X

ಇಂದಿನ ಹೋರಾಟಗಳು ರೂಪುಗೊಳ್ಳುತ್ತಿರುವ ಬಗೆ

ಬೆಂಗಳೂರಲ್ಲಿ ಮೆಟ್ರೋದಲ್ಲಿ ಹಿಂದಿ ಇರಬಾರದು ಎಂಬ ಹೋರಾಟ ನಡೆಯುತ್ತಿದೆ. ಹೋರಾಟ ಎನ್ನುವುದಕ್ಕಿಂತ ಹೋರಾಟದ ಹೆಸರಲ್ಲೊಂದು ಡ್ರಾಮಾ ನಡೆಯುತ್ತಿದೆ ಎಂದರೆ ಸರಿಯೇನೋ. ಯಾಕೆಂದರೆ ಹೋರಾಟ ಮಾಡುತ್ತಿರುವವರಿಗೆ “ಹಿಂದಿ ಏಕೆ ಬೇಡ?” ಅನ್ನಿ. “ಬೋರ್ಡಿನಲ್ಲಿ ಕನ್ನಡದ ಜೊತೆಗೆ ಇಂಗ್ಲೀಷೂ ಇದೆ. ಹಾಗಿರುವಾಗ ನಿಮಗೆ ಅಲ್ಲಿ ಹಿಂದಿ ಮಾತ್ರ ಹೇರಿಕೆಯಾಗಿದೆ ಅನ್ನಿಸುತ್ತಿರುವುದು ಯಾಕೆ?” ಅನ್ನಿ. “ಮೆಟ್ರೋ ಬೋರ್ಡುಗಳಲ್ಲಿ ತ್ರಿಭಾಷಾ ಸೂತ್ರದ ಪ್ರಕಾರ ಹಿಂದಿಯಲ್ಲಿ ಒಂದು ಸಾಲು ಬರೆದೊಡನೆ ಅದು ನಿಮ್ಮ ಕನ್ನಡಕ್ಕೆ ಹೇಗೆ ಅಪಾಯ ಒಡ್ಡಿತು?” ಎಂದು ಕೇಳಿ. ಅವ್ಯಾವುದಕ್ಕೂ ಕನ್ನಡಪರ ಹೋರಾಟಗಾರರ ನೇರ ಉತ್ತರ ಬರದು. ಇತ್ತೀಚೆಗೆ ನಾನು ಭಾಗವಹಿಸಿದ್ದ ಒಂದು ಟಿವಿ ಚರ್ಚೆಯಲ್ಲಿ ಕನ್ನಡದ ಹುಟ್ಟು ಹೋರಾಟಗಾರರೊಬ್ಬರು, ಹಿಂದಿ ಬೇಡವೇ ಬೇಡ ಎಂದು ಕುರ್ಚಿಯಿಂದೆದ್ದು ಹೊಡೆಯಲು ಬಂದಷ್ಟು ಆವೇಶದಿಂದ ಮಾತಾಡಿದರು. “ಸರಿ, ಹಿಂದಿ ಬೇಡ ಎನ್ನೋಣ. ಆದರೆ ಹಿಂದಿಯಂತೆ ಇಂಗ್ಲೀಷೂ ನಮಗೆ ಹೊರಗಿನ ಭಾಷೆ ತಾನೆ? ಅದರ ಬಗ್ಗೆ ನೀವ್ಯಾಕೆ ಚಕಾರವೆತ್ತಿಲ್ಲ? ಆ ಭಾಷೆಯನ್ನು ನಮ್ಮ ಮೇಲೆ ಹೇರಲಾಗಿದೆ ಅನ್ನಿಸಿಲ್ಲವೇ?” ಎಂದು ಕೇಳಿದಾಗ “ನಾವು ಇಂಗ್ಲೀಷ್ ಬೇಕೂ ಅಂದಿಲ್ವಲ್ಲ? ಹಿಂದಿ ಬೇಡ ಅಂದಿದೀವಿ. ಅದರರ್ಥ ಇಂಗ್ಲೀಷ್ ಬೇಕೂ ಅಂತ ಅಲ್ಲ. ಇಂಗ್ಲೀಷ್ ಬೇಡ ಅನ್ನೋರು ಅದನ್ನು ವಿರೋಧಿಸಬಹುದು” ಎಂದು ಬಹಳ ಮೆತ್ತಗಾಗಿ ಹೇಳಿದರು.

ಅಂದರೆ ಒಂದಾನೊಂದು ಕಾಲದಲ್ಲಿ ಇಂಗ್ಲೀಷ್ ಬೇಡವೇ ಬೇಡ ಎಂದು ಖಡಾಖಂಡಿತವಾಗಿ ಬೊಬ್ಬಿರಿಯುತ್ತಿದ್ದ ಕನ್ನಡಪರ ಹುಟ್ಟು ಹೋರಾಟಗಾರರೂ ಅವರ ಸಂಘಟನೆಗಳೂ ಈಗ ಇಂಗ್ಲೀಷ್ ಇರಲಿ, ಹಿಂದಿ ಮಾತ್ರ ಬೇಡ ಎಂಬಷ್ಟರಮಟ್ಟಿಗೆ ಸುಧಾರಿಸಿವೆ. ಯಾಕೆ ಇಂಥ ಸುಧಾರಣೆ ಕಂಡುಬಂದಿದೆ ಎಂದರೆ ಈ ಹೋರಾಟಗಾರರಲ್ಲೇ ಹೆಚ್ಚಿನವರು ಬೆಂಗಳೂರಂಥ ನಗರಗಳಲ್ಲಿ ಇಂಗ್ಲೀಷ್ ಸ್ಕೂಲುಗಳನ್ನು, ಪ್ಲೇ ಸ್ಕೂಲುಗಳನ್ನು ನಡೆಸುತ್ತಿದ್ದಾರೆ. ಇಂಗ್ಲೀಷ್ ಮಾಧ್ಯಮದ ಶಾಲೆಗಳನ್ನು ನಡೆಸುವ ದೊಡ್ಡ ರಾಜಕಾರಣಗಳ ಜೊತೆ ಅನೇಕ ವ್ಯವಹಾರಗಳಲ್ಲಿ ಕೈ ಕೆಸರು ಬಾಯಿ ಮೊಸರು ಮಾಡಿಕೊಂಡಿದ್ದಾರೆ. ಕೆಂಪು-ಹಳದಿ ಶಾಲು ಹಾಕಿಕೊಂಡು ಗಾಜಿನ ಕಂಪೆನಿಗಳಿಗೆ ಕಲ್ಲೊಗೆವ ಹೋರಾಟಗಾರರನ್ನು ಆ ಕಂಪೆನಿಗಳೇ ಕರೆಸಿ ಚಹಾ-ಬೋಂಡ ಕೊಟ್ಟು ತಿಂಗಳಿಗಿಂತಿಷ್ಟು ಕೊಡುವ ವ್ಯವಹಾರದ ಮಾತುಕತೆಯನ್ನೂ ನಡೆಸುತ್ತವೆ. ರಾಜ್ಯದಲ್ಲಿ ಇಂಗ್ಲೀಷೂ ಬೇಡ; ಕನ್ನಡವೊಂದೇ ಇರಲಿ ಎನ್ನಹೋದರೆ ಹೋರಾಟಗಾರರ ಈ ಬಗೆಯ ಅನ್ನದ ದಾರಿಗಳು ಮುಚ್ಚಿಹೋಗುತ್ತವೆ. ಮಾತ್ರವಲ್ಲ, ಅವರೆಲ್ಲ ತಂತಮ್ಮ ಮಕ್ಕಳನ್ನು ಅನಿವಾರ್ಯವಾಗಿ ಇಂಗ್ಲೀಷ್ ಮೀಡಿಯಂ ಸ್ಕೂಲುಗಳಿಂದ ಬಿಡಿಸಿ ಕನ್ನಡದ ಶಾಲೆಗಳಿಗೆ ಸೇರಿಸಬೇಕಾಗುತ್ತದೆ. ಹಿಂದಿಯನ್ನು ವಿರೋಧಿಸುವಾಗ ಅಂಥ ಯಾವ ಧರ್ಮಸಂಕಟಗಳೂ ಎದುರಾಗುವುದಿಲ್ಲವಾದ್ದರಿಂದ ಮತ್ತು ಹಾಗೆ ಹಿಂದಿಯನ್ನು ವಿರೋಧಿಸುವುದರಿಂದಲೇ ಆರೆಸ್ಸೆಸ್‍ನಂಥ ಸಂಘಟನೆಗಳಿಗೆ ಟಾಂಗು ಕೊಟ್ಟೆವೆಂಬ ಹುಸಿ ಸಮಾಧಾನವೂ ಒಂದು ಸೇರಿಕೊಳ್ಳುವುದರಿಂದ ಅವರಿಗೆ ಹಿಂದಿ ಬೇಡ; ಇಂಗ್ಲೀಷ್ ಬೇಕು.

