X

ಮಂಜಿನನಗರಿಯಲ್ಲೊಂದು ದಿನ…

ಎಲ್ಲಾ ಪ್ರವಾಸ ಕಥನಗಳೂ ಶುರುವಿಗೆ ಮುಂಚೆ ಡೋಲಾಯಮಾನ ಯೋಜನೆಗಳೇ ಆಗಿರುತ್ತವೆ. ಅದೂ ಈಗೀನ ಕಾಲದ ಕೂಲಿ ಕೆಲಸಮಾಡುವ ಗೆಳೆಯ ಬಳಗವನ್ನು ಕಟ್ಟಿಕೊಂಡು ಹೋಗುವುದು ಕಪ್ಪೆ ಹಿಡಿದು ಕೊಳಗ ತುಂಬಿದಂತೆ. ನಮ್ಮ ಯೋಜನೆಗಳು ಬಾಸಿನ ಹೆಂಡತಿ ಮಾಡಿದ ಅಡಿಗೆಯ ರುಚಿಯೋ , ಮನೆಯಲ್ಲಿ ಮಾಡಿದ ಜಗಳದ ಮೇಲೋ ನಿಂತಿರುವುದು ವಿಪರ್ಯಾಸ. ಅದನ್ನೆಲ್ಲಾ ಮೆಟ್ಟಿ ನಾವು ಯೋಜನೆ ಸಿದ್ಧಗೊಳಿಸಬೇಕಾಗುತ್ತದೆ. ಸರಿ, ಎಲ್ಲಿಗೆ ಹೋಗುವುದು? ಚೀಪ್ ಅಂಡ್ ಬೆಸ್ಟ್ ಸ್ಥಳ ಯಾವುದಿದೆ? ಗೋವಾದಿಂದ ಚರ್ಚೆ ಶುರುಮಾಡುವುದು ನಮ್ಮ ಸಂಸ್ಕೃತಿ. ಗೋವಾದಿಂದ ಶುರುವಾಗಿ ಕೊನೆಗೆ ಮಡಿಕೇರಿಗೆ ಬಂದು ನಿಲ್ಲುತ್ತೇವೆ. ಇದೆಲ್ಲಾ ಗೊತ್ತಿದ್ದೇ ನಾವು ಸೀದಾ ಮಡಿಕೇರಿ ಯೋಜನೆ ಮಾಡಿದ್ದೆವು.  ನಾಲ್ಕು ವರ್ಷ ನಾನು ಮೈಸೂರಿನಲ್ಲಿ ಇದ್ದರೂ ನಾನು ಕೊಡಗು ನೋಡಿಲ್ಲ. ಗೆಳೆಯರ ಬಳಗವೂ ಹೆಚ್ಚು ಕೊಡಗು ನೋಡಿದವರಲ್ಲ.  ಈಗ ಹೊರಡುವುದೊಂದೇ ಬಾಕಿ ಉಳಿದಿತ್ತು.

‘ಜೂಮ್ ‘ ಕಾರು ತೆಗೆದುಕೊಂಡು ಹೋಗುವುದು ಎನ್ನುವುದು ನಮ್ಮ ಆಸೆ, ಆದರೆ ಸಾಲು ಸಾಲು ರಜದ ಕಾರಣ ಜೂಮ್ ಕಾರುಗಳು ಎಲ್ಲವೂ ಬಿಕರಿ ಆಗಿ ಹೋಗಿತ್ತು. ಬೇರೆ ಆಯ್ಕೆ ಇಲ್ಲದೆ ‘ರೆಂಟೆಡ್ ಕಾರ್’ ತೆಗೆದುಕೊಂಡು ಹೊರಟೆವು.  ಹೊರಡುವ ವೇಳೆ ಇದು ನಮ್ಮ ಜೀವನದಲ್ಲಿ ಮರೆಯಲಾರದ ನೆನಪುಗಳ ಸಂತೆ ಆಗಬಹುದೆಂಬ ಕಲ್ಪನೆಯೂ ನಮಗಿರಲಿಲ್ಲ ಬಿಡಿ. ಬೆಳಿಗ್ಗೆ  ನಾಲ್ಕು ಗಂಟೆಗೆ ನಾವು ಬೆಂಗಳೂರು ಬಿಟ್ಟಾಗಿತ್ತು. ಮೈಸೂರು -ಬೆಂಗಳೂರು ಹೈವೇ ಸೂರ್ಯನ ಆಗಮನಕ್ಕೆ ಇನ್ನೂ ಕಾಯುತಿತ್ತು, ಕರಗಿರದ ಇಬ್ಬನಿ ನಡುವೆ ‘ಸೊಯ್ಯನೆ’ ಹೋಗುವ ಮಜಾ ಅನುಭವಿಸಿದವರಿಗೇ ಗೊತ್ತು.  ಗ್ಲಾಸು ತೆಗೆದರಂತೂ ಸೀದಾ ಸ್ವರ್ಗ!

