ಜಗತ್ತು ಬಹಳ ವೇಗವಾಗಿ ಅಭಿವೃದ್ಧಿಯತ್ತ ದಾಪುಗಾಲಿಕ್ಕುತ್ತಿದೆ. ಭವಿಷ್ಯದಲ್ಲಿ ಮಾನವನ ಕೆಲಸಗಳನ್ನು ಮಾಡಲು ರೋಬೋಟ್‌ಗಳು ಸದ್ದಿಲ್ಲದೇ ತಯಾರಾಗುತ್ತಿವೆ. ಆಟೊಮೇಶನ್, ಕೃತ್ರಿಮ ಜಾಣ್ಮೆ, ಕ್ಲೌಡ್ ಕಂಪ್ಯೂಟಿಂಗ್, ಮಷೀನ್ ಲರ್ನಿಂಗ್ ಮುಂತಾದ ತಂತ್ರಜ್ಞಾನಗಳು ಬಹಳ ವೇಗವಾಗಿ ಬೆಳೆಯುತ್ತಿದೆ. ನಮ್ಮ ಸುತ್ತಮುತ್ತಲಿನ ಎಲ್ಲಾ ಸಾಧನಗಳನ್ನು ಜೋಡಿಸಿ ಅವುಗಳ ಚಟುವಟಿಕೆಗಳನ್ನು ದಾಖಲಿಸಿ ಅವುಗಳನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿಟ್ಟುಕೊಂಡು ವಿಶ್ಲೇಷಣೆ ಮಾಡಬಲ್ಲ ಇಂಟರ್ನೆಟ್ ಆಫ್ ಥಿಂಗ್ಸ್ ಇನ್ನೇನು ಮಹಾಕ್ರಾಂತಿಯನ್ನೇ ಮಾಡಲು ತಯಾರಾಗುತ್ತಿದೆ. ಇಂಡಸ್ಟ್ರಿಯಲ್ ಇಂಟರ್ನೆಟ್ ಆಫ್ ಥಿಂಗ್ಸ್ ಮೂಲಕ ನಾಲ್ಕನೇ ಕೈಗಾರಿಕಾ ಕ್ರಾಂತಿಗೆ ಜಗತ್ತು ಸಿದ್ಧವಾಗುತ್ತಿದೆ. ಸಾವಿರಾರು ಕಿಲೋಮೀಟರ್ ದೂರಗಳನ್ನು ಅರ್ಧದಿಂದ ಒಂದು ಗಂಟೆಯೊಳಗೆ ತಲುಪಬಲ್ಲ ಹೈಪರ್ ಲೂಪ್ ತಂತ್ರಜ್ಞಾನದ ಸಾಧಕ ಬಾಧಕದ ಕುರಿತು ಚರ್ಚೆ ಜಾರಿಯಲ್ಲಿದೆ. ಹೀಗೆ ಎಲ್ಲಾ ವಿಭಾಗವೂ ಮುಂದುವರಿಯುತ್ತಿರುವಾಗ ಕಳ್ಳರೂ ಮುಂದುವರಿದ ಹೈಟೆಕ್ ತಂತ್ರಜ್ಞಾನದ ಸಹಾಯದಿಂದ ತಮ್ಮ ಕೈಚಳಕವನ್ನು ತೋರಿಸುತ್ತಿದ್ದಾರೆ. ಕಂಪ್ಯೂಟರ್, ಇಂಟರ್ನೆಟ್, ಮೊಬೈಲ್ ಮತ್ತು ಡಿಜಿಟಲ್ ಸಾಧನಗಳನ್ನು ಉಪಯೋಗಿಸಿ ಅಪರಾಧವನ್ನೆಸಗುತ್ತಿದ್ದಾರೆ. ಬೆಲೆಬಾಳುವ ಮಾಹಿತಿ ಮತ್ತು ದತ್ತಾಂಶಗಳನ್ನು ಕದಿಯುವ ಮತ್ತು ಮಾರುವ ವ್ಯವಸ್ಥಿತ ಜಾಲ ಚಾಲ್ತಿಯಲ್ಲಿದೆ. ಸೈಬರ್ ಕ್ರೈಮ್ ಪ್ರಕರಣಗಳು ಇತ್ತೀಚಿಗೆ ಸುದ್ದಿಮಾಧ್ಯಮಗಳ ಹೆಡ್ಲೈನ್ ಆಗುವ ಮಟ್ಟಿಗೆ ಬೆಳಕಿಗೆ ಬರುತ್ತಿವೆ. ಶಿಕ್ಷಣ, ಆಡಳಿತ, ಆರೋಗ್ಯ, ಸಾರಿಗೆ, ಹಣಕಾಸು, ವ್ಯಾಪಾರ, ಉದ್ಯಮ ಎಲ್ಲವೂ ಗಣಕೀಕೃತವಾಗಿರುವಾಗ ಸೈಬರ್ ಸುರಕ್ಷತೆ ಸದ್ಯದ ಆವಶ್ಯಕತೆಗಳಲ್ಲಿ ಒಂದು.
