ನಿಟ್ಟೂರಿನ ಮಂಜಣ್ಣನವರ ನಿಸರ್ಗಧಾಮದಲ್ಲಿ ಕಡುಬು ತಿಂದಲ್ಲಿಯವರೆಗೆ ಕಳೆದ ಸಂಚಿಕೆಯಲ್ಲಿ ಓದಿರುವಿರಿ. ತಿಂದ ಹುರುಪಿನಲ್ಲಿ ನಾವು ಎರಡನೇ ದಿನದ ಚಾರಣಕ್ಕೆ ಸಿದ್ಧರಾದೆವು. ಮೂರು ಗಂಟೆಗಳ ಬಸ್ ಪ್ರಯಾಣ; ಫೋಟೋ ತೆಗೆಯುವ ಆಸಕ್ತಿ ನನಗೆ ತೀವ್ರವಿರುವುದರಿಂದ ಚಾಲಕನ ಪಕ್ಕದಲ್ಲಿರುವ ಗೇರ್’ಬಾಕ್ಸ್‍ನಲ್ಲೇ ಕುಳಿತೆ. ಬಸ್ ಪ್ರಯಾಣದಲ್ಲೂ ಹಕ್ಕಿಗಳನ್ನು ನೋಡುವುದನ್ನು ಮುಂದುವರಿಸಿದೆ. ಕಾಡಿನ ಮಧ್ಯೆ ಸಂಚರಿಸುವಾಗ ಜುಟ್ಟಿನ ಗಿಡುಗ Crested Goshawk (Accipiter trivirgatus), ಉದ್ದ ಬಾಲದ ಕೀಚುಗ Long-tailed shrike (Lanius schach), ಅಂಬರ ಕೀಚುಗ Ashy woodswallow (Artamus fuscus) ಹೀಗೆ ಅನೇಕ ಪಕ್ಷಿಗಳನ್ನು ನೋಡಿದೆ. ಕಾಡು ಮುಗಿದ ನಂತರ ನಮ್ಮ ಬಸ್ ಸರಕಾರಿ ಗೇರು ತೋಟದ ಮಧ್ಯೆ ರಸ್ತೆಯಲ್ಲಿ ಸಾಗಿತು. ಅಲ್ಲಿನ ವಿದ್ಯುತ್ ತಂತಿಗಳಲ್ಲಿ ನೀಲಿ ಬಾಲದ ನೊಣಹಿಡುಕಗಳು Blue-tailed bee-eater (Merops philippinus) ಮತ್ತು ಕೆಮ್ಮಂಡೆ ಜೇನ್ನೊಣ ಬಾಕಗಳು Chestnut-headed bee-eater (Merops leschenaulti) ಸಾಲಾಗಿ ಕುಳಿತಿದ್ದವು. ಬಸ್ಸನ್ನು ನಿಲ್ಲಿಸಿ ಕುಳಿತಲ್ಲಿಂದಲೇ ಚೆಂದದ ಚಿತ್ರಗಳನ್ನು ತೆಗೆದೆ. ಇತರರೂ ತಮ್ಮ ತಮ್ಮ ಮೊಬೈಲ್ ಕ್ಯಾಮೆರಾದಲ್ಲೂ ಅದರ ಪಟವನ್ನು ತೆಗೆದರೆಂದರೆ ಅವೆಷ್ಟು ಹತ್ತಿರದಲ್ಲಿದರಬಹುದೆಂದು ಊಹಿಸಿ.