ಹೈವೇ ದಾಟಿದ ಮೇಲೆ ಹುಣಸೂರು ಎಂಬ ಅತ್ತ ಸಿಟಿಯೂ ಅಲ್ಲದ ಇತ್ತ ಹಳ್ಳಿಯೂ ಅಲ್ಲದ ಊರೊಂದು ಸಿಗುತ್ತದೆ. ಬಹುಶಃ ಪ್ರವಾಸೋದ್ಯಮ ಹಾಗೂ ಕೃಷಿ ಎರಡೇ ಆ ಊರಿನ ಜೀವಾಳ. ಥೇಟು ಕೊಡಗಿನಂತೆ, ಆದರೆ ಹುಣಸೂರು ಸಮತಟ್ಟು ಪ್ರದೇಶದಂತೆ ಕಾಣಿಸುತ್ತದೆ ಅಷ್ಟೇ. ತಾಳ ಹಾಕುತ್ತಿದ್ದ ಹೊಟ್ಟೆಗೆ ಶ್ರುತಿ ಪೆಟ್ಟಿಗೆ ಸಿಕ್ಕಿದ್ದು ಹುಣಸೂರಿನ ಸಣ್ಣ ಹೋಟೆಲ್ ಅಲ್ಲಿ. ಗಡದ್ದು ಮಸಾಲೆ ದೋಸೆ ಬಾರಿಸಿ ತಲಾ ಒಂದೊಂದು ಫೋಟೋ ತೆಗೆಸಿಕೊಂಡು ಹೊರಟಿದ್ದಾಯ್ತು.

ದಾರಿಯುದ್ದಕ್ಕೂ ಬುಲ್ಲೆಟ್ಟು, ಜೂಮ್ ಕಾರುಗಳು, ಟೂರಿಸ್ಟ್ ವೆಹಿಕಲ್ ಗಳು ಸಾಥ್ ಕೊಡುತ್ತಲೇ ಇತ್ತು. ಈ ಬೆಂಗಳೂರಿಗರ ಹುಚ್ಚಾಟಕ್ಕೆ ಪಾರವೇ ಇಲ್ಲವೇನೋ? ವೀಕೆಂಡ್ ಮಸ್ತಿಯಲ್ಲಿ ಸಿದ್ಧ ಹಸ್ತರು. ಮೈಸೂರು  ಹಾಗೂ ಕೊಡಗಿನ ಗಡಿಯಲ್ಲಿ ಬೈಲುಕುಪ್ಪೆ ಎಂಬ ಹಳ್ಳಿ ಸಿಗುತ್ತದೆ. ಬೈಲುಕುಪ್ಪೆ ನಮ್ಮ ರಾಜ್ಯದಲ್ಲಿರುವ ಅತಿ ದೊಡ್ಡ ಟಿಬೆಟಿಯನ್ ಕ್ಯಾಂಪ್ . ೧೯೬೧ ರಲ್ಲಿ ಆಗಿನ ಮೈಸೂರು ರಾಜ್ಯ ಸರ್ಕಾರ ಒಂದಿಷ್ಟು ಜಾಗ ಮಂಜೂರು ಮಾಡಿ ನಿರಾಶ್ರಿತರ ಶಿಬಿರ ಶುರು ಮಾಡಿತು. ಇಂದು ಇಲ್ಲಿ ಸುಮಾರು ಎಪ್ಪತ್ತು ಸಾವಿರ ಟಿಬೆಟಿಯನ್ನರು ಇರಬಹುದು. ಸರ್ಕಾರವೇ ಅವರಿಗೆ ಶಾಲೆ, ಕಾಲೇಜು, ಆಸ್ಪತ್ರೆಯನ್ನು ತೆರೆದಿದೆ. ಮೀಸಲಾತಿಯನ್ನೂ ಕೊಡುತ್ತದೆ. ಹದಿನಾರು ವರ್ಷ ಮೇಲ್ಪಟ್ಟ ಪ್ರತಿ ಟಿಬೆಟಿಯನ್ ಸಹ ‘ಆರ್ ಸಿ’ ಸರ್ಟಿಫಿಕೇಟ್ ಮಾಡಿಸಿಕೊಳ್ಳುವುದು ಕಡ್ಡಾಯ. ಹಾಗೂ ಅದನ್ನು ಪ್ರತಿ ವರ್ಷವೂ ರಿನಿವಲ್ ಮಾಡಿಸುವುದು ಕಡ್ಡಾಯ . ಬೈಲುಕುಪ್ಪೆಯಲ್ಲಿ ‘ನಾಮ್ ಡ್ರೋಲಿಂಗ್’ ಎಂಬ ದೇವಾಲಯವಿದೆ. ಆಳೆತ್ತರದ ಚಿನ್ನದ ಬುಧ್ದನ ಮೂರ್ತಿಯನ್ನು ಇಲ್ಲಿ ಪ್ರತಿಷ್ಟಾಪಿಸಿದ್ದಾರೆ. ಇಲ್ಲಿ ಇನ್ನೂ ನಾಲಗೆ ಹೊರಳದ ಹೆಸರಿನ ಲೆಕ್ಕವಿಲ್ಲದಷ್ಟು ದೇವಾಲಯಗಳು, ಶಾಲೆಗಳು ಇವೆ. ಅದನ್ನೆಲ್ಲ ನೋಡುತ್ತಾ ಕುಳಿತರೆ ಎರಡು ವಾರ ಅದಕ್ಕೆ ಹಿಡಿಸುತ್ತದೆ. ನಮಗೆ ಎಲ್ಲರೂ ದಲೈಲಾಮಾರಂತೆ ಕಾಣಿಸುತ್ತಾರೆ.  ನಮ್ಮ ತೆರಿಗೆಯ ಹಣವನ್ನೇ ಬಳಸಿಕೊಂಡು ನಮಗಿಂತ ಸುಖವಾದ ಬದುಕು ಅವರು ಬದುಕುತ್ತಿದ್ದಾರೆ ಎನ್ನುವುದೇ ಸಣ್ಣ ವಿಷಾದ. ಆದರೂ ಛಲ ಬಿಡದ ಬದುಕು, ಸ್ವಚ್ಛ ಪುಟ್ಟ ಪುಟ್ಟ ಹಳ್ಳಿಗಳು. ಸಾಫು ಸಪಾಟು ರಸ್ತೆಗಳು ಭಾರತೀಯರಿಗೆ ಪಾಠವಾಗಬಲ್ಲವು. ಪುಟ್ಟ ಕಣ್ಣುಗಳನ್ನು ಇಷ್ಟೇ ಇಷ್ಟು ಅಗಲಕ್ಕೆ ತೆರೆದುಕೊಂಡು ಪುಟ -ಪುಟನೆ ಓಡಾಡುವ ಟಿಬೆಟಿಯರನ್ನು ನೋಡುವುದು ಚೆಂದ.

