ಒಂದು ಪುಸ್ತಕ ತನ್ನನ್ನು ಮತ್ತೆ ಮತ್ತೆ ಓದಿಸಿಕೊಳ್ಳುತ್ತದೆ ಅಂದರೆ, ಅದರೊಳಗಿನ ವಸ್ತುವಿಷಯ ಓದುಗನ ಮನಸ್ಸನ್ನು ಮತ್ತೆ ಮತ್ತೆ ಕಾಡುತ್ತಲೇ ಇರುತ್ತದೆ ಎಂದರ್ಥ. ನಮ್ಮ ಬದುಕಿನಲ್ಲಿ ಸಿಗುವ ಸಾಮಾನ್ಯ ಅನುಭವಕ್ಕಿಂತ ಭಿನ್ನವಾದುದನ್ನೋ ಅಥವಾ ಅಪೂರ್ವವಾದುನ್ನೋ ಕಥಾವಸ್ತು ಮನಸ್ಸಿನ ಅನುಭವಕ್ಕೆ ತಂದಾಗ, ನಮ್ಮ ಪ್ರಜ್ಞೆ ಅಂತಹ ಅನುಭವ ವಿಶೇಷವನ್ನು ಹೆಚ್ಚು ಸಮಯ ತನ್ನ ನೆನಪಿನಲ್ಲಿಟ್ಟುಕೊಂಡಿರುತ್ತದೆ. ಬೇರೆಯವರೊಂದಿಗೆ ಚರ್ಚಿಸುತ್ತಲೋ, ತಿಳಿದವರೊಂದಿಗೆ ತರ್ಕಿಸುತ್ತಲೋ ಆ ವಸ್ತು ಹೆಚ್ಚು ದಿನಗಳು ನಮ್ಮ ಒಡನಾಡಿಯಾಗಿಯೇ ಇರುತ್ತದೆ. ಅದರೊಳಗಿನ ಅನೇಕ ವಿಚಾರಗಳು ಬಹಳ ದಿನಗಳ ಕಾಲ ನಮ್ಮೊಡನಾಡಿಗಳಂತೆ ವ್ಯವಹರಿಸುತ್ತಲೇ ಇರುತ್ತದೆ. ಈ ವಿಚಾರಗಳು ಅನೇಕ ದಿನ, ತಿಂಗಳುಗಳಲ್ಲದೆ ಬಹು ವರ್ಷಗಳ ನಂತರವೂ ಮತ್ತೆ ನಮ್ಮ ಸುಪ್ತ ಪ್ರಜ್ಞೆಯೊಳಗಿಂದೆದ್ದು ನಮ್ಮ ಚಿಂತನೆಯನ್ನು, ವಿಚಾರಪರತೆಯನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿರುತ್ತದೆ. ಇಂತಹ ಅಪೂರ್ವ ಕಥಾವಸ್ತುಗಳನ್ನೊಳಗೊಂಡು ಓದುಗ ಸಮುದಾಯವನ್ನು ತನ್ನತ್ತ ಸೆಳೆಯುವುದು ಪೂರ್ಣಚಂದ್ರತೇಜಸ್ವಿಯವರ ವಿಶೇಷ ಕಾದಂಬರಿ “ಕರ್ವಾಲೊ” ಕೂಡ ಒಂದು.