ದಬ್ಬೆ ಜಲಪಾತದೆಡಗಿನ ದಾರಿಯಲ್ಲಿ ಭಯಂಕರ ಉಂಬುಳು/ಜಿಗಣೆಗಳಿವೆ, ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ನಾನು ಉಪ್ಪು ಹೊಗೆಸೊಪ್ಪು ಮತ್ತು ಡೆಟಾಲ್ ಹಿಡಿದುಕೊಂಡಿದ್ದೆ. ಕೆಲವರು ಅದೇನೋ ಲೀಚ್ ಸ್ಪ್ರೇ ತೆಗೆದುಕೊಂಡು ಬಂದಿದ್ದರು. ಪುಣ್ಯಾತ್ಮರು ಬಹಳ ಆತುರಗಾರರು. ನಿಟ್ಟೂರಿನಲ್ಲಿ ಬಸ್ ಹತ್ತುವಾಗಲೇ ತಮ್ಮ ಬೂಟು, ಕಾಲು ಚೀಲಗಳಿಗೆ ಅದನ್ನು ಬಳಿದದ್ದಲ್ಲದೆ ಪರೋಪಕಾರ ಮನೋಭಾವದಿಂದ ಇತರರಿಗೂ ಅದನ್ನು ಸವರಿಸಿದ್ದರು. ಉಂಬುಳು ಬೋಧ ತಪ್ಪಿ ಬೀಳುವ ಮೊದಲು, ನಮ್ಮ ಚಾರಣಿಗರೊಬ್ಬರು ಅದರ ಘಾಟು ತಾಳಲಾರದೆ ಪ್ರಜ್ಞೆ ತಪ್ಪಿಯೇ ಬಿಟ್ಟರು. ಬಸ್ ನಿಲ್ಲಿಸಿ ಅವರನ್ನು ಬಸ್ಸಿನಿಂದ ಹೊರ ತಂದು ಪ್ರಥಮ ಚಿಕಿತ್ಸೆಯನ್ನು ಮಾಡಿದ್ದಾಯಿತು. ಶುದ್ಧ ಗಾಳಿಯನ್ನು ಐದು ನಿಮಿಷ ಸೇವಿಸಿದ ನಂತರ ಅವರು ಸುಧಾರಿಸಿದ್ದರು. ಅವರ ಕಾಲು ಚೀಲವಂತೂ ಯಾರನ್ನಾದರೂ ಮೂರ್ಛೆಗೊಳಿಸುವಂತಿತ್ತು. ಅದನ್ನು ಬದಲಾಯಿಸಲು ಹೇಳಿ ಅವರನ್ನೂ ಗೇರ್ ಬಾಕ್ಸ್ ಮೇಲೆ ಕುಳ್ಳಿರಿಸಿ ನಮ್ಮ ಪ್ರಯಾಣ ಮುಂದುವರಿಸಿದೆವು.
ನಿಟ್ಟೂರಿನಿಂದ ಒಟ್ಟು 70 ಕಿ.ಮೀ ಪ್ರಯಾಣ, ಭಟ್ಕಳ- ಸೊರಬ ರಾಷ್ಟೀಯ ಹೆದ್ದಾರಿಯಲ್ಲಿನ ಹೊಸಗದ್ದೆ ಎಂಬಲ್ಲಿ ಬಸ್ ನಿಲ್ಲಿಸಿದೆವು. ಮುಂದೆ ಬಸ್ ಪ್ರಯಾಣ ಅಸಾಧ್ಯ. ಶರಾವತಿ ಕಣಿವೆಯ ರಕ್ಷಿತಾರಣ್ಯವದು.
ಸಸ್ಯ ವೈವಿಧ್ಯದಿಂದ ಕೊಡಚಾದ್ರಿ ಬೆಟ್ಟವನ್ನು ಮೀರಿಸುತ್ತಿತ್ತು. ಇಲ್ಲಿನ ತೋಡುಗಳಲ್ಲಿ ಅಲ್ಲಿಗಿಂತ ಹರಿವು ಜಾಸ್ತಿ ಇತ್ತು. ಇತರರು ನನಗಿಂತ ಮುಂದೆ ಹೋದರೆ ಹಕ್ಕಿಗಳು ಹಾರಿ ನನಗೆ ಕಾಣಿಸದು ಎಂಬ ಕಾರಣಕ್ಕೆ ಆತುರವಾಗಿಯೇ ಬಲು ಮುಂದೆ ಸಾಗಿದೆ. ನನ್ನೊಂದಿಗೆ ರಮೇಶಣ್ಣನೂ ಇದ್ದರು (ನಮ್ಮ ಕಾರ್ಯಕ್ರಮ ನಿರ್ದೇಶಕ).
