ಮಂಕುತಿಮ್ಮನ ಕಗ್ಗ ೦೭೬.
ಬಹುವಾಗಲೆಳಸಿ ತಾನೊಬ್ಬಂಟಿ ಬೊಮ್ಮ ನಿಜ |
ಮಹಿಮೆಯಿಂ ಸೃಜಿಸಿ ವಿಶ್ವವನಲ್ಲಿ ನೆಲೆಸಿ ||
ವಹಿಸಿ ಜೀವತೆಯ ಮಾಯೆಯ ಸರಸವಿರಸದಲಿ |
ವಿಹರಿಪನು ನಿರ್ಲಿಪ್ತ ! – ಮಂಕುತಿಮ್ಮ || ೦೭೬ ||
ಇದೊಂದು ಚಂದ ಚಮತ್ಕಾರದ ಕಗ್ಗ. ಸೃಷ್ಟಿಕರ್ತ ಬ್ರಹ್ಮ ತನ್ನ ಕಾರ್ಯದಲ್ಲಿ ತೋರಿಸಿರುವ ತಾರತಮ್ಯವನ್ನು ಎತ್ತಿ ತೋರಿಸುತ್ತಲೇ ಮತ್ತೊಂದೆಡೆ ಅದರ ವೈವಿಧ್ಯವನ್ನು ಬಿಚ್ಚಿ ತೋರಿಸುವ ಚಮತ್ಕಾರ ಇಲ್ಲಿದೆ. ಆ ತಾರತಮ್ಯದ ಸ್ವರೂಪ ಮೊದಲೆರಡು ಮತ್ತು ಕಡೆಯೆರಡು ಸಾಲಿನ ನಡುವಿನ ವಿವರಣೆಯ ಅಂತರವಾಗಿ ಕಾಣಿಸಿಕೊಂಡಿದೆ.
ಬಹುವಾಗಲೆಳಸಿ ತಾನೊಬ್ಬಂಟಿ ಬೊಮ್ಮ ನಿಜ |
ಮಹಿಮೆಯಿಂ ಸೃಜಿಸಿ ವಿಶ್ವವನಲ್ಲಿ ನೆಲೆಸಿ ||
ಇವೆರಡು ಸಾಲಿನ ಸಾರ ನೇರ ಮತ್ತು ಸರಳ. ಹಿಂದಿನ ಕಗ್ಗವೊಂದರಲ್ಲಿ ಓದಿದ್ದಂತೆ, ತಾನೊಬ್ಬನೇ ಇದ್ದು ಬೇಸರವಾದ ಹೊತ್ತಲ್ಲಿ ಬೊಮ್ಮ ತನ್ನದೇ ಹಲವಾರು ಪ್ರತಿರೂಪಗಳನ್ನು ಸೃಜಿಸಿಕೊಳ್ಳಲು ಬಯಸಿದನಂತೆ. ಆದರೆ ಹಾಗೊಂದು ಸಂಕುಲದ ಸೃಷ್ಟಿಯಾಗಬೇಕಾದರೆ ಅದಕ್ಕೆ ಬೇಕಾದ ಪೂರಕ ಪರಿಸರವೂ ಇರಬೇಕಲ್ಲವೆ – ನೆಲ, ಜಲ, ಪರಿಸರ, ಪ್ರಕೃತಿ ರೂಪದಲ್ಲಿ? ಸರಿ, ತನ್ನ ಪ್ರತಿರೂಪದ ಸೃಷ್ಟಿಯ ಮುನ್ನ, ತನ್ನ ಮಹಿಮೆಯ ಬಲದಿಂದ ಮೊದಲು ಆ ಪೂರಕ ವಿಶ್ವವನ್ನು ನಿರ್ಮಿಸಿ ಅದು ಸಂತುಲಿತ ಸ್ವರೂಪದಲ್ಲಿ ನೆಲೆಗೊಳ್ಳುವಂತೆ ಮಾಡಿದನಂತೆ. ಇಲ್ಲಿ ಗಮನಾರ್ಹ ಅಂಶವೆಂದರೆ – ಆ ವಿಶ್ವವನ್ನು ತಾನೇ ಸೃಜಿಸಿದ್ದಷ್ಟೆ ಹೊರತು ಅದಕ್ಕೆ ಮತ್ತಾವುದರ ಪ್ರಭಾವವನ್ನು ಸೇರಿಸಲಿಲ್ಲ. ಅದರ ನಿರ್ವಹಣೆ, ನಿಭಾಯಿಸುವಿಕೆಯ ಹೊಣೆಯನ್ನು ಅವಕ್ಕೇ ಕೊಟ್ಟುಬಿಟ್ಟ – ಸೂರ್ಯ ತಾನೇ ಬೆಳಗುವ ಹಾಗೆ, ಗ್ರಹಗಳ ಪರಿಭ್ರಮಣೆ, ಹಗಲುರುಳಿನ ಪಾಳಿ, ಸಸ್ಯ ಜಗದ ನಿತ್ಯದ ಚಟುವಟಿಕೆ ಇತ್ಯಾದಿ.