ಸೈಬರ್ ಕ್ರೈಂ ವ್ಯಾಪ್ತಿಗೆ ಬರೋ ಒಂದೆರಡು ಉದಾಹರಣೆಗಳನ್ನು ನೋಡೋಣ. ಇತ್ತೀಚೆಗೆ ವ್ಯಕ್ತಿಯೊಬ್ಬರು ಆನ್ಲೈನ್ ತಾಣವೊಂದರಲ್ಲಿ ವಸ್ತುವೊಂದನ್ನು ಮಾರಾಟಕ್ಕಿಟ್ಟಿದ್ದರು. ಯಾರೋ ಒಬ್ಬರು ಆ ವಸ್ತುವನ್ನು ನಾನು ಖರೀದಿಸುತ್ತೇನೆ ಅಂತ ಹೇಳಿ ಮಾರಾಟ ಮಾಡುತ್ತಿರೋ ವ್ಯಕ್ತಿಯ ಬಳಿ ಹಣ ಕಳುಹಿಸಬೇಕಾದ ಖಾತೆಯ ವಿವರ ಕೇಳಿದರಂತೆ. ಕೆಲ ನಿಮಿಷಗಳ ಬಳಿಕ ಮಾರಾಟ ಮಾಡುತ್ತಿರೋ ವ್ಯಕ್ತಿಯ ಮೊಬೈಲ್‌ನಲ್ಲಿ ವಸ್ತುವಿನ ನಿಗದಿತ ಬೆಲೆಗಿಂತ ಜಾಸ್ತಿ ಮೊತ್ತ ಪಾವತಿಯಾಗಿರೋ ಸಂದೇಶ ಬರುತ್ತದೆ. ಅತ್ತಕಡೆಯಿಂದ ಮೆಸೇಜ್ ಮಾಡಿ ಸಂಪರ್ಕಿಸಿದ ಆ ವ್ಯಕ್ತಿ ಪ್ರಮಾದದಿಂದ ಜಾಸ್ತಿ ಹಣ ಕಳುಹಿಸಿದ್ದೇನೆ. ಮಿಕ್ಕಿದ ದುಡ್ಡನ್ನು ಪೇಟಿಎಂ ಮೂಲಕ ನನ್ನ ನಂಬರ್’ಗೆ ಕಳುಹಿಸಿ ಅಂದು ಬಿಟ್ಟ. ಇತ್ತ ಮಾರಾಟಕ್ಕಿಟ್ಟ ವ್ಯಕ್ತಿ ಇನ್ನೇನು ಮಿಕ್ಕಿದ ಹಣ ಕಳುಹಿಸಿ ಬಿಡೋಣ ಅಂದವರು ಒಮ್ಮೆ ಇಂಟರ್ನೆಟ್ ಬ್ಯಾಂಕ್ ಲಾಗಿನ್ ಮಾಡಿ ನೋಡುತ್ತಾರೆ. ಆಗ ತಿಳಿಯುತ್ತದೆ ದುಡ್ಡು ಬಂದೇ ಇಲ್ಲ ಅಂತ. ಅತ್ತ ಕಡೆಯ ವ್ಯಕ್ತಿ ಯಾವುದೋ ನಕಲಿ ಮೆಸೇಜ್ ಕಳುಹಿಸೋ ಸರ್ವರ್ ಉಪಯೋಗಿಸಿ ಇವರನ್ನು ವಂಚಿಸಲು ಹವಣಿಸಿದ್ದ.!!
