X

ಹಳ್ಳಿಗಳನ್ನು ಬೆಸೆಯುತ್ತಿರುವ ಕರ್ಮಯೋಗಿಗೆ ಪದ್ಮಪ್ರಶಸ್ತಿಯ ತುರಾಯಿ

ಕರ್ನಾಟಕದ ಕರಾವಳಿ ಭಾಗದಲ್ಲಿರುವ ಸುಳ್ಯ, ಅಲ್ಲಿನ ಮುಳ್ಳೇರಿಯ ಎಂಬ ಹೋಬಳಿಯಲ್ಲಿ ಮವಾರು ಎಂಬ ಗ್ರಾಮದ ಒಲೆಕ್ಕೆಳ ಮನೆತನದ ಮಾಣಿ, ಮಂಡ್ಯದ ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಗಿದೆ. ಇನ್ನೇನು ಪದವಿಪತ್ರ ಹಿಡಿದು ಬೆಂಗಳೂರು ಸೇರುತ್ತೇನೆ, ಕಂಪೆನಿಯಲ್ಲಿ ಕೈ ತುಂಬಾ ಸಂಬಳ ಗಳಿಸುವ ಉದ್ಯೋಗ ಹಿಡಿಯುತ್ತೇನೆ, ಲಕ್ಷಾಧೀಶನಾಗುತ್ತೇನೆ ಎಂದು ಕನಸು ಕಂಡು ಅಪ್ಪನ ಎದುರು ನಿಂತಿದ್ದ ಆ ಹುಡುಗನಿಗೆ ಅಪ್ಪನ ಕಡೆಯಿಂದ ಸಿಕ್ಕಿದ್ದು 400 ರುಪಾಯಿ. ಜೊತೆಗೆ ಒಂದು ಆಶೀರ್ವಾದ: ಈ ದುಡ್ಡಲ್ಲಿ ಬೇಕಾದರೆ ನಾಲ್ಕು ದಿನ ಬೆಂಗಳೂರು ಸುತ್ತಿಕೊಂಡು ಬಾ. ಆದರೆ ಅಲ್ಲಿ ನಿನಗೆ ಕೆಲಸ ಸಿಗದಿರಲಿ!

ಅಂತಹದೊಂದು ಹಾರೈಕೆ ಯಾವ ತಂದೆಯಿಂದಾದರೂ ಬಂದೀತಾ ಎಂದು ಅಚ್ಚರಿಯಾದೀತು. ಆದರೆ ಗಿರೀಶರಿಗೆ ನಲವತ್ತೆರಡು ವರ್ಷಗಳ ಹಿಂದೆ ಅವರ ತೀರ್ಥರೂಪರು ಹರಸಿದ್ದು ಹಾಗೆಯೇ. ಅದಕ್ಕೊಂದು ಕಾರಣವೂ ಇತ್ತೆನ್ನಿ. ತಂದೆ ಕೃಷ್ಣ ಭಟ್ಟರು ಸ್ವತಃ ಸಿವಿಲ್ ಇಂಜಿನಿಯರಿಂಗ್ ಶಿಕ್ಷಣ ಪಡೆದವರು. ಆದರೆ ತನ್ನ ಕೊಡುಗೆಯೇನಿದ್ದರೂ ಅದು ಹುಟ್ಟಿ ಬೆಳೆದ ಈ ಹಳ್ಳಿಗೇನೇ ಎಂದು ಹೇಳಿ ಆ ಕಾಲಕ್ಕೆ ಲಕ್ಷಾಂತರ ರುಪಾಯಿಗಳನ್ನು ಗಳಿಸಿಕೊಡಬಹುದಾಗಿದ್ದ ಸಿವಿಲ್ ಇಂಜಿನಿಯರಿಂಗ್ ಕೆಲಸಗಳನ್ನೆಲ್ಲ ಬದಿಗಿಟ್ಟು ನೇಗಿಲು ಹಿಡಿದ ಜೀವ ಅದು! ಕೃಷ್ಣ ಭಟ್ಟರು ತನ್ನ ಜೀವಿತದುದ್ದಕ್ಕೂ ಹಳ್ಳಿಯನ್ನೇ ಬಲವಾಗಿ ಅಪ್ಪಿಹಿಡಿದರು, ನಿಜವಾದ ಅರ್ಥದಲ್ಲಿ ಮಣ್ಣಿನ ಮಗನಾದರು. ತನ್ನ ಮಗನೂ ತನ್ನಂತೆ ಉನ್ನತ ವಿದ್ಯೆ ಸಂಪಾದಿಸಿಕೊಂಡು ಬಂದರೂ ಆತನ ಜ್ಞಾನದ ಸದುಪಯೋಗ ಆಗಬೇಕಾದದ್ದು ಹಳ್ಳಿಯ ಜನಕ್ಕೇನೇ ಎಂಬುದು ಅವರ ಬಲವಾದ ನಂಬಿಕೆ. ನಿನ್ನಂಥವನೊಬ್ಬ ಈ ಊರಲ್ಲಿ ಇದ್ದ ಮೇಲೂ ಜನ ಸಣ್ಣಪುಟ್ಟ ಕೆಲಸಕ್ಕೆಲ್ಲ ತಮ್ಮ ಮಣಗಾತ್ರದ ಮೆಷಿನುಗಳನ್ನು ಹೊತ್ತುಕೊಂಡು ಸುಳ್ಯದಿಂದ ಪುತ್ತೂರಿಗೆ ಅಲೆಯಬೇಕಾ ಎಂದು ಮಗನಲ್ಲಿ ಕಣ್ಣಿಗೆ ಕಣ್ಣಿಟ್ಟು ಖಡಕ್ ಪ್ರಶ್ನೆ ಕೇಳಿದ್ದವರು ಅವರು! ಮಗ ಮೆತ್ತಗಾದ. ಬೆಂಗಳೂರೆಂಬ ದುಬೈ ಕನಸಿನ ಆಸೆ ಕೈ ಬಿಟ್ಟ. ಅಮ್ಮ ಲಕ್ಷ್ಮಮ್ಮನ ಕಣ್ಣುಗಳೂ ಆತನಿಗೆ ಊರಲ್ಲೇ ಇದ್ದು ಏನಾದರೂ ಮಾಡಬಾರದೆ ಎಂದು ಕೇಳಿಕೊಂಡಾಗ, ನಿರ್ಧಾರ ಗಟ್ಟಿಮಾಡಿದ. ಸುಳ್ಯವೇ ತನ್ನ ಕರ್ಮಭೂಮಿ ಎಂದು ಬಗೆದ. ಊರಲ್ಲೇ ಬದುಕಿನ ಝಂಡಾ ಊರಿಬಿಟ್ಟ.

