X

ಇಂದಿರಾ-ಅನ್ನಪೂರ್ಣಾ ನಡುವೆ ಹೋಲಿಸುವ ಮುನ್ನ ಇದನ್ನೊಮ್ಮೆ ಓದಿ

ಸ್ವಾತಂತ್ರ್ಯ ಬಂದಾಗಿನಿಂದಲೂ ನಮ್ಮ ದೇಶದಲ್ಲಿ ಸರ್ಕಾರಗಳು ಬಡತನ ನಿವಾರಣೆಗಾಗಿ ಪ್ರತೀ ವರ್ಷವೂ ಲಕ್ಷಾಂತರ ಕೋಟಿ ಹಣವನ್ನು ತೆಗೆದಿರಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ.ಇದುವರೆಗೆ ಗೆದ್ದ ಎಲ್ಲಾ ಪಕ್ಷಗಳೂ ನಾವು ಬಡವರ ಪರ ಎಂದು ಹೇಳಿಕೊಂಡೆ ಅಧಿಕಾರಕ್ಕೆ ಬಂದಿವೆ ಮತ್ತು ಗೆದ್ದ ನಂತರವೂ ನಮ್ಮದು ಬಡವರ ಪರವಾದ ಸರ್ಕಾರ ಎಂದೇ ಹೇಳಿಕೊಳ್ಳುತ್ತವೆ ಎನ್ನುವುದನ್ನೂ ನಾವು ಕಣ್ಣಾರೆ ಕಂಡಿದ್ದೇವೆ.

ಹಾಗಾದರೆ ಪ್ರತೀ ವರ್ಷ ಲಕ್ಷಾಂತರ ಕೋಟಿ ರೂಪಾಯಿಗಳು ಖರ್ಚು ಮಾಡಿಯೂ ಬಡವರ ಉದ್ಧಾರ ಯಾಕಾಗಿಲ್ಲ? ಈ ದೇಶದ ಬಡವರು ಬಡವರಾಗಿಯೇ ಉಳಿದಿರಲು ಕಾರಣವೇನು? ಅಷ್ಟೇನೂ ಹಿಂದುಳಿದ ರಾಜ್ಯ ಎಂದು ಗುರುತಿಸಿಕೊಳ್ಳದ ನಮ್ಮ ಕರ್ನಾಟಕ ರಾಜ್ಯದಲ್ಲೇ ಸುಮಾರು ಶೇ.ಎಪ್ಪತ್ತೈದರಷ್ಟು ಜನ ಕೇವಲ ಒಂದು ಉಪ್ಪಿನಪೊಟ್ಟಣ ಕೊಳ್ಳಲೂ ಸರ್ಕಾರದ ಸಹಾಯ ಬಯಸುತ್ತಿರುವುದೇಕೆ? ಹಾಗಾದರೆ ಬಡವರ ಹೆಸರಿನಲ್ಲಿ ಬಿಡುಗಡೆಯಾಗುವ ಆ ಲಕ್ಷಾಂತರ ಕೋಟಿ ಹಣ ಯಾರ ಹೊಟ್ಟೆ ಸೇರುತ್ತಿದೆ?

ಒಮ್ಮೆ ಸಾರ್ವಜನಿಕವಾಗಿ ಈ ಪ್ರಶ್ನೆ ಕೇಳಿ ನೋಡಿ. ಆಗ ನಿಮ್ಮನ್ನು ಬಡವರ ವಿರೋಧಿ ಎಂದು ಬಿಂಬಿಸಿ ಅದೇ ಬಡವರನ್ನೇ ನಿಮ್ಮ ವಿರುದ್ಧ ಎತ್ತಿ ಕಟ್ಟಲಾಗುತ್ತದೆ. ಬಡವರ ಹೆಸರಿನಲ್ಲಿ ಹಣ ತಿಂದು ಅದನ್ನು ಪ್ರಶ್ನಿಸುವವರನ್ನೇ ಬಡವರ ವಿರೋಧಿಯನ್ನಾಗಿಸಿ ಅದೇ ಬಡವರನ್ನೇ ಬಡವರ ಪರ ವಹಿಸಿ ಪ್ರಶ್ನೆ ಕೇಳುವವರ ವಿರುದ್ಧ ಎತ್ತಿ ಕಟ್ಟಿ ಬಾಯಿ ಮುಚ್ಚಿಸುವ ಕುತಂತ್ರವೊಂದು ಆಗಿನಿಂದ ಈಗಿನವರೆಗೂ ನಡೆದುಕೊಂಡು ಬರುತ್ತಿದೆ. ನಮ್ಮ ದೇಶದಲ್ಲಿ ಬಡವರ ಅಭಿವೃದ್ಧಿಗಾಗಿ ಅಷ್ಟೆಲ್ಲಾ ಹಣ ಖರ್ಚು ಮಾಡಿಯೂ ಬಡವರು ಬಡವರಾಗಿಯೇ ಉಳಿದಿರಲು ಇದೇ ಕಾರಣ.