ಕನ್ನಡದಲ್ಲಿ ಇಂಥ ಸಂಘಟನೆಗಳು ಪ್ರಾರಂಭವಾಗಿದ್ದು ಒಂದಿಪ್ಪತ್ತು ವರ್ಷಗಳ ಹಿಂದೆ. ಅದಕ್ಕಿಂತ ಹಿಂದೆ ಕನ್ನಡದ ಹೋರಾಟಗಳೆಲ್ಲ ಜನರ ಹೋರಾಟಗಳೇ ಆಗಿದ್ದವು. ಯಾವ ಸಮಸ್ಯೆಗೆ ಎಷ್ಟು ಪ್ರಾಮುಖ್ಯ ಕೊಡಬೇಕೆಂಬುದನ್ನು ಜನರೇ ನಿರ್ಧರಿಸಿ ಹೋರಾಟ ರೂಪಿಸಿ ಅದಕ್ಕೊಂದು ತಾರ್ಕಿಕ ಅಂತ್ಯ ತರುತ್ತಿದ್ದರು. ಆದರೆ 90ರ ದಶಕದಲ್ಲಿ ಕರ್ನಾಟಕದಲ್ಲೂ ತಮಿಳುನಾಡಿನ ರೀತಿಯಲ್ಲಿ ಬೀದಿಹೋರಾಟಗಾರರು ಹುಟ್ಟಿಕೊಂಡರು. ಐಟಿ ಸಿಟಿಯಾಗಿ ಬೆಳೆಯತೊಡಗಿದ್ದ ಬೆಂಗಳೂರಲ್ಲಿ ಕನ್ನಡಿಗರ ಸ್ಪೇಸ್ ಕಡಿಮೆಯಾಗುತ್ತಿದೆ; ಪರಭಾಷಿಕರು ಉದ್ಯಾನ ನಗರಿಯನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ; ಕನ್ನಡ ಕನ್ನಡ ಎನ್ನುತ್ತಿದ್ದ ಪೇಟೆಬೀದಿಗಳಲ್ಲೆಲ್ಲ ಭಯ್ಯಾ ಭಾಬಿಗಳ ದನಿ ಕೇಳತೊಡಗಿದೆ ಎಂಬ ಆತಂಕಕ್ಕೆ ಪೂರಕವಾಗಿ ಕನ್ನಡದ ಹೋರಾಟಗಳು ರೂಪುಗೊಳ್ಳತೊಡಗಿದವು. ಅದೇ ಸಮಯಕ್ಕೆ ಕನ್ನಡದಲ್ಲಿ ಒಂದಷ್ಟು ಟಿವಿ ಚಾನೆಲುಗಳೂ ಹುಟ್ಟಿಕೊಂಡದ್ದರಿಂದ ಅಲ್ಲಿ ತಮ್ಮ ಶಕ್ತಿಪ್ರದರ್ಶನ ಮಾಡುವುದಕ್ಕೂ ಹೋರಾಟಗಾರರಿಗೆ ಅನುವು ಮಾಡಿಕೊಡಲಾಯಿತು. ಹೋರಾಟದ ಹೆಸರಲ್ಲಿ ರೂಪುಗೊಂಡ ಅರ್ಧಕ್ಕರ್ಧ ಸಂಘಟನೆಗಳು ನಂತರ ತೊಡಗಿಕೊಂಡದ್ದು ರೋಲ್‍ಕಾಲ್ ವ್ಯವಹಾರ, ಪೊಲೀಸ್ ಠಾಣೆಗಳ ಹೊರಗೆ ವಿವಾದಗಳನ್ನು ಇತ್ಯರ್ಥಗೊಳಿಸುವ ಕೆಲಸಗಳಲ್ಲಿ. ದುಡ್ಡು ಕೊಡು, ಇಲ್ಲಾ ಅಂದರೆ ಟೇಬಲ್ ಕುರ್ಚಿ ಮುರಿಯುತ್ತೇವೆ ಎಂಬ ಗೂಂಡಾಪ್ರವೃತ್ತಿ ಮೆರೆದು ಹಣ ಪೀಕುವುದರಲ್ಲಿ. ಟಿವಿ ಚಾನೆಲ್‍ಗಳಲ್ಲಿ ಪ್ಯಾನೆಲ್ ಚರ್ಚೆ ಹೆಸರಲ್ಲಿ ಬಿಟ್ಟಿ ಪ್ರಚಾರ, ಪತ್ರಿಕೆಗಳಲ್ಲಿ ಉಚಿತ ಪ್ರಚಾರ ದೊರಕಿಸಿಕೊಳ್ಳುವುದರಲ್ಲಿ. ಎಲ್ಲಕ್ಕಿಂತ ಮುಖ್ಯವಾಗಿ ರಾಜಕಾರಣದ ವಲಯದಲ್ಲಿ ಪ್ರಭಾವ ಬಳಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಬೇಕಾದ ಕಸರತ್ತನ್ನೂ ಈ ಕನ್ನಡಪರ ಸಂಘಟನೆಗಳು ಪ್ರಾರಂಭಿಸಿದವು.

