X

ಬಳ್ಳಾರಿ ಪಾದಯಾತ್ರೆಯನ್ನೊಮ್ಮೆ ನೆನಪಿಸಿಕೊಳ್ಳಿ ಸಿದ್ಧರಾಮಯ್ಯ..!

ಬಿಜೆಪಿ ಸರಕಾರದ ಅತ್ಯಂತ ಕೆಟ್ಟ ದಿನಗಳವು. ಹೆಜ್ಜೆ ಹೆಜ್ಜೆಗೂ ಯಡಿಯೂರಪ್ಪನವರಿಗೆ ಅಡ್ಡಗಾಲು ಹಾಕುತ್ತಿದ್ದ ಸ್ವಪಕ್ಷೀಯರು, ಇವರೆಲ್ಲಿ ಸಿಕ್ಕಿ ಬೀಳುತ್ತಾರೆಂದು ಹಾತೊರೆದು ಕುಳಿತಿದ್ದ ಸಿದ್ಧರಾಮಯ್ಯ ನೇತೃತ್ವದ ವಿರೋಧ ಪಕ್ಷದವರು, ಇದಕ್ಕೆ ಸರಿಯಾಗಿ ಕಂಟಕಪ್ರಾಯವಾಗಿ ಪರಿಣಮಿಸಿದ ಬಲ್ಲಾರಿ ಗಣಿ ಹಗರಣ.. ಸಿದ್ಧರಾಮಯ್ಯರಿಗೆ ಅದೊಂದೇ ಸಾಕಿತ್ತು ಬಿಜೆಪಿಯ ವಿರುದ್ಧ ದೊಡ್ಡದೊಂದು ಹೋರಾಟ ಸಂಘಟಿಸೋದಕ್ಕೆ ಮತ್ತು ಕಾಂಗ್ರೆಸ್ಸಿನತ್ತ ಜನರ ಗಮನವನ್ನು ಸೆಳೆಯೋದಕ್ಕೆ. ಇವತ್ತು ಬಿಜೆಪಿಯ ಬೈಕ್ ರಾಲಿ ಬಗ್ಗೆ ಮಾತನಾಡುವಾಗ ಸಿದ್ಧರಾಮಯ್ಯ ಮತ್ತು ರಾಮಲಿಂಗಾ ರೆಡ್ಡಿ ‘ಬಿಜೆಪಿಯವರು ಮತಗಳನ್ನು ಸೆಳೆಯೋದಕ್ಕೆ ರಾಲಿ ಮಾಡುತ್ತಿದ್ದಾರೆ’ ಎಂದು ಹೇಳುತ್ತಿದ್ದಾರೆ.ಅದು ಸತ್ಯವೋ ಸುಳ್ಳೋ, ಮುಂದೆ ಗೊತ್ತಾಗುತ್ತದೆ. ವಾಸ್ತವದಲ್ಲಿ ಆವತ್ತು ಕಾಂಗ್ರೆಸ್ ಬಳ್ಳಾರಿಗೆ ಪಾದಯಾತ್ರೆ ಮಾಡಿದ ಉದ್ದೇಶವಂತೂ ಮತಗಳನ್ನು ಸೆಳೆಯುವುದಷ್ಟೇ ಆಗಿತ್ತು ಅಂತ ಈಗ ನಿಸ್ಸಂಶಯವಾಗಿ ಹೇಳಬಹುದು, ಯಾಕೆಂದರೆ ಆವತ್ತು ಗಣಿ ಹಗರಣದ ಬಗ್ಗೆ ಅಷ್ಟೆಲ್ಲಾ ಅಬ್ಬರಿಸಿದ್ದ ಸಿದ್ಧರಾಮಯ್ಯ ತಾನು ಅಧಿಕಾರಕ್ಕೆ ಬಂದ ಬಳಿಕ ಗಣಿ ವಿಚಾರದಲ್ಲಿ ತೆಗೆದುಕೊಂಡ ಕ್ರಮಗಳೇನು? ಸಂತೋಷ್ ಲಾಡ್, ಅನಿಲ್ ಲಾಡ್ ಮುಂತಾದ ಕಾಂಗ್ರೆಸ್ ಮುಖಂಡರ ಮೇಲೆ ಏನು ಕ್ರಮಗಳನ್ನು ತೆಗೆದುಕೊಂಡಿದ್ದಾರೆಂದು ನೋಡಿದರೆ ಎಲ್ಲವೂ ಸ್ಪಷ್ಟವಾಗುತ್ತದೆ. ಆ ದೃಷ್ಟಿಯಿಂದ ನೋಡುವಾಗ ಬಿಜೆಪಿಯ ಬೈಕ್ ರಾಲಿಯಲ್ಲಿ ಮತಗಳನ್ನು ಸೆಳೆಯುವ ಉದ್ದೇಶವಿದ್ದರೂ ಸಹ ಸರಕಾರ ಅವರಿಗೆ ಅನುಮತಿಯನ್ನು ನೀಡಲೇಬೇಕು. ಮತ ನೀಡೋದು ಬಿಡೋದು ಜನರಿಗೆ ಬಿಟ್ಟದ್ದು. ಸಿದ್ಧರಾಮಯ್ಯನವರು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆಂದರೆ ಬಿಜೆಪಿ ಬೈಕ್ ರಾಲಿ ಮಾಡಿದರೂ ಸಹ ಮತ್ತೆ ಅವರಿಗೇ ವೋಟ್ ಒತ್ತುತ್ತಾರೆ.

ವಾಸ್ತವದಲ್ಲಿ ಬಿಜೆಪಿಯವರು ಮತಗಳನ್ನು ಸೆಳೆಯುತ್ತಾರೆನ್ನುವುದೇ ಕಾಂಗ್ರೆಸ್ ಸರಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು. ಹೇಗೂ ಇನ್ನು ಆರೇ ಆರು ತಿಂಗಳಿನಲ್ಲಿ ಚುನಾವಣೆಯ ರಣಾಂಗಣ ಕಾವೇರುತ್ತಿದೆ. ಇಂತಹಾ ಸಮಯದಲ್ಲಿ ತಮ್ಮ ಸರಕಾರದ ದುರಾಡಳಿತದ ಕುರಿತು, ಕಾನೂನು ಸುವ್ಯವಸ್ಥೆಯ ವೈಫಲ್ಯದ ಕುರಿತು ಜನರ ಮುಂದೆ ಎಳೆ ಎಳೆಯಾಗಿ ದೊಡ್ಡ ಮಟ್ಟದಲ್ಲಿ ತೆರೆದಿಡೋಕೆ ಬಿಟ್ಟರೆ ಅಪಾಯ ತಪ್ಪಿದ್ದಲ್ಲ ಎನ್ನುವುದು ಖಾತರಿಯಾಗಿದ್ದಕ್ಕೆಯೇ ಬೈಕ್ ರಾಲಿಗೆ ಅನುಮತಿಯನ್ನು ಕೊಟ್ಟಿಲ್ಲ ಅಂತ ನನಗನಿಸುತ್ತದೆ. ಇಲ್ಲದಿದ್ದರೆ, ಮಂಗಳೂರಿಗೆ ಪಿಣರಾಯಿ ವಿಜಯನ್ ಬರುತ್ತಾರೆಂಬ ಕಾರಣಕ್ಕೆ ಮಂಗಳೂರಿನಲ್ಲಿ ಒಂದು ವಾರ ಮೊದಲೇ ವಿರೋಧ ಕೇಳಿ ಬಂದಾಗಲೂ ಹಠಕ್ಕೆ ಬಿದ್ದ ಸರಕಾರ ದೊಡ್ಡ ಮಟ್ಟದ ಭದ್ರತೆಯೊಂದಿಗೆ ಪಿಣರಾಯಿಗೆ ಕೆಂಪು ಹಾಸಿನ ಸ್ವಾಗತ ನೀಡಿತು. ಉಡುಪಿಯಲ್ಲಿ ಪರಿಸ್ಥಿತಿ ಹದಗೆಡಲಿದೆ ಅಂತ ಗುಪ್ತಚರ ಇಲಾಖೆ ಮೊದಲೇ ಹೇಳಿತ್ತಾದರೂ ಸಹ ಉಡುಪಿ ಚಲೋ ಸಂಘಟಕರಿಗೆ ಜಾತಿ ಹೆಸರಿನಲ್ಲಿ ಮೋದಿಯನ್ನು, ಪೇಜಾವರ ಶ್ರೀಗಳನ್ನು ಬೈಯ್ಯೋದಕ್ಕೆ ಅನುವು ಮಾಡಿ ಕೊಟ್ಟಿತ್ತು. ಎಲ್ಲಾ ಕಡೆ ಕೋಮು ಗಲಾಟೆಗಳಾಗುವ ಸಾಧ್ಯತೆಗಳಿವೆ ಅಂತ ಸಾಮಾನ್ಯದಲ್ಲಿ ಸಾಮಾನ್ಯ ಜನರು ಸಹ ಕೂಗಿ ಹೇಳಿದರೂ ಕೇಳದೆ ಸರಕಾರವೇ ಮುಂದೆ ನಿಂತು ಟಿಪ್ಪು ಜಯಂತಿಯನ್ನು ಮಾಡಿತು. ಇತ್ತೀಚೆಗೆ ಮಂಗಳೂರಿನಲ್ಲಿ ಎಲ್ಲಾ ಕಡೆ ನಿಷೇದಾಜ್ಞೆ ಇದ್ದಾಗಿಯೂ, ಕೋಮು ದಳ್ಳುರಿ ಉತ್ತುಂಗದಲ್ಲಿದ್ದ ಸಮಯದಲ್ಲೂ ಕಾಂಗ್ರೆಸ್ಸಿನ ಸಮಾವೇಶ ನಡೆಸುವುದಕ್ಕೆ ಎಲ್ಲ ರೀತಿಯ ಅನುಮತಿಯನ್ನು ಮಂಗಳೂರಿನ ಪೋಲೀಸರು ಕೊಟ್ಟಿದ್ದರು. ಆವಾಗೆಲ್ಲ ಇರದ ಕಾನೂನು ಸುವ್ಯವಸ್ಥೆ ಹದಗೆಡುವ ಭಯ ಬಿಜೆಪಿಯವರು ಬೈಕ್ ರಾಲಿ ಮಾಡುತ್ತಾರೆಂದಾಗ ಹುಟ್ಟಿದ್ದು ಎಲ್ಲಿಂದ??

ಕಾಂಗ್ರೆಸ್ಸಿನ ಬಳ್ಳಾರಿ ಪಾದಯಾತ್ರೆಯನ್ನೊಮ್ಮೆ ಗಮನಿಸಿ.. 320 ಕಿಲೋಮೀಟರು ಪಾದಯಾತ್ರೆ… 14 ದಿನಗಳು.. ಪ್ರತೀ ಜಿಲ್ಲೆಗಳಿಂದ ಐವತ್ತು ಸಾವಿರ ಜನರನ್ನು ಸೇರಿಸುವ ಗುರಿ.. ದೊಡ್ಡದಾಗಿ ಮೈಕು ಕಟ್ಟಿಕೊಂಡು, ಕಿರುಚಾಡಿಕೊಂಡು, ಆಗಿನ ಸರಕಾರದ ವಿರುದ್ಧ ಅಶ್ಲೀಲ ಘೋಷಣೆಗಳನ್ನು ಕೂಗಿಕೊಂಡು, ಮಧ್ಯೆ ಮಧ್ಯೆ ಕಾಲು ನೋವೆಂದು ಇತರರ ಕೈಯಿಂದ ಮಸಾಜ್ ಮಾಡಿಕೊಂಡು, ಚಿಕನ್ ಬಿರಿಯಾನಿ ತಿಂದುಕೊಂಡು, ತಮಟೆ ಬಡಿದುಕೊಂಡು ಸಿದ್ಧರಾಮಯ್ಯನವರು ಬಳ್ಳಾರಿ ತಲುಪುವಲ್ಲಿ ಯಶಸ್ವಿಯಾಗಿದ್ದರು. ಪಾದಯಾತ್ರೆಯಲ್ಲಿ ಸಾವಿರಾರು ಜನ ಸೇರಿದ್ದರು. ಒಂದಲ್ಲ ಎರಡಲ್ಲ, ಹದಿನಾಲ್ಕು ದಿನ.. ಬಿಜೆಪಿಯ ಬೈಕ್ ರಾಲಿಯಿಂದ ಟ್ರಾಫಿಕ್ ಸಮಸ್ಯೆಯುಂಟಾಗುತ್ತದೆ, ಜನ ಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂದು ನೆಪ ಹೇಳುತ್ತಿರುವ ಸಿದ್ಧರಾಮಯ್ಯ, ರಾಮಲಿಂಗಾ ರೆಡ್ಡಿಯವರೇ, ಪ್ರಮುಖ ಹೆದ್ದಾರಿಗಳಲ್ಲಿ, ಪಟ್ಟಣ-ನಗರಗಳಲ್ಲಿ ಸಂಚರಿಸಿದ ಪಾದಯಾತ್ರೆಯಿಂದಾಗಿ ಜನ ಸಾಮಾನ್ಯರಿಗೆ ತೊಂದರೆಯಾಗಲಿಲ್ಲವಾ? ಪಾದಯಾತ್ರೆ ಸಾಗಿದ ಯಾವ ದಾರಿಯಲ್ಲಿಯೂ ಟ್ರಾಫಿಕ್ ಜಾಮ್ ಆಗಲಿಲ್ಲವಾ? ಆವಾಗ ಆಗದ ತೊಂದರೆ ಬಿಜೆಪಿ ಬೈಕ್ ರಾಲಿ ಮಾಡಿದಾಗ ಹೇಗೆ ಆಗತ್ತದೆ? ಸ್ಪಷ್ಟ ಉತ್ತರ ಕೊಡಿ, ಇಲ್ಲದಿದ್ದರೆ ರಾಜಕೀಯ ಕಾರಣಗಳಿಗಾಗಿಯೇ ಬೈಕ್ ರಾಲಿಗೆ ಅನುಮತಿ ನೀಡಿಲ್ಲವೆಂಬುದು ಸ್ಪಷ್ಟವಾಗುತ್ತದೆ.

ಬಳ್ಳಾರಿ ಪಾದಯಾತ್ರೆಯ ಸಂದರ್ಭದಲ್ಲಿ ಸಿದ್ಧರಾಮಯ್ಯ ಹಾಗು ಕಾಂಗ್ರೆಸ್ಸಿನ ಇತರ ನಾಯಕರು..

ಹೋಗಲಿ, ಆ ಹದಿನಾಲ್ಕು ದಿನಗಳಲ್ಲಿ ಯಾವುದಾದರೂ ಒಂದು ದಿನ ಆವತ್ತಿನ ಸರಕಾರವಾಗಲೀ, ಪೋಲೀಸರಾಗಲಿ ನಿಮಗೆ ಅನುಮತಿ ನಿರಾಕರಿಸಿದರಾ? ನಿಮ್ಮ ಪಾದಯಾತ್ರೆಯಲ್ಲಿ ಎಷ್ಟು ಜನ ಬರುತ್ತಾರೆ? ಅವರೆಲ್ಲರದ್ದೂ ವಿವರ ಕೊಡಿ, ನಿಮ್ಮವರೇ ಬರುತ್ತಾರೆಂದು ಏನು