ನೆ. ಇದು ಕೇವಲ ರಾಸಾಯನಿಕಗಳ ಆಟವಲ್ಲದೆ ಬೇರೇನಲ್ಲ. ತುಂಬ ಸರಳವಾಗಿ ಹೇಳಬೇಕೆಂದರೆ ಈರುಳ್ಳಿಯಲ್ಲಿರುವ ಕೆಲವು ರಾಸಾಯನಿಕಗಳು, ಅದನ್ನು ಕತ್ತರಿಸಿದಾಗ ಹೊರ ಬರುತ್ತವೆ. ಈರುಳ್ಳಿಯಲ್ಲಿರುವ ಒಂದು ಬಗೆಯ ಕಿಣ್ವ, ಹೀಗೆ ಬಿಡುಗಡೆಯಾದ ರಾಸಾಯನಿಕವನ್ನು ಸಲ್ಫೇನಿಕ್ ಆಸಿಡ್ ಎಂಬ ರಾಸಾಯನಿಕವಾಗಿ ಪರಿವರ್ತಿಸುತ್ತದೆ. ಅದು ಬಹುಬೇಗ ತನ್ನ ಸ್ವರೂಪ ಬದಲಾಯಿಸಿ ಒಂದು ಅನಿಲವಾಗಿ ಮಾರ್ಪಡುತ್ತದೆ. ಆ ಅನಿಲ ನಮ್ಮ ಕಣ್ಣಿನ ಮೇಲ್ಪದರಲ್ಲಿರುವ ನೀರಿನ ಅಂಶಕ್ಕೆ ತಾಗಿದ್ದೇ ತಡ, ಮತ್ತೆ ರಾಸಾಯನಿಕ ಕ್ರಿಯೆ ನಡೆದು ಸಲ್ಫ್ಯೂರಿಕ್ ಆಸಿಡ್ ಬಿಡುಗಡೆಯಾಗುತ್ತದೆ. ಆಸಿಡ್ ಎಂದ ಮೇಲೆ ಕೇಳಬೇಕೆ? ಉರಿ ಮಾಮೂಲು. ಕಣ್ಣಿನ ನರವ್ಯೂಹವು ಆ ಕೂಡಲೇ ಮಿದುಳಿಗೆ ಸಂಜ್ಞೆ ಕಳಿಸಿ ನೀರು ಹರಿಸಲು ಕೋರಿಕೆ ಸಲ್ಲಿಸುತ್ತದೆ. ಕಣ್ಣಿನ ಮೇಲೆ ಯಾವ ಬಗೆಯ ಹೊರ ವಸ್ತುಗಳು ದಾಳಿ ಮಾಡಿದರೂ ಧಾರಾಕಾರ ಕಣ್ಣೀರು ಹರಿಸುವುದು ದೇಹದ ರಕ್ಷಣಾ ತಂತ್ರಗಳಲ್ಲೊಂದು (ಮನುಷ್ಯರಿಗೆ ಮೂರು ಬಗೆಯ ಕಣ್ಣೀರುಗಳಿವೆ. ಅವುಗಳ ಪೈಕಿ, ರಕ್ಷಣಾ ತಂತ್ರವಾಗಿ ಬಳಕೆಯಾಗುವುದು “ರಿಫ್ಲೆಕ್ಸ್ ಕಣ್ಣೀರು”). ಹಾಗಾಗಿ, ಆಸಿಡ್ ದಾಳಿಯಾದ ಕಣ್ಣಿಗೆ ದೇಹದ ರಕ್ಷಣಾ ವ್ಯವಸ್ಥೆ ನೀರಿನ ಸರಬರಾಜು ಮಾಡಿ ಶುದ್ಧೀಕರಣದ ಕೆಲಸಕ್ಕೆ ಚಾಲನೆ ಕೊಡುತ್ತದೆ. ಇಷ್ಟೆಲ್ಲ ಸಂಕೀರ್ಣ ಕೆಲಸಗಳು ಚಕಾಚಕ್ ನಡೆಯುವುದರಿಂದಲೇ ನಮಗೆ ಈರುಳ್ಳಿಗೆ ಚಾಕು ಇಟ್ಟೊಡನೆ ಕಣ್ಣೀರು ಬಳಬಳ ಹರಿಯತೊಡಗುವುದು!