ನಿಮ್ಮ ನಂಬರ್ ಲಾಟರಿಯಲ್ಲಿ ಆಯ್ಕೆಯಾಗಿದೆ ಮತ್ತು ನಿಮಗೆ ಹತ್ತು ಲಕ್ಷ ಬಹುಮಾನ ದೊರೆಯುತ್ತದೆ ಅನ್ನುವ ಮೆಸೇಜ್ ಯಾರೋ ಒಬ್ಬ ವ್ಯಕ್ತಿಗೆ ಬಂದೊಡನೆ ಹಣದ ಆಸೆಗೆ ಆ ವ್ಯಕ್ತಿ ಮೆಸೇಜ್ ಮಾಡಿರೋ ಜನರನ್ನು ಇಮೇಲ್ ಮೂಲಕ ಸಂಪರ್ಕಿಸುತ್ತಾರೆ. ವಂಚನೆಕೋರರು ಹತ್ತು ಲಕ್ಷ ನಿಮ್ಮ ಅಕೌಂಟ್’ಗೆ ವರ್ಗಾವಣೆ ಮಾಡಲು ಸ್ವಲ್ಪ ಖರ್ಚಾಗುತ್ತದೆ ಅಂತ ಹೇಳಿ ಇಪ್ಪತ್ತೋ ಐವತ್ತೋ ಸಾವಿರ ಪೀಕುತ್ತಾರೆ! ಇನ್ನೊಂದು ಪ್ರಕರಣದಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಪಿನ್ ಫೋನ್ ಕಾಲ್ ಮೂಲಕ ವಂಚನೆಕೋರರಿಗೆ ತಿಳಿಸಿಯೋ ಅಥವಾ ಹಣ ವರ್ಗಾವಣೆ ಮಾಡಲು ಬರುವ ಒಟಿಪಿ ಶೇರ್ ಮಾಡಿಯೋ ಪಂಗನಾಮ ಹಾಕಿಸಿಕೊಂಡವರೂ ಇದ್ದಾರೆ. ತೀರ ಇತ್ತೀಚಿಗೆ ಭಾರೀ ಸದ್ದುಮಾಡಿದ್ದ ವನ್ನಾ ಕ್ರೈ ರಾನ್ಸಮ್ವೇರ್ ಮೂಲಕ ಸೈಬರ್ ಕಳ್ಳರು ಬಿಟ್ ಕಾಯಿನ್ ಅನ್ನೋ ಡಿಜಿಟಲ್ ಕರೆನ್ಸಿ ಮೂಲಕ ಕೋಟಿಗಟ್ಟಲೆ ದೋಚಿದ್ದರು.