ಸದ್ಯಕ್ಕೆ ರಿಪೇರಿ ಕಾರ್ಯಗಳಿಗೆ ಗೋಲ್ಡನ್ ಟೆಂಪಲ್ಲಿನ ಬಾಗಿಲು ಮುಚ್ಚಿದೆ . ಬೈಲುಕುಪ್ಪೆ ಊರು ಒಂದು ರೌಂಡ್ ಹಾಕಿ ಬರಬಹುದು.

ಬೈಲುಕುಪ್ಪೆಯಿಂದ ಹಾರಂಗಿ ಜಲಾಶಯ ಕೇವಲ ಎರಡು-ಮೂರು ಮೈಲುಗಳ ಹಾದಿ ಅಷ್ಟೇ. ಸಮಯ ಸಿಕ್ಕರೆ ಹೋಗಬಹುದು. ನಾವು ಸೀದಾ ‘ದುಬಾರೆ’ ಕ್ಯಾಂಪಿಗೆ ಹೋದೆವು. ದುಬಾರೆ ಕಾವೇರಿ ನದಿಯ ಮಧ್ಯೆ ಇರುವ ಒಂದು ದ್ವೀಪ. ಆನೆ ಸಫಾರಿ, ಆನೆಯ ಜೀವನ ನೋಡಲು  ಹೋಗಬೇಕು. ಇದಿಷ್ಟು ಬಿಟ್ಟರೆ ಬೇರಾವ ರೀತಿಯಿಂದಲೂ ಹೋಗುವ ಜಾಗವಲ್ಲ . ಒಂದೇ ಕಾರು ಹೋಗುವ ರೋಡು , ಪ್ರವಾಸಿಗರ ಗಿಜಿ ಗಿಜಿ . ಬನ್ನೇರುಘಟ್ಟ ರಸ್ತೆಯಲ್ಲಿ ಇದ್ದಷ್ಟೇ ಟ್ರಾಫಿಕ್ಕು ಇಲ್ಲೂ ಇರುತ್ತದೆ . ರಜಾ ದಿನಗಳನ್ನು ಬಿಟ್ಟು ಉಳಿದ ದಿನ ಹೋಗಬಹುದೇನೋ , ನನಗೆ ಗೊತ್ತಿಲ್ಲ . ನಾವು ದುಬಾರೆ ತಲುಪುವ ಹೊತ್ತಿಗಾಗಲೇ ತಲೆ ಗಿರ್ರ್ ಎನ್ನಲು ಶುರುವಾಗಿತ್ತು . ನಾವು ಕಾಯ್ದಿರಿಸಿದ್ದ ರೂಮು ಸಹ ಕ್ಯಾನ್ಸಲ್ ಆದ ವಿಷಯ ತಿಳಿಯಿತು . ಪ್ರವಾಸದ ಮಜಾ ಹೋಗಿ , ರೂಮು ಹುಡುಕುವ ತಲೆನೋವು ನಮಗೆ ಹಿಡಿಯಿತು . ಕೊಡಗಿನ ಪ್ರವಾಸೋದ್ಯಮದ ವಿಶ್ವರೂಪ ನಮಗೆ ತಿಳಿದದ್ದೇ ಆಗ . ದಿನವೊಂದಕ್ಕೆ ಒಬ್ಬರಿಗೆ  ಒಂದೂವರೆ ಸಾವಿರ ಕೊಡುತ್ತೇನೆಂದರೂ ರೂಮು , ಹೋಂ ಸ್ಟೇಗಳು ಸಿಗುವುದು ಕಷ್ಟ .  ಮಡಿಕೇರಿಯ ಆಸುಪಾಸಿನಲ್ಲೇ ರೂಮು ಮಾಡಿದರೆ ಅನುಕೂಲ ಜಾಸ್ತಿ . ಆದರೆ ಎಲ್ಲೂ ಸಿಗದ ಕಾರಣ ನಾವು ಸಿದ್ಧಾಪುರದ ಹತ್ತಿರ ‘ ಮರಗೋಡು ‘ ಎಂಬ ಹಳ್ಳಿಯಲ್ಲಿ ರೂಮು ಮಾಡಬೇಕಾಯಿತು . ಆ ಹಳ್ಳಿಯಲ್ಲೂ ಸಹ ಒಬ್ಬರಿಗೆ ದಿನವೊಂದಕ್ಕೆ ಒಂದೂವರೆ ಸಾವಿರ !

