ಎವರ್'ಗ್ರೀನ್

  ಮದುಮಗನ ಮದುವೆ..

ಹುಡುಗ ಈ ಬಾರಿ ಮದುವೆ ಆಗುತ್ತಿದ್ದಾನಂತೆ. ಮೊದಲ ವರ್ಷ ಮನೆ, ಕಳೆದ  ವರ್ಷ ಕಾರು ತೆಗೆದುಕೊಂಡ ಆತನಿಗೆ ಪ್ರಸ್ತುತ ವರ್ಷ ಮಾಡಲು ಬೇರೇನೂ ಕ್ಯಾಮೆ ಇಲ್ಲದ ಕಾರಣ ಅವರ ಪೋಷಕಪೂಜ್ಯರು ಈ ಬಾರಿ ಮದುವೆ ಮಾಡಿಕೊಳ್ಳುವ ಆರ್ಡರ್ ಅನ್ನು ಜಾರಿಗೆ ತಂದಿದ್ದಾರಂತೆ. ದೇಶದ ರಾಜಧಾನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ವರ್ಷಕ್ಕೊಮ್ಮೆ ಅಥವಾ ಎರಡು ಸಾರಿ (ಆದೂ ದೀಪಾವಳಿ ಹಬ್ಬದ ಇನ್ಕ್ರಿಮೆಂಟ್ ಸಿಕ್ಕರೆ ಮಾತ್ರ) ಮನೆಗೆ ಬಂದೊಗುವ ಅಮಾಯಕನಿಗೆ ಬಂದಾಗಲೆಲ್ಲ ಒಂದಲ್ಲೊಂದು ಪ್ರಾಜೆಕ್ಟ್’ಗಳನ್ನು ನೀಡಿ ಅದನ್ನು ಪೂರ್ಣಗೊಳಿಸಿಕೊಂಡೆಯೇ ತೀರುತ್ತಿದ್ದರು ಆತನ ಪೋಷಕರು. ಈ ವರುಷದ ಮದುವೆಯ ನಂತರ ಮುಂದಿನ ವರ್ಷ ಅದೇನು ಕೇಳುವರೋ/ಹೇಳುವರೋ ಎಂಬುದೇ ಎಂದು ಪ್ರಸ್ತುತ ಸುತ್ತಮುತ್ತಲಿನೆಲ್ಲರಿಗೂ ಕಾಡುತ್ತಿರುವ ಏಕೈಕ ಪ್ರಶ್ನೆ. ಹೆತ್ತವರು ಕೇಳಿದಕ್ಕೆಲ್ಲ ಕೋಲೆ ಬಸವನಂತೆ ತಲೆಯಾಡಿಸುವ ಮದುಮಗ ತನ್ನ ಫ್ಯೂಚರ್ ಹೆಂಡತಿಯೊಟ್ಟಿಗೆ ಅದೇಗೆ ಜೀವನದ ಬಂಡಿಯನ್ನು ಸವೆಸುತ್ತಾನೋ ಕಾದು ನೋಡಿ ಆನಂದ ಪಡಬೇಕು ಎಂದು ಕೆಲವರು ಘಳಿಗೆ ನೋಡುತ್ತಿದ್ದರು!!

ಹೇಳಿದ ದಿನಕ್ಕಿಂತ ಒಂದು ದಿನ ಮುಂಚೆಯೇ ಬಂದಿಳಿದ ಮಗನನ್ನು ಕಂಡು ಪೋಷಕರಿಂದಿಡಿದು ಮದುವೆಗೆ ಜಮಾವಣೆಗೊಂಡಿದ್ದ ನೆಂಟರಾದಿಗಳಿಗೂ ಅಂದು ಸಂತಸ. ಮದುವೆಗೆ ಇನ್ನು ಮೂರು ವಾರಗಳಿವೆ. ಮದುವೆಯ ಆಡಳಿತದ ಅಧಿಕಾರ ಅಪ್ಪನೊಬ್ಬನಿಗೆ ಮಾತ್ರ ಇದ್ದಿದ್ದರಿಂದ ಮದುಮಗ ನಿರಾಳ. ಮನೆಯ ಬಣ್ಣದಿಂದಿಂದಿಡು ಮದುಮಗನ ಒಳ ಉಡುಪುಗಳ ಆಯ್ಕೆಗೂ ಅಪ್ಪನ ಇಂಗಿತವೇ ಬೇಕಿದ್ದಿತು. ಆದ ಕಾರಣ ಮದುವೆ ಮನೆಯ ಕೆಲಸ ಕಾರ್ಯಗಳ ಕಳ್ಳ ನೆಪವನ್ನು ಒಡ್ಡಿ ಮೂರು ವಾರದ ಮುಂಚೆಯೇ ತಮ್ಮ ಕ್ಯಾಂಪ್ ಅನ್ನು ತೆರೆದಿದ್ದ ಮದುಮಗನ ಸೋದರಸಂಬಂಧಿಗಳು ಹಾಡು, ಹರಟೆ, ಇಸ್ಪೀಟು, ಡ್ರಿಂಕು ಎನ್ನುತ್ತಾ ತಮ್ಮ ಮನೋರಂಜನೆಯ ಅಡ್ಡವನ್ನಾಗಿ ಮನೆಯನ್ನು ಮಾಡಿಕೊಂಡಿದ್ದರು. ಏನೇ ಹೇಳಿದರು ದೊಡ್ಡಪ್ಪನಿಗೆ ಹೇಳಿಎನ್ನುತ್ತಾ ಅಲೆಮಾರಿಗಳಂತೆ ಮನೆಯೊಳಗೇ ಅಡ್ಡಾಡಿಕೊಂಡು ಇದ್ದರು. ಮದುಮಗ ಬಂದು ಎಲ್ಲರನ್ನು ಮಾತಾಡಿಸಿ ತನ್ನ ಲಗೇಜುಗಳ ಸಮೇತ ಆತನ ರೂಮಿನೊಳಗೆ ಹೋಗುವುದನ್ನೇ ಕಾಯುತ್ತಿದ್ದ ಈ ಪಡೆ, ಆತನನ್ನೇ ಹಿಂಬಾಲಿಸುತ್ತ ರೂಮಿನ ಒಳಹೊಕ್ಕು, ಬಾಗಿಲನ್ನು ಮುಚ್ಚಿ,  ಹಸಿದ ಪ್ರಾಣಿಗಳಂತೆ ಕ್ಷಣಾರ್ಧದಲ್ಲಿ ಆತನ ಲಗೇಜಿನ ಮೇಲೆ ಮುಗಿಬಿದ್ದವು. ಕೆಲನಿಮಿಷಗಳ ಹುಡುಕಾಟದ ನಂತರವೂ ತಾವು ಬಯಸಿದ್ದು ಸಿಗದಿದ್ದಾಗ ಹ್ಯಾಪೆ ಮೊರೆಯನ್ನು ಹಾಕಿಕೊಂಡು ಒಂದೊಂದಾಗೆ ಜಾಗ ಕಿತ್ತವು. ಆದರೆ ಸಂಜೆ ಯಾರಿಗೂ ತಿಳಿಯದಂತೆ ಕಿಡ್ನಾಪ್ ಮಾಡಿಯಾದರೂ ಸರಿಯೇ ಊರಿನ ಬಾರಿಗೆ ತನ್ನನ್ನು ಎತ್ತಾಕಿಕೊಂಡು ಹೋಗಿ ನಾಲ್ಕು ನಾಲ್ಕು ಪೆಗ್ ಗಳನ್ನು ಗಂಟಲಿನೊಳಗೆ ಗಟಗಟ ಇಳಿಸಿ ಜೇಬಿಗೆ ಕತ್ತರಿ ಹಾಕುವರು ಎಂಬುದ ಚೆನ್ನಾಗಿ ಬಲ್ಲ ಮದುಮಗ.