 

ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರದಂತೆ ಮಾಡಬೇಕೆ? ಬಾಯಲ್ಲಿ ಚ್ಯೂಯಿಂಗ್ ಗಮ್ ಇಟ್ಟು ಜಗಿಯುತ್ತಿರಿ – ಎಂಬ ಸಲಹೆಯನ್ನು ನೀವು ನೋಡಿರಬಹುದು. ಜಗಿಯುವ ಗಮ್ಮಿಗೂ ಈರುಳ್ಳಿಯ ಕಣ್ಣೀರಿಗೂ ನೇರ ಸಂಬಂಧ ಏನೂ ಇಲ್ಲ. ಇನ್ನು ಕೆಲವರು, ಹರಿತವಾದ ಚಾಕು ಬಳಸಿ. ಈರುಳ್ಳಿಯನ್ನು ಚಕಚಕನೆ ಕಣ್‍ಮಿಟುಕಿಸುವಷ್ಟರಲ್ಲಿ ಕತ್ತರಿಸಿ ಎಸೆಯಿರಿ. ಆಗ ಕಣ್ಣೀರು ಬರದು ಎಂಬ ಬಿಟ್ಟಿ ಸಲಹೆ ಕೊಡುತ್ತಾರೆ. ಹಾಗೆ ಸೂಪರ್ ಫಾಸ್ಟ್ ಆಗಿ ಕತ್ತರಿಸಲು ಹೋಗಿ ಈರುಳ್ಳಿಯ ಬದಲು ಬೆರಳು ಕುಯ್ದರೆ ಕಣ್ಣಲ್ಲಿ ನೀರಿನ ಜೊತೆ ಕೊಯ್ದ ಬೆರಳಿಂದ ನೆತ್ತರೂ ಧಾರಾಕಾರ ಹರಿದೀತು. ಹಾಗಾಗಿ ಬೆರಳಿಗೆ ತುಟ್ಟಿಯಾಗುವ ಈ ಬಿಟ್ಟಿ ಸಲಹೆಯಿಂದ ದೂರ ಇರುವುದು ಒಳ್ಳೆಯದು. ಕಣ್ಣೀರು ಬರದಂತೆ ಈರುಳ್ಳಿ ಕುಯ್ಯಲು ಒಂದು ಸುಲಭ ಉಪಾಯ – ಅದನ್ನು ಕತ್ತರಿಸುವ ಸಮಯದಲ್ಲಿ ನಾಲಗೆಯನ್ನು ತುಟಿಗಳಿಂದ ಈಚೆ ತಂದು ಆಡಿಸುತ್ತಿರಿ. ಈರುಳ್ಳಿಯಿಂದ ಬಿಡುಗಡೆಯಾದ ಅನಿಲ ಕಣ್ಣಿನಾಚೆ ಹೋಗುವ ಮೊದಲೇ ನಾಲಗೆಯ ತೇವಾಂಶಕ್ಕೆ ಸಿಕ್ಕಿ ಅಲ್ಲೇ ಆಸಿಡ್ ಅನ್ನು ಸೃಷ್ಟಿಸುವುದರಿಂದ ಕಣ್ಣೀರ ಕೋಡಿಯಿಂದ ತಪ್ಪಿಸಿಕೊಳ್ಳಬಹುದು. ನಾಲಗೆಯಲ್ಲಿ ಆಸಿಡ್ ವಿಷವೇರಿ ಸತ್ತರೆ? ಭಯ ಬೇಡ, ಅಂಥ ಅಪಾಯವೇನಿಲ್ಲ! ಹಾಗೆಯೇ, ಕತ್ತರಿಸುವ ಹತ್ತು-ಹದಿನೈದು ನಿಮಿಷ ಈರುಳ್ಳಿಯನ್ನು ಫ್ರಿಜ್‍ನಲ್ಲಿಟ್ಟರೆ (ಅಥವಾ ಫ್ರೀಜರ್‍ನಲ್ಲಿಟ್ಟರೆ), ಕತ್ತರಿಸುವ ಸಮಯದಲ್ಲಿ ಅದರ ರಾಸಾಯನಿಕ ಕ್ರಿಯೆಗಳು ನಡೆಯುವುದು ನಿಧಾನವಾಗುತ್ತದೆ. ಈರುಳ್ಳಿಯನ್ನು ನಾಲ್ಕು ದೊಡ್ಡ ತುಂಡುಗಳಾಗಿ ಕತ್ತರಿಸಿ ಒಂದಷ್ಟು ಹೊತ್ತು ನೀರಲ್ಲಿ ನೆನೆಸಿಡುವುದು ಕೂಡ ಒಳ್ಳೆಯದು.

