ಮೋದಿ ಸರಕಾರ ಮೂರು ವರ್ಷ ಪೂರೈಸಿದ ದಿನ ಸ್ನೇಹಿತನೊಬ್ಬ ಇನ್ನೂ ಏಳು ವರ್ಷ ಮೋದಿಯವರ ಬಳಿ ಇದೆ ಅಂದ. ಉತ್ಪ್ರೇಕ್ಷೆ ಅನಿಸಿದರೂ ರಾಜಕೀಯದ ಆಗು ಹೋಗುಗಳನ್ನು ಬಲ್ಲವರಲ್ಲಿ ಕೇಳಿದರೆ 2019ಕ್ಕೂ ಮೋದಿ ಸರಕಾರ ಪುನರಾಯ್ಕೆಯಾಗುವುದು ನಿಶ್ಚಿತ ಎಂದು ಹೇಳುವವರೇ ಹೆಚ್ಚು. ಇತ್ತೀಚಿನ ಚುನಾವಣೆಗಳ ಟ್ರೆಂಡ್ ನೋಡಿದರೆ ಬಿಜೆಪಿಯ ಬೇರುಗಳು ಭಾರತದಾದ್ಯಂತ ಗಟ್ಟಿಯಾಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. 2019ರಲ್ಲಿ ಮೋದಿಯವರನ್ನು ಸೋಲಿಸಬೇಕಾದರೆ ಯಾರಾದರೊಬ್ಬ ಅವತಾರ ಪುರುಷನೇ ಉದಯಿಸಬೇಕಾಗುತ್ತದೆ. ಯಾಕೆಂದರೆ ಇತ್ತೀಚಿಗಿನ ಬಿಹಾರ ರಾಜಕೀಯದ ವಿಪ್ಲವದ ನಂತರವಂತೂ ಸಧ್ಯದ ಪರಿಸ್ಥಿತಿಯಲ್ಲಿ ವಿರೋಧ ಪಕ್ಷದ ನಾಯಕರೆಲ್ಲ ಒಂದಾದರೂ ಮೋದಿ ಮತ್ತು ಅಮಿತ್ ಶಾ ಚಾಣಾಕ್ಷತೆಯ ಮುಂದೆ ಮಕಾಡೆ ಮಲಗುವುದು ನಿಶ್ಚಿತ.
ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಸರಣಿ ಸೋಲುಗಳ ಹೊಡೆತದ ಜೊತೆ ಜೊತೆಗೆ ಯುಪಿಎ ಕಾಲದ ಹಗರಣಗಳು ಮತ್ತು ಎಡವಟ್ಟುಗಳ ಸಂಬಂಧ ಕೋರ್ಟಿಗೆ ಎಡತಾಕಿಯೇ ಹೈರಾಣಾಗಿದೆ. ರಾಹುಲ್ ಗಾಂಧಿಯ ಅಸಮರ್ಥ ನಾಯಕತ್ವ ಪಕ್ಷವನ್ನು ಇನ್ನೂ ಪಾತಾಳಕ್ಕೆ ದೂಡುತ್ತಿದೆ. ನಾಯಕತ್ವದ ವಿರುದ್ಧ ಗುಟುರು ಹಾಕಿ ಹಲವು ರಾಜ್ಯಗಳಲ್ಲಿ ಹಿರಿಯ ನಾಯಕರು ಬಿಜೆಪಿಯತ್ತ ಒಬ್ಬೊಬ್ಬರಾಗಿ ವಾಲುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ 2019ರಲ್ಲಿ ಏಕಾಂಗಿಯಾಗಿ ಬಿಜೆಪಿಗೆ ಪೈಪೋಟಿ ಒಡ್ಡುವುದು ದೂರದ ಮಾತು. ರಾಷ್ಟ್ರಪತಿ ಚುನಾವಣೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ದಿಢೀರನೇ ವಿದೇಶಕ್ಕೆ ಹಾರುತ್ತಾರೆ. ತೀರ ಇತ್ತೀಚಿಗೆ ಚೀನಾ ರಾಯಭಾರಿ ಕಚೇರಿ ಭೇಟಿ ವಿವಾದವನ್ನೂ ಸರಿಯಾಗಿ ನಿಭಾಯಿಸಲು ರಾಹುಲ್ ವಿಫಲರಾಗಿದ್ದರು. ಇದೆಲ್ಲವೂ ರಾಹುಲ್ ಜೊತೆಗೆ ಕಾಂಗ್ರೆಸ್ ವರ್ಚಸ್ಸನ್ನು ದಿನೇ ದಿನೇ ಕಡಿಮೆ ಮಾಡುತ್ತಿದೆ.
