X

ಫಲಿತಾಂಶದ ಲೆಕ್ಕಾಚಾರಗಳು

ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಫಲಿತಾಂಶ ಹೊರಬಿದ್ದಿದೆ. ನಿರೀಕ್ಷೆಯಂತೆ ಈ ಬಾರಿಯೂ ‘ಫೀಮೆಲ್’ಗೈ’ ಸಾಧಿಸಿದ್ದಾರೆ. ಪ್ರತೀ ಬಾರಿಯೂ ಹುಡುಗಿಯರೇ ಮೇಲುಗೈ ಸಾಧಿಸುತ್ತಿರುವುದು ಹುಡುಗರ ಪಾಲಿಗೆ ನುಂಗಲಾರದ ತುತ್ತು. ಫಲಿತಾಂಶದ ಜೊತೆ ಜೊತೆಗೇ ಪ್ರಾದೇಶಿಕ ಹಣಾಹಣಿಯ ವಾದ ವಿವಾದಗಳೂ ಈ ಸಂದರ್ಭದಲ್ಲಿ ತೆರೆದುಕೊಳ್ಳುವುದೂ ಸಹಜ. ಕೆಲವು ಜಿಲ್ಲೆಗಳಂತೂ ನಿರಂತರವಾಗಿ ಕಳಪೆ ಫಲಿತಾಂಶವನ್ನು ದಾಖಲಿಸುತ್ತಿದ್ದು ಇದು ನಮ್ಮ ಮೇಲಿನ ಶೋಷಣೆ ಎನ್ನುವುದು ಅವರ ವಾದವಾಗಿರಲಿಕ್ಕೂ ಸಾಕು. ಕರಾವಳಿ ಪ್ರದೇಶದ ಎಲ್ಲಾ ಜಿಲ್ಲೆಗಳು ಉತ್ತಮ ಫಲಿತಾಂಶವನ್ನು ದಾಖಲಿಸುವ ಮೂಲಕ ಬುದ್ಧಿವಂತರ ಜಿಲ್ಲೆ ಎಂಬ ತಮ್ಮ ಹೆಗ್ಗಳಿಕೆಯನ್ನು ಉಳಿಸಿಕೊಂಡಂತಾಯಿತು. ಇನ್ನು ಈ ಬಾರಿಯ ಒಟ್ಟಾರೆ ಶೇಕಡಾ ಫಲಿತಾಂಶದಲ್ಲಿ ಸ್ವಲ್ಪ ಪ್ರಮಾಣದ ಇಳಿಕೆಯಾಗಿರುವುದರ ಹಿಂದೆ ಅಂಬಾನಿಯ ಜೀಯೋ ಸಿಮ್’ನ ಉಚಿತ ಕೂಡುಗೆಗಳ ಪಾತ್ರ ಮಹತ್ತರವಾದುದು ಎಂದು ಖಚಿತವಾಗಿ ಹೇಳಬಹುದು. ಇದೇ ಕಾರಣಕ್ಕೆ ಕಳಪೆ ಫಲಿತಾಂಶ ಪಡೆದು ಕಳಾಹೀನರಾದ ಕೆಲವು ವಿದ್ಯಾರ್ಥಿಗಳಿಗೆ ಮನೆಯವರು ಆ ಸಿಮ್’ನ್ನು ಕಿತ್ತೆಸೆಯುವ ಪ್ರಾಯಶ್ಚಿತ್ತದ ಕ್ರಮಕ್ಕೆ ಮುಂದಾಗಿರುವುದು ಸುಳ್ಳಲ್ಲ.