ತುಸು ಹೊತ್ತು ಹಾಗೆಯೇ ವಿರಮಿಸಲೆಂದು ಮಂಚದ ಮೇಲೆ ಒರಗಿದ್ದ ಮದುಮಗನ ದೃಷ್ಟಿ ಕೋಣೆಯ ಮೂಲೆಯ ಮೇಜಿನ ಮೇಲಿಟ್ಟಿದ್ದ ಮದುವೆಯ ಆಮಂತ್ರಣ ಪ್ರತಿಗಳ ಮೇಲೆ ಬಿದ್ದಿತು. ಅದಾಗಲೇ ನೆಂಟರಾದಿಗಳಿಂದಿಡಿದು ಮದುಮಗನ ಗೆಳೆಯರಾದಿಗಳಿಗೆ ಅಪ್ಪನೇ ಆಮಂತ್ರಣ ಪ್ರತಿಯನ್ನು ಹಂಚಿದ್ದರಿಂದ ಹಾಗು ಉಳಿದ ಇತರ ಗೆಳೆಯರು ಹಾಗು ಸಹೋದ್ಯೋಗಿಗಳಿಗೆ ಹುಡುಗನೇ ಖುದ್ದಾಗಿ ಫೋನಾಹಿಸಿ ಕರೆದಿದ್ದರಿಂದ್ದ ಮೇಜಿನ ಮೇಲಿದ್ದ ಪ್ರತಿಗಳೆಲ್ಲವೂ ಮಿಕ್ಕಿ ಉಳಿದವುಗಳೆಂದು ಅಂದುಕೊಂಡನು. ಹಾಗೆಯೆ ಒಂದೆರೆಡು ಪ್ರತಿಗಳನ್ನು ತೆಗೆದುಕೊಂಡು ನೋಡುತ್ತಾನೆ. ಇನ್ನೂ ಯಾರೆಲ್ಲ ಮಿಕ್ಕಿರಬವುದೆಂದು ಯೋಚಿಸತೊಡಗುತ್ತಾನೆ. ಯೋಚನೆಯಲ್ಲಿ ಮಗ್ನನಾದ ಮದುಮಗನಿಗೆ ಕೂಡಲೇ ಅವರಿಬ್ಬರ ನೆನಪು ಮಗದೊಮ್ಮೆ ಮೂಡುತ್ತದೆ.ಅವರಿಬ್ಬರನ್ನೂ ಮದುವೆಗೆ  ಕರೆಯುವವರೆಗೂ ಅದೇನೋ ಒಂದು ಅಪೂರ್ಣತೆಯ ಭಾವ ಮನದಲ್ಲಿ ಮೂಡುತ್ತಿರುತ್ತದೆ.

ವರುಷಗಳೇ ಕಳೆದಿವೆ ಈ ಇಬ್ಬರು ದೂರಾಗಿ. ಆತ ಕಾಲೇಜಿನ ಮೊದಲನೇ ದಿನದಿಂದ ಪರಮಾಪ್ತನೆನಿಸಿಕೊಂಡ ಸ್ನೇಹಿತನಾದರೆ ಆಕೆ ಕೆಲಸದ ಜೊತೆಯಲ್ಲಿ ಜೊತೆಯಾದ ಸ್ನೇಹಿತೆ.

ಮೊದಮೊದಲು ನಯ ನಾಜೂಕಿನಿಂದ ಹೋಗಿ, ಬನ್ನಿಎನ್ನುತ್ತಿದ್ದ ಆತ ಬರ ಬರುತ್ತಾ ಬಡ್ಡಿಮಗ್ನೆ, ಸಿಗ್ರೆಟ್ ಕೊಡ್ಸೋಎಂಬ ಮಟ್ಟಿಗೆ ಮದುಮಗನ ಗೆಳೆಯನಾಗಿದ್ದ. ಕೊಂಚ ಮುಂಗೋಪಿ, ಉಳಿದಂತೆ ಸೀದಾ ಸಾದಾ ವ್ಯಕ್ತಿ. ಪರೀಕ್ಷೆಗಳಲ್ಲಿ ಪಾಸುಮಾಡಿಸುವುದರಿಂದ ಹಿಡಿದು ಹುಡುಗಿಯರಿಗೆ ಪ್ರೇಮಪತ್ರವನ್ನು ಬರೆದುಕೊಡುವವರೆಗೂ ಆತನ ಸಹಾಯವೇ ಬೇಕಿದ್ದಿತು. ದೋಸ್ತಿ ಎಂದರೆ ಅವರಿಬ್ಬರ ಹಾಗೆ ಇರಬೇಕು ಎಂದು ಇಡೀ ಕಾಲೇಜಿಗೆ ಕಾಲೇಜೇ ಮಾತಾಡಿಕೊಳ್ಳುತ್ತಿತ್ತು. ಅದೇನು ಒಂದು ಕೆಟ್ಟ ಘಳಿಗೆಯೋ, ಗ್ರಹಚಾರವೋ, ಅಥವಾ ತನ್ನ ದುರ್ಬುದ್ಧಿಯೋ  ಅದೊಂದು ದಿನ ಯಾವುದೊ ಕೆಲಸದ ನಿಮಿತ್ತಾ ಐವತ್ತು ಸಾವಿರ ರೂಪಾಯಿಗಳನ್ನು ಆತನಿಂದ ಪಡೆದ  ಮದುಮಗ ಅದನ್ನು ಹಿಂದಿರುಗಿಸುವ ಮಾತನ್ನು ಮಾತ್ರ ಎತ್ತಲೇ ಇಲ್ಲ. ಇಂದು ನಾಳೆಯಾಗಿ, ನಾಳೆ ನಾಡಿದ್ದಾಗಿ, ದಿನಗಳು ತಿಂಗಳುಗಳಾಗಿ ಉರುಳಿದವು. ಈವೊಂದು ಕಾರಣಕ್ಕೆ ಏನೋ ನಿಧಾನವಾಗಿ ಮದುಮಗ ಆತನ ಸಂಪರ್ಕದಿಂದ ವಿಮುಖನಾಗತೊಡಗಿದ್ದ. ಮದುಮಗನಿಗೆ ದೆಹಲಿಯಲ್ಲಿ ಕೆಲಸ ದೊರೆತು ಚೆನ್ನಾಗಿ ದುಡಿಯಲು ಶುರುಮಾಡಿದ್ದ. ಆದರೆ ಆ ವೇಳೆಗಾಗಲೆ ಹಣವನ್ನು ಹಿಂದಿರುಗಿಸುವ ಮನಸ್ಥಿತಿಯೇ ಆತನಿಗೆ ಇಲ್ಲದಾಗಿದ್ದಿತು. ಕೆಲ ತಿಂಗಳ ಹಿಂದೆಯಷ್ಟೇ ಕೃಷ್ಣ-ಕುಚೇಲರಂತಿದ್ದ ಜೋಡಿಯನ್ನು ಕೇವಲ ಒಂದಿಷ್ಟು ನೋಟುಗಳ ಮಾಯೆ ಒಡೆದು ಪುಡಿಮಾಡಿದನ್ನು ಮಾತ್ರ ಮದುಮಗ ಆಗೊಮ್ಮೆ ಈಗೊಮ್ಮೆ ನೆನೆದು ಚಿಂತಿಸುತ್ತಿದ್ದ. ಕೆಲವೊಮ್ಮೆ ತನ್ನ ಮೇಲೆ ತನಗೆ ಜಿಗುಪ್ಸೆ ಬಂದರೂ ಅದೇಗೋ ಅದನ್ನು ಅದುಮಿಕೊಂಡು ನಿರಾಳನಾಗಿದ್ದ. ಇತ್ತ ಕಡೆ ಹಣ ನೀಡಿದ್ದ ಗೆಳೆಯನೂ ಒಮ್ಮೆಯೂ ಈತನಿಗೆ ಫೋನಾಯಿಸುವುದಾಗಲಿ ಮಾಡಿರಲಿಲ್ಲ. ಕಾರಣ ತಿಳಿಯುವ ಗೋಜಿಗಂತೂ ಮದುಮಗ ಹೋಗಿಯೇ ಇರಲಿಲ್ಲ.

