ಯಾಕೆ ಅಂತ ಗೊತ್ತಿಲ್ಲ, ಇವತ್ತು ಬಾಲ್ಯದ ದಿನಗಳು ತುಂಬಾನೇ ನೆನಪಿಗೆ ಬರುತ್ತಿದೆ. ವರ್ಷಕ್ಕೊಮ್ಮೆ ಸಿಗುತ್ತಿದ್ದ ಆ ದೊಡ್ಡರಜೆ, ಮರದ ಕೆಳಗೆಯೇ ಕಾದು ಕುಳಿತು ಹೆಕ್ಕುತ್ತಿದ್ದ ಕಾಟು ಮಾವಿನಹಣ್ಣು, ಮಟ ಮಟ ಮಧ್ಯಾಹ್ನ ಮರವೇರಿ ಕೊಯ್ಯುತ್ತಿದ್ದ ಆ ಗೇರುಬೀಜದ ಹಣ್ಣು, 1 ರೂಪಾಯಿಗೆ ಸಿಗುತ್ತಿದ್ದ ಬೆಲ್ಲ ಕ್ಯಾಂಡಿ.. ಈ ಎಲ್ಲಾ ನೆನಪುಗಳೂ ನನ್ನನ್ನು ಹದಿನೈದು ವರ್ಷ ಹಿಂದಕ್ಕೆ ಕೊಂಡೊಯ್ಯುತಿದೆ. ಒಂದಾ? ಎರಡಾ? ನಾನು ಸತ್ತರೂ ಆ ನೆನಪುಗಳು ಮಾತ್ರ ಸಾಯದು, ಅಂತಹಾ ನೆನಪುಗಳು ಅವು!
ಈಗಿನಂತೆಯೇ ಅವಾಗಲೂ ವಾರ್ಷಿಕ ಪರೀಕ್ಷೆಯ ಫಲಿತಾಂಶಗಳು ಬರುತ್ತಿದ್ದುದು ಏಪ್ರಿಲ್ ಹತ್ತಕ್ಕೆಯೇ. ಈಗಿನ ಮಕ್ಕಳ ಕಥೆ ಏನೋ ಗೊತ್ತಿಲ್ಲ, ನಮಗಂತೂ ಆ ದಿನದ ಬಗ್ಗೆ ವಿಪರೀತ ಹೆದರಿಕೆಯಿತ್ತು. ಪರೀಕ್ಷೆಗಳೆಲ್ಲವೂ ಮಾರ್ಚ್ ಮೂವತ್ತೊರಳಗೆಯೇ ಮುಗಿದರೂ ಸಹ ಏಪ್ರಿಲ್ ಹತ್ತರವರೆಗೂ ನಮ್ಮ ಆತಂಕ ಮುಗಿಯದು. ಅಷ್ಟಿದ್ದರೂ ಸಹ ಪರೀಕ್ಷೆಗಳು ಮುಗಿದ ತಕ್ಷಣವೇ ನಮ್ಮ ಪಾಲಿನ ಅಚ್ಚೇ ದಿನ್ ಶುರುವಾಗುತ್ತಿತ್ತು. ಪರೀಕ್ಷೆಗಳು ಮುಗಿದ ನಂತರ ಹೇಗೂ ತರಗತಿಗಳು ಇರುವುದಿಲ್ಲವಲ್ಲಾ, ಮತ್ತೇನಿದ್ದರೂ ಅನ್’ಲಿಮಿಟೆಡ್ ಆಟ!