ಇತ್ತೀಚಿಗೆ ಬೆಂಗಳೂರಿನಲ್ಲಿ ಕಡು ಬಡವರಿಗಾಗಿ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಇಂದಿರಾ ಕ್ಯಾಂಟೀನ್ ಎನ್ನುವ ಯೋಜನೆಯನ್ನು ಪ್ರಾರಂಭಿಸಲಾಯಿತು. ಪ್ರಾರಂಭದಿಂದಲೂ ವಿವಾದಗಳಿಗೆ ಸಿಲುಕುತ್ತಲೇ ಬಂದ ಆ ಯೋಜನೆಗೆ ಅತ್ಯಂತ ತರಾತುರಿಯಲ್ಲಿ ಅದ್ದೂರಿ ಚಾಲನೆ ದೊರೆಯಿತು. ಆದರೆ ಪ್ರಾರಂಭವಾದ ನಂತರ ಕೂಡಾ ಬಡವರಿಗೆ ಆ ಕ್ಯಾಂಟೀನ್’ಗಳಿಂದ ಎಷ್ಟು ಉಪಯೋಗವಾಗುತ್ತಿದೆ ಎನ್ನುವ ಬಗ್ಗೆ ಅನುಮಾನಗಳಿವೆ.ಆದರೆ ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ಒಂದು ವೇಳೆ ಪ್ರಶ್ನಿಸಿದರೆ ಪ್ರಶ್ನಿಸಿದವರನ್ನೇ ಖಳನಾಯಕರನ್ನಾಗಿ ಬಿಂಬಿಸುವ ಮತ್ತದೇ ಹಳೇ ಕುತಂತ್ರಗಳು ಹಾಗೆ ಪ್ರಶ್ನಿಸಿದವರನ್ನು ಹೈರಾಣ ಮಾಡಿಬಿಡುತ್ತವೆ!

ಆ ಯೋಜನೆಯನ್ನು ಪ್ರಶ್ನಿಸುವವರ ಬಾಯಿ ಮುಚ್ಚಿಸಲು ಇನ್ನೊಂದು ಉಪಾಯವನ್ನೂ ಕೂಡಾ ಬಳಸಲಾಗುತ್ತಿದೆ. ಉತ್ತರ ಪ್ರದೇಶದ ಯೋಗಿ ಆದಿತ್ಯ ನಾಥ್ ಸರ್ಕಾರದ ‘ಅನ್ನಪೂರ್ಣ ಭೋಜನಾಲಯ’ ಯೋಜನೆಯನ್ನು ಇಲ್ಲಿನ ‘ಇಂದಿರಾ ಕ್ಯಾಂಟೀನ್’ ಯೋಜನೆಗೆ ಹೋಲಿಸಿ ಅವರು ಮಾಡಿದರೆ ಸರಿ,ಇವರು ಮಾಡಿದರೆ ತಪ್ಪೇ..? ಎಂದು ಪ್ರಶ್ನಿಸಿ ಪಕ್ಷ ರಾಜಕಾರಣವನ್ನು ತಂದು ಬಾಯಿ ಮುಚ್ಚಿಸಲು ಪ್ರಯತ್ನಿಸಲಾಗುತ್ತದೆ. ಅಂದರೆ ಇಂದಿರಾ ಕ್ಯಾಂಟೀನ್ ಯೋಜನೆಯ ಸೌಲಭ್ಯ ನಿಜವಾದ ಬಡವರಿಗೆ ತಲುಪುತ್ತಿದೆಯೇ ಎಂದು ಕೇಳುವ ಕನ್ನಡಿಗರೆಲ್ಲಾ ಕೇವಲ ಬಿ.ಜೆ.ಪಿ.ಯವರೇ ಹೊರತೂ ಬೇರೆ ಪಕ್ಷದವರಲ್ಲ ಎನ್ನುವ ಕಲ್ಪನೆಯನ್ನು ಅವರಿಗವರೇ ಮಾಡಿಕೊಂಡಂತಿದೆ!