ಗ್ಯಾರಂಟೀ? ಕಿಡಿಗೇಡಿಗಳು ನಿಮ್ಮನ್ನು ಸೇರಿಕೊಳ್ಳುವುದಿಲ್ಲವೆಂದು ಏನು ಗ್ಯಾರಂಟೀ? ಮುಂತಾದ ಪ್ರಶ್ನೆಗಳನ್ನು ಯಾತ್ರೆ ಹೊರಡುವ ಹಿಂದಿನ ದಿನ ಕೇಳಿ ನಿಮ್ಮ ಪಾದಯಾತ್ರೆಗೆ ಕಮೀಶನರ್ ಆಗಲೀ, ಗೃಹ ಮಂತ್ರಿಯಾಗಲೀ ಅಡ್ಡಗಾಲು ಹಾಕಿದ್ದರೇ? ಪಾದಯಾತ್ರೆ ಹೊರಡುವ ದಿನ ಪೋಲೀಸರನ್ನು ಮನೆಗೆ ಕಳುಹಿಸಿ ಮನೆಯಿಂದ ಹೊರಬರದಂತೆ ಕಾಂಗ್ರೆಸ್ ನಾಯಕರನ್ನು ಯಾರಾದರೂ ತಡೆದಿದ್ದರೆ? ಅಥವಾ ಯಾರನ್ನಾದರೂ ಬಂಧಿಸಿದ್ದರೆ? ಎಲ್ಲದಕ್ಕಿಂತಲೂ ಹೆಚ್ಚಾಗಿ ಸರಕಾರವೇ ಮುತುವರ್ಜಿ ವಹಿಸಿ, ಪೋಲೀಸರ ಮೂಲಕ ಕಾಂಗ್ರೆಸ್ ನಾಯಕರ ರಕ್ಷಣೆಯ ಹೊಣೆ ಹೊತ್ತು, ಪಾದಯಾತ್ರೆಯ ಯಶಸ್ಸಿನಲ್ಲಿ ಅದೂ ಸಹ ಸಹಕರಿಸಿತ್ತಲ್ಲವೇ? ಯಾಕೆ, ಆವಾಗ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಗಳಿರಲಿಲ್ಲ ಅಂತಲಾ? ಕಾಂಗ್ರೆಸ್ ನಾಯಕರನ್ನು ಬಂಧಿಸಿ ಪಾದಯಾತ್ರೆಯನ್ನು ಆರಂಭದಲ್ಲೇ ಹತ್ತಿಕ್ಕುವುದಕ್ಕೆ ಸರಕಾರಕ್ಕೆ ಧೈರ್ಯವಿರಲಿಲ್ಲ ಅಂತಾನಾ?? ಖಂಡಿತಾ ಇತ್ತು. ಆದರೆ ಆವತ್ತು ಸರಕಾರ ಮತ್ತು ಪೋಲೀಸ ಇಲಾಖೆ ಅವೆಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿತ್ತಷ್ಟೇ. ಹಾಗೆಯೇ, ಯಾಕೆ ಇವತ್ತಿನ ಸರಕಾರಕ್ಕೆ, ಪೋಲೀಸರಿಗೆ ಒಂದು ಬೈಕ್ ರಾಲಿಯನ್ನು, ಕಾನೂನು ಸುವ್ಯವಸ್ಥೆಯನ್ನು ನಿಭಾಯಿಸೋದಕ್ಕೆ ಆಗುತ್ತಿಲ್ಲಾ? ನಾಚಿಕೆಯಾಗೋದಿಲ್ಲವೇ ಅಂತಹಾ ಫೇಕ್ ಕಾರಣಗಳನ್ನು ನೀಡೋದಕ್ಕೆ??