ನಮ್ಮಲ್ಲಂತೂ ವಾರ್ಷಿಕ ಪರೀಕ್ಷೆಯ ಫಲಿತಾಂಶ ಬರುವ ದಿನವೇ ನಮ್ಮೂರಿನ ಜಾತ್ರೆ ಶುರುವಾಗುವುದು. ಹತ್ತು ದಿನಗಳ ಕಾಲ ನಡೆಯುವ ಈ ಮಹಾಜಾತ್ರೆಗೆ ಹೋಗುವುದೆಂದರೆ ಎಲ್ಲಿಲ್ಲದ ಉತ್ಸಾಹ.. ಒಂದು ಲೆಕ್ಕದಲ್ಲಿ ನನ್ನೂರಿನ ಮಕ್ಕಳಿಗೆ ಪುತ್ತೂರು ಜಾತ್ರೆ ದೊಡ್ಡ ರಜೆಗೆ ಗ್ರಾಂಡ್ ಓಪನಿಂಗ್ ಸಿಕ್ಕ ಹಾಗೆ! ಜಾತ್ರೆ ಗದ್ದೆ ಸುತ್ತುವುದು, ಚರುಮುರಿ, ಐಸ್’ಕ್ರೀಮ್ ತಿನ್ನುವುದು, ಖರೀದಿ ಮಾಡುತ್ತೇವೋ ಇಲ್ಲವೋ ಅದು ಬೇರೆ ವಿಷಯ… ಕಂಡ ಕಂಡ ಅಂಗಡಿಯೊಳಗೆ ಹೋಗಿ ಎಲ್ಲಾ ಆಟ ಸಾಮಾನುಗಳನ್ನು ನೋಡುವುದು, ಅಮ್ಮ ಜೊತೆಗಿದ್ದರೆ ಸಿಕ್ಕಿ ಸಿಕ್ಕಿದ್ದನ್ನೆಲ್ಲಾ ಬೇಕೆಂದು ಹಠ ಹಿಡಿಯುವುದು.. ಕೊಡಿಸಲಿಲ್ಲವೆಂದರೆ ರಂಪ ಮಾಡಿ ಒಂದೆರಡೇಟು ತಿಂದುಕೊಂಡು ಹ್ಯಾಪು ಮೋರೆ ಹಾಕಿಕೊಂಡು ಮನೆಗೆ ಬರುವುದು.. ಇವೆಲ್ಲಾ ಕಾಮನ್ ಆಗಿತ್ತು..
ಜಾತ್ರೆಗಿಂತಲೂ ಇಂಟರೆಸ್ಟಿಂಗ್ ಆಗಿದ್ದ ಎರಡು ಕೆಲಸಗಳಿವೆ. ಒಂದು ಕಾಟುಮಾವಿನ ಹಣ್ಣುಗಳನ್ನು ಹೆಕ್ಕುವುದು, ಇನ್ನೊಂದು ಗೇರುಬೀಜ ಕೊಯ್ಯುವುದು.. ನನ್ನ ಮನೆಯಲ್ಲಿ ಮಾವಿನ ಮರವಿರಲಿಲ್ಲ. ಪಕ್ಕದಲ್ಲೇ ಇದ್ದ ಸ್ನೇಹಿತನ ಮನೆಯಲ್ಲಿ ಇತ್ತು. ಆಹ್..! ಆ ಕಾಟು ಮಾವಿನ ಹಣ್ಣುಗಳನ್ನು ನೆನದರೆ ಈಗಲೂ ಬಾಯಲ್ಲಿ ನೀರೂರುತ್ತದೆ. ಅಷ್ಟು ಟೇಸ್ಟಿ.. ಆದರೆ ಅವುಗಳನ್ನು ಹೆಕ್ಕುವುದೆಂದರೆ ತಿಂದಷ್ಟು ಸುಲಭದ ಕೆಲಸವಲ್ಲ. ಬೆಳ್ಳಂಬೆಳಗ್ಗೆಯೇ ಎದ್ದು ಹೋದರೆ ಭಾರೀ ಲಾಭ.. ಯಾಕೆಂದರೆ ರಾತ್ರಿಯ ಗಾಳಿಗೆ ಬಿದ್ದ ಅಷ್ಟೂ ಹಣ್ಣುಗಳು ನಮ್ಮ ಬುಟ್ಟಿ ಸೇರುತ್ತಿದ್ದವು.. ಅಲ್ಲದೆ ಬೆಳಗ್ಗಿನ ಸಮಯದಲ್ಲಿ ಹಣ್ಣುಗಳನ್ನು ಹೆಕ್ಕುವುದಕ್ಕೆ ದೊಡ್ಡ ಮಟ್ಟದ ಕಾಂಪಿಟೀಶನ್ ಇರುವುದಿಲ್ಲ. ಸಮಯ ಜಾರಿದಂತೆ ಹಣ್ಣುಗಳನ್ನು ಹೆಕ್ಕುವುದಕ್ಕೆ ಬಹಳಷ್ಟು ಜನ ಬರುತ್ತಿದ್ದುದರಿಂದ ಹಣ್ಣುಗಳೆಲ್ಲವೂ ಹಂಚಿ ಹೋಗುತ್ತಿದ್ದವು. ಮಧ್ಯಾಹ್ನದ ಹೊತ್ತಿನಲ್ಲಿ ದೊಡ್ಡ ಗಾಳಿ ಬರುವಾಗ ಮರದಡಿಯೇ ಮತ್ತೆ ಕಾದು ಕೂತರೆ ಪಟಪಟನೆ ಕೆಳ ಬೀಳುತ್ತಿದ್ದ ಹಣ್ಣುಗಳನ್ನು ಹೆಕ್ಕಲು ಹೈಕ್ಲುಗಳು ಪೊದೆಗಳ ಮೇಲಿಂದ ಎದ್ದು ಬಿದ್ದು ಓಡುತ್ತಿದ್ದ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಈ ನಡುವೆ ಒಂದು ಕ್ಷಣ ಮಿಸ್ ಆದ್ರೂ ಹಣ್ಣು ಇನ್ನೊಬ್ಬನ ಪಾಲಾಗುತ್ತಿತ್ತು. ಹೆಕ್ಕಲು ಬರುತ್ತಿದ್ದವರು ಒಬ್ರಾ ಇಬ್ರಾ.. ಅಬ್ಬಬ್ಬಾ!
ಹೆಕ್ಕಿ ತರುತ್ತಿದ್ದ ಹಣ್ಣುಗಳು ಒಂದೆರಡಲ್ಲ.. ನೂರಿನ್ನೂರು ಇರಬಹುದು.. ಅದರಲ್ಲಿ ಹತ್ತಿಪ್ಪತ್ತೋ ಹಣ್ಣುಗಳನ್ನು ಸಾಸಿವೆಯೋ ಗೊಜ್ಜೋ ಮಾಡುವುದಕ್ಕೆ ಅಮ್ಮನ ವಶಕ್ಕೊಪ್ಪಿಸಿ ಉಳಿದವುಗಳನ್ನು ಪಕ್ಕದ ಕ್ವಾರ್ಟ್ರಸ್’ನಲ್ಲಿ ಮಾರುವುದಕ್ಕೆ ಹೊರಡುತ್ತಿದ್ದೆ. ಒಂದು ರೂಪಾಯಿಗೆ ನಾಲ್ಕರಂತೆ.. ಕೆಲವರು ಚೌಕಾಸಿ ಮಾಡಿ ರೂಪಾಯಿಗೆ ಐದು ಆರರಂತೆ ಖರೀದಿಸಿದ್ದೂ ಇದೆ. ಬೆಳ್ ಬೆಳಗ್ಗೆ ಎದ್ದು, ಮಧ್ಯಾಹ್ನದ ಹೊತ್ತಲ್ಲಿ ಬೆವರಿಳಿಸಿ ಹೆಕ್ಕಿದ ಹಣ್ಣುಗಳು ಕಡಿಮೆ ರೇಟಿಗೆ ಮಾರಾಟವಾದಾಗ ಸ್ವಲ್ಪ ನಿರಾಸೆಯಾಗುತ್ತಿದ್ದರೂ ಇನ್ವೆಸ್ಟ್’ಮೆಂಟ್ ಏನೂ ಇಲ್ಲವಲ್ಲಾ.. ಸಿಕ್ಕಿದ್ದು ಲಾಭವೆಂದು ಕಿಸೆಗಿಳಿಸಿಕೊಳ್ಳುತ್ತಿದ್ದೆ. ಆ ಮೂಲಕ ಜಾತ್ರೆಯ ಖರ್ಚಿಗೆ ಹಣ ಹೊಂದಿಸಿಕೊಳ್ಳುತ್ತಿದ್ದೆ.