ಗಿರೀಶ್ ಭಾರದ್ವಾಜ್. ಹುಟ್ಟಿದ ದಿನದಿಂದ ಇಂದಿನವರೆಗೆ ತನ್ನ ಬದುಕಿನ ಪ್ರತಿ ಮಳೆಗಾಲವನ್ನೂ ಸುಳ್ಯವೆಂಬ ಪುಟಾಣಿ ಊರಲ್ಲೇ ಕಳೆದಿದ್ದಾರೆ. ಪದವಿ ಮುಗಿಸಿಕೊಂಡು ಊರಿಗೆ ಬಂದಾಗ ಅವರು ಪ್ರಾರಂಭಿಸಿದ್ದು ರೈತಾಪಿ ಕೆಲಸಗಳಿಗೆ ಬೇಕಾಗುವ ಸಣ್ಣಪುಟ್ಟ ಉಪಕರಣಗಳನ್ನು ತಯಾರು ಮಾಡಿ ಮಾರುವ ವರ್ಕ್‍ಶಾಪ್ ಅನ್ನು. ಒಂಬತ್ತು ವರ್ಷ ಅವರಿಗೆ ವರ್ಕ್‍ಶಾಪೇ ಜೀವನವಾಗಿತ್ತು. ಆದರೆ ಒಂದು ದಿನ ಕುಶಾಲನಗರದ ರೇಂಜ್ ಆಫೀಸರ್ ನಾರಾಯಣ ಎಂಬವರು ಗಿರೀಶರಲ್ಲಿಗೆ ಬಂದರು. “ನೀವು ಇಷ್ಟೆಲ್ಲ ಕೆಲಸ ಮಾಡ್ತೀರಲ್ವ? ಆ ಕುಶಾಲನಗರದಲ್ಲಿ ನಿಸರ್ಗಧಾಮ ಎಂಬ ದ್ವೀಪಕ್ಕೆ ಸೇತುವೆ ಕಟ್ಟಿಕೊಡಿ ನೋಡುವಾ” ಎಂದು ಪೀಠಿಕೆ ಹಾಕಿದರು. ನಾರಾಯಣ, ಮೊದಲು ಸುಳ್ಯದಲ್ಲೇ ಅರಣ್ಯ ಇಲಾಖೆಯಲ್ಲಿ ಕೆಲಸಕ್ಕಿದ್ದವರು. ಕೆಲವು ತಿಂಗಳ ಹಿಂದಷ್ಟೇ ಪಕ್ಕದ ಜಿಲ್ಲೆಯ ಕುಶಾಲನಗರಕ್ಕೆ ವರ್ಗವಾಗಿತ್ತು. ಅಲ್ಲೊಂದು ಪುಟ್ಟ ದ್ವೀಪ. ನಮ್ಮ ಕುಂದಾಪುರದ ಕಡೆಯಾದರೆ ಅಂಥವನ್ನು ಕುದ್ರು ಎನ್ನುತ್ತಾರೆ. ಹೆಚ್ಚೆಂದರೆ ಏಳೆಂಟು ಕುಟುಂಬಗಳು ವಾಸಿಸಬಹುದಾದ ಸಣ್ಣ ಭೂಪ್ರದೇಶ. ಅದನ್ನು ಈ ಕಡೆಯ ಮುಖ್ಯಭೂಮಿಗೆ ಜೋಡಿಸುವ ಏಕಮಾತ್ರ ಸಾಧನವೆಂದರೆ ಸಣ್ಣ ದೋಣಿ ಮಾತ್ರ. ಆದರೆ ಅದನ್ನು ನಡೆಸಲು ಅಂಬಿಗ ಇರಬೇಕಲ್ಲ? ಆತ ಬಂದರೆ ದೋಣಿಗೆ ಜೀವ. ಇಲ್ಲವಾದರೆ ಅದೂ ಥಂಡಿಹಿಡಿದ ಹುಡುಗನಂತೆ ಯಾವುದಾದರೊಂದು ತೀರದಲ್ಲಿ ಸುಮ್ಮನೆ ನಿಲ್ಲುತ್ತಿತ್ತು. ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ಏನಾದರೂ ತುರ್ತಾಗಿ ಹೋಗಬೇಕಾಗಿ ಬಂದರೆ ಒಂದೋ ಎರಡನೆ ಯೋಚನೆ ಮಾಡದೆ ನೀರಿಗೆ ಧುಮುಕಿ ಕಾವೇರಿ ನದಿಯನ್ನು ಅಡ್ಡಡ್ಡ ಈಜಬೇಕು; ಇಲ್ಲಾ ದೇವರನ್ನು ನೆನೆಯುತ್ತ ತೀರದಲ್ಲೇ ಅಸಹಾಯರಾಗಿ ನಿಲ್ಲಬೇಕು. ಈ ಎರಡು ಭೂಭಾಗಗಳನ್ನು ಜೋಡಿಸುವ ಸಣ್ಣದೊಂದು ಸೇತುವೆ ಇದ್ದರೆ ಒಳ್ಳೆಯದಲ್ಲವೆ ಎಂದು ಅರಣ್ಯಾಧಿಕಾರಿಗೆ ಅನಿಸಿದ್ದರಲ್ಲಿ ಅಚ್ಚರಿಯೇನೂ ಇಲ್ಲ. ತನ್ನ ಕಣ್ಮುಂದೆ ನೋಡಿದ್ದ, ಊರಿನ ಏಕೈಕ ಇಂಜಿನಿಯರ್ ಅವರಲ್ಲಿ ಅಲ್ಲದೆ ಇನ್ನಾರಲ್ಲಿ ಹೇಳುವುದು ಇದನ್ನು?

ಗಿರೀಶ್ ಒಂದು ಭಂಡಧೈರ್ಯದಲ್ಲಿ ಅರಣ್ಯಾಧಿಕಾರಿ ಸೂಚಿಸಿದ ಜಾಗಕ್ಕೆ ಹೋಗಿ ನೋಡಿದರು. 50 ಮೀಟರ್‍ಗಳ ಅಂತರ. ಸಣ್ಣ ಸಂಕ ಮಾಡುವುದಕ್ಕೆ ಅನುಕೂಲವಾಗುವ ಎರಡು ಗಟ್ಟಿ ಮರಗಳು ಎರಡೂ ಕಡೆಗಳಲ್ಲಿದ್ದವು. ಅವಕ್ಕೆ ಜೋಕಾಲಿಯಂತೆ ತೂಗುಸೇತುವೆಯನ್ನು ಕಟ್ಟಬಹುದೆಂಬ ಸಣ್ಣ ಧೈರ್ಯ ಗಿರೀಶ್ ಅವರಿಗೆ ಬಂತು. ಅದಕ್ಕೆ ಸರಿಯಾಗಿ ಹಿಮಾಲಯದ ಹೃಷಿಕೇಶದಲ್ಲಿಯೂ ಅಂಥಾದ್ದೊಂದು ತೂಗುಸೇತುವೆಯನ್ನು ನೋಡಿದ್ದ ಒಬ್ಬ ಗೆಳೆಯ ಜೊತೆಯಾದ. ತನ್ನ ನೆನಪಿನಿಂದ ಆತ ಸಾಧ್ಯವಾದಷ್ಟು ರಚನೆಯನ್ನು ವಿವರಿಸಿದ. ಮೂರ್ನಾಲ್ಕು ಜನ ಕೂತು ನದಿಗೆ ಸೇತುವೆ ಕಟ್ಟುವ ಕೆಲಸಕ್ಕೆ ಇಳಿದೇಬಿಟ್ಟರು. ಗಿರೀಶರು ಸೇತುವೆಗಳ ರಚನೆಯ ಮೇಲೆ ಒಂದಷ್ಟು ಪುಸ್ತಕಗಳನ್ನು ಓದಿಕೊಂಡರು. ಒಂದು ದಿನ ಹಾಗೂ ಹೀಗೂ ಎರಡು ನೆಲಗಳ ನಡುವೆ ಸಂಕವೊಂದು ತಯಾರಾಯಿತು. ಗಿರೀಶ್ ಉಸ್ಸಪ್ಪ ಎಂದರು. ಎರಡು ತಿಂಗಳು ನೆತ್ತಿಯಲ್ಲಿ ಹೊತ್ತ ಬೆಟ್ಟವನ್ನು ಕೊನೆಗೂ ನೆಲದಲ್ಲಿಳಿಸಿ ತಲೆ ಕೆಡವಿಕೊಂಡಷ್ಟು ಸಮಾಧಾನ ಮತ್ತು ಸಂಭ್ರಮ ಅವರಿಗೆ.