ಹಾಗೆ ನೋಡಿದರೆ 2019ರಲ್ಲಿ ಮೋದಿಯವರಿಗೆ ಟಾಂಗ್ ಕೊಡಬಹುದು ಅಂತ ದೇಶದ ಜನ ಭಾವಿಸಿದ್ದು ಬಿಹಾರ ಮುಖ್ಯಮಂತ್ರಿ ನಿತೀಶ್ ಅಥವಾ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲರನ್ನು. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಜಯಗಳಿಸಿದ ಅರವಿಂದ್ ಕೇಜ್ರಿವಾಲ್ ಮೋದಿಗೆ ಪ್ರಬಲ ಎದುರಾಳಿಯಾಗುವ ಎಲ್ಲಾ ಅವಕಾಶಗಳನ್ನು ಮುಕ್ತವಾಗಿರಿಸಿಕೊಂಡಿದ್ದರು. ಆದರೆ ಆಮ್ ಆದ್ಮಿಗಳ ಮುಖವಾಡ ಬಹಳ ಬೇಗ ಕಳಚಿ ಬಿತ್ತು. ಭ್ರಷ್ಟಾಚಾರ, ವಂಚನೆ, ಫೋರ್ಜರಿ, ಸೆಕ್ಸ್ ಸ್ಕ್ಯಾಂಡಲ್ ಹೀಗೆ ಇನ್ನೂ ಹಲವು ಎಡವಟ್ಟುಗಳನ್ನು ಮಾಡಿ ನುರಿತ ರಾಜಕಾರಣಿಗಳೂ ನಾಚುವಂತೆ ಆಮ್ ಆದ್ಮಿಗಳು ಬೆತ್ತಲಾದರು. ಜೊತೆಗೆ ಎಲ್ಲದಕ್ಕೂ ಮೋದಿಯವರನ್ನು ನಿಂದಿಸುವ ಕೇಜ್ರಿವಾಲರು ದೇಶದ ಜನರ ಮುಂದೆ ಜೋಕರ್ ನಂತೆ ಬಿಂಬಿತರಾದರು. ಕೆಲ ತಿಂಗಳುಗಳ ಹಿಂದೆ ನಡೆದ ದೆಹಲಿ ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಸೋತು ಮಕಾಡೆ ಮಲಗಿದ್ದ ಆಪ್ ಸಧ್ಯದ ಪರಿಸ್ಥಿತಿಯಲ್ಲಿ ದೇಶವನ್ನು ಗೆಲ್ಲೋದು ದೂರದ ಮಾತಾಯಿತು ಬಿಡಿ, ದೆಹಲಿಯಲ್ಲೇ ಒಂದೆರಡು ಲೋಕಸಭಾ ಸ್ಥಾನಗಳನ್ನು ಗೆದ್ದರೆ ದೊಡ್ಡ ಮಾತು. ಅದಲ್ಲದೇ ಕೇಜ್ರಿವಾಲರ ಮೇಲೆ ವಿಶ್ವಾಸವಿಟ್ಟು ಅವರ ನಾಯಕತ್ವವನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ವಿರೋಧ ಪಕ್ಷಗಳು ಇರುವುದು ಅನುಮಾನಕರ.