ಕೊಡಗಿನ ಆರ್ಥಿಕತೆ ನಿಂತಿರುವುದು ಕೇವಲ ಪ್ರವಾಸೋದ್ಯಮ ಹಾಗು ಕಾಫಿಯ ಮೇಲೆ .  ಪ್ರವಾಸೋದ್ಯಮ ಅದೆಷ್ಟರ ಮಟ್ಟಿಗೆ ಕೊಡಗಿನ ಮಣ್ಣಿನಲ್ಲಿ ಹೊಕ್ಕಿದೆ ಎಂದರೆ , ಇಲ್ಲಿನ ಪ್ರತಿ ಹಳ್ಳಿಯಲ್ಲೂ ಹೋಂ ಸ್ಟೇ ಗಳು , ರೆಸ್ಟೋರೆಂಟುಗಳು , ರೂಮುಗಳು , ರೆಸಾರ್ಟ್ಗಳು ಕಾಣುತ್ತವೆ . ಆದರೆ ಹೇಳಲಾರದ ಅವ್ಯಕ್ತ ಆನಂದ ಕೊಡುವ ಜಾಗಗಳಿವು . ೧೯೫೦ ರ ತನಕ ಕೊಡಗು ಪ್ರತ್ಯೇಕ ರಾಜ್ಯವಾಗೇ ಇತ್ತು , ನಂತರ ಕರ್ನಾಟಕದೊಡನೆ ವಿಲೀನವಾದರೂ ಈಗಲೂ ಸಹ ಪ್ರತ್ಯೇಕ ರಾಜ್ಯದ ಕೂಗು ಆಗಾಗ ಕೇಳಿಸುತ್ತದೆ . ಕೊಡವರು ಜಾಲಿ ಮನುಷ್ಯರು , ಶ್ರೀಮಂತ ಸಂಸ್ಕೃತಿಯ ಮತ್ತು ಶ್ರೀಮಂತ ಆಸ್ತಿಯ ಒಡೆಯರು . ನನಗೆ ಕೊಡವರಲ್ಲಿ ಬಹಳ ಹಿಡಿಸುವ ವಿಷಯ ಸ್ತ್ರೀ ಸ್ವಾತಂತ್ರ್ಯ . ಕೊಡವರಲ್ಲಿ ಇರುವ ಸ್ತ್ರೀ ಸ್ವಾತಂತ್ರ್ಯ ನಮಗೆ ಮಾದರಿ . ನಮ್ಮ ಕಾಲೇಜಿನಲ್ಲೇ ಎಷ್ಟೋ ಕೊಡವ ಹುಡುಗಿಯರನ್ನು ನಾನು ಹತ್ತಿರದಿಂದ ಬಲ್ಲೆ . ಹಾಯಾಗಿ ಜೀಪು ಓಡಿಸಿಕೊಂಡು , ಮದುವೆಮನೆಗಳಲ್ಲಿ ಹುಡುಗರೊಟ್ಟಿಗೆ ಕೂತು ವೈನು ಕುಡಿಯುತ್ತಾ ಎಂಜಾಯ್ ಮಾಡುತ್ತಾರೆ . ಇವರ ಭಾಷೆಯೂ ವಿಚಿತ್ರ , ಕೊಡಗು ಸಣ್ಣ ಜಿಲ್ಲೆಯಾದರೂ ಎರಡು ರೀತಿಯ ಕೊಡವ ಭಾಷೆ ಇದೆ . ಆದರೂ ಕೊಡವ ಒಂದು ಭಾಷೆ ಎಂದು ಹೇಳುವುದು ಕಷ್ಟ , ಕನ್ನಡ ಹಾಗೂ ತುಳುವಿನ ಮಧ್ಯದ ಉಪ ಭಾಷೆ ಎಂದು ಹೇಳಬಹುದು . ‘ಕಟ್ಟೆಮನೆ ಪ್ರಕಾಶ್’ ಆಪಾಧ್ಭಾಂದವರಂತೆ ಬಂದು ನಮಗೆ ಹೋಂ ಸ್ಟೇ ನೀಡಿದರು . ( ದುಡ್ಡು ಕೊಟ್ಟಿದ್ದೇವೆ ಅದು ಬೇರೆ ವಿಷಯ ಬಿಡಿ ) .