ಉತ್ತರಪ್ರದೇಶದ ಅನ್ನಪೂರ್ಣ ಭೋಜನಾಲಯದ ಪ್ರಯೋಜನ ನಿಜವಾದ ಬಡವರಿಗೆ ತಲುಪುತ್ತಿಲ್ಲ ಎಂದರೆ ಅದನ್ನು ಕೂಡಾ ಪ್ರಶ್ನಿಸುವ ಹಕ್ಕು ಎಲ್ಲಾ ಪ್ರಜೆಗಳಿಗೂ ಇದ್ದೇ ಇದೆ. ಆದರೆ ಯಾವುದೋ ಒಂದು ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಇನ್ನೊಂದು ಯೋಜನೆಯನ್ನು, ಇನ್ನೊಂದು ಪಕ್ಷವನ್ನು ಎಳೆತರುವುದು ಯಾರಿಗೂ ಶೋಭೆ ತರುವ ವಿಷಯವಲ್ಲ. ಒಂದು ವೇಳೆ ಉತ್ತರಪ್ರದೇಶದ ಅನ್ನಪೂರ್ಣ ಭೋಜನಾಲಯ ಮತ್ತು ಬೆಂಗಳೂರಿನ ಇಂದಿರಾ ಕ್ಯಾಂಟೀನ್ ಯೋಜನೆಗಳೆರಡೂ ಒಂದೇ ರೀತಿಯ ಯೋಜನೆಗಳೇ? ಎರಡೂ ಯೋಜನೆಗಳಿಗೂ ಏನೊಂದೂ ವ್ಯತ್ಯಾಸವಿಲ್ಲವೇ ಎನ್ನುವ ಪ್ರಶ್ನೆಗಳನ್ನು ಕೇಳಿದರೆ ತಮ್ಮನ್ನು ಸಮರ್ಥಿಸಿಕೊಳ್ಳಲು ಅನ್ನಪೂರ್ಣ ಭೋಜನಾಲಯವನ್ನು ಎಳೆದು ತಂದವರಲ್ಲಿ ಯಾವುದೇ ಉತ್ತರವಿರುವುದಿಲ್ಲ.

ಹಾಗಾದರೆ ಆ ಎರಡೂ ಯೋಜನೆಗಳನ್ನು ಒಂದಕ್ಕೊಂದು ಹೋಲಿಸುವ ಮೊದಲು ಅವುಗಳ ನಡುವಿನ ವ್ಯತ್ಯಾಸಗಳೇನು ಎನ್ನುವುದನ್ನು ನಾವಾದರೂ ತಿಳಿದುಕೊಳ್ಳೋಣ.

ಅನ್ನಪೂರ್ಣ ಭೋಜನಾಲಯ: ಚುನಾವಣೆಯಲ್ಲಿ ಗೆದ್ದ ನಂತರ ಘೋಷಿಸಲಾದ ಯೋಜನೆ.

ಇಂದಿರಾ ಕ್ಯಾಂಟೀನ್: ಚುನಾವಣೆಯಲ್ಲಿ ಗೆದ್ದು ಮತ್ತೊಂದು ಚುನಾವಣೆ ಇನ್ನೇನು ಹತ್ತಿರವಿದೆ ಎನ್ನುವಾಗ ಜಾರಿಯಾಗುತ್ತಿರುವ ಯೋಜನೆ.