ಕನ್ನಡ ಸಾಹಿತ್ಯಭ್ಯಾಸದ ಆರಂಭದ ದಿನಗಳಲ್ಲಿ ತೇಜಸ್ವಿಯವರ ಪುಸ್ತಕಗಳು ಹೆಚ್ಚಾಗಿ ಓದುಗರನ್ನು ಆಕರ್ಷಿಸಿರುವುದನ್ನು ನಾವೆಲ್ಲ ಕಂಡಿದ್ದೇವೆ. ಅವರ ಕೃತಿಗಳಲ್ಲಿ ಕರ್ವಾಲೊದ ಕಥಾಭೂಮಿಕೆ ಅತಿ ವಿಭಿನ್ನವಾಗಿದ್ದು, ನಮ್ಮನ್ನು ದೈನಂದಿನ ಆಗುಹೋಗುಗಳಿಂದ ಬಹುದೂರ ಕರೆದುಕೊಂಡು ಹೋಗಿ, ಹೊರಜಗತ್ತಿನಲ್ಲಿ ಆವರೆಗೂ ನಿಗೂಢವಾಗಿದ್ದ ಅಸಾಧಾರಣ ವಿಚಾರವೊಂದರ ಎದುರು ತಂದು ನಿಲ್ಲಿಸುತ್ತದೆ. ಅದಕ್ಕೆ ಅಭಿಮುಖವಾದ ಓದುಗನನ್ನು ಹೊಸ ಹೊಳಹಿನ ದಿಕ್ಕಿಗೆ ಚಿಂತಿಸುವಂತೆ ಪ್ರೇರೇಪಿಸುವ ಅದರೊಳಗಿರುವ ವಿಚಾರಶಕ್ತಿ ನಿಜವಾಗಿಯೂ ಅನನ್ಯ. ಹೀಗೆ ಕಾಡಿಹೋದ ಕಾದಂಬರಿ ನನ್ನನ್ನು ಮತ್ತೆ ಆಕರ್ಷಿಸಿ ತನ್ನತ್ತ ಸೆಳೆದದ್ದು ಹತ್ತನ್ನೊಂದು ವರ್ಷಗಳ ನಂತರ. ಇನ್ನೂ ಓದಲು ನೂರಾರು ಪುಸ್ತಕಗಳು ಬಾಕಿಯಿದ್ದರೂ ಅವುಗಳ ಮಧ್ಯೆ ತನ್ನ ಕಥಾವಿಶೇಷತೆಯಿಂದಲೇ ಮರು ಓದಿಗಾಗಿ ಮತ್ತೊಮ್ಮೆ ನುಗ್ಗಿಬಂದು ಮೊದಲಸಾಲಿಗೆ ನಿಂತಾಗ, ಅದನ್ನು ಪಕ್ಕಕ್ಕೆ ತಳ್ಳಿಹಾಕುವಷ್ಟು ನನ್ನ ಮನಸ್ಸು ಸಶಕ್ತವಾಗಿರಲಿಲ್ಲ. ಈ ಹತ್ತು ವರ್ಷಗಳಲ್ಲಿ ಅನೇಕ ಬದಲಾವಣೆಗಳಾಗಿವೆ; ಹೊರ ಜಗತ್ತಿನಲ್ಲಿ ಹಾಗೂ ಅಂತರಂಗದಲ್ಲಿ ಕೂಡ. ಈ ಬದಲಾವಣೆಗಳಿಗೆ ಹೊಂದಿಕೊಂಡು ಬದುಕಿನ ಭವಿಷ್ಯದ ಕಡೆಗೆ ನಾನು ನಡೆದುಕೊಂಡು ಹೋಗುತ್ತಿರುವಾಗ, ಮತ್ತೆ ಈ ಕಾದಂಬರಿ ತನ್ನ ಪ್ರಸ್ತುತತೆಯನ್ನು ಎತ್ತಿಹಿಡಿದು ನನ್ನನ್ನು ತನ್ನತ್ತ ಸೆಳೆದಿದೆ. ಹೀಗೆ ವಿಕಾಸವಾಗುತ್ತಿರುವ ಮನಸ್ಸೊಂದನ್ನು ಮತ್ತೆ ಕಾದಂಬರಿಯ ಕಡೆಗೆ ಸೆಳೆದದ್ದು, ಅಲ್ಲಿ ಕಾಲಜ್ಞಾನಿಯೆಂದು ಕರೆಸಿಕೊಳ್ಳುವ ವಿಜ್ಞಾನಿ “ಕರ್ವಾಲೊ” ನಮ್ಮೆದುರಿಗೆ ಅನಾವರಣಗೊಳಿಸುವ ಪ್ರಕೃತಿಯ ಅಪೂರ್ವ ರಹಸ್ಯ. ಸಮಾಜ ಬೆಳೆವಣಿಗೆಯ (ಪ್ರಗತಿಯ) ರಭಸದಲ್ಲಿ ಯಕಃಶ್ಚಿತ್ತಾಗಿ ಮರೆತುಹೋಗಬಹುದಾಗಿದ್ದ ನಿಗೂಢ ಸತ್ಯವೊಂದನ್ನು, ಅದರ ಮಹತ್ವವನ್ನರಿತು, ಅದನ್ನು ಮತ್ತೆ ಸಾಕ್ಷಾತ್ಕಾರಗೊಳಿಸಲು ನಡೆಸುವ ಪೂರ್ವಸಿದ್ಧತೆ, ಎದುರಾಗುವ ಕಷ್ಟಗಳು, ಅವುಗಳನ್ನು ಮೀರಲು ನಡೆಸುವ ಸಾಹಸ ನಮ್ಮನ್ನು ಕೌತುಕಾವೇಶದಲ್ಲಿ ಮುಳುಗಿಸುತ್ತದೆ.