ಅಡ್ವಾನ್ಸ್ ಕೊಟ್ಟು , ಮಡಿಕೇರಿಗೆ ಬಂದು ಊಟ ಮಾಡಿ ಮಾಂದಾಲ್ ಪಟ್ಟಿಯ ಕಡೆ ಸ್ಟಿಯರಿಂಗ್ ತಿರುಗಿಸಿದೆವು . ಮಾಂದಾಲ್ ಪಟ್ಟಿ ಎಂದರೆ ತಿಳಿಯುವುದು ಕಷ್ಟ ಮುಗಿಲ್ಪೇಟೆ ಎಂದರೆ ತಿಳಿದೀತು . ಕೊಡಗು ಪೂರ್ತಿ ಜಿಲ್ಲೆಯಲ್ಲಿ ಮೊದಲ ತಾಪತ್ರಯ ಎಂದರೆ ಸರಿಯಾದ ಸೈನ್ ಬೋರ್ಡ್ ಇಲ್ಲದಿರುವುದು . ದಾರಿ ಹುಡುಕುವುದರಲ್ಲೇ ಅರ್ಧ ಪ್ರವಾಸ ಮುಗಿದು ಹೋಗುತ್ತದೆ .

ಮಡಿಕೇರಿಯಿಂದ ಇಪ್ಪತ್ತು ಕಿಲೋಮೀಟರ್ ಅಷ್ಟು ದೂರದಲ್ಲಿ ಮಾಂದಾಲ್ ಪಟ್ಟಿಯಿದೆ . ಹೋಗುವ ಮಾರ್ಗದಲ್ಲಿ ಕಾಣುವ ದೃಶ್ಯಗಳು ಅಪೂರ್ವ . ತಿರುವು ಮುರುವಿನ ಸಣ್ಣ ರಸ್ತೆ , ಎದುರಿನಿಂದ ಮತ್ತೊಂದು ಕಾರು ಬಂದರೆ ಎತ್ತಿಯೇ ಇಡಬೇಕು . ಈ ರೋಡೂ ಸಹ ಪ್ರವಾಸಿಗಳಿಂದ ಕಿಕ್ಕಿರಿದಿರುತ್ತದೆ . ನಾವು ಪಾರ್ಕಿಂಗ್ ಗೆ ಕೊಡುವ ದುಡ್ಡನ್ನು ಸರಿಯಾಗಿ ಉಪಯೋಗಿಸಿದ್ದರೆ ಸಾಕಿತ್ತು . ಮಾಂದಾಲ್ ಪಟ್ಟಿ ಒಳ್ಳೆಯ ಪ್ರವಾಸಿ ತಾಣವಾಗುತಿತ್ತು . ಮಾಂದಾಲ್ ಪಟ್ಟಿಯ ಬೆಟ್ಟದ ತುದಿ ಏರಿದರೆ ಪುಷ್ಪಗಿರಿ ರಿಸೆರ್ವ್ ಫಾರೆಸ್ಟ್ ಕಾಣಿಸುತ್ತದೆ . ಆಗುಂಬೆ ಬಿಟ್ಟರೆ ಅತೀ ಹೆಚ್ಚು ಕಾಳಿಂಗ ಸರ್ಪ ಕಾಣಿಸುವುದು ಇಲ್ಲೇ . ಆಗಾಗ ಹುಲಿ ಬಂದ ಕಥೆಗಳನ್ನೂ ಗ್ರಾಮಸ್ಥರಿಂದ ತಿಳಿದುಕೊಳ್ಳಬಹುದು . ರೊಯ್ಯನೆ ಹೋಗುವ ಜೀಪುಗಳಿಂದ ತಪ್ಪಿಸಿಕೊಂಡು ಬದುಕಿ ಬರುವುದು ಕಷ್ಟ . ಕಾರು ಮುಂದೆ ಹೋಗುವುದಿಲ್ಲ ಎಂದು ವ್ಯಾಪಾರ ಕುದುರಿಸಲು ನೋಡುತ್ತಾರೆ , ತಲೆ ಕೆಡಿಸಿಕೊಳ್ಳದೆ ಓಡಿಸಿ . ಮಾಂದಾಲ್ ಪಟ್ಟಿಯ ಮಜಾ ಸವಿಯುತ್ತಾ ಸಂಜೆ ಆದದ್ದೇ ನಮಗೆ ತಿಳಿಯಲಿಲ್ಲ .