ಮೊದಮೊದಲು ಇಂಥ ಸಂಘಟನೆಗಳು ನಮಗೆ ಬೇಕು ಎಂದು ಜನಸಾಮಾನ್ಯರಿಗೆ ಅನ್ನಿಸಿದ್ದು ನಿಜ. ಯಾಕೆಂದರೆ ಸರಕಾರದ ಜಡ್ಡುಹಿಡಿದ ಕಿವಿಗಳಿಗೆ ಅಹವಾಲು ಕೇಳಿಸಬೇಕಾದರೆ ರಸ್ತೆಗಿಳಿದು ಘೋಷಣೆ ಕೂಗುವುದು ಅನಿವಾರ್ಯವಾಗಿರುವ ಹೊತ್ತಲ್ಲಿ ಅದನ್ನಾದರೂ ಮಾಡಿ ನ್ಯಾಯ ದೊರಕಿಸುವ ಮಂದಿ ಇವರು ಎಂದು ಜನಸಾಮಾನ್ಯರಿಗೆ ಅನ್ನಿಸಿತ್ತು. ಅಲ್ಲದೆ ತಮಿಳು, ತೆಲುಗು, ಮರಾಠಿ, ಮಲಯಾಳಿ ಮತ್ತು ಹಿಂದಿ ಮಂದಿಯ ಪ್ರಭಾವಲಯ ಕರ್ನಾಟಕದೊಳಗೆ ವಿಸ್ತರಿಸುತ್ತಿದೆ; ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂಬ ಭಾವನೆಯೂ ಬಲಗೊಳ್ಳುತ್ತಿದ್ದ ಸಮಯ. ಹಾಗಾಗಿ ರಟ್ಟೆಬಲದಿಂದಾದರೂ ಅನ್ಯಭಾಷಿಕರನ್ನು ಕರ್ನಾಟಕದೊಳಗೆ ಹದ್ದುಬಸ್ತಿನಲ್ಲಿಡಬೇಕು ಎಂದುಕೊಂಡವರಿಗೆ ಕನ್ನಡಪರ ಸಂಘಟನೆಗಳು ಆಶಾಕಿರಣವಾಗಿ ಗೋಚರಿಸಿದ್ದವು. ಅವರು ರಸ್ತೆಗಳಲ್ಲಿ ಘೋಷಣೆ ಕೂಗುವುದು, ರಾಸ್ತಾರೋಕೋ ರೈಲುರೋಕೋಗಳನ್ನು ನಡೆಸುವುದು, ಅನ್ಯಭಾಷಿಕರಿಗೆ ಹಿಂಸಾತ್ಮಕ ಮಾರ್ಗದಲ್ಲಿ ಉತ್ತರ ಕೊಡುವುದು, ಅನ್ಯಭಾಷಿಕರ ಕಂಪೆನಿಗಳಿಗೆ ಕಲ್ಲು ಒಗೆಯುವುದು, ಬೆಂಕಿ ಹಚ್ಚುವುದು – ಇವು ಕೂಡ ಒಂದು ಪ್ರಮಾಣಕ್ಕೆ ಆಗಬೇಕಾದ್ದೇ ಎಂದು ಕನ್ನಡಿಗರು ಮನಸ್ಸಿನೊಳಗಾದರೂ ಅಂದುಕೊಂಡಿದ್ದರು. ಕನ್ನಡಕ್ಕಾಗಿ ಹೋರಾಡುತ್ತಿದ್ದೇವೆಂಬ ಭ್ರಮೆಯಲ್ಲಿದ್ದ ಹೋರಾಟಗಾರರಿಗೆ ಇವುಗಳಿಂದ ಆದ ಲಾಭವೆಂದರೆ, ಅದುವರೆಗೆ ಈ ರೋಡ್ ರೌಡಿಗಳನ್ನು ಮೂಸಿಯೂ ನೋಡದೆ ಹೋಗಿದ್ದ ರಾಜಕೀಯ ಪಕ್ಷಗಳು ಈಗ ತಮ್ಮೆದುರು ಕೂರಿಸಿಕೊಂಡು ಯೋಗಕ್ಷೇಮ ವಿಚಾರಿಸತೊಡಗಿದವು. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ಅಭಯಹಸ್ತ ತೋರಿದವು. ಹೋರಾಟಗಾರರ ಮೇಲೆ ಪೊಲೀಸ್ ಕೇಸುಗಳು ಆಗದ ಹಾಗೆ ನೋಡಿಕೊಂಡವು. ಆಗಿರುವ ಕೇಸುಗಳನ್ನು ನಡೆಸುವುದಕ್ಕೆ ಬೇಕಾದ ಆರ್ಥಿಕ ಬೆಂಬಲವನ್ನೂ ಒದಗಿಸಿದವು. ನಮಗಿಷ್ಟು ಓಟು ದೊರಕಿಸಿಕೊಡಿ, ನಿಮ್ಮ ಕ್ಷೇಮ ನಾವು ನೋಡಿಕೊಳ್ಳುತ್ತೇವೆ ಎಂಬ “ನೀ ಎನಗಿದ್ದರೆ ನಾ ನಿನಗೆ” ನಿಯಮವನ್ನು ಪಾಲನೆ ಮಾಡಿದವು.

