X

ಬತ್ತ ಕುಟ್ಟಿದರಕ್ಕಿ, ಚಿತ್ತ ಕುಟ್ಟಿದರೇ ತತ್ತ್ವ !

ಮಂಕುತಿಮ್ಮನ ಕಗ್ಗ ೦೬೪.

ಚಿತ್ತದನುಭವ ಭಾವ ಸಂಭಾವನೆಗಳೆಲ್ಲ |
ಬತ್ತವದನು ವಿಚಾರಯುಕ್ತಿಗಳು ಕುಟ್ಟೆ ||
ತತ್ತ್ವತಂಡುಲ ದೊರೆಗುಮದು ವಿವೇಚಿತತತ್ತ್ವ |
ನಿತ್ಯ ಭೋಜನ ನಮಗೆ – ಮಂಕುತಿಮ್ಮ || ೦೬೪ ||

ನಮ್ಮ ಮನಸಿನ ಅನುಭವಗಳು, ಅದರಲ್ಲುಂಟಾಗುವ ಭಾವಗಳ ಫಲಿತವೆಲ್ಲ ಒಂದು ರೀತಿ ನಾವೆ ನಮಗಿತ್ತ ಸಂಭಾವನೆಯ ಹಾಗೆ. ಆ ಭಾವಾನುಭವಗಳೆಲ್ಲ ಅಕ್ಕಿಯ ಮೂಲರೂಪವಾದ ಬತ್ತವಿದ್ದ ಹಾಗೆ. ಪೈರು ಮೊಳೆತು, ಚಿಗುರೊಡೆದು, ಫಲ ನೀಡಿ ಕಾಳಾದಾಗ ಸಿಗುವ ಮೂಲಫಲ ಈ ಬತ್ತ. ಆ ಬತ್ತದ ಮೂಲರೂಪವನ್ನು ನಮ್ಮ ಬುದ್ದಿಯ ಒನಕೆ ಬಲವನ್ನುಪಯೋಗಿಸಿ ವಿಚಾರ, ಯುಕ್ತಿಗಳ ಚಿಂತನೆಯ ಮಥನದಲ್ಲಿ ಕುಟ್ಟಿದರೆ ಆ ಕ್ಲಿಷ್ಟ ವಿಚಾರದ ಹೊರಪದರದ ಒಟ್ಟುದುರಿಹೋಗಿ, ನಿಜ ತತ್ವ-ಸತ್ವದ ಅಕ್ಕಿ (ತಂಡುಲ) ದೊರೆಯುವುದು. ಮಥನಾನಂತರ ದೊರಕಿದ ಈ ಅಕ್ಕಿ ಉಣಲು ಯೋಗ್ಯವಾದ ವಿವೇಚಿತ ತತ್ವ್ತ – ಅರ್ಥಾತ್ ಸಿದ್ದ ಭೋಜನದ ಹಾಗೆ ಕಷ್ಟಪಡದೆ ಅಸ್ವಾದಿಸಬಹುದಾದ ಗೊಂದಲವಿರದ ಸರಕು. ಈ ತತ್ತ್ವಗಳದು ಅದೆಂತಹ ಅದ್ಭುತ ತಿನಿಸೆಂದರೆ ಒಮ್ಮೆ ಅದರ ಹೊರಪದರ ಕಳಚಿ ಅನಾವರಣವಾಗಿಹೋಯ್ತೆಂದರೆ, ಕಣಜಗಳಲ್ಲಿ ಕೂಡಿಟ್ಟ ಅಕ್ಕಿಯನ್ನು ನಿತ್ಯವೂ ಉಣ್ಣುವಂತೆ ಆ ತತ್ತ್ವದ ಸಾರರಸವನ್ನು ದಿನನಿತ್ಯವು ಭುಜಿಸಬಹುದು. ಅಂದರೆ ಯಾವುದೆ ಗಹನ ತತ್ತ್ವವಾದರೂ , ಅದನ್ನರಿಯುವುದು ಅದೆಷ್ಟೆ ಕಷ್ಟವಾದರು ಒಮ್ಮೆ ಅದರ ಒಗಟು ಬಿಡಿಸಿಬಿಟ್ಟರೆ ಅದರಿಂದ ಅಂತರ್ಗತವಾದ ಜ್ಞಾನ ನಮ್ಮಲ್ಲಿ ಸದಾ ಸರ್ವದಾ ಉಳಿದುಕೊಳ್ಳುತ್ತದೆ – ಯಾರೂ ಕಸಿಯಲಾಗದಂತೆ. ಅದನ್ನು ಯಾವಾಗ ಬೇಕಾದರೂ ಆಸ್ವಾದಿಸಬಹುದು ಎನ್ನುವುದು ಇಲ್ಲಿನ ಸಾರ.