ಜಾತ್ರೆಯ ಖರ್ಚಿಗೆ, ಪುಸ್ತಕದ ಖರ್ಚಿಗೆ ಅಂತ ಮತ್ತೊಂದು ಹಣದ ಮೂಲವಾಗಿ ಸಹಾಯ ಮಾಡ್ತಾ ಇದ್ದಿದ್ದು ಗೇರು ಬೀಜ! ಮನೆಯ ಪಕ್ಕವೇ ಇದ್ದ ಗುಡ್ಡೆಯಲ್ಲಿ ಹತ್ತಾರು ಗೇರುಬೀಜದ ಮರಗಳಿತ್ತು. ಆ ಮರಗಳನ್ನು ಸರಸರನೆ ಹತ್ತಿ, ಗೇರು ಬೀಜದ ಹಣ್ನನ್ನು ಕೊಕ್ಕೆಯಲ್ಲಿ ಸಿಕ್ಕಿಸಿ ಕೊಯ್ಯುತ್ತಿದ್ದ ಆ ಗಮ್ಮತ್ತೇ ಬೇರೆ! ಆವಾಗ ಕೆಜಿಗೆ ಮೂವತ್ತರಿಂದ ಮೂವತ್ತೈದು ರೂಪಾಯಿ ಸಿಗುತ್ತಿತ್ತು. ಬೀಜಕ್ಕೆ ರೇಟು ಮೂವತ್ತೈದು ಆಗಿದೆಯೆಂದರೆ ಜನ ಅಂಗಡಿಗಳ ಮುಂದೆ ಮುಗಿಬೀಳುತ್ತಿದ್ದರು. ಅಂತಾದ್ದರಲ್ಲಿ ಈಗ ರೇಟು ನೂರಾ ಮೂವತ್ತು ಇದೆಯಂತೆ.. ಈಗ ಹೆಂಗೋ ನಾನರಿಯೆ! ದೊಡ್ಡ ದೊಡ್ಡ ಮರಗಳನ್ನು ಹತ್ತಿ ಹಣ್ಣುಗಳನ್ನು ಕೊಯ್ಯುವುದು, ಅವುಗಳನ್ನು ಮನೆಗೆ ಹೊತ್ತು ತಂದು ಹಣ್ಣು ಮತ್ತು ಬೀಜವನ್ನು ಬೇರ್ಪಡಿಸುವುದು, ತೊಳೆದು ಒಣಗಲು ಹಾಕುವುದು, ಒಣಗಿದ ನಂತರ ಅಂಗಡಿಗಳಿಗೆ ಕೊಂಡು ಹೋಗಿ ಮಾರುವುದು.. ಒಂದರ್ಥದಲ್ಲಿ ಬೆವರಿಳಿಸುವ ಕೆಲಸವೇ ಆದರೂ ಕೊನೆಗೆ ಸಿಗುತ್ತಿದ್ದ ಹಣದ ಮುಖ ನೋಡುವಾಗ ಆ ಬೆವರೆಲ್ಲಾ ಆರಿ ಹೋಗುತ್ತಿತ್ತು. ಮಾವಿನ ಹಣ್ಣುಗಳಿಗೆ ಹೋಲಿಸಿದರೆ ಗೇರುಬೀಜಕ್ಕೆ ಜಾಸ್ತಿ ಹಣ ಸಿಗುತ್ತಿತ್ತು. ಒಟ್ಟಿನಲ್ಲಿ ಇವೆರಡರಿಂದ ಸಿಗುತ್ತಿದ್ದ ಹಣ ಜಾತ್ರೆ ಖರ್ಚಿಗೆ, ಪುಸ್ತಕದ ಬಾಬ್ತು, ಮತ್ತಿತರ ಸಣ್ಣಪುಟ್ಟ ಖರ್ಚಿನ ಬಾಬ್ತು ಬಳಕೆಯಾಗುತ್ತಿತ್ತು. ಆ ಮೂಲಕ ಪ್ರತಿಯೊಂದು ಖರ್ಚಿಗೂ ಅಪ್ಪನ ಹತ್ರ ಕೇಳ್ಬಾರ್ದು, ಸಾಧ್ಯವಾದದ್ದನ್ನೆಲ್ಲಾ ನಾನೇ ಹೊಂದಿಸಿಕೊಳ್ಳಬೇಕೆಂಬ ಮನೋಭಾವ ಆಗಲೇ ಬೆಳೆಯುತ್ತಿತ್ತು.