ಕಳೆದ ಹತ್ತು ವರ್ಷಗಳಲ್ಲಿ ಕನ್ನಡ ಪರ ಎಂದು ಹೇಳಿಕೊಳ್ಳುವ ಸಂಘಟನೆಗಳು ರೂಪಿಸಿರುವ ಹೋರಾಟಗಳಲ್ಲಿ ಎಷ್ಟು ಯಶಸ್ವಿಯಾಗಿವೆ? ತಾತ್ವಿಕ ಅಂತ್ಯ ಕಂಡಿವೆ? ಎಷ್ಟು ಹೋರಾಟಗಳಿಂದ ಕನ್ನಡಿಗರಿಗೆ ನಿಜವಾಗಿಯೂ ನ್ಯಾಯ ಸಿಕ್ಕಿದೆ? ಎಷ್ಟು ಹೋರಾಟಗಳು ಕನ್ನಡಿಗರಿಗೆ ಅನಿವಾರ್ಯವಾಗಿದ್ದವು? ಎಂಬ ಅಂಕಿಅಂಶ ತೆಗೆದರೆ ನಮಗೆ ನಿರಾಶೆಯೇ ಉತ್ತರ. ಒಂದಾನೊಂದು ಕಾಲದಲ್ಲಿ ಹೀರೋಗಳೆಂದು ಬಿಂಬಿತರಾದ ಈ ಕೆಂಪು-ಹಳದಿ ಹೋರಾಟಗಾರರು ಈಗ ಅಪ್ರಸ್ತುತರಾಗಿದ್ದಾರೆ. ಅದೇ ಹೊಡಿ-ಬಡಿ ಮಾದರಿಯ ಸಂಘರ್ಷಗಳನ್ನು ಜಾರಿಯಲ್ಲಿಡುತ್ತ, ತಾವೇನೋ ಈ ರಾಜ್ಯಕ್ಕೆ ದೊಡ್ಡದೊಂದು ಉಪಕಾರ ಮಾಡುತ್ತಿದ್ದೇವೆಂದು ಬಿಂಬಿಸಿಕೊಳ್ಳುವ ಬಹಳಷ್ಟು ಹೋರಾಟಗಾರರ ಅಸಲಿಯತ್ತುಗಳು ಇತ್ತೀಚೆಗೆ ಜಗಜ್ಜಾಹೀರಾಗಿವೆ. ಇವರ ಅಜೆಂಡಾಗಳೇನು? ಯಾವ ಹಿತಾಸಕ್ತಿಗಳು ಇವರ ಹೋರಾಟಗಳಲ್ಲಿ ಕೆಲಸ ಮಾಡುತ್ತವೆ ಎಂಬುದನ್ನು ತಿಳಿಯದಷ್ಟು ಜನ ದಡ್ಡರಲ್ಲ. ಒಂದೆರಡು ದಿನ ಹೋರಾಟದ ಡ್ರಾಮಾ ಮಾಡುವುದು, ಮೂರನೇ ದಿನ ರಾಜಕೀಯ ವ್ಯಕ್ತಿಗಳ ಜೊತೆ ದುಂಡುಮೇಜಿನಲ್ಲಿ ಕೂತು ವ್ಯವಹಾರ ಮಾತಾಡಿಕೊಳ್ಳುವುದು ಮತ್ತು ನಾಲ್ಕನೇ ದಿನಕ್ಕೆ ಹೋರಾಟ ಕೈ ಬಿಟ್ಟು ತಮ್ಮ ಗೂಡು ಸೇರಿಕೊಳ್ಳುವುದು ಇವರ ಜಾಯಮಾನವಾಗಿಬಿಟ್ಟಿದೆ. ಈ ಹೋರಾಟಗಾರರ ಹೋರಾಟವೇ ನಿಜವೆಂಬ ಭ್ರಮೆಗೆ ಬಿದ್ದವರು ಜಾಲತಾಣಗಳಲ್ಲಿ ಒಂದಷ್ಟು ಕೆಸರೆರಚಿಕೊಂಡದ್ದಷ್ಟೇ ಲಾಭ. ಇವರ ಜೊತೆ ನವಜಮಾನಾದ ಹೊಸಬಗೆಯ ಹೋರಾಟಗಾರರೂ ಈಗ ಜೊತೆಯಾಗಿದ್ದಾರೆ. ಒಂದಿಲ್ಲೊಂದು ವಿವಾದಾತ್ಮಕ ವಿಷಯಗಳನ್ನು ಎತ್ತಿಕೊಂಡು ಅದರ ಮೇಲೆ ನಾಲ್ಕೈದು ನಿಮಿಷಗಳ ವಿಡಿಯೋ ಮಾಡಿ, ಅದನ್ನು ಯೂಟ್ಯೂಬ್‍ನಲ್ಲಿ ತೇಲಿಬಿಡುವ ಯೂಟ್ಯೂಬ್ ಹೋರಾಟಗಾರರು ಇವರು. ಈ ಮೊದಲೇ ಜಾಲತಾಣಗಳಲ್ಲಿ ಒಂದಷ್ಟು ಸಾವಿರ ಜನರನ್ನು ತಮ್ಮ ಫಾಲೋವರ್‍ಗಳಾಗಿ ಪಡೆದು, ಅವರನ್ನೇ ತಮ್ಮ ವಿಡಿಯೋಗಳ ಪ್ರಚಾರಕರಾಗಿ ಬಳಸಿಕೊಳ್ಳುವ ಈ ಆಧುನಿಕ ಹೋರಾಟಗಾರರು ದುಡ್ಡು ಮಾಡುವುದು ಯೂಟ್ಯೂಬ್ ಲೈಕುಗಳಿಂದ. ಇಷ್ಟು ಜನ ವೀಕ್ಷಿಸಿದರೆ ಇಷ್ಟು ದುಡ್ಡು ಎಂದು ಯೂಟ್ಯೂಬ್ ಕೊಡುವ ದುಡ್ಡನ್ನು ನೆಚ್ಚಿಕೊಂಡು ಹುಟ್ಟಿಕೊಂಡಿರುವ ಈ ಹೋರಾಟಗಾರರು, ತಮಗೆ ಬೇಕಿದ್ದಷ್ಟು ಲೈಕುಗಳು ಬಂದ ಮೇಲೆ ಹೋರಾಟದಿಂದ ಹೇಳಹೆಸರಿಲ್ಲದಂತೆ ಕಣ್ಮರೆಯಾಗುತ್ತಾರೆ. ಮತ್ತೆ ಅವರು ಕಾಣ ಸಿಕೊಳ್ಳುವುದು ಮತ್ತೊಂದು ಕಾಂಟ್ರವರ್ಸಿಯ ಸಮಯದಲ್ಲೇ!