ಇದೇ ಸಾಲುಗಳನ್ನೀಗ ಸ್ವಲ್ಪ ವಿವರದಲ್ಲಿ ನೋಡೋಣ.

ಚಿತ್ತದನುಭವ ಭಾವ ಸಂಭಾವನೆಗಳೆಲ್ಲ |ಬತ್ತ+ವದನು 

ಇಲ್ಲಿ ಚಿತ್ತದ ಗ್ರಹಿಕೆಗೆ ನಿಲುಕುವ ಅನುಭವವಾಗಲಿ, ಅಲ್ಲಿ ಮೂಡಿ ಬರುವ ಭಾವನೆಗಳಾಗಲಿ ಎಲ್ಲವು ಸುಮ್ಮನೆ ಸಂಭವಿಸುವಂತಹವಲ್ಲ. ಹಿನ್ನಲೆಯ ಮಥನದ-ಗ್ರಹಿಕೆಯ-ಅರ್ಥೈಸುವಿಕೆಯ ಶ್ರಮದ ಪ್ರತಿಫಲವಾಗಿ ಬರುವ ಫಲಿತಾಂಶಗಳು. ಹಾಗೆ ಬಂದದ್ದೆಲ್ಲಾ – ಶೋಧಿಸಲ್ಪಟ್ಟು, ಜರಡಿಯಾಡಲ್ಪಟ್ಟು ಬಂದ ಪರಿಷ್ಕೃತ ರೂಪಗಳು. ಆ ಸಂಸ್ಕರಿತ ರೂಪವೇ ಅದಕ್ಕೆ ಮೊದಲಿಗಿಂತ ಹೆಚ್ಚಿನ ಮೌಲ್ಯ ತಂದುಕೊಡುವುದರಿಂದ ಅವನ್ನೇ ಪಟ್ಟ ಶ್ರಮಕ್ಕೆ ದಕ್ಕಿದ ಸಂಭಾವನೆಯಂತೆ ಪರಿಗಣಿಸಬಹುದು. ಆದರೆ ಸಂಭಾವನೆಯೆನ್ನುವುದು ಶಾಶ್ವತ ಗಳಿಕೆಯಲ್ಲ. ಪ್ರತಿಬಾರಿಯ ಶ್ರಮಕ್ಕೆ ಅಳತೆ ಮಾಡಿ ಕೊಟ್ಟ ಪ್ರತಿಫಲ. ಹೀಗಾಗಿ ಇದೊಂದು ನಿರಂತರವಾಗಿ ಚಲನೆಯಲ್ಲಿಡಬೇಕಾದ ಪ್ರಕ್ರಿಯೆಯೇ ಹೊರತು ಒಂದೇ ಬಾರಿ ಮಾಡಿ ಬಿಟ್ಟುಬಿಡುವಂತದ್ದಲ್ಲ. ಶಾಶ್ವತ ಗಳಿಕೆಗೆ ಮೆಟ್ಟಲಾಗಬಹುದೇ ಹೊರತು ಅದೇ ಅಂತಿಮ ಸಂಪಾದನೆ ಎನ್ನಲು ಸಾಧ್ಯವಿಲ್ಲ.