ಬಹಳ ಜಿದ್ದಾಜಿದ್ದಿನಿಂದ ಕೂಡಿದ್ದ ಬಿಹಾರ ಚುನಾವಣೆಯಲ್ಲಿ ಮಹಾಘಟ್ಬಂದನ್ ರಚಿಸಿ ಮೋದಿ- ಅಮಿತ್ ಶಾ ಜೋಡಿಗೆ ಮಣ್ಣು ಮುಕ್ಕಿಸಿದ್ದ ನಿತೀಶ್ ಕುಮಾರ್ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ವಿರೋಧಿ ಪಾಳಯದ ನಾಯಕರಾಗುತ್ತಾರೆ ಅನ್ನುವುದು ಬಹುತೇಕರ ಲೆಕ್ಕಾಚಾರವಾಗಿತ್ತು. ಆದರೆ ಡಿಮಾನಿಟೈಸೇಶನ್, ಸರ್ಜಿಕಲ್ ಸ್ಟ್ರೈಕ್ ಮುಂತಾದ ಮಹತ್ತರ ವಿಷಯಗಳಲ್ಲಿ ಮೋದಿ ಸರಕಾರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದ ನಿತೀಶ್ ತಾನು ಎನ್ಡಿಎಗೆ ಹತ್ತಿರವಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಲಾಲೂ ಕುಟುಂಬದ ಮೇಲೆ ಸಿಬಿಐ ಕುಣಿಕೆ ಗಟ್ಟಿಯಾಗುತ್ತಿದ್ದಂತೆ ಮಹಾಘಟ್ಬಂದನ್ ಸಡಿಲವಾಗುತ್ತಾ ಹೋಗಿತ್ತು. ರಾಷ್ಟ್ರಪತಿ ಚುನಾವಣೆಯಲ್ಲಿ ಮತ್ತು ಜಿಎಸ್ಟಿ ವಿಧೇಯಕ ಅಧಿವೇಶನದಲ್ಲಿ ಎನ್ಡಿಎಗೆ ತನ್ನ ಬೆಂಬಲ ಸೂಚಿಸುವ ಮೂಲಕ ಆಗಲೇ ನಿತೀಶ್ ಲಾಲೂ ಸಂಘದಿಂದ ಒಂದು ಹೆಜ್ಜೆ ಹೊರಗಿಟ್ಟಾಗಿತ್ತು. ಅದಕ್ಕೆ ಅಧಿಕೃತ ಮುದ್ರೆ ಬೀಳುವುದೊಂದೇ ಬಾಕಿಯಿತ್ತು. ತನ್ನ ಕ್ಲೀನ್ ಇಮೇಜಿಗೆ ಧಕ್ಕೆಯಾಗಬಾರದು ಮತ್ತು ದೇಶಾದ್ಯಂತ ದಿನೇ ದಿನೇ ಬೆಳೆಯುತ್ತಿರುವ ಬಿಜೆಪಿಯ ವಿರುದ್ಧ ದಿಕ್ಕಿನಲ್ಲಿ ಈಜುವುದು ಅಸಾಧ್ಯದ ಮಾತು ಎನ್ನುವುದನ್ನು ಮನಗಂಡು ಅಂತಿಮವಾಗಿ ಎನ್ಡಿಎ ತೆಕ್ಕೆಗೆ ಜಾರುವ ಮೂಲಕ ನಿತೀಶ್ ವಿರೋಧ ಪಕ್ಷಗಳ ನಾಯಕರು ಬೆಚ್ಚಿ ಬೀಳುವಂತೆ ಮಾಡಿದರು.
ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳ ಭದ್ರಕೋಟೆಯನ್ನು ಭೇದಿಸಿ ಅಧಿಕಾರದ ಗದ್ದುಗೆ ಏರಿದ್ದ ಮಮತಾ ಬ್ಯಾನರ್ಜಿ ಪ್ರಧಾನಿ ಹುದ್ದೆಯ ಮೇಲೆ ಒಂದು ಕಣ್ಣಿಟ್ಟುಕೊಂಡೇ ಬಂದವರು. ಡಿಮಾನಿಟೈಸೇಶನ್ ಆದ ಸಂದರ್ಭದಲ್ಲಿ ಮಮತಾ ಮೈಮೇಲೆ ದೆವ್ವ ಬಂದಂತೆ ಆಡಿದ್ದರು ಮತ್ತು ಬಹಳ ಕಟು ಶಬ್ದಗಳಲ್ಲಿ ಮೋದಿ ಸರಕಾರವನ್ನು ತೆಗಳಿದ್ದರು. ತೃಣಮೂಲ ಕಾಂಗ್ರೆಸ್ಸಿನ ಅಸ್ತಿತ್ವ ಪಶ್ಚಿಮ ಬಂಗಾಳ ಹಾಗೂ ತ್ರಿಪುರಾ ಹೊರತುಪಡಿಸಿದರೆ ದೇಶದ ಬೇರೆ ಭಾಗದಲ್ಲಿ ಇಲ್ಲ. ಅಲ್ಲದೇ ಅಮಿತ್ ಶಾ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಬೇರುಗಳನ್ನು ಭದ್ರವಾಗಿ ನೆಲೆಯೂರಲು ಬೇಕಾದ ಎಲ್ಲ ಕೆಲಸಗಳನ್ನು ಸದ್ದಿಲ್ಲದೇ ಮಾಡುತ್ತಿದ್ದಾರೆ. ಮಮತಾ ಬ್ಯಾನರ್ಜಿಯವರು ಮೋದಿ ಸರಕಾರದ ವಿರುದ್ಧವಾಗಿ ರಾಷ್ಟ್ರಪತಿ ಭವನ ಚಲೋ ಹಮ್ಮಿಕೊಂಡಾಗ ಬಹುತೇಕ ವಿರೋಧ ಪಕ್ಷಗಳು ಬೆಂಬಲಿಸಲಿಲ್ಲ. ಹಾಗಾಗಿ ಮಮತಾ ವಿರೋಧ ಪಕ್ಷಗಳ ನಾಯಕಿಯಾಗಿ ಹೊರಹೊಮ್ಮುವುದು ಅನುಮಾನಕರ.
ಒರಿಸ್ಸಾದಲ್ಲಿ ನವೀನ್ ಪಟ್ನಾಯಕ್ ಕ್ಲೀನ್ ಇಮೇಜ್ ಹೊಂದಿರುವ ನಾಯಕ. ಆದರೆ ರಾಷ್ಟ್ರ ರಾಜಕಾರಣದಲ್ಲಿ ಇಲ್ಲಿಯವರೆಗೆ ಆಸಕ್ತಿ ತೋರಿಸಿದವರಲ್ಲ. 2009ರಲ್ಲಿ ಬಿಜೆಪಿ ಮೈತ್ರಿ ಮುರಿದುಕೊಂಡ ಬಳಿಕ ಸ್ವಂತ ಬಲದಲ್ಲಿ ಎರಡು ಬಾರಿ ವಿಧಾನಸಭೆ ಚುನಾವಣೆಗಳನ್ನು ಗೆದ್ದಿದ್ದಾರೆ. 2009, 2014ರ ಲೋಕಸಭೆ ಚುನಾವಣೆಗಳೆರಡರಲ್ಲೂ ಹೆಚ್ಚಿನ ಸ್ಥಾನಗಳನ್ನು ಬಾಚಿಕೊಂಡಿದ್ದಾರೆ. ಆದರೆ ಕಳೆದ ಫೆಬ್ರವರಿಯಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯ ಅದ್ವಿತೀಯ ಸಾಧನೆ ನವೀನ್ ಪಟ್ನಾಯಕ್ ನಿದ್ದೆಗೆಡಿಸಿರುವುದು ಸುಳ್ಳಲ್ಲ.