ಈಗ ಮಿಕ್ಕೆರಡು ಸಾಲಿನಲ್ಲಿ ಬರುವ ಜೀವಜಗದ (ಜೀವತೆ) ಸೃಷ್ಟಿಯ ಕುರಿತು ನೋಡೋಣ.
ವಹಿಸಿ ಜೀವತೆಯ ಮಾಯೆಯ ಸರಸವಿರಸದಲಿ |
ವಿಹರಿಪನು ನಿರ್ಲಿಪ್ತ ! – ಮಂಕುತಿಮ್ಮ ||
ಸೂಕ್ತ ಪರಿಸರವನ್ನು ಸೃಜಿಸಿದ ಮೇಲೆ ಮಿಕ್ಕಿದ್ದು ಜೀವ ಜಗ ತಾನೆ – ನರ ಮನುಜರೂ ಸೇರಿದಂತೆ ? ಅದನ್ನೂ ಸೃಜಿಸಿದ ಬೊಮ್ಮ ಅದರ ವೈವಿಧ್ಯತೆಯಿಂದಲೆ ಜೀವತೆಗೊಂದು ವಿಶಿಷ್ಠ ಅಸ್ತಿತ್ವವನ್ನು ಕೊಟ್ಟುಬಿಟ್ಟ. ಅದಾದ ಮೇಲೆ ಆ ಜೀವತೆಯ ಜಗವನ್ನು ನಿಭಾಯಿಸಿ, ನಿರ್ವಹಿಸುವ ಪ್ರಶ್ನೆ ಬಂದಾಗ – ಅದನ್ನು ಮಾಯೆಯ ಹೆಗಲಿಗೆ ವರ್ಗಾಯಿಸಿಬಿಟ್ಟ ! ಬಹುಶಃ ತಾನೊಬ್ಬನೆ ಒಬ್ಬಂಟಿಯಿದ್ದಾಗ ತನಗಾದ ರೀತಿಯ ಬೇಸರ ತನ್ನ ಸೃಷ್ಟಿಗೂ ಆಗದಿರಲೆಂದು. ಬೊಮ್ಮನದು ನಿಶ್ಚಿತ , ನಿಶ್ಚಲ, ಜಡ ಸ್ವಭಾವವಾದರೆ ಮಾಯೆಯ ಮನಸ್ಥಿತಿ ಅದಕ್ಕೆ ವ್ಯತಿರಿಕ್ತವಾದ ಚಂಚಲ ಸ್ವರೂಪದ್ದು. ಆ ಚಂಚಲತೆಯನ್ನು ಜೀವತೆಗೆ (ಜೀವಜಗಕ್ಕೆ) ಅನಿವಾರ್ಯ ಆಯಾಮವಾಗಿ ಸೇರಿಸಿಬಿಟ್ಟ ಕಾರಣ ಅದರ ಚಂಚಲ ಗುಣಗಳು ಜೀವಸಂಕುಲದಲ್ಲಿ ಸರಸ ವಿರಸಗಳ ರೂಪದಲ್ಲಿ ಅನಾವರಣವಾಗಿಬಿಟ್ಟವು. ಅಲ್ಲಿಗೆ ಅವು ತರುವ ಸುಖ-ದುಃಖ, ನೋವು-ನಲಿವು, ಪ್ರಶಾಂತತೆ-ಉದ್ವಿಗ್ನತೆ, ಪ್ರೀತಿ-ದ್ವೇಷ, ಮಮತೆ-ಕೋಪ, ಸಾಮರಸ್ಯ-ಹೊಡೆದಾಟ ಇತ್ಯಾದಿಗಳೆಲ್ಲವೂ ತಮ್ಮ ಪ್ರಭಾವ ಬೀರುತ್ತ ಜೀವತೆಯ ದೈನಂದಿನ ಆಗುಹೋಗುಗಳನ್ನು ನಿಯಂತ್ರಿಸತೊಡಗಿದವು. ಮಾಯೆಯ ಪ್ರಭಾವವನ್ನು ಅಧಿಗಮಿಸಲಾಗದ ಜೀವಸಂಕುಲ ಅದರೊಳಗೆ ಸಿಕ್ಕು