ಅದಾಗಿ ಒಂದು ವಾರವಾಗುವಷ್ಟರಲ್ಲಿ ಹತ್ತಾರು ಜನ ಅವರ ಮನೆಗೆ ಬೆಳಬೆಳಗ್ಗೆ ಬಂದು ಕೈ ಕಟ್ಟಿ ನಿಂತರು. ಸಮಸ್ಯೆ ಮುಗಿಯಿತು ಎಂದು ಭಾವಿಸಿದ್ದ ಗಿರೀಶರಿಗೆ ತಿಳಿಯಿತು: ಮುಗಿದದ್ದಲ್ಲ, ಈಗಷ್ಟೇ ಶುರುವಾದದ್ದು ಎಂದು. ಯಾಕೆಂದರೆ ಹಾಗೆ ಬಂದು ನಿಂತವರು ಬೇರಾವುದೋ ಊರಿನವರಲ್ಲ, ಗಿರೀಶರ ಮನೆಯಿದ್ದ ಅಲೆಟ್ಟಿಯೆಂಬ ಹಳ್ಳಿಯವರೇ. ಹಳ್ಳಿಗಳಲ್ಲಿ ಸುದ್ದಿ ಯಾವ ಟಿವಿ ಚಾನೆಲಿಗಿಂತಲೂ ವೇಗವಾಗಿ ಹರಡುತ್ತದೆ ನೋಡಿ! ಕಾವೇರಿ ನದಿಗೆ ಅಡ್ಡಲಾಗಿ ಐವತ್ತು ಮೀಟರಿನ ಪುಟ್ಟ ಸಂಕವನ್ನು ಗಿರೀಶರು ಕಟ್ಟಿದ್ದಾರೆಂಬ ಸುದ್ದಿ ಅವರಿಗೇ ತಿಳಿಯದಂತೆ ಊರಲ್ಲೆಲ್ಲ ಕಾಳ್ಗಿಚ್ಚಿನಂತೆ ಹಬ್ಬಿಬಿಟ್ಟಿತ್ತು! ಕುತೂಹಲ ತಡೆಯಲಾರದೆ ಸ್ಥಳೀಯರು ಒಂದಷ್ಟು ಜನ ಕುಶಾಲನಗರಕ್ಕೆ ಹೋಗಿ ಗಾಳಿಯಲ್ಲಿ ತೂಗಾಡುವ ತೂಗುಸೇತುವೆಯ ಮೇಲೆ ಅತ್ತಿಂದಿತ್ತ ಇತ್ತಿಂದತ್ತ ಹತ್ತಾರು ಸಲ ಓಡಾಡಿ ಗಟ್ಟಿಮುಟ್ಟಾಗಿದೆಯೆಂದು ಖಚಿತಪಡಿಸಿಕೊಂಡೇ ಈಗ ಗಿರೀಶರ ಬಳಿ ಬಂದಿದ್ದರು. ಅವರ ಬೇಡಿಕೆ ಇಷ್ಟೆ: ಅಂಥಾದ್ದೇ ಒಂದು ಸೇತುವೆ ನಮ್ಮ ಊರಲ್ಲೂ ಆಗಬೇಕು. ಸುಳ್ಯಕ್ಕೂ ಪಕ್ಕದ ಅರಂಬೂರಿಗೂ ನಡುವೆ ಪಯಸ್ವಿನಿ ನದಿಯ ಮೇಲೆ ಸೇತುವೆಯೊಂದನ್ನು ತೂಗಬೇಕು; ಅದರಲ್ಲಿ ನಾವೂ ಕುಣಿಕುಣಿಯುತ್ತ ಓಡಾಡಬೇಕು! ಗಿರೀಶರು ಸಾಧ್ಯವೇ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟರು. “ಈರ್ ಇಂಜಿನಿಯರ್ ಅತ್ತಾ? ಉಂದು ಮಲ್ಪರೆ ಆಪುಜಿ ಪಂಡ ಎಂಚ?” (ನೀವು ಇಂಜಿನಿಯರ್ ಅಲ್ಲವೇ? ಇದನ್ನು ಮಾಡಿಕೊಡಲು ಆಗದು ಎಂದರೆ ಹೇಗೆ?) ಎಂಬ ಮುಗ್ಧ ಪ್ರಶ್ನೆ ತೂರಿಬಂದಾಗ ಗಿರೀಶರಿಗೆ ನಗುವುದೋ ಗದರಿಸುವುದೋ ತಿಳಿಯಲಿಲ್ಲ. ಇಂಜಿನಿಯರ್ ಹೌದು, ಆದರೆ ಯಂತ್ರಗಳನ್ನು ತಯಾರಿಸುವ, ರಿಪೇರಿ ಮಾಡುವ ತಂತ್ರಜ್ಞ. ಇಟ್ಟಿಗೆ ಸಿಮೆಂಟುಗಳ ವ್ಯವಹಾರ ತಿಳಿದ ಸಿವಿಲ್ ಇಂಜಿನಿಯರ್ ಅಲ್ಲ ಎಂದು ಅವರು ತಿಳಿಸಿಹೇಳಬೇಕಾಯಿತು. ಆದರೆ ಜನ ಬಿಡಬೇಕಲ್ಲ? ನಾವು ಆ ಸೇತುವೆಯನ್ನು ಪರೀಕ್ಷಿಸಿ ಬಂದಿದ್ದೇವೆ, ಗಟ್ಟಿಮುಟ್ಟಾಗಿದೆ ಎಂದು ಸರ್ಟಿಫಿಕೇಟ್ ಕೊಟ್ಟರು. ಹಾರೆ ಹಾರೆ ಎಂದು ಹಿಂಜರಿಯುತ್ತಿದ್ದ ಆಂಜನೇಯನಿಗೆ ಪೂಸಿ ಹೊಡೆದು ಸಮುದ್ರ ಹಾರಿಸಿದ ಕಪಿಸೈನ್ಯದ ಹಾಗೆ ಅಲೆಟ್ಟಿಯ ಜನ ಗಿರೀಶರಿಗೆ ಇನ್ನಿಲ್ಲದಂತೆ ಪುಸಲಾಯಿಸಿದರು. ಎಷ್ಟೆಂದರೆ ಇನ್ನು ಆಗದು ಎನ್ನುವುದಕ್ಕೆ ಸಾಧ್ಯವೇ ಇಲ್ಲವೆನ್ನುವ ಹಾಗೆ!

ಜನರಿಗೇನೋ ಸಕಾರಾತ್ಮಕವಾಗಿ ಉತ್ತರ ಕೊಟ್ಟದ್ದಾಯಿತು. ಆದರೆ ಸಮಸ್ಯೆಯ ನಿಜಸ್ವರೂಪ ಗೊತ್ತಿದ್ದದ್ದು ಗಿರೀಶರೊಬ್ಬರಿಗೇ. ಹಿಂದೆ ಮಾಡಿದ್ದ ಸೇತುವೆ ಕೇವಲ 50 ಮೀಟರುಗಳದ್ದು. ಅತ್ತಿತ್ತ ಮರಗಳಿದ್ದವು. ಆದರೆ ಈಗ ಮಾಡಬೇಕಾದದ್ದು 87 ಮೀಟರುಗಳಷ್ಟು ಉದ್ದದ ಸೇತುವೆ. ಆಧಾರಕ್ಕೆ ಅತ್ತಿತ್ತ ಮರಗಳು ಬೇರೆ ಇಲ್ಲ! ಅಲ್ಲದೆ ಪಯಸ್ವಿನಿಯ ಮಳೆಗಾಲದ ರಭಸ ಊಹಾತೀತ. ಅಂಥ ಜಾಗದಲ್ಲಿ ಸೇತುವೆ ಕಟ್ಟಲು ತನಗೆ ಜ್ಞಾನವಾದರೂ ಏನಿದೆ! ಗಿರೀಶರು ಮತ್ತೆ ಪುಸ್ತಕಗಳ ಮೊರೆ ಹೋದರು. ಸ್ಯಾನ್ ಫ್ರಾನ್ಸಿಸ್ಕೋದ ಗೋಲ್ಡನ್ ಗೇಟ್ ತೂಗುಸೇತುವೆಯ ರಚನೆಯನ್ನು ರಾತ್ರಿಯಿಡೀ ನಿದ್ದೆಗೆಟ್ಟು ಅಧ್ಯಯನ ಮಾಡಿದರು. ಜಗತ್ತಿನಲ್ಲಿ ಎಲ್ಲೆಲ್ಲಿ ತೂಗುಸೇತುವೆಗಳನ್ನು ಕಟ್ಟಲಾಗಿದೆ, ಹೇಗೆ ಕಟ್ಟಿದ್ದಾರೆ ನೋಡಿದರು. ಕಟ್ಟುವ ವಿಷಯದಲ್ಲಿ ತನ್ನ ಸೀಮಿತ ಜ್ಞಾನ ಬಳಸಿಕೊಂಡೇ ಒಂದಷ್ಟು ಪ್ರಾಥಮಿಕ ರಚನೆಗಳನ್ನು ಮಾಡಿದರು. ನಾಲ್ಕು ಜನಕ್ಕೆ ತೋರಿಸಿ ಅಭಿಪ್ರಾಯ ಕೇಳುವಾ ಎಂದರೆ ನಾಲ್ಕಾರು ಬಗೆಬಗೆಯ ಅಭಿಪ್ರಾಯಗಳು ಬಂದಾವು! ಆದರೂ ವಿಷಯತಜ್ಞರನ್ನು ಹುಡುಕಿಕೊಂಡುಹೋಗಿ ತೋರಿಸಿ ಅನಿಸಿಕೆ ಸಂಗ್ರಹಿಸಿದರು. ಎಲ್ಲ ಆಗಿ ಒಂದು ಬ್ಲೂಪ್ರಿಂಟ್ ಹೇಗೋ ತಯಾರಾಯಿತು. ಅದರ ಅಂದಾಜುವೆಚ್ಚವನ್ನು ಸೂಚಿಸಿ, “ಇದಕ್ಕೆ ಸರಕಾರದಿಂದ ಅನುಮತಿ ಮತ್ತು ಅನುದಾನ ಎರಡನ್ನೂ ಪಡೆದುಕೊಂಡು ಬನ್ನಿ” ಎಂದು ಗ್ರಾಮಸ್ಥರಿಗೆ ಹೇಳಿದರು.