ನ್ಯಾಷನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ ಉತ್ತರಪ್ರದೇಶದ ಚುನಾವಣಾ ಫಲಿತಾಂಶ ಬಂದಾಗ 2019ರ ಚುನಾವಣೆಯನ್ನು ಮರೆತು ಬಿಡೋಣ 2024ರ ಚುನಾವಣೆಯ ಬಗ್ಗೆ ಯೋಚಿಸೋಣ ಅಂತ ಟ್ವೀಟ್ ಮಾಡಿದ್ದರು. ಬಿಜೆಪಿ ಕಾಶ್ಮೀರದಲ್ಲೂ ಸಮ್ಮಿಶ್ರ ಸರಕಾರದ ಪಾಲುದಾರನಾಗಿರುವುದರಿಂದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಮ್ಯಾಜಿಕ್ ಮಾಡುವುದು ಅನುಮಾನ. ಅಪ್ಪ ಮಗ ಸೈನಿಕರಿಗೆ ಅವಮಾನ ಮಾಡಿ, ಕಲ್ಲು ಹೊಡೆಯುವವರಿಗೆ ಬೆಂಬಲದ ಮಾತಾಡಿ ಗೆದ್ದು ಬಂದರೆ ಅದೇ ದೊಡ್ಡ ಸಾಧನೆ. ಬಿಜೆಪಿ ಇನ್ನೂ ಅಂಬೆಗಾಲಿಕ್ಕುತ್ತಿರುವ ರಾಜ್ಯಗಳಾದ ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ಅಮಿತ್ ಶಾ ವಿಶೇಷ ಮಹತ್ವವನ್ನು ನೀಡುತ್ತಿದ್ದಾರೆ. ಈ ರಾಜ್ಯಗಳಲ್ಲಿ ಸಾಧ್ಯವಾದರೆ ಸ್ವತಂತ್ರವಾಗಿ ಇಲ್ಲವಾದರೆ ಮಿತ್ರ ಪಕ್ಷಗಳ ಬೆಂಬಲದಿಂದ ವಿರೋಧಿಗಳ ಹುಟ್ಟಡಗಿಸುವ ಯೋಚನೆ ಬಿಜೆಪಿಯದ್ದು. ಉತ್ತರ ಪ್ರದೇಶದಲ್ಲಿ ಮುಲಾಯಂ ಮತ್ತು ಮಾಯಾವತಿ ಇಬ್ಬರೂ ಸೋತು ಸುಣ್ಣವಾಗಿದ್ದಾರೆ ಮತ್ತು ಆದಿತ್ಯನಾಥ್ ನೇತೃತ್ವದಲ್ಲಿ ಬಿಜೆಪಿ ಸರಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಎನ್ಸಿಪಿಯ ಶರದ್ ಪವಾರ್ ಕೂಡಾ ಫಡ್ನಾವೀಸ್ ಹವಾ ಮುಂದೆ ಮಂಕಾಗಿದ್ದಾರೆ. ಲಾಲೂ ಕೂಡಾ ತಮ್ಮ ವಿರುದ್ಧ ಕೇಸುಗಳನ್ನು ಎದುರಿಸುವಲ್ಲೇ ಸುಸ್ತಾಗುತ್ತಿದ್ದಾರೆ. ಉತ್ತರಾಖಾಂಡ್, ಗುಜರಾತ್, ಹರ್ಯಾಣ, ಉತ್ತರಪ್ರದೇಶ, ಛತ್ತೀಸ್ಗಢ, ರಾಜಸ್ತಾನ, ಮಧ್ಯಪ್ರದೇಶ, ಅಸ್ಸಾಂಗಳಲ್ಲಿ ಬಿಜೆಪಿ ಸ್ವಂತಬಲದಲ್ಲಿ ಅಧಿಕಾರದಲ್ಲಿದೆ. ಕಾಶ್ಮೀರ, ಮಹಾರಾಷ್ಟ್ರ, ಜಾರ್ಖಂಡ್, ಅರುಣಾಚಲ, ಆಂಧ್ರ, ನಾಗಾಲ್ಯಾಂಡ್, ಗೋವಾ, ಮಣಿಪುರಗಳಲ್ಲಿ ಮಿತ್ರ ಪಕ್ಷಗಳ ನೆರವಿನಿಂದ ಅಧಿಕಾರದಲ್ಲಿದೆ.
