X
    Categories: ಕಥೆ

‘ಅರ್ಥ’ ಕಳೆದುಕೊಂಡವರು – 2

‘ಅರ್ಥ’ ಕಳೆದುಕೊಂಡವರು – 1        

ಗಂಗಪ್ಪನಿಗೆ ಸಮಾರಂಭದಲ್ಲಿ ಮಾಡಿದ ಭೋಜನದ ಪರಿಮಳ ಮೂಗಿನವರೆಗೆ ತಾಕಿತ್ತು. ಹೇಗಿತ್ತು ಈ ಜಾಗ, ಈಗ ಹೇಗಾಗಿದೆ. ಇದರ ಹಿಂದೆ ತಮ್ಮೆಲ್ಲರ ಪರಿಶ್ರಮವಿದೆ. ಅದಕ್ಕೆ ದುಡ್ಡು ಕಾಸು ಸಿಕ್ಕಿದ್ದನ್ನು ಅಲ್ಲಗಳೆಯುವಂತಿಲ್ಲ. ಆದರೆ ಹಿಂದೆ ತಾನು ಎಷ್ಟೇ ಮನೆ ಗಾರೆ ಕೆಲಸ ಮಾಡಿದ್ದರೂ ಇಲ್ಲಾದ ಅನುಭವ ಬೇರೆಯದೇ ಇತ್ತು. ದಿನಾಲೂ ಯಜಮಾನರು ಬೆಳಿಗ್ಗೆ ಬಂದು ವಾಚ್ ಮಾಡಿ ಹೋಗುತ್ತಿದ್ದರು. ಒಬ್ಬ ಮ್ಯಾನೇಜರ್ ಸದಾ ಇಲ್ಲಿದ್ದು ಕೆಲಸಗಾರರನ್ನು ಗಮನಿಸುತ್ತಿರುತ್ತಿದ್ದ. ಅಲ್ಲದೇ ಯಜಮಾನರ ಪತ್ನಿ ಇಲ್ಲೇ ನಿಂತು ಮೂಲೆಮೂಲೆ ನೋಡಿ ತಿದ್ದುತ್ತಿದ್ದರು. ಯಾವುದೇ ನೆವ ಹೇಳುವಂತಿರಲಿಲ್ಲ. ಎಲ್ಲದಕ್ಕೂ ನಾವು ಗೋಣು ಆಡಿಸಬೇಕಷ್ಟೆ. ತನ್ನನಂತೂ ಬಾಯಿ ತುಂಬಾ ಹೊಗಳುತ್ತಿದ್ದಳು.

“ನಿನಗೆ ಗಾರೆ ಗಂಗಪ್ಪ ಎನ್ನುವ ಹೆಸರು ಸರಿಯಾಗಿದೆ. ಚೆನ್ನಾಗಿ ಕೆಲಸ ಮಾಡುತ್ತಿಯಾ” ಎಂದೆಲ್ಲ ಹೊಗಳಿದರೆ ತನಗೂ ಖುಷಿ ಕೊಡುತ್ತಿತ್ತು. ಹಾಗಾಗಿಯೇ ಏನೋ ಆಕೆ ಯಾವ ರೀತಿ ಹೇಳಿದರೂ ಅದರಂತೆ ಮಾಡುತ್ತಿದ್ದೆ. ಎಷ್ಟು ಅಂಕುಡೊಂಕಿನ ಗೋಡೆಯಾದರೂ ತಾಳ್ಮೆ ಕಳೆದುಕೊಳ್ಳದೇ ಮಾಡುತ್ತಿದ್ದೆ. ಇನ್ನಷ್ಟು ಹೊಗಳಲಿ ಎನ್ನುವ ಒಳ ಆಸೆ. ಆದರೆ ಈ ಮನೆ ಕಟ್ಟುವಾಗಿನಿಂದಲೂ ಶುರುವಾದ ಕತ್ತು, ಬೆನ್ನಿನ ನೋವು ಇಂದಿಗೂ ಹೋಗಿಲ್ಲ.

ಗಂಗಪ್ಪ ಇನೊಮ್ಮೆ ನೋಯುತ್ತಿದ್ದ ಕತ್ತನ್ನು ಸವರಿಕೊಂಡ. ಅಕ್ಕಪಕ್ಕ ತಿರುಗಿಸಿ ನೆಟುಗೆ ಮುರಿದ. ಕಾಲು ಬೇರೆ ನೀಡಿ ನೀಡಿ ಕೂತು ನೋಯತೊಡಗಿತ್ತು. ಹೊಟ್ಟೆಯಲ್ಲಿ ಹಸಿವು ಬೇರೆ ಕಾಣ ಸಿಕೊಂಡಿತ್ತು. ಯಜಮಾನರು ಹೊರಬಂದು ತಾನು ಮಾತಾಡಿದ ಬಳಿಕವೇ ಊಟಕ್ಕೆ ಹೋಗುವದು ಒಳ್ಳೆಯದು. ‘ಅಲ್ಲಾ, ತಾನು ಇಲ್ಲಿಗೆ ಬಂದದ್ದು ಸರೀನಾ?’ ತನ್ನೊಳಗೇ ಒಮ್ಮೆ ಪ್ರಶ್ನಿಸಿಕೊಂಡು ಒಮ್ಮೆ ತಲೆಕೊಡವಿಕೊಂಡ. ‘ತನಗೆ ಈಗ ಏನಾದರೂ ಹಣ ಸಿಗುವದಿದ್ದರೆ ಇಲ್ಲೆ. ಸರಿಯೋ ತಪ್ಪೊ, ಅದಲ್ಲದೆ ಈ ಮಹಲ್ ಕಟ್ಟಿ ತುಂಬಾ ದಿನಗಳೇನೂ ಆಗಿಲ್ಲ. ಹಾಗಾಗಿ ತನ್ನ ಪರಿಚಯ ಅವರಿಗೆ ಇದ್ದೇ ಇರುತ್ತದೆ. ಒಳ್ಳೆ ಮನುಷ್ಯ ಈ ಮಾಲೀಕ’ ಎಂದು ತನ್ನಲ್ಲೇ ಸಮಾಧಾನ ಹೇಳಿಕೊಂಡು ನೋಯುತ್ತಿರುವ ಕಾಲನ್ನು ಎತ್ತಿ ಕತ್ತು ಉದ್ದ ಮಾಡಿ ಬಂಗಲೆ ಕಡೆಗೆ ನೋಡಿದ. ಊಟದ ಸಮಯ. ಎಲ್ಲರೂ ಊಟದ ಚಪ್ಪರಕ್ಕೆ ಹೋಗಿ ಊಟ ಮಾಡುತ್ತಿದ್ದರು.

ಅಷ್ಟರಲ್ಲೆ ಬರ್ರೆಂದು ಒಂದು ಕಪ್ಪು ಕಾರು ಅವನ ಪಕ್ಕದಲ್ಲೇ ಹಾದು ಹೋಯ್ತು. ‘ಓ! ಇಂಜಿನಿಯರ್ ಸಾಹೇಬರು’ ಎಂದು ಮಾತನಾಡಿಸಲಿಕ್ಕೆ ಗಡಬಡಿಸಿ ಎದ್ದ ಗಂಗಪ್ಪ. ಅವರಿಗೆ ಇವನು ಕಾಣಲಿಲ್ಲವೇನೋ. ತಮ್ಮ ಪತ್ನಿ, ಮಗಳ ಜೊತೆ ಮಹಲ್ ಕಡೆ ಹೆಜ್ಜೆ ಹಾಕಿ ನಡೆದೇಬಿಟ್ಟರು. ‘ಓ! ಇವರಿಗೆಲ್ಲ ಆಹ್ವಾನವಿದೆ’ ಎಂದು ಮನಸ್ಸಿನಲ್ಲೇ ಹೇಳಿಕೊಳ್ಳುತ್ತಾ ಪುನಃ ಮರದ ತುಂಡಿನ ಮೇಲೆ ಕೂತ. ಯಾಕೋ ತಾನೊಬ್ಬ ಅನಾಥನಾಗಿರುವಂತೆ ಅನ್ನಿಸಿತು. ಈ ಮಹಾನಗರದಲ್ಲಿ ಸದಾ ಜನಜಂಗುಳಿ. ಆದರೂ ಒಂಟಿತನ ಸದಾ ಬೆಂಬಿಡದೆ ಗಂಗಪ್ಪನನ್ನು ಕಾಡುತ್ತಿತ್ತು. ಊರಿನಿಂದ ಕುಟುಂಬವನ್ನು ಕರೆತರೋಣವೆಂದರೆ ಇಲ್ಲಿನ ಖರ್ಚುವೆಚ್ಚವನ್ನು ತನ್ನೊಬ್ಬನ ದುಡಿಮೆಯಲ್ಲಿ ಸರಿತೂಗಿಸುವದು ಕಷ್ಟದ ಮಾತು. ಅಪ್ಪನ ಆರೋಗ್ಯ, ಮಕ್ಕಳ ಶಾಲೆ; ಗಂಗಪ್ಪ ನಿಟ್ಟಿಸಿರು ಬಿಟ್ಟು ಕಾಲು ಚಾಚಿದ. ಹೆಂಡತಿಯ ನೆನಪು ಬಂತು. ಈ ವಯಸ್ಸಿನಲ್ಲಿ ಅವಳೂ ಬಳಿ ಇದ್ದರೆ ಕೆಲಸ ಮಾಡುವ ಹುಮ್ಮಸ್ಸು ಇರುತ್ತಿತ್ತು. ಕೆಲಸ ಮಾಡುವಷ್ಟು ಹೊತ್ತು ಜನರೂ ಸಿಗುತ್ತಾರೆ, ಉಳಿದ ವೇಳೆ ತನ್ನೂರ ಕಡೆಯವರು ಸಿಕ್ಕರೆ ಎನೋ ಸಂತೋಷ.

ಮಹಲ್ ಕಡೆಯೇ ಒಂದೇ ಸಮನೇ ನೋಡತೊಡಗಿದ. ಎಲ್ಲವೂ ಬಂಗಲೆ ಕಟ್ಟಬಹುದಾದ ಸೈಟುಗಳೇ ಆಗಿದ್ದು ಖಾಲಿಯಾಗಿದ್ದವು. ಬಹುಷಃ ಇನ್ನೊಮ್ಮೆ ಇದೇ ಏರಿಯಾದಲ್ಲ ಕೆಲಸ ಮಾಡಬಹುದು ಎನ್ನುತ್ತಾ ಒಮ್ಮೆ ಹಣೆಮುಟ್ಟಿಕೊಂಡು ತನ್ನಲ್ಲೇ ಹೇಳಿಕೊಂಡ ‘ಆ ಬ್ರಹ್ಮ ತುತ್ತನ್ನು ಎಲ್ಲಿ ಬರೆದಿಡುತ್ತಾನೋ.’ ಕೈಯನ್ನು ಉಜ್ಜಿಕೊಂಡು ಬಂದ ಬೇಸರ ನೀಗಿಕೊಳ್ಳಲು ಪ್ರಯತ್ನಿಸುತ್ತಾ ಮಹಲ್ ಕಡೆ ಮಖ ಮಾಡಿ ಕೂತ.

ಈ ಮನೆ ಕಟ್ಟುವಾಗಿನ ದಿನಗಳು ನೆನಪಾದವು. ‘ವಾಚ್‍ಮನ್‍ನ ಪತ್ನಿ ಕಮಲಾ ಸ್ನಾನ ಮಾಡಲಿಕ್ಕೆ ಸರಿಯಾದ ಜಾಗವಿಲ್ಲದೇ, ಇರುವ ಜಾಗದಲ್ಲೇ ತನ್ನ ಕೆಲಸ ಪೂರೈಸುತ್ತಿದ್ದಳು. ಆ ವೇಳೆಗೆ ಕೆಲಬಾರಿ ಗಂಡಸರ ದೃಷ್ಟಿಗೂ ಸಿಕ್ಕಿಬಿಡುವ ಸಂಭವವಿತ್ತು. ಒಮ್ಮೆ ಆಕೆಯನ್ನೇ ಕದ್ದು ನೋಡುತ್ತಿದ್ದ ಚಂದ್ರುವನ್ನು ವಾಚ್‍ಮನ್  ಹಿಡಿದು ಝಾಡಿಸಿದ್ದ. ಆದರೂ ಆಗೊಮ್ಮೆ ಈಗೊಮ್ಮೆ ಅವನ ಚೇಷ್ಟೆಯ ಕಣ್ಣು ಅವಳನ್ನು ಹಿಂಬಾಲಿಸುತ್ತಿತ್ತು.’   

‘ಈ ಮನೆ ಕಟ್ಟುವಾಗಲೆ ಮೋಹನನ ಕೈಕೆಳಗೆ ಕೆಲಸ ಮಾಡುವ ಒಬ್ಬ ಹುಡುಗ, ಒಹ್! ಹೆಸರೇ ಮರೆತು ಹೋಗುತ್ತದೆ, ಸಂಜು, ಹಾಂ ಸಂಜು ಅವನ ಕಣ ್ಣಗೆ ಕಲ್ಲಿನ ಚೂರೊಂದು ಹೋಗಿ ಒಂದು ಕಣ್ಣು ಆಪರೇಶನ್ ಆಯ್ತು. ಆದರೂ ದೃಷ್ಟಿ ಬರಲೇ ಇಲ್ಲ. ಆಪರೇಶನ್ನಿಗೆಂದು ಯಜಮಾನರು ಇಪ್ಪತ್ತು ಸಾವಿರ ಕೊಟ್ಟರಲ್ಲ, ಮೋಹನ ಜಗಳ ತೆಗೆದ. ಆದರೂ ಜಗ್ಗಲಿಲ್ಲ. ಕೊನೆಗೆ ಮೋಹನ ಬಿಡಲಿಲ್ಲವಾದ್ದರಿಂದ ಇನ್ನೊಂದೈದು ಸಾವಿರ ಹೆಚ್ಚಿಗೆ ಕೊಟ್ಟು ಸಂಜುನನ್ನು ಕೆಲಸಕ್ಕೆ ಬರಬೇಡ ಎಂದು ಬಿಟ್ಟರು. ಅಬ್ಬಾ! ಒಂದು ಮನೆ ಕಟ್ಟುವದರೊಳಗೆ ಎಷ್ಟೊಂದು ಅನುಭವಗಳ ನೆನಪುಗಳು. ತನ್ನೂರಲ್ಲಿ ತಾನು ಅಪ್ಪನ ಜೊತೆ ಸೇರಿ ಎಷ್ಟೋ ಮನೆ ಕಟ್ಟಿದರೂ ಇಲ್ಲಿನ ಅನುಭವವೇ ಭಿನ್ನವಾಗಿದೆ.’

ಗಂಗಪ್ಪ ನೋಯುತ್ತಿರುವ ಕಾಲನ್ನು ನೀವಿಕೊಂಡ. ಕತ್ತನ್ನು ಬಗ್ಗಿಸಿದ. ರಾತ್ರಿ ಚೆನ್ನಾಗಿ ಎಣ್ಣೆ ಹಚ್ಚಿಕೊಳ್ಳಬೇಕು ಎಂದು ಹೇಳಿಕೊಂಡು ಕಾಲನ್ನು ನೀಡಿದ. ಕಾಲಿಗೆ ಕೆಸರು ಬಡಿಯಿತು. ತಥ್! ಎನ್ನುತ್ತಾ ತನ್ನ ಟವೆಲ್ ತೆಗೆದುಕೊಂಡು ಒರೆಸಿ, ಹಸಿಯುತ್ತಿರುವ ಹೊಟ್ಟೆ ಮೇಲೆ ಕೈಯಾಡಿಸಿದ. ಆದರೂ ಜಾಗ ಬಿಟ್ಟು ಕದಲದೇ ಕೂತ. ಊಟಕ್ಕೆಂದು ಹೋದಾಗಲೇ  ಯಜಮಾನರು ಹೊರಬಂದಿದ್ದರೆ? ಇನ್ನೊಮ್ಮೆ ಸಿಗದಿದ್ದರೆ? ಎಂದು ಯೋಚಿಸುತ್ತಾ ಅಲ್ಲೆ ಕುಳಿತ. ಗಂಗಪ್ಪನಿಗೆ ಮಗನ ಮುಖ ನೆನಪಾಗಿತ್ತು. ವಾರದ ಹಿಂದೆ ಊರಿಗೆ ಹೋದಾಗಲೇ ಫೀಸಿನ ವಿಚಾರ ಹೇಳಿದ್ದ ಆತನಿಗೆ ತಾನು ಭರವಸೆ ನೀಡಿ ಬಂದಿದ್ದೆ. ಏನಾದರಾಗಲಿ ಇಲ್ಲೇ ಪ್ರಯತ್ನ ಮಾಡಬೇಕು ಎಂದು ನೆಟ್ಟಗೆ ಕೂತ ಗಂಗಪ್ಪನಿಗೆ ಹಸಿವಿನಿಂದ ಸಣ್ಣಗೆ ಮಂಪರು ಬಂದಿತ್ತು.

ಅರ್ಧ ಗಂಟೆ ಕೂತಲ್ಲೆ ನಿದ್ದೆ ಮಾಡಿ ಸುಧಾರಿಸಿಕೊಂಡು ಮತ್ತೆ ಸರಿಯಾಗಿ ಕೂತ. ಗಂಟೆ ಮೂರಾಗಿತ್ತು. ಬಂದ ಅತಿಥಿಗಳೆಲ್ಲ ಯಜಮಾನರಿಗೆ ಶುಭ ಹಾರೈಸಿ ಕೈಕುಲುಕಿ ಉಡುಗೊರೆ ತಾಂಬೂಲ ತೆಗೆದುಕೊಂಡು ಹೋಗುತ್ತಿರುವದು ಕಾಣ ಸಿತು.

ಕೊನೆಗೂ ಆ ಗಳಿಗೆ ಬಂದೇ ಬಂತು. ರಾಯುಡು ದಂಪತಿಗಳು ಯಾರೋ ಗಣ್ಯ ವ್ಯಕ್ತಿಯೊಬ್ಬರನ್ನು ಕಳುಹಿಸಲೆಂದು ಹೊರಗಡೆ ಗೇಟಿನ ಬಳಿ ಬಂದರು. ಗಂಗಪ್ಪ ಈಗಲೇ ಇವರನ್ನು ಹಿಡಿಯಬೇಕು ಎಂದುಕೊಂಡು ಗೇಟಿನ ಬಳಿ ಬಂದು ನಿಂತ. ಗಣ್ಯರನ್ನು ಕಳುಹಿಸಿ ಹಿಂತಿರುಗುವಷ್ಟರಲ್ಲೇ ಗಂಗಪ್ಪ ಅವರ ಬಳಿ ಹೋದ. ಅಲ್ಲಿ ಗೇಟ್‍ಕಾಯುವವನ ಬಳಿ ನಿಂತ. ರಾಯುಡು ಅವರ ದೃಷ್ಟಿ ಇವನ ಕಡೆ ಹರಿಯುವದನ್ನೇ ನೋಡಿದ ಗಂಗಪ್ಪ “ಸಾಹೇಬ್ರೇ ನಾನು ಗಂಗಪ್ಪ, ಈ ಮನೆ ಗಾರೆ ಕೆಲಸ ಮಾಡಿದ್ದೆ, ಸ್ವಲ್ಪ ಕೆಲಸ ಇತ್ತು” ಎಂದು ಕೈ ಮುಗಿದ.

ರಾಯುಡು ಒಂದು ಸಲ ನೋಡಿದಂತೆ ಮಾಡಿ “ಯಾರ್ಯಾರನ್ನೋ ಗೇಟ್ ಬಳಿ ಬಿಡ್ತಿಯಲ್ಲಾ, ಅಷ್ಟೂ ತಿಳಿಯುವುದಿಲ್ಲವೇ? ಕಳಿಸು ಆಚೆ” ಎನ್ನುತ್ತಾ ಪತ್ನಿಯ ಜೊತೆ ಹೊರಟೇ ಹೋದರು.

ಗೇಟ್ ಕಾಯುವವ ಇವನ ಬಳಿ ಬಂದ. ಅಷ್ಟರಲ್ಲೆ ಗಂಗಪ್ಪನಿಗೆ ಕಣ್ಣಲ್ಲಿ ನೀರು ತುಂಬಿತ್ತು. ಕಾವಲುಗಾರನಿಗೆ ಏನನ್ನಿಸಿತೋ  “ಏನಪ್ಪಾ ಯಾರು ನೀನು?” ಎಂದು ಕೇಳಿದ. ಗಂಗಪ್ಪ ಸಂಕ್ಷಿಪ್ತವಾಗಿ ತನ್ನ ವಿಚಾರ ಹೇಳಿಕೊಂಡ. “ಅಯ್ಯೋ ನಿನ್ನ, ನಿನಗೆಲ್ಲೋ ಭ್ರಾಂತು” ಎನ್ನುತ್ತಾ ಗಂಗಪ್ಪನನ್ನು ಆಚೆ ಕಳುಹಿಸಿ ತನ್ನ ಪಾಡಿಗೆ ಕೆಲಸಕ್ಕೆ ಹಿಂತಿರುಗಿದ.

ನೋಯುತ್ತಿರುವ ಕಾಲನ್ನು ಎಳೆದುಕೊಳ್ಳುತ್ತಾ ರಸ್ತೆಗೆ ಬಂದ ಗಂಗಪ್ಪನಿಗೆ ಹೊಟ್ಟೆ ಹಸಿವಿಗಿಂತಲೂ ಮನಸ್ಸಿಗೆ ಆದ ನೋವು ಹೆಚ್ಚು ಕಾಡತೊಡಗಿತ್ತು. ಅವರು ದುಡ್ಡು ಕೊಡದಿದ್ದರೂ ಎನೂ ಅನಿಸುತ್ತಿರಲಿಲ್ಲವೇನೋ, ಆದರೆ ಬಿಕ್ಷುಕನನ್ನು ಕಂಡಂತೆ ಕಂಡದ್ದು, ಯಾರೋ ಎಂದು ದಬ್ಬಿದ್ದು ಅವನ ಸ್ವಾಭಿಮಾನಕ್ಕೆ ಪೆಟ್ಟು ನೀಡಿತ್ತು. ತಾನು ಬಡವನಾಗಿರಬಹುದು, ಆದರೆ ದುಡಿದು ತಿನ್ನುವವನು. ಮನೆ ಕಟ್ಟಿ ಕೊಡಲಿಕ್ಕೆ ಬಡವರೇ ಬೇಕು ಇವರಿಗೆ, ಆಗ ಯಾವ ಗಣ್ಯವ್ಕಕ್ತಿಯೂ ಬರುವದಿಲ್ಲವಲ್ಲ.

ಈಗ ದುಡ್ಡಿಗೆ ಏನು ಮಾಡಲಿ? ಎಂಬ ಪ್ರಶ್ನೆ ಅವನಿಗೆ ದೊಡ್ಡದಾಗಿ ಕಾಡತೊಡಗಿತು. ಮಗನ ಮುಖ ನೆನಪಾಗಿ ಕಾಲು ಸೋಲತೊಡಗಿತು. ಆ ಜಾಗ ಬಿಟ್ಟು ಹೊರಬಂದು ರಸ್ತೆ ಪಕ್ಕ ಕಲ್ಲೊಂದರ ಮೇಲೆ ಕೂತ. ಕಣ್ಣಿಂದ ನೀರು ಧಾರೆಯಾಗಿ ಹರಿಯತೊಡಗಿತ್ತು. ಮುಖಮುಚ್ಚಿ ಕೂತು ಅಳತೊಡಗಿದ. ದಾರಿ ತೋರಿಸು ದೇವ ಎಂದು ಒಮ್ಮೆ ಮೇಲೆ ನೋಡಿದ. ಈ ನಗರದಲ್ಲಿ ಯಾರ ಬಳಿ ಕೇಳಲಿ? ತನಗೆ ಪರಿಚಯ ಇರುವವರೆಲ್ಲರೂ ತನ್ನಂತೆ, ಆರಕ್ಕಿಲ್ಲ ಮೂರಕ್ಕಿಲ್ಲ, ಮಂಡಿಯಲ್ಲಿ ಮುಖ ಮುಚ್ಚಿ ಕೂತ.

ಯಾರೋ ಗಂಗಪ್ಪನನ್ನು ಹಿಡಿದು ಅಲುಗಾಡಿಸಿದಂತಾಗಿ ತಲೆ ಎತ್ತಿದ. ಗೋಡೆ ಕೆಲಸದ ರಾಮ. ಗಂಗಪ್ಪ ಮುಖ ಒರೆಸಿ ಅವನ ಕೈ ಹಿಡಿದ. ತನ್ನವರಾರೋ ಸಿಕ್ಕಿದಂತೆನಿಸಿತು. ಆದದ್ದನ್ನೆಲ್ಲ ಹೇಳಿ ಬಿಕ್ಕಿ ಬಿಕ್ಕಿ ಅತ್ತ.

“ಇತ್ತಾಗ್ ಬಾ ಸ್ವಲ್ಪ” ರಾಮ ಇವನ ಕೈ ಹಿಡಿದು ಪಕ್ಕಕ್ಕೆ ಮರೆಗೆ ಹೋದ. ತನ್ನ ಜೇಬಿಗೆ ಕೈ ಹಾಕಿ  “ಇಪ್ಪತೈದು  ಐತೆ, ತಕಾ, ಪೀಜ್ ಕಟ್ಟು” ಎಂದು ಪುನಃ ರಸ್ತೆ ಕರೆದುಕೊಂಡು ಬಂದ ಅದೇಕಲ್ಲಿನ ಮೇಲೆ ಕೂಡ್ರಿಸಿ ತಾನೂ ಕೂತ.

ಈಗ ರಾಮ ತನ್ನ ಕಥೆ ಹೇಳಲು ಶುರುವಿಟ್ಟುಕೊಂಡ.  “ನೋಡು, ನಾನ್ ಹೀಂಗೆ ಗ್ವಾಡೆ ಕಟ್ಕಂಡ್ ಇದ್ದೆ, ನನಗೆ ಚಿನ್ನಮ್ಮ ಅಂತ ಒಂದ್ ಹೆಣ್‍ಮಗಳು ಗುರ್ತ ಆದ್ಲು. ನೋಡಕೂ ಬಲು ಚಂದ್ ಇದ್ಲು. ಗುಣಾನೂ ಅಷ್ಟೇ ಚಂದ್ ಇತ್ತು. ಪ್ರೀತಿ ಹುಟ್ಕಂಡ್ ಬಿಡ್ತು. ಮನ್ಯಾಗೆ ನನಗೆ ಅವ್ವಾ ಮಾತ್ರ. ಆಕೀಗೂ ಅಷ್ಟೆಯಾ. ಅಪ್ಪ ಸತ್ತು ನಾಲ್ಕೈದು ವರ್ಷ ಆಗಿತ್ತು. ಇಬ್ರೂ ಒಪ್ಪಿ ಮದ್ವಿನೂ ಆತು. ವರುಷ ಚಂದಾಗಿ ಕಳ್ದು ಹೋಯ್ತು. ಎರಡು ಮೂರು ವರ್ಷ ಆದ ಮ್ಯಾಲೆ ಒಂದು ಮಗಾ ಹುಟ್ತು. ತುಂಬ ಚಂದಾಗಿದ್ದ. ಆದ್ರೆ ಶಿವ ನನ್ ಸಂಸಾರ ಚಂದಾಕಿರಾಕೆ ಬಿಡದೆ ನನ್ನ ಚಿನ್ನೂನ ಕರ್‍ಕಂಡ್ ಬಿಟ್ಟ. ನಂಗೆ ದಿಕ್ಕೆ ಕಾಣ್ದಂಗಾತು. ಮಗೀನ್ನ ನನ್ನವ್ವ ಅವಳವ್ವ ಕೂಡಿ ಸಾಕಾಕ್ ಶುರು ಮಾಡಿದ್ರು. ಆದ್ರೆ ನಂಗ್ ಮಾತ್ರ ಚಿನ್ನೂನ್ನ ಮರಿಲಿಕ್ಕಾಗ್ದೆ ಕುಡಿಯೋಕೆ ಶುರು ಮಾಡ್ದೆ. ಈ ಬಂಗ್ಲೆ ಕೆಲ್ಸ ಮುಗದದಿನಾ ಸೀದಾ ಗಡಂಗಿಗೆ ಹೋಗಿ ಕುಡಿಯೋಕೆ ಕೂತೆ. ಮೈ ಕೈ ನೋವು, ಬಂಗ್ಲೆ ಕಟ್ಟಿದ ತ್ರಾಸು, ಶಿವೂ ಹೋದ ಬ್ಯಾಸರ ಎಲ್ಲಾ ಮರೆಯೋತನಕ ಕುಡ್ದೆ. ಗಂಡಗಿನೋರು ರಸ್ತೆಗೆ ಎಳೆದುಹಾಕಿದ್ರು. ರಾತ್ರಿ ರಸ್ತೆ ಬದಿಗೆಬಿದ್ದುಕೊಂಡಿದ್ದೆ. ನನ್ನ ಒಂದು ಆಶ್ರಮದ ಸ್ವಾಮಿಯೊರು ಅವರ್ ಕಾರ್ನಾಗೆ ಕರಕಂಡ್ ಹೊದ್ರು. ಅಲ್ಲೆ ನಾಲ್ಕೈದ್ ತಿಂಗ್ಲು ಇಟ್ಕಂಡು ಕುಡಿಯೋದನ್ನೇ ಬಿಡ್ಸಿ ಹಾಕಿದ್ರು. ಈಗ ಕುಡ್ಯೂದ್ ಬಿಟ್ ಬಿಟ್ಟಿದ್ದೀನಿ. ಬ್ಯಾಸರ ಬಂದಾಗೆಲ್ಲಾ ಆಶ್ರಮಕ್ಕೆ ಹೋಗ್ ಬತ್ತಿನಿ. ಈಗ ಇಲ್ಲೆ ಒಂದ್ ದೊಡ್ಡ ಅಪಾರ್ಟಮೆಂಟ್ ಕೆಲಸಾ ಮಾಡ್ತಾ ಇದ್ದೀನಿ. ಕೈ ತುಂಬಾ ದುಡ್ಡು ಕೊಡ್ತಾ ಇದ್ದಾರೆ. ನನ್ ಮಗ ಇನ್ನೂ ಚಿಕ್ಕದದೆ. ನಾವಂತೂ ಗ್ವಾಡೆ, ಗಾರೆ ಕೆಲಸದಾಗೆ ಸಿಕ್ಕಹಾಕಿಕೊಂಡಾಯ್ತು. ನಮ್ ಮಕ್ಕಳಾದ್ರೂ ಅದಕ್ ಹೋಗದ್ ಬ್ಯಾಡ ಕಣಾ. ಹೋಗಿ ಫೀಜ್ ಕಟ್ಟು. ನಂಗೆ ನಿನ್ ಮ್ಯಾಗೆ ನಂಬಿಕೆ ಇದೆ. ನೀನು ಇರೂ ಜಾಗ ಹೇಳು. ಆವಾಗಾವಾಗ ಬಂದು ತಗಂಡ್ ಹೋಗ್ತಿನಿ. ಒಂದ್ ಮಾತು ನೆನಪಿಟ್ಕ. ಕಷ್ಟ ಮಾತ್ರ ಕಷ್ಟಾನ ಅರ್ಥ ಮಾಡ್ಕಳ್‍ಬಹುದೇ ವಿನಾಃ ಸುಖಾ ಕಸ್ಟಾನಾ ಅರ್ಥ ಮಾಡ್ಕಳಾಕ್ ಇಲ್ಲ ಕಣಾ. ಈ ಬೆಂಗ್ಳೂರ್ನಾಗೆ ಎಲ್ಲಾ ವ್ಯಾಪಾರನೇ. ಇದ್ರ ಸಹವಾಸದಾಗೆ ನಾವೂ ಒಂದ್ ವ್ಯಾಪಾರದ ವಸ್ತು ಆಗ್ ಬಿಟ್ಟೆವಿ. ಅಷ್ಟೇಯಾ” ರಾಮ ಹೇಳುತ್ತಾ ಕೈ ಬೀಸಿ ನಡೆದೇ ಬಿಟ್ಟ.

ತಾನು, ರಾಮ ಜೇಬಿನ ‘ಅರ್ಥ’ ಕಳೆದುಕೊಂಡವರಾದರೆ, ಹಣ, ಅಂತಸ್ತಿನ ಹಿಂದೆ ಬಿದ್ದ ಸೀತಾರಾಮ ರಾಯುಡು ಬದುಕಿನ ‘ಅರ್ಥ’ವನ್ನೇ ಕಳೆದುಕೊಂಡವರಂತೆ ಕಾಣ ಸಿದರು ಗಂಗಪ್ಪನಿಗೆ.   

ಸಮಸ್ಯೆ ತೀರಿಸಿದ ದೇವರಿಗೆ ನಮಸ್ಕರಿಸುವಂತೆ ಮೇಲಕ್ಕೆ ನೋಡುತ್ತಾ ಗಂಗಪ್ಪ ಎದ್ದು ಊರಿಗೆ ಹೋಗಲಿಕ್ಕೆ ಬಸ್‍ಸ್ಟ್ಯಾಂಡ್ ಕಡೆ ಹೆಜ್ಜೆ ಹಾಕಿದ.  

ಸರೋಜ ಪ್ರಭಾಕರ್ ಗಾಂವಕರ್

pg.saroja@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post