ಅಲ್ಲಿಂದ ಗ್ರಾಮಸ್ಥರ ಯೋಜನೆಯಾತ್ರೆ ಶುರುವಾಯಿತು. ಪಿಡಬ್ಲ್ಯುಡಿ, ಜಿಲ್ಲಾ ಪಂಚಾಯತ್, ಎಮ್ಮೆಲ್ಲೆಯವರ ಕಚೇರಿ ಎಲ್ಲವನ್ನೂ ಅಲೆದದ್ದಾಯಿತು. “ಎಂತ? ತೂಗುಸೇತುವೆಯ? ನಿಮಗೆ ತಲೆ ಸರಿ ಉಂಟ? ತೂಗುಸೇತುವೆಯನ್ನು ಎಲ್ಲೂ ಶಾಶ್ವತವಾಗಿ ಕಟ್ಟಿ ಇಡುವ ಕ್ರಮ ಇಲ್ಲ. ಸೈನಿಕರು ನದಿ ದಾಟಬೇಕಾಗಿ ಬಂದಾಗ ತೂಗುಸೇತುವೆಗಳನ್ನು ತಾತ್ಕಾಲಿಕವಾಗಿ ಕಟ್ಟಿಕೊಳ್ಳುತ್ತಾರೆ ಅಷ್ಟೆ. ಗೋಡೆ ಹತ್ತಿ ಏಣಿ ಒದೆಯುವವರ ಹಾಗೆ, ನದಿ ದಾಟಿದ ಮೇಲೆ ಅವರು ತಾವಾಗಿ ಸೇತುವೆಯನ್ನು ಮಡಚಿ ತೆಗೆದುಕೊಂಡುಹೋಗುತ್ತಾರೆ” ಎಂದು ಸರಕಾರದ ಅಧಿಕಾರಿಗಳು ಗ್ರಾಮಸ್ಥರಿಗೆ ಮಂಗಳಾರತಿ ಮಾಡಿ ಕಳಿಸಿದರು. ಇಂತಹ ಎಲ್ಲ ಅಪಮಾನಗಳನ್ನು ತಿಂದು ಬಂದ ಹಳ್ಳಿಗರ ಜೋಲುಮೋರೆಗಳನ್ನು ಕಂಡಾಗ ಗಿರೀಶರಿಗೂ ಪಿಚ್ಚೆನಿಸಿತು. “ನೋಡಿ, ಸೇತುವೆಯ ಖರ್ಚನ್ನು ಎಷ್ಟು ಸಾಧ್ಯವೋ ಅಷ್ಟು ತಗ್ಗಿಸುವ ಪ್ರಯತ್ನ ಮಾಡುತ್ತೇನೆ. ನಿಮ್ಮಲ್ಲೇ ಒಂದಷ್ಟು ದುಡ್ಡು ಸಂಗ್ರಹಿಸಿ ಈ ಕೆಲಸವನ್ನು ಯಾಕೆ ಮುಗಿಸಿಕೊಳ್ಳಬಾರದು? ಗ್ರಾಮಸ್ಥರೇ ಈ ಸೇತುವೆ ಕಟ್ಟುವ ಕೆಲಸಕ್ಕೂ ನಿಂತುಬಿಟ್ಟರೆ ಲೇಬರ್ ದುಡ್ಡೂ ಉಳಿದ ಹಾಗೆ. ಹಗ್ಗ, ಸಿಮೆಂಟು, ಉಕ್ಕು ಎಂಬಂಥ ಕೆಲವೇ ಕೆಲವೇ ಸಾಮಗ್ರಿಗಳಿಗೆ ದುಡ್ಡು ವ್ಯಯಿಸಿದರಾಯಿತು. ನಾನಂತೂ ನನ್ನ ಸೇವೆಗೆ ಫೀಸು ಪಡೆಯುವುದಿಲ್ಲ” ಎಂದು ಅವರು ಹೇಳಿದಾಗ ಬತ್ತಿಹೋದ ಕೆರೆಯಲ್ಲಿ ನೀರು ಜಿನುಗಿದಂತಾಯಿತು. ಹಳ್ಳಿಗರು ನಗುತ್ತ ಕುಣಿದಾಡಿಬಿಟ್ಟರು. ನಲವತ್ತು ಜನ ಯುವಕರು ಉಟ್ಟ ಬಟ್ಟೆಯಲ್ಲೇ ಮುಂದೆ ಬಂದು ನಾವು ತಯಾರಿದ್ದೇವೆ ಎಂದರು. ಚಂದಾ ಎತ್ತಿ ದುಡ್ಡು ಸಂಗ್ರಹಿಸಿದ್ದಾಯಿತು. ಅಗತ್ಯ ಸಾಮಗ್ರಿಗಳೆಲ್ಲ ಬಂದು ರಾಶಿಗೂಡಿದವು. ಸೇತುವೆಗೆ ಬೇಕಿದ್ದ ಮೂರಡಿ ಉದ್ದದ ಮರದ ಹಲಗೆಗಳು ಬಂದು ಸೇರಿದವು. ರಾಮನ ಲಂಕಾಯಾತ್ರೆಗೆ ಕಪಿಸೇನೆ ಸೇತುವೆ ಕಟ್ಟಿದ ಹಾಗೆ ಸುಳ್ಯದ 400 ಕುಟುಂಬಗಳು ಒಟ್ಟಾಗಿ ತಮ್ಮ ತೂಗುಸೇತುವೆಯನ್ನು ಅತ್ಯುತ್ಸಾಹದಿಂದ ಎರಡೇ ತಿಂಗಳ ದಾಖಲೆ ಅವಧಿಯಲ್ಲಿ ಕಟ್ಟಿ ಮುಗಿಸಿದವು! ಕಾಮಗಾರಿ ನಡೆಯುತ್ತಿದ್ದ ಅವಧಿಯುದ್ದಕ್ಕೂ ಅವರೆಲ್ಲರಿಗೆ ಕಾಫಿ-ತಿಂಡಿಗಳ ಸಮಾರಾಧನೆಯಾದದ್ದು ಊರಿನ ಹೆಣ್ಣುಮಕ್ಕಳಿಂದ!

ಟೋನಿ ಬಂದಿದ್ದರು

ಟೋನಿ ರುಟಿಮನ್ ಎಂಬವರು ಗಿರೀಶ್‍ರಂತೆಯೇ ಜಾಗತಿಕ ಮಟ್ಟದಲ್ಲಿ ನೂರಾರು ಅಲ್ಲ, ಸಾವಿರಾರು ತೂಗುಸೇತುವೆಗಳನ್ನು ಕಟ್ಟಿದ ಸಾಹಸಿ. ತಾನು ತೂಗುಸೇತುವೆಗಳನ್ನು ಕಟ್ಟತೊಡಗಿದಾಗ ಗಿರೀಶರಿಗೆ ಈ ಟೋನಿಯ ಬಗ್ಗೆ ಏನೇನೂ ಗೊತ್ತಿರಲಿಲ್ಲವಂತೆ. ಆದರೆ ಗಿರೀಶರ ಸಾಧನೆಯ ಬಗ್ಗೆ ಲೇಖನವೊಂದು ಅಂತಾರಾಷ್ಟ್ರೀಯ ಜರ್ನಲ್ ಒಂದರಲ್ಲಿ ಪ್ರಕಟವಾದಾಗ ಅದನ್ನು ನೋಡಿ ಸ್ವಿಜರ್ಲೆಂಡಿನ ಟೋನಿ ಮೂಕವಿಸ್ಮಿತರಾದರು. ಕೂಡಲೇ ಟೆಲಿಫೋನ್ ಸಂಪರ್ಕ ಸಾಧಿಸಿ ಮಾತಾಡಿದರು. ಗಿರೀಶರ ಸಾಧನೆಯನ್ನು ಬಾಯ್ತುಂಬ ಹೊಗಳಿದರು. ನಾನು ನಿಮ್ಮಲ್ಲಿಗೆ ಬರಬೇಕಲ್ಲಾ ಎಂದು ಆಸೆ ವ್ಯಕ್ತಪಡಿಸಿದರು. ಬಂದೇಬಿಟ್ಟರು ಕೂಡಾ! ಜಾಗತಿಕ ಮಟ್ಟದಲ್ಲಿ ತೂಗುಸೇತುವೆಗಳ ನಿರ್ಮಾಣವನ್ನು ಜೀವನವ್ರತದಂತೆ ನಡೆಸಿಕೊಂಡು ಬರುತ್ತಿರುವ ಟೋನಿ ಭಾರತಕ್ಕೆ, ಕರ್ನಾಟಕಕ್ಕೆ, ಸುಳ್ಯಕ್ಕೆ ಬಂದು ಗಿರೀಶರ ಜೊತೆ ಹತ್ತು ದಿನಗಳನ್ನು ಕಳೆದರು. ಆ ಸಮಯದಲ್ಲಿ ಗಿರೀಶರು ನಿರ್ಮಿಸಿದ್ದ ಹತ್ತಾರು ತೂಗುಸೇತುವೆಗಳನ್ನು ಸಂದರ್ಶಿಸಿದರು. ಮಾಹಿತಿ ಪಡೆದರು. ತನ್ನ ಜ್ಞಾನವನ್ನು ಗಿರೀಶರಿಗೆ ಧಾರೆ ಎರೆದರು.

