ಆಟವಾಡೋದಂದ್ರೆ ಎಲ್ಲ ಮಕ್ಕಳಿಗೂ ಇಷ್ಟವೇ. ಹಿಂದೆಲ್ಲಾ ಮಕ್ಕಳು ಆಟ ಅಂದ್ರೆ ಮೈದಾನದತ್ತ ಹೋಗುತ್ತಿದ್ದರು. ಆದರೆ ಇವತ್ತಿನ ಮಕ್ಕಳಿಗೆ ಆಟ ಎಂದರೆ ಮೊಬೈಲ್, ಕಂಪ್ಯೂಟರ್. ದಿನಪೂರ್ತಿ ಆನ್‍ಲೈನ್ ಗೇಮ್‍ಗಳಲ್ಲಿ ಮುಳುಗಿರುತ್ತಾರೆ. ಊಟ-ಪಾಠ ಎಲ್ಲವನ್ನೂ ಬಿಟ್ಟು, ಹಗಲು ರಾತ್ರಿಯೆನ್ನದೆ ಮೊಬೈಲ್ ಗೇಮ್ ಆಡುತ್ತಾರೆ. ಮಕ್ಕಳು ಮೊಬೈಲ್‍ನಲ್ಲಿ ಏನು ಮಾಡ್ತಿದ್ದಾರೆ ಅನ್ನೋದು ಸ್ವತಃ ಪೋಷಕರಿಗೇ ಗೊತ್ತಿರುವುದಿಲ್ಲ.
ಕಡಿಮೆ ಬೆಲೆಯಲ್ಲಿ ಸಿಗುವ ಆಂಡ್ರ್ಯಾಯ್ಡ್ ಫೋನ್‍ಗಳು ಮಕ್ಕಳಿಗೆ ಗೇಮ್ ಸುಲಭವಾಗಿ ಸಿಗುವಂತೆ ಮಾಡುತ್ತಿದೆ. ಇದು ಮಕ್ಕಳ ಬೌದ್ಧಿಕ ಗುಣಮಟ್ಟ, ಆರೋಗ್ಯ, ಪಠ್ಯದ ಬಗೆಗಿನ ಆಸಕ್ತಿ ಎಲ್ಲದರ ಮೇಲೂ ಇನ್ನಿಲ್ಲದ ಪ್ರಭಾವ ಬೀರುತ್ತಿದೆ. ಕ್ಯಾಂಡಿಕ್ರಶ್, ಟೆಂಪಲ್‍ರನ್, ಬಬಲ್ ಗೇಮ್ ಎಲ್ಲವೂ ಮಕ್ಕಳಿಗೆ ಹೆಚ್ಚು ಇಷ್ಟವಾಗುತ್ತವೆ. ಆದರೆ ಇಂಥಹಾ ಗೇಮ್‍ಗಳನ್ನು ಬಿಟ್ಟು ಮಕ್ಕಳು ಡೆಡ್ಲೀ ಗೇಮ್‍ಗಳತ್ತ ಹೆಚ್ಚು ವಾಲುತ್ತಿದ್ದಾರೆ.
ಬ್ಲ್ಯೂವೇಲ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿರುವ ಗೇಮ್. ಅದು ಅಂತಿಂಥಾ ಗೇಮ್ ಅಲ್ಲ. ಟೈಂಪಾಸ್‍ಗೆ ಆಟವಾಡಿ ಸುಮ್ನಿರುವಂಥಾ ಗೇಮ್ ಅಲ್ಲ. ಇಟ್ಸ್ ಎ ಆನ್‍ಲೈನ್ ಡೆಡ್ಲೀ ಗೇಮ್. ನಿರ್ವಾಹಕರ ಆದೇಶದಂತೆ ಆಡಬೇಕು. ಸೂಚಿಸಿದ ಟಾಸ್ಕ್‍ಗಳನ್ನು ಅನುಸರಿಸುತ್ತಿರಬೇಕು. ಹಾರರ್ ಸಿನಿಮಾ ನೋಡುವುದು, ಮಧ್ಯರಾತ್ರಿ ಎದ್ದು ನಡೆದಾಡುವುದು ಹೀಗೆ ಹಲವು ಟಾಸ್ಕ್ ಪೂರೈಸಬೇಕು. ಆಟದ ಪ್ರತಿಯೊಂದು ಹಂತದ ವೀಡಿಯೋವನ್ನು ಸಹ ಕಳುಹಿಸಬೇಕು.