ನಮ್ಮ ಆತುರವನ್ನು ಕಂಡ ಕಾಡು ಕೋಳಿಯು Grey Junglefowl (Gallus sonneratii) ಅಷ್ಟೇ ಆತುರವಾಗಿ ಕಾಡು ಸೇರಿತು. ಅರಣ್ಯದ ಮಧ್ಯೆ ದೊಡ್ಡ ಹೊಳೆ ದಾಟುವಾಗ ಪೊದೆಯೊಂದರಲ್ಲಿ ಸಣ್ಣ ನೀಲಿ ಹಕ್ಕಿ ಕಾಣಿಸಿತು. ಮೇಲ್ನೋಟಕ್ಕೆ ಮಿಂಚುಳ್ಳಿಯಂತಿತ್ತು. ಕತ್ತನ್ನು ಆಡಿಸುತ್ತಾ ಕುಳಿತಿತ್ತು. ಇಂಥಾ ದಟ್ಟಾರಣ್ಯದಲ್ಲಿ ನಮಗೆ ಸಾಮಾನ್ಯವಾಗಿ ಸಿಗುವ ಮಿಂಚುಳ್ಳಿ Common kingfisher (Alcedo atthis) ಇರಲಾರದೆಂದು, ಅದಿರುವ ದಿಕ್ಕಿನಲ್ಲಿ ಮೆಲ್ಲನೆ ಸಾಗಿದೆ. ಮುಳ್ಳು ಪೊದೆಗಳನ್ನು ಲೆಕ್ಕಿಸದೆ ಜಾಗ್ರತೆಯಿಂದ ಸಾಗಿದೆ. ಹೌದು ಅದು ಬಲು ವಿರಳ ನೀಲಿಕಿವಿಯ ಮಿಂಚುಳ್ಳಿ Blue-eared kingfisher (Alcedo meninting). ಇಂಥಾ ದಟ್ಟಾರಣ್ಯಕ್ಕೆ ಮಾತ್ರ ಸೀಮಿತವಾಗಿರುವ ಪ್ರಬೇಧ. ನಮ್ಮ ಪಶ್ಚಿಮ ಘಟ್ಟ ಮತ್ತು ಮೇಘಾಲಯದ ಕಾಡುಗಳಲ್ಲಿ ಮಾತ್ರ ಕಂಡುಬರುವ ಮಿಂಚುಳ್ಳಿ ಇದು. ಅನೇಕರಿಗೆ ಅದನ್ನು ತೋರಿಸಿ/ ಚಿತ್ರವನ್ನು ತೋರಿಸಿ ಮುಂದೆ ಸಾಗಿದೆವು.
ಬಸ್ ನಿಲ್ಲಿಸಿದಲ್ಲಿಂದ ಮೂರು ಕಿ.ಮೀ ದೂರದಲ್ಲಿ ಹೊಸಗದ್ದೆಯ ಏಕಮೇವಾದ್ವಿತೀಯ ಮನೆ ಕಾಣಿಸಿತು. ಅಲ್ಲಿ ಎಲ್ಲರೂ ಕಂಠಪೂರ್ತಿ ನೀರು ಕುಡಿದು, ಅವರ ಮನೆ ಎದುರಿನ ಗದ್ದೆಯ ಬದುವಿನಲ್ಲಿ ಮುಂದೆ ಸಾಗಿದೆವು. ಮುಂದಿನ ಹಾದಿ ಬಲು ಕಷ್ಟವಿದೆ ಎಂದು ರಮೇಶಣ್ಣ ಎಚ್ಚರಿಕೆ ಕೊಟ್ಟರು. ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಮೇಲೆ ನಂಬಿಕೆ ಇರುವವರಿಗೆ ಮಾತ್ರ ದಬ್ಬೆಯ ದರ್ಶನ ಸಾಧ್ಯ ಎಂಬುದು ರಮೇಶಣ್ಣನ ನುಡಿಯಾಗಿತ್ತು. ಗದ್ದೆಯನ್ನು ದಾಟಿದಾಕ್ಷಣ ನಮ್ಮೆದುರಿಗೆ ಪ್ರಪಾತ ಕಾಣಿಸಿತು. ಆ ಪ್ರಪಾತದಲ್ಲಿ ನಮ್ಮ ಮುಂದಿನ ಹೆಜ್ಜೆ ಇಡಬೇಕಿತ್ತು. ಚಾರಣದಲ್ಲಿ ಪರಿಣಿತರಾದವರು ಮೊದಲೇ ಇಳಿದೆವು. ಕಠಿಣವಾದ ಜಾಗದಲ್ಲಿ ನಾವು ಹಗ್ಗ ಕಟ್ಟಿದೆವು. ಅಂಜಿದ ಕೆಲವರನ್ನು ಹಗ್ಗದ ಮೂಲಕ ಇಳಿಸಿದೆವು. ಕೆಲವರು ಆಲದ ಮರದ ಬೀಳಲಿನ ಸಹಾಯ ಪಡೆದರೆ,ಮತ್ತುಳಿದವರು ಕಲ್ಲಿನ ಕೊರಕಲಿನ ಮಧ್ಯೆ ಕೈ ಕಾಲು ಹಾಕಿ ಸಾಹಸ ಮಾಡಿ ಇಳಿಯತೊಡಗಿದರು. 80 ಡಿಗ್ರಿ ಇಳಿಜಾರಿನ ಪ್ರದೇಶ, ಕಲ್ಲುಗಳು ಬೇರೆ. ನಾವು ಮೆಟ್ಟಿದ ಕಲ್ಲು ಜಾರಿದರೆ ಕೆಳಗಿರುವವರಿಗೆ ಅಪಾಯ. ಅಂಥಾ ಅಪಾಯದಿಂದ ಸ್ವಲ್ಪದರಲ್ಲಿ ನಾನು ಪಾರಾಗಿದ್ದೆ. ಮಳೆಗಾಲದಲ್ಲಿ ಬಹುಶಃ ಯಾರಿಗಾದರೂ ಅಸಾಧ್ಯ!
ಇಂಥಾ ಕ್ಲಿಷ್ಟ ಜಾಗದಲ್ಲಿ ನನ್ನ ತೂಕದ ಕ್ಯಾಮೆರಾವನ್ನು ಜೊತೆಜೊತೆಗೆ ಅನೇಕರನ್ನು ಕೆಳಗಿಳಿಸುವುದರಲ್ಲಿ ನಾನೂ ಪ್ರಯಾಸ ಪಟ್ಟೆ. ಸುಮಾರು ಮುನ್ನೂರು ಮೀಟರ್ ಇಳಿದಾಗ ನಮಗೆ ದಬ್ಬೆ ಜಲಪಾತದ ದರ್ಶನವಾಯಿತು. ಜಲಪಾತಗಳೆಂದರೆ ನಯನ ಮನೋಹರವೇ. ಆದರೆ ಇದನ್ನು ವರ್ಣಿಸಲು ನನ್ನ ಪದ ಶಕ್ತಿ ಸಾಲದು. ಕಣ್ಣು ಅಷ್ಟು ಸುಲಭವಾಗಿ ತನ್ನ ಅನ್ನವನ್ನು ನಾಲಿಗೆಗೆ ಕೊಡದು.
ಆ ಜಾಗದಿಂದ ಮತ್ತೂ ಇನ್ನೂರು ಮೀಟರ್ ಕ್ರಮಿಸಿದರೆ ಜಲಪಾತದ ಬುಡ ತಲುಪಬಹುದು. ಆ ಹಾದಿ ಮತ್ತೂ ಕಠಿಣ. ಗಿಡಗಳ ಬೇರುಗಳನ್ನು ಹಿಡಿದು ನಾವು ಕೆಲವರು ಕೆಳಗಿಳಿದೆವು, ಅಲ್ಲಿನ ಮಣ್ಣು ಸಡಿಲವಿದ್ದುರಿಂದ ಕೆಲವು ಕಡೆ ಕೆಲವರು ಜಾರುಬಂಡಿಯಾಡಿದರು. ಅಂತೂ ಕೆಳಗಿಳಿದೆವು.