ದೆಹಲಿಗೆ ಹೋಗಿ ಸಂಬಳವನ್ನುಎಣಿಸಲು ಶುರುವಿಟ್ಟಾಗ ಸಾಮಾನ್ಯವಾಗಿಯೇ ಹುಡುಗಿಯರನ್ನು ಗೆಳತಿಯರನ್ನಾಗಿ ಮಾಡಿಕೊಳ್ಳುವ ಗೀಳು ಅಲ್ಲಿನ ಎಲ್ಲರಲ್ಲೂ. ಸುತ್ತಲು,ತಿನ್ನಲು, ಹರಟೆಯೊಡೆಯಲು ಅಲ್ಲದೆ ಹತ್ತಿಪ್ಪತ್ತು ಫೋಟೋಗಳ ರಾಶಿಯೊಂದನ್ನು ತಮ್ಮ ಫೇಸ್ಬುಕ್ ಪೇಜಿನಲ್ಲಿ ಅಪ್ಲೋಡ್ ಮಾಡಲೂ ಹುಡುಗಿಯರ ಕೆಲ ಚಹರೆಗಳು ಅತಿಪ್ರಾಮುಖ್ಯ ವಿಚಾರಗಳಲ್ಲೊಂದಾಗಿದ್ದವು. ಜಿರೋಗಿರಿಯ ಕೂಪದಿಂದ ಹೀರೋಗಿರಿಯ ಶಿಖರವನ್ನೇರಲು ಬೇಕಾದ ಆಧಾರವಾಗಿ ಅಂದು ಹುಡುಗರು ಹುಡುಗಿಯರಿಗೆ, ಹುಡುಗಿಯರು ಹುಡುಗರಿಗೆ ಜೊತೆಯಲ್ಲಿ ಬೇಕಾಗಿದ್ದರು. ಇಂತಹ ಅವಲಂಬಿತ ಜೀವನದ ಕಾಲಘಟ್ಟದಲ್ಲಿ ಮದುಮಗನಿಗೆ ಜೊತೆಯಾದವಳು ಅವಳು‘. ತಮ್ಮೂರಿನ ಹತ್ತಿರದ ಹಳ್ಳಿಯಿಂದಲೇ ಬಂದ ಆಕೆ ಮದುಮಗನ ಜೀವನದ ಹೂದೋಟವನ್ನು ಒಳಹೊಕ್ಕ ಮೊದಲ ಚಿಟ್ಟೆ. ಬೆಳಗಿನಿಂದ ಸಂಜೆಯವರೆಗೂ ಒಬ್ಬರನೊಬ್ಬರು ಬಿಟ್ಟಿರುತ್ತಿದ್ದ ಸಮಯವೇ ಬಲು ಕಡಿಮೆ. ಇವರಿಬ್ಬರ ಬಗೆಗೆ ಸಹೋದ್ಯೋಗಿಗಳು ಆಡಿಕೊಳ್ಳುವ ಗುಸುಗುಸು ಆಗಾಗ್ಗೆ  ಮದುಮಗನ ಕಿವಿಗೆ ಬೀಳುತ್ತಿದ್ದಾರು ಅದನ್ನು ಆತ ಹಿತವಾಗಿರುವ ಭಾವಕೋಶದೊಂದರೊಳಗೆ ಸೇರಿಸಿಕೊಳ್ಳುತ್ತಿದ್ದ. ಖುಷಿಯಾಗುತಿದ್ದ . ಆದರೆ ಆ ವಿಷಯವಾಗಿ ಎಂದೂ ಆಕೆಯೊಟ್ಟಿಗೆ ಮಾತಿಗಿಳಿದಿರಲಿಲ್ಲ. ಊಟ, ತಿಂಡಿ, ಓದು, ಪುಸ್ತಕ, ಜೀವನ, ಚಲನಚಿತ್ರ, ಸಾವು, ಹುಟ್ಟು, ಬ್ರಹ್ಮಾಂಡ, ಏಲಿಯನ್ಸ್, ಶಾಶ್ವತ, ನಶ್ವರ ಹೀಗೆ ಜಗತ್ತಿನಲ್ಲಿ ಘಟಿಸುವ ಅಥವಾ ಘಟಿಸುತ್ತಿರುವ ಪ್ರತಿಯೊಂದೂ ವಿಷಯವನ್ನೂ ಘಂಟೆಗಳ ಕಾಲ ಚರ್ಚಿಸುತ್ತಿದ್ದ ಇಬ್ಬರೂ ಕಾಲಚಕ್ರದ ಓಟದಲ್ಲಿ ತಮ್ಮನೇ ತಾವು ಮರೆತಿದ್ದರು. ವಾರಗಳು ದಿನಗಳಂತೆ ಕಳೆದವು. ಅವೊಂದು ದಿನ ಸಿಟಿಯ ಎತ್ತರವಾದ ಪಾರ್ಕಿನಲ್ಲಿ ಕೂತಿದ್ದ ಇಬ್ಬರು ಪಡುವಣದಲ್ಲಿ ಲೀನವಾಗುತ್ತಿದ್ದ ಸೂರ್ಯನನ್ನು ತದೇಕಚಿತ್ತದಿಂದ ನೋಡುತಿದ್ದರು.

ಮದುಮಗ ಇದ್ದಕ್ಕಿದಂತೆ ಅವಳನ್ನು ಉದ್ದೇಶಿಸಿ ತನಗರಿಯದಂತೆ ಆಕೆಯನ್ನು ಮನಸ್ಸಾರೆ ಇಚ್ಛಿಸುತ್ತಿದ್ದೇನೆಂದೂ ಆಕೆ ಸಮ್ಮತಿಸಿದರೆ ಕೂಡಲೇ ಮನೆಯವರನ್ನು ಒಪ್ಪಿಸುತ್ತೇನೆಂದೂ ಹೇಳಿ ಮೊದಲ ಬಾರಿಗೆ ಆಕೆಯ ಕೆನ್ನೆಯ ಮೇಲೊಂದು ಹೂಮುತ್ತನಿಟ್ಟು ಸುಮ್ಮನಾಗುತ್ತಾನೆ. ಈತನನ್ನೇ ಕಳವಳಗೊಂಡು ಕೆಲಹೋತ್ತು ನೋಡಿದ ಆಕೆ ಕೆಲ ಕ್ಷಣಗಳ ನಂತರ ಒಂದೇ ಸಮನೆ ಗಳಗಳ ಅಳಲು ಶುರು ಮಾಡಿದಳು. ಕಾರಣ ಅರಿಯನವನಾದ ಮದುಮಗ ಆಕೆಯನ್ನು ಸಂತೈಸಲು ಮುಂದಾದಾಗ ಆತನನ್ನು ಒಮ್ಮೆಲೇ ದೂರಕ್ಕೆ ತಳ್ಳಿ ಪವಿತ್ರವಾದ ಗೆಳೆತನದ ಗುರಿ ಮದುವೆಯಾಗುವುದೊಂದೇ ಅಲ್ಲ, ಮೈಂಡ್ ಇಟ್!’ ಎಂದು, ಆಕೆಯನ್ನು ಈತ ಮುಂದೆಂದೂ ಸಿಗುವುದಾಗಲಿ ಫೋನಾಯಿಸುವುದಾಗಲಿ ಮಾಡಬಾರದೆಂದು ಹೇಳಿ ಅಲ್ಲಿಂದ ಹೊರಟಳು. ಕ್ಷಣ ಮಾತ್ರದಲ್ಲೇ ಆಕಾಶವೇ ಕುಸಿದು ಕೆಳಗೆ ಬಿದ್ದಂತಹ ಅನುಭವವಾದ ಮದುಮಗನಿಗೆ ತನ್ನ ಪ್ರೀತಿಯ ನಿವೇದನೆ ಅಷ್ಟೊಂದು ಘೋರ ಪಾಪವೇ ಎಂದನಿಸತೊಡಗಿತ್ತು. ಇದಾದ ಕೆಲದಿನಗಳಲ್ಲೇ ಆಕೆ ತನ್ನ ಕೆಲಸಕ್ಕೆ ರಾಜೀನಾಮೆಯನ್ನು ನೀಡಿ ಹೊರಡುವ ಮೊದಲು ಈತನಿಗೊಂದು ಕಾಗದವನ್ನಿಟ್ಟು ಅಲ್ಲಿಂದ ಬೀಳ್ಕೊಟ್ಟಳು. ಆಕೆ ಈತನನ್ನು ಒಬ್ಬ ಉತ್ತಮ ಗೆಳೆಯನಾಗಿ ಮಾತ್ರ ಹಚ್ಚಿಕೊಂಡಿದ್ದಳೆಂದೂ, ಮೊದಲೊಮ್ಮೆ ಈಕೆಗೆ ಈಗೆಯೆ ಗೆಳೆಯನೊಬ್ಬ ಪ್ರೇಮ ನಿವೇದನೆಯನ್ನು ಮಾಡಿ ಅತಿಯಾಗಿ ಸತಾಯಿಸಿದ್ದನೆಂದೂ, ಅಲ್ಲಿಂದ ಮುಂದಕ್ಕೆ ಈಕೆ ಯಾವ ಹುಡುಗನನ್ನೂ ಗೆಳೆಯನಾಗಿ ಮಾಡಿಕೊಳ್ಳಲಿಲ್ಲವೆಂದೂ, ದೇವರ ಕೃಪೆಯಿಂದ ಮದುಮಗನಂತಹ ಒಳ್ಳೆಯ ಗೆಳೆಯ ಆಕೆಗೆ ದೊರೆತರೂ ಆತನೂ ತನ್ನ ಉದ್ದೇಶವನ್ನು ಪ್ರೀತಿ ಪ್ರೇಮವೆಂಬ ಮೂರುಕಾಸಿನ ಭಾವಗಳಿಗೇ ಮುಡಿಪಾಗಿಟ್ಟಿರುವುನ್ನು ಕಂಡು ಅತಿಯಾಗಿ ನೊಂದ ಆಕೆ ಇವನಿಂದ ದೂರವಾಗುತ್ತಿದ್ದಾಳೆ ಎಂಬುದು ಆ ಪತ್ರದ ಒಟ್ಟು ಸಾರಾಂಶವಾಗಿದ್ದಿತು. ಪ್ರೀತಿಯನ್ನು ಗೆಳೆತನಕ್ಕಿಂತ ಮಿಗಿಲಾದ ಭಾವವನ್ನಾಗಿ ಮಾಡಲಾಗದು, ಇಂದಿಗೂ ಎಂದೆಂದಿಗೂಎಂಬ ಆಕೆಯ ಪತ್ರದ ಕೊನೆಯ ಸಾಲುಗಳು ಮದುಮಗನನ್ನು ಈಗಲೂ ಕಾಡುತ್ತಿವೆ.