ಆ ಸೇತುವೆ ಗಿರೀಶರ ಪಾಲಿಗೆ ಮಾತ್ರ ಜೀವನ್ಮರಣದ ಪ್ರಶ್ನೆ. ಅದಕ್ಕಾಗಿ ಅವರು ಕಳೆದುಕೊಂಡ ರಾತ್ರಿಗಳೆಷ್ಟೋ! ಒಮ್ಮೆ ನಿರ್ಮಾಣಗೊಳ್ಳುತ್ತಿದ್ದ ಸೇತುವೆಯನ್ನು ನೋಡಿ ಒಬ್ಬ ವೃದ್ಧರು “ಅಷ್ಟು ಸಪೂರದ ಉಕ್ಕಿನ ತಂತಿಯ ಮೇಲೆ ಸೇತುವೆ ನಿಲ್ಲುವುದು ಸಾಧ್ಯವೇ? ಜನ ಓಡಾಡುವಾಗ ಸೇತುವೆ ಮುರಿದು ದುರಂತಕ್ಕೆ ಕಾರಣವಾದೀತು” ಎಂದು ಹಂಗಿಸಿದರಂತೆ. ಅದನ್ನು ಕೇಳಿದ ಗಿರೀಶರಿಗೆ ಇಡೀ ದಿನ ಮನಸ್ಸು ಸರಿಯಿರಲಿಲ್ಲ. ರಾತ್ರಿ ಮಲಗಿದ್ದಾಗಲೂ ಅವೇ ಶಬ್ದಗಳು ಮಿದುಳನ್ನು ಕೊರೆಯುತ್ತಿದ್ದವು. ಎರಡೂವರೆಯ ಗಾಢರಾತ್ರಿಯಲ್ಲೇ ಬುದ್ಧನಂತೆ ಧಡ್ಡನೆ ಎದ್ದು ಮೂರು ಮೈಲಿ ದೂರದ ವರ್ಕ್‍ಶಾಪಿಗೆ ಬಂದು ತಂತಿಯನ್ನು ಹತ್ತು ಸಲ ಪರೀಕ್ಷಿಸಿ ತನ್ನ ಲೆಕ್ಕಾಚಾರಗಳನ್ನು ಮತ್ತೆ ಆಮೂಲಾಗ್ರವಾಗಿ ಮಾಡಿ ಎಲ್ಲವೂ ಸರಿಯಿದೆಯೆಂದು ಖಚಿತಪಡಿಸಿಕೊಂಡ ಮೇಲೆ ತೃಪ್ತಿಯಿಂದ ವಾಪಸು ಹೋಗಿ ಮಲಗಿದರಂತೆ! ನಿರ್ಮಾಣ ಕಾರ್ಯ ಮುಗಿದು ಉದ್ಘಾಟನೆಯ ದಿನ ಸೇತುವೆಯ ಮೇಲೆ ಜನವೋ ಜನ. ಅಂತಹ ಜನರ ಭಾರ ತಾಳದೆ ಸೇತುವೆ ಕುಸಿದದ್ದೇ ಆದರೆ ಮೊದಲ ಬಲಿ ತಾನೇ ಆಗಲಿ ಎಂದು ಗಿರೀಶರು ಅದರ ನಡುಮಧ್ಯದಲ್ಲಿ ನಿಂತಿದ್ದರಂತೆ!

ಅಲ್ಲಿಂದೀಚೆಗೆ ಗಿರೀಶ್ ಭಾರದ್ವಾಜರ ಹೊಸ ವೃತ್ತಿ, ಹೊಸ ಬದುಕು ಶುರುವಾಯಿತು. ಪಯಸ್ವಿನಿಯ ಒಡಲಿಗೆ ಅಡ್ಡಲಾಗಿ ಕಟ್ಟಿದ ತೂಗುವ ಸೇತುವೆ ಪತ್ರಿಕೆಗಳಲ್ಲಿ ಪ್ರಚಾರ ಪಡೆಯಿತು. ಜನರೇ ದುಡ್ಡು ಹೊಂದಿಸಿ ಕಟ್ಟಿ ಮುಗಿಸಿದ ದೇಶದ ಮೊದಲ ಸೇತುವೆ ಎಂಬ ಹೆಗ್ಗಳಿಕೆ ಅದರದ್ದಾಯಿತು. ಇಂಥದೊಂದು ಸೇತುವೆ ನಮಗೂ ಬೇಕಲ್ಲ ಎಂದು ಮೊದಲ ದಿನವೇ ಗಿರೀಶರಿಗೆ ಫೋನ್‍ಕಾಲ್‍ಗಳ ಸುರಿಮಳೆಯಾಯಿತು. ತೂಗುಸೇತುವೆಯ ನಿರ್ಮಾಣವೆಚ್ಚ ಕಡಿಮೆ. ಹಾಗಾಗಿ ಸರಕಾರದ ನೂರೆಂಟು ಕಡತ-ಸಹಿ-ಪರಿಶೀಲನೆಯೆಂಬ ಚಕ್ರವ್ಯೂಹದೊಳಗೆ ಸಿಕ್ಕದೆ ಜನರೇ ಚಂದಾ ಎತ್ತಿ ದುಡ್ಡು ಸಂಗ್ರಹಿಸಿ ಸೇತುವೆ ಕಟ್ಟಿಕೊಳ್ಳಬಹುದು. ತಾವೇ ಅದರ ಕಾರ್ಮಿಕರಾಗಬಹುದು. ಅದರ ಕಚ್ಚಾವಸ್ತುಗಳನ್ನೆಲ್ಲ ಹಳ್ಳಿಯಲ್ಲೇ ಹೊಂದಿಸಿಕೊಳ್ಳಬಹುದು. ತೂಗುಸೇತುವೆಯ ಉಪಯೋಗವೋ ನೂರಾರು. ಕರಾವಳಿ ಭಾಗದಲ್ಲಿ ಮಳೆಗಾಲದಲ್ಲಿ ನದಿಗಳ ಆರ್ಭಟ ಹೇಗಿರುತ್ತದೆಂಬುದು ಅಲ್ಲಿದ್ದವರಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಎಷ್ಟೋ ಕಡೆಗಳಲ್ಲಿ ನದಿ ಉಕ್ಕೇರಿ ಹರಿದು ಮಕ್ಕಳು ಶಾಲೆಗೆ ಹೋಗಲಾಗದೆ ಒಂದೆರಡು ತಿಂಗಳು ಮನೆಯಲ್ಲೇ ಉಳಿಯಬೇಕಾದ ಪರಿಸ್ಥಿತಿ. ಹಿರಿಯರಿಗೆ ಉದ್ಯೋಗಕ್ಕೂ ಅಷ್ಟು ದಿನ ಕತ್ತರಿ. ನದಿಯ ರಭಸ ಹೆಚ್ಚಿದ್ದರೆ ಅಂಬಿಗರು ದೋಣಿ ಇಳಿಸಲು ಹೆದರುತ್ತಾರೆ. ಇನ್ನು ರಾತ್ರಿ ತುರ್ತು ಕೆಲಸವಿದ್ದರೆ ದೋಣಿಯನ್ನು ನೆಚ್ಚಿಕೊಳ್ಳುವಂತಿಲ್ಲ. ವೈದ್ಯಕೀಯದ ನೆರವು ಬೇಕಾದರೂ ಅಷ್ಟೇ. ಹೀಗಿರುವಾಗ ಸೇತುವೆಯೊಂದು ಎರಡು ದಡಗಳನ್ನು ಸೇರಿಸಬಲ್ಲುದಾದರೆ ಅದರ ಪ್ರಯೋಜನವೆಷ್ಟೆಂದು ಶಬ್ದಗಳಲ್ಲಿ ವರ್ಣಿಸಲಾಗದು.