ದೊಡ್ಡ ರಜೆ ಎಂದಾಗ ನೆನಪಿಗೆ ಬರುವ ಇನ್ನೊಂದು ವಿಷಯ ವೇದಪಾಠ ಶಾಲೆ. ವಸಂತ ವೇದಪಾಠ ಶಾಲೆ ಅಂತ ಕರೆಯುತ್ತಾರೆ ಅದನ್ನು. ಬೇರೆಲ್ಲಾ ಸಹಪಾಠಿಗಳು ಅಜ್ಜಿಮನೆ, ನಂಟರಿಷ್ಟರ ಮನೆ ಅಂತ ಸುತ್ತಾಟದಲ್ಲಿ ತೊಡಗಿರುತ್ತಿದ್ದರೆ ನಾವು(ಬ್ರಾಹ್ಮಣ ಮಕ್ಕಳು) ಮಾತ್ರ ದೇವಾಲಯದಲ್ಲಿ ಕುಳಿತುಕೊಂಡು ಮಂತ್ರ ಉರು ಹೊಡೆಯುತ್ತಿದ್ದೆವು. ಆದರೂ ನಮಗೇನೂ ಬೇಸರವಿರುತ್ತಿರಲಿಲ್ಲ. ಯಾಕಂದ್ರೆ, ಮಂತ್ರ ಮಾತ್ರವಲ್ಲದೆ, ಶಾಲೆಯಲ್ಲಿ ಕಲಿಯಲು ಸಿಗದ ಕೆಲ ಬೇರೆ ವಿಷಯಗಳೂ ನಮಗೆ ವೇದಪಾಠದಲ್ಲಿ ಸಿಗುತ್ತಿತ್ತು. ಲಯಬದ್ಧವಾಗಿ ಮಂತ್ರೋಚ್ಛಾರ ಮಾಡುವುದೇ ಒಂದು ಖುಷಿಯಾದರೆ ಸಂಜೆಯ ಹೊತ್ತು ಎಲ್ಲರೂ ಸೇರಿ ಕ್ರಿಕೆಟ್, ಲಗೋರಿ ಆಡುತ್ತಿದ್ದುದು ಮತ್ತೊಂದು ಖುಷಿ. ರಾಗಿ ಮಾಲ್ಟು, ಎರಡು ಮಾರಿ ಬಿಸ್ಕೇಟು ತಿಂದು ಮನೆಗೆ ಬಂದರೆ ಅದು ಬೇರೆಯದೇ ಖುಷಿ. ಅಲ್ಲಿ ಮಂತ್ರ ಮಾತ್ರ ಕಲಿತಿದ್ದಲ್ಲ. ಆ ಶಿಬಿರದಲ್ಲಿ ಶೈಕ್ಷಣಿಕವಾಗಿ ಬೇರೆ ಬೇರೆ ಶಾಲೆಯಲ್ಲಿ ಕಲಿಯುತ್ತಿದ್ದ ಮಕ್ಕಳಿರುತ್ತಿದ್ದರು. ಹೆಚ್ಚಿನವರು ಖಾಸಗಿ ಇಂಗ್ಲೀಷು ಮೀಡಿಯಂ ಶಾಲೆಗೆ ಹೋಗುವವರಾದರೆ ನನ್ನಂತಹ ಕೆಲವೇ ಕೆಲವರು ಸರಕಾರಿ ಶಾಲೆಗೆ ಹೋಗುತ್ತಿದ್ದವರು. ಇಂಗ್ಲೀಷು ಮೀಡಿಯಂಗೆ ಹೋಗುತ್ತಿದ್ದ ಕೆಲವರಿಗೆ ನನ್ನಂತವರೆಂದರೆ ತಾತ್ಸಾರ, ತಾವೇ ಎಲ್ಲ ಬಲ್ಲವರು, ಸರಕಾರಿ ಶಾಲೆಗೆ ಹೋಗುವವರು ಏನಕ್ಕೂ ಲಾಯಕ್ಕಲ್ಲಾ ಎನ್ನುವ ಮನೋಭಾವ.. ಬ್ರಾಹ್ಮಣರಲ್ಲೂ ಮೇಲು ಕೀಳೆಂಬ ಪಿಡುಗು ಇದೆ ಎನ್ನುವ ಕಹಿಘಟನೆಗಳನ್ನು ಮೊದಲಾಗಿ ತೋರಿಸಿಕೊಟ್ಟಿದ್ದೇ ವೇದಪಾಠ ಶಾಲೆ. ಅದೇನೇ ಇದ್ದರೂ.. ಇಪ್ಪತ್ತು ಇಪ್ಪತ್ತೈದು ದಿನಗಳ ಕಾಲ ನಡೆಯುತ್ತಿದ್ದ ಆ ಮಂತ್ರ ಶಿಬಿರಕ್ಕೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು.
ಇನ್ನೊಂದು ಸ್ವಾರಸ್ಯಕರ ಘಟನೆಯಿದೆ. ಮಾರ್ಚಿನಲ್ಲಿ ಪರೀಕ್ಷೆಗಳು ಮುಗಿದ ನಂತರ ಹೇಗೂ ತರಗತಿಗಳಿರುವುದಿಲ್ಲವಲ್ಲ, ಕ್ಲಾಸಿಗೆ ಬರುತ್ತಿದ್ದ ಟೀಚರ್ಸ್ ಒಂದಲ್ಲಾ ಒಂದು ಇಂಟರೆಸ್ಟಿಂಗ್ ವಿಶಃಅಯಗಳನ್ನು ಹೇಳುತ್ತಿದ್ದರು. ಒಮ್ಮೆ , ಮೂರನೇ ತರಗತಿಯಲ್ಲಿದ್ದಾಗ ನನ್ನ ಟೀಚರ್ ಒಬ್ಬರು “ಇರುವೆಗಳನ್ನು ತಿಂದರೆ ನಮ್ಮ ಕಣ್ಣಿನ ದೃಷ್ಠಿ ಹೆಚ್ಚುವುದು” ಅಂತ ಹೇಳಿದ್ದರು. ಅವರು ಯಾವ ದೃಷ್ಠಿಯಲ್ಲಿ ಹೇಳಿದ್ದೋ ನನಗೆ ಇವತ್ತಿಗೂ ಗೊತ್ತಿಲ್ಲ. ಆದರೆ….. ಶಾಲೆ ನನ್ನ ಮನೆಯಿಂದ ಅನತಿ ದೂರದಲ್ಲಿದ್ದರೂ ಉಳಿದ ಸ್ನೇಹಿತರು ಬುತ್ತಿ ತರುತ್ತಿದ್ದರೆಂಬ ಕಾರಣಕ್ಕೆ ನಾನೂ ಸಹ ಬುತ್ತಿ ಕೊಂಡೊಯ್ಯುತ್ತಿದ್ದೆ. ಆ ದಿನೆ ಟೀಚರ್ ಹಾಗೆ ಹೇಳಿದರಲ್ಲ, ನಾನೇನು ಮಾಡಿದೆ ಗೊತ್ತೆ?? ಹೇಳಿದರೆ ನೀವು ನಕ್ಕು ಬಿಡುತ್ತೀರ.. ಬಿರುಕು ಬಿಟ್ಟ ನೆಲದಿಂದ ಮೆರವಣಿಗೆ ಹೊರಟಿದ್ದ ಅಷ್ಟೂ ಇರುವೆಗಳನ್ನು ನನ್ನ ಬುತ್ತಿಯೊಳಗಿದ್ದ ಅನ್ನ ಸಾಂಬಾರಿನ ಜೊತೆಗೆ ಬೆರೆಸಿ ಒಂದೇ ಏಟಿಗೆ ತಿಂದು ಮುಗಿಸಿದ್ದೆ!!