ಹಲವು ಚಿತ್ರ ವಿಚಿತ್ರ ಟಾಸ್ಕ್ ಪೂರೈಸಿದ ಮೇಲೆ 50 ದಿನಗಳಲ್ಲಿ ಸೆಲ್ಫ್ ಡಿಸ್ಟ್ರಾಯಿಂಗ್ ಹಂತ. ಅಂದರೆ ಆಟ ಆಡುತ್ತಿರುವವನು ಆತ್ಮಹತ್ಯೆ ಮಾಡಿಕೊಳ್ಳಬೇಕು. ಈ ರೀತಿ ಮಾಡಿಕೊಂಡರೆ ಮಾತ್ರ ಆತ ಈ ಗೇಮ್‍ನಲ್ಲಿ ಗೆದ್ದಂತೆ. ಆಟವನ್ನು ಗೆಲ್ಲಲೇಬೇಕು ಎಂಬ ಹಠದಲ್ಲಿ ಮಕ್ಕಳು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಒಮ್ಮೆ ಈ ಆಟದೊಳಗೆ ಸೇರಿಕೊಂಡರೆ ಹೊರ ಬರುವುದು ಭಾರೀ ಕಷ್ಟ. ಗೇಮ್‍ನ ನಿರ್ವಾಹಕರ ಸೂಚನೆಯನ್ನು ಆಟವಾಡುತ್ತಿರುವವರು ಅನುಸರಿಸುತ್ತಿರಬೇಕು. ಬ್ರಿಟನ್‍ನಲ್ಲಿ ಈ ಗೇಮ್‍ಗೆ 130ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.
2013ರಲ್ಲಿ ರಷ್ಯಾದಲ್ಲಿ ಈ ಆಟ ಆರಂಭವಾಯಿತು. ಮನೋವಿಜ್ಞಾನ ವಿದ್ಯಾರ್ಥಿ ಫಿಲಿಪ್ ಬುಡೆಕಿನ್ ಎಂಬಾತ ಈ ಆಟವನ್ನು ಆವಿಷ್ಕರಿಸಿದ್ದ. ಸಮಾಜವನ್ನು ಸ್ವಚ್ಛಗೊಳಿಸಲು ಈ ಆಟ ಆರಂಭಿಸಿದ್ದೆ ಎಂದಿದ್ದ ಈತ. ಆದ್ರೆ ಈ ಡೆಡ್ಲೀ ಗೇಮ್ ಮಕ್ಕಳ ಜೀವ ಬಲಿ ಪಡೆಯುತ್ತಲೇ ಇದೆ. ಮಕ್ಕಳು ಗೇಮ್‍ನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡು ತಮ್ಮ ಜೀವಕ್ಕೇ ಅಪಾಯ ತಂದುಕೊಳ್ಳುತ್ತಿದ್ದಾರೆ.
