X

ಜಗತ್ತನ್ನೇ ಬದಲಾಯಿಸಿದ ಐಫೋನಿಗೆ ಹತ್ತು ವರ್ಷ!

ಹತ್ತು ವರ್ಷಗಳ ಹಿಂದೆ ಒಬ್ಬ ಮನುಷ್ಯ ಒಂದು ಹೊಸ ವಸ್ತುವೊಂದನ್ನು ಜಗತ್ತಿಗೆ ಪರಿಚಯಿಸಿದ್ದ. ಅದು ಬರೀ ಫೋನ್ ಆಗಿರಲಿಲ್ಲ, ಇಂಟರ್ನೆಟ್ ಡಿವೈಸ್ ಆಗಿರಲಿಲ್ಲ, ಮ್ಯುಸಿಕ್ ಪ್ಲೇಯರ್ ಆಗಿರಲಿಲ್ಲ, ಅಥವಾ ಕ್ಯಾಮೆರಾ ಆಗಿರಲಿಲ್ಲ ಆದರೆ ಅದರೊಳಗೆ ಎಲ್ಲವೂ ಇತ್ತು. ಇಡೀ ಜಗತ್ತು ಅದರ ಹಿಂದೆ ಹುಚ್ಚಾಗಿ ಓಡಿತ್ತು. ತಮ್ಮ ಕಿಡ್ನಿ ಮಾರಿ ಅದನ್ನು ಖರೀದಿಸಲು ಸಾಲು ಸಾಲಾಗಿ ಜನ ನಿಲ್ಲುತ್ತಿದ್ದರು. ಅದೇ ಐಫೋನ್‌! ಆ ವ್ಯಕ್ತಿಯೇ ಸ್ಟಿವ್ ಜಾಬ್ಸ್. ಐಫೋನ್‌ ಬಂದಮೇಲೆ ನೋಕಿಯಾ, ಮೊಟೊರೊಲಾ,ಬ್ಲಾಕ್ ಬರ್ರಿ, ಸೀಮೆನ್ಸ್ ನಂತಹ ದೊಡ್ಡ ದೊಡ್ಡ ಫೋನ್ ಕಂಪನಿಗಳ ಬಾಗಿಲು ಮುಚ್ಚಿದವು ಅಥವಾ ಮಾರಿ ಹೋದವು. ಹತ್ತು ವರ್ಷಗಳಲ್ಲಿ ಜನರಿಗೆ ಐಫೋನ್‌ ಅಂದರ ಜೀವಕ್ಕೆ ಜೀವ ಎನ್ನುವಷ್ಟು ಹತ್ತಿರವಾಯಿತು. ಹೊಸದಾದ ‘ಆ್ಯಪ್’ ಎನ್ನುವ ಜಗತ್ತೇ ಹುಟ್ಟಿಕೊಂಡಿತು. ಇವತ್ತು ನೋಡಿದರೆ ಪ್ರತಿಯೊಂದು ಕೆಲಸಕ್ಕೂ ಸಾವಿರಾರು ಆ್ಯಪ್ ಲಭ್ಯವಿದೆ. ಐಫೋನ್ ಅಂದರೆ ಅದರದ್ದೇ ವಿಶಿಷ್ಟವಾದ ಟಚ್, ಅದರದ್ದೇ ವಿಶೇಷವಾದ ಕಲರ್, ಅದನ್ನು ಬಳಸುವಾಗ ಅದೇನೋ ಒಂದು ಹಿತವಾದ ಅನುಭವ. ಹತ್ತು ವರ್ಷ ಆಯಿತು ಇವತ್ತೂ ಐಫೋನ್ ತರಹದ ಇನ್ನೊಂದು ಫೋನ್ ಬಂದಿಲ್ಲ. ಜಗತ್ತಿನ ಮೊಬೈಲ್ ಜಗತ್ತಿನಲ್ಲಿ ಏನಾದರೂ ತಂತ್ರಜ್ಞಾನದ ಕ್ರಾಂತಿ ಕಂಡರೆ ಅದರ ಉದಯಬಿಂದು ಐಫೋನ್ ನಲ್ಲಿಯೇ ಇರುತ್ತದೆ. ಉಳಿದವರೆಲ್ಲ ಅದನ್ನು