ಆದರೆ ಇವತ್ತು…? ಜೀವನ ಯಾಂತ್ರಿಕವಾಗಿ ಸಾಗುತ್ತಿದೆ. ನಮ್ಮ ನಮ್ಮ ಪ್ರೊಫೆಶನಲ್ ಲೈಫಿನಲ್ಲಿ ನಾವೆಲ್ಲರೂ ಬ್ಯುಸಿಯಾಗಿದ್ದೇವೆ. ಕೆಲಸ, ಅದರಲ್ಲಿನ ಟೆನ್ಷನ್ನು, ಮುಂತಾದವುಗಳನ್ನೆಲ್ಲಾ ನಿವಾಳಿಸಿಕೊಳ್ಳುವುದರಲ್ಲೇ ಇವತ್ತಿನ ದಿನಮಾನಗಳು ಕಳೆಯುತ್ತಿವೆ. ಅಲ್ಲೋ ಇಲ್ಲೋ ಕೆಲವು ಕ್ಯಾಶುವಲ್ ಲೀವ್, ಸಿಕ್ ಲೀವ್, ಅರ್ನ್’ಡ್ ಲೀವ್ ಮುಂತಾದವೆಲ್ಲಾ ಸಿಕ್ಕರೂ ದೊಡ್ಡರಜೆಯೆನ್ನುವುದು ಇನ್ಯಾವತ್ತೂ ಸಿಗದು. ಪ್ರಾಕೃತಿಕ ಬದಲಾವಣೆಯ ದುಷ್ಪರಿಣಾಮಗಳಿಂದಾಗಿ ಆವತ್ತಿನಂತೆ ಇವತ್ತು ಮಾವಿನಹಣ್ಣುಗಳೇ ಇಲ್ಲ. ಅಲ್ಲೋ ಇಲ್ಲೋ ಇದ್ದರೂ ಮೊದಲಿನಂತೆ ಹೆಕ್ಕಲು ನಮ್ಮ ಪ್ರೆಸ್ಟೀಜು ಬಿಡುತ್ತಿಲ್ಲ. ಗೇರುಬೀಜವಂತೂ ಬೇಡವೇ ಬೇಡ. ಆ ಅಡಕೆ ತೋಟ.. ಬೀಜದ ಗುಡ್ಡ.. ಮಾವಿನ ಮರ.. ಎಲ್ಲವೂ ಮೊದಲಿನಂತಿದ್ದರೂ ಕೇಳುವವರು ಯಾರೂ ಇಲ್ಲ. ಇವತ್ತಿನ ಹಳ್ಳಿಯ ಸುಮಾರಷ್ಟು ಮಕ್ಕಳೂ ಮೊಬೈಲು, ವಾಟ್ಸಾಪು, ಫೇಸ್ಬುಕ್ಕು, ಐಪಿಲ್ ಮುಂತಾದವುಗಳಲ್ಲೇ ಮಜಾ ಉಡಾಯಿಸುತ್ತಿದ್ದಾರೆ. ಅದನ್ನೇ ಪ್ರಪಂಚ ಅಂತ ತಿಳಿದುಕೊಂಡಿರುವ ಆ ಮಕ್ಕಳಿಗೆ ಅದರಾಚೆಗೂ ವಿಶಾಲವಾದ ಅದ್ಭುತ ಪ್ರಪಂಚವೊಂದಿದೆಯೆನ್ನುವುದು ಗೊತ್ತಿಲ್ಲ. ಗೊತ್ತಿದ್ದರೂ ಅದನ್ನನುಭವಿಸುವುದು ಹೇಗಂತ ಮೊದಲೇ ಗೊತ್ತಿಲ್ಲ. ಇನ್ನು ಆ ಹಳ್ಳಿ ಜೀವನದ ಗಮ್ಮತ್ತು ಅವರಿಗೆಲ್ಲಿಂದ ಅರಿವಾಗಬೇಕು? ಇದನ್ನೆಲ್ಲಾ ನೋಡುವಾಗ ಆ ಬಾಲ್ಯದ ದಿನಗಳು ನೆನಪಾಗುತ್ತಿದೆ. ಗಲ್ಲಿಯ ಮಕ್ಕಳೆಲ್ಲಾ ಸೇರಿ ಕ್ರಿಕೇಟು, ಲಗೋರಿ, ಅಪ್ಪ-ಇಪ್ಪ ಆಡುತ್ತಿದ್ದುದು, ಅಡಕೆ ಹಾಳೆಯ ಮೇಲೆ ಕುಳಿತು ಆಡುತ್ತಿದ್ದ ಜಾರುಬಂಡಿ, ಸೈಕಲ್ ಟಯರೋ ಇಲ್ಲಾ ಕುಕ್ಕರಿನ ಬೆಲ್ಟನ್ನೋ ಬಳಸಿ ಆಡುತ್ತಿದ್ದ ಟಯರು ಬಂಡಿ, ಮಳೆಗಾಲದಲ್ಲಿ ಮನೆಯ ಪಕ್ಕದ ತೋಡಿನಲ್ಲಿ ಮೀನು ಹಿಡಿಯುತ್ತಿದ್ದುದು… ಅವೆಲ್ಲಾ ಎಷ್ಟು ಸುಂದರವಾಗಿತ್ತು? ಮತ್ತೆ ಅದು ಬರಬಾರದೇ ಆ ದಿನಗಳು? ಅಂತ ಮನಸ್ಸು ಪರಿತಪಿಸುತ್ತಿದೆ. ನಿಜ ಹೇಳಬೇಕಾದ್ರೆ ಆವತ್ತಿನ ಜೀವನದಲ್ಲಿ ಹಣ ಇರಲಿಲ್ಲ ಆದ್ರೆ ಬೇಕಾಬಿಟ್ಟಿ ಮಜ ಇತ್ತು. ಇವತ್ತು ಹಣ ಇದೆ, ಎಲ್ಲಾ ಇದೆ.. ಆದ್ರೆ ಆವತ್ತು ಇದ್ದಂತಹಾ ಮಜ ಇಲ್ಲ!!
ಅಂದ ಹಾಗೆ ಇವತ್ತು ರಾಜ್ಯಾದ್ಯಂತ ಶಾಲೆಗಳು ಪುನರಾರಂಭವಾಗ್ತಾ ಇದೆ. ಮಕ್ಕಳೆಲ್ಲಾ ಮಣಭಾರದ ಬ್ಯಾಗನ್ನು ಹೊತ್ತುಕೊಂಡು ಶಾಲೆಗೆ ಹೊರಡುತ್ತಿದ್ದರೆ ನಾವುಗಳು ‘ಮತ್ತೆ ಸೋಮವಾರ…’ ಅಂತ ಗೊಣಗಿಕೊಂಡು ಕೆಲಸಕ್ಕೆ ಹೊರಡಬೇಕಿದೆ..!
Facebook ಕಾಮೆಂಟ್ಸ್