ಮೆಟ್ರೋಗಳಲ್ಲಿ ಹಿಂದಿ ಹೇರಿಕೆಯಾಗಿದೆ ಎಂದು ವಾದ ಮಾಡುತ್ತಿದ್ದ ಒಂದಷ್ಟು ಟ್ವಿಟ್ಟರ್ ಹೋರಾಟಗಾರರಲ್ಲಿ ಹೇಳಿದೆ, ನಿಮ್ಮ ಜೊತೆಗೆ ನಾನೂ ಇದ್ದೇನೆ. ಹಿಂದಿ ಹೇರಿಕೆಯಾಗಿದೆ ಅನ್ನುತ್ತೀರಿ. ಸರಿ, ತೆಗೆದುಬಿಡೋಣ. ಅದರ ಜೊತೆ ಇಂಗ್ಲೀಷನ್ನೂ ತೆಗೆದುಬಿಡೋಣ. ಕನ್ನಡಕ್ಕೆ ಹಿಂದಿಯಿಂದ ಆತಂಕ ಇದೆಯಾದರೆ ಇಂಗ್ಲೀಷಿಂದಲೂ ಇದೆ. ಹೇಗೆ ಹಿಂದಿ ನಾಳೆ ಒಂದು ದಿನ ಕನ್ನಡವನ್ನು ಬೋರ್ಡಿನಿಂದ ಆಚೆ ಎಸೆದು ವಿಜೃಂಭಿಸಬಹುದೋ ಆ ಅಪಾಯ ಇಂಗ್ಲೀಷಿನಿಂದಲೂ ಕನ್ನಡಕ್ಕೆ ಬರಬಹುದು. ಹಾಗಾಗಿ ಆ ಎರಡೂ ಭಾಷೆಗಳನ್ನು ಬದಿಗಿಟ್ಟು ಕನ್ನಡವೊಂದನ್ನೇ ಬೋರ್ಡುಗಳಲ್ಲಿ ಬರೆಸಬೇಕೆಂದು ಒತ್ತಾಯಿಸೋಣ! ಕೂಡಲೇ ಕನ್ನಡಪರ ಹೋರಾಡುತ್ತಿರುವ ಈ ಟ್ವಿಟ್ಟರ್ ಹೋರಾಟಗಾರರ ಹೊಸ ವಾದಸರಣ ಗಳು ಹೊರಬಂದವು. ಏನ್ರೀ ಮಾತಾಡ್ತೀರಿ! ಇಂಗ್ಲೀಷ್ ನಮಗೆ ಅನ್ನ ಕೊಡುವ ಭಾಷೆ! ಸಾಫ್ಟ್’ವೇರ್ ಕಂಪೆನಿಗಳಲ್ಲಿ ಪ್ರೋಗ್ರಾಮ್ ಬರೆಯುವುದೇ ಇಂಗ್ಲೀಷಿನಲ್ಲಿ. ಇಂಗ್ಲೀಷ್ ಇಲ್ಲದೇ ಹೋದರೆ ಜಗತ್ತಿನ ವ್ಯವಸ್ಥೆಯೇ ಕುಸಿದುಬಿಡುತ್ತದೆ. ಇಂಗ್ಲೀಷ್ ಇಲ್ಲದೆ “ನಿಮ್ಮ” ಇಸ್ರೋ ರಾಕೆಟ್‍ಗಳನ್ನು ಹಾರಿಸುವುದುಂಟೇ? ಉಪಗ್ರಹಗಳನ್ನು ಕಕ್ಷೆಗಳಲ್ಲಿ ಕೂರಿಸುವುದುಂಟೆ? ಆ ಕ್ಷಣಕ್ಕೆ ಅವರೆಲ್ಲ ನಾವು ಮೆಟ್ರೋಗಳಲ್ಲಿ ಬೋರ್ಡುಗಳಲ್ಲಿ ಭಾಷೆ ಯಾವುದಿರಬೇಕೆಂಬ ಚರ್ಚೆ ಮಾಡುತ್ತಿದ್ದೇವೆಂಬ ಅಂಶವನ್ನು ಮರೆತೇಬಿಟ್ಟು ತಮ್ಮ ಅನ್ನಕ್ಕೇ ದೊಡ್ಡ ಕಲ್ಲೊಂದು ಬಿತ್ತು ಅನ್ನುವ ರೀತಿಯಲ್ಲಿ ಮಾತಾಡತೊಡಗಿದ್ದರು! ನಾನು ಈಗಾಗಲೇ ಬೇರೆ ವೇದಿಕೆಗಳಲ್ಲಿ ಹೇಳಿರುವಂತೆ, ಈ ಹೋರಾಟಗಾರರು ವಿರೋಧಿಸುತ್ತಿರುವುದು ಹಿಂದಿಯನ್ನಲ್ಲ; ಆ ಮುಖವಾಡದ ಹಿಂದಿನಿಂದ ಅಡಗಿಕೊಂಡು ಆರೆಸ್ಸೆಸ್ ಅನ್ನು. ಅದಕ್ಕೊಂದು ಹಿನ್ನೆಲೆಯೂ ಇದೆ. ಹದಿನೈದು ವರ್ಷಗಳ ಹಿಂದೆ ಸ್ಥಾಪನೆಯಾದ ಒಂದು ಕನ್ನಡಪರ ಸಂಘಟನೆ, ಆರಸ್ಸೆಸ್ ಒಂದು ಸಂಘಟನೆಯಾಗಿ ಬೃಹತ್ತಾಗಿ ಬೆಳೆದದ್ದನ್ನು ಕಂಡು ಕರುಬುತ್ತ ಅದರಂತೆ ತಾನೂ ಆಗಬೇಕೆಂದು ಹೊರಟಿತ್ತು. ಆರೆಸ್ಸೆಸ್‍ನಲ್ಲಿ ಬೌದ್ಧಿಕ ಚರ್ಚೆ-ಸಂವಾದ-ಶಿಕ್ಷಣಗಳಿಗೆ ಪ್ರಮುಖ ಒತ್ತು ಕೊಡಲಾಗುತ್ತದೆ ಎಂಬುದನ್ನು ಗಮನಿಸಿದ ಈ ಸಂಘಟನೆಯ ಕಾರ್ಯಕರ್ತರು ತಾವೂ ಅದೇ ರೀತಿಯಲ್ಲಿ ಬೌದ್ಧಿಕ ಆಯಾಮ ಕೊಡಲು ಪ್ರಯತ್ನಿಸಿದರು. ಆದರೆ ಯಾಕೋ ಆ ಪ್ರಯತ್ನಗಳೆಲ್ಲ ಅಡ್ಡಬಿದ್ದವು. ಎಷ್ಟು ವರ್ಷಗಳಾದರೂ ಆ ಸಂಘಟನೆಯ ಸದಸ್ಯರ ಸಂಖ್ಯೆ – ಫೇಸ್‍ಬುಕ್‍ನಲ್ಲಿ, ಸಾವಿರ ಕೂಡ ದಾಟಲಿಲ್ಲ. ಪ್ರಾರಂಭದಲ್ಲಿ ಅವರ ಅಜೆಂಡಾ ಇದ್ದದ್ದು – ಎಲ್ಲ ಕಡೆಗಳಲ್ಲೂ ಕನ್ನಡವನ್ನೇ ಬಳಸುವಂತೆ ಜನರಿಗೆ ಒತ್ತಾಯ ಹೇರಬೇಕು, ಎಂದು. ಕ್ಯಾಬ್‍ನಲ್ಲಿ ಕನ್ನಡ ಗೀತೆಯನ್ನಷ್ಟೇ ಪ್ರಸಾರ ಮಾಡುವಂತೆ ಚಾಲಕನನ್ನು ಒತ್ತಾಯಿಸುವುದು, ಮಾಲ್‍ಗಳಲ್ಲಿ ಯಾರಾದರೊಬ್ಬರು ಅನ್ಯಭಾಷೆಯಲ್ಲಿ ಮಾತಾಡಿದೊಡನೆ ಗಲಾಟೆ ಮಾಡಿ ಈಚೆ ಬರುವುದು, ಕನ್ನಡದಲ್ಲಿಲ್ಲದ ಬೋರ್ಡುಗಳಿಗೆ ಮಸಿ ಬಳಿಯುವುದು, ಅಥವಾ ಕನ್ನಡವೂ ಇದ್ದರೂ ಬೋರ್ಡಿನಲ್ಲಿ ಕಾಣುವ ಅನ್ಯಭಾಷೆಯ ಸಾಲುಗಳಿಗೆ ಮಸಿ ಬಳಿಯುವುದು, ರೈಲಿನಲ್ಲಿ ಟಿಸಿ ಬಳಿ ಕನ್ನಡದಲ್ಲೇ ವ್ಯವಹರಿಸಬೇಕೆಂದು ಜಗಳ ಎಬ್ಬಿಸಿ ಅಲ್ಲೊಂದು ಸೀನ್ ಸೃಷ್ಟಿಸುವುದು – ಹೀಗೆ ತಾವು ಹೋದಲ್ಲೆಲ್ಲ ಕ್ಯಾತೆ ತೆಗೆದು ತಾವು ದೊಡ್ಡ ಚಳವಳಿಗಾರರೆಂದು ಬಿಂಬಿಸಿಕೊಳ್ಳುವುದು ಇವರ ಉದ್ದೇಶವಾಗಿತ್ತು. ಏಳೆಂಟು ವರ್ಷಗಳ ಹಿಂದೆ ಇಂಥ ಸುದ್ದಿಗಳು ಆಗಾಗ ಪತ್ರಿಕೆಗಳಲ್ಲಿ, ಟಿವಿ ಚಾನೆಲುಗಳಲ್ಲಿ ಬರುತ್ತಿದ್ದದ್ದು ಓದುಗರಿಗೆ ನೆನಪಿರಬಹುದು. ಆದರೆ, ಮುಂದೆ, ಆ ಚಳವಳಿಗಾರರಲ್ಲೇ ಕೆಲವರು ಯೋಚಿಸತೊಡಗಿದರು. ಎಷ್ಟು ಅಂತ ಇಂಥ ಚಿಲ್ಲರೆ ಹೋರಾಟಗಳನ್ನು ಮಾಡಬಹುದು? ಕನ್ನಡ ಇಂಥ ಗಲಾಟೆಗಳಿಂದ ಬೆಳೆಯುತ್ತದೆಯೇ? ಕನ್ನಡ ಗೀತೆಯನ್ನೇ ಪ್ರಸಾರ ಮಾಡಬೇಕೆಂದು ಕ್ಯಾಬ್ ಚಾಲಕನಲ್ಲಿ ಒತ್ತಾಯ ಮಾಡಿ ಹಾಕಿಸುವುದರಿಂದ ಕನ್ನಡವನ್ನು ಈ ನೆಲದಲ್ಲಿ ಗಟ್ಟಿಯಾಗಿ ನಿಲ್ಲಿಸಲು ಸಾಧ್ಯವೇ? ನಮ್ಮ ಸ್ಟ್ರಾಟೆಜಿಯೇ ಎಲ್ಲೋ ದಿಕ್ಕು ತಪ್ಪಿದೆಯಲ್ಲಾ? ಹೀಗೆ ಭಾವಿಸಿದ ಹಲವರು, ತಮ್ಮ ಕನ್ನಡ ಹೋರಾಟದ ದಿಕ್ಕು ಸರಿಯಾಗಿಲ್ಲ ಅನ್ನಿಸಿದ ಕ್ಷಣದಲ್ಲಿ ಆ ಸಂಘಟನೆಯಿಂದ ಹೊರಬಂದರು. ಆಗ, ಇನ್ನೇನು ಸಂಪೂರ್ಣವಾಗಿ ಬಿದ್ದುಹೋಗುವ ಹಂತಕ್ಕೆ ಬಂದ ಸಂಘಟನೆಯ ಮೂಲ ಕಾರ್ಯಕರ್ತರು ರಟ್ಟೆಬಲವನ್ನೇ ನೆಚ್ಚಿಕೊಂಡ ಇನ್ನೊಂದು ಸಂಘಟನೆ ಜೊತೆ ಕೈ ಜೋಡಿಸಿದರು. ಯಾಕೆಂದರೆ ಅವರಿಗೆ ಇಂಥ ಹೋರಾಟಗಳಲ್ಲೂ ಎಲ್ಲೋ ಒಂದು ಕಡೆ ಲಾಭಾಂಶ ಎತ್ತಬಹುದೆಂದು ಮನವರಿಕೆಯಾಗಿತ್ತು. ಅಲ್ಲದೆ ಬೀದಿ ಹೋರಾಟ ಮಾಡುತ್ತಲೇ ಬೆಂಗಳೂರಲ್ಲಿ ಸಾಮ್ರಾಜ್ಯ ಕಟ್ಟಿಕೊಂಡವರನ್ನೂ ಕಣ್ಣೆದುರೇ ನೋಡಿದ್ದರಲ್ಲ; ಹಾಗಾಗಿ ಅಂಥ ರಟ್ಟೆಸಂಘಟನೆಗಳಿಗೆ ಸ್ವಲ್ಪ ಬೌದ್ಧಿಕವಾದ ಸಹಾಯ ಮಾಡುತ್ತ ರೋಲ್‍ಕಾಲ್‍ಗಿಳಿದರೆ ಒಂದಷ್ಟು ದುಡ್ಡು ಮಾಡಿಕೊಳ್ಳಬಹುದು ಎಂಬುದು ಖಚಿತವಾಯಿತು. ಹೀಗೆ ಎರಡು ಸಂಘಟನೆಗಳು ಹತ್ತಿರ ಬಂದವು. ರಟ್ಟೆಬಲ ನೆಚ್ಚಿಕೊಂಡವರಿಗೆ ಬುದ್ಧಿಬಲ ನೆಚ್ಚಿಕೊಂಡವರು ಘೋಸ್ಟ್ ರೈಟರ್‍ಗಳಾಗಿ ಕೆಲಸ ಮಾಡಿದರು. ನೀವು ಬೀದಿಯಲ್ಲಿ ಹೋರಾಟ ಮಾಡಿ; ನಾವು ನಿಮಗೆ ಜಾಲತಾಣಗಳಲ್ಲಿ, ಟಿವಿ ಚಾನೆಲುಗಳಲ್ಲಿ, ಪತ್ರಿಕೆಗಳಲ್ಲಿ ಪ್ರಚಾರ ಸಿಗುವಂತೆ ಮಾಡುತ್ತೇವೆ. ಆ ಬಳಿಕ ಸೂರೆ ಹೊಡೆದದ್ದರಲ್ಲಿ ಪಾಲು ಮಾಡಿಕೊಳ್ಳೋಣ ಎಂಬ ಅವರ ಹಂಚಿಕೆ ಸೂತ್ರ ವರ್ಕ್ ಔಟ್ ಆಯಿತು.