ಮೇಲಿನ ಎಲ್ಲಾ ಪ್ರಕರಣಗಳಲ್ಲಿ ಸರಕಾರದ ತಪ್ಪೇನಿದೆ ಎನ್ನುವುದೇ ಸೋಜಿಗದ ಪ್ರಶ್ನೆ. ಕೆಲವರಿಗೊಂದು ವಿಚಿತ್ರ ಚಾಳಿ ಇದೆ. ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಅದೇನೇ ಆಗಲಿ ಹಿಂದೂ ಮುಂದೂ ನೋಡದೆ ಮೋದಿ ತಲೆಗೆ ಕಟ್ಟಿ ಬಿಡುತ್ತಾರೆ. ಅವರ ವಿಚಿತ್ರ ತರ್ಕ ಏನೆಂದರೆ ಡಿಮಾನಿಟೈಸೇಶನ್ ಆದ ಮೇಲೆ ನಮ್ಮ ದೇಶದಲ್ಲಿ ಸೈಬರ್ ಕ್ರೈಮ್ ಗಣನೀಯವಾಗಿ ಜಾಸ್ತಿಯಾಗಿದೆ ಎಂದು ಮತ್ತು ಇದಕ್ಕೆ ನೇರ ಕಾರಣ ಡಿಮಾನಿಟೈಸೇಶನ್ ಮಾಡಿದ ಮೋದಿ ಸರಕಾರವೆಂಬಲ್ಲಿಗೆ ಅವರ ವಾದ ತಲುಪಿಬಿಡುತ್ತದೆ. ರಾಹುಲ್ ಗಾಂಧಿ ಟ್ವಿಟರ್ ಖಾತೆ ಹ್ಯಾಕ್ ಮಾಡುದಾಗ ಗಣ್ಯ ವ್ಯಕ್ತಿಗಳ ಖಾತೆಯೇ ಸುರಕ್ಷಿತವಲ್ಲ, ಇನ್ನು ಜನಸಾಮಾನ್ಯರ ಬ್ಯಾಂಕ್ ಖಾತೆಗಳೆಷ್ಟು ಸುರಕ್ಷಿತ ಅನ್ನುವ ಕೂಗನ್ನೆಬ್ಬಿಸುತ್ತಾರೆ. ಇಂಟರ್ನೆಟ್ ಬ್ಯಾಂಕಿಂಗ್ ಸುರಕ್ಷಿತವಲ್ಲ ಅನ್ನೋ ವ್ಯವಸ್ಥಿತ ಹುಯಿಲೆಬ್ಬಿಸಲಾಗುತ್ತದೆ. ಇಂಟರ್ನೆಟ್ ಬ್ಯಾಂಕಿಂಗ್ ನಲ್ಲಿ ಲಾಗಿನ್ ಮಾಡೋಕೆ ಒಂದು ಪಾಸ್ವರ್ಡ್ ಮತ್ತು ಹಣ ಕಳುಹಿಸಲು ಇನ್ನೊಂದು ಓಟಿಪಿ ಬರುತ್ತದೆ ಅನ್ನುವುದನ್ನು ಹೇಳುವುದೇ ಇಲ್ಲ. ಯಾರೋ ಒಬ್ಬ ಸ್ವಯಂಕೃತ ಅಪರಾಧದಿಂದಾಗಿ ಇಂಟರ್ನೆಟ್ ಬ್ಯಾಂಕಿಂಗಿನ ಮೂಲಕ ಹಣ ಕಳೆದುಕೊಂಡರೆ, ಅಥವಾ ಇನ್ಯಾರೋ ಫೇಸ್ಬುಕ್ಕಿನ ಮೂಲಕ ಯಾವುದೋ ಮೋಸದ ಜಾಲಕ್ಕೆ ಬಿದ್ದರೆ ಪ್ರಧಾನಿ ಮೋದಿಯವರ ಕನಸಿನ ಕೂಸಾದ ಡಿಜಿಟಲ್ ಇಂಡಿಯಾ ಎಷ್ಟು ಸುರಕ್ಷಿತ ಎಂದು ಅಪಹಾಸ್ಯ ಮಾಡುತ್ತಾರೆ.
ಜಗತ್ತು ಈಗ ನಡೆಯುತ್ತಿರುವುದು ಡಾಟಾಗಳಿಂದ. ಆದ್ದರಿಂದ ಡಾಟಾವನ್ನು ಸುರಕ್ಷಿತವಾಗಿ ತಲುಪಬೇಕಾದ ಜಾಗಕ್ಕೆ ತಲುಪಿಸಬೇಕಾದ ಅನಿವಾರ್ಯತೆ ದೊಡ್ಡದಿದೆ. ಕೆಲವೊಂದು ಕಂಪನಿಗಳು ಸೈಬರ್ ಸುರಕ್ಷತೆಗೆ ಪ್ರತ್ಯೇಕ ವಿಭಾಗವನ್ನೇ ಶುರುಮಾಡಿವೆ. ಆ ವಿಭಾಗದ ಪ್ರಮುಖ ಕೆಲಸವೆಂದರೆ ಸೈಬರ್ ಕ್ಷಮತೆಯ ಜೊತೆಗೆ ಸೈಬರ್ ಪ್ರಕರಣಗಳ ಗ್ರಹಿಕೆಹೊಂದಿ ಕಾರ್ಯೋನ್ಮುಖವಾಗುವುದು. ಅಣಕು ಸೈಬರ್ ದಾಳಿಯ ಸನ್ನಿವೇಶ ನಿರ್ಮಿಸಿ ಆ ದಿಶೆಯಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗುವುದು. ಸಂಭವನೀಯ ಸೈಬರ್ ದಾಳಿಯನ್ನು ಊಹಿಸಿ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದು.