ನಲಿದು-ನರಳುವ ಇಹ ಸಂಸಾರದ ಪ್ರಪಂಚವಾಗಿ ರೂಪುಗೊಂಡುಬಿಟ್ಟಿತು. ಅದು ಹೀಗೆ ತನ್ನೆಲ್ಲಾ ತಲ್ಲೀನ-ತಲ್ಲಣಗಳ ನಡುವೆ ತನ್ನದೇ ಸಿಕ್ಕಿನಲ್ಲಿ ಸಿಕ್ಕಿಕೊಂಡು ಜೀವಜಗವನ್ನು ಹೆಣಗಾಡಿಸುತ್ತಿದ್ದರೆ, ಅದರ ಕಾರಣಕರ್ತನಾದ ಬೊಮ್ಮ ಮಾತ್ರ ತಾನು ಅಂದುಕೊಂಡಿದ್ದಂತೆ ಸೃಜಿಸಿದ ಸಂತೃಪ್ತಿಯನ್ನಾಗಲಿ ,ತಾನಂದುಕೊಂಡಂತೆ ಆಗಲಿಲ್ಲವೆಂಬ ಅಸಂತುಷ್ಟಿ-ಬೇಸರವನ್ನಾಗಲಿ ತೋರಿಸದೆ ನಿರ್ಲಿಪ್ತನಾಗಿ ಕೂತು ತನ್ನ ಸೃಷ್ಟಿಯ ಫಲಿತದಲ್ಲಿ ಇನ್ನು ತನ್ನದೇನು ಜವಾಬ್ದಾರಿಯೂ ಮಿಕ್ಕಿಲ್ಲವೆನ್ನುವಂತೆ ತನ್ನದೇ ಜಗದಲ್ಲಿ ವಿಹರಿಸಿಕೊಂಡಿದ್ದಾನಂತೆ ! ಈ ಜೀವ ಜಗದಲ್ಲಿ ಮಾಯೆಯ ಪ್ರಭಾವಳಿಯನ್ನು ಸೇರಿಸಿದ್ದು ಅವನೇ ಆದರೂ ಅದರ ಆಗುಹೋಗುಗಳೆಲ್ಲದರ ಜವಾಬ್ದಾರಿ ಅದೇ ಜೀವ ಜಗದ್ದೆಂದು ನಿರಾಳನಾಗಿಬಿಟ್ಟಿದ್ದಾನೆ.
ಇಲ್ಲಿ ವಿಶ್ವವನ್ನು ಸೃಜಿಸಿದ್ದು ಬರಿಯ ನಿಜವಾದ ಮಹಿಮೆಯ ಪ್ರಭಾವದಿಂದ ಮಾತ್ರ. ಅದಕ್ಕೆ ಮತ್ತಾವುದರ ಪ್ರಭಾವವೂ ಬೆರೆಯಲಿಲ್ಲ. ಆದರೆ ಜೀವತೆಗೆ ಮಾತ್ರ ಮಾಯೆಯ ಚಂಚಲ ಕೋಷ್ಟಕ ಸೇರಿಸಲ್ಪಟ್ಟಿತು. ಹೀಗೆ ಪೂರಕ ವಿಶ್ವದ ಸೃಷ್ಟಿಗೆ ನಿರ್ದಿಷ್ಠತೆಯನ್ನು ಕೊಟ್ಟ ಬ್ರಹ್ಮ ಜೀವಜಗಕ್ಕೆ ಮಾತ್ರ ಚಂಚಲತೆಯನ್ನು ಕೊಟ್ಟು ಅವೆರಡರ ಸಮೀಕರಣದಲ್ಲಿ ನಡೆದಿರುವ ಜಗವ್ಯಾಪಾರವನ್ನು ನಿರ್ಲಿಪ್ತನಾಗಿ ನೋಡಿಕೊಂಡು ಆನಂದಿಸುತ್ತಿದ್ದಾನೆ -ಎನ್ನುವುದು ಮಂಕುತಿಮ್ಮನ ಉವಾಚ.
#ಕಗ್ಗಕೊಂದು_ಹಗ್ಗ
#ಕಗ್ಗ_ಟಿಪ್ಪಣಿ
Facebook ಕಾಮೆಂಟ್ಸ್