ಅನ್ನಪೂರ್ಣ ಭೋಜನಾಲಯ: ಎಲ್ಲರ ಹಸಿವನ್ನು ನೀಗಿಸುತ್ತಾಳೆ ಎಂದು ನಾವು ನಂಬುವ ದೇವಿಯ ಹೆಸರಿನಲ್ಲಿ ಪ್ರಾರಂಭಿಸಲಾದ ಯೋಜನೆ.

ಇಂದಿರಾ ಕ್ಯಾಂಟೀನ್: ತಮ್ಮ ಪಕ್ಷದ ಅಧ್ಯಕ್ಷರ ಅತ್ತೆಯ ಹೆಸರಿನಲ್ಲಿ ಪ್ರಾರಂಭಿಸಲಾದ ಯೋಜನೆ.

ಅನ್ನಪೂರ್ಣ ಭೋಜನಾಲಯ: ಉತ್ತರಪ್ರದೇಶದ ಜನರ ತೆರಿಗೆ ಹಣದಲ್ಲಿ ಉತ್ತರಪ್ರದೇಶದ ಜನರಿಗಾಗಿ ರೂಪಿಸಲಾದ ಯೋಜನೆ.

ಇಂದಿರಾ ಕ್ಯಾಂಟೀನ್: ಕರ್ನಾಟಕದ ಜನರ ತೆರಿಗೆ ಹಣದಲ್ಲಿ ಯಾವ ರಾಜ್ಯ/ದೇಶದವರು ಬೇಕಾದರೂ ಊಟ ಮಾಡಬಹುದಾದ ಯೋಜನೆ.

ಅನ್ನಪೂರ್ಣ ಭೋಜನಾಲಯ: ಈ ಯೋಜನೆ ಕಡುಬಡವರು,ಆಟೋ ಚಾಲಕರು,ದಿನಗೂಲಿ ಕಾರ್ಮಿಕರುಗಳಿಗೆ ಮಾತ್ರ ಮೀಸಲು.

ಇಂದಿರಾ ಕ್ಯಾಂಟೀನ್: ಈ ಕ್ಯಾಂಟೀನ್ ಗಳಲ್ಲಿ ಕೇವಲ ಬಡವರಷ್ಟೇ ಅಲ್ಲದೆ ಅಂಬಾನಿ ಅದಾನಿಯ ಮಕ್ಕಳು ಬೇಕಾದರೂ ಊಟ ಮಾಡಬಹುದು.

ಅನ್ನಪೂರ್ಣ ಭೋಜನಾಲಯ: ಅಲ್ಲಿನ ಮುಖ್ಯಮಂತ್ರಿಗಳಿಗೆ ಅದೇ ರೀತಿಯ ಕ್ಯಾಂಟೀನ್ ಗಳನ್ನು ಎಂಟು ವರ್ಷಗಳಿಗೂ ಹೆಚ್ಚು ಕಾಲ ನಿರ್ವಹಣೆ ಮಾಡಿದ ವೈಯುಕ್ತಿಕ ಅನುಭವವಿದೆ.

ಇಂದಿರಾ ಕ್ಯಾಂಟೀನ್: ಇಲ್ಲಿನ ಮುಖ್ಯಮಂತ್ರಿಗಳಿಗೆ ಅಂತಹಾ ಕ್ಯಾಂಟೀನ್ ಗಳನ್ನು ವೈಯುಕ್ತಿಕವಾಗಿ ನಿರ್ವಹಣೆ ಮಾಡಿದ ಯಾವುದೇ ಅನುಭವವಿಲ್ಲ.

ಅನ್ನಪೂರ್ಣ ಭೋಜನಾಲಯ: ಒಂದು ವಾರ ಮಾನ್ಯವಾಗುವ ಟೋಕನ್ ನೀಡಲಾಗುತ್ತದೆ. ದಿನವೂ ಊಟದ ಟೋಕನ್’ಗಾಗಿ ಕ್ಯೂ ನಿಲ್ಲಬೇಕಾದ ಅವಶ್ಯಕತೆಯಿಲ್ಲ.