ನಿಜವಾದ ಕೊಡಗು ತೆರೆದುಕೊಂಡಿದ್ದು ಆಗ . ನಮ್ಮ ಹೋಂ ಸ್ಟೇ ಇದ್ದದ್ದು ಮರಗೋಡು ಎಂಬ ಹಳ್ಳಿಯಲ್ಲಿ . ಪ್ರಸಿದ್ಧ ಜಾಗಗಳಿಗೇ ಸೈನ್ ಬೋರ್ಡ್ ಇಲ್ಲವೆಂದಾದಮೇಲೆ ಆ ಕಗ್ಗಾಡಿನ ಮೂಲೆಗೆ ಸೈನ್ ಬೋರ್ಡ್ ಇರಬಹುದೆಂದು ನಾವು ಬಯಸುವುದು ಮೂರ್ಖತನವಾಗಿತ್ತು . ಕೊಡವರಿಗೆ ದಾರಿ ಹೇಳುವ ಕ್ಲಾಸು ಮಾಡಬೇಕೆಂದು ನನಗೆ ಅನಿಸಿದ್ದು ಆಗಲೇ . ” ಹೀಗೆ ಮೂರು ಮೈಲಿ ಹೋಗಿ ಅಲ್ಲಿ ಒಂದು ಜಂಕ್ಷನ್ ಸಿಕ್ತದೆ ಅಲ್ಲಿಂದ ರೈಟ್ , ಶಾಲೆ ಸಿಕ್ತದೆ , ಒಂದು ಏರು , ಒಂದು ಸೇತುವೆ ಆಮೇಲೆ ಲೆಫ್ಟ್ ” – ಈ ರೀತಿ ಹೇಳಿದರೆ ನಮ್ಮ ಕಥೆ ಏನಾಗಬೇಡ . ಅದೂ ಕೊಡಗಿನ ಹಳ್ಳಿ ಎಂದರೆ ನಾಲ್ಕು ಮನೆಗಳಿಗಿಂತ ಹೆಚ್ಚು ಇರುವುದಿಲ್ಲ . ಕಣ್ಣು ಹಾಯಿಸಿದಷ್ಟೂ ಕಾಫಿ ತೋಟಗಳು , ಅರ್ಧ ಅಡಿಯ ರಸ್ತೆ ಅಷ್ಟೇ . ಅವರು ಹೇಳುವ ಜಂಕ್ಷನ್ ಯಾವಾಗ ಸಿಗುತ್ತದೋ ಎಂಬುದೇ ತಿಳಿಯುವುದಿಲ್ಲ . ಅರ್ಧ ವಿರಾಜಪೇಟೆ ತಾಲೂಕು ಸುತ್ತಿದರೂ ಮರಗೋಡು ಸಿಗಲೊಲ್ಲದು . ಕೊನೆಗೆ ಬೇಸತ್ತು ಮನೆ ಮನೆ ಬಾಗಿಲು ತಟ್ಟಿ ದಾರಿ ಕೇಳಲು ಶುರು ಮಾಡಿದೆವು . ಬಹುಶಃ ಮುಂದೆ ಎಂದಾದರೂ ನಾವು ಚೆಟ್ಟಳ್ಳಿ ಸಮೀಪ ಚುನಾವಣೆಗೆ ನಿತ್ತರೆ ಸ್ಪಷ್ಟ ಬಹುಮತ ಗ್ಯಾರಂಟಿ .

ಯಾವುದೊ ಹೆಸರಿಲ್ಲದ ಊರಿನ ತೋಟದೊಳಗೆ ನಾವು ಹೋಗುತ್ತಿದೆವು , ಅಲ್ಲಿ ದಾರಿ ಇದೆ ಎಂದು ತಿಳಿದದ್ದು ಗ್ರಾಮಸ್ಥನೊಬ್ಬ ಟಾರ್ಚು ಹೊಡೆದು ತೋರಿಸಿದ ಮೇಲೆಯೇ . ಅದೇ ದಾರಿಯಲ್ಲಿ ಮತ್ತೊಂದು ಕಾರು ಬಂದು ನಾವು ಅರ್ಧ ಫರ್ಲಾಂಗು ಹಿಂದೆ ಬರಬೇಕಾಯಿತು . ಪುಣ್ಯಕ್ಕೆ ಅವರು ಪ್ರಕಾಶರ ನೆಂಟರೇ ಆಗಿದ್ದರು . ಮತ್ತೂ ಕೇಳುತ್ತಾ ಹೋದ ನಮಗೆ ದೇವರೇ ಸಿಕ್ಕಿದ , ಆಟೋ ಡ್ರೈವರ್ ಭರತನ ರೂಪದಲ್ಲಿ . ಆದರೆ ದೇವರು ವಾಲಾಡುತ್ತಿದ್ದ ಎಂಬುದೇ ವ್ಯತ್ಯಾಸ . ಆತನ ಮನೆಯೂ ಮರಗೋಡು , ಆತನ ಆಟೋ ಹೋದಂತೆ ನಾವು ಹೋಗಿ ರಾತ್ರಿ ಒಂಬತ್ತೂ ವರೆಗೆ ಹೋಂ ಸ್ಟೇ ತಲುಪಿದ್ದು ನಮ್ಮ ಜೀವನದ ಮರೆಯಲಾರದ ಘಟನೆ . ನಾವು ಮಡಿಕೇರಿಯಲ್ಲೇ ಉಳಿದಿದ್ದರೆ ಕೊಡಗನ್ನು ಇಷ್ಟು ಸಮೀಪದಿಂದ ನೋಡಲು ಸಾಧ್ಯವಾಗುತ್ತಿರಲಿಲ್ಲ .

ಕೊಡಗು ಸಹ ನಮ್ಮೂರು ಸಾಗರದಂತೆಯೇ . ಅಲ್ಲೊಂದು ಇಲ್ಲೊಂದು ಮನೆ . ದಟ್ಟ ಕಾಡು , ಬೆಟ್ಟ , ಗುಡ್ಡ , ಅಸಂಖ್ಯ ಹೊಳೆಗಳು . ಅಡಿಕೆ , ಕಾಫಿ ತೋಟಗಳು . ಮುಖ್ಯ ವ್ಯತ್ಯಾಸ ಎಂದರೆ ನಮ್ಮವರು ಕೊಡವರಂತೆ ವ್ಯವಹಾರಕ್ಕೆ ಇಳಿದಿಲ್ಲ , ತಮ್ಮನ್ನು ತಾವು ಮಾರಿಕೊಂಡಿಲ್ಲ . ನಾವಿದ್ದ ಹೋಂ ಸ್ಟೇ ಮಾಲೀಕ ನಾವು ಹೊರಡುವಾಗ ತಣ್ಣಗೆ ಬಂದು ” ಇಲ್ಲಿ ಡ್ರಿಂಕ್ಸ್ ಸಿಗುದಿಲ್ಲ , ಮಡಿಕೇರಿ ಇಂದಾನೆ ತಂದ್ಬಿಡಿ ” ಎಂದ . ಅವನ ಮನೆಯೊಳಗೇ ಕರೆದು ಊಟ ಹಾಕಿದ . ವರ್ಷಪೂರ್ತಿ ಇದೆ ಹಾಡಾದರೆ ಪ್ರೈವಸಿ ಕಥೆ ಏನು ? . ಕೇವಲ ದುಡ್ಡು ಮಾಡುವ ಮನೋಭಾವ ಅಷ್ಟೇ ! . ಆದರೆ ಆತಿಥ್ಯ ನೀಡುವುದನ್ನು ಕೊಡವರಿಂದ ಕಲಿಯಬೇಕು . ಬೇಗನೆ ಆತ್ಮೀಯರಾಗುತ್ತಾರೆ .

ಮರುದಿನ ರೂಮು ಖಾಲಿ ಮಾಡಿ ನಾವು ಚೆಲುವರ ಫಾಲ್ಸ್ ಕಡೆ ಹೊರೆಟೆವು . ಎತ್ತರ, ಗಾತ್ರದಲ್ಲಿ ಇದು ಜೋಗದ ಮೊಮ್ಮಗ ಅಷ್ಟೇ . ಅದೇ ಮಜಾ ! . ವಿರಾಜಪೇಟೆ ತಾಲೂಕಿನಲ್ಲೇ ಹೆಸರಿಲ್ಲದ ಹೊಳೆಯಿಂದ ಈ ಜಲಪಾತ ಸೃಷ್ಟಿಯಾಗಿದೆ . ಇದು ನಂತರ ಕಾವೇರಿಯನ್ನು ಸೇರುತ್ತದೆ . ಮಾರ್ಗದಲ್ಲಿ ನೀವು ಇಗ್ಗುತ್ತಪ್ಪ ದೇವಾಲಯ ನೋಡಬಹುದು . ಚೆಲುವರ ನೋಡಲು ಚೆಲುವಾಗಿ ಕಂಡರೂ ಬಹಳ ಅಪಾಯಕಾರಿ ಸ್ಥಳ . ಈ ಮಳೆಗಾಲ ಒಂದರಲ್ಲೇ ಸುಮಾರು ಮೂವತ್ತು ಜನ ಅಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ . ಈಗ ಇಬ್ಬರು ಗಾರ್ಡುಗಳನ್ನು ಸರ್ಕಾರ ನೇಮಿಸಿದೆ .

ಕೊಡಗಿನಲ್ಲಿ ಇಂತಹ ಜಲಪಾತಗಳು ಹೆಜ್ಜೆಗೊಂದು ಸಿಗುತ್ತವೆ . ನಂತರ ನಾವು ಹೋಗಿದ್ದು ಭಾಗಮಂಡಲಕ್ಕೆ . ಭಗಂಡೇಶ್ವರ ದೇವಾಲಯಕ್ಕೆ . ಇಲ್ಲಿ ಕಾವೇರಿ ನದಿ ಕನ್ನಿಕೆ ಮತ್ತು ಸುಜ್ಯೋತಿ ನದಿಗಳ ಜೊತೆ ಸೇರಿಕೊಳ್ಳುತ್ತದೆ . ಭಗಂಡೇಶ್ವರ ಮುನಿಗಳು ತಪಸ್ಸು ಮಾಡಿದ ಜಾಗ . ನೀರು ಬಹಳ ಸ್ವಚ್ಛ . ಇಲ್ಲಿಂದ ಸುಮಾರು ಹತ್ತು ಕಿಲೋಮೀಟರು ಹತ್ತಿದರೆ ತಲಕಾವೇರಿ ಸಿಗುತ್ತದೆ .