ಇಂದು ಒಂದೊಂದು ಭಾಷೆಯಲ್ಲೂ ಹತ್ತಿಪ್ಪತ್ತು ನ್ಯೂಸ್ ಚಾನೆಲುಗಳು ಮಳೆಗಾಲದ ಅಣಬೆಯಂತೆ ಹುಟ್ಟಿಕೊಂಡಿರುವುದರಿಂದ, ಅವರೆಲ್ಲರ ಪ್ಯಾನೆಲ್ ಚರ್ಚೆಗಳಿಗೆ ಜನ ಬೇಕಿರುವುದರಿಂದ, ಯಾರು ಸೂರು ಕಿತ್ತುಹಾರುವಂತೆ ಕಿರುಚಾಡಿ ವಾದ ಮಂಡಿಸುತ್ತಾರೋ ಅವರೇ ಟಿಆರ್‍ಪಿ ದೊರಕಿಸಿ ತರಬಲ್ಲ ಆದಾಯಮೂಲಗಳಾದ್ದರಿಂದ ಹೋರಾಟಗಳಿಗೆಲ್ಲ ಹೊಸ ಬಣ್ಣ, ಹೊಸ ರೂಪ ಬಂದಿದೆ ಎಂದು ಹೇಳಬಹುದು. ಇಂದಿನ ನಮ್ಮ ಬಹುತೇಕ ಹೋರಾಟಗಳೆಲ್ಲ ಒಂದೋ ಪ್ರಚಾರದ ಹಸಿವನ್ನು ತಣ ಸುವುದಕ್ಕಾಗಿ ಇಲ್ಲವೇ ರಾಜಕೀಯದ ಬೇಳೆಗಳನ್ನು ಬೇಯಿಸಿಕೊಳ್ಳುವುದಕ್ಕಾಗಿ ನಡೆಯುತ್ತಿರುವ ದೊಂಬರಾಟಗಳು ಎಂದೇ ಹೇಳಬಹುದು. ಟಿವಿ ಚರ್ಚೆ ನೋಡುತ್ತಿರುವ ವೀಕ್ಷಕನಿಗೆ ಆ ಕ್ಷಣಕ್ಕೆ ಅದೊಂದೇ ಇಡೀ ಜಗತ್ತಿನ ಅತ್ಯಂತ ದೊಡ್ಡ ಸಮಸ್ಯೆ ಎಂದು ಬಿಂಬಿಸಿ ಹುಚ್ಚುಹಿಡಿಸಿ ದಿಕ್ಕುಗೆಡಿಸಿ ಸಂಪೂರ್ಣ ಗೊಂದಲ ಮೂಡಿಸುವುದರಲ್ಲೇ ಈ ಹೋರಾಟಗಳ ಸಾರ್ಥಕ್ಯ ಅಡಗಿದೆ. ಕಳೆದ ನಾಲ್ಕು ವಾರಗಳಲ್ಲಿ ನಡೆದುಹೋದ ಅದೆಷ್ಟು ಹೋರಾಟಗಳು ನಿಮಗಿಂದು ನೆನಪಿವೆ? ಎಷ್ಟು ಹೋರಾಟಗಳು ಗುರಿ ತಲುಪಿವೆ? ಎಷ್ಟು ಹೋರಾಟಗಳು ಅನ್ಯಾಯವಾದವರಿಗೆ ನ್ಯಾಯ ದೊರಕಿಸಿಕೊಟ್ಟಿವೆ? ಹೋರಾಟಗಳ ಚರ್ಚೆಗಳಿಗೆ ಹುಟ್ಟು ಹೋರಾಟಗಾರರು ತಮ್ಮ ವಂಧಿಮಾಗದರು, ಬಹುಪರಾಕ್ ಭಟ್ಟಂಗಿಗಳ ಜೊತೆ ಇನ್ನೋವಾ, ಬೆಂಝ್, ಬಿಎಂಡಬ್ಲ್ಯುನಂಥ ಐದಾರು ಐಷಾರಾಮಿ ಕಾರುಗಳಲ್ಲಿ ಬಂದಿಳಿಯುವುದನ್ನು ಕಂಡರಷ್ಟೇ ನಿಮಗೆ ಹೋರಾಟಗಳ ಅಂತಿಮ ಫಲಿತಾಂಶ ಏನು ಎಂಬುದಕ್ಕೆ ಉತ್ತರ ಸಿಕ್ಕೀತು!