ಇತ್ತೀಚಿಗೆ ಭಾರತಕ್ಕೆ ಪ್ರವೇಶಿಸಿದ ಬ್ಲ್ಯೂವೇಲ್ ಆಟಕ್ಕೆ ಮಕ್ಕಳು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಒಂದು ಸಾಮಾಜಿಕ ತಾಣ ಈ ಆಟವನ್ನು ಕಂಟ್ರೋಲ್ ಮಾಡುತ್ತಿದೆ. ಇತ್ತೀಚಿಗೆ ಮುಂಬೈನಲ್ಲಿ 14 ವರ್ಷದ ಒಬ್ಬ ಹುಡುಗ ಆತ್ಮಹತ್ಯೆ ಮಾಡಿಕೊಂಡ. ಅಂಧೇರಿ ವೆಸ್ಟ್‍ನಲ್ಲಿರುವ ಈ ಬಾಲಕ ಮನೆಯ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಸೋಷಿಯಾ ಮೀಡಿಯಾದಲ್ಲಿ ಆಟದ ಬಗ್ಗೆ ತಿಳಿದುಕೊಂಡು ಆಟವಾಡಲು ಶುರು ಮಾಡಿದ. ಹೇಗಾದರೂ ಈ ಆಟದಲ್ಲಿ ಗೆಲ್ಲಬೇಕೆಂಬ ಹಠದಿಂದ ಆತ್ಮಹತ್ಯೆ ಮಾಡಿಕೊಂಡ. ಪೊಲೀಸರು ಸೋಷಿಯಲ್ ಮೀಡಿಯಾದ ಖಾತೆಯನ್ನು ಪರಿಶೀಲಿಸಿದಾಗ ಬ್ಲ್ಯೂ ವೇಲ್ ಆಟದಿಂದ ಪ್ರಾಣ ಕಳೆದುಕೊಂಡಿದ್ದು ಬೆಳಕಿಗೆ ಬಂತು. ರಷ್ಯಾ, ಇಂಗ್ಲೆಂಡ್‍ನಲ್ಲಿ ಈ ಆಟಕ್ಕೆ ಈಗಾಗ್ಲೇ 130ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭಾರತದಲ್ಲಿಯೂ ಮಕ್ಕಳು ಈ ಅಪಾಯಕಾರಿ ಗೇಮ್‍ನ ಬಲಿಪಶುಗಳಾಗ್ತಿದ್ದಾರೆ.
ಮಹಾರಾಷ್ಟ್ರದ ಪುಣೆ ಮತ್ತು ಮಧ್ಯಪ್ರದೇಶದ ಇಂದೋರ್‍ನಲ್ಲಿ ಬ್ಲ್ಯೂವೇಲ್ ಗೇಮ್‍ನಿಂದ ಆತ್ಮಹತ್ಯೆಗೆ ಯತ್ನಿಸಿದ ಇಬ್ಬರು ಬಾಲಕರನ್ನು ರಕ್ಷಿಸಲಾಯ್ತು. ಇಂದೋರ್‍ನಲ್ಲಿ 13 ವರ್ಷದ ಬಾಲಕನೊಬ್ಬ ಗೇಮ್‍ನ ಟಾಸ್ಕ್ ಮುಗಿಸಲು ಮೂರು ಅಂತಸ್ತಿನ ಕಟ್ಟಡದಿಂದ ಜಿಗಿಸಲು ಯತ್ನಿಸಿದ್ದ. ಸಹಪಾಠಿಗಳು ಈತನನ್ನು ರಕ್ಷಿಸಿದ್ದಾರೆ. ಪುಣೆಯ ಸೋಲಾಪುರ್‍ನಲ್ಲಿಯೂ ಆತ್ಮಹತ್ಯೆಗೆ ಯತ್ನಿಸಿದ ಬಾಲಕನನ್ನು ರಕ್ಷಿಸಲಾಗಿದೆ.
ಇನ್ನೊಂದೆಡೆ ಕೇರಳದಲ್ಲಿ ಎರಡು ಸಾವಿರ ಮಕ್ಕಳು ಈ ಡೆಡ್ಲೀ ಗೇಮ್‍ನ್ನು ಡೌನ್‍ಲೋಡ್ ಮಾಡಿಕೊಂಡಿರುವ ಆಘಾತಕಾರಿ ವಿಚಾರ ಬಹಿರಂಗವಾಗಿದೆ. ಇನ್ನಾದರೂ ಪೋಷಕರು ಎಚ್ಚೆತ್ತು ತಮ್ಮ ಮಕ್ಕಳ ಬಗ್ಗೆ ನಿಗಾವಹಿಸಬೇಕಾಗಿದೆ. ಇಲ್ಲವಾದಲ್ಲಿ ನಾಲ್ಕು ಕೋಣೆಯ ಮಧ್ಯೆ ಮೊಬೈಲ್‍ನಲ್ಲಿ ತಲ್ಲೀನವಾಗಿರುವ ನಿಮ್ಮ ಮಕ್ಕಳ ಮೊಬೈಲ್‍ಗೂ ನೀಲಿ ತಿಮಿಂಗಲ ಬರೋ ದಿನ ದೂರವಿಲ್ಲ.
– ವಿನುತಾ ಪೆರ್ಲ
vinuthaperla@gmail.com
Facebook ಕಾಮೆಂಟ್ಸ್