 

ಎಲ್ಲಕ್ಕಿಂತ ಸರಳ ವಿಧಾನ ಎಂದರೆ, ಈರುಳ್ಳಿ ಕತ್ತರಿಸುವ ಜವಾಬ್ದಾರಿ ನಿಮಗೆ ಬಂದಾಗ ಮೊದಲು ಈರುಳ್ಳಿಯನ್ನು ಕೈಗೆತ್ತಿಕೊಳ್ಳಿ. ನಂತರ ಚಾಕುವನ್ನು ಕೈಗೆತ್ತಿಕೊಳ್ಳಿ. ನಂತರ ಇವೆರಡನ್ನೂ ಅತ್ಯಂತ ವಿಧೇಯತೆ ಮತ್ತು ಪ್ರೀತಿಯಿಂದ ನಿಮ್ಮ ಹೆಂಡತಿಗೆ ಕೊಡಿ!

ಜೋಕ್ ಕತ್ತರಿಸಿ ನಗುವಿನ ಕಣ್ಣೀರು ಉಕ್ಕಿಸಿದವರು:

ಮದುವೆಯಾದ ಮೇಲೂ ಒಗ್ಗರಣೆ ಹಾಕೋದು ತಪ್ಪಿಲ್ವಲ್ಲಾ ದೇವ್ರೆ ಅಂತ.

– ಆರ್.ವಿ. ಮೂರ್ತಿ, ಮೈಸೂರು

ಕೆಲವರಿಗೆ ನೀರು ಬರುತ್ತೆ, ಇನ್ನು ಕೆಲವರಿಗೆ ಮೋದಿ ನೆನಪು ಬರುತ್ತೆ.

– ಪ್ರವೀಣ್ ತಾಂಬೆ

ಪ್ರೀತಿಯಿಂದ ತಂದ ಮುದ್ದು ಗುಂಡಗಿನ ಈರುಳ್ಳಿಯನ್ನು ಅಮಾನುಷವಾಗಿ ಕತ್ತರಿಸುತ್ತಿದ್ದೇವಲ್ಲಾ ಎಂಬ ಪಾಪ ಪ್ರಜ್ಞೆ ನಮಗೆ ಕಣ್ಣೀರು ತರಿಸುತ್ತದೆ.

– ಶಶಿಕಿರಣ್ ಅನೇಕರ್

ಜೀವುದ್ ಗೆಳೇರಾಗಿದ್ ಈರುಳ್ಳೇನೂ ಅಸೇಮೆಂಚಿಂಕಾಯ್ನೂ ವಟ್ಕಿಚ್ಚಿನ್ ಮನ್ಸ ಒಂದ್ಕಿತ ಐನಾತಿ ಪಿಳಾನ್ ಮಾಡಿ ಮೋಸ ಮಾಡುದ್ನಂತೆ. ಅದ್ಕೇಯ ಅವೆಳ್ಡೂ ಮಾತಾಡ್ಕ್ಯಂಡ್ವಂತೆ – ನಿನ್ನುನ್ ಎಚ್ದಾಗ ಕಣ್ಣಾಗ್ ನೀರ್ ಬರ್ಸು, ನನ್ನುನ್ ಕಚ್ದಾಗ ಕಣ್ಮೂಗ್ನಾಗ್ ನೀರ್ ಸುರ್ಸಂಗ್ ಮಾಡಣ ಅಂತ.