ಇಂದಿರಾ ಕ್ಯಾಂಟೀನ್: ಫಲಾನುಭವಿಗಳು ಕ್ಯಾಂಟೀನ್ ಗಳ ಮುಂದೆ ಒಂದೊಂದು ದಿನವೂ, ಒಂದೊಂದು ಹೊತ್ತಿಗೂ ಟೋಕನ್’ಗಾಗಿ ಕ್ಯೂ ನಿಲ್ಲಬೇಕು.

ಅನ್ನಪೂರ್ಣ ಭೋಜನಾಲಯ: ಟೋಕನ್’ಗಳನ್ನು ಬಳಸಿ ಯಾವುದೇ ಅನ್ನಪೂರ್ಣ ಕ್ಯಾಂಟೀನ್ ಗಳಲ್ಲಿ ಬೇಕಾದರೂ ಊಟ ಮಾಡಬಹುದು. ಕಾರ್ಮಿಕರು ಯಾವ ಸ್ಥಳದಲ್ಲಿದ್ದರೂ ಅಲ್ಲಿಗೆ ಹತ್ತಿರವಿರುವ ಕ್ಯಾಂಟೀನ್ ಗಳಲ್ಲಿ ಟೋಕನ್ ತೋರಿಸಿ ಊಟ ಮಾಡಬಹುದು. ಇದರಿಂದ ಫಲಾನುಭವಿಗಳ ಸಮಯ ಉಳಿತಾಯವಾಗುತ್ತದೆ.

ಇಂದಿರಾ ಕ್ಯಾಂಟೀನ್: ಯಾವುದೇ ಕ್ಯಾಂಟೀನ್’ಗೆ ಹೋದರು ಪ್ರತೀ ಬಾರಿಯೂ ಟೋಕನ್ ಖರೀದಿಸಬೇಕು. ಇದರಿಂದ ಫಲಾನುಭವಿಗಳ ಸಮಯ ವ್ಯರ್ಥವಾಗುವ ಸಾಧ್ಯತೆ ಹೆಚ್ಚು.

ಅನ್ನಪೂರ್ಣ ಭೋಜನಾಲಯ: ಟೋಕನ್ ಗಳನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲಾಗುತ್ತದೆ. ಇದರಿಂದ ಬಡವರಿಗಾಗಿ ಮಾಡಿದ ಯೋಜನೆಯ ದುರುಪಯೋಗ ತಪ್ಪುತ್ತದೆ.

ಇಂದಿರಾ ಕ್ಯಾಂಟೀನ್: ಫಲಾನುಭವಿಗಳಾಗಲು ಯಾವ ಆಧಾರವನ್ನೂ ತೋರಿಸಬೇಕಿಲ್ಲ. ಸ್ವಂತ ಕಾರಿನಲ್ಲಿ ಬರುವವರೂ, ಮೂರಂತಸ್ತಿನ ಮನೆಯವರೂ ಐದು ರೂಪಾಯಿಗೆ ಬಡವರಿಗೆ ಮೀಸಲಾದ ತಿಂಡಿ ತಿಂದು ಹೋಗಬಹುದು.

ಅನ್ನಪೂರ್ಣ ಭೋಜನಾಲಯ: ಯೋಜನೆಯ ಜನಪ್ರಿಯತೆ ಸಹಿಸದ ವಿರೋಧಪಕ್ಷಗಳು ಏನನ್ನಾದರೂ ಮಾಡಬಹುದು ಎಂದು ಯಾರೂ ಹೇಳಿಕೆ ಕೊಟ್ಟಿಲ್ಲ.

ಇಂದಿರಾ ಕ್ಯಾಂಟೀನ್: ಯೋಜನೆಯ ಜನಪ್ರಿಯತೆ ಸಹಿಸಲಾರದೇ ವಿರೋಧಪಕ್ಷಗಳು ವಿಷ ಬೆರೆಸಬಹುದು ಎಂದು ಆಡಳಿತ ಪಕ್ಷದ ಕಾರ್ಯಾಧ್ಯಕ್ಷರೇ ಹೇಳಿರುವುದು ಆ ಯೋಜನೆಯ ಯಶಸ್ಸಿನ ಬಗ್ಗೆ ಅನುಮಾನ ಮೂಡುವಂತೆ ಮಾಡಿವೆ.