ರಿಸಲ್ಟ್ ಯಾವಾಗಲೂ ಕೆಲವರ ಪಾಲಿಗೆ ಇನ್ಸಲ್ಟಿಂಗ್ ಆಗಿದ್ದರೆ ಇನ್ನು ಕೆಲವರಿಗೆ ಎಕ್ಸೈಟಿಂಗ್ ಆಗಿರುತ್ತದೆ. “ಛೇ! ಇನ್ನೊಂದೆರಡು ಮಾರ್ಕ್ ಬಂದಿದ್ದರೆ ಪಾಸ್ ಆಗುತ್ತಿದ್ದೆ ಎಂದು ಹಣೆ ಚಚ್ಚಿಕೊಳ್ಳುವವರಿರುವಂತೆ, 625 ಕ್ಕೆ 625 ಅಂಕಗಳನ್ನು ಗಳಿಸಿದ ಹೊರತಾಗಿಯೂ, “ಅಯ್ಯೋ ಇನ್ನೂ ಒಂದಷ್ಟು ಅಂಕಗಳಿದ್ದರೆ ಅವುಗಳನ್ನೂ ತಮ್ಮ ಅಂಕಪಟ್ಟಿಯಲ್ಲೇ ಚಾಪಿಸಿಕೊಳ್ಳುವಂತೆ ಮಾಡಬಹುದಿತ್ತು” ಎಂದು ಕೈ ಕೈ ಹಿಸುಕಿಕೊಳ್ಳುವ ಮಂದಿಗಳೂ ಇದ್ದಾರೆ. ಒಟ್ಟಾರೆ ಈ ಅಂಕದ ಮಾಯೆ ಅಷ್ಟು ಸುಲಭಕ್ಕೆ ಅಂಕೆಗೆ ಸಿಗುವಂತದ್ದಲ್ಲ.

ಇನ್ನು ಈ ಫಲಿತಾಂಶದ ಕ್ರೆಡಿಟ್’ನ ಗರಿಯನ್ನು ತಮ್ಮ ಮುಡಿಗೇರಿಸಿಕೊಳ್ಳಲು ಕಾತರರಾಗಿರುವವರ ಸಂಖ್ಯೆಯೂ ಬಲು ದೊಡ್ಡದೇ. ನಮ್ಮ ಮಕ್ಕಳು ಟಾಪರ್ ಎಂದು ತಮ್ಮ ಅಕ್ಕ-ಪಕ್ಕ ಹಾಗೂ ಬಂಧು ಬಾಂಧವರಲ್ಲಿ ಹೇಳಿಕೊಂಡು ಬೀಗುವ ಪೋಷಕರ ಭಾಗ್ಯಕ್ಕೆ ಎಣೆಯಿಲ್ಲ. ಅದು ಸಾಮಾನ್ಯ ಕೂಡಾ. ಆದರಿದು ಅಷ್ಟಕ್ಕೇ ನಿಲ್ಲದು. ನಮ್ಮಲ್ಲಿ ಓದಿದ್ದರಿಂದಲೇ ಇದು ಸಾಧ್ಯವಾಯಿತು ಎಂದು ಸಾರುವುದರೊಂದಿಗೆ ಮುಂದಿನ ಅವಧಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವ ಉಮ್ಮೇದಿ ಖಾಸಗಿ ವಿದ್ಯಾ ಸಂಸ್ಥೆಗಳದ್ದು. ಇನ್ನು ಕೋಚಿಂಗ್ ಕ್ಲಾಸ್’ಗಳಂತೂ ನಮ್ಮಲ್ಲಿ ಟ್ಯೂಷನ್ ಪಡೆದಿದ್ದರಿಂದಲೇ ಇಂಥ ಫಲಿತಾಂಶ ದಾಖಲಾಗಿದೆ ಎನ್ನುತ್ತಾ ಜನರನ್ನು ಯಾಮಾರಿಸುವ ಹುನ್ನಾರದಲ್ಲಿ ತೊಡಗಿಸಿಕೊಳ್ಳುತ್ತವೆ. ಇದಕ್ಕೆಂದೇ ದೊಡ್ಡ ದೊಡ್ಡ ಪ್ಲೆಕ್ಸ್’ಗಳು, ಪತ್ರಿಕೆಗಳ ಮುಖಪುಟದ ಜಾಹೀರಾತುಗಳು ಎಲ್ಲೆಂದರಲ್ಲಿ ರಾರಾಜಿಸುವ ಮೂಲಕ ತಮ್ಮ ವ್ಯವಹಾರವನ್ನು ಕುದುರಿಸಿಕೊಳ್ಳಲು ಈ ಫಲಿತಾಂಶ ಸಹಕಾರಿ. ಪ್ರತಿಯೊಂದು ಫಲಿತಾಂಶದ ಹಿಂದೆಯೂ ಇಂಥ ಅಸಂಖ್ಯಾತ ಲೆಕ್ಕಾಚಾರಗಳು ಅಡಗಿರುತ್ತವೆ.