ಮೂಡಿಗೆರೆಯ ಸುತ್ತಮುತ್ತಲಿನಲ್ಲಿ ಪ್ರಾರಂಭವಾಗುವ ಕಥೆ, ಶಿರಾಡಿ ಘಾಟ್, ಚಾರ್ಮಾಡಿಘಾಟ್ ಗಡಿಗಳಂಚಿನ ದಟ್ಟ ಅರಣ್ಯದವರರೆಗೂ ಹಬ್ಬಿ ಸಾಹಸಮಯ ಅನ್ವೇಷಣೆಯಲ್ಲಿ ಕೊನೆಗೊಳ್ಳುತ್ತದೆ. ಲೇಖಕರೆ ಸ್ವತಃ ಕಥೆಯೊಳಗಿನ ಪಾತ್ರಧಾರಿಯಾಗಿರುವುದರಿಂದ ಕಥಾ ನಿರೂಪಣೆ ಉತ್ತಮಪುರುಷದಲ್ಲಿ ಸಾಗುತ್ತ ಓದುಗರೊಂದಿಗೇ ಮಾತಿಗಿಳಿಯುತ್ತದೆ. ಇಲ್ಲಿ ಲೇಖಕರು (ವಿದ್ಯಾವಂತ ವ್ಯವಸಾಯಗಾರರಾಗಿ), ಮಂದಣ್ಣ, ವಿಜ್ಞಾನಿ ಕರ್ವಾಲೊ, ಅಸಿಸ್ಟಂಟ್ ಪ್ರಭಾಕರ, ಬಿರಿಯಾನಿ ಕರಿಯಪ್ಪರವರದೇ ಮುಖ್ಯಪಾತ್ರಗಳು. ಇವರ ಸರಳ ಸಡಿಲ ಗೆಳತನದ ಮೇಲೆಯೇ ಈ ಅಸಾಮಾನ್ಯ ಕಥಾವಸ್ತು ಬೆಳೆಯುವುದು. ಮೊದಲು ಜೇನು ಸಾಕಾಣಿಕೆ, ವ್ಯವಸಾಯದ ಲಾಭ –ನಷ್ಟ, ಊರಿನಲ್ಲಿ ನಡೆಯುವ ಗುಂಪುಗಾರಿಕೆ, ಮಂದಣ್ಣನ ಎಡವಟ್ಟುಗಳು ಇವುಗಳ ಸುತ್ತಲೇ ಸುತ್ತುವ ‘ಕಥೆಯ ಗತಿ‘ ನಂತರ, ಹಾರುವ ಓತಿಯ ಮೇಲಿರುವ ಕೌತುಕವನ್ನು ಬಳಸಿಕೊಂಡು, ಯುಗಗಳ ಹಿಂದಕ್ಕೆ ಸಂಶೋಧನೆಯ ಸೇತುವೆಯನ್ನು ಕಟ್ಟುತ್ತದೆ. ಕಾಲಪಥದಲ್ಲಿ ಎಂದೋ ನಿರ್ವಂಶವಾಗಿರಬಹುದಾಗಿದ್ದ ಹಾರುವ ಓತಿಯ ಜಾಡನ್ನು ಹಿಡಿದು ಅದನ್ನು ಶೋಧಿಸುವ ಈ ಸಾಹಸಗಾಥೆ. ಅದರ ಹಾದಿಯಲ್ಲಿ ಅನೇಕ ಅವಾಂತರಗಳಿತೆ ಸಿಕ್ಕಿ ಬೀಳುತ್ತದೆ. ಓತಿಯನ್ನು ನೋಡುವ, ಅದರ ವಿಷಯವನ್ನು ಅರಿಯುವ ಸಾಧ್ಯತೆಗೆ ಧಕ್ಕೆಯುಂಟಾದಾಗ, ಕರ್ವಾಲೊರ ಸಮಯಪ್ರಜ್ಞೆ ಹಾಗು ಇತರರ ಗೆಳೆಯರ ಸಹಕಾರ, ಶ್ರಮದಿಂದ ಮತ್ತೆ ಆ ಸಾಹಸಕಾರ್ಯಕ್ಕೆ ಜೀವಬರುತ್ತದೆ. ದೇಶ, ಭಾಷೆ, ನಾಗರಿಕತೆ, ಸಂಸಾರ, ಸರ್ಕಾರ, ಸಂಬಂಧ ಇವುಗಳನ್ನು ಮೀರಿ ಯುಗಯುಗಗಳಾಚೆ ಇದ್ದ ಜೀವ ಸಂಕುಲಕ್ಕೂ ವಾಸ್ತವಕ್ಕೂ ರಹಸ್ಯ ಸೇತುವೆಯಂತಿರುವ ಹಾರುವ ಓತಿಯನ್ನು ಹುಡುಕುವುದೇ ಆ ಗೆಳೆತನದ ಮುಖ್ಯ ಉದ್ದೇಶವಾಗುತ್ತದೆ.
ಕಥೆಯ ಎಲ್ಲಾ ಸನ್ನಿವೇಶಗಳಲ್ಲಿ ಕುತೂಹಲ ಎಷ್ಟು ಓದುಗರನ್ನು ಇಡಿಯಾಗಿ ಹಿಡಿದುಕೊಂಡಿರುತ್ತದೋ , ಅಷ್ಟೇ ಹಾಸ್ಯಮಯವಾಗಿಯೂ ರಂಜಿಸುತ್ತಾ ಹೋಗುತ್ತದೆ. ಸಾಹಸಮಯ ಕಾರ್ಯಸಾಧನೆಯ ಸಾಧ್ಯತೆಯ ಅನುಮಾನದಲ್ಲಿ ಪಾತ್ರಗಳು ಭಾವನೆಗಳ ಏಳುಬೀಳುಗಳಲ್ಲಿ ತೇಲುವಾಗ ಓದುಗರನ್ನು ಭಾವಾವೇಶರನ್ನಾಗಿ ಮಾಡುವಲ್ಲಿ ಕಥೆ ಯಶಸ್ವಿಯಾಗಿದೆ. ಪ್ರಕೃತಿಯನ್ನು – ಮನುಷ್ಯನ ಪ್ರಜ್ಞೆಯಲ್ಲಿ ಹಿಡಿದಿಡಿಯುವ ಪರಿಯನ್ನು ಪೂರ್ಣಚಂದ್ರ ತೇಜಸ್ವಿಯವರು ಇಲ್ಲಿ ರೋಚಕವಾಗಿ ಕತೆಯಲ್ಲಿ ಹೆಣೆದಿಟ್ಟಿದ್ದಾರೆ. ಅಲ್ಲದೆ ಆ ಕಥೆಯನ್ನು ಕೇಳಿಸಿಕೊಳ್ಳಲು ನಮ್ಮನ್ನು ಮತ್ತೆ ಮತ್ತೆ ಕರೆಯುತ್ತಿದ್ದಾರೆ !!
-ಚಂದ್ರಶೇಖರ್ ಬಿ. ಸಿ
shekar.inbox@gmail.com
Facebook ಕಾಮೆಂಟ್ಸ್