ಮೇಲಿನ ಎಲ್ಲಾ ಅಂಶಗಳನ್ನೂ ಗಮನಿಸಿ ನೋಡಿದಾಗ ಫಲಾನುಭವಿಗಳನ್ನು ಗುರುತಿಸಲು ಯಾವ ಮಾನದಂಡ ಅನುಸರಿಸಲಾಗಿದೆ ಮತ್ತು ಈ ಯೋಜನೆಗಳ ಫಲ ನಿಜವಾಗಿ ಅಗತ್ಯವಿರವವರಿಗೆ ತಲುಪುತ್ತಿದೆಯೇ ಎನ್ನುವ ಪ್ರಶ್ನೆ ಸಹಜವಾಗಿಯೇ ಯಾರ ಮನಸ್ಸಿನಲ್ಲಿ ಬೇಕಾದರೂ ಮೂಡಬಹುದು. ಈ ಯೋಜನೆಗಳ ಫಲ ನಿಜವಾಗಿ ಅಗತ್ಯವಿರವವರಿಗೆ ತಲುಪುತ್ತಿದೆಯೇ ಇಲ್ಲವೇ ಎನ್ನುವುದನ್ನು ಕೇಳುವವರನ್ನೇ ಬಡವರ ವಿರೋಧಿ ಎಂದು ಬಿಂಬಿಸುತ್ತಾರೆ ಎಂದರೆ ನಿಜವಾದ ಬಡವರ ವಿರೋಧಿಗಳು ಅವರೇ ಅಲ್ಲವೇ? ಹಾಗೆಂದು ಉತ್ತರ ಪ್ರದೇಶದ ಅನ್ನಪೂರ್ಣ ಭೋಜನಾಲಯ ಯೋಜನೆಯನ್ನು ಸಾರಾಸಗಟಾಗಿ ಒಪ್ಪಿಕೊಂಡು ಬಿಡಬೇಕು ಎಂದೇನೂ ಅಲ್ಲ. ಅದರಲ್ಲೂ ತಪ್ಪುಗಳು ಕಂಡುಬಂದರೆ ಈ ದೇಶದ ಯಾರು ಬೇಕಾದರೂ ಅದನ್ನೂ ಖಂಡಿಸಬಹುದು. ಹಾಗೆಂದು ಆ ಯೋಜನೆಯಲ್ಲಿರುವ ತಪ್ಪುಗಳನ್ನು  ಪ್ರಶ್ನಿಸುವವರ ಬಾಯಿ ಮುಚ್ಚಿಸಲು ಕರ್ನಾಟಕದ ಇಂದಿರಾ ಕ್ಯಾಂಟೀನ್ ಕಡೆ ಬೆರಳು ತೋರಿಸಿದರೆ ಆಗ ಪ್ರಶ್ನಿಸಿದವರು ಬಾಯಿ ಮುಚ್ಚಿಕೊಂಡು ಕೂರುವ  ಅಗತ್ಯವೇನೂ ಇಲ್ಲ.

Facebook ಕಾಮೆಂಟ್ಸ್

Praven Kumar Mavinakadu: ಮೂಲತಃ ಪರಿಸರಪ್ರೇಮಿ.ಹವ್ಯಾಸೀ ಬರಹಗಾರ. ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವ ಮಹತ್ವಾಕಾಂಕ್ಷೆಯಿಂದ ಪರಿಸರ ಸ್ನೇಹಿ ಸೋಲಾರ್ ಅಡುಗೆ ಉಪಕರಣಗಳ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದು ಮುಂದೆ ಅವುಗಳನ್ನು ದೇಶದ ಮನೆಮನೆಗೂ ಮುಟ್ಟಿಸಬೇಕೆನ್ನುವ ಕನಸಿದೆ.
Related Post