ಈ ಸಾಲಿನ ಮುಂದಿನ ಪದವನ್ನು (ಬತ್ತವದನು) ನೋಡಿದಾಗ ಎರಡು ರೀತಿಯಲ್ಲಿ ಅರ್ಥೈಸಬಹುದು. ಮೊದಲನೆಯ ಅರ್ಥ (ಬತ್ತ + ಅದನ್ನು) – ಈ ಚಿತ್ತದನುಭವ, ಭಾವ, ಸಂಭಾವನೆಗಳೆಲ್ಲಾ ಬತ್ತದ ಕಾಳಿನ ಹಾಗೆ. ಒಳಗೆ ಅಕ್ಕಿಯಿದ್ದರೂ ಹೊರಗಿರುವ ಕವಚ ಹೊಟ್ಟಾಗಿ ಉದುರುವತನಕ ಅಕ್ಕಿ ಮತ್ತದರ ಮೌಲ್ಯ ಗೋಚರವಾಗುವುದಿಲ್ಲ. ಇಲ್ಲಿ ಒಂದೆಡೆ ಕವಚ ರಕ್ಷಕನ ಹಾಗೆ ಕಂಡರೆ ಮತ್ತೊಂದೆಡೆ ಅಮೂಲ್ಯವಾದ ಅಕ್ಕಿಯನ್ನು ಹೊರಗೆ ಕಾಣದಂತೆ ಬಚ್ಚಿಟ್ಟ ಖಳನಂತೆಯೂ ಕಾಣಿಸಬಹುದು. ಆಧ್ಯಾತ್ಮಿಕ ಆಯಾಮದಲ್ಲಿ ನೋಡಿದಾಗ ಒಳಗಿನ ಅಕ್ಕಿ ಜ್ಞಾನದ ಸಂಕೇತ – ಆದರೆ ಯಾರಿಗೂ ಕಾಣದಂತೆ ಹೊರಕವಚದ ಮುಸುಕು (ಅಜ್ಞಾನದ ಸಂಕೇತ) ಹಾಕಿಕೊಂಡು ಕುಳಿತುಕೊಂಡಿದೆ. ಆ ಅಜ್ಞಾನದ ಹೊರಭಿತ್ತಿ ಪುಡಿಯಾಗಲ್ಲದೆ ಒಳಗಿನ ಜ್ಞಾನ ದಕ್ಕದು. ಪ್ರತಿಬಾರಿಯೂ ಒಂದೆರಡು ಬತ್ತದ ಕಾಳನ್ನು ವಿಮೋಚಿಸಿದರೆ, ಒಂದೆರಡು ಅಕ್ಕಿಕಾಳಷ್ಟೇ ದೊರಕುವುದು (ಅಷ್ಟಕ್ಕೇ ಅಷ್ಟೇ ಸಂಭಾವನೆ); ಇಡೀ ಬತ್ತದ ಸಂಗ್ರಹ ಅಕ್ಕಿಯಾಗಲು ಸಾಧ್ಯವಿಲ್ಲ. ಜ್ಞಾನಾರ್ಜನೆಯಲ್ಲಿಯೂ ಸಹ, ನಮಗೆದುರಾಗುವ ಅಜ್ಞಾನದ ಮುಸುಕು ಹೊದ್ದ ಅಕ್ಕಿಯ ಕಾಳನ್ನು (ಜ್ಞಾನದ ತುಣುಕನ್ನು) ಗ್ರಹಿಸುತ್ತ ಹೋದ ಹಾಗೆ ಅಜ್ಞಾನದ ಹೊಟ್ಟುದುರಿ ಅರಿವಿನ ವಿಸ್ತಾರವಾಗುತ್ತ ಹೋಗುತ್ತದೆ. ಪರಿಪೂರ್ಣ ಜ್ಞಾನಕ್ಕೆ ಅದೆಷ್ಟು ಬತ್ತದ ಕಾಳುಗಳ ಬೆನ್ನಟ್ಟಿ ನಡೆಯಬೇಕೋ ಹೇಳಬಲ್ಲವರಾರು ?

