ಮಂಕುತಿಮ್ಮನ ಕಗ್ಗ ಟಿಪ್ಪಣಿ ೭೨:
ಈ ವಿಶ್ವದಲಿ ನೋಡಲೆಲ್ಲರೆಲ್ಲರ ನಂಟು |
ಆವನಾ ಬಂಧುತೆಯ ಜಡೆಯ ಬಿಡಿಸುವನು ? ! ||
ಜೀವ ಜೀವಕೆ ನಂಟು ಜಡ ಚೇತನಕೆ ನಂಟು |
ಆವುದದಕಂಟಿರದು ? – ಮಂಕುತಿಮ್ಮ || ೭೨ ||
ಹಿಂದಿನ ಕಗ್ಗದಲ್ಲಿ ನಂಟಿನ ಬಗ್ಗೆ ವಿವರಿಸುತ್ತ ಸೂರ್ಯ, ಬೆಳಕು, ಆಕಾಶ, ನೀರಿನಂತಹ ಉದಾಹರಣೆಗಳನ್ನು ಬಳಸಿದ್ದ ಮಂಕುತಿಮ್ಮ. ಈ ಕಗ್ಗದಲ್ಲಿ ಆ ನಂಟಿನ ತತ್ವವನ್ನೆ ಮತ್ತಷ್ಟು ವಿಸ್ತರಿಸುತ್ತ ಸಾರ್ವತ್ರಿಕ ಮಟ್ಟಕ್ಕೇರಿಸುತ್ತಾನೆ. ಹೀಗೆ ಸೃಷ್ಟಿಯ ನಂಟಿಗೊಂದು ವಿಶ್ವವ್ಯಾಖ್ಯೆ, ವಿಶ್ವ ನಿಯಮ ಪ್ರಾಪ್ತವಾದಂತೆ ಆಗುತ್ತದೆ ಈ ಕಗ್ಗದ ಮೂಲಕ.
ಈ ವಿಶ್ವದಲಿ ನೋಡಲೆಲ್ಲರೆಲ್ಲರ ನಂಟು |
ಆವನಾ ಬಂಧುತೆಯ ಜಡೆಯ ಬಿಡಿಸುವನು ? ! |
ಹಾಗೆ ನೋಡಿದರೆ ಈ ವಿಶ್ವದಲ್ಲಿ ಎಲ್ಲವು ಎಲ್ಲದರ ಜತೆಗೆ ಒಂದಲ್ಲ ಒಂದು ತರ ಸಂಬಂಧ ಹೊಂದಿರುವಂತದ್ದೆ . ಪ್ರತ್ಯಕ್ಷವೊ, ಪರೋಕ್ಷವೊ ಎಲ್ಲವನ್ನು ಸೂಕ್ಷ್ಮದಿಂದ ಸ್ಥೂಲತರದ ಅವಲಂಬನೆಗಳ ಕೊಂಡಿ ಬಂಧಿಸಿಟ್ಟಿದೆ. ಕೆಲವು ಗೋಚರ ಮತ್ತು ಸ್ಪಷ್ಟವಿದ್ದರೆ ಮಿಕ್ಕವು ಅಗೋಚರ ಮತ್ತು ಅಸ್ಪಷ್ಟ. ಆದರೆ ಹಾಗೆಂದು ಅದೇನು ಅಡ್ಡಾದಿಡ್ಡಿ ಸೃಜಿಸಿದ ಸೃಷ್ಟಿಯೇನಲ್ಲ. ಅಲ್ಲೊಂದು ಶಿಸ್ತು, ನಿಯಮ, ರೂಪುರೇಷೆ, ಯೋಜನೆಗಳ ಹಿನ್ನಲೆಯಿದೆ. ಒಂದು ಜಡೆ ಹೆಣೆಯುವಾಗ ಹೇಗೆ ಅಸಂಖ್ಯಾತ ಕೇಶದಾರಗಳು ನಂಟಲಿ ಒಗ್ಗೂಡಿ ಜಡೆಯ ಹೆಣಿಗೆಯ ಹಗ್ಗವಾಗುತ್ತವೆಯೊ, ಹಾಗೆಯೇ ವಿಶ್ವದೆಲ್ಲರ ನಂಟು ಜೋಡಿಸಲ್ಪಟ್ಟಿದೆ. ಇದು ಹತ್ತಿರದ ಸೂಕ್ಷ್ಮರೂಪಿ ಸಂಬಂಧದ ಸಂಕೇತ. ಈ ಜಡೆಯ ಹಗ್ಗದ ವಿಭಿನ್ನ ಧಾರೆಗಳನ್ನು ಮತ್ತಷ್ಟು ಬಿಗಿಯಾಗಿ ಬಂಧಿಸಲು ಒಂದಕ್ಕೊಂದನ್ನು ಹಾವಿನಂತಹ ಹೆಣಿಗೆಯಲ್ಲಿ ಬಂಧಿಸುತ್ತ ಹೋದಾಗ ಸ್ಠೂಲರೂಪದ ನಂಟೂ ಪ್ರಸ್ತುತಗೊಳ್ಳುತ್ತದೆ. ಹಲವಾರು ಧಾರೆಗಳೂ, ಅಲಂಕರಿಸಲೆತ್ತಿದ ತುರುಬುಗಳು, ಮುಡಿದ ಹೂಗಳು, ಆಭರಣಗಳು ಒಂದೆಡೆ ನಂಟನ್ನು ಆಕರ್ಷಕವಾಗಿಸುತ್ತ ಹೋದರೆ, ಮತ್ತೊಂದೆಡೆ ಸಂಕೀರ್ಣವಾಗಿಸುತ್ತಾ ಹೋಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ – ಹೀಗೆ ಜೋಡಿಸಿದ ಕೇಶಗಳಿಗೆ ಜಡೆ ಒಂದೆಡೆ ಭದ್ರತೆಯನ್ನು ಒದಗಿಸಿದ ಹಾಗೆಯೆ ಮತ್ತೊಂದೆಡೆ ನಿರ್ಬಂಧವನ್ನೂ ವಿಧಿಸುತ್ತದೆ. ಬಿಚ್ಚಿದಾಗ ಹಾರಾಡುವ ಸ್ವಾತ್ಯಂತ್ರವಿದ್ದರೂ ಸ್ವೇಚ್ಛೆಯ ಮಟ್ಟಕ್ಕಿಳಿದರೆ ಜಡೆಯಿಂದ ಬೇರಾಗಿ ನೆಲದ ಪಾಲಾಗಬೇಕಾಗುತ್ತದೆ. ವಿಶ್ವದ ನಂಟಿನಲ್ಲಿ ಬಂಧಿತರಾದವರ ಕತೆಯೂ ಅಷ್ಟೆ. ಆದರೆ ಇಲ್ಲಿನ ಮಂಕುತಿಮ್ಮನ ಸೋಜಿಗ ಅದಲ್ಲ – ಜಡೆಯನ್ನು ಬೇಕಾದಾಗ ಬಿಚ್ಚಿ ಮತ್ತೆ ಹಾಕುವ ಹಾಗೆ ಈ ವಿಶ್ವದ ನಂಟಿನ ಸಂಕಿರ್ಣತೆಯನ್ನು ಜಡೆಯ ಹಾಗೆ ಬಿಚ್ಚಿ ಅದರ ಸರಳ ರೂಪ ತೋರಿಸಿ, ಮತ್ತೆ ಮೊದಲಿನ ಹಾಗೆ ಕಟ್ಟಿಡಬಲ್ಲ ಸಮರ್ಥರಾರಾದರೂ ಇದ್ದಾರೆಯೆ ? ಎನ್ನುವುದು ಮಂಕುತಿಮ್ಮನನ್ನು ಕಾಡಿರುವ ಪ್ರಶ್ನೆ. ಹಳೆ ಗಡಿಯಾರವನ್ನೊ, ಸ್ಕೂಟರನ್ನೊ, ಸೈಕಲ್ಲನ್ನೊ ಸಂಪೂರ್ಣ ಬಿಚ್ಚಿಬಿಡುವುದು ಸುಲಭ. ಅದನ್ನು ಮತ್ತೆ ಸಮಷ್ಟಿಯಲಿ ಜೋಡಿಸಲು ಪರಿಣಿತರೆ ಆಗಿರಬೇಕು. ಅಂತೆಯೆ ಈ ನಂಟಿನ ಗಂಟನ್ನು ವಿವರಿಸಬಲ್ಲವರು ಬರಿ ದಾರದ ಎಳೆಗಳನ್ನು ಮಾತ್ರವಲ್ಲ, ಹಗ್ಗದ ಸಮಷ್ಟಿಯನ್ನೂ ಅರಿತವರಾಗಿರಬೇಕು. ಅಂತವರಾರಾದರೂ ಇಲ್ಲಿದ್ದಾರೆಯೆ ? ಎನ್ನುವುದು ಇಲ್ಲಿ ಕವಿಯ ಪ್ರಶ್ನೆ.
ಜೀವ ಜೀವಕೆ ನಂಟು ಜಡ ಚೇತನಕೆ ನಂಟು |
ಆವುದದಕಂಟಿರದು ? – ಮಂಕುತಿಮ್ಮ ||
ಒಟ್ಟಾರೆ ನೋಡಿದರೆ ಈ ವಿಶ್ವದಲ್ಲಿ ಕಾಣುವ ನಂಟುಗಳ ಸ್ವರೂಪ ವಿಭಿನ್ನ ಮತ್ತು ಅಪಾರ. ಮೊದಲಿಗೆ ಜೀವಜೀವಗಳ ನಂಟನ್ನೆ ಗಮನಿಸಿದರೆ ಮಾನವರಲ್ಲೆ ಅದೆಷ್ಟು ಬಗೆಯ ನಂಟುಗಳು ಕಾಣುತ್ತವೆ. ಹೆತ್ತವರು-ಮಕ್ಕಳು, ಸತಿ-ಪತಿ, ಸೋದರ ನಂಟಿಕೆ,ವಿವಾಹದ ಅಥವಾ ಪ್ರೇಮದ ಮೂಲಕ ಬೆಳೆಸಿದ ನಂಟು, ಸ್ನೇಹದ ನಂಟು – ಹೀಗೆ ನೂರಾರು ಸ್ತರತರದವು. ಪ್ರಾಣಿ-ಪ್ರಾಣಿಗಳಲ್ಲಿ, ಪ್ರಾಣಿ-ಮನುಷ್ಯರಲ್ಲಿಯೂ ನಂಟಿರುವುದು ನೋಡಬಹುದು.
ಇದು ಬರಿ ಜೀವ ಜಗತ್ತಿಗೆ ಮಾತ್ರವಲ್ಲ ನಿರ್ಜೀವ ಅಥವಾ ಜಡ ಜಗತ್ತಿನ ಜತೆಯೂ ಈ ನಂಟು ಪ್ರಸ್ತುತ. ಸೂರ್ಯನ ಬೆಳಕು, ನೀರು, ಗಾಳಿಗಳಿಲ್ಲದೆ ಜೀವಿಗಳ ಬದುಕೇ ಅಸಾಧ್ಯ. ಜಡಸಾಮಾಗ್ರಿಗಳಿಂದ ಕಟ್ಟಲ್ಪಟ್ಟ ವಸತಿಗಳಲ್ಲೆ ಮನುಜರು ಜೀವಿಸಬೇಕು. ಜಡೆಯನ್ನು ಹೆಣೆಯಲೂ ಕೂಡ ನೀರ್ಜೀವಿ ಜಡ ಬಾಚಣಿಗೆ ಬೇಕು. ಹೀಗೆ ಜಡ-ಚೇತನಗಳೆಲ್ಲವೂ ಒಂದಲ್ಲ ಒಂದು ರೀತಿಯ ನಂಟಿನಿಂದ ಅಂಟಿಸಲ್ಪಟ್ಟಿವೆ. ಈ ನಿಯಮಕ್ಕೆ ಯಾವುದೂ ಹೊರತಿಲ್ಲ – ಪ್ರತ್ಯಕ್ಷದಲಿ ಕಾಣಲಿ ಕಾಣದಿರಲಿ ಎಲ್ಲವೂ ಈ ಬಂಧನದ ಪಾತ್ರಧಾರಿಗಳೇ ಎನ್ನುತ್ತಿದ್ದಾನೆ ಮಂಕುತಿಮ್ಮ. ವಿಶ್ವಚಿತ್ತದ ಯಾವುದೋ ಮೂಲಸೂತ್ರದ ನಂಟು ಎಲ್ಲವನ್ನು, ಎಲ್ಲರನ್ನು ಬಂಧಿಸಿದೆ. ಅದಕ್ಕಂಟದ್ದು ಯಾವುದೂ ಇಲ್ಲ – ಎನ್ನುವಾಗ ಎಲ್ಲವೂ ಅದರ ಸೃಷ್ಟಿಕರ್ತನ ಕೈಚಳಕದ ಮಹಿಮೆಯೆನ್ನುವ ಪರೋಕ್ಷ ಇಂಗಿತವೂ ವ್ಯಕ್ತವಾಗುವುದನ್ನು ಕಾಣಬಹುದು.
#ಕಗ್ಗಕೊಂದು-ಹಗ್ಗ
#ಕಗ್ಗ-ಟಿಪ್ಪಣಿ
Facebook ಕಾಮೆಂಟ್ಸ್