ತನ್ನ ಯೋಚನಾಲಹರಿಯಲ್ಲಿ ಮುಳುಗಿಹೋಗಿದ್ದ ಮದುಮಗನನ್ನು ಹುಚ್ಚು ಹಿಡಿದ ವಾನರರಂತೆ ಅರಚಾಡುತಿದ್ದ ಸೋದರಸಂಬಂಧಿಗಳ ಸದ್ದು ಎಚ್ಚರಿಸಿತು. ಈ ಇಬ್ಬರು ಗೆಳೆಯರ ಬಗ್ಗೆ ರೂಮಿನ ಹೊರಗೆ  ಅರಚುತ್ತಿದ್ದ ವಾನರರ ಗುಂಪಿನೊಳಗೇ ಒಂದಿಬ್ಬರು ಬಲ್ಲರಾದರೂ ಯಾರೂ ಆತನೊಟ್ಟಿಗೆ ಅಷ್ಟಾಗಿ ಚರ್ಚಿಸುತ್ತಿರಲಿಲ್ಲ. ಅಂದು  ಸಂಜೆ ಅಂದುಕೊಂಡಂತೆ ಊರು ಸುತ್ತುವ ನೆಪವೊಡ್ಡಿ ಮದುಮಗನನ್ನು ಎಳೆದುಕೊಂಡೋದ ಪಡೆ ಕಂಠಪೂರ್ತಿ ಕುಡಿದು ವಾಪಸ್ಸಾಗುವಾಗ ಮಧ್ಯರಾತ್ರಿ ಕಳೆದಿತ್ತು. ಎಣ್ಣೆಯ ನಶೆಯಲ್ಲಿ ಏನೆಲ್ಲಾ ಸಂಭಾಷಣೆಗಳು ನಡೆದವು ಎಂಬುದು ಅದೆಷ್ಟೇ ತಡಕಾಡಿದರೂ ಮಾರನೇ ದಿನ ಮದುಮಗನಿಗೆ ನೆನಪಿಗೇ ಬಾರದಿರದಾಗಿದ್ದಿತು.

ದಿನಗಳು ಕಳೆದವು. ಮದುವೆಯ ಆ ದಿನ ಕೊನೆಗೂ ಬಂದೇ ಬಿಟ್ಟಿತು. ಊರಿನ ವಾರದ ಸಂತೆಗಿಂತಲೂ ಹೆಚ್ಚಿನ ಜನ ಮದುಮಗನ ಮನೆಯಲ್ಲಿ ಅಂದು ಜಮಾವಣೆಗೊಂಡಿದ್ದರು. ತಾಲೂಕಿನ MLA ಗಿಂತಲೂ ಮದುಮಗನ ಅಪ್ಪ ಅಂದು ಬ್ಯುಸಿ. ಮದುಮಗ ಏಳುವುದನ್ನೇ ಕಾಯುತ್ತಿದ್ದ ಎಲ್ಲರು ಆತನ ನಿತ್ಯಕರ್ಮಗಳನ್ನೊಂದು ಹೊರತುಪಡಿಸಿ ಬೇರೆಲ್ಲ ಕಾರ್ಯಚಟುವಟಿಕೆಗಳನ್ನು ತಾವಾಗಿಯೇ ಅವನ ಮೇಲೆ ಮಾಡತೊಡಗಿದರು. ಬೆಳಗಿನಿಂದ ಸಂಜೆಯವರೆಗೂ ಮದುಮಗ ಕೇವಲ ಆಡುವ ಗೊಂಬೆಯಂತಾಗಿದ್ದ. ಅಪ್ಪ, ಅಮ್ಮ, ಗೆಳೆಯರು, ಸೋದರರು ಅಲ್ಲದೆ ಕ್ಯಾಮೆರಾ ಮ್ಯಾನ್’ಗಳು ಹೇಳಿದಲ್ಲಿ ಕೂರುವುದು, ನಿಲ್ಲುವುದಷ್ಟೇ ಆತನ ಕಾಯಕವಾಗಿದ್ದಿತು. ಅದು ಬಾಡೂಟದ ಮದುವೆಯಾದದ್ದರಿಂದ ನೆರೆದಿದ್ದ ಬಹುಪಾಲು ಜನರಿಗೆ  ಜೋಡಿಗೆ ಆಶೀರ್ವದಿಸುವುದಕ್ಕಿಂತ ಹೆಚ್ಚಾಗಿ ಊಟದ ಕೋಣೆಯೊಳಗೆ ಓಡುವುದೇ ಅತಿ ಮಹತ್ವವಾದ ಕಾರ್ಯವಾಗಿದ್ದಿತು. ಆದರಿಂದ ಕಾಟಾಚಾರಕೆಂಬಂತೆ ಮ೦ಟಪದ ಬಳಿಗೆ ಬಂದು ಐವತ್ತೋ ನೂರೊ ರೂಪಾಯಿಗಳನ್ನು ನಾಲ್ಕಾಣೆಯ ಒಂದು ಕಾಗದೊಳಗೆ ತುರುಕಿ ಫೋಟೋ ತೆಗೆಸಿಕೊಳ್ಳಲೂ ನಿಲ್ಲದೆ ತರಾತುರಿಯಲ್ಲಿ ಜಾಗ ಕೀಳುತ್ತಿದ್ದರು. ಕೆಲವರಂತೂ ಸಾಲಿನಲ್ಲಿ ಕಾದು ಕಾದು ಎಲ್ಲಿ ಪಂಕ್ತಿಗಳು ಹೆಚ್ಚಾಗುತ್ತಿದ್ದಂತೆ ಮಾಂಸದ ಚೂರುಗಳ ಸಂಖ್ಯೆಯಲ್ಲೂ ಇಳಿಮುಖ ಕಾಣುತ್ತದೆಂಬ ಲೆಕ್ಕಾಚಾರದೊಂದಿಗೆ ಚಿಂತಾಗ್ರಸ್ತರಾಗಿ ಯಾರು ನೋಡುತ್ತಿಲ್ಲ ಎಂದು ತಮಗೆ ತಾವೇ ಅಂದುಕೊಂಡು ಸಾಲಿನಿಂದ ವಾಪಸ್ಸಾಗಿ ಊಟದ ಮನೆಯನ್ನು ಒಳಹೊಕ್ಕುತ್ತಿದ್ದರು. ಅಂತೂ ಬಂದ ಅಷ್ಟೂ ಜನರನ್ನು ಹಲ್ಲು ಕಿಸಿಯುತ್ತಾ ಮಾತನಾಡಿಸುತ್ತಿದ್ದ ಜೋಡಿಗೆ ಬಾಯೆಲ್ಲ ನೋವು ಶುರುವಾಗಿದ್ದಿತು. ಎರೆಡೆರಡು ಬಾರಿ ಗಡತ್ತಾಗಿ ಬಾರಿಸಿ, ಮದುವೆಗೆ ಬಂದ ಹುಡುಗಿಯರನ್ನು ನಗಿಸಲು ಹರಸಾಹಸ ಪಡುತ್ತಿದ್ದ ಸೋದರ ಪಡೆ ಇತ್ತಕಡೆ ಕೂತಿದ್ದ ತಮ್ಮನ್ನು ಒಂದಿಷ್ಟೂ ಗುರುತು ಹಿಡಿಯದಂತೆ ವರ್ತಿಸುತ್ತಿದ್ದದ್ದನ್ನು ಕಂಡು ಮದುಮಗನಿಗೆ ಸಿಟ್ಟು ನತ್ತಿಗೇರತೊಡಗಿತ್ತು.