2004ರ ಲೋಕಸಭೆ ಚುನಾವಣೆಗೂ ಮುನ್ನ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವೇ ಮತ್ತೂಮ್ಮೆ ಅಸ್ತಿತ್ವಕ್ಕೆ ಬರುತ್ತದೆ ಎಂಬಂತಹ ವಾತಾವರಣವಿತ್ತು. ಆದರೆ ಆವಾಗ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಇಷ್ಟು ಹೀನಾಯವಾಗಿರಲಿಲ್ಲ. ಬಹುಮುಖ್ಯವಾಗಿ ಸೋನಿಯಾ ಗಾಂಧಿ ರಾಜಕೀಯವಾಗಿ ಬಹಳ ಸಕ್ರಿಯರಾಗಿದ್ದರು. ಸಣ್ಣ ಪುಟ್ಡ ಪಕ್ಷಗಳನ್ನು ಒಗ್ಗೂಡಿಸಿ ಅಟಲ್ ಸರಕಾರವನ್ನು ಮಣಿಸಿದ್ದರು. ಆದರೆ ಅವಾಗಿದ್ದ ಬಿಜೆಪಿ ನಾಯಕರಿಗೆ ಹೋಲಿಸಲಿದರೆ ಈಗಿರೋ ನಾಯಕರು ಚಾಣಾಕ್ಷರು. ಬಿಜೆಪಿಯೂ ಕೂಡಾ ಯಾವುದೇ ಕಾರಣಕ್ಕೂ ಮೈಮರೆಯಬಾರದು. ಮೋದಿ ಸರಕಾರದ ಕಾರ್ಯಗಳನ್ನು ಜನರಿಗೆ ತಲುಪಿಸಬೇಕು. 2009ರ ಆಸುಪಾಸಿನಲ್ಲಿ ಮೋದಿ ಪ್ರಧಾನಿಯಾಗಬಹುದು ಅನ್ನುವ ಸಣ್ಣ ಸುಳಿವು ಕೂಡಾ ಬಹುತೇಕರಿಗೆ ಇರಲಿಲ್ಲ. ಆದರೆ ಗುಜರಾತಿನಲ್ಲಿ ಮಾಡಿದ ಕೆಲಸಗಳು ಮೋದಿಯವರನ್ನು ದೇಶಾದ್ಯಂತ ಪ್ರಾಜೆಕ್ಟ್ ಮಾಡಿತು. ಸಾಲದ್ದಕ್ಕೆ ಬಿಜೆಪಿಯ ಬೆಂಬಲ ಕೂಡಾ ಮೋದಿಗೆ ಪ್ಲಸ್ ಪಾಯಿಂಟ್ ಆಯಿತು. ಲೋಕಸಭಾ ಚುನಾವಣೆಗೆ ಇನ್ನೂ ಸಮಯವಿದೆ. ಆದರೆ ಸಧ್ಯದ ಮಟ್ಟಿಗೆ ವಿರೋಧ ಪಕ್ಷದಲ್ಲಿ ಮೋದಿಯನ್ನು ಮಣಿಸುವುದಿರಲಿ, ಅವರ ವಿರುದ್ಧ ತೊಡೆ ತಟ್ಟಬಲ್ಲ ಪ್ರಬಲ ನಾಯಕನಿರದಿರುವುದು ಮಾತ್ರ ಸತ್ಯ!
Facebook ಕಾಮೆಂಟ್ಸ್