ಇತ್ತೀಚಿನ ಸಮಯದಲ್ಲಿ ಹಲವು ಕಂಪನಿಗಳು ಸೈಬರ್ ಸುರಕ್ಷತೆಯ ಬಗ್ಗೆ ಬಹಳ ಗಮನ ಹರಿಸುತ್ತಿವೆ. ಆದರೂ ಈ ನಿಟ್ಟಿನಲ್ಲಿ ನಾವು ಇನ್ನೂ ಮುಂದುವರಿಯಬೇಕಿದೆ. ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪನಿಗಳಲ್ಲಿ ಪ್ರತೀ ತಿಂಗಳ ಒಂದು ವಾರಾಂತ್ಯದಲ್ಲಿ ಆ ತಿಂಗಳಲ್ಲಿ ಬಿಡುಗಡೆಯಾದ ಆಪರೇಟಿಂಗ್ ಸಿಸ್ಟಮ್ ಪ್ಯಾಚನ್ನು ಅಪ್ಡೇಟ್ ಮಾಡುತ್ತಾರೆ. ದುರಂತದ ವಿಷಯವೆಂದರೆ ಕೆಲವೊಮ್ಮೆ ಸೈಬರ್ ಪ್ರಕರಣಗಳ ಅಡಿಯಲ್ಲಿ ಸಾಮಾಜಿಕ ಜಾಲತಾಣಗಳ ಪ್ರಕರಣಗಳು ದಾಖಲಾಗುತ್ತಿರುವುದು. ಆನ್ಲೈನ್ ವಂಚನೆ, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಹ್ಯಾಕ್ ಮುಂತಾದ ಪ್ರಕರಣಗಳು ದಾಖಲಾಗಬೇಕಾದ ಕಾಯಿದೆಯ ಅಡಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಜಾತಿನಿಂದನೆ ಮುಂತಾದ ಪ್ರಕರಣಗಳು ದಾಖಲಾಗುತ್ತಿರುವುದು.
ಸೈಬರ್ ಕ್ರೈಮ್ ತಡೆಗಟ್ಟುವಲ್ಲಿ ಸರ್ಕಾರಕ್ಕಿರೋ ಜವಾಬ್ದಾರಿಗಿಂತ ನೂರುಪಟ್ಟು ಜವಾಬ್ದಾರಿ ನಮ್ಮದಿದೆ. ನಮ್ಮಲ್ಲಿ ಹಲವರಿಗಿರೋ ಕೆಟ್ಟ ಚಾಳಿ ಎಂದರೆ ಉಚಿತವಾಗಿ ಸಿಗುವ ಸಾಫ್ಟ್‌ವೇರ್ ಉಪಯೋಗ ಮಾಡುವುದು. ಆಪರೇಟಿಂಗ್ ಸಿಸ್ಟಮನ್ನು ಸಮಯಕ್ಕೆ ಸರಿಯಾಗಿ ಅಪ್ಡೇಟ್ ಮಾಡುತ್ತಾ, ಸೈಬರ್ ಸುರಕ್ಷತೆಯ ಬಹುಮುಖ್ಯ ಭಾಗವಾದ ಒಳ್ಳೆಯ ಆಂಟಿವೈರಸ್ ಉಪಯೋಗಿಸಿದರೆ ಅಪಾಯ ಬಹಳ ಕಡಿಮೆ. ಬಹುಮುಖ್ಯವಾಗಿ ಲಾಟರಿ ಹಣ ಗೆದ್ದಿದ್ದೀರಿ ಅನ್ನುವ ಮೆಸೇಜ್, ಇಮೈಲ್ಗಳು ಬಂದಾಗ ಯಾವುದೇ ಕಾರಣಕ್ಕೂ ಅವುಗಳಿಗೆ ಪ್ರತಿಕ್ರಿಯೆ ನೀಡಲೇಬಾರದು. ಕಾರ್ಡ್ ಪಿನ್, ಪಾಸ್ವಾರ್ಡ್ ಕೇಳಿ ಬರೋ ಕರೆಗಳಿಗೆ ಯಾವುದೇ ಪ್ರತಿಕ್ರಿಯೆ ಕೊಡಬಾರದು. ಡಿಜಿಟಲ್ ಪಾವತಿ ಮಾಡುವಾಗ ಬಹಳ ಎಚ್ಚರಿಕೆಯಿಂದ ಮುಂದುವರಿಯುವುದು ಉತ್ತಮ. ಒಂದೇ ತರನಾದ ಪಾಸ್ವಾರ್ಡ್ ಉಪಯೋಗಿಸುವುದು ಬಹಳ ಅಪಾಯಕಾರಿ. ಸಾಮಾಜಿಕ ಜಾಲತಾಣಗಳಲ್ಲಿ ಬಳಸಿದ ಪಾಸ್ವಾರ್ಡ್ ರೀತಿಯದ್ದೇ ಪಾಸ್ವಾರ್ಡ್ಗಳನ್ನು ಇಂಟರ್ನೆಟ್ ಬ್ಯಾಂಕಿಂಗಿಗೆ ಉಪಯೋಗಿಸುವುದು ಸಮಂಜಸವಲ್ಲ. ಉಚಿತವಾಗಿ ದೊರಕುವ ವೈಫೈಗಳಲ್ಲಿ ಬ್ಯಾಂಕಿಂಗ್ ಮತ್ತಿತರ ಪ್ರಮುಖ ಇಂಟರ್ನೆಟ್ ವ್ಯವಹಾರಗಳನ್ನು ಮಾಡದಿರುವುದೇ ಲೇಸು.ಸಾಮಾನ್ಯವಾಗಿ ಎಲ್ಲಾ ಬ್ಯಾಂಕ್ಗಳ ವೆಬ್ಸೈಟ್ಗಳಲ್ಲೂ ನಮ್ಮ ಬ್ಯಾಂಕಿನ ಅಧಿಕಾರಿಗಳು ಯಾವುದೇ ಪಿನ್ ಅಥವಾ ಪಾಸ್ವರ್ಡ್ ಕೇಳಿಕೊಂಡು ನಿಮಗೆ ಕರೆ ಮಾಡುವುದಿಲ್ಲ. ಒಂದು ವೇಳೆ ಕರೆ ಬಂದರೆ ಯಾವುದೇ ಮಾಹಿತಿಯನ್ನು ನೀಡಬೇಡಿ ಎಂದು ಬಹಳ ಸ್ಪಷ್ಟವಾಗಿ ದಪ್ಪ ಅಕ್ಷರಗಳಲ್ಲಿ ಪ್ರಕಟಿಸಿರುತ್ತಾರೆ. ಡಿಮಾನಿಟೈಸೇಶನ್ ಆದ ಮೇಲೆ ಭಾರತದಲ್ಲಿ ಡಿಜಿಟಲ್ ಪೇಮೆಂಟ್ಗಳು ಜಾಸ್ತಿ ಆದದ್ದು ಹೌದು. ಆದರೆ ಎಲ್ಲದಕ್ಕೂ ಸರಕಾರವನ್ನು ಬಯ್ಯುತ್ತಾ ಕೂರುವ ಬದಲು ಸೈಬರ್ ಕ್ರೈಮ್ ತಡೆಗಟ್ಟುವಲ್ಲಿ ನಮ್ಮ ಪಾತ್ರವೇನು ಎಂದು ತಿಳಿಯಬೇಕಾಗಿರುವುದು ಸಧ್ಯದ ಅತೀ ಅವಶ್ಯಕ ಕೆಲಸಗಳಲ್ಲೊಂದು.
Facebook ಕಾಮೆಂಟ್ಸ್