ಕಾಪಿ ಮಾಡಿದವರೇ! ಟಚ್ ಸ್ಕ್ರೀನ್, ಗೊರಿಲ್ಲಾ ಗ್ಲಾಸ್, ಹೋಮ್ ಬಟನ್, ಫಿಂಗರ್ ಟಚ್ ಸೆನ್ಸರ್, 3D ಮ್ಯಾಪ್, ಎಲ್‌ಇಡಿ, ಮೆಟಾಲಿಕ್ ಬಾಡಿ, ಆಕರ್ಷಕ ವಿನ್ಯಾಸ, ಹೀಗೆ ಲಿಸ್ಟ ಮಾಡುತ್ತಾ ಹೋದರೆ ಹೇಳಲು ಬಹಳಷ್ಟಿದೆ. ಹತ್ತು ವರ್ಷಗಳಾದವು, ಹತ್ತು ಬೇರೆ ಬೇರೆ ಮಾಡಲ್ ಬಂದವು ಅದನ್ನು ಆಧರಿಸಿ ಸಾವಿರಾರು ಮೊಬೈಲ್ ಕಂಪನಿಗಳು ಹುಟ್ಟಿಕೊಂಡವು ಆದರೆ ಇವತ್ತಿಗೂ ಜನ ಹೊಸ ಐಫೋನ್ ಬರುತ್ತದೆ ಅಂದರೆ ಜಗತ್ತಿನೆಲ್ಲೆಡೆ ಕಾಯುತ್ತಿರುತ್ತಾರೆ.

ಹತ್ತು ವರ್ಷಗಳಲ್ಲಿ ಎಷ್ಟು ಫೋನುಗಳು ಮಾರಾಟವಾಗಿವೆ ಗೊತ್ತಾ? 120,00,00,000, ಅಂದರೆ ನೂರಾ ಇಪ್ಪತ್ತು ಕೋಟಿಗಿಂತಲೂ ಹೆಚ್ಚು ಮೊಬೈಲ್ ಮಾರಾಟವಾಗಿವೆ. ಒಂದು ಮೊಬೈಲ್ ಫೋನ್ ಸರಾಸರಿ ಅಂದರೆ ನೂರಾ ಐವತ್ತು ಗ್ರಾಂ ಇರುತ್ತದೆ, ಮಾರಾಟವಾದ ಎಲ್ಲ ಮೊಬೈಲ್ ಸೇರಿಸಿದರೆ ಸುಮಾರು 18ಲಕ್ಷ ಟನ್ ತೂಕ ಆಗಬಹುದು. ಇವತ್ತು ಆ್ಯಪಲ್ ಸ್ಟೋರ್ ನಲ್ಲಿ ಹೋಗಿ ಇಣುಕಿ ನೋಡಿದರೆ ಇಪತ್ತು ಲಕ್ಷಕ್ಕೂ ಹೆಚ್ಚು ಬೇರೆ ಬೇರೆ ಆ್ಯಪ್ ಸಿಗಬಹುದು. ಒಂದು ಕಂಪನಿ ಎರಡು ಆ್ಯಪ್ ಮಾಡಿತು ಅಂದುಕೊಳ್ಳೋಣ ಹಾಗಿದ್ದರೂ ಸುಮಾರು ಹತ್ತು ಲಕ್ಷ ಹೊಸ ಕಂಪನಿಗಳು ಐಫೋನಿನಿಂದಾಗಿ ಹುಟ್ಟಿಕೊಂಡಿವೆ. ಮೊದಲ ಐಫೋನ್ ( ಪ್ರಾಜೆಕ್ಟ್ ಪರ್ಪಲ್) ಪ್ರಾಜೆಕ್ಟ್ ಶುರುವಾಗಿದ್ದು 2004ರಲ್ಲಿ. ಕೇವಲ ಒಂದು ಸಾವಿರ ಜನರು ಸೇರಿ ಈ ರಹಸ್ಯಮಯ ಕೆಲಸದಲ್ಲಿ ಭಾಗಿಯಾಗಿದ್ದರು. ಒಬ್ಬರು ಮಾಡುತ್ತಿದ್ದ ಕೆಲಸ ಇನ್ನೊಬ್ಬರಿಗೆ ಗೊತ್ತಿರಲಿಲ್ಲ ಅಷ್ಟು ರಹಸ್ಯಮಯವಾಗಿತ್ತು. ಸ್ಟಿವ್ ಜಾಬ್ಸ್ ಈ ಪ್ರಾಜೆಕ್ಟಿನ ಹೆಜ್ಜೆ ಹೆಜ್ಜೆಯನ್ನೂ ಕೂಡ ಸ್ವತಃ ನಿಯಂತ್ರಿಸುತ್ತಿದ್ದ ಅಂದರೆ ಅವನಿಗೆ ಕನಸಿನಲ್ಲೂ ಪ್ರಾಜೆಕ್ಟ್ ಬಗ್ಗೆಯೇ ವಿಚಾರಿಸುತ್ತಿದ್ದ. ಒಮ್ಮೆ, ಇನ್ನೇನು ಫೋನ್ ಮಾರುಕಟ್ಟೆಗೆ ಬರಲು ಮೂರು ತಿಂಗಳು ಇರಬೇಕು ಅನ್ನುವಾಗ, ಬೆಳಿಗ್ಗೆ ಎದ್ದಾಗ ಅವನಿಗೆ ಫೊನ್ ಹಿಡಿದುಕೊಳ್ಳಲು ಸರಿ ಎನಿಸಲಿಲ್ಲವಂತೆ. ತಕ್ಷಣವೇ ಆಫೀಸಿಗೆ ಬಂದು “ವಿನ್ಯಾಸ ಸಂಪೂರ್ಣವಾಗಿ ಬದಲಾಗಬೇಕು. ನೀವೆಲ್ಲ ಆರು ತಿಂಗಳಿನಿಂದ ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದೀರ…ನನಗೆ ಯಾಕೋ ಇದು ಕೈಲಿ ನಿಲ್ಲುವ ಹಾಗೆ ಕಾಣುತ್ತಿಲ್ಲ. ಬದಿಯ ಡಿಸೈನ್ ಬದಲಾಗಬೇಕು ಹೀಗಾಗಿ ತಕ್ಷವೇ ಫೋನಿನ ವಿನ್ಯಾಸ ಬದಲಾಯಿಸಿ ಇಲ್ಲವೇ ನನ್ನನ್ನು ಶೂಟ್ ಮಾಡಿ” ಅಂದನಂತೆ. ಐಫೋನ್ ಟೀಮ್ ಎರಡು ತಿಂಗಳೊಳಗೆ ಹೊಸ ವಿನ್ಯಾಸ ತಯಾರಿ ಮಾಡಿತ್ತು. ಇಡೀ ಪ್ರಾಜೆಕ್ಟ್ ನೂರಾ ಐವತ್ತು ಮಿಲಿಯನ್ ಡಾಲರ್ ವೆಚ್ಚದಲ್ಲಿ ಆಗಿದ್ದು. ಆದರೆ ಆ್ಯಪಲ್ ಕಂಪನಿ ಇದರಿಂದ ಗಳಿಸಿದ ಲಾಭ ಎಷ್ಟು ಗೊತ್ತೆ? ಕಡಿಮೆ ಕಡಿಮೆ ಅಂದು ಐವತ್ತು ಲಕ್ಷ ಕೋಟಿ! ಇವತ್ತು ಆ್ಯಪಲ್ ಕಂಪನಿಯ ಬೆಲೆ ಸುಮಾರು 675 ಬಿಲಿಯನ್ ಡಾಲರನಷ್ಟಿದೆ. ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಕಂಪನಿ. ಆ್ಯಪಲ್ ಕಂಪನಿಯನ್ನು ಜಗತ್ತಿನ ಅತ್ಯಂತ ಶ್ರೀಮಂತ ಕಂಪನಿಯಾಗಿ ಮಾಡಿದ್ದೇ ಐಫೋನ್ !