ಫೈಟಿಂಗ್ ಮುಗಿದ ಮೇಲೆ ಬರುವ ಸಿನೆಮಾ ಪೊಲೀಸರಂತೆ, ಅರಂಬೂರಿನ ಸೇತುವೆ ಕಟ್ಟಿ ಮುಗಿಸಿದ ಮೇಲೆ ಸರಕಾರೀ ಅಧಿಕಾರಿಗಳು ಬಂದು ಸೇತುವೆಯ ಅಂದಚಂದವನ್ನು ಕಣ್ತುಂಬಿಸಿಕೊಂಡರು. ಇಂಥ ಸೇತುವೆ ಬೇರೆ ಕಡೆಗಳಲ್ಲಿ ಕೂಡ ಬೇಕಲ್ಲ ಎಂಬ ವಿನಂತಿಯೊಂದನ್ನು ಗಿರೀಶರ ಮುಂದೆ ನಯವಾಗಿ ತಳ್ಳಿದರು. “ನೀವು ಆ ಸೇತುವೆಗಳಿಗೆ ಸರಕಾರದ ಕಡೆಯಿಂದ ಅನುದಾನ ಒದಗಿಸಿ. ಎಲ್ಲ ಕಡೆಗಳಲ್ಲೂ ಜನರೇ ಚಂದಾ ಎತ್ತಿ ಸೇತುವೆ ಕಟ್ಟಿಕೊಳ್ಳಬೇಕೆಂದು ಬಯಸುವುದು ಸರಿಯಲ್ಲ. ಅನುದಾನ ಬಂದರೆ ನನ್ನ ಸೇವೆಯನ್ನು ನಾನು ಉಚಿತವಾಗಿ ಕೊಡುತ್ತೇನೆ. ಸೇತುವೆ ನಿರ್ಮಿಸಿ ಕೊಡುತ್ತೇನೆ”, ಹೇಳಿದರು ಗಿರೀಶ್. ಮೊದಲಿಗೆ ಉಡುಪಿಯ ಶೀರೂರಿನಲ್ಲೂ ದಕ್ಷಿಣ ಕನ್ನಡದ ಪೆರಾಜೆಯಲ್ಲೂ ಸೇತುವೆಗಳು ನಿರ್ಮಾಣಗೊಂಡವು. ಕುಮಟಾ, ಶಿಶಿಲ, ದೊಡ್ಡೇರಿ, ಮೋರ್ಸೆ, ಸಕಲೇಶಪುರ, ಗುಡ್ಡೆಹೊಸೂರು ಎನ್ನುತ್ತ ಎಲ್ಲೆಲ್ಲೂ ಗಿರೀಶ್ ನೇತೃತ್ವದಲ್ಲಿ ತೂಗುಸೇತುವೆಗಳು ಎದ್ದುನಿಲ್ಲತೊಡಗಿದವು. 1993ರಿಂದ ಸರಕಾರದ ಅನುದಾನವೂ ಸಿಗತೊಡಗಿತು. ಮಲೆನಾಡು ಅಭಿವೃದ್ಧಿ ಮಂಡಳಿ ಎಂಬ ಸರಕಾರೀ ಸಂಸ್ಥೆಯಡಿ ಗಿರೀಶ್ ನೇತೃತ್ವದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡಗಳಲ್ಲಿ ಹಲವಾರು ಸೇತುವೆಗಳು ತಯಾರಾದವು. ಆರ್ಥಿಕ ಉತ್ಪನ್ನವಿಲ್ಲದ ಜಾಗದಲ್ಲಿ ಸರಕಾರಗಳು ಹತ್ತಾರು ಲಕ್ಷ ಸುರಿದು ಕಾಂಕ್ರೀಟ್ ಸೇತುವೆಗಳನ್ನು ಕಟ್ಟಲು ಹಿಂದೆ ಮುಂದೆ ನೋಡುತ್ತವೆ. ಅಂತಹ ಜಾಗದಲ್ಲಿ ಅದರ ಐದನೇ ಒಂದರಷ್ಟು ವೆಚ್ಚದಲ್ಲಿ ತಯಾರಾಗುವ ತೂಗುಸೇತುವೆಯೇ ಅತ್ಯುತ್ತಮ ಪರಿಹಾರ. ಕರ್ನಾಟಕದಲ್ಲಿ ಶುರುವಾದ ಈ ತೂಗುಸೇತುವೆ ಕ್ರಾಂತಿಯನ್ನು ಕಂಡ ಪಕ್ಕದ ಕೇರಳ ಸರಕಾರ ಗಿರೀಶರ ಪರಿಣಿತಿಯನ್ನು ತನ್ನಲ್ಲೂ ಬಳಸಿಕೊಂಡಿತು. ಕೇವಲ ಐದಾರು ವರ್ಷಗಳ ಅವಧಿಯಲ್ಲಿ ಗಿರೀಶ್, ಕೇರಳ ರಾಜ್ಯದಲ್ಲಿ ಮೂವತ್ತಕ್ಕೂ ಹೆಚ್ಚು ಸೇತುವೆಗಳನ್ನು ಕಟ್ಟಿಸಿಕೊಟ್ಟರು.

ಹೊಸ ತಂತ್ರಜ್ಞಾನಗಳ ಕಡೆ ಸದಾ ಕಣ್ಣು ನೆಟ್ಟಿರುವ ಕ್ರಿಯಾಶೀಲ ಮುಖ್ಯಮಂತ್ರಿ, ಆಂಧ್ರದ ಚಂದ್ರಬಾಬು ನಾಯ್ಡು ಅವರ ಕಣ್ಣಿಗೆ ಗಿರೀಶ್ ಬೀಳುವುದು ತಡವಾಗಲಿಲ್ಲ. ನಮ್ಮಲ್ಲಿಗೂ ಬನ್ನಿ, ಸೇತುವೆ ಕಟ್ಟಿ – ಬಂತು ಪ್ರೀತಿಯ ಆಮಂತ್ರಣ. ಸರಿ ಎಂದು ಗಿರೀಶರು ಆಂಧ್ರಕ್ಕೆ ಹೋದದ್ದಾಯಿತು. ಅಲ್ಲಿ ಕಮ್ಮಂ ನದಿಯ ಜಲಾಶಯಕ್ಕೆ ಲಗ್ನವರಾ ಎಂಬಲ್ಲಿ ತೂಗುಸೇತುವೆ ನಿರ್ಮಿಸುತ್ತಿದ್ದ ಸಂದರ್ಭದಲ್ಲಿ ಒಂದು ದಿನ ಇದ್ದಕ್ಕಿದ್ದಂತೆ ನಕ್ಸಲೈಟುಗಳ ಒಂದು ತಂಡ ಪ್ರತ್ಯಕ್ಷವಾಯಿತು. ಅವರೆಲ್ಲರೂ ಬಂದು ಗಿರೀಶ್‍ರನ್ನು ಸುತ್ತುಗಟ್ಟಿದರು. “ನೀವು ನಮ್ಮ ಜೊತೆ ಕಾಡಿಗೆ ಬರಬೇಕು,” ಕಟ್ಟಪ್ಪಣೆ ಬಂತು. ಗಿರೀಶರನ್ನು ಆ ತಂಡ ಸಿನಿಮೀಯ ರೀತಿಯಲ್ಲಿ ಕಿಡ್ನಾಪ್ ಮಾಡಿ ಕಾಡಿಗೆ ಹೊತ್ತೊಯ್ದು, “ನಮಗೂ ಇಲ್ಲಿ ಒಂದು ತೂಗುಸೇತುವೆ ಕಟ್ಟಿಸಿಕೊಡಿ” ಎಂದು ಬೇಡಿಕೆ ಇಟ್ಟಿತು! ಕೊನೆಗೆ ಅವರಿಗೂ ಸೇತುವೆ ಕಟ್ಟಿಸಿಕೊಟ್ಟಾಗ ಅಷ್ಟೂ ಜನ ಗಿರೀಶರ ಕಾಲಿಗೆ ಬಿದ್ದು ಅವರನ್ನು ಯಾವ ಅಪಾಯಗಳಾಗದಂತೆ ಸುರಕ್ಷಿತವಾಗಿ ವಾಪಸ್ ಇಳಿಸಿಹೋದರು! ಒಡಿಶಾದಲ್ಲಿ ರಾಯಗಡ ಎಂಬ ನಕ್ಸಲ್ ಪೀಡಿತ ಪ್ರದೇಶದಲ್ಲಿ ಸೇತುವೆ ಕಟ್ಟಲು ಹೋದಾಗ ಗಿರೀಶರಿಗೆ ಸರಕಾರ ಝಡ್ ಪ್ಲಸ್ ಸೆಕ್ಯುರಿಟಿ ಕೊಟ್ಟಿತು!

 

ಸ್ಫೂರ್ತಿಯಾಯಿತು ಕಲಾಂ ಮಾತು

ಮಾಜಿ ರಾಷ್ಟ್ರಪತಿ, ಕೀರ್ತಿಶೇಷ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ತನ್ನ ಒಂದು ಕೃತಿಯಲ್ಲಿ “ನಗರ ಮತ್ತು ಹಳ್ಳಿಗಳು ಮೂರು ರೀತಿಯಲ್ಲಿ ಬೆಸೆದುಕೊಳ್ಳಬೇಕು. ಒಂದು ಭೌತಿಕವಾಗಿ, ಎರಡನೆಯದ್ದು ವಿದ್ಯುತ್ ಶಕ್ತಿಯ ಮೂಲಕ ಮತ್ತು ಮೂರನೆಯದ್ದು ಜ್ಞಾನವಿನಿಮಯದ ಮೂಲಕ. ಮೊದಲನೆಯ ಬೆಸುಗೆ ಮೂಡಿದರೆ ಮಿಕ್ಕ ಎರಡು ತಾನೇ ತಾನಾಗಿ ಆಗುತ್ತವೆ” ಎಂದಿದ್ದಾರೆ. ತೂಗುಸೇತುವೆಗಳನ್ನು ಕಟ್ಟುವ ಸಂಕಲ್ಪ ತೊಡಲು ಗಿರೀಶರಿಗೆ ಪ್ರೇರಣೆ ಕೊಟ್ಟದ್ದು ಕಲಾಂ ಮೇಷ್ಟರ ಈ ಮಾತೇ. ನಾವು ಕೇವಲ ಎರಡು ದಡಗಳನ್ನು ಬೆಸೆಯುವುದಲ್ಲ, ಎರಡು ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡುತ್ತೇವೆ ಎಂದು ಗಿರೀಶ್ ನಂಬಿದ್ದಾರೆ. ಅವರು ಕಟ್ಟಿದ ತೂಗುಸೇತುವೆಗಳಿಂದಾಗಿ ಇಂದು ದ್ವೀಪಗಳಂತಿದ್ದ ಪ್ರದೇಶಗಳು ಮುಖ್ಯಭೂಮಿಯ ಜೊತೆ ಸಂಬಂಧ ಗಟ್ಟಿಗೊಳಿಸಿಕೊಂಡಿವೆ. ಕೊಡು-ಕೊಳುವ ವ್ಯವಹಾರ ಹೆಚ್ಚಿದೆ. ವಿದ್ಯಾರ್ಥಿಗಳು, ವೃದ್ಧರು, ಹೆಂಗಸರು ಯಾರೇ ಆಗಲಿ, ಸೇತುವೆಗಳ ಮೂಲಕ ದಿನದ ಯಾವುದೇ ಸಮಯದಲ್ಲಿ ನಿರ್ಭಯವಾಗಿ ಓಡಾಡುವಂತಾಗಿದೆ. ನೂರಾರು ಮದುವೆಯ ದಿಬ್ಬಣಗಳಿಗೂ ಈ ಸೇತುವೆಗಳು ಸಾಕ್ಷಿಯಾಗಿವೆ!