ಕಾವೇರಿ ನದಿ ಹುಟ್ಟುವ ಸ್ಥಳ ತಲಕಾವೇರಿ . ಭಾಗಮಂಡಲದಿಂದ ಸಿಂಗಲ್ ರೋಡಿನ ದಾರಿ . ಎಡಗಡೆ ತಲಕಾವೇರಿ ರಿಸೆರ್ವ್ ಫಾರೆಸ್ಟ್ , ಬಲಗಡೆ ಕಡಿದಾದ ಬೆಟ್ಟ . ಎದುರಿನಿಂದ ಬ್ರೇಕ್ ಒತ್ತದೇ ನುಗ್ಗುವ ವಾಹನಗಳು . ಮ್ಯಾಗಿ ನಿಷೇಧವಾಗಿದ್ದ ಕಾಲಕ್ಕೆ ಅತೀ ಹೆಚ್ಚು ನಷ್ಟವಾಗಿದ್ದು ತಲಕಾವೇರಿಯ ಗೂಡಂಗಡಿಗಳಿಗೆ . ಪ್ರತಿ ಅಂಗಡಿಯಲ್ಲೂ ಸರಗಟ್ಟಲೆ ಮ್ಯಾಗಿ ಪ್ಯಾಕೆಟ್ ನೇತು ಹಾಕಿ ಮಾರುತ್ತಾರೆ . ಕಾವೇರಿಯ ಉಗಮ ಸ್ಥಾನದಲ್ಲಿ ಪವಿತ್ರ ಸ್ನಾನ ಮಾಡಬಹುದು . ‘ ಕನ್ನಡ ನಾಡಿನ ಜೀವನದಿ ಕಾವೇರಿ ‘ ಹಾಡಿಗೆ ತಮಿಳಿನ ಖುಷ್ಬೂ ಕುಣಿದಿದ್ದೂ ಇದೇ ಜಾಗದಲ್ಲಿ . ಉಗಮಸ್ಥಾನದಿಂದ ಬೆಟ್ಟದ ತುದಿಯವರೆಗೂ ಹೋಗಬಹುದು . ತಲಕಾವೇರಿಯಿಂದ ಸೀದಾ ನಾವು ಹೊರಟಿದ್ದು ಬೆಂಗಳೂರಿಗೆ . ಹುಣಸೂರಿನಿಂದ ಶುರುವಾದ ಮಳೆ ಬೆಂಗಳೂರಿನ ತನಕ ಬಿಟ್ಟೂ ಬಿಡದೆ ಕಾಡಿತು . ಬೆಂಗಳೂರು ತಲುಪಿದ್ದು ಹನ್ನೆರಡೂ ವರೆಗೆ . ಉಳಿದಂತೆ ನಾವು ತಿಂದಿದ್ದು , ಕುಡಿದಿದ್ದು ಎಲ್ಲವೂ ಅನ್-ಇಂಟೆರೆಸ್ಟಿಂಗ್ .ದುಡ್ಡಿನ ವ್ಯಾಮೋಹಕ್ಕೆ , ಮೋಜು , ಮಸ್ತಿಗೆ ನಾವು ಕೊಡಗನ್ನು ಹಾಳು ಮಾಡುತ್ತಿದ್ದೇವೆ . ಕೊಡವರು ಅದರಿಂದ ಬರುವ ಆದಾಯದ ಮುಖ ನೋಡಿ ಸುಮ್ಮನೆ ಕುಳಿತಿದ್ದಾರೆ . ಖಂಡಿತವಾಗಿ ಇದಕ್ಕೊಂದು ಕಡಿವಾಣದ ಅಗತ್ಯತೆ ಇದೆ . ಮಾಂದಾಲ್ ಪಟ್ಟಿಗೆ ಹೋಗುವಾಗ ಎದುರಿನಿಂದ ಬಂದ ಇಂಡಿಕಾ ಕಾರಿನ ಡ್ರೈವರ್ ಕಂಠ ಪೂರ್ತಿ ಕುಡಿದಿದ್ದ . ಆ ರಸ್ತೆಯಲ್ಲಿ ಕುಡಿದು ಓಡಿಸಿದರೆ ಏನಾಗಬಹುದು ? . ಕಠಿಣ ಕಾನೂನಿನ ಅಗತ್ಯತೆ ಬಹಳವೇ ಇದೆ .

ಉಳಿದಂತೆ ಕೊಡಗಿನ ಸಂಬಾರ ಪದಾರ್ಥ , ಕೆಎ ೧೨ ಜೀಪು , ಸುಂದರ ಕೊಡವ ಹುಡುಗಿಯರು , ಶುಧ್ದ ಜೇನು ತುಪ್ಪ , ಹೋಂ ಮೇಡ್ ವೈನ್ ಹಾಗು ಚಾಕೊಲೇಟ್ ಫೇಮಸ್ಸು . ಅದನ್ನು ಮರೆಯದಿರಿ ಮರೆತು ನಿರಾಶರಾಗದಿರಿ . ಸಾಧ್ಯವಾದಷ್ಟು ವೀಕ್ ಡೇಸ್ ನಲ್ಲಿ ಹೋದರೆ ಉತ್ತಮ .

ಹ್ಯಾಪಿ ಜರ್ನಿ …….

 

Facebook ಕಾಮೆಂಟ್ಸ್

Gurukiran: ನಿರುಪದ್ರವಿ ಸಾಧು ಪ್ರಾಣಿ. ಹುಟ್ಟಿದ್ದು ಹವ್ಯಕ ಬ್ರಾಹ್ಮಣ ಕುಟುಂಬದಲ್ಲಿ. ಐದಡಿಯ ಮೇಲೆ ಆರಿಂಚು ಇದ್ದೇನೆ. ದೇಹದ ತೂಕಕ್ಕಿಂತ ಮಾತಿನ ತೂಕ ಹೆಚ್ಚು . ಗೋಧಿ ಬಣ್ಣ ಸಾಧಾರಣ ಮೈಕಟ್ಟು . ಸದ್ಯಕ್ಕೆ ಬರವಣಿಗೆ ಹವ್ಯಾಸ , ಮುಂದೆ ಗೊತ್ತಿಲ್ಲ.
Related Post