ಇವತ್ತಿನವರೆಗಿನ ಮಾರಾಟದ ಸಂಖ್ಯೆ ನೋಡಿದರೆ ದಿನಕ್ಕೆ ಸುಮಾರು ಮೂರು ಲಕ್ಷ ಐಫೋನ್ ತಯಾರಾಗಿದೆ. ಅಂದರೆ ಸುಮಾರು ಹದಿನಾಲ್ಕು ಸಾವಿರ ತಾಸಿಗೆ, ಇನ್ನೂರು ಫೋನ್ ಒಂದು ನಿಮಿಷಕ್ಕೆ ತಯಾರಾಗುತ್ತದೆ! ಇದನ್ನು ತೈವಾನ್ ಕಂಪನಿಯಾ ಫೊಕ್ಸಕಾಮ್ ತಯಾರಿಸುತ್ತದೆ. ಒಂದು ಕಾಲದಲ್ಲಿ ಮೊಬೈಲ್ ಮಾರುಕಟ್ಟೆಯ ಅರ್ಧದಷ್ಟು ಲಾಭ ಐಫೋನಿದಾಗಿತ್ತು. ಆದರೆ ವಿಚಿತ್ರ ಅಂದರೆ ಮಾರ್ಕೆಟ್ ಶೇರ್ ಕೇವಲ 4% ಆಗಿರುತ್ತಿತ್ತು. ಅಂದರೆ ಐಫೋನ್ ಮಾರಾಟದಲ್ಲಿ ಕಂಪನಿಗೆ ಲಾಭದಲ್ಲಿ ಮಾರ್ಜಿನ್ ತುಂಬಾ ಜಾಸ್ತಿ ಇತ್ತು (30-40%). ಈ ಐಫೋನ್ ನಲ್ಲಿ ಎಷ್ಟು ಪೇಟೆಂಟ್ ಗಳಿವೆ ಗೊತ್ತಾ? ಇನ್ನೂರಕ್ಕಿಂತಲೂ ಹೆಚ್ಚು ಪೇಟೆಂಟ್ ಈ ಡಿವೈಸ್ ಮೇಲೆ ಫೈಲ್ ಆಗಿದೆ. ಹೆಸರಿಂದ ಹಿಡಿದು, ಪ್ಯಾಕ್ ಮಾಡುವ ತನಕ ಪೇಟೆಂಟ್ ಇದೆ. ಪ್ಯಾಕೆಟ್ ಮಾಡುವ ಆ ಪೇಟೆಂಟ್ ಸ್ವತಃ ಸ್ಟೀವ್ ಜಾಬ್ಸ್ ಹೆಸರಿನಲ್ಲಿದೆ. ಇವತ್ತಿಗೂ ಜನರು ಆ್ಯಪಲ್ ಪ್ಯಾಕನ್ನು ಕಸದ ಬುಟ್ಟಿಗೆ ಎಸೆಯುವುದಿಲ್ಲ ಯಾಕೆ? ಅಷ್ಟು ಸುಂದರವಾಗಿರುತ್ತದೆ ಆ್ಯಪಲ್ ಪ್ಯಾಕಿಂಗ್ ಶೈಲಿ. ಇನ್‌ಸ್ಟ್ರಕ್ಷನ್ ಮ್ಯಾನ್ಯುಯಲ್ ಇಲ್ಲದೇ ಬರುವ ಮೊದಲ ಡಿವೈಸ್ ಅಂದರೆ ಐಫೋನ್ ಇರಬೇಕು. ಅಷ್ಟು ಸುಲಭದಲ್ಲಿ ಬಳಸುವ ಹಾಗಿತ್ತು ಫೋನ್. ಮಕ್ಕಳಿಂದ ಹಿಡಿದು ಮುದುಕರ ವರೆಗೆ, ಅನಕ್ಷರಸ್ಥ ಕೂಡ ಬಳಸಬಹುದು ಅಷ್ಟು ಸಿಂಪಲ್. ಇದೇ ಐಫೋನ್ ಯಶಸ್ಸಿಗೆ ಕಾರಣ. ಒಂದು ಕಾಲದಲ್ಲಿ ಬ್ಲಾಕ್ ಬೆರ್ರಿ ಫೊನ್ ಹಿಡಿದಿರುವ ವ್ಯಕ್ತಿಯನ್ನು ಕಂಡರೆ ಕಣ್ಮುಚ್ಚಿ ಹೇಳಬಹುದಿತ್ತು ಆತ ಕಾರ್ಪೊರೇಟ್ ಮನುಷ್ಯ ಅಂತ. ಐಫೋನ್ ಬಂದಾಗಿನಿಂದ ಬ್ಲಾಕ್ ಬೆರ್ರಿ ಮೊಬೈಲ್ ಒಂದು ಕಾಲದಲ್ಲಿ ಇತ್ತೂ ಎನ್ನುವುದು ಕೂಡ ಇಂದು ಜನರಿಗೆ ನೆನಪಿಲ್ಲ. ಇವತ್ತು ಐಫೋನ್ ಎಷ್ಟು ಸಾಮನ್ಯವಾಗಿದೆ ಅಂದರೆ ಸಾಮಾನ್ಯವಾಗಿ ಎಲ್ಲರ ಹತ್ತಿರ ( ಕಾಲೇಜು ಹುಡುಗರಿರಲಿ, ಮನೆಯಲ್ಲಿರುವ ಹೆಂಗಸರಿರಲಿ, ಕಂಪನಿಯಲ್ಲಿ ಕೆಲಸ ಮಾಡುವವರಿರಲಿ) ಒಂದು ಐ ಫೋನ್ ಇದ್ದೇ ಇರುತ್ತದೆ. ವೀವೋ, ಒಪ್ಪೋ, ರೆಡ್ ಮೀ ಈ ಕಂಪನಿಯನ್ನು ಶುರು ಮಾಡಿದವರು ಯಾರು ಅಂತ ತಿಳಿದಿದ್ದೀರಿ? ಒಂದು ಕಾಲದಲ್ಲಿ ಐಫೋನ್ ತಯಾರಿಸುವ ಆ್ಯಪಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರು! ಐಫೋನ್ ಈ ಜಗತ್ತಿನಲ್ಲಿ ಮಾಡಿದಷ್ಟು ಇಂಪಾಕ್ಟನ್ನು ಮತ್ಯಾವ ಫೋನ್ ಕೂಡ ಮಾಡಿರಲಿಕ್ಕಿಲ್ಲ. ನಮ್ಮ ಕೈಗೆ ಮಷಿನ್ ಗನ್ ಕೊಟ್ಟಿದ್ದಕ್ಕಿಂತ ಹೆಚ್ಚು ಪವರ್ ಕೊಟ್ಟಿದ್ದು ಈ ಡಿವೈಸ್. ದಿನೇ ದಿನೇ ಅದನ್ನು ಬಳಸುತ್ತಾ ಕೈಯಲ್ಲಿ ಪೋನ್ ಇದೆ ಎನ್ನುವುದೇ ಮರೆತು ಹೋಗಿ ಅದೊಂದು ನಮ್ಮ ಅಂಗವಾಗಿಬಿಡುತ್ತದೆ. ಈಗ ಹತ್ತು ವರ್ಷಗಳ ನಂತರ ಐಫೋನ್-X ಬಿಡುಗಡೆ ಆಗಿದೆ. ಇದು ಐಫೋನ್ ಹತ್ತು ದಶಕದ ನೆನಪಿನಲ್ಲಿ ಬಿಡುಗಡೆ ಆದ ಫೋನ್. ಆ್ಯಪಲ್ ಕಂಪನಿಯ ಸಿಇಓ ಟಿಮ್ ಕುಕ್ ಹೇಳುವ ಪ್ರಕಾರ ಇದು ಮುಂದಿನ ದಶಕದ ಫೋನ್. ಇದರಲ್ಲಿ ಹೋಮ್ ಬಟನ್ ಇಲ್ಲವೇ ಇಲ್ಲ. ಕೇವಲ ಸ್ಪರ್ಶಮಯ ಎಲ್ಲವೂ. ಇಲ್ಲಿಯವರೆಗೆ ಕೈಬೆರಳಿನ ಅಚ್ಚಿನ ಮೂಲಕ ಫೋನನ್ನು ಅನ್ ಲಾಕ್ ಮಾಡಲಾಗುತ್ತಿತ್ತು ಆದರೆ ಹೊಸ ಐಫೋನ್ X ರಲ್ಲಿ ನಿಮ್ಮ ಮುಖದ ಗ್ರಹಿಕೆಯ ಮೇಲಿಂದ ಅನ್ ಲಾಕ್ ಆಗುತ್ತದೆ. ಮೊಬೈಲ್ ಲೋಕದಲ್ಲಿ ಇದೊಂದು ಹೊಸ ಅಧ್ಯಾಯ! ಇದರ ಜೊತೆಗೆ ಡಿಸೈನ್ ಕೂಡ ಚೆನ್ನಾಗಿದೆ. ಕ್ಯಾಮೆರಾ ಬದಲಾಗಿದೆ. A11 ಬೈಯೋ ಮೆಟ್ರಿಕ್ ಪ್ರೊಸೆಸರ್ ಇದೆ. ರಿಯಲ್ ಟೈಮ್ ಇಮೋಜಿ ಇದೆ. ಗ್ಲಾಸ್ ಕವರ್ ಇದೆ. ಟಚ್ ಸ್ಕ್ರೀನ್ ಅನುಭವ ಮತ್ತೂ ಚೆನ್ನಾಗಿದಡಯಂತೆ. ಕೇಬಲ್ ಇಲ್ಲದೆ ಚಾರ್ಜಿಂಗ್ ಮಾಡಬಹುದು. ಇದೆಲ್ಲದರ ಜೊತೆಗೆ ಐಫೋನ್ (X) ಹತ್ತರ ಬೆಲೆ ಕೂಡ ಆಕಾಶದಲ್ಲಿದೆ. ಹತ್ತು ವರ್ಷದ ಹಿಂದೆ ಎಷ್ಟು ಬೆಲೆಗೆ ಐಫೋನ್ ಬಿಡುಗಡೆ ಆಗಿತ್ತೋ ಅದರ ಡಬಲ್ ಬೆಲೆಗೆ ಹೊಸ ಐಫೋನ್ ಬಿಡುಗಡೆ ಆಗಿದೆ. ಅಂದರೆ ಐಫೋನ್ X ಬೆಲೆ ಶುರು ಆಗುವುದೇ $999 ಡಾಲರಿಗೆ! “ಐಫೋನ್ ಏಳನ್ನು ಬಲಗಡೆಯ ಕಿಡ್ನಿ ಮಾರಿ ತಗೊಂಡವರು ತಮ್ಮ ಎಡಗಡೆಯ ಕಿಡ್ನಿ ಮಾರಿ ಐಫೋನ್ X ಕೊಳ್ಳಬಹುದು” ಎನ್ನುವ ಜೋಕ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬರುತ್ತಿದೆ. ಅದೇನೆ ಇರಲಿ, ಐಫೋನ್ ಬಂದಾಗಿನಿಂದ ಜನರು ಜನರನ್ನು ಮರೆತು ಫೋನಿನಲ್ಲೇ ಮುಳುಗಿದ್ದಾರೆ. ಐಫೋನ್ ಹಾಗೂ ಸ್ಟೀವ್ ಜಾಬ್ಸ್ ಜಗತ್ತನ್ನೇ ಬದಲಿಸಿದ್ದಾರೆ ಎನ್ನುವುದರಲ್ಲಿ ತಪ್ಪಿಲ್ಲ!

Facebook ಕಾಮೆಂಟ್ಸ್

Vikram Joshi: ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.
Related Post