ಹೋರಾಟಗಾರರೇ,

ಕನ್ನಡಕ್ಕೆ ಆತಂಕ ಇರುವುದು ಕೇವಲ ಹಿಂದಿಯಿಂದಲ್ಲ; ಇಂಗ್ಲೀಷಿನಿಂದ ಕೂಡ. ಬನ್ನಿ, ಈ ಎರಡೂ ಭಾಷೆಗಳನ್ನೂ ಮೆಟ್ರೋಗಳಿಂದ ಕೈ ಬಿಡುವಂತೆ ರಾಜ್ಯವನ್ನೂ ಕೇಂದ್ರವನ್ನೂ ಒತ್ತಾಯಿಸೋಣ, ಬರುತ್ತೀರಾ?

ರಾಜ್ಯದಲ್ಲಿ ಐದೂವರೆ ಸಾವಿರಕ್ಕೂ ಅಧಿಕ ಉರ್ದು ಶಾಲೆಗಳಿವೆ. ಇಲ್ಲಿ ಬಹುತೇಕ ಕಡೆಗಳಲ್ಲಿ ಕನ್ನಡವನ್ನು ಕಲಿಸಲಾಗುತ್ತಿಲ್ಲ; ಅಥವಾ ಮೂರನೇ ಭಾಷೆಯಾಗಿ ಕಲಿಸಲಾಗುತ್ತಿದೆ. ಇಲ್ಲಿ ಕಲಿತು ಹೊರಬಂದವರು ಯಾರೂ ಕನ್ನಡದಲ್ಲಿ ಶುದ್ಧವಾಗಿ ಬರೆಯಲು, ಮಾತಾಡಲು ಸಮರ್ಥರಲ್ಲ. ಇವರ ಮುಂದಿನ ಪೀಳಿಗೆಯಂತೂ ಕನ್ನಡವನ್ನು ಯಾವ ಕಾರಣಕ್ಕೂ ಶುದ್ಧರೂಪದಲ್ಲಿ ಬಳಸುವುದಿಲ್ಲ. ಕನ್ನಡಕ್ಕೆ ಆತಂಕ ಇರುವುದು ಉರ್ದು ಶಾಲೆಗಳಿಂದ. ಅವನ್ನು ಮುಚ್ಚಿಸಲು ಹೋರಾಟ ಮಾಡೋಣ, ಬರುತ್ತೀರಾ?

ಇಂದಿರಾ ಕ್ಯಾಂಟೀನ್‍ನಲ್ಲಿ ತಮಿಳರಿಗೆ ಹೊರಗುತ್ತಿಗೆ ಕೊಟ್ಟಿದೆ ನಮ್ಮ ರಾಜ್ಯಸರಕಾರ. ಇದರಿಂದ ಸಾವಿರಾರು ಕನ್ನಡಿಗರು ಉದ್ಯೋಗ ವಂಚಿತರಾಗಿದ್ದಾರೆ. ಹೋರಾಟ ಮಾಡೋಣ, ಬರುತ್ತೀರಾ?