– ಸುಮಾ ಆರಾಧ್ಯ

ಈರುಳ್ಳಿ ತರುವಾಗ ಗಂಡಸರು ಅಳ್ತಾರೆ. ಅದನ್ನು ಕತ್ತರಿಸುವಾಗ ಹೆಂಗಸರು ಅಳಲಿ ಅಂತ ಸೃಷ್ಟಿ ನಿಯಮ.

– ಶಿವಲಿಂಗೇಗೌಡ ನೆಟ್ಟೆಕೆರೆ

ಅದರ ಹೆಸರೇ ನೀರುಳ್ಳಿ. ಹಾಗಾಗಿ ನೀರು ಉರುಳಿ ಉರುಳಿ ಬರುತ್ತದೆ.

– ಶ್ರೀಕಾಂತ ಎನ್.

ಈರುಳ್ಳಿ ದರವನ್ನು ನೆನೆದರೆ ಅದನ್ನು ಹೆಚ್ಚುವಾಗ ಕಣ್ಣೀರು ಬರುತ್ತದೆ ಕಣ್ರಿ. ದರ ಏರಿದಾಗ ಗ್ರಾಹಕರ ಕಣ್ಣೀರು, ದರ ಇಳಿದಾಗ ರೈತರ ಕಣ್ಣೀರು.

– ಗಿರೀಶ್ ಹೆಗ್ಡೆ

ಸೀರೆ ಉಟ್ಟಿರುವುದರಿಂದ ಈರುಳ್ಳಿ ಖಂಡಿತ ಹೆಂಗಸಾಗಿರಬೇಕು. ನೋಯಿಸಿದರೆ ಕಣ್ಣೀರು ಬರದೇ ಇರುತ್ತದೆಯೇ?

– ಶ್ರೀಧರ್ ಗೌಡ

ಪುಣ್ಯಕ್ಕೆ ಎರಡು ಕಣ್ಣಲ್ಲೂ ನೀರು ಬರುತ್ತೆ. ಎಡಗಣ್ಣಲ್ಲಿ ಮಾತ್ರ ಬಂದಿದ್ದರೆ ಎಡಪಂಥೀಯರು ಇದಕ್ಕೂ ಮೋದೀನೇ ಕಾರಣ ಅಂದಿರೋರು.

– ಪ್ರತಾಪ್ ಎನ್.

ನನ್ನ ಮಗ ಕೊಟ್ಟ ಸಲಹೆ: ಕತ್ತರಿಸುವ ಮುನ್ನ ಸ್ಸಾರಿ ಕೇಳಬೇಕು!

– ಮಹೇಶ್ ಕುಮಾರ್

ಕಣ್ಣೀರು ಮಾತ್ರ ಅಲ್ಲ, ಮೂಗ್ನೀರೂ ಬರುತ್ತೆ!

– ಪಿ.ಜೆ. ರಾಘವೇಂದ್ರ, ಮೈಸೂರು

ಎಷ್ಟೋ ಮಹಿಳೆಯರಿಗೆ ಕೆಲವೊಮ್ಮೆ ಈರುಳ್ಳಿ ತಾಯಿಯಂತೆ ಸಮಾಧಾನಿಸುತ್ತದೆ. ತಮ್ಮ ಒಡಲಾಳದ ನೋವನ್ನು ನುಂಗಲಾರದ ಹೊರಹಾಕಲಾರದ ಸಂದರ್ಭದಲ್ಲಿ ಮೌನವಾಗಿ ಕಣ್ಣಿಂದ ಹೊರಹಾಕಿಸಿ ಬಿಡುತ್ತದೆ.

– ಮಂಜುಳಾ ಕುಡ್ಪಿ

ಅಡುಗೆಗೆ ಬಳಸಿದಾಗ ಬಾಯಲ್ಲೂ ನೀರು ಬರುತ್ತೆ ಬಿಡಿ.

– ರಜನಿ ಪ್ರಶಾಂತ್

Facebook ಕಾಮೆಂಟ್ಸ್

Rohith Chakratheertha: ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.
Related Post