ರಭಸ ಕಮ್ಮಿ ಇರುವ ಕಡೆ ತಲೆ ಒಡ್ಡಿ ಆಡಲಾರಂಭಿಸಿದೆ. ಸಹ ಚಾರಣಿಗರು ಒಬ್ಬೊಬ್ಬರಾಗಿ ಇಳಿದು ಬರುವುದು ತಡವಾದುದರಿಂದ ನನಗಂತೂ ಆಡಲು ಯಥೇಚ್ಛ ಸಮಯ ಸಿಕ್ಕಿತು. ಹೀಗೆ ಆಡುತ್ತಿರುವಾಗ ಜಲಪಾತದ ಅಂಚಿನ ಬಂಡೆಯೊಂದರಲ್ಲಿ ಕಪ್ಪಗಿನ ಪಾರಿವಾಳವೊಂದು ಕಾಣ ಸಿಕ್ಕಿತು. ನಮ್ಮ ಪೇಟೆಗಳಲ್ಲಿ ಕಾಣುವುದಿಲ್ಲವೇ? ಅದೇ ಪಾರಿವಾಳ Feral pigeon (Columba livia domestica). ಇಷ್ಟು ಹೊತ್ತು ಹಕ್ಕಿಗಳತ್ತ ಗಮನವೇ ಹರಿಸದೆ ಮೈ ಮರೆತಿದ್ದ ನನ್ನನ್ನು ಇದು ಎಬ್ಬಿಸಿತ್ತು. ಪೇಟೆಗಳಲ್ಲಿ, ದೊಡ್ಡ ಬಹುಮಹಡಿ ಕಟ್ಟಡಗಳಲ್ಲಿ ಸಾವಿರಗಟ್ಟಲೆ ಸಿಗುವ ಈ ಪಾರಿವಾಳ, ಪಾರ್ಥೇನಿಯಂನಂತೆ ಬೆಳೆಯುತ್ತಿರುವ ಈ ಪಾರಿವಾಳ ಇಂಥಾ ದಟ್ಟಾರಣ್ಯದಲ್ಲಿ ಇರುವುದು ವಿರಳಾತಿವಿರಳ, ಅಥವಾ ಈ ಪಾರಿವಾಳವು ಮೂಲ ಪ್ರಬೇಧವಾದ Wild rock pigeon ಇರಬಹುದೇ? ಎಂಬ ಅನುಮಾನವೂ ನನಗಿದೆ. ಎಲ್ಲೆಲ್ಲೂ ಪೇಟೆಗಳೇ ಆವರಿಸಿರುವಾಗ Wild ಆಗಲು ಅವಕಾಶವಿದೆಯೇ? ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ.
ಈ ಪಾರಿವಾಳಕ್ಕೋಸ್ಕರ ಮೈ ಒರೆಸಿ ಕ್ಯಾಮೆರಾ ಹಿಡಿದು ನಾನು ಅಲ್ಲಿರುವ ಹಸುರಿನೊಳಗೆ ಗಮನ ಹರಿಸಿದೆ. ಕೆಲ ಕೀಟಗಳು, ಚಿಟ್ಟೆಗಳು, ಏಡಿ, ಮೀನುಗಳನ್ನು ಕಂಡೆ. Impatiens ಗಿಡವು ಬಂಡೆಗಳಲ್ಲಿ ಅಂಟಿ ಜಲಪಾತಕ್ಕೆ ವಿಶೇಷ ಸೊಬಗನ್ನು ನೀಡುತ್ತಿತ್ತು. ಬೂದು ಕಾಜಾಣ Ashy drongo (Dicrurus leucophaeus) ನನ್ನೆದುರಿನ ಮರದಲ್ಲಿ ಕುಳಿತಿತ್ತು. ಅಲ್ಲಿ ಹಾರಾಡುತ್ತಿದ್ದ ಚಿಟ್ಟೆಗಳನ್ನು ಹಿಡಿದು ತಿನ್ನುತ್ತಿತ್ತು. ಬೂದು ಕಾಜಾಣವು ಸಸ್ಯ ದಟ್ಟನೆ ಹೆಚ್ಚಿರುವ ಜಾಗದಲ್ಲಿ ಮಾತ್ರ ಕಾಣಸಿಗುವ ಪ್ರಬೇಧ. ಉದ್ದೇಶ ಪಾರಿವಾಳವಾಗಿದ್ದರೂ ಅಲ್ಲಿ ಮತ್ತೆ ಮತ್ತೆ ಕಾಣಿಸಿದ ಜೀವವೈವಿಧ್ಯ ನನ್ನನ್ನು ಬೆರಗುಗೊಳಿಸಿತ್ತು.