ದಿನದಿನವೂ ಕನ್ನಡ ಶಾಲೆಗಳನ್ನು ಸರಕಾರ ಮುಚ್ಚುತ್ತಿದೆ; ಇಂಗ್ಲೀಷ್ ಮೀಡಿಯಂ ಸ್ಕೂಲುಗಳು ಅಣಬೆಯಂತೆ ತಲೆ ಎತ್ತುತ್ತಿವೆ. ಇರುವ ಸರಕಾರೀ ಕನ್ನಡ ಶಾಲೆಗಳಲ್ಲೂ ಸರಿಯಾದ ವ್ಯವಸ್ಥೆಗಳಿಲ್ಲ. ಅವನ್ನು ಸರಿಪಡಿಸಲು ಸರಕಾರವನ್ನು ಒತ್ತಾಯಿಸೋಣ, ಬರುತ್ತೀರಾ?

ಕನ್ನಡ ಚಿತ್ರರಂಗದಲ್ಲಿ ಇನ್ನು ಮುಂದೆ ಹಿಂದಿ ಮೂಲದ ಹಾಡುಗಾರರನ್ನು, ನಿರ್ಮಾಪಕರನ್ನು, ತಂತ್ರಜ್ಞರನ್ನು ಕರೆಸಲೇಬಾರದು. ಯಾಕೆಂದರೆ ಇವರಿಂದ ಕನ್ನಡಿಗರ ಉದ್ಯೋಗಾವಕಾಶಗಳಿಗೆ ಕಲ್ಲು ಬೀಳುತ್ತಿದೆ. ಹಾಗೆಯೇ, ಟಿವಿ ಚಾನೆಲ್‍ಗಳಲ್ಲಿ ಪ್ರಸಾರವಾಗುವ ಯಾವ ಧಾರಾವಾಹಿಯೂ ಹಿಂದಿಯ ರಿಮೇಕ್ ಆಗಬಾರದು ಎಂದು ಹೋರಾಟ ಮಾಡೋಣ, ಬರುತ್ತೀರಾ?

ಈ ರಾಜ್ಯಕ್ಕೆ ಪ್ರವಾಸಿಗರು ಬರುವುದು ಮೆಟ್ರೋಗಳಲ್ಲಿ ಮಾತ್ರ ಅಲ್ಲ, ರಾಜ್ಯದೊಳಗೆ ಸಂಚರಿಸುವ ಸರಕಾರೀ ಬಸ್ಸುಗಳಲ್ಲಿ ಕೂಡ ಅವರಿರುತ್ತಾರೆ. ಹಾಗಾದರೆ ವಾಯುವಜ್ರಗಳಂಥ ಬಸ್ಸುಗಳಲ್ಲಿ, ಬೆಂಗಳೂರು ನಗರದೊಳಗೆ ಸಂಚರಿಸುವ ವೋಲ್ವೋ ಬಸ್ಸುಗಳಲ್ಲಿ ಕನ್ನಡದ ಹೊರತಾಗಿ ಅನ್ಯಭಾಷೆಗಳ ಬೋರ್ಡುಗಳು ಯಾಕಿವೆ? ಅವನ್ನು ತೆಗೆದುಹಾಕಬೇಕು ಎಂದು ಯಾಕೆ ಯಾವ ಹೋರಾಟಗಾರನೂ ಪ್ರತಿಭಟನೆ ಮಾಡಿಲ್ಲ? ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡವನ್ನು ಭೂತಗನ್ನಡಿಯಲ್ಲಿ ಹುಡುಕಬೇಕು, ಅಂಥ ಪರಿಸ್ಥಿತಿ ಇದೆ. ಅಲ್ಲೇಕೆ ಈ ಹೋರಾಟಗಾರರು ಕಾಣ ಸಿಕೊಂಡಿಲ್ಲ? ಅಲ್ಲೆಲ್ಲ ಕನ್ನಡವೊಂದೇ ಇರಲಿ, ಮಿಕ್ಕಾವ ಅನ್ಯಭಾಷೆಗಳೂ ಬೇಡ ಎಂದು ಹೋರಾಟ ಮಾಡೋಣ, ಬರುತ್ತೀರಾ?

ಕರ್ನಾಟಕ ರಾಜ್ಯ ಸರಕಾರ ಕೊಡುವ ಬಹಳಷ್ಟು ಸರಕಾರೀ ಜಾಹೀರಾತುಗಳಲ್ಲಿ ಕನ್ನಡದ ಬದಲು ಇಂಗ್ಲೀಷ್ ವಿಜೃಂಭಿಸುತ್ತಿದೆ. ಪ್ರವಾಸೋದ್ಯಮ ಇಲಾಖೆ ಹೊರಡಿಸುವ ಬಹಳಷ್ಟು ಜಾಹೀರಾತುಗಳು ಪೂರ್ತಿಯಾಗಿ ಅನ್ಯಭಾಷೆಯಲ್ಲೇ ಇವೆ. ಸರಕಾರ ಪ್ರಕಟಿಸುವ ಎಲ್ಲಾ ಜಾಹೀರಾತುಗಳೂ ನೂರಕ್ಕೆ ನೂರು ಕನ್ನಡ ಭಾಷೆಯಲ್ಲೇ ಇರಲಿ ಎಂದು ಒತ್ತಾಯಿಸೋಣ, ಬರುತ್ತೀರಾ?

ಬೆಂಗಳೂರಿನ ನಡುಮಧ್ಯದಲ್ಲಿರುವ ಲಾಲ್ ಬಾಗ್ ಕೆಂಪುತೋಟವಾಗಲಿ. ಜಯಮಹಲ್ ಜಯ ಅರಮನೆ ಆಗಲಿ. ಅವೆನ್ಯೂ ರೋಡ್, ರೆಸಿಡೆನ್ಸಿ ರೋಡ್, ಗೂಡ್ ಶೆಡ್ ರೋಡ್, ಕಾಟನ್‍ಪೇಟ್ ಇಂಥ ಇಂಗ್ಲೀಷ್/ಹಿಂದಿ/ಉರ್ದು ಹೆಸರುಗಳೆಲ್ಲ ಅಳಿಸಿಹೋಗಿ ಅಚ್ಚಕನ್ನಡದ ಹೆಸರುಗಳಷ್ಟೇ ನಳನಳಿಸಲಿ. ಬೆಂಗಳೂರಿನ ಅನ್ಯಭಾಷೆಗಳ ನೆರಳಿನಂತಿರುವ ಎಲ್ಲವನ್ನೂ ಕಿತ್ತು ಅಚ್ಚಕನ್ನಡದ ಪರಿಮಳ ಬೀರುವ ಸಂಗತಿಗಳನ್ನು ಸ್ಥಾಪಿಸೋಣ, ಬರುತ್ತೀರಾ?

Facebook ಕಾಮೆಂಟ್ಸ್

Rohith Chakratheertha: ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.
Related Post