ಇದೆ ಬತ್ತವದನು (ಬತ್ತವು + ಅದನ್ನು) ಎಂದು ಬಿಡಿಸಿದಾಗ ಹೊಳೆಯುವ ಅರ್ಥ: ಚಿತ್ತದಲ್ಲಿ ಮೂಡುವ ಭಾವನೆಗಳು, ಆಲೋಚನೆಗಳು, ಅದು ಗ್ರಹಿಸುವ ಅನುಭವಗಳು ಬತ್ತದ ನಿರಂತರ ಒರತೆಯ ಹಾಗೆ. ಪುಂಖಾನುಪುಂಖವಾಗಿ ಒಂದರ ಹಿಂದೊಂದರಂತೆ ಬರುತ್ತಲೇ ಇರುತ್ತವೆ. ಒಂದನ್ನು ಹೆಕ್ಕಿ ಬಿಡಿಸಿದರೆ ಮತ್ತೊಂದು ಅದರ ಜಾಗದಲ್ಲಿ ಹೊಸದಾಗಿ ಬಂದು ಕೂತಿರುತ್ತದೆ. ಹೀಗೆ ಜೀವನಪೂರ್ತಿ ನಿರಂತರವಾದ, ಮುಗಿಯದ ಕಾಯಕವಾಗಿಬಿಡುತ್ತದೆ – ನಾವು ಬದುಕಿನಲ್ಲಿ ಹೆಣಗಾಡುವ ದಿನನಿತ್ಯದ ಆಗುಹೋಗುಗಳ ರೂಪದಲ್ಲಿ. ಅದರಲ್ಲಿ ನಾವು ಹೇಗೆ ಪ್ರತಿಕ್ರಿಯಿಸುತ್ತೇವೋ ಅದರನುಸಾರ ಕರ್ಮಫಲದ (= ಪಾಪಪುಣ್ಯದ ರೂಪದ ಸಂಭಾವನೆಯ) ಲೆಕ್ಕವೂ ಗಣನೆಯಾಗುತ್ತಾ ಹೋಗುತ್ತದೆ.

ಹೀಗೆ ಒಂದೇ ಸಾಲಿನಲ್ಲಿ ಲೌಕಿಕ, ಪಾರಮಾರ್ಥಿಕಗಳೆಲ್ಲದರ ಮೊತ್ತ ಹೇಗೆ ಸಾಂದ್ರೀಕೃತವಾಗಿಬಿಟ್ಟಿದೆ ನೋಡಿ!

(ಬತ್ತವದನು)… ವಿಚಾರಯುಕ್ತಿಗಳು ಕುಟ್ಟೆ || ತತ್ತ್ವತಂಡುಲ.. 

ಈಗ ಚಿತ್ತದಲ್ಲೇ ಏನೆಲ್ಲಾ ಹೋರಾಡಿ ಬತ್ತದ ರೂಪದಲ್ಲಿ (ಕಾಳು ಮತ್ತು ಅಸಂಖ್ಯಾತ ಎನ್ನುವ ಎರಡೂ ಅರ್ಥದಲ್ಲಿ) ಒಂದಷ್ಟು ಸಂಭಾವನೆ ಪಡೆದದ್ದಾಯ್ತು. ಆದರೆ ಬತ್ತವನ್ನು ಹಾಗೆ ತಿನ್ನುವಂತಿಲ್ಲವಲ್ಲ? ಅದರ ಹೊರಗಿನ ಹೊಟ್ಟಿನ ಚೀಲ ಬಿಚ್ಚಬೇಕು ಮೊದಲು – ಒನಕೆಯಿಂದ ಕುಟ್ಟಿ ಬತ್ತದ ಹೊಟ್ಟನ್ನು ಬೇರ್ಪಡಿಸುವ ಹಾಗೆ. ಇಲ್ಲಿ ಒನಕೆಯ ರೂಪದಲ್ಲಿ ಬಳಸಬೇಕಾದದ್ದು ವಿಚಾರವಂತಿಕೆಯನ್ನು. ಬುದ್ಧಿಶಕ್ತಿಯ ಒರೆಗೆ ಹಚ್ಚಿ ಪ್ರತಿ ಬತ್ತದ ಕಾಳನ್ನು ನಿರ್ವಸತಿಗೊಳಿಸುತ್ತ, ಅಜ್ಞಾನದ ಪರದೆ ಕಳಚಿಹಾಕುತ್ತ ಅನಾವರಣ ಮಾಡಿಕೊಂಡು ಹೋಗಬೇಕು. ಕೆಲವೊಮ್ಮೆ ನೇರ ವಿಚಾರಕ್ಕೆ ಸಿಗದವುಗಳನ್ನು ಬಿಡಿಸಲು ಚಾತುರ್ಯ ಯುಕ್ತಿಯ ಬಳಕೆಯೂ ಆಗಬೇಕಾಗುತ್ತದೆ. ಒಟ್ಟಾರೆ ಅಷ್ಟೆಲ್ಲ ಹೆಣಗಿದ ಮೇಲಷ್ಟೇ ತಿನ್ನಲು ಯೋಗ್ಯವಾದ, ರುಚಿಕಟ್ಟಾದ ಅನ್ನವಾಗಬಲ್ಲ ಅಕ್ಕಿ (ತಂಡುಲ) ಲಭ್ಯವಾಗುತ್ತದೆ – ಬತ್ತದ ಕಾಳಿನ ಕುಟ್ಟುವಿಕೆಯಿಂದ. ಅದೇ ಬತ್ತದ ಹಾಗಿನ ಭಾವಾನುಭವಗಳನ್ನು ವಿಚಾರವಂತಿಕೆ, ಯುಕ್ತಿಗಳಿಂದ ಮಥಿಸಿದರೆ (ಕುಟ್ಟಿದರೆ) ದೊರೆಯುವ ತಂಡುಲ (ಅಕ್ಕಿ) – ತತ್ತ್ವ ತಂಡುಲ. ಅಂದರೆ ಪ್ರತಿ ಗೊಂದಲಪೂರ್ಣ ವಿಷಯವನ್ನು ಮಥಿಸಿ, ಅರ್ಥೈಸಿದಾಗ ಅದರ ಮೂಲ ಸಂಕಲ್ಪ-ಮೂಲ ಸ್ವರೂಪ-ಮೂಲತತ್ತ್ವದ ಹೂರಣ (ಕಾನ್ಸೆಪ್ಟ್ , ಫಂಢಾ) ಗೋಚರವಾಗುತ್ತದೆ. ಒಮ್ಮೆ ಹೂರಣ ಅರ್ಥವಾಗಿಬಿಟ್ಟರೆ ಅದು ಮತ್ತೆ ಮರೆಯಲಾಗದ ಜ್ಞಾನವಾಗಿ ಶಾಶ್ವತವಾಗಿ ನೆಲೆಸಿಬಿಡುತ್ತದೆ.

(ತತ್ತ್ವತಂಡುಲ).. ದೊರೆಗುಮದು ವಿವೇಚಿತತತ್ತ್ವ |

ಬತ್ತದಿಂದ ಅಕ್ಕಿ ದೊರಕಿದರು ಅದನ್ನು ಹಾಗೆ ತಿನ್ನಲಾಗದು – ಅದನ್ನು ನೀರಲ್ಲಿ ಬೇಯಿಸಿ ಅನ್ನವಾಗಿಸದ ಹೊರತು. ಹಾಗೆಯೇ ತತ್ತ್ವವೆನ್ನುವುದು ಕೂಡ. ಅದನ್ನು ವಿವೇಚಿತ ತತ್ತ್ವವಾಗಿಸಬೇಕಾದರೆ (ಸರ್ವರಿಗೂ ಸಮ್ಮತವಾಗುವ ಸರಳ ಸತ್ಯವಾಗಿಸಬೇಕಾದರೆ) ಅಕ್ಕಿಯನ್ನು ಬೇಯಿಸಿ ಅನ್ನವಾಗಿಸಿದ ಹಾಗೆ ವಿವೇಚನೆಯ ಪರೀಕ್ಷೆಗೊಳಪಡಿಸಬೇಕು. ಅದರಲ್ಲಿ ಬೆಂದು ಗೆದ್ದು ಬಂದ ವಿವೇಚಿತ ತತ್ತ್ವ ಸರ್ವಸಮ್ಮತವಾಗಿ , ಸರ್ವಮಾನ್ಯವಾಗಿ ಸಾರ್ವಜನಿಕ ಮನ್ನಣೆ ಪಡೆಯುತ್ತದೆ.

ಇಲ್ಲಿ ‘ದೊರೆಗುಮದು’ ಪದವು ಎರಡು ರೀತಿಯ ಅರ್ಥವನ್ನು ಹೊರಡಿಸುತ್ತದೆ. ಒಂದು ‘ದೊರಕಿಸುವುದು’ ವಿವೇಚಿತ ತತ್ತ್ವವನ್ನು (ಅಕ್ಕಿಯಿಂದ ದೊರಕುವ ಅನ್ನ) ಎನ್ನುವ ಅರ್ಥ. ಮತ್ತೊಂದು (ದೊರೆಗುಂ + ಅದು) ಎನ್ನುವ ಸರ್ವರಿಗೂ ಅನ್ವಯವಾಗುವುದೆನ್ನುವ ಅರ್ಥ. ಅಕ್ಕಿ ಅನ್ನವಾಗುವುದು, ಆಳಿಂದ ಅರಸನವರೆಗೆ ಎಲ್ಲರಿಗು ಆಹಾರವಾಗುವುದು ಹೇಗೆ ಸಹಜ ಕ್ರಿಯೆಯೊ ಹಾಗೆಯೇ ವಿಚಾರಮಥನದ ವಿವೇಚಿತ ತತ್ತ್ವ ಎಲ್ಲರಿಗು ಅನ್ವಯವಾಗುವಂತದ್ದು, ಎಲ್ಲರು ಅನುಕರಿಸಬಲ್ಲಂತದ್ದು – ದೊರೆಯಾಗಲಿ, ನೌಕರನಾಗಲಿ ಎಲ್ಲರೂ ಗ್ರಹಿಸಿ ಅನುಭವಿಸಬಲ್ಲಂತದ್ದು. ಅದನ್ನು ಒತ್ತಿ ಹೇಳುವ ಸಾಲು ಮುಂದಿನದು:

ನಿತ್ಯ ಭೋಜನ ನಮಗೆ – ಮಂಕುತಿಮ್ಮ ||

ಅನ್ನವಾದ ಮೇಲೆ ಯಾರು ಬೇಕಾದರೂ ಉಣ್ಣಬಹುದು. ಅಕ್ಕಿಯೊಂದಿದ್ದರೆ ಯಾವಾಗಬೇಕಾದರೂ ಅನ್ನ ಮಾಡಿಕೊಂಡು ನಿತ್ಯಭೋಜನ ಮಾಡುವ ಹಾಗೆ, ತತ್ತ್ವದ ಮೂಲಬೇರು ಗಟ್ಟಿಯಾಗಿದ್ದರೆ ಯಾವಾಗ ಬೇಕಾದರೂ ಅದನ್ನು ವಿವೇಚನೆಯ ಮೂಸೆಯಲ್ಲಿ ಅದ್ದಿ, ವಿವೇಚಿತತತ್ತ್ವ(ಅನ್ನ)ವನ್ನಾಗಿಸಿಕೊಳ್ಳಬಹುದು. ಇದನ್ನರಿತವರು ನಿತ್ಯ ಜ್ಞಾನಾರ್ಜನೆಯ ಬೆನ್ನಟ್ಟಿ , ನಿರಂತರ ಅಜ್ಞಾನದ ಮುಸುಕಿನ ಪದರಗಳನ್ನು ಒಂದೊಂದಾಗಿ ಕಳಚುತ್ತ ತನ್ಮೂಲಕ ತಮ್ಮರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಾ ಹೋಗುತ್ತಾರೆ – ಎನ್ನುತ್ತಾನೆ ಮಂಕುತಿಮ್ಮ.

– ನಾಗೇಶ ಮೈಸೂರು

#ಕಗ್ಗಕೊಂದು-ಹಗ್ಗ
#ಕಗ್ಗ-ಟಿಪ್ಪಣಿ

Facebook ಕಾಮೆಂಟ್ಸ್

Nagesha MN: ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ
Related Post