X

೦೫೧. ಬಾಹ್ಯಾಡಂಬರದ ಬೆಡಗಿನ ಬಿಗಿ ಕಟ್ಟಿನಲಿ ಸಿಕ್ಕಿಬಿದ್ದ ಜೀವದ ಪಾಡು..

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೫೧:

ಸೆಳೆಯುತಿರ್ಪುವದೊಂದು ಹೊರಬೆಡಗಿನೆಳೆಗಳೆ |

ನ್ನೊಳಗಿನಸುವೆಲ್ಲವನು ಕಟ್ಟಿನಿಂ ಬಿಗಿದು ||

ಎಳೆದಾಟವೇಂ ಋಣಾಕರ್ಷಣೆಯೋ ? ಸೃಷ್ಟಿ ವಿಧಿ |

ಯೊಳತಂತ್ರವೋ ? ನೋಡು – ಮಂಕುತಿಮ್ಮ || ೦೫೧ ||

ನಾವೆಲ್ಲ ಅಸಾಧಾರಣ ಅಂತಃಶಕ್ತಿಯ ವರ ಪಡೆದು ಭುವಿಗಿಳಿದ ಜೀವಿಗಳೆ.. ಆದರೆ, ನಮ್ಮೊಳಗಿನ ಅದ್ಭುತ ಸಾಮರ್ಥ್ಯವನ್ನೆಲ್ಲ ಕಬಳಿಸಿ ನುಂಗಿಹಾಕುತ್ತಿದೆಯಂತೆ ಬಾಹ್ಯ ಜಗದಾಕರ್ಷಣೆಯ ಹುಸಿ ಮಾಯೆಯ ಬೆಡಗು.  ಗೊತ್ತಿದ್ದೂ ಗೊತ್ತಿದ್ದೂ ಆ ಬಲೆಯಡಿ ಸಿಲುಕಿ ಅಸಹಾಯಕವಾಗುವ ಹುಲು ಮಾನವ ಜೀವಿಯ ಒದ್ದಾಟದ ಪರಿ ಇಲ್ಲಿ ಪ್ರಕಟವಾಗಿದೆ.

ಹೊರ ಜಗತ್ತಿನ ಸೆಳೆತವೆನ್ನುವುದು ಸಾಧಾರಣ ಸರಕಲ್ಲ. ಆ ಬಾಹ್ಯದ ಏನೇನೊ ಬೆಡಗು, ಆಕರ್ಷಣೆಗಳ ಹಲವಾರು ಎಳೆಗಳು ಬಂಧ-ಬಾಂಧವ್ಯಗಳಾಗಿಯೊ, ಮೋಹ-ದಾಹಗಳಾಗಿಯೊ, ಆಸೆ-ಪ್ರಲೋಭನೆ-ಪ್ರಚೋದನೆ-ಕೀರ್ತಿ-ಕಾಮನೆಗಳಾಗಿಯೊ – ಹೀಗೆ ಯಾವುದಾದರೊಂದು ಬಗೆಯ ಸೆಳೆತದ ನೂಲಿನೆಳೆಯಾಗಿ ಕಾಣಿಸಿಕೊಂಡು ನಮ್ಮೊಳಗಿನ ಅಸು (ಪ್ರಾಣ), ಆಸಕ್ತಿ, ಗಮನವೆಲ್ಲವನ್ನು ತನ್ನ ಬಂಧದಲ್ಲಿ ಬಿಗಿಯಾಗಿ ಬಿಗಿದು ಕಟ್ಟಿ ಕಾಡುತ್ತದಂತೆ.

ಸೆಳೆಯುವ ಈ ಸೆಳೆತದೆಳೆಗಳ ಬಲ ಅದೆಷ್ಟು ಬಲವತ್ತರವಾದದ್ದೆಂದರೆ, ಒಳಗಿನ ಮನೋಬಲದ ಏನೆಲ್ಲಾ ನಿರ್ಧಾರ-ಶಕ್ತಿ-ಗಮನ-ಧ್ಯೇಯಾದಿಗಮ್ಯಗಳನ್ನು ಮೂಲೆಗೊತ್ತಿಸಿ, ವ್ಯಕ್ತಿಯನ್ನು ತನ್ನ ಸೆಳೆತದ ಅಡಿಯಾಳಾಗಿಸಿಕೊಂಡುಬಿಡುವಷ್ಟು.. ಎಂತಹ ಜಿತೇಂದ್ರಿಯರು ಅದರಿಂದ ತಪ್ಪಿಸಿಕೊಳ್ಳಲಾಗದೆ ‘ಎಲ್ಲಾ ವಿಧಿಯಾಟ, ಋಣ ಭಾರ’ ಎಂದಂದುಕೊಂಡು ಸೋತು ಶರಣಾಗಿಬಿಡುವಷ್ಟು, ಅದರ ಪ್ರಭಾವ ಕಾಡುತ್ತದಂತೆ.

ಆದರೆ ಈ ಸೆಳೆತದ ಎಳೆದಾಟ ಯಾವ ಮೂಲದ್ದು ? ಎಂಬ ಸಂದೇಹ, ದ್ವಂದ್ವ ಕವಿಮನದ್ದು. ಅದೇನು ನಿಜಕ್ಕೂ ನಮ್ಮ ಜನ್ಮಜನ್ಮಾಂತರದ ಪಾಪ ಪುಣ್ಯಗಳ ಫಲಿತವಾಗಿ ದಕ್ಕುವ ಋಣಾಕರ್ಷಣೆಯ ಸೆಳೆತವೊ ? ಅಥವಾ ಆ ಸೋಗಿನಲ್ಲಿ ನಮ್ಮನ್ನು ಬಂಧಿಯಾಗಿಸಿ, ಕಟ್ಟು ಹಾಕಿಟ್ಟು ತನ್ನದೇನೊ ಬೇಳೆ ಬೇಯಿಸಿಕೊಳ್ಳುವ ಸೃಷ್ಟಿಯ, ವಿಧಿಯೊಳಗಿನ ತಂತ್ರಗಾರಿಕೆಯೊ?’ ಎನ್ನುವ ಗೊಂದಲ ಕವಿಯ ಅಂತರಾಳದಲ್ಲಿ ಗದ್ದಲವನ್ನೆಬ್ಬಿಸುತ್ತಿದೆ.

ಅದಕ್ಕೆ, ಯಾವುದೆ ಸೆಳೆತ-ಮೋಹಕ್ಕೆ ಸಿಲುಕಿಕೊಳ್ಳುವ ಮೊದಲು ಅದರ ನಿಜವಾದ ಉದ್ದೇಶವನ್ನು ಅರಿತು ನಂತರ ಮುಂದೆಜ್ಜೆಯಿಡಬೇಕೆನ್ನುತ್ತಾನೆ ಮಂಕುತಿಮ್ಮ. ಹಾಗೆ ಮಾಡುವುದರಿಂದ ಆ ಸೆಳೆತದಿಂದ ತಪ್ಪಿಸಿಕೊಂಡು ಹೊರಬರಲಾಗದಿದ್ದರು, ಅದನ್ನು ಸಮರ್ಥವಾಗಿ ನಿಭಾಯಿಸುವ ಮಾನಸಿಕ ಸಿದ್ದತೆಯಾದರೂ ಆದೀತೆನ್ನುವುದು ಇಲ್ಲಿನ ಮತ್ತೊಂದು ಅಂತರ್ಗತ ಆಶಯ.

#ಕಗ್ಗಕೊಂದು-ಹಗ್ಗ

#ಕಗ್ಗ-ಟಿಪ್ಪಣಿ

Facebook ಕಾಮೆಂಟ್ಸ್

Nagesha MN: ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ
Related Post