ಫಲಿತಾಂಶೋತ್ತರ ಬೆಳವಣಿಗೆಗಳಂತೂ ಇನ್ನೂ ಸ್ವಾರಸ್ಯಕರ. ಫಲಿತಾಂಶದ ಬಗ್ಗೆ ವಿದ್ಯಾರ್ಥಿಗಳಿಗಿಂತಲೂ ಪೋಷಕರೇ ಹೆಚ್ಚು ತಲೆಕೆಡಿಸಿಕೊಳ್ಳುವುದು ಇಂದಿನ ಫ್ಯಾಷನ್ ಆಗಿಬಿಟ್ಟಿದೆ. ಆ ಮಟ್ಟಿಗೆ ಎಲ್ಲವನ್ನೂ ತಮ್ಮ ಸುಪರ್ದಿಗೆ ತೆಗೆದುಕೊಂಡು ಮಕ್ಕಳನ್ನು ಅವಲಂಬಿತರನ್ನಾಗಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಆಸಕ್ತಿ ಅಭಿರುಚಿಗಳಿಗೆ ಯಾವ ಕಿಮ್ಮತ್ತೂ ಇಲ್ಲ. ತಮ್ಮ ಮಕ್ಕಳು ಪಡೆದ ಅಂಕಗಳ ಆಧಾರದಲ್ಲಿ ಅವರ ಭವಿಷ್ಯವನ್ನು ಒಮ್ಮಿಂದೊಮ್ಮೆಗೇ ನಿರ್ಧರಿಸಿ ಬಿಡುವ ತವಕ ಪೋಷಕರದ್ದು. ಕಡಿಮೆ ಬಿದ್ದ ಅಂಕಕ್ಕೆ ಸರಿಯಾಗಿ ಹಣದ ಗಂಟನ್ನು ನೀಡಿಯಾದರೂ ಸರಿಯೇ ಪ್ರತಿಷ್ಠಿತ ಕಾಲೇಜಿನಲ್ಲಿ ಅಡ್ಮಿಷನ್ ಮಾಡಿಸಿಬಿಟ್ಟರೆ ಸಾಕೆನ್ನುವ ತೀರದ ಧಾವಂತ. ಡಾಕ್ಟರ್, ಇಂಜಿನಿಯರ್’ಗಳನ್ನು ರೂಪಿಸುವ ಸುದೀರ್ಘ ಪ್ರಕ್ರಿಯೆಗೆ ನಾಂದಿ ಈ ರಿಸಲ್ಟ್. ತೀವ್ರ ಪೈಪೋಟಿಯ ಹಣಾಹಣಿಗೆ ತಮ್ಮ ಮಕ್ಕಳನ್ನು ಸಜ್ಜುಗೊಳಿಸುವ ಕೆಲಸ ಈ ಫಲಿತಾಂಶದ ನಂತರವೇ ಹೆಚ್ಚು ಬಿರುಸನ್ನು ಪಡೆದುಕೊಳ್ಳುವುದು ಎನ್ನುವುದನ್ನಂತೂ ಒಪ್ಪಲೇಬೇಕು.

ಓವರ್ ಡೋಸ್: ಈಗೀಗ ವಿದ್ಯಾರ್ಥಿಗಳ ಸಾಧನೆಗೆ ಪೋಷಕರಿಗಿಂತಲೂ ಹೆಚ್ಚು ವಿದ್ಯಾಸಂಸ್ಥೆಗಳು ಹಾಗೂ ಟ್ಯುಟೋರಿಯಲ್’ಗಳ ಮಾಲಕರೇ ಖುಷಿಪಡುತ್ತಾರೆ.

Facebook ಕಾಮೆಂಟ್ಸ್

Sandesh H Naik: ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.
Related Post