ಒಳ ಬರುತಿದ್ದ ಜನಸಂಖ್ಯೆ ಇನ್ನೇನು ಕ್ಷೀಣಿಸತೊಡಗಿತ್ತು ಎಂಬಷ್ಟರಲ್ಲಿ ವೀಲ್ ಚೇರಿನಲ್ಲಿ ವ್ಯಕ್ತಿಯೊಬ್ಬನನ್ನು ಕೂರಿಸಿಸಿಕೊಂಡು ಹಿರಿಯರೊಬ್ಬರು ಬರತೊಡಗಿದರು. ಗಡ್ಡವನ್ನು ಬಿಟ್ಟು, ಕಾಯಿಲೆ ಬಿದ್ದವನಂತಿದ್ದ ವ್ಯಕ್ತಿಯ ಕಾಲುಗಳೆರಡೂ ಇರದಾಗಿದ್ದವು. ಮದುಮಗ ಯಾರೋ ಹುಡುಗಿಯ ಕಡೆಯವರಿರಬೇಕೆಂದು ಎಡಕ್ಕೆ ತಿರುಗಿದರೆ ಆಕೆ ತನಗೆ ಗೊತ್ತಿಲ್ಲವೆಂಬಂತೆ ತಲೆಯಾಡಿಸಿದಳು. ಬಡ್ಡಿ ಮಗ್ನೆ, ಡೆಲ್ಲಿಗೋದ್ರೆ ಏನ್ ನಾವೆಲ್ಲಾ ಮರ್ತ್ ಹೋದ್ವಾ ನಿಂಗೆಎನ್ನುತ ಚೇರನ್ನು ತಳ್ಳಿಕೊಂಡು ಬಳಿಗೆ ಬಂದು ಮದುಮಗನ ಕೈಯ್ಯ ಕುಲುಕತೊಡಗಿದ ಆತ. ತನ್ನ ಜೀವಮಾನದಲ್ಲೇ ಮತ್ತೆಂದೂ ಈತನ್ನು ಎದುರಿಸುವ ಶಕ್ತಿಯನ್ನು ಕಳೆದುಕೊಂಡಿದ್ದ ಮದುಮಗ ಕೆಲ ಕ್ಷಣಗಳ ಕಾಲ ಅವಕ್ಕಾಗಿ ನಿಂತುಬಿಟ್ಟಿದ್ದ. ತನ್ನ ಕೃಷ್ಣ ಕುಚೇಲರ ಜೋಡಿಯಲ್ಲಿ ಕೃಷ್ಣನಾದವನಿವನು! ಕಾಲೇಜು ಕಳೆದು ಕೆಲದಿನಗಳ ನಂತರ ಮನೆಗೆ ಹೋಗುವಾಗ ಹಿಂದಿನಿಂದ ಬಂದ ಬಸ್ಸೊಂದು ಈತನ ಕಾಲಿನ ಮೇಲೆ ಹಾದುಹೋದದ್ದಾಗಿಯೂ, ಎಷ್ಟೇ ಪ್ರಯತ್ನ ಪಟ್ಟರೂ ಕಾಲನ್ನು ಉಳಿಸಿಕೊಳ್ಳಲಾಗಲಿಲ್ಲವೆಂದೂ, ವರ್ಷಗಳ ಕಾಲ ಆಸ್ಪತ್ರೆಯಲ್ಲಿಯೇ ಕಳೆಯಬೇಕಾಯಿತೆಂದೂ ಈತನ ವೃತ್ತಾಂತವನ್ನು ವೀಲ್ ಚೇರನ್ನು ತಳ್ಳಿಕೊಂಡು ಬಂದ ಅವರಪ್ಪ ಹೇಳಿದರು. ಅಲ್ಲಿಯವರಿಗೂ ಮದುಮಗನ ಕೈಯನ್ನೇ ಬಿಗಿದಿಡಿದುಕೊಂಡಿದ್ದ ಆತ ಕೆಮ್ಮಿ ಗಂಟಲನ್ನು ಸರಿಪಡಿಸಿಕೊಳ್ಳುತ್ತಾ  ಹುಡುಗಿಗೂ ಮದುವೆಯ ಶುಭಾಶಯವನ್ನು ಕೋರಿ ತಾನು ತಂದಿದ್ದ ಉಡುಗೊರೆಯ ಪೊಟ್ಟಣವನ್ನು ಇಬ್ಬರಿಗೂ ಒಂದೊಂದು ಕೊಟ್ಟು, ಒಂದೆರೆಡು ಫೋಟೋಗಳನ್ನು ತೆಗೆದುಕೊಂಡು ಅಲ್ಲಿಂದ ಹೊರಟ. ಹೊರಡುವಾಗಅತ್ತಿಗೆನ ಕರ್ಕೊಂಡು ಮನೆಗ್ ಬಂದ್ ಹೋಗುಎಂದ ಅವನ ಧ್ವನಿಯನ್ನು ಕೇಳಿ ಮದುಮಗನ ಕಣ್ಣಂಚು ಒದ್ದೆಯಾದದ್ದು ಮಾತ್ರ ಯಾರಿಗೂ ತಿಳಿಯಲಿಲ್ಲ. ನನಗೊಬ್ಬ ಆಪ್ತ ಗೆಳೆಯಲಿಲ್ಲ ಎಂದೇ ಎಲ್ಲರೊಟ್ಟಿಗೂ ಹೇಳಿ ಕೊರಗುತ್ತಿದ್ದ ಮದುಮಗ, ಕಷ್ಟಗಾಲದಲ್ಲೂ ನೀಡಿದ್ದ ಅಷ್ಟು ದೊಡ್ಡ ಮೊತ್ತದ ಹಣವನ್ನು ವಾಪಸ್ಸು ಕೇಳದ ಈತನನ್ನು ನೆನಪಿನ ಮೂಟೆಯಲ್ಲಿ ಕಟ್ಟಿ ಎಲ್ಲೋ ಮೂಲೆಗೆಸೆದಿದ್ದನು. ಮೇಲಾಗಿ ತಾನು ಕರೆಯದಿದ್ದರೂ ಅವನಾಗಿಯೇ ಮದುವೆಗೆ ಬಂದು ಗೆಳೆತನ ಏನೆಂಬುದನ್ನು ತನಗೆ ತೋರಿಸಿಕೊಟ್ಟ ಎಂದುಕೊಳ್ಳುತ್ತಾನೆ. ನಾಚಿಕೆಯಿಂದ ತಗ್ಗಿದ್ದ ಮದುಮಗನ ತಲೆ ಮೇಲೇಳಲು ತಡಕಾಡುತ್ತಿರುತ್ತದೆ. ಹಣವೆಂಬ ಮಾಹೆ ಗೆಳೆತನದಲ್ಲಿ ಎಂದಿಗೂ ಬರಬಾರದು ಎಂದು ಕೊಳ್ಳುತ್ತಾನೆ. ಅಲ್ಲದೆ ಆತನ ಆ ಐವತ್ತು ಸಾವಿರಕ್ಕೆ ಮತ್ತೂ ಐವತ್ತು ಸಾವಿರ ಸೇರಿಸಿ ಯಾರಿಗೂ ತಿಳಿಯದಂತೆ ಅವನಿಗೆ ತಲುಪಿಸಬೇಕೆಂದು ಅಂದುಕೊಳ್ಳುತ್ತಾನೆ. ತನಗೊಬ್ಬ ಗೆಳೆಯನೆಂಬುವನು ಇದ್ದಾನೆ ಎಂಬ ಸಮಾಧಾನವೇ ಅವನಿಗೆ ಕೋಟಿ ಗಳಿಸಿದಕ್ಕಿಂತಲೂ ಮಿಗಿಲಾಗಿರುತ್ತದೆ.