ಸಮಯ ಒಂದಾಗಿತ್ತು. ಐವತ್ತರಲ್ಲಿ ಮೂವತ್ತು ಮಂದಿ ಕೆಳಗಿಳಿದಿದ್ದರು. ನಾವು ಮುಂದೆ ಊಟಕ್ಕೆ ಭೀಮೇಶ್ವರಕ್ಕೆ ತೆರಳುವ ತುರ್ತು ಇದ್ದುದರಿಂದ ಎಲ್ಲರನ್ನೂ ಹೊರಡಿಸಿ ಇಳಿದ ಪ್ರಪಾತವನ್ನು ಏರತೊಡಗಿದೆವು. ಏರುವ ಕಾರ್ಯ ನನಗಂತೂ ಇಳಿಯುವುದಕ್ಕಿಂತ ಸುಲಭವೆನ್ನಿಸಿತು. ಏರ ಏರುತ್ತಾ ನೀಲಿ ತಲೆಯ ಬಂಡೆ ಸಿಳ್ಳಾರ Blue-capped rock thrush (Monticola cinclorhyncha) ಎಂಬ ಸುಂದರ ಸಿಳ್ಳಾರನ ದರ್ಶನವಾಯಿತು.
ಮುಂದೆ ಸಾಗುವಾಗ Western crowned warbler (Phylloscopus occipitalis) ಎಂಬ ತುಸು ವಿರಳ ಉಲಿಹಕ್ಕಿ ನನಗೆ ಕಾಣಿಸಿದ್ದು ನನ್ನ ಪುಣ್ಯ. ಹೊಸಗದ್ದೆಯ ಮನೆಯನ್ನು ದಾಟಿ ಮರಳುವಾಗ ಮತ್ತೆ ಆ ಮಿಂಚುಳ್ಳಿ ಏನಾದರೂ ಅಲ್ಲೇ ಇದೆಯೇ ಎಂದು ಆ ನದಿಯ ಹರಿವಿನೊಂದಿಗೆ ಕೆಲವರನ್ನೊಡಗೂಡಿಕೊಂಡು ಮುಂದೆ ಸಾಗಿದೆವು. ಮಿಂಚುಳ್ಳಿ ಸಿಗಲಿಲ್ಲ, ಆದರೆ ತುಸು ಒಳ ಹೊಕ್ಕಿದ್ದಕ್ಕೆ ಮೋಸವಂತೂ ಆಗಲಿಲ್ಲ. ಆ ನದಿಯು ಕೆಳ ಧುಮುಕುತ್ತಿತ್ತು, ಹೌದು ಅಲ್ಲೊಂದು ಸಣ್ಣ ಜಲಪಾತವಿತ್ತು. ನಾವು ಜಲಪಾತದ ಮೇಲಿದ್ದೆವು. ಮೇಲಿಂದ ಕೆಳಗೆ ನೀರು ಧುಮುಕುವುದನ್ನು ನೋಡಿ ಎಲ್ಲರೂ ಆನಂದ ಪಟ್ಟೆವು, ಕೆಳಗೆ ಇಳಿಯಲು ನಮ್ಮಲ್ಲಿ ಸಮಯವಿರಲಿಲ್ಲ.
ಪ್ರಕೃತಿಯೇ ಹಾಗೆ, ಯಾವತ್ತೂ ನಿಗೂಢ. ಅರ್ಥೈಸಲು ನಾವು ಒಳ ಹೋಕ್ಕಬೇಕು, ಒಂದಾಗಬೇಕು. ಅಲ್ಲಿಂದ ನಾವುಗಳು ಬಿರುಸಿನ ನಡಿಗೆಯಲ್ಲಿ ಬಸ್ ನಿಲ್ಲಿಸಿದ ಜಾಗ ತಲುಪಿದೆವು. ಸಮಯ 3:00. ಎಲ್ಲರೂ ಬಂದು ಸೇರುವಾಗ 3:30. ಈ ಅವಧಿಯಲ್ಲಿ ನನಗೆ Booted Warbler, Stork billed kingfisher, Brown shrike ಮತ್ತು Malabar nymph ಎಂಬ ಒಂದು ಪಶ್ಚಿಮ ಘಟ್ಟದ ಚಿಟ್ಟೆ ಸಿಕ್ಕಿತು.