ಕಾಂಗ್ರೆಸ್ಸಿನವರು ಬಳ್ಳಾರಿ ಪಾದಯಾತ್ರೆ ಮಾಡುತ್ತೇವೆಂದಾಗ ‘ಕಾಂಗ್ರೆಸ್ಸಿನವರನ್ನು ಬಳ್ಳರಿಗೆ ಕಾಲಿಡೋದಕ್ಕೆ ಬಿಡುವುದಿಲ್ಲ” ಎಂಬರ್ಥದಲ್ಲಿ ಶ್ರೀರಾಮುಲು ಚಾಲೆಂಜ್ ಮಾಡಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ್ದ ಸಿದ್ಧರಾಮಯ್ಯ “ಬಳ್ಳಾರಿ ಪಾದಯಾತ್ರೆ ಮಾಡಿಯೇ ಸಿದ್ದ” ಅಂತ ರಿಯಾಕ್ಟ್ ಮಾಡಿದ್ದರು. ಬಳಿಕ ರಾಮುಲು ಆಗಲಿ, ರೆಡ್ಡಿ ಸಹೋದರರಾಗಲೀ, ಸರಕಾರವಾಗಲೀ ಕಾಂಗ್ರೆಸ್ಸಿನ ಪಾದಯಾತ್ರೆಗೆ ಯಾವ ಥರದ ಅಡ್ಡಿಯನ್ನೂ ಮಾಡಲಿಲ್ಲ. ನಿನ್ನೆ ಬಿಜೆಪಿಯವರೂ ಸಹ, ಸರಕಾರ ಬೈಕ್ ರಾಲಿಗೆ ಅನುಮತಿ ನಿರಾಕರಿಸಿದಾಗ “ನಾವು ಬೈಕ್ ರಾಲಿ ನಡೆಸಿಯೇ ಸಿದ್ಧ” ಅಂತ ರಿಯಾಕ್ಟ್ ಮಾಡಿತ್ತು. ಆದರೆ ಇವತ್ತು ಸರಕಾರ ರಾಲಿಗೆ ಅಡ್ಡಿ ಪಡಿಸುವುದರೊಂದಿಗೆ ಯಾರು ಏನೇ ಹೇಳಿ, ನಾವು ಇರೋದೇ ಹೀಗೆ ಅಂತ ಸಾಬೀತು ಮಾಡಿತು!

ಇದಕ್ಕೂ ಹೆಚ್ಚಿನ ಅಹಂಕಾರದ ವರ್ತನೆಯೇನೆಂದರೆ “ಬೇಕಾದರೆ ಪಾದಯಾತ್ರೆ ಮಾಡಲಿ, ಜನರಿಗೆ ತೊಂದರೆ ಮಾಡಿಕೊಂಡು ಬೈಕ್ ರಾಲಿ ಬೇಡ” ಅಂತ ಬಿಜೆಪಿಗೆ ಬಿಟ್ಟಿ ಸಲಹೆ ಕೊಟ್ಟಿದ್ದು. ಅಲ್ಲಾ ಬಿಜೆಪಿಯವರು ಯಾವ ರೀತಿಯ ಹೋರಾಟ ಮಾಡಬೇಕಂತ ಕಾಂಗ್ರೆಸ್ಸಿನವರನ್ನು ಕೇಳಿ ಮಾಡಬೇಕಾ? ಮೂರು ದಿನದ ಬೈಕ್ ರಾಲಿಯಲ್ಲಿ ಹೆಚ್ಚು ಟ್ರಾಫಿಕ್ ಸಮಸ್ಯೆಯಾಗುವುದಾ? ಅಲ್ಲಾ ಹದಿನೈದು ದಿನದ ಪಾದಯಾತ್ರೆಯಲ್ಲಿ ಹೆಚ್ಚು ಸಮಸ್ಯೆಯಾಗುವುದಾ? ಕಾನೂನು ಹದೆಗೆಡುತ್ತದೆಯೆಂಡರೆ ಅದಕ್ಕೆ ಬೈಕ್ ರಾಲಿ ಆದರೇನು, ಪಾದಯಾತ್ರೆಯಾದರೇನು, ಹದಗೆಡಲೇಬೇಕಲ್ಲಾ? ಯಾವ ಥರದ ಲಾಜಿಕ್ ಇವರದ್ದು? ಇತ್ತೀಚೆಗಷ್ಟೇ ಮಧ್ಯಪ್ರದೇಶದಲ್ಲಿ ರಾಹುಲ್ ಗಾಂಧಿ ಬೈಕ್ ರಾಲಿ ಮಾಡಲು ಹೊರಟಾಗ ಅವರನ್ನು ಬಂಧಿಸಲಾಗಿತ್ತು. ಆವಾಗ ಮಲ್ಲಿಕಾರ್ಜುನ ಖರ್ಗೆ, ಸಿದ್ಧರಾಮಯ್ಯ ಆದಿಯಾಗಿ ಕಾಂಗ್ರೆಸ್ಸಿನ ಎಲ್ಲಾ ನಾಯಕರೂ ರಾಹುಲ್ ಬಂಧನವನ್ನು ಖಂಡಿಸಿದ್ದರು. ಆವಾಗ ಖಂಡಿಸಿದ ಸಿದ್ಧರಾಮಯ್ಯಗೆ ಇವತ್ತು ಬಿಜೆಪಿಯ ಬೈಕ್ ರಾಲಿಯನ್ನು ತಡೆಯೋದಕ್ಕೆ, ಬಿಜೆಪಿಯ ನಾಯಕರನ್ನು ಬಂಧಿಸೋದಕ್ಕೆ ಯಾವ ನೈತಿಕತೆಯಿತ್ತು ಹೇಳಿ!

ವಿನಾಶಕಾಲೇ ವಿಪರೀತ ಬುದ್ಧಿ ಎನ್ನುತ್ತಾರಲ್ಲಾ, ಹಾಗೆಯೇ ಇದು. ವಿನಾಶ ಕಾಲ ಅಂತ ಅಲ್ಲ, ಈ ಸರಕಾರ ಅಧಿಕಾರಕ್ಕೆ ಬಂದಂದಿನಿಂದಲೂ ಇಂತಹಾ ಹತ್ತಾರು ವಿಪ್ಲವಗಳಿಗೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ಟಿಪ್ಪು ಜಯಂತಿ ನಡೆಸುವ ಮೂಲಕ ಕಾನೂನು ಸುವ್ಯವಸ್ಥೆ ಹದಗೆಡುವಂತೆ ಮಾಡಿದ್ದೇ ಈ ಸರಕಾರ. ಗಣಪತಿಯವರ ಆತ್ಮಹತ್ಯೆ ಕೇಸಿನಲ್ಲಿಯೂ ಸರಕಾರದ್ದೇ ಪೌರೋಹಿತ್ಯ. ಸಾಲು ಸಾಲು ಹಿಂದೂ ಸಿದ್ಧಾಂತವಾದಿಗಳ ಕೊಲೆ ನಡೆದಾಗ ಮಹಾ ಮೌನ..ಲೋಕಾಯುಕ್ತವನ್ನು ನಿರ್ನಾಮ ಮಾಡಿದ್ದು.. ಒಂದಲ್ಲ, ಎರಡಲ್ಲ.. ಸಮಾಜವಾದದ ಹೆಸರಿನಲ್ಲಿ ಸ್ವ ಮಜಾ ಮಾಡುತ್ತಿರುವುದನ್ನು, ಜಾತ್ಯಾತೀತತೆಯ ಹೆಸರಿನಲ್ಲಿ ಜಾತಿ ವಿಷ ಬೀಜವನ್ನು ಬಿತ್ತುತ್ತಿರುವುದನ್ನು, ಮಾತು ಮಾತಿಗೂ ಪ್ರಜಾಪ್ರಭುತ್ವದ ಹೆಸರು ಹೇಳಿ ಪ್ರತಿಭಟಿಸುವ ಹಕ್ಕನ್ನೇ ಕಸಿದುಕೊಳ್ಳುತ್ತಿರುವುದನ್ನು ಪ್ರಶ್ನಿಸಲೇಬೇಕಿದೆ. ಪಕ್ಷ ಬಿಜೆಪಿಯಾದರೂ ಆಗಲಿ, ಮತ್ತೊಂದಾದರೂ ಆಗಲಿ, ಜನರಿಗೆ ನ್ಯಾಯ, ಭವಿಷ್ಯದಲ್ಲಿ ಉತ್ತಮವಾದ ಸರಕಾರ ಸಿಗಬೇಕಾದದ್ದು ಮುಖ್ಯ ಅಷ್ಟೇ.

Facebook ಕಾಮೆಂಟ್ಸ್

Shivaprasad Bhat: Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.
Related Post