ಇನ್ನೇನು ಜೋಡಿ ಊಟದ ಹಾಲಿನೊಳಗೆ ಹೋಗಬೇಕು ಎನ್ನುವಷ್ಟರಲ್ಲಿ  ಅವಳುಹತ್ತಿರ ಬಂದು ನಿಂತಿರುತ್ತಾಳೆ! ಮದುಮಗನಿಗಂತೂ ಪರಮಾಶ್ಚರ್ಯ. ತನ್ನ ಕಣ್ಣುಗಳನ್ನು ಆತನಿಗೆ ನಂಬಲೇ ಆಗಲಿಲ್ಲ. ತನ್ನ ಬಾಲ್ಯದಲ್ಲಿ ಕಳೆದುಹೋಗಿದ್ದ ಆಟಿಕೆಯೊಂದು ಇಂದು ಪುನ್ಹ ಸಿಕ್ಕಂತ ಭಾವ! ತಾನು ದೆಹಲಿಯಲ್ಲಿ ಕೊನೆ ಬಾರಿ ನೋಡಿದಕ್ಕೂ ಇಂದಿಗೂ ಬಹಳಾನೇ ವ್ಯತ್ಯಾಸ ಆಕೆಯಲ್ಲಿ ಕಾಣುತ್ತಾನೆ. ಗುಳಿ ಬಿದ್ದ ಕಣ್ಣುಗಳು, ಸಣಕಲಾಗಿ ಕಪ್ಪಾದ ದೇಹಸಿರಿಯನ್ನು ಕಂಡು ಒಮ್ಮೆಲೇ ಈಕೆಯನ್ನು ಗುರುತಿಡಿಯುವುದು ಕಷ್ಟವೆನಿಸುತ್ತದೆ. ಆದರೂ ಆಕೆಯ ಸೌಂದರ್ಯ ಸಿರಿಗೆ ಅಲ್ಲಿ ನೆರೆದಿದ್ದ ಯಾರೊಬ್ಬರೂ ಸರಿಸಾಟಿ ಇರಲಿಲ್ಲ ಎನ್ನಬಹುದು. ಆಕೆ ಸ್ಟೇಜಿನ ಮೇಲೆ ಬಂದಾಗಲಿಂದ ತಾವು ಪಟಾಯಿಸಲು ಹರಸಾಹಸ ಪಡುತಿದ್ದ ಹುಡುಗಿಯರನ್ನು ಬಿಟ್ಟು ಇತ್ತ ಕಡೆಯೇ ತಮ್ಮ ಬಾಯಿಗಳನ್ನು ಊರಗಲ ಕಿಸಿದುಕೊಂಡು ನೋಡುತ್ತಿದ್ದ ಮದುಮಗನ ಸೋದರ ಸಂಬಂಧಿಗಳೇ ಅದಕ್ಕೆ ಸಾಕ್ಷಿ. ಮೈ ಬೆಸ್ಟ್ ಫ್ರೆಂಡ್ಎನ್ನುತ್ತಾ ಆಕೆಯನ್ನು ತನ್ನ ಭಾವಿ ಹೆಂಡತಿಗೆ ಪರಿಚಯಿಸುತ್ತಾನೆ. ಆಕೆ ಈಗ ತಾನು ಊರಿನ ಶಾಲೆಯಲ್ಲಿ ಶಿಕ್ಷಕಿಯಾಗಿಯೂ ಹಾಗು ಬಿಡುವಿನ ವೇಳೆಯಲ್ಲಿ ವ್ಯವಸಾಯವನ್ನು ಮಾಡಿಕೊಂಡಿರುವುದಾಗಿಯೂ, ಸಮಯ ಮಾಡಿಕೊಂಡು ಒಮ್ಮೆ ಬಂದೋಗಬೇಕೆಂದು ಅವಳು ಹೇಳುತ್ತಾಳೆ. ಆಕೆಯ ಮದುವೆ ಆಗಿದೆಯೇ ಎಂಬ ಪ್ರೆಶ್ನೆಯನ್ನು ಕೇಳಲು ಮದುಮಗನಿಗೆ ಧೈರ್ಯ ಸಾಲದಾಗುತ್ತದೆ. ಅಲ್ಲಿಯವರೆಗೂ ಕಾಣೆಯಾಗಿದ್ದ ತನ್ನ ಸೋದರರ ಗುಂಪು ಇವರಿಬ್ಬರ ಸಂಭಾಷಣೆ ಮುಗಿಯುವುದನ್ನೇ ಕಾಯುತ್ತಾ ಗಿಫ್ಟ್ ಏನೂ ಇಲ್ವಾಎಂದು ಜೋರಾಗಿ ಅರಚುತ್ತಾರೆ. ನೋ ಗಿಫ್ಟ್ಸ್ ಇನ್ ಫ್ರೆಂಡ್ಶಿಪ್ಎಂದು ನಗುತ್ತಾ ಹೊರಡಲು ಅಣಿಯಾದ ಆಕೆಯನ್ನು ಮದುಮಗ ತಾನು ಆಕೆಯನ್ನು ಮದುವೆಗೆ ಕರೆಯಲು ಮರೆತೋಯಿತೆಂದು ನಟಿಸುತ್ತಾನೆ. ಆಕೆ ನಗುತ್ತಾ ಐ ನೋ, ನಿನ್ನ ಕಸಿನ್ಸ್ ಎಲ್ಲಾರು ಕಾಲ್ ಮಾಡಿ ರಿಕ್ವೆಸ್ಟ್ ಮಾಡ್ಕೊಂಡಿದಕ್ಕೆ ನಾನು ಬಂದೆಎಂದಳು. ಕೂಡಲೇ ಆಶ್ಚರ್ಯದಿಂದ ತನ್ನ ಸಹೋದರರ ಗುಂಪನ್ನು ನೋಡತೊಡಗಿದ ಮದುಮಗನಿಗೆ ಹಾಗಾದರೆ ಮೊದಲು ಬಂದ ಗೆಳೆಯನನ್ನೂ ಇವರೇ ಕರೆದಿರಬೇಕು ಎಂದುಕೊಳ್ಳುತ್ತಾನೆ. ಅದ್ಯಾವಾಗ ಇವರಿಬ್ಬರ ಬಗ್ಗೆ ವಾನರ ಪಡೆಗೆ ಹೇಳಿದ್ದೇನೋ ಎಂದುಕೊಂಡನು. ಒಟ್ಟಿನಲ್ಲಿ ಗೆಳೆಯರಿಗಿಂತ ಮಿಗಿಲಾಗಿ ತನ್ನ ಜೀವನದ ಬಹುಮುಖ್ಯ ಇಬ್ಬರು ವ್ಯಕ್ತಿಗಳನ್ನು ಮದುವೆಗೆ ಕರೆತಂದು ಈ ಕೆಲಕ್ಷಣಗಳನ್ನು ಅಮರವಾಗಿಸಿದ ಆ ವಾನರರ ಗುಂಪಿಗೆ ಮನದಲ್ಲೇ ಒಂದು ದೊಡ್ಡ ಥ್ಯಾಂಕ್ಸ್ ಅನ್ನು ಹೇಳಿಕೊಳ್ಳುತ್ತಾನೆ. ಬಾಯಿಬಿಟ್ಟು ಅವರ ಉಪಕಾರವನ್ನು ಕೊಂಡಾಡಿದರೆ ತನ್ನ ಮೊದಲ ರಾತ್ರಿ ಎಂಬುದನ್ನೂ ಲೆಕ್ಕಿಸದೆ ಮತ್ತೊಮ್ಮೆ ಕಿಡ್ನಾಪ್ ಮಾಡಿ ಬಾರಿನೆಡೆ ಕೊಂಡೊಯ್ಯಬಲ್ಲ ಆಸಾಮಿಗಳಿವರು ಎನ್ನುವುದು ಆತನಿಗೆ ತಿಳಿದಿರುತ್ತದೆ. ಸರಿ ಅವಳನ್ನು ಬೀಳ್ಕೊಡುವ ಮುನ್ನ ಒಂದು ಫೋಟೋ ಎಂದ ಮದುಮಗ ಅವಳನ್ನು ತನ್ನ ಬಳಿಗೆ ಕರೆದು ನಿಲ್ಲಿಸಿಕೊಳ್ಳುತ್ತಾನೆ. ಫೋಟೋದಲ್ಲಿ ಕೇವಲ ಮೂವರೇ ಬಂದರೆ ಸರಿಯಿರುವುದಿಲ್ಲ ಯಾರಾದರೂ ಒಂತಿಷ್ಟು ಜನ ಬನ್ನಿ ಎಂದ ಫೋಟೋಗ್ರಾಫರ್ಗಳ ಕೋರಿಗೆ ಓಗೊಟ್ಟ ಮದುಮಗನ ಸಹೋದರರ ಗುಂಪು ತಾವೂ ಸಹ ಅದನ್ನೇ ಬಯಸುತಿದ್ದದೆಂದು ಒಬ್ಬೊಬ್ಬರಾಗೆ ಬಂದು ಜಮಾವಣೆಗೊಳ್ಳುತ್ತಾರೆ. ಆದರೆ, ಎಲ್ಲರೂ ಮದುಮಗನ ಬಲಬದಿಗೆ ಅವಳಪಕ್ಕದಲ್ಲೇ ನಿಲ್ಲತೊಡಗುತ್ತಾರೆ. ಇದೇನಾಯಿತಪ್ಪ ಎನ್ನುತ್ತಾ ಫೋಟೋಗ್ರಾಫೇರ್ಸ್ ಗಳು ತಲೆಕೆರೆದುಕೊಳ್ಳಲು ಶುರುಮಾಡಿದರು. ಮದುಮಗನ ಬಲಬದಿ ರಾಣಿಚೆನ್ನಮ್ಮ ಎಕ್ಸ್ಪ್ರೆಸ್ ರೈಲು ಬಂದು ನಿಂತಂತಿತ್ತು. ಪರಿಸ್ಥಿತಿಯನ್ನು ಅರಿತ ಮದುಮಗ ಕೆಲವರನ್ನು ಇತ್ತಲೂ ಬರುವಂತೆ ಕೇಳಿಕೊಂಡನು. ಕೂಡಲೇ ನೀನು ನೀನೆಂಬ ಉದ್ಗಾರದೊಂದಿಗೆ ಸಣ್ಣದಾದ ಜಟಾಪಟಿ ಗುಂಪಿನೊಳಗೇ ನಡೆಯತೊಡಗಿತು. ಕೊನೆಗೆ ಮದುಮಗನ ಅಪ್ಪ ಏನಾಯಿತರ್ಲಾ ನಿಮ್ಗೆಎಂದು ಅಬ್ಬರಿಸಿದಾಗಲೇ ಕೆಲವರು ಮದುಮಗನ ಎಡಕ್ಕೂ ಇನ್ನು ಕೆಲವರು ಆತನ ಕಾಲಿನ ಬಳಿ ಬಂದು ಕೂತು ಬಿಟ್ಟರು. ಇನ್ನು ಕೆಲವರು ಕೂತರೆ ಚೆನ್ನಾಗಿರುವುದಿಲ್ಲವೆಂದು ಮದುಮಗನನ್ನೇ ಹಿಂದಕ್ಕೆ ದಬ್ಬಿ ವಿವಿಧ ಬಂಗಿಯಲ್ಲಿ ಅವಳೊಟ್ಟಿಗೆಪೋಸನ್ನು ಕೊಡಲು ಪ್ರಯತ್ನಿಸುತ್ತಿದ್ದರು.ಕಾಲ ಕೈಜಾರುವುದರೊಳಗೆ ತಮ್ಮ ಕೆಲಸವನ್ನು ಮುಗಿಸಬೇಕೆಂದುಕೊಂಡ ಫೋಟೋಗ್ರಾಫರ್ಸ್ ಗಳು ಒಂದೆರೆಡು ಫೋಟೋಗಳನ್ನು ತೆಗೆಯುವ ಶಾಸ್ತ್ರವನ್ನು ಮಾಡಿಯೇಬಿಟ್ಟರು. ಕಷ್ಟಪಟ್ಟು ಹುಡುಕಿದರೂ ಮದುಮಗನ ಮುಖಚರ್ಯೆ ಆ ಅಮೂಲ್ಯ ಫೋಟೋದಲ್ಲಿ ಇಂದಿಗೂ ಗೋಚರಿಸುವುದಿಲ್ಲ!

Facebook ಕಾಮೆಂಟ್ಸ್

ಲೇಖಕರ ಕುರಿತು

Sujith Kumar

ಹವ್ಯಾಸಿ ಬರಹಗಾರ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!