ಊಟದ ಸಮಯ ಮೀರಿತ್ತು. ಹೊಟ್ಟೆ ತಾಳ ಹಾಕುತ್ತಿತ್ತು. ಬಸ್ ಏರಿದವರು ಭೀಮೇಶ್ವರಕ್ಕೆ ಪ್ರಯಾಣಿಸಿದೆವು. ಭೀಮೇಶ್ವರ ದೇವಾಲಯವು ಭೀಮನಿಂದ ಕಟ್ಟಲ್ಪಟ್ಟುದಂತೆ. ಅಜ್ಞಾತವಾಸದ ಸಮಯದಲ್ಲಿ ಭೀಮನು ತಂದ ಶಿವಲಿಂಗವನ್ನು ಧರ್ಮರಾಯನು ಪ್ರತಿಷ್ಟಾಪಿಸಿದನಂತೆ. ಅರ್ಜುನನು ಮೇಲಿನ ಬೆಟ್ಟಕ್ಕೆ ಬಾಣ ಬಿಟ್ಟು ಸರಳಾ ನದಿಯನ್ನು ಹರಿಸಿದನೆಂದೂ, ಅದು ಎಂದೂ ಬತ್ತುವುದಿಲ್ಲವೆಂದೂ ಕತೆಯುಂಟು.
ದಬ್ಬೆ ಜಲಪಾತದಿಂದ 20 ಕಿ.ಮೀ ದೂರದಲ್ಲಿ ಈ ಜಲಪಾತ ದೇವಾಲಯವಿದೆ.
ಬಸ್ ನಿಲ್ಲಿಸಿದಲ್ಲಿಂದ ದೇವಸ್ಥಾನಕ್ಕೆ ಸುಮಾರು ಮೂರು ಕಿ.ಮೀ ಸಾಗಬೇಕು. ಸಣ್ಣವಾಹನಗಳು ದೇವಾಲಯದ ಬುಡದವರೆಗೂ ಸಾಗುವುದು. ಹಸಿವು ತೀವ್ರವಿದ್ದುದರಿಂದ ಹಕ್ಕಿಗಳ ಬಗೆಗೆ ಗಮನ ಹರಿಸದೆ, ನಮಗೆ ಊಟ ಸಿದ್ಧವಿದ್ದ ಅಲ್ಲಿನ ಅರ್ಚಕರ ಮನೆಗೆ ಓಡಿದೆವು. ಅನ್ನ, ಸಾರು,ಪಲ್ಯ ಮಜ್ಜಿಗೆಯನ್ನು ಸವಿದು, ಅಲ್ಲೇ ಅನತಿ ದೂರದಲ್ಲಿರುವ ದೇವಸ್ಥಾನದತ್ತ ಸಾಗಿದೆವು.
ಆ ಜಲಪಾತದ ಮಧ್ಯೆ ಇರುವ ಈ ಕಲ್ಲಿನ ದೇವಾಲಯ ನಿಜಕ್ಕೂ ಅದ್ಭುತವೇ ಸರಿ. ಮಳೆ ಕೊರತೆ ಇದ್ದುದರಿಂದ, ನೀರಿನ ರಭಸವಿರಲಿಲ್ಲ. ಜಲಪಾತ, ದೇವಾಲಯ, ಸುತ್ತಲಿನ ಕಾಡು, ಜಲಪಾತದಲ್ಲಿ ಕಾಣುವ ಹೂವಿನ ಗಿಡಗಳು, ಇವೆಲ್ಲಾ ಯಾವುದೋ ಸಿನಿಮಾ ಸೆಟ್ ಇಟ್ಟಂತಿತ್ತು. ಭೀಮೇಶ್ವರದಲ್ಲಿ ದೇವಸ್ಥಾನ ಬಲು ಚಿಕ್ಕದು, ಪ್ರಾಕೃತಿಕ ಸೌಂದರ್ಯವೇ ದೊಡ್ಡದು. ಚಾರಣಿಗರೆಲ್ಲರೂ ಶಿವನ ದರ್ಶನ ಮಾಡಿ ಬಸ್‍ನತ್ತ ಹೆಜ್ಜೆ ಹಾಕಿದೆವು.
ಆಗ ಸಮಯ 6:30, ಹುಣ್ಣಿಮೆ. ಚಂದ್ರೋದಯವಾಗುತ್ತಿತ್ತು. ಆವತ್ತಿನದು ವಿಶೇಷ ಚಂದ್ರ, Super MOON, ಯಾವತ್ತಿನ ಚಂದ್ರನಿಗಿಂತ ಬಲು ದೊಡ್ಡದಾಗಿದ್ದ. ಗುಡ್ಡಗಳ ಮಧ್ಯೆ ಸೂರ್ಯ ಉದಯಿಸುವ ದೃಶ್ಯ ಸರ್ವೇ ಸಾಮಾನ್ಯ, ಚಂದ್ರೋದಯ ತುಸು ವಿರಳ. ಅಂಥಾ ಚಂದ್ರ ದರ್ಶನ ಅಂದು ನಮಗಾಗಿತ್ತು. ಹೆಚ್ಚಿನವರಲ್ಲಿ ವಿದ್ಯುದ್ಧೀವಟಿಕೆ ಇಲ್ಲದಿದ್ದುದರಿಂದ Super MOON ನ ಬೆಳಕೇ ನಮ್ಮ ನಡಿಗೆಗೆ ಮಾರ್ಗದರ್ಶಿಯಾಗಿತ್ತು.
ಎರಡು ದಿನದ ಪ್ರಯಾಣದ ಕೊನೆಯ ಹಂತದಲ್ಲಿದ್ದ ನಾವು ಭೀಮೇಶ್ವರ ಬಿಟ್ಟು ರಾತ್ರಿ 9:30ಕ್ಕೆ ಶಿವಮೊಗ್ಗ ತಲುಪಿದೆವು. ಶಿವಮೊಗ್ಗ ಯೂತ್ ಹಾಸ್ಟೇಲ್ ಘಟಕದವರು ನಮಗೆಂದು ವೈಭವದ ಭೋಜನ ಏರ್ಪಡಿಸಿದ್ದರು. ಅಲ್ಲಿ ನಮ್ಮ ಅನುಭವವನ್ನು ಘಟಕದ ಸದಸ್ಯರೊಂದಿಗೆ ಹಂಚಿಕೊಳ್ಳುತ್ತಾ, ನಮ್ಮ ಎರಡು ದಿನದ ಸಾರ್ಥಕ ಕಾರ್ಯಕ್ರಮದ ನಿರ್ದೇಶಕರಾದ ಮೈಸೂರು ಯೂತ್ ಹಾಸ್ಟೇಲ್‍ನ ಪರಶಿವಮೂರ್ತಿ ಹಾಗು ಆಶೀಶ್‍ರವರಿಗೆ ಕೃತಜ್ಞತೆ ಸಲ್ಲಿಸುತ್ತಾ ಊಟ ಮುಗಿಸಿದೆವು. ಆ ದಿನ ಒಟ್ಟು ನಮ್ಮ ನಡಿಗೆ 20 ಕಿ.ಮೀ ಮೀರಿದ್ದರಿಂದ ಸಹಜವಾಗಿಯೇ ಎಲ್ಲರೂ ದಣಿದಿದ್ದರು ಬಸ್ ಏರಿದ್ದೇ ತಡ ಶಬ್ದಭರಿತ ನಿದ್ದೆಗೆ ಜಾರಿದ್ದೆವು ಎಂಬುದೊಂದು ಊಹೆ, ಯಾಕೆಂದರೆ ಯಾರ ಶಬ್ದವೂ ಯಾರಿಗೂ ಕೇಳುವಂತಿರಲಿಲ್ಲ. ಅಂಥಾ ನಿದ್ದೆ. ಮುಂಜಾನೆ ಐದಕ್ಕೆ ಮೈಸೂರು ತಲುಪಿದ್ದೆವು. ಎರಡು ದಿನದ ಸಾರ್ಥಕ ಪ್ರಯಾಣ ಮುಗಿಸಿದ್ದೆವು.
ಚಿತ್ರಗಳು : ಡಾ.ಅಭಿಜಿತ್ ಎ. ಪಿ. ಸಿ
Facebook ಕಾಮೆಂಟ್ಸ್