 

ವರ್ಷ 60 ದಾಟಿದ ಮೇಲೆ ಗಿರೀಶ್ ಭಾರದ್ವಾಜರಿಗೆ ಇನ್ನು ಸಾಕು ಅನ್ನಿಸಿತಂತೆ. ನಲವತ್ತು ವರ್ಷ ನಿಂತಲ್ಲಿ ನಿಲ್ಲದೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗಾಡಿ ಕರ್ನಾಟಕ, ಕೇರಳ, ಆಂಧ್ರ ಪ್ರದೇಶ, ಒಡಿಶಾ ಮುಂತಾದ ರಾಜ್ಯಗಳಲ್ಲಿ ನೂರಿಪ್ಪತ್ತಕ್ಕೂ ಹೆಚ್ಚು ಸೇತುವೆಗಳನ್ನು ಕಟ್ಟಿದ ಮೇಲೆ ದೇಹ ವಿಶ್ರಾಂತಿ ಬಯಸಿತು. ಆದರೆ ಅಷ್ಟರಲ್ಲೇ ಅವರಿಗೆ ಸಿಎನ್‍ಎನ್ – ಐಬಿಎನ್ ಟಿವಿ ಸುದ್ದಿವಾಹಿನಿ “ಹಿರಿಯ ನಾಗರಿಕ ಪ್ರಶಸ್ತಿ”ಯನ್ನು ನೀಡಿ ಗೌರವಿಸಿತು. ಆ ಪ್ರಶಸ್ತಿಯ ಕೆಳಗೆ ಸೇರಿಸಿದ್ದ ಬಾಲಂಗೋಚಿ ಪದ “ದ ಅನ್‍ಸ್ಟಾಪೆಬಲ್” ಎಂದು. ಅಂದರೆ, ತಡೆಯುವುದಕ್ಕೆ ಸಾಧ್ಯವಿಲ್ಲದ, ಅರ್ಥಾತ್ ನಿರಂತರ ಎಂದು ಅರ್ಥ. ಪ್ರಶಸ್ತಿಯನ್ನು ಬಾಲಿವುಡ್‍ನ ದೊಡ್ಡ ಶಕ್ತಿಯಾದ ಅಮಿತಾಬ್ ಬಚ್ಚನ್‍ರಿಂದ ಸ್ವೀಕರಿಸಿದಾಗ ಗಿರೀಶ್ ನಿರ್ಧರಿಸಿಬಿಟ್ಟರಂತೆ: ಹೌದು, ನನ್ನ ಸೇವೆ ನಿರಂತರವಾಗಿರಬೇಕು. ಬಚ್ಚನ್ ಸಾಹೇಬರಂತೆ ನನ್ನ ಜೀವದಲ್ಲಿ ಎಂದಿನವರೆಗೆ ಕಸುವು ಇರುತ್ತದೋ ಅಲ್ಲಿಯವರೆಗೆ ಕೆಲಸ ಮಾಡುತ್ತಾ ಹೋಗಬೇಕು! ವ್ಯಕ್ತಿಗೆ ನಿವೃತ್ತಿ ಎನ್ನುವುದು ಇರಬಾರದು. ಇನ್ನೇನು ರಿಸರ್ವ್ ಬಿದ್ದು ನಿಂತುಹೋಗಲಿದ್ದ ಬಂಡಿಗೆ ಮತ್ತೊಮ್ಮೆ ಟ್ಯಾಂಕ್ ತುಂಬುವಷ್ಟು ಇಂಧನ ತುಂಬಿಸಿದಂತಾಯಿತು ಆ ಪ್ರಶಸ್ತಿಯಿಂದ. ಗಿರೀಶ್ ಮತ್ತೆ ಕಾಲಿಗೆ ಚಕ್ರ ಕಟ್ಟಿಕೊಂಡು ದೇಶಾದ್ಯಂತ ಸಂಚರಿಸತೊಡಗಿದರು. ನಿಮಗೆ ಆಶ್ಚರ್ಯವಾಗಬಹುದು, ನಮಗೆ ಇಲ್ಲೊಂದು ತೂಗುಸೇತುವೆ ನಿರ್ಮಿಸಿಕೊಡಿ ಎಂದು ಜಮ್ಮುಕಾಶ್ಮೀರದ ಪೂಂಛ್ ಎಂಬ ಸೇನಾನೆಲೆಯಲ್ಲಿ ಭಾರತೀಯ ಸೇನೆಯಿಂದಲೇ ಗಿರೀಶರಿಗೆ ಆಮಂತ್ರಣ ಬಂದದ್ದೂ ಉಂಟು. ಅವರು ಹುಟ್ಟುಹಾಕಿದ “ಗ್ರಾಮಭಾರತ ಸೇತುನಿರ್ಮಾಣ ಪ್ರತಿಷ್ಠಾನ”ದ ಮುಂದೆ ಇಂದಿಗೂ ನೂರಾರು ಅಹವಾಲುಗಳು, ವಿನಂತಿಗಳು ಬಂದು ರಾಶಿಬಿದ್ದಿವೆ. ಯಾವುದು ಅತ್ಯಂತ ತುರ್ತಿನದ್ದು, ಯಾವುದರಲ್ಲಿ ಹೆಚ್ಚು ಜನರಿಗೆ ಸಹಾಯವಾಗುತ್ತದೆ, ಯಾವ ಪ್ರಾಜೆಕ್ಟಿಗೆ ಸರಕಾರದ ಹಸಿರು ನಿಶಾನೆ ಸಿಕ್ಕಿದೆ ಎಂಬುದನ್ನು ನೋಡಿಕೊಂಡು ಗಿರೀಶ್ ಮುಂದುವರಿಯುತ್ತಾರೆ.

ಡಿವಿಎಸ್ ಸಹಪಾಠಿ

ಸುಳ್ಯದ ಪಯಸ್ವಿನಿ ನದಿಗೆ ಅಡ್ಡಲಾಗಿ ಕಟ್ಟಿದ ತೂಗುಸೇತುವೆಯೊಂದನ್ನು ಉದ್ಘಾಟಿಸಲು ಬಿಜೆಪಿಯ ಹಿರಿಯ ರಾಜಕಾರಣಿ, ಕರ್ನಾಟಕದ ಮುಖ್ಯಮಂತ್ರಿಯೂ ಆಗಿದ್ದ ಸದಾನಂದ ಗೌಡರು ಬಂದಿದ್ದರು. ಉದ್ಘಾಟನಾ ಭಾಷಣದಲ್ಲಿ ಅವರು 1960ರ ದಶಕದಲ್ಲಿ ತಾನು ಸುಳ್ಯದ ಜಿಲ್ಲಾ ಬೋರ್ಡ್ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಗಿರೀಶ್ ಭಾರದ್ವಾಜರು ತನ್ನ ಸಹಪಾಠಿಯಾಗಿದ್ದುದನ್ನು ನೆನಪಿಸಿಕೊಂಡರು. ಆದರೆ, ಗಿರೀಶ್ ರಾಜಕಾರಣದಿಂದ ಬಹುದೂರ. ಅವರನ್ನು ಕಂಡರೆ “ಜೀವನದ ರಹಸ್ಯ ಎಂಥದ್ದು? ಏನೂ ಇಲ್ಲ! ಕೆಲಸ ಮಾಡುತ್ತ ಹೋಗುತ್ತೇನೆ, ಕೆಲಸವೇ ಆನಂದ ತರುತ್ತದೆ” ಎನ್ನುತ್ತಿದ್ದ ಶಿವರಾಮ ಕಾರಂತರು ನೆನಪಾಗುತ್ತಾರೆ. “ದಕ್ಷಿಣ ಕನ್ನಡದ ವಿಶ್ವೇಶ್ವರಯ್ಯ” ಎಂಬ ಹೊಗಳಿಕೆಯ ಮಾತಿಗೆ ಗಿರೀಶರು ತಮ್ಮ ನಿಸ್ವಾರ್ಥಸೇವೆಯಿಂದ ಬೆಲೆ ಉಳಿಯುವಂತೆ ನೋಡಿಕೊಂಡಿದ್ದಾರೆ.

 

ಇಷ್ಟೆಲ್ಲ ಮಾಡುತ್ತೀರಲ್ಲ, ಸಮಸ್ಯೆಗಳು ಬಂದಿಲ್ಲವೆ ಎಂದು ಕೇಳಿದರೆ ಗಿರೀಶರಲ್ಲಿ ಅವುಗಳದ್ದೂ ದೊಡ್ಡ ಪುಸ್ತಕವಾಗುವಷ್ಟು ಕತೆಗಳಿವೆ. ಆದರೆ ಹೆಚ್ಚಿನ ಸಮಸ್ಯೆಗಳೆಲ್ಲ ಬಂದಿರುವುದು ಸರಕಾರಗಳ ಕಡೆಯಿಂದಲೇ. ನಾನು ಅತ್ಯಂತ ಕಡಿಮೆ ವೆಚ್ಚದಲ್ಲಿ ಜನರಿಗೆ ಉಪಯೋಗವಾಗುವ ಕೆಲಸ ಮಾಡಿಕೊಡುತ್ತೇನೆ ಎಂದು ಹೇಳಿದರೂ ಅವರ ಕೆಲಸಕ್ಕೆ ಕೊಕ್ಕೆ ಹಾಕಿದ ಅಧಿಕಾರಿಗಳಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆ ನಡೆಯುತ್ತಿದ್ದ ಒಂದು ಸೇತುವೆ ನಿರ್ಮಾಣ ಕಾರ್ಯ ಎರಡು ರಾಜ್ಯಗಳ ಗಡಿವಿವಾದದಿಂದ ಅರ್ಧಕ್ಕೆ ನಿಂತ ಉದಾಹರಣೆ ಇದೆ. ನಿಮ್ಮ ಕೆಲಸಕ್ಕೆ ಬೇಕಾದ ಉಕ್ಕಿನ ತಂತಿಗಳನ್ನು ಉಚಿತವಾಗಿ ಕೊಡುತ್ತೇವೆ ಎಂದು ವಿದೇಶೀಯರು ಮುಂದೆ ಬಂದರೂ ಆ ನೆರವನ್ನು ಸ್ವೀಕರಿಸದಂತೆ ನಮ್ಮ ದೇಶದ ಕೆಂಪುಪಟ್ಟಿ ವ್ಯವಸ್ಥೆ ಗಿರೀಶರ ಕೈಗಳನ್ನು ಕಟ್ಟಿ ಹಾಕಿದೆ. ಕರ್ನಾಟಕದಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಸರಕಾರಗಳು ಬದಲಾದ ಮೇಲೆ, ತೂಗುಸೇತುವೆಗಳನ್ನು ನಿರ್ಮಿಸಲು ಸಿಗುತ್ತಿದ್ದ ಅನುದಾನ ಇದ್ದಕ್ಕಿದ್ದಂತೆ ನಿಂತುಹೋಯಿತು. ಆದರೇನಂತೆ, ಅವರ ತಜ್ಞತೆಯನ್ನು ಕೂಡಲೇ ಒಡಿಶಾ, ಕೇರಳ, ಆಂಧ್ರದಂತಹ ನೆರೆರಾಜ್ಯಗಳು ಸಮರ್ಥವಾಗಿ ಬಳಸಿಕೊಂಡವು. ನಮ್ಮಲ್ಲೇ ಇರುವ ಸಂಪನ್ಮೂಲವನ್ನು ಬಳಸಿಕೊಳ್ಳುವ ಜಾಣ್ಮೆ ಮತ್ತು ಹೃದಯವೈಶಾಲ್ಯವಾದರೂ ನಮ್ಮ ಸರಕಾರಗಳಿಗೆ ಇರಬೇಕಲ್ಲ! ಒಂದು ಕಾಲದಲ್ಲಿ ಅಪ್ಪನ ಒತ್ತಾಯಕ್ಕೆ ಕಟ್ಟುಬಿದ್ದು ಸುಳ್ಯದಂತಹ ಪುಟ್ಟ ಊರಿನಲ್ಲಿ ನೆಲೆನಿಂತ ಗಿರೀಶ್ ತೂಗುಸೇತುವೆಗಳನ್ನು ಕಟ್ಟದೇ ಹೋಗಿದ್ದರೆ? ತನ್ನ ಊರಿನ ಜನರ ಅಹವಾಲನ್ನು ಸವಾಲಿನಂತೆ ಸ್ವೀಕರಿಸಿದೆ ಹೋಗಿದ್ದರೆ? ಅಥವಾ ಒಂದೆರಡು ಸೇತುವೆಗಳನ್ನು ಕಟ್ಟಿ ತನ್ನ ಪ್ರಯತ್ನಗಳನ್ನು ನಿಲ್ಲಿಸಿಬಿಟ್ಟಿದ್ದರೆ? ಹಾಗೆ ಮಾಡಲಿಲ್ಲ ಎನ್ನುವುದೇ ನಮ್ಮ ಪುಣ್ಯ. ಸುಳ್ಯವೆಂಬ ಚುಕ್ಕೆಯಂಥ ಊರು ಈಗ ಭಾರತದ ಭೂಪಟದಲ್ಲಿ ಗಿರೀಶರಿಂದಾಗಿ ಗುರುತಿಸಿಕೊಂಡಿದೆ. “ಭಾರತದ ಸೇತುಮನುಷ್ಯ” ಎಂಬ ವಿಶೇಷಣದೊಂದಿಗೆ ಗಿರೀಶ್ ಭಾರದ್ವಾಜರ ಹೆಸರು ಕರೆದು ಭಾರತದ ರಾಷ್ಟ್ರಪತಿಗಳು ಅವರ ಕೊರಳಿಗೆ ಪದ್ಮಶ್ರೀ ಪದಕ ತೊಡಿಸುವಾಗ ಅವರು ಕಟ್ಟಿದ ನೂರೈವತ್ತಕ್ಕೂ ಹೆಚ್ಚಿನ ಸೇತುವೆಗಳು ತೃಪ್ತಿಯಿಂದ ತಲೆತೂಗಿಯಾವೇನೋ!

ನೀವು ಅವರ ಜೊತೆ ಉಣ್ಣುತ್ತೀರಾ?!

ತೂಗುಸೇತುವೆಗಳ ಅಗತ್ಯ ಇರುವುದು ನಗರಗಳಲ್ಲಲ್ಲ, ಹಳ್ಳಿಗಳಲ್ಲಿ. ಆಧುನಿಕ ಜೀವನದ ಬೇರಾವ ಸೌಕರ್ಯಗಳೂ ತಲುಪದ ಅಥವಾ ತಲುಪಲಾಗದ ಸ್ಥಿತಿಯಲ್ಲಿರುವ ಕುಗ್ರಾಮಗಳಲ್ಲಿ. ಹಾಗಾಗಿ ಗಿರೀಶ್, ಗ್ರಾಮಭಾರತದ ಜೊತೆ ಮತ್ತೆ ಮತ್ತೆ ಮುಖಾಮುಖಿಯಾಗುತ್ತ ಇರಬೇಕಾಗುತ್ತದೆ. ಒಮ್ಮೆ ಆಂಧ್ರದಲ್ಲಿ ತೂಗುಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದ್ದಾಗ ಗಿರೀಶ್ ಅವರ ತಂಡ ಆ ಸ್ಥಳದಲ್ಲೇ ಹಲವಾರು ದಿನಗಳ ಕಾಲ ಬೀಡುಬಿಟ್ಟಿತ್ತಂತೆ. ಊಟದ ಸಮಯದಲ್ಲಿ ಅವರೆಲ್ಲರೂ ಜೊತೆಯಾಗಿ ಉಣ್ಣುತ್ತಿದ್ದರಂತೆ. ಗಿರೀಶ್ ಕೂಡ ತನ್ನ ತಂಡದ ಉಳಿದ ಸದಸ್ಯರ ಜೊತೆಯಲ್ಲೇ ಕೂತು ಊಟ ಮಾಡುತ್ತಿದ್ದರು. ಇದನ್ನು ಕಂಡ ಅಲ್ಲಿನ ಸ್ಥಳೀಯರಿಗೆ ಆಶ್ಚರ್ಯವಾಯಿತು. “ನೀವು ಬ್ರಾಹ್ಮಣರಲ್ಲವೆ?” ಎಂದು ಒಬ್ಬ ಪ್ರಶ್ನಿಸಿದ. ಹೌದೆಂದರು ಗಿರೀಶ್. ಮತ್ತೆ, ನೀವು ಕುಲಗೋತ್ರಗಳನ್ನು ವಿಚಾರಿಸದೆ ಉಳಿದವರ ಜೊತೆ ಉಣ್ಣುತ್ತಿದ್ದೀರಲ್ಲಾ ಎಂದು ಆಶ್ಚರ್ಯದಿಂದ ಕೇಳೆಬಿಟ್ಟ ಆತ. “ಎಲ್ಲರೂ ನನ್ನ ಬಾಂಧವರು. ಅಣ್ಣತಮ್ಮಂದಿರು. ಇದರಲ್ಲಿ ಜಾತಿ ಪ್ರಶ್ನೆ ಯಾಕೆ ಬರಬೇಕು?” ಎಂದು ಗಿರೀಶರು ಹೇಳಿದಾಗ ಆತನ ಕಣ್ಣಲ್ಲಿ ನೀರಹನಿ ಜಿನುಗಿತು

Facebook ಕಾಮೆಂಟ್ಸ್

